ದಾದಾಪೀರ್ ಜೈಮನ್ ಹೊಸ ಕವಿತೆ- ಯಾವ ಮನೆಯೂ ನಮ್ಮದಲ್ಲ

ದಾದಾಪೀರ್ ಜೈಮನ್

ಕಣ್ಣು ತೆರೆದರೆ
ಇಬ್ಬರೇ
ನಾನು ಹಾಗೂ ನನ್ನನ್ನೇ ಅನುಕರಿಸುವ ಬಿಂಬ
ಇಬ್ಬರ ನಡುವೆ ಅಂಚೆಯವನಂತೆ ನಿಂತ ಕನ್ನಡಿ
ಕೋಣೆಯೊಳಗೆ ಬಿದ್ದ ಕ್ಷೀಣ ಬೆಳಕು
ಬಾಗಿಲು ತೆರೆದರೆ
ಖಾಲಿ ರಸ್ತೆ
ಆಚೆಬದಿಯಲ್ಲೊಂದು ಶವಾಗಾರ
ಸುಟ್ಟುಕೊಳ್ಳಲು ಸರತಿ ಸಾಲಿನಲ್ಲಿ ನಿಂತ ಕಳೇಬರಗಳು
ರಾಕ್ಷಸನೊಬ್ಬ ಒಬ್ಬೊಬ್ಬರನ್ನೂ ಸಿಗರೇಟಿನಂತೆ ಸೇದಿ ಸೇದಿ ಸುರುಳಿ ಸುರುಳಿಯಾಗಿ ಹೊಗೆ ಬಿಡುವಂತೆ ದೃಶ್ಯ
ದೇಹಗಳೆಲ್ಲ ಅದೃಶ್ಯ
ಕೊಲ್ಲುವವನೂ ಕಾಣುತ್ತಿಲ್ಲ

ಎಚ್ಚರ!
ಬರಬೇಡಿ ಹೊರಗೆ
ರಾಮ ಸೀತೆಯರ ವನವಾಸದಂತೆ ಮನೆವಾಸದಲ್ಲಿರುವಾಗ ಎಲ್ಲರೂ
ರಸ್ತೆಗೆ ಮಧ್ಯಾಹ್ನದ ಸುದೀರ್ಘ ಜೋಂಪು ನಿದ್ರೆ
ಆಚೆಬದಿಯ ಆಕ್ರಂದನದ ಅನುರಣನ
ಕಳೆದುಕೊಳ್ಳುವುದರ ನೋವು ಗೊತ್ತು ನಮಗೆ
ಹೆಚ್ಚುವ ದಿಗಿಲು
ಇನ್ನೆಷ್ಟು ಜೀವಗಳ ಬಲಿಬೇಕು?
ಸಾವು
ಭಯ
ಮತ್ತೆ ಮುಚ್ಚುವ ಬಾಗಿಲು
ಉಳಿದಿದ್ದು ಮತ್ತದೇ ಮಿಂಚುಹುಳುವಿನ ಕ್ಷೀಣ ಬೆಳಕು
ಉಳಿದವರು
ನಾನು ಹಾಗೂ ಬಿಂಬ
ಅದೂ ಒಂದು ಅಂತರದಲ್ಲಿ
ಅಂತರಂಗದೊಳಗಿನ ಅಂತರ ಕಾಣದಿರಲೆಂದೆ ಮುಖಗವಸು ಹಾಕುವುದಿರಬೇಕು ನಾವು
ಅಂತರವೇ ನಮ್ಮ ತುತ್ತು ಅನ್ನವನ್ನು ಕಸಿಯುವುದು
ಆಕಾಶದ ದಿಕ್ಕಿಗೆ ಮುಖ ಮಾಡಿ ಕೂತು
ಇನ್ನೇನು ಆಹಾರದ ಪೊಟ್ಟಣಗಳು
ಬೀಳಬಹುದು ಈಕಡೆ
ಕಾಯಬೇಕು

ಕಾಯುವುದೆಂದರೇನೆ ಒಂದು ಭಯ
ಇದೇ ಎಲ್ಲದರ ಕೊನೆಯಾದರೆ?
ಬಿಟ್ಟುಬಂದ ಊರ ಮನೆಯಲ್ಲೇ ಆಗಿಬಿಡಲಿ
ಮನೆ
ಆವಾಸ ಸ್ಥಾನ
ಕೋಲಿವಿಂಗ್ ಸ್ಪೇಸ್
ಸಹಬದುಕಿನ ಆವರಣ
ಕೊನೆಗಾಲದಲ್ಲಿ ಯಾರನ್ನು ಯಾರು ಸಹಿಸುವರು?
ಕನ್ನಡಿಯ ವ್ಯಂಗ್ಯ ಇಬ್ಬರನೂ ಚುಚ್ಚಿತು

ಕಣ್ಣು ಮುಚ್ಚಿದರೆ
ಬೆಚ್ಚಬೇಕು
ದಾಟಿಬಂದ ದಂದುಗವ ನೆನೆದು…
ಕತ್ತಲು
ಕೆಂಡದ ಹಾದಿ
ಬರಿಗಾಲು
ಅಟ್ಟಿಸಿಕೊಂಡು ಬರುವ ಅದೃಶ್ಯ ಅಲೆ
ಉಳಿಯವುದಕ್ಕಾಗಿ ದಿಕ್ಕೆಟ್ಟು ಓಡುವ ಚಿತ್ರಗಳು

ಬ್ಯಾಗಿನೊಳಗಡೆ ಒಂದೆರಡು ಜೊತೆ ಬಟ್ಟೆ
ಭರವಸೆಗಿರಲಿ ಎಂದು ಎದೆಯ ಜೋಳಿಗೆಯಲೊಂದು ಪುಟ್ಟ ದೇವರು
ದಾರಿಯಲ್ಲಿ ಹಸಿವಾದರೆ ಒಂದೆರಡು ಪಾರ್ಲೆಜಿ
ನಡಿಗೆ

ಡಿ
ಗೆ
ಕನಸುಗಳ ಕೈಹಿಡಿದು
ಊರಮನೆಗೆ ಬೆನ್ನು ಮಾಡಿ
ನಗರದ ಉದರದೊಳಗೆ ಬಂದು ಸೇರಿದಾಗ
ನಮ್ಮ ನಿದ್ರೆಗೆ ಸಲ್ಲಬೇಕಾದ ಒಂದಷ್ಟು ಕತ್ತಲನ್ನು ದಯಪಾಲಿಸುತ್ತಾ
ಮಡಿಲಲ್ಲಿ ಮಲಗಿಸಿ ತಟ್ಟುತ್ತಾ ಜೋಗುಳ ಹಾಡುತ್ತಿತ್ತು ನಗರ ಇಲ್ಲಿಯವರೆಗೂ
ನಗರದ ಪ್ರೀತಿಯಲ್ಲಿ ಬಿದ್ದವರು ನಾವು
ನಮಗೆ ಈ ಮಹಾನಗರವೇ ಮನೆಯಾಗಿತ್ತು

ಯಾವುದೋ ಕುದಿಬಿಂದುವಿನಲ್ಲಿ
ಬಿಲದಿಂದ ಮಾಯವಾಗುವ ಘಳಿಗೆ
ಮಹಾಮಾರಿ ಆವರಿಸಿದೆ ಊರತುಂಬಾ
ನಗರಕ್ಕೀಗ ಕರುಣೆಯಿಲ್ಲ
ನಮ್ಮ ನಡಿಗೆಯ ಹೆಜ್ಜೆಸಪ್ಪಳಕ್ಕೆ
ತಟ್ಟೆ ಬಡಿತದ ಹಿನ್ನಲೆ ಸಂಗೀತ ಕೊಡುತ್ತಿದೆ
ಬಹುಷಃ ಅದು ನಗರದ ರೋದನೆಯಿರಬಹುದು!
ಪ್ರಿಯ ಮಹಾನಗರವೇ
ಸಾಧ್ಯವಾದರೆ
ಭರವಸೆಗೆಂದು ನೀನೆ ಹಚ್ಚಿಟ್ಟ ದೀಪದ ಬೆಳಕಿನಲ್ಲಿ
ನಮ್ಮ ಹೆಜ್ಜೆಗುರುತುಗಳ ವಾಸನೆ ನೋಡು
ನಮ್ಮ ವಿದಾಯದ ನೋವು ನಿನಗೆ ತಾಗುತ್ತದೆ

ಈ ಮಹಾನ್ ವಲಸೆಯಲ್ಲಿ
ನಡೆಯುತ್ತಾ ನಡೆಯುತ್ತಾ
ಕಾರ್ಮಿಕರ ಕಾಲುಗಳು ಕುಸಿದವು
ಕೆಲವು ಹೆಜ್ಜೆಗುರುತುಗಳು ಮಧ್ಯದಲ್ಲೇ ಮಾಯವಾದವು
ಅವರು ಅರ್ಧ ಕಟ್ಟಿದ ಅಪಾರ್ಟ್ಮೆಂಟುಗಳು
ಪೂರ್ಣಗೊಳ್ಳುವ ಆಸೆ ಬಿಟ್ಟು ಬಿಕ್ಕಳಿಸಿದವು
ಹಸಿದು ಮಾಯವಾದವರ ಶಾಪದ ಫಲದಿಂದ
ನಗರಕ್ಕೆ ಅಜೀರ್ಣದ ಸಮಸ್ಯೆ
ನಗರಗಳೀಗ ನಿದ್ರಿಸುವುದಿಲ್ಲ
ಅದರ ಬೆಳಕುಗಳು ಸದಾ ಎಚ್ಚರವಿರುತ್ತವೆ
ಮುನಿಸಿಕೊಂಡು ಮನೆಬಿಟ್ಟು ಹೋದ ಮಕ್ಕಳು ಮತ್ತೆ ಮರಳಿಬರುವಾಗ ದಾರಿ ನಿಚ್ಚಳ ಕಾಣಲೆಂದು!!!

ಕಣ್ಣು ತೆರೆದರೆ
ಮನೆಯೊಳಗೆ
ಭಿನ್ನವೆನ್ನುತ್ತದೆ ಜಗತ್ತು ನಮ್ಮನ್ನು
ನಾವು ಭಿನ್ನ ಸಾಮಾನ್ಯರೆನ್ನುತ್ತೇವೆ
ಮನೆ ಒಪ್ಪುವುದಿಲ್ಲ
ಮನೆಯೆಂದರೆ
ನಾಲ್ಕು ಗೋಡೆಗಳ ಕೋಣೆ
ತಲೆಯ ಮೇಲೊಂದು ಸೂರು
ಮನೆ ಎಂದರೆ
ಅಕ್ಕ ಪಕ್ಕ ಸಮಾಜ ವಾಪಸು ಕೊಡದ
ಹಬ್ಬದಡುಗೆಯ ತಾಟು
ಅದರೊಳಗಿನ ಮೆದುಳುಗಳು
ಒತ್ತಾಯದ ನೂರು ಪ್ರಶ್ನೆ ಕೇಳುತ್ತವೆ
ಮನೆಯೆಂದರೆ ಮದುವೆ, ಜಾತಿ, ವರದಕ್ಷಿಣೆ, ಮಕ್ಕಳು, ಮೊಮ್ಮಕ್ಕಳ ಎಂದೂ ಮುಗಿಯದ ಯೋಜನೆಗಳ ಸಾಲು
ಒಳಗಡೆ ನಾವು
ಜೇಡರಬಲೆಯೊಳಗೆ ಸಿಕ್ಕು ಇದರ ಅಥವಾ ಅದರ ನಡುವಣ ಆಯ್ಕೆಗಳೇ ಇಲ್ಲದ
ಭಿನ್ನ ಸಾಮಾನ್ಯರು

ಈ ಮನೆಯ ಕೋಣೆಯಲ್ಲಿ
ಕತ್ತಲೆ
ಗಾಜಿನ ಗವಾಕ್ಷಿಯ ಸುಳಿವಿಲ್ಲ
ಕನ್ನಡಿಯೊಳಗಿನ ಬಿಂಬವದೋ
ಕಳಚಿಟ್ಟು ಬಿಟ್ಟ ಬಟ್ಟೆಯ ತೊಟ್ಟ ಭೂತದ ಹಾಗೆ ಕಾಣಿಸುತ್ತದೆ
ಕಂಡರೆ ಅಣಕಿಸುತ್ತದೆ
ಕನ್ನಡಿಯ ಲೋಕದಿಂದ ಹೊರಬಂದು ಮೈ ಹೊಗಲು ಕಾಯುತ್ತಾ ಕೂತ ವ್ಯಾಘ್ರನಂತೆ
ಕೋಣೆಯ ಆಚೆಯಿಂದ ಗುಸುಗುಸುಗಳು ಕೇಳುತ್ತವೆ
‘ಮುಂದೇನು;
ಸರಿ ಮಾಡೋಣ;
ಮನೆ ಮರ್ಯಾದೆ;
ನಮ್ಮ ಕಾಲದಲ್ಲಿ ಹೀಗಿರಲಿಲ್ಲ;
ತಪ್ಪು ಹುಟ್ಟಿಬಿಟ್ಟರು;
ಶಬ್ದಗಳು
ಇರಿಯುತ್ತವೆ ಮುಳ್ಳಿನ ಹಾಗೆ
ಉಸಿರುಗಟ್ಟಿಸುತ್ತವೆ
ಈಗ ಎಲ್ಲೆಲ್ಲೂ ಹಾಗೆಯೇ
ಬದುಕಿಸುವ ಉಸಿರೇ ಕೊಲ್ಲಲು ನಿಂತ ಹಾಗೆ!

ನಮ್ಮದೇ ಮನೆ ನಮ್ಮದಲ್ಲವೆನಿಸುತ್ತದೆ
ಕಾಯಬೇಕು
ಈ ಕೋಣೆಯೊಳಗೆ
ಕಿಂಚಿತ್ ಮಿಂಚುಹುಳದ ಬೆಳಕು ಸುಳಿಯುವವರೆಗೆ
ಭಯ
ಕಟ್ಟಿಕೊಂಡ ಮರಳಿನ ಮನೆಯನ್ನು ಯಾರೋ ಕೆಡವಿದ ಹಾಗೆ
ಅವರು ಹೇಳುತ್ತಾರೆ
ಅಂಕೆಗಳನ್ನು ಎಣಿಸಿದರೆ ಆತಂಕ ಕಡಿಮೆಯಾಗುತ್ತದೆಂದು
ಒಂದು ಎರಡು ಮೂರು…
ಮೂರು ಸೆಕೆಂಡು ಉಸಿರೆಳೆದುಕೊಂಡು ಎರಡು ಸೆಕೆಂಡು ಒಳಗೇ ಉಳಿಸಿ ಒಂದು ಸೆಕೆಂಡಿಗೆ ಹೊರಗೆ ಚೆಲ್ಲಿದ್ದು…
ಕತ್ತಲು

ಕಣ್ಣು ಮುಚ್ಚಿದಾಗ
ಅನಿಸುತ್ತದೆ
ಇಲ್ಲಿ ಯಾವ ಮನೆಯೂ ನಮ್ಮದಲ್ಲ!
ಮನೆಗಳು ಕೇವಲ ಬಟ್ಟೆಗಳಂತೆ
ತೊಟ್ಟು ಬಿಸಾಡಬೇಕು
ಕವಿವಾಣಿ ರಿಂಗಣಿಸುತ್ತದೆ
ಮನೆಯನೆಂದೂ ಕಟ್ಟದಿರು
ಮನೆಯನೆಂದೂ ಮುಟ್ಟದಿರು
ನಿಜ ಹೇಳಬೇಕೆಂದರೆ
ಮನೆಗಳು ಜಂಗಮವಾಗಿದ್ದರೆ ಚೆನ್ನಾಗಿತ್ತು
ಎನಿಸುವಾಗಲೇ
ನಗರದ ದಿಡ್ಡಿಬಾಗಿಲು ಹತ್ತಿರವಾಗುತ್ತದೆ

ಮುಚ್ಚಿ ತೆರೆವ ಕಣ್ಣಿನ ಬಾಗಿಲುಗಳ
ಮಿಸುಕಾಟದ ಕೆಲವೇ ಹೊತ್ತಿನಲ್ಲಿ ಏನೆಲ್ಲಾ ಘಟಿಸಿಬಿಡುತ್ತದೆ?!

ಇಲ್ಲಿ ಯಾವ ಮನೆಯೂ ನಮ್ಮದಲ್ಲ

‍ಲೇಖಕರು Admin

November 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: