
ಗೌರಿ ಅದಮ್ಯ
ರಂಗಭೂಮಿ ಮತ್ತು ಪ್ರಸ್ತುತತೆ, ಇದು ಯಾವುದೇ ನಿರ್ದೇಶಕನ ಅಥವಾ ರಂಗತಂಡದ ಮೇಲಿರುವ ಗುರುತರದ ಜವಬ್ದಾರಿ. ಸಾಮಾನ್ಯವಾಗಿ ನಾಟ್ಕ ಅಂದಾಗ ಅದು ನಾವು ನಾಟ್ಕವನ್ನ ಕಟ್ಟಲು ಆಯ್ಕೆ ಮಾಡಿಕೊಳ್ಳುವ ವಸ್ತುವಿಷಯ ಮತ್ತು ಅದರಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆಯು ಕೂಡ ತೀರಾ ಗಾಢವಾದ ಪ್ರಭಾವ ಬೀರುತ್ತವೆ..
ಫೆಡರಿಕೊ ಗಾರ್ಸಿಯ ಲೋರ್ಕ ಎನ್ನುವ ಸ್ಪೇನಿನ ನಾಟಕಕಾರನ “ಬ್ಲಡ್ ವೆಡ್ಡಿಂಗ್” ಅನ್ನೋ ನಾಟಕ, ಸರ್ವಕಾಲಕ್ಕೂ ಸಲ್ಲಬಹುದಾದ, ಮನುಷ್ಯನ ಸಹಜ ಆಯ್ಕೆಗಳನ್ನ ಅಷ್ಟೇ ನಿಷ್ಠೂರವಾಗಿ ಪ್ರಶ್ನೆಗಚ್ಚುವ ಸ್ಕ್ರಿಪ್ಟ್.. ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಅದರೊಟ್ಟಿಗೆ ಬಿಗಿತುಗೊಂಡ ಗಂಡು ಮತ್ತು ಹೆಣ್ಣಿನ ಸಹಜ ಆಕರ್ಷಣೆ, ಆಯ್ಕೆ, ದ್ವಂದ್ವ, ನಿಲುವು, ಅಸ್ಮಿತೆ, ಅಸ್ತಿತ್ವ ಇವುಗಳ ಚಂದದ ಕಟ್ಟುವಿಕೆಯೆ ಬ್ಲಡ್ ವೆಡ್ಡಿಂಗ್..
ಇಡೀ ನಾಟಕದ ಶುರುವೆ, ಹಿಟ್ಲರ್ನ ಮಾತುಗಳ ಜೊತೆಗೆ ಯುದ್ದದಲ್ಲಿ ತನ್ನ ಮಗ ಮತ್ತು ಗಂಡನನ್ನ ಕಳೆದುಕೊಂಡು ಇಡೀ ದುಃಖವನ್ನ ಹುದುಗಿಸಿಕೊಳ್ಳುವ ತಾಯಿಯಿಂದ. ಈ ಮೊದಲ ದೃಶ್ಯದಿಂದಲೆ ನಿರ್ದೇಶಕ ಉದಯ್ ಸೋಸಲೆ, ತೀರಾ ಆಪ್ತವಾಗಿ ಪ್ರೇಕ್ಷಕರ ಎದೆಗಿಳಿತಾರೆ. ಯುದ್ದದ ಭೀಭತ್ಸಗಳ ಮಧ್ಯೆಯೆ ಇರುವ ಒಬ್ಬ ಮಗ ತಾನು ಮೆಚ್ಚಿದ ಹುಡ್ಗಿನ ಮದ್ವೆ ಆಗೋಕೆ ಒಪ್ಪೋ ತಾಯಿ ವಧುವನ್ನ ಕೇಳೋಕೆ ದೂರದ ಕಣಿವೆಯ ಪಕ್ಕದ ಮನೆಗೆ ಬರ್ತಾರೆ, ಯಾರು ಇಲ್ಲದ ಆ ಜಾಗದಲ್ಲಿ ಆ ಒಂದೇ ಕುಟುಂಬ ನೆಲ್ಸಿರೋದು ಯುದ್ದದ ಕಾವಿಂದ ತಪ್ಪುಸ್ಕೊಳೋಕ? ಒಂದಂತದಲ್ಲಿ ಹೌದು ಅನ್ಸಿದ್ರೆ ಇನ್ನೊಂದು ಹಂತದಲ್ಲಿ ಈ ನೆಲದಲ್ಲಿ ಯಾರು ಎಲ್ಲಿ ಬೇಕಾದ್ರು ಬದ್ಕೊ ಸ್ವಾತಂತ್ರ ಇದೆ ಅಂತ ನಿರ್ದೇಶಕರು ಹೇಳ್ತಿದರ ಅಂತನೂ ಅನ್ಸತ್ತೆ.. ಇದೇ ದೃಶ್ಯದಲ್ಲಿ ವಧುವಿನ ತಂದೆ ತನ್ಗೆ ಗಂಡುಮಗುವಾಗಿದ್ರೆ ಸುತ್ತಾ ಮುತ್ತಾ ಇರೋ ಭೂಮಿನೂ ಕೊಂಡ್ಕೊತಿದ್ದೆ ಅನ್ವಾಗ ಲಿಂಗ ತಾರತಮ್ಯ, ಮತ್ತು ಅದರ ಇಂದಿನ ದಿನದ ಹೋರಾಟಗಳ ಚಿತ್ರಣ ಕೂಡ ಬರತ್ತೆ..

ಇಡೀ ನಾಟಕವನ್ನ ತನ್ನ ಹಿಡ್ತದಲ್ಲೆ ತಗೊಂಡೋಗುವ ಚಂದ್ರ ಮತ್ತು ಭಿಕ್ಷುಕಿ ನನ್ಗೆ ಪ್ರಸ್ತುತದ ಪ್ರಭಾವಿ ಮಾಧ್ಯಮ ಅಥವಾ ಮಧ್ಯವರ್ತಿಗಳ ತರ ಕಾಣ್ತಾರೆ. ಭಿಕ್ಷುಕಿ “ನನ್ಗೆ ತಂಗ್ಳಾಕ್ದೆ ಇದ್ರು ಪರ್ವಾಗಿಲ್ಲ, ಜನ ಹೊಡದಾಡ್ಕೊಂಡು ಸಾಯೋದು ಹೆಚ್ಚು ತೃಪ್ತಿ ಕೊಡತ್ತೆ” ಅಂದಾಗ ರಕ್ತ ಪಿಪಾಸುಗಳ ತರ ಸಾಮ್ರಾಜ್ಯದ ವಿಸ್ತರಣೆಗೆ ಒದ್ದಾಡ್ತಿರೊ ಪ್ರಸ್ತುತದ ಸನ್ನಿವೇಶದ ಉತ್ತಮ ಉದಾಹರಣೆ.. ಮದ್ವೆಯಾಗಿ ಇನ್ನೊಬ್ಬನ ಮಡದಿಯಾದ ವಧು ತನ್ನ ಪ್ರೀತಿಯೆ ಮುಖ್ಯ ಅಂತ ಹಳೆಯ ಪ್ರೇಮಿ ಲಿಯೋನಾಲ್ಡೋ ಜೊತೆ ಓದಾಗ ಆಯ್ಕೆ ಅನ್ನೋದು ಹೆಣ್ಣಿಗೆ ಸ್ವಾತಂತ್ರ್ಯನ? ಅವಕಾಶನ? ಅನಿವಾರ್ಯನ? ಅನ್ಸತ್ತೆ.. ಅವ್ಳನ್ನ ಹುಡ್ಕೊಂಡು ಅಲಿಯೊ ವರ, ಅವನ ಮನಸ್ಥಿತಿ, ಮದ್ವೆ, ಹಕ್ಕು ಅನ್ನೋದು ಒಂದೆಡೆಯಾದ್ರೆ, ಲಿಯೋನಾಲ್ಡೋ ಹೆಂಡ್ತಿ, ಅವಳ ಗರ್ಭದಲ್ಲಿರೊ ಮಗು ಮತ್ತೆ ಕೈಗೂಸು, ಇವರ ನಾಳೆಗಳ ಪ್ರಶ್ನೆ ಇನ್ನೊಂದ್ಕಡೆ?
ನಾವು ಬದುಕ್ತಿರೋದು ಸಮಾಜದಲ್ಲಿ, ನಾವು ಕೂಡ ಈ ಸಮಾಜದ ಭಾಗಗಳು ಅಂದಾಗ ನಮ್ಮಪಾಡಿಗೆ ನಾವಿರ್ತಿವಿ ಅಂದ್ರು ಬಿಡದ ಜನ, ಮತ್ತು ಅವರ ಮನಸ್ಥಿತಿಗಳನ್ನ ನಿರ್ದೇಶಕರು ಜಾಣ್ಮೆಯಿಂದ ಕಟ್ಟಿದರೆ. ಗುಂಪಲ್ಲಿ ಹಾಸ್ಯವಾಗೆ ಬರೋ ಟಿ.ಆರ್.ಪಿ ಅನ್ನೋ ಶಬ್ದ ನಿಜದಲ್ಲೂ ಹಾಸ್ಯವ? ಗಂಡ ಮತ್ತೆ ಪ್ರೇಮ ಇವರೆಡ್ರ ಆಯ್ಕೆಯಲ್ಲಿ ಸೋಲೋ ವಧು ಇಬ್ಬರ ಸಾವಿಗೂ ಕಾರಣವಾದ್ರು ಕೊನೆಗೆ ಗಂಡನ ತಾಯಿ ಹತ್ರವೆ ಬರ್ತಾಳೆ, ಎಲ್ಲವನ್ನು ನುಂಗೊ ಶಕ್ತಿ ಇರೋ ತಾಯಿ ಆಕೆಯನ್ನು ಸ್ವೀಕರಿಸ್ತಾಳೆ.. ಹೆಣ್ಣಿಗೆ ಇರೋ ಭೂಮಿ ತೂಕದ ಗುಣವನ್ನ ನಿರ್ದೇಶಕರು ಬೆಂಕಿಗೆ ಮತ್ತು ನೀರಿಗೆ ಸಮೀಕರಿಸಿ ಕಟ್ಕೊಡ್ತಾರೆ.. ಯಾವುದನ್ನೆ ಆಗ್ಲಿ ದಹಿಸುವ ಮತ್ತು ಉಳಿಸುವ ಹೆಣ್ತನದ ಸಹಜ ನಡೆ ಇಡೀ ನಾಟಕದ ಚಿತ್ರಣವನ್ನ ಬದಲಿಸತ್ತೆ..

ಇನ್ನೊಬ್ಬನೊಟ್ಟಿಗೆ ಓಡೋಗಿದ್ರು ತಾನು ಪರಿಶುದ್ದಳು ಅನ್ನೋ ವಧು, ಹೆಣ್ಣಾದ ನಮ್ಗೆ ಸಹಿಸಿ ಬದ್ಕೊದು ಹೊಸ್ದಲ್ಲ ಅಲ್ವ ಅನ್ನೋ ತಾಯಿ ಈ ಎರಡೂ ಪಾತ್ರಗಳ ತೂಕ ತುಂಬಾ ಇದೆ, ಆದ್ರೆ ಈ ಪಾತ್ರದಷ್ಟೇ ಕಾಡೋದು ಲಿಯೊನಾಲ್ಡೋ ಹೆಂಡ್ತಿ ಪಾತ್ರ, ಯಾಕಂದ್ರೆ ಆಕೆ ಏನೂ ಮಾತಾಡ್ಲಿಲ್ಲ ಅಂದ್ರು ಎಲ್ಲವನ್ನು ಸಹಿಸ್ಕೊತಾಳೆ, ಕೊನೆಗೆ ಇದೇ ಚಂದ್ರ ಮತ್ತು ಭಿಕ್ಷುಕಿಯ ಮಾತಿಂದನೆ ಎಲ್ರೂ ಶುದ್ದ ಆಗ್ತಾರೆ.. ಆದ್ರೆ ಶುದ್ದ ಅಂದ್ರೆ ಯಾವ್ದು?
ಒಂದುವರೆ ಗಂಟೆಯ ಇಡೀ ರಂಗಪ್ರಯೋಗದ ಮೂಲಕ ಈ ನೆಲದ ಸಹಜ ಹೆಣ್ತವನ್ನ, ಫೆಮಿನಿಸ್ಟ್ ಮಾದರಿಯಲ್ಲಿ ಕಟ್ಟಿಕೊಡೋದು ಸುಲಭದ ಮಾತಲ್ಲ.. ಈ ನೆಲದ ದೇಸಿತನವನ್ನ ಒಗ್ಗೂಡಿಸಿಕೊಂಡು ಸದಾ ಪ್ರಶ್ನೆ ಮಾಡ್ತ, ಖಂಡಸ್ತ ನೊಂದವರ ಪರ ನಿಲ್ಲೋ ಉದಯ್ ಯಾವ ಕಾಲಕ್ಕೂ ಸಲ್ಲಬಹುದಾದ ನಿರ್ದೇಶಕ.. ಇಡೀ ನಾಟಕವನ್ನ ಅಚ್ಚುಕಟ್ಟಾಗಿ ನಿಭಾಯಿಸಿದಂತ ರಂಗಶಾಲದ ಕಲಾವಿದರು ಕೂಡ ತುಂಬಾ ಗಂಭೀರವಾದ ಚಿಂತನೆ ಹೊಂದಿರೋರೆ.. ರಂಗಶಾಲಾದ ಕಲಾವಿದ್ರು ಇನ್ನೊಂದಷ್ಟು ಆಳವಾಗಿ ಪಾತ್ರವನ್ನ ದಕ್ಕಿಸ್ಕೊಂಡ್ರೆ ಇದು ಹೊಸ ಆಯಾಮದ ನಾಟಕ ಆಗೋದ್ರಲ್ಲಿ ಅನುಮಾನ ಇಲ್ಲ. ಸಂಗೀತದಲ್ಲಿ ಮಾಂತ್ರಿಕತೆ ತುಂಬಿದ ಹನುಮಂತ ವೈಎಂ ಮತ್ತೆ ದುರ್ಗಾ, ಅದ್ಭುತವಾಗಿ ಬೆಳಕನ್ನ ನಿರ್ವಹಿಸಿದ ಮಹದೇವಣ್ಣ ಇವರೆಲ್ಲರಿಗೂ ಅಭಿನಂದನೆಗಳು ಮತ್ತೆ ಅಭಿವಂದನೆಗಳು.. ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಇಂತದ್ದೊಂದು ಹೊಸ ಆಯಾಮದ ಅದರಲ್ಲೂ ಮಹಿಳಾ ಕೇಂದ್ರಿತ ನಾಟಕ ಕಟ್ಟಿಕೊಟ್ಟಂತಹ ನಿರ್ದೇಶಕರು ಮತ್ತು ತಂಡಕ್ಕೆ ಧನ್ಯೋಸ್ಮಿ..

0 ಪ್ರತಿಕ್ರಿಯೆಗಳು