ದಾದಾಪೀರ್ ಕಂಡಂತೆ ‘ಒಂದು ಇಡಿಯ ಬಳಪ’

ದಾದಾಪೀರ್ ಜೈಮನ್

ಸುಧಾ ಆಡುಕಳ ಅವರ ‘ಒಂದು ಇಡಿಯ ಬಳಪ’ ಕಥಾಸಂಕಲನ ಓದಿದೆ. ಸುಧಾ ಆಡುಕಳ ಅವರು ತಮ್ಮ ಬಳಿ ಕಥೆಗಳನ್ನು ಹಿಡಿಯುವ ಆಂಟೆನಾ ಒಂದನ್ನು ಇಟ್ಟುಕೊಂಡಿರುತ್ತಾರೆ, ಒಮ್ಮೊಮ್ಮೆ ಕಥೆಗಳೇ ಬಂದು ಇವರಿಂದ ಹೇಳಿಸಿಕೊಳ್ಳುತ್ತವೆ, ಮತ್ತೊಮ್ಮೆ ಇವರೇ ಕಥೆಗಳನ್ನು ಹುಡುಕುತ್ತಾ ಹೊರಡುತ್ತಾರೆ, ಕಥೆಗಳಿಗಾಗಿ ಕಾಯುತ್ತಾರೆ, ಇನ್ನು ಕಥೆಗಳ ಸಹವಾಸವೇ ಸಾಕು ಎಂದು ಸ್ವಲ್ಪ ಹೊತ್ತು ದೂರ ಉಳಿಯಲು ಪ್ರಯತ್ನಿಸುತ್ತಾರೆ, ಆದರೆ ಮತ್ತೆ ಕಥೆಗಳ ಸಾಂಗತ್ಯ ಬಿಡಲಾಗದೆ ಅವಕ್ಕಾಗಿ ಹಾತೊರೆಯುತ್ತಾರೆ.

ಈ ರೀತಿ ಕಥೆಗಳೊಟ್ಟಿಗೆ ಒಂದು ಸಾವಯವ ಸಂಬಂಧವನ್ನು ಸುಧಾ ಆಡುಕಳ ಅವರು ಸಾಧ್ಯವಾಗಿಸಿಕೊಂಡಿದ್ದಾರೆ. ಹೀಗೆ ಹೇಳುವಾಗ ನಾನು ಕೇವಲ ಅವರ ಮುಖಸ್ತುತಿ ಮಾಡುತ್ತಿದ್ದೇನೆ ಎಂದು ಅರ್ಥವಲ್ಲ. ಈ ಸಂಕಲನದಲ್ಲಿರುವ ಕಥೆಗಳನ್ನು ಓದುವಾಗ ಕಥೆಗಳಿಗಾಗಿನ ಈ ದಿವ್ಯ ಚಡಪಡಿಕೆ ಓದುಗರಿಗೂ ಅನುಭವವಾಗುತ್ತದೆ. ಹಲವಾರು ಕಥೆಗಳ ಆರಂಭದಲ್ಲಿ ಅವರು ಹೇಳಿಕೊಂಡಿದ್ದಾರೆ ಕೂಡ. 

ಈ ಕಥೆಗಾರರಿಗೆ ತಾವು ಹೇಳುತ್ತಿರುವ; ಕಥೆಯು ಘಟಿಸುತ್ತಿರುವ ಭೌಗೋಳಿಕ ಪರಿಸರದ, ಸಾಂಸ್ಕೃತಿಕ ಪರಿಸರದ, ನೆಲಮೂಲ ಧಾರ್ಮಿಕ ಆಚರಣೆಗಳ ಅರಿವಿದೆ ಮತ್ತು ಆ ವಿವರಗಳೊಟ್ಟಿಗೇ ಇವರು ಕಥೆಗಳನ್ನು ಹೇಳುತ್ತಾರೆ. ಒಂಚೂರು ಆಚೆ ಈಚೆ ಅನಿಸಿದರೂ ಕೂಡ ಮೌಢ್ಯದ ಕಡೆಗೆ ವಾಲುತ್ತಿರುವರೇನೋ ಎನಿಸುವಾಗಲೇ ಕಥೆಗೆ ಜೀವಪರವಾದ ನಿಲುವಿನ ತಿರುವು ದಕ್ಕುವುದರ ಮೂಲಕ ಕಥೆ ಗೆದ್ದುಬಿಡುತ್ತದೆ. ‘ಒಂದು ಇಡಿಯ ಬಳಪ’, ‘ದೇವಿರಮ್ಮ’, ‘ಹೊಳೆ’ ಕಥೆಗಳಲ್ಲಿ ಮೈಮೇಲೆ ಬರುವ ದೇವಿಯರು ಹಸನಾದ ಬದುಕನ್ನೇ ಕಟ್ಟುತ್ತಿದ್ದಾರೆ ಅಥವಾ ದೇವರ ಹೆಸರು ಹೇಳುತ್ತಾ ಕಥಾಪಾತ್ರಗಳೇ ಜೀವಪರವಾದ ಬದುಕು ಕಟ್ಟಿಕೊಳ್ಳುತ್ತಿವೆ ಎನ್ನುವುದನ್ನು ಹೊಳೆಯಿಸುತ್ತಾರೆ.

ದೇವಿರಮ್ಮ ಕಥೆಯಲ್ಲಿ ‘ದೇವಿಯ ಮಹಿಮೆ ಅದ್ಭುತ ದೇವಿರಮ್ಮ’ ಎನ್ನುವ ನಿರೂಪಕಿಯ ಮಾತಿಗೆ ದೇವಿರಮ್ಮ ‘ಅಲ್ವೇ ಮತ್ತೆ? ಹೆಣ್ಣು ಯಾವಾಗಲೂ ಹೆಣ್ಣಿನ ಪರ ತಿಳ್ಕೊ. ಹರಿಯೋ ತಾಯಿಗೆ ಗುಡಿ ಕಟ್ಟತೀವಿ ಅಂತ ಕುಣಿತಿದ್ದರಲ್ಲಾ. ಏನಾಯ್ತು ಕಂಡ್ಯಾ ಇವರ ಪುನುಗು? ಹಸಿ ಬಾಣಂತಿ ಮೊಮ್ಮಗಳ ಕಟ್ಟಿಕೊಂಡು ನಾನೆಲ್ಲಿಗೆ ಹೋಗಲಿ? ದೇವಿ ಯಾವತ್ತಿದ್ದರೂ ಹೆಣ್ಣಿನ ಪರ’ ಎಂದು ಹೇಳಿಬಿಡುತ್ತಾಳೆ. 

ಇಲ್ಲಿನ ಸಂಕಲನಗಳ ಬಹುಪಾಲು ಕಥೆಗಳ ಕೇಂದ್ರ ಹೆಣ್ಣು. ಕಥೆಗಾರರು ವರ್ತಮಾನದ ದಂದುಗಗಳನ್ನು ಹೇಳುವುದಕ್ಕೆ ಪುರಾಣಗಳ ಉಪಕಥೆಗಳ ಪ್ರಸ್ತಾಪಗಳನ್ನು ತರುತ್ತಾರೆ. ಪುರಾಣಗಳ ಕಥೆಗಳನ್ನು ಮುರಿದು ಕಟ್ಟುತ್ತಾ ವರ್ತಮಾನದ ಕಥೆಗಳನ್ನು ಹೊಳೆಯಿಸುತ್ತಾರೆ. ‘ಶಿಖಂಡಿಯ ಸ್ವಗತ’, ‘ಗೆಳತಿ ಭಾನುಮತಿ’, ‘ಪಾರಿಜಾತ’ ಕಥೆಗಳು ಈ ಮಾದರಿಯವು. ಕಥೆಗಾರರರಿಗೆ ರಂಗಭೂಮಿಯ ಒಡನಾಟ ಕೂಡ ಇರುವುದರಿಂದ ಆ ಕಲಾಮಾಧ್ಯಮದ ಹಲವು ಪಟ್ಟುಗಳನ್ನು ಇಲ್ಲಿ ತಂತ್ರವಾಗಿ ಬಳಸಿದ್ದಾರೆ. ಪ್ರಯೋಗಶೀಲತೆ ಮತ್ತು ಅಭಿವ್ಯಕ್ತಿಯಲ್ಲಿರುವ ತೀವ್ರತೆ ಕಥಾಭಿವ್ಯಕ್ತಿಯ ಮಾರ್ಗಗಳಲ್ಲಿ ವೈವಿಧ್ಯತೆಯನ್ನು ಕೊಟ್ಟಿದೆ. 

‘ನೀಲಿಯ ಜಗತ್ತು’ ನನಗೆ ಇಷ್ಟವಾದ ಸೊಗಸಾದ ಕಥೆ. ಪುಟ್ಟ ಹುಡುಗಿ ನೀಲಿಯ ಕಣ್ಣುಗಳಿಂದ ಜಗತ್ತನ್ನು ನೋಡುವ ಕ್ರಮ ಚೆನ್ನಾಗಿದೆ. ನೀಲಿ ತಾನು ಇದುವರೆಗೂ ಎದುರುಗೊಳ್ಳದ ಹೊಸ ಅನುಭವಗಳು, ಅಪಾಯದ ಸಂದರ್ಭಗಳು, ದೊಡ್ಡವರ ಲೋಕವನ್ನು ಬೆರಗಿನಲ್ಲಿ ನೋಡುವಾಗ ಅವರ ಸಂಘರ್ಷಗಳಲ್ಲಿ ತಾನು ಭಾಗಿಯಾಗಬೇಕಾದಾಗ ಅವಳು ಅನುಭವಿಸುವ ತಳಮಳಗಳನ್ನು ತುಂಬಾ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. 

 ಅಲ್ಲಲ್ಲಿ ಧಾವಂತ ಮತ್ತು ಇದೂ ಒಂದನ್ನು ಸೇರಿಸಿಬಿಡೋಣ ಎನ್ನುವ ಕೊನೇಕ್ಷಣದ ಸೇರಿಕೆಗಳು ಇದೊಂದು ಬೇಡವಾಗಿತ್ತೇನೋ ಎಂಬ ಭಾವ ಮೂಡಿಸುತ್ತವೆಯಾದರೂ  ಕಥೆ ಹೇಳುವಲ್ಲಿನ ಹದ, ಕಥೆಗಳನ್ನು ಓದಿದಾಗ ಅವು ಓದುಗನ ಮನಸ್ಸಲ್ಲಿ ಹುಟ್ಟಿಸುವ ಆರ್ದ್ರತೆ, ಹೊಳಹುಗಳು ಇಲ್ಲಿನ ಕಥೆಗಳನ್ನು ನೆನಪಿನಲ್ಲುಳಿಯುವಂತೆ ಮಾಡುತ್ತವೆ. 

‍ಲೇಖಕರು Avadhi

May 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. SUDHA SHIVARAMA HEGDE

    ಧನ್ಯವಾದಗಳು ಪ್ರತಿಕ್ರಿಯೆಗೆ….
    ನಿಮ್ಮ ಅನಿಸಿಕೆಗಳೆಲ್ಲ ಸತ್ಯವೇ ಆಗಿದೆ. ಮುನ್ನಡೆಯ ದಾರಿಸೂಚಕಗಳೂ ನಿಮ್ಮ ಬರಹದಲ್ಲಿವೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: