ದರ್ಶನ್‌ ಪ್ರಕರಣ ಮತ್ತು ಈಗಿನ ಸಿನೆಮಾದ ಸವಾಲುಗಳು

ನಾ ದಿವಾಕರ

**

ಯಜಮಾನಿಕೆಯ ಸಂಸ್ಕೃತಿಯಲ್ಲಿ ಸಮಾಜವನ್ನು ಪ್ರಭಾವಿಸುವ ವ್ಯಕ್ತಿಗಳಲ್ಲಿ ನೈತಿಕತೆ ಅಗತ್ಯ

ಯಾವುದೇ ಸಮಾಜದಲ್ಲಾದರೂ ಸಾಮಾನ್ಯವಾಗಿ ಗಮನಿಸಬಹುದಾದ ಒಂದು ವಿದ್ಯಮಾನ ಎಂದರೆ ಅಲ್ಲಿನ ಜನಸಮೂಹಗಳ ನಿತ್ಯ
ಬದುಕಿನಲ್ಲಿ ನೆಲಮೂಲ ಸಂಸ್ಕೃತಿಗಿಂತಲೂ ಹೆಚ್ಚಾಗಿ ನಿತ್ಯ ಬದುಕಿನಲ್ಲಿ ಎದುರಾಗುವ ಸಾಂಸ್ಕೃತಿಕ ಚಿಂತನೆಗಳು ಹೆಚ್ಚಿನ ಪ್ರಭಾವ
ಬೀರಿರುತ್ತವೆ. ಸಾಹಿತ್ಯ, ಕಲೆ, ಸಿನೆಮಾ, ರಂಗಭೂಮಿ ಹೀಗೆ ವಿಭಿನ್ನ ನೆಲೆಗಳಲ್ಲಿ ಗುರುತಿಸಬಹುದಾದ ಈ ಪ್ರಭಾವಗಳು ಸಮಾಜದ ಒಳಗೆ ಮತ್ತು ಹೊರಗೆ ಕೆಲವು ವ್ಯಕ್ತಿತ್ವಗಳನ್ನು ಅಥವಾ ಐಕನ್‌ಗಳನ್ನು(Icons) ಸೃಷ್ಟಿಸುತ್ತಲೇ, ಅವುಗಳ ಸುತ್ತ ಅನುಕರಣೀಯ ಮಾರ್ಗಗಳನ್ನೂ
ರೂಪಿಸಲು ನೆರವಾಗುತ್ತವೆ.
ಈ ವಿದ್ಯಮಾನವನ್ನು ಎಲ್ಲ ವರ್ಗಗಳಲ್ಲೂ ಸಮಾನ ನೆಲೆಯಲ್ಲಿ ಕಾಣಲಾಗುವುದಿಲ್ಲವಾದರೂ, ಒಟ್ಟು ಸಮಾಜದ ಅಂತರ್‌ವಾಹಿನಿಯನ್ನು ಗಮನಿಸಿದಾಗ ವರ್ತಮಾನದ ಸಾಮಾಜಿಕ ಆಗುಹೋಗುಗಳು, ಆರ್ಥಿಕ ಬೆಳವಣಿಗೆಗಳು ಹಾಗೂ ಸಾಂಸ್ಕೃತಿಕ
ಆಲೋಚನೆಗಳು ಸಮಾಜದ ಬಹುಸಂಖ್ಯೆಯ ಜನರನ್ನು ಪ್ರಭಾವಿಸುವುದನ್ನು ಗುರುತಿಸಬಹುದು.

ನೆಲಮೂಲದ ಸಾಂಸ್ಕೃತಿಕ ನೆಲೆಗಳನ್ನು ಸದಾ ಕಾಲಕ್ಕೂ ಜೀವಂತವಾಗಿಡುವ ತುಡಿತ ಇರುವ ಒಂದು ಸಾಮಾನ್ಯ ಹಪಹಪಿಯ ನಡುವೆಯೇ ಹೊಸ ಚಿಂತನೆ-ಆಲೋಚನೆಗಳಿಗೆ ತೆರೆದುಕೊಳ್ಳುವ ಸಮಾಜವು ಸಾಂಸ್ಕೃತಿಕ ಪಲ್ಲಟಗಳನ್ನು ಎದುರಿಸುತ್ತಲೇ ಇಂತಹ ಐಕನ್‌ಗಳ ಸುತ್ತ ಕೆಲವು ಜೀವನಾದರ್ಶಗಳನ್ನೂ ಕಲ್ಪಿಸಿಕೊಳ್ಳುತ್ತದೆ. ಸಮಾಜದ ಆಗುಹೋಗುಗಳಲ್ಲಿ ಕಾಣಲಾಗದ ಕೆಲವು ವಿಶೇಷ ಗುಣಲಕ್ಷಣಗಳನ್ನು ಈ
ಐಕನ್‌ಗಳಲ್ಲಿ ಕಾಣುವುದರ ಮೂಲಕ ಅವುಗಳನ್ನೇ ಮೌಲ್ಯೀಕರಣಕ್ಕೊಳಪಡಿಸುವ ಒಂದು ಪ್ರಬಲ ವರ್ಗ ಇಡೀ ಸಮಾಜವನ್ನು ನಿರ್ದೇಶಿಸಲು
ಸದಾ ಯತ್ನಿಸುತ್ತಿರುತ್ತದೆ. ಈ ವರ್ಗಗಳನ್ನು ನಾವು ಸಾಹಿತ್ಯ ಮತ್ತು ರಂಗಭೂಮಿಯ ವಲಯದಲ್ಲಿ ಗುರುತಿಸುವಂತೆಯೇ, ಭಾರತದ ವಿಶಿಷ್ಟ
ಸಂದರ್ಭದಲ್ಲಿ ಸಿನೆಮಾ ವಲಯದಲ್ಲೂ ಗುರುತಿಸಬಹುದು. ಏಕೆಂದರೆ ಒಂದು ದೃಶ್ಯ ಮಾಧ್ಯಮವಾಗಿ ಸಿನೆಮಾ, ರಜತ ಪರದೆಯಿಂದಾಚೆಗೂ
ಹೊರಚಾಚಿಕೊಂಡು, ಭ್ರಮಾಧೀನ ಸಮಾಜಕ್ಕೆ ಸಾಂತ್ವನ ನೀಡುತ್ತಿರುತ್ತದೆ.

ಬದಲಾದ ಕಾಲ ಮತ್ತು ಚಿಂತನೆ

ಇದೇ ಚಿಂತನೆಯ ಹಾದಿಯಲ್ಲಿ ಗಮನಿಸಬೇಕಾದ ಅಂಶವೆಂದರೆ ಸಮಾಜದ ಬೆಳವಣಿಗೆಯಲ್ಲಿ ಆಯಾ ಕಾಲಘಟ್ಟದ ಸಾಂಸ್ಕೃತಿಕ
ವಿದ್ಯಮಾನಗಳೂ ಅಷ್ಟೇ ಪ್ರಭಾವ ಬೀರುತ್ತಿರುತ್ತವೆ. ʼಕಾಲ ಕೆಟ್ಟು ಹೋಯಿತುʼ ಎಂದೋ ʼನಮ್ಮ ಕಾಲದಲ್ಲಿ ಹೀಗಿರಲಿಲ್ಲʼ ಎಂದೋ
ಹಲುಬುವ ಹಿರಿಯ ತಲೆಗಳನ್ನು ಎಲ್ಲ ಕಾಲಮಾನಗಳಲ್ಲೂ ಕಾಣಬಹುದು. ಇದಕ್ಕೆ ಪ್ರತಿಯಾಗಿ ಅಥವಾ ಸಂವಾದಿಯಾಗಿ Change is
inevitable ʼಬದಲಾವಣೆ ಅನಿವಾರ್ಯʼ ಎಂಬ ವರ್ತಮಾನದ ಕೂಗು ಸಹ ಅಷ್ಟೇ ಗಟ್ಟಿಯಾಗಿರುತ್ತದೆ. ಯಥಾಸ್ಥಿತಿವಾದ ಹಾಗೂ ಪುರೋಗಾಮಿ ಚಿಂತನೆಗಳ ನಡುವೆ ಏರ್ಪಡುವ ಇಂತಹ ತಾರ್ಕಿಕ ಸಂಘರ್ಷಗಳಲ್ಲಿ ಒಂದು ಇಡೀ ತಲೆಮಾರು ತನ್ನ ಅಸ್ತಿತ್ವ ಮತ್ತು ಅಸ್ಮಿತೆಯನ್ನು ರೂಪಿಸಿಕೊಳ್ಳಲು ಯತ್ನಿಸುತ್ತದೆ. ಈ ತಾರ್ಕಿಕ ಸಂಘರ್ಷಗಳನ್ನು ವಿಶಾಲ ಸಮಾಜದ ಚೌಕಟ್ಟಿನೊಳಗಿಟ್ಟು ನಿಷ್ಕರ್ಷೆ ಮಾಡುವ ಮೂಲಕ ವರ್ತಮಾನದ ತಪ್ಪುಗಳನ್ನು ಸರಿಪಡಿಸುವ ಜವಾಬ್ದಾರಿ ಐಕನ್‌ ಎನಿಸಿಕೊಳ್ಳುವ ವ್ಯಕ್ತಿ ಅಥವಾ ವ್ಯಕ್ತಿತ್ವದ ಮೇಲಿರುತ್ತದೆ.

ಇದಕ್ಕಾಗಿ ಅಗತ್ಯವಾದ ಸ್ಪಂದನಶೀಲ ಸಂವೇದನೆಯನ್ನು ರೂಢಿಸಿಕೊಳ್ಳುವುದು ಅತ್ಯಂತ ಅನಿವಾರ್ಯ. ಆದರೆ ಆಧುನಿಕತೆಯೊಡನೆ ಜಾಗತೀಕರಣಕ್ಕೆ ತೆರೆದುಕೊಂಡಿರುವ ಭಾರತೀಯ ಸಮಾಜ ಇಂದು ತನ್ನ ಕೆಲವು ಪ್ರಾಚೀನ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುತ್ತಲೇ ಆಧುನಿಕ ನಾಗರಿಕತೆ ಅಪೇಕ್ಷಿಸುವ ಹೊಸ ಮೌಲ್ಯಗಳನ್ನು ರೂಢಿಸಿಕೊಳ್ಳುವ ಪ್ರಯತ್ನದಲ್ಲಿದೆ. ಈ ಸಂದಿಗ್ಧತೆ ಅಥವಾ ವೈರುಧ್ಯವನ್ನು ನಿವಾರಿಸಿಕೊಳ್ಳುವಂತಹ ಮೌಲ್ಯಾದರ್ಶಗಳು ನಮ್ಮ ನಡುವೆ ಸೃಷ್ಟಿಯಾಗುತ್ತಿಲ್ಲ. ಇಂದಿಗೂ 20ನೆಯ ಶತಮಾನದ ಚಿಂತನಾವಾಹಿನಿಗಳನ್ನೇ ಅನುಕರಿಸುತ್ತಿರುವ ಸಮಾಜಕ್ಕೆ ಹೊಸ ಚಿಂತನೆಗಳನ್ನು ಒದಗಿಸುವಂತಹ ಸಾಂಸ್ಕೃತಿಕ ಮಾದರಿಗಳು ಇಂದಿನ ಅಗತ್ಯತೆ. ಆದರೆ ಇದಕ್ಕೆ ಅವಕಾಶವೀಯದಂತೆ ಬಂಡವಾಳಶಾಹಿ ಸಮಾಜ ಮತ್ತು ಬಲಪಂಥೀಯ-ಪ್ರತಿಗಾಮಿ ಅಧಿಕಾರ ವಲಯ ತನ್ನದೇ ಆದ ಪ್ರಭಾವಿ ಸಾಂಸ್ಕೃತಿಕ ವಲಯಗಳನ್ನು ಸೃಷ್ಟಿಸಿಕೊಳ್ಳುತ್ತಿದೆ. ಈ ವೈರುಧ್ಯವನ್ನು ಸೂಕ್ಷ್ಮವಾಗಿ ಅವಲೋಕನ ಮಾಡಬೇಕೆಂದರೆ ನಾವು ಭಾರತದ ಸಿನೆಮಾ
ಮಾಧ್ಯಮದ 70 ವರ್ಷಗಳ ಪಯಣವನ್ನು ಗಮನಿಸಬೇಕಾಗುತ್ತದೆ.

ಶ್ಯಾಮ್ ಬೆನಗಲ್

ಏಕೆಂದರೆ ತಳಮಟ್ಟದ ಸಮಾಜವನ್ನೂ ಸುಲಭವಾಗಿ ತಲುಪಿ ಜನಮಾನಸವನ್ನು ಪ್ರಭಾವಿಸುವ ಭೌತಿಕ-ಬೌದ್ಧಿಕ ಶಕ್ತಿ ಸಂವಹನ ಮಾಧ್ಯಮಕ್ಕಿದೆ. ರಂಗಭೂಮಿಯು ಜನಸಾಮಾನ್ಯರ ನಡುವೆ ಅತ್ಯಂತ ಪ್ರಭಾವಶಾಲಿಯಾಗಿ ಪ್ರವೇಶಿಸಿದ್ದರೂ, ಸಾಮಾಜಿಕ ವರ್ತನೆ ಮತ್ತು ನಡವಳಿಕೆಗಳನ್ನು ಪ್ರಭಾವಿಸುವ ಮಟ್ಟಿನ ಒಳನುಗ್ಗುವಿಕೆ (Penetration) ಸಾಧ್ಯವಾಗಿಲ್ಲ ಎನ್ನುವುದು ವಾಸ್ತವ. ಹಾಗಾಗಿಯೇ ಭಾರತೀಯ ಸಿನೆಮಾ ರಂಗ ತಳಮಟ್ಟದಿಂದ ಅತ್ಯುನ್ನತ ಸ್ತರದವರೆಗೂ ಸಮಾಜದ ನಡೆ ನುಡಿಗಳನ್ನು ನಿರ್ದೇಶಿಸುತ್ತಾ ಬರಲು ಸಾಧ್ಯವಾಗಿದೆ. ವಿಶೇಷವಾಗಿ ಮೊದಲಿನಿಂದಲೂ Pan India ಅಂದರೆ ಭಾರತದಾದ್ಯಂತ ತನ್ನ ಪ್ರಭಾವ ಬೀರುವ ಒಂದು ಲಕ್ಷಣವನ್ನು ರೂಢಿಸಿಕೊಂಡೇ ಬೆಳೆದಿರುವ ಹಿಂದಿ ಚಿತ್ರರಂಗ ಈ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸಿದೆ. ಸ್ವಾತಂತ್ರ್ಯಪೂರ್ವದಿಂದಲೂ ರಜತ ಪರದೆಯ ಕಥನಗಳು ಸಮಾಜದ ಒಳಹೊರಗುಗಳನ್ನು, ರಾಜಕೀಯ-ಸಾಮಾಜಿಕ ಪಲ್ಲಟಗಳನ್ನು, ಸಾಂಸ್ಕೃತಿಕ ವ್ಯತ್ಯಯಗಳನ್ನು ಹಾಗೂ ಸಮಾಜವನ್ನು ಕಾಡುವ ಜಟಿಲ ಸಿಕ್ಕುಗಳನ್ನು ಬಿಂಬಿಸುವ ಅಥವಾ ಅವುಗಳಿಗೆ ಸ್ಪಂದಿಸುವ ಹಾದಿಯಲ್ಲಿ ಸಾಗಿಬಂದಿವೆ. ಹಿಂದಿ ಚಿತ್ರರಂಗದ ಬಿಮಲ್‌ ರಾಯ್‌, ರಾಜ್‌ಕಪೂರ್‌, ಗುರುದತ್‌ ಮೊದಲಾದ ಕಲಾವಿದರು ಈ ಮಾಧ್ಯಮವನ್ನೇ ಸಮರ್ಪಕವಾಗಿ ಬಳಸಿಕೊಳ್ಳುತ್ತಾ ಸಮಾಜದ ಸೂಕ್ಷ್ಮ ಒಳಸುಳಿಗಳನ್ನು ತೆರೆದಿಡುವ ಕೆಲಸವನ್ನೂ ಮಾಡಿರುವುದಿದೆ.

ಸಿನೆಮಾ ಪಯಣ ಮತ್ತು ಸಮಾಜ

ಮನರಂಜನೆಯ ಚೌಕಟ್ಟಿನಿಂದ ಹೊರಗೆ ನಿಂತು ನೋಡಿದಾಗ 1970ರ ದಶಕದಲ್ಲಿ ಮೃಣಾಲ್‌ಸೆನ್‌, ಶ್ಯಾಂ ಬೆನಗಲ್‌, ಗುಲ್ಜಾರ್‌ ಮತ್ತು ಮಲಯಾಳದ ಅಡೂರ್‌ ಗೋಪಾಲಕೃಷ್ಣನ್‌, ಬಂಗಾಲದ ಸತ್ಯಜಿತ್‌ ರೇ, ಋತ್ವಿಕ್‌ ಘಟಕ್‌, ಕನ್ನಡದ ಗಿರೀಶ್‌ ಕಾಸರವಳ್ಳಿ ಮುಂತಾದವರ ಕಲಾತ್ಮಕ ಚಿತ್ರಗಳು ಸಮಾಜದ ಅನಿಷ್ಠಗಳನ್ನು ಹೊರಗೆಳೆದು ತಳಸ್ತರದ ಸಮಾಜಕ್ಕೆ ಅಗತ್ಯವಾದ ಮಾನವೀಯ ನೆಲೆಗಳನ್ನು ಮುಕ್ತಗೊಳಿಸುವ ಪ್ರಯತ್ನಗಳನ್ನು ಮಾಡಿದ್ದಿದೆ. ಇದರ ನಡುವೆಯೇ ಕಮರ್ಷಿಯಲ್‌ ಎಂದೆಣಿಸಲಾಗುವ ಮನರಂಜನಾ ಪ್ರಧಾನ ಚಿತ್ರಗಳೂ
ಸಹ ಸಾಮಾಜಿಕ-ಮಾನವೀಯ ಮೌಲ್ಯಗಳನ್ನು ಅಭಿವ್ಯಕ್ತಿಸುವ ಸಂದೇಶಾತ್ಮಕ ಚಿತ್ರಗಳನ್ನು ನೀಡಿರುವುದುಂಟು. ಇಲ್ಲಿ ಕಾಣಬಹುದಾದ
ವೈರುಧ್ಯವೆಂದರೆ ಸಮಾಜದಲ್ಲಿ ಬೇರೂರಿರುವ ಪ್ರಾಚೀನ-ಅಮಾನುಷ-ಮನುಜವಿರೋಧಿ ಆಚರಣೆ ಮತ್ತು ಅಭಿವ್ಯಕ್ತಿಗಳನ್ನು ಉಲ್ಲಂಘಿಸಿ
ಭವಿಷ್ಯಕ್ಕೆ ಉತ್ತಮ ಸಮಾಜದ ಒಂದು ಆದರ್ಶವನ್ನು ಕಲ್ಪಿಸಿಕೊಟ್ಟ ಕಲಾತ್ಮಕ ಚಿತ್ರಗಳು ಯಾವುದೇ ಐಕನ್‌ಗಳನ್ನು ಸೃಷ್ಟಿಸಲೇ ಇಲ್ಲ.

ಸತ್ಯಜಿತ್ ರೇ

ಬದಲಾಗಿ ರಜತ ಪರದೆಯ ಮೇಲೆ ಸಮಾಜದ ಕೆಡಕುಗಳನ್ನು ನಿವಾರಿಸಿ ದುಷ್ಟರನ್ನು ಸದೆಬಡಿದು ಸರಿದಾರಿಗೆ ತರುವ ನಾಯಕ ಪ್ರಧಾನ ಕಥಾ
ಹಂದರಗಳು ಸೃಷ್ಟಿಸಿದ ಪಾತ್ರಗಳು ತಳಮಟ್ಟದ ಸಮಾಜವನ್ನೂ ಆಕರ್ಷಿಸಿದ್ದೇ ಅಲ್ಲದೆ, ಆ ಪಾತ್ರನಿರ್ವಹಿಸುವ ವ್ಯಕ್ತಿಗಳ ಸುತ್ತ ಸಾಮಾಜಿಕ-ಸಾಂಸ್ಕೃತಿಕ ಪ್ರಭಾವಳಿಗಳನ್ನೂ ಸೃಷ್ಟಿಸಿದ್ದವು. ಇದಕ್ಕೆ ಕಾರಣವೆಂದರೆ ಕಮರ್ಷಿಯಲ್‌ ಚಿತ್ರಗಳು ಜನಸಾಮಾನ್ಯರ ನಡುವೆ ಭ್ರಮಾತ್ಮಕ ಜಗತ್ತನ್ನು ಸೃಷ್ಟಿಸುತ್ತವೆ. ಈ ರಜತ ಪರದೆಯ ಮೇಲಿನ ಹೀರೋ ದುಷ್ಟರನ್ನು ಶಿಕ್ಷಿಸುವ ತನ್ಮೂಲಕ, ಕೆಡುಕುಗಳನ್ನು ಹೋಗಲಾಡಿಸುವ ಮೂಲಕ, ಸಮಾಜಕ್ಕೆ ಒಳಿತು ಮಾಡುವ ವ್ಯಕ್ತಿಯಾಗಿ ಜನಮಾನಸದ ಮಧ್ಯೆ ನಿಲ್ಲುತ್ತಾನೆ. ಇದರ ಮತ್ತೊಂದು ಬದಿಯಲ್ಲಿ ರಾಜ್‌ ಕಪೂರ್‌ನ ಬೂಟ್‌ ಪಾಲಿಷ್‌ ಅಥವಾ ಸತ್ಯಜಿತ್‌ ರೇ ಅವರ ಪಥೇರ್‌ ಪಾಂಚಾಲಿ ಮೊದಲಾದ ಚಿತ್ರಗಳಿಂದ ಸಕಾರಾತ್ಮಕ ಸಂದೇಶಗಳು ಬಂದವಾದರೂ, ಐಕನ್‌ಗಳು ಸೃಷ್ಟಿಯಾಗಲಿಲ್ಲ. ಇದು ಸೃಷ್ಟಿಯಾದದ್ದು ಹಿಂದಿಯ ದಿಲೀಪ್‌ಕುಮಾರ್‌, ದೇವಾನಂದ್‌, ಕನ್ನಡದ ರಾಜ್‌ಕುಮಾರ್‌, ತಮಿಳಿನ ಎಂಜಿಆರ್‌, ತೆಲುಗಿನ ಎನ್‌.ಟಿ.ರಾಮರಾವ್ ಮೊದಲಾದವರ ಮೂಲಕ. ಈ ನಟರ ನಡೆ, ನುಡಿ, ಹಾವಭಾವಗಳು, ಜೀವನ ಶೈಲಿ ಎಲ್ಲವೂ ಸಹ ಯುವ ಸಮಾಜಕ್ಕೆ ಅನುಕರಣೀಯವಾಗತೊಡಗಿದವು.

ಈ ಐಕನ್‌ಗಳು ಪರದೆಯ ಮೂಡಿಸುವ ಕಾಲ್ಪನಿಕ ಕಥನಗಳು ಸುತ್ತಲಿನ ಸಮಾಜದ ವಾಸ್ತವಗಳೂ ಆಗಿದ್ದುದರಿಂದ ಈ ನಟರು ಒಂದು ಪೀಳಿಗೆಯ ಮೌಲ್ಯಗಳನ್ನು ನಿರ್ದೇಶಿಸುವ ವ್ಯಕ್ತಿತ್ವಗಳಾಗಿ ರೂಪುಗೊಂಡರು. ಈ ಕಮರ್ಷಿಯಲ್‌ ಚಿತ್ರಗಳು ವರ್ತಮಾನದ ಸುಡುವಾಸ್ತವಗಳನ್ನು ಬಿಂಬಿಸುವಂತಿದ್ದರೂ ಸಮಾಜದ ಆಂತರ್ಯವನ್ನು ಬಗೆದುನೋಡುವ ಪ್ರಯತ್ನಗಳನ್ನು ಮಾಡಿದ್ದು ಕಡಿಮೆಯೇ ಎನ್ನಬಹುದು. ಸಾರ್ವಜನಿಕ ಬದುಕಿನ ನಿತ್ಯ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ತೋರಿಸುವ ಆದರ್ಶಪ್ರಾಯ ನಾಯಕರಾಗಿ ಮೇಲೆ ಉಲ್ಲೇಖಿಸಿದ ಎಲ್ಲ ಹೀರೋಗಳೂ ತಮ್ಮದೇ ಆದ ಪ್ರಭಾವಿ ವಲಯಗಳನ್ನು ಸೃಷ್ಟಿಸಿಕೊಂಡಿದ್ದರು. ಆದರೆ ಇವರ ಯಾವುದೇ ಚಿತ್ರಗಳಲ್ಲೂ (ಕೆಲವು ಅಪವಾದಗಳನ್ನು ಹೊರತುಪಡಿಸಿ) ಹೊರ ಸಮಾಜದ ಪ್ರಬಲ ವರ್ಗಗಳನ್ನು ಮತ್ತು ಆ ವರ್ಗಗಳ ಸಾಂಸ್ಕೃತಿಕ ಚಿಂತನಾವಲಯವನ್ನು ಧಿಕ್ಕರಿಸುವ ಪ್ರಯತ್ನಗಳನ್ನು ಕಾಣಲಾಗುವುದಿಲ್ಲ. ಅಥವಾ ಈ ವರ್ಗಗಳ ಯಜಮಾನಿಕೆಯಿಂದಲೇ ದೌರ್ಜನ್ಯಕ್ಕೊಳಗಾಗುವ ಶೋಷಿತ ಜನರ ಶೋಷಣೆಯ ಮಜಲುಗಳನ್ನು ಭೇದಿಸುವ ಪ್ರಯತ್ನಗಳು ಸಹ ಕಾಣುವುದಿಲ್ಲ. ಹಾಗಾಗಿಯೇ ಇಲ್ಲಿ ಪರದೆಯ ಮೇಲಿನ ಹೀರೋಗಳು ಹೊರ ಸಮಾಜದಲ್ಲೂ ಅನುಕರಣೀಯ-ಆದರ್ಶಪ್ರಾಯ ವ್ಯಕ್ತಿಗಳಾಗಿ ಕಾಣಲಾರಂಭಿಸಿದ್ದರು.

Stardom ಎಂಬ ಮಾಯಾಲೋಕ

ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಆರಾಧನಾ ಮನೋಭಾವ ತುಸು ಆಳವಾಗಿಯೇ ಬೇರೂರಿರುವುದರಿಂದ ಇಲ್ಲಿ ಸಿನೆಮಾ ನಾಯಕರು ತಳಮಟ್ಟದ ಸಮಾಜಕ್ಕೆ ಆರಾಧ್ಯ ದೈವಗಳಂತೆಯೋ, ಆದರ್ಶಪ್ರಾಯ ವ್ಯಕ್ತಿಗಳಂತೆಯೋ ಕಾಣತೊಡಗಿದ್ದರು. ಈ ಹೀರೋಗಳ ಪರದೆಯ ಮೇಲಿನ ವ್ಯಕ್ತಿತ್ವವನ್ನೇ ಹೊರ ಸಮಾಜದ ನಿಜ ಜೀವನದಲ್ಲೂ ಕಲ್ಪಿಸಿಕೊಳ್ಳುವ ಒಂದು ಭ್ರಮಾತ್ಮಕ ಜಗತ್ತು ಸಿನೆಮಾಗಳನ್ನು ಮತ್ತು ಸಿನೆಮಾ ತಾರೆಗಳನ್ನು ಜನಾನುರಾಗಿಗಳನ್ನಾಗಿ ಮಾಡಿದ್ದು ಚರಿತ್ರೆಯ ವ್ಯಂಗ್ಯವಾದರೂ ವಾಸ್ತವ. 1970-80ರ ನಂತರದ ವರ್ಷಗಳಲ್ಲಿ ಸಿನೆಮಾ ಕೇವಲ ಮನರಂಜನೆಯ ಸರಕಾಗಿ ಉಳಿಯದೆ, ಬಂಡವಾಳ ಮತ್ತು ಮಾರುಕಟ್ಟೆಯ ಒಂದು ಭಾಗವಾಗಿ ಬೆಳೆದಿದ್ದರಿಂದ, ರಜತ ಪರದೆಯ ಕಥಾ ನಾಯಕನ ಹೊರ ಸಮಾಜದಲ್ಲೂ ನಾಯಕನಾಗಿಯೇ ವಿಜೃಂಭಿಸುವ ಒಂದು ಪರಂಪರೆಗೆ ನಾಂದಿ ಹಾಡಲಾಯಿತು.

ಎನ್ ಟಿ ರಾಮರಾವ್

ಸಹಜವಾಗಿಯೇ ಮಾರುಕಟ್ಟೆಯ ಸ್ಪರ್ಧಾತ್ಮಕತೆ ಇಲ್ಲಿಯೂ ಪ್ರವೇಶಿಸಿ, ಸಿನೆಮಾ ತಾರೆಗಳ ಮೂರ್ತೀಕರಣ (Idolisation)̧ ಆರಾಧನೆ ಮತ್ತು ವೈಭವೀಕರಣ ಸಾಂಸ್ಥಿಕ ಸ್ವರೂಪ ಪಡೆದುಕೊಂಡಿತ್ತು. ವ್ಯವಸ್ಥಿತವಾಗಿ ನಾಯಕ ನಟರ ಅಭಿಮಾನಿ ಸಂಘಗಳು ಹುಟ್ಟಿಕೊಂಡಿದ್ದೂ ಈ ಹಂತದಲ್ಲೇ. ತಮ್ಮ ನಿತ್ಯ ಬದುಕಿನ ಸಂಕಟಗಳಿಂದ ಹೊರಬರಲು ಸದಾ ಹಪಹಪಿಸುವ ಕೆಳಸ್ತರದ ಜನತೆಗೆ ತಾತ್ಕಾಲಿಕ ಸಾಂತ್ವನ ನೀಡುತ್ತಿದ್ದ ಕಮರ್ಷಿಯಲ್‌ ಚಿತ್ರಗಳು ಪರದೆಯ ಮೇಲಿನ ಜನಸ್ನೇಹಿ-ಜನಾನುರಾಗಿ-ದುಷ್ಟಸಂಹಾರಕ ನಾಯಕ ನಟರನ್ನು ಹೊರ ಸಮಾಜದ ನಡುವೆಯೂ ನಿಲ್ಲಿಸುವುದರಲ್ಲಿ ಯಶಸ್ವಿಯಾದವು. ಅಮಿತಾಬ್‌ ಬಚ್ಚನ್‌ Angry Young Man ಆಗಿ ರೂಪುಗೊಂಡಿದ್ದೂ ಈ ಹಂತದಲ್ಲೇ. ಕನ್ನಡದಲ್ಲಿ ರಾಜ್‌ಕುಮಾರ್‌ ಸಜ್ಜನಿಕೆ, ಸಂಯಮ ಮತ್ತು ಸೌಹಾರ್ದಯುತ ಸಮಾಜದ ಪ್ರತಿನಿಧಿಯಂತೆ ತಮ್ಮ ಚಿತ್ರಗಳನ್ನು ನಿರ್ಮಿಸತೊಡಗಿದ್ದು ಈ ಹಂತದಲ್ಲೇ. ಮತ್ತೊಂದೆಡೆ ಈ ನಾಯಕ ನಟರ ಮುಗಿಲೆತ್ತರದ ಕಟೌಟ್‌ಗಳಿಗೆ ಹಾಲಿನ ಅಭಿಷೇಕ ಮಾಡುವ ಅತಿರೇಕದ ಭಾವಾವೇಷದ ಅಭಿಮಾನ ವ್ಯಾಪಕವಾಗಿದ್ದೂ ಈ ಹಂತದಲ್ಲೇ. ಅಭಿಮಾನಿ ಸಂಘಗಳು ಈ ಐಕನ್‌ಗಳ ಅರಿವಿನಿಂದಾಚೆಗೆ ಸೃಷ್ಟಿಯಾಗುವುದಲ್ಲ ಎಂಬ ಕಟುವಾಸ್ತವವನ್ನು ಒಪ್ಪಿಕೊಳ್ಳಲೇಬೇಕು.

ಸ್ವಾಭಾವಿಕವಾಗಿ ಈ ನಟರ ಹೊರಜಗತ್ತಿನ ಜೀವನಶೈಲಿ ಮತ್ತು ನಡೆನುಡಿಗಳೂ ಪರದೆಯ ಮೇಲಿನ ಆದರ್ಶಗಳನ್ನೇ ಬಿಂಬಿಸುವಂತಿರಬೇಕು ಎಂಬ ನಿರೀಕ್ಷೆ ಸುಶಿಕ್ಷಿತ-ಮೇಲ್ಪದರದ ಸಮಾಜದಲ್ಲೂ ಕಾಣತೊಡಗಿತ್ತು. ತಮ್ಮ ನೆಚ್ಚಿನ ನಾಯಕ ನಟನಲ್ಲಿ ಯಾವ ತಪ್ಪನ್ನೂ ಮಾಡದ, ಅನ್ಯಾಯವೆಸಗದ, ದೌರ್ಜನ್ಯವೆಸಗದ ವ್ಯಕ್ತಿತ್ವವನ್ನು ಊಹಿಸಿಕೊಳ್ಳಲಾರಂಭಿಸಿದ ಸಮಾಜವು ಅವರಲ್ಲಿ ವಿಮೋಚಕರನ್ನು ಕಾಣತೊಡಗಿದ್ದೂ ಹೌದು. ಈ ವ್ಯಕ್ತಿತ್ವ ಕೇಂದ್ರಿತ ನಿರೂಪಣೆಗಳು (Personality centric Narratives) ಕಾಲ್ಪನಿಕ ಜಗತ್ತನ್ನು ವಾಸ್ತವಕ್ಕಿಳಿಸುವ ವ್ಯರ್ಥ ಪ್ರಯತ್ನವೇ ಆದರೂ, ಇದರಲ್ಲಿ ಯಶಸ್ವಿಯಾಗಿದ್ದಂತೂ ಹೌದು. ಇದಕ್ಕೆ ಕಾರಣ ಪರದೆಯ ಮೇಲಿನ ಐಕನ್‌ಗಳು. ಭಾರತೀಯ ಸಮಾಜದಲ್ಲಿ ಯಾವ ವಿದ್ಯಮಾನವನ್ನೂ ಬಿಡದೆ ಹೆಗಲೇರುವ ಜಾತಿ ಅಸ್ಮಿತೆಗಳು ಇಲ್ಲೂ ಸಹ ಪ್ರವೇಶಿಸಿದ ಕಾರಣ, ಐಕನ್‌ಗಳ ಅಭಿಮಾನಿ ವೃಂದವೂ ಜಾತಿನಿರ್ದಿಷ್ಟ ಸಾಂಸ್ಥಿಕ ಸ್ವರೂಪವನ್ನು ಪಡೆದುಕೊಂಡಿದ್ದು ಸಮಕಾಲೀನ ವ್ಯಂಗ್ಯ.

ಡಾ ರಾಜ್ ಕುಮಾರ್

ಈ ಐಕನ್‌ಗಳಿಗೆ ಅವರ ಜೀವನಶೈಲಿ ಮತ್ತು ಅವುಗಳಿಂದ ಹೊರಗಾಣುವ ಮಾದರಿ ವ್ಯಕ್ತಿತ್ವದ ಕಲ್ಪನೆಗಳು ಸಮಾಜವನ್ನೂ ಪ್ರಭಾವಿಸುತ್ತವೆ ಎಂಬ ಪರಿಜ್ಞಾನ ಇಲ್ಲದೆ ಹೋದರೆ, ಅಭಿಮಾನದ ಅಲೆಯಲ್ಲಿ ಕೊಚ್ಚಿಹೋಗುವ ಒಂದು ಪೀಳಿಗೆ ದಿಕ್ಕು ತಪ್ಪಿದಂತಾಗುತ್ತದೆ. ಅತಿರೇಕದ ಅಭಿಮಾನ ಸೃಷ್ಟಿಸುವಂತಹ ಅಂಧಾನುಕರಣೆ ಮತ್ತು ಆರಾಧನಾ ಮನೋಭಾವ ಸಮಾಜದ ಒಂದು ವಲಯವನ್ನು ಭ್ರಷ್ಟವಾಗಿಸಿಬಿಡುತ್ತದೆ. ಬಾಹ್ಯ ಸಮಾಜದಲ್ಲಿ ಅಥವಾ ರಾಜಕಾರಣದಲ್ಲಿ ಆದರ್ಶಪ್ರಾಯ ವ್ಯಕ್ತಿತ್ವಗಳು ಮತ್ತು ಅನುಕರಣೀಯ ಮೌಲ್ಯಗಳು ನಶಿಸಿಹೋಗಿರುವ ಸಮಕಾಲೀನ ಭಾರತದಲ್ಲಿ ಈ ಕಾಲ್ಪನಿಕ ಐಕಾನಿಕ್‌ ವ್ಯಕ್ತಿತ್ವಗಳೇ ಸಮಾಜವನ್ನು ನಿರ್ದೇಶಿಸುವ ಒಂದು ಗುರುತರ ಅಪಾಯವನ್ನು ನಾವು ಎದುರಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ಕನ್ನಡ ಅಥವಾ ಇತರ ಭಾಷೆಗಳ ಚಿತ್ರಗಳನ್ನು ಗಮನಿಸಿದರೆ, ಸಮಾಜದಲ್ಲಿ ನಿರಂತರವಾಗಿ ನಡೆಯುವ ಮಹಿಳೆಯರ ಮೇಲಿನ ಅತ್ಯಾಚಾರಗಳು, ದೌರ್ಜನ್ಯಗಳು, ಗುಂಪು ಹಲ್ಲೆಗಳು, ಕೊಲೆಗಳು ಮತ್ತಿತರ ಸಮಾಜಘಾತುಕ ವರ್ತನೆಗಳನ್ನು ನಿಷ್ಕರ್ಷಕ್ಕೊಡ್ಡುವುದರ ಬದಲು, ಹೀರೋಗಳನ್ನು ವೈಭವೀಕರಿಸುವ ಸಲುವಾಗಿ ಈ ದುರ್ವರ್ತನೆಗಳನ್ನೇ Romanticise ಮಾಡುವ ಪ್ರವೃತ್ತಿ ಹೆಚ್ಚಾಗಿ ಕಾಣುತ್ತಿದೆ. ಇಂತಹ ಪಾತ್ರಗಳನ್ನು ಪರದೆಯ ಮೇಲೆ ನಿರ್ವಹಿಸುವ ಐಕನ್‌ಗಳು ಹೊರ ಸಮಾಜದಲ್ಲೂ ತಮ್ಮನ್ನು ಅತೀತರನ್ನಾಗಿಯೇ ಪರಿಭಾವಿಸುವ ಒಂದು ಧೋರಣೆಯೂ ಹೆಚ್ಚಾಗುತ್ತಿದೆ.

ಸ್ಯಾಂಡಲ್‌ವುಡ್‌ ಎಂಬ ಭ್ರಮಾಜಗತ್ತು

ಕನ್ನಡ ಚಿತ್ರರಂಗದಲ್ಲಿ ನಟನಾ ಕೌಶಲಕ್ಕಿಂತಲೂ ಹೆಚ್ಚಾಗಿ ಮಾರುಕಟ್ಟೆಯ ಆಕರ್ಷಣೆಯ ಮೂಲಕ ತಾರಾಪಟ್ಟ (Stardom) ಗಳಿಸಿರುವ ನಟರ ದೊಡ್ಡ ದಂಡು ನಮ್ಮ ನಡುವೆ ಇದೆ. ಅಭಿನಯ ಕಲೆ ಮತ್ತು ನಟನೆಯ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸವನ್ನು ಗ್ರಹಿಸಲಾಗದ ಸಮಾಜವೇ ಕಳೆದ ಹಲವು ವರ್ಷಗಳಲ್ಲಿ ಹಲವಾರು ತಾರೆಗಳನ್ನು ಸೃಷ್ಟಿಸಿಬಿಟ್ಟಿರುವುದು ಗಮನಿಸಬೇಕಾದ ಸಂಗತಿ. ಆದರೆ ಡಾ. ರಾಜ್‌ಕುಮಾರ್‌ ಅವರಿಗೆ ಅಥವಾ ಆ ಕಾಲಘಟ್ಟದ ನಾಯಕಿಯರಿಗೆ, ಪೋಷಕ ಕಲಾವಿದರಿಗೆ ಸರಿಸಾಟಿಯಾಗಬಲ್ಲ ಒಬ್ಬ ಪರಿಪೂರ್ಣ ನಟನನ್ನು, ನಟಿಯನ್ನು ಕಳೆದ ಐವತ್ತು ವರ್ಷಗಳಲ್ಲಿ ನೀಡಲಾಗಿಲ್ಲ. ಮಾರುಕಟ್ಟೆ ಸೃಷ್ಟಿಸುವ Stardom ನಟರನ್ನು ಪ್ರಸಿದ್ಧಿಗೆ ತರುತ್ತದೆ. ಪಿತೃಪ್ರಧಾನ ಮಾರುಕಟ್ಟೆಯಲ್ಲಿ ಪುರುಷಾಧಿಪತ್ಯವೇ ಬಲಿಷ್ಠವಾಗಿರುವುದರಿಂದ ಸಿನೆಮಾಗಳಲ್ಲಿ ನಾಯಕಿಯರು ಅಲಂಕಾರಿಕ ವಸ್ತುಗಳಾಗಿಬಿಡುತ್ತಾರೆ. ಡಾ. ರಾಜ್‌ಕುಮಾರ್‌ ಉತ್ತುಂಗದಲ್ಲಿದ್ದ 1980ರ ದಶಕದಿಂದಲೇ ಕನ್ನಡದಲ್ಲಿ ಸ್ತ್ರೀ ಪ್ರಧಾನ ಸಿನೆಮಾಗಳು ಮರೆಗೆ ಸರಿಯಲಾರಂಭಿಸಿದ್ದನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ. ಕಳೆದ ಎರಡು ದಶಕಗಳಲ್ಲಿ ಇದು ಸಂಪೂರ್ಣವಾಗಿ ಮರೆಯಾಗಿದೆ.

ನಟ ದರ್ಶನ್

ಕೇವಲ ಮನರಂಜನೆ ಮತ್ತು ಲಾಭಗಳಿಕೆಯನ್ನೇ ಪ್ರಧಾನವಾಗಿ ಪರಿಗಣಿಸುವ ಇಂದಿನ ಸಿನಿಮಾಗಳಿಗೆ ಸಾಮಾಜಿಕ ಬದ್ಧತೆ, ಕಾಳಜಿ ಅಥವಾ
ಸಹಾನುಭೂತಿ ಇವೆಲ್ಲವೂ ಅಪಥ್ಯವಾಗಿ ಕಾಣುತ್ತದೆ. ಕೋಟ್ಯಂತರ ರೂಗಳ ಬಂಡವಾಳ ಮತ್ತು ಮಾರುಕಟ್ಟೆಗೆ ಇದು ಅಗತ್ಯವಾಗಿ ಕಾಣುವುದೂ
ಇಲ್ಲ. ಅಂತಹ ಪ್ರಯತ್ನಗಳು ಕೆಲವೇ ಇದ್ದರೂ ಮಾರುಕಟ್ಟೆ ಅಂತಹವುಗಳನ್ನು ಅಂಚಿಗೆ ನೂಕಿಬಿಡುತ್ತದೆ. ಹಾಗಾಗಿಯೇ ಸಾಮಾನ್ಯ ಜನರಿಗೆ
ಒಂದು ಜೀವನಾದರ್ಶ ಮಾದರಿಯನ್ನು ಮುಂದಿಡುವ ಕಲಾವಿದರು ಸೃಷ್ಟಿಯಾಗಲು ಸಾಧ್ಯವಾಗಿಲ್ಲ. ಅಭಿಮಾನಿಗಳ ಅತಿರೇಕದ ಭಾವಾವೇ಼ಷ
ಮತ್ತು ಹಿಂಬಾಲಿಸುವಿಕೆಯಿಂದಲೇ ತಮ್ಮ ಐಕಾನಿಕ್‌ ಅಂತಸ್ತನ್ನು, ತಾರಾವರ್ಚಸ್ಸನ್ನು ಆಸ್ವಾದಿಸುವ ಸಿನೆಮಾ ನಾಯಕರು ಅನ್ಯಗ್ರಹ ಜೀವಿಗಳಂತೆ ಬದುಕಲಾರಂಭಿಸುತ್ತಾರೆ. ಆದರೆ ಅವರ ಅಂಧ ಅನುಯಾಯಿಗಳು ಮಾರುಕಟ್ಟೆಯ ನಡುವೆ ಅವರನ್ನು ವೈಭವೀಕರಿಸುತ್ತಾ
ಮೂರ್ತೀಕರಣಗೊಳಿಸುತ್ತಿರುತ್ತಾರೆ.
ತಳಮಟ್ಟದ ಸಮಾಜದ ಸಂಕಟಗಳಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸದ ತಾರಾಗಣ ಅನುಕರಣೀಯ
ಜೀವನಾದರ್ಶಗಳನ್ನು ಕಲ್ಪಿಸುವುದರಲ್ಲೂ ಸೋಲುವುದಕ್ಕೆ ಇದೊಂದು ಕಾರಣ.

ಮತ್ತೊಂದು ಬದಿಯಲ್ಲಿ ವಿಶಾಲ ಸಮಾಜದ ಬೌದ್ಧಿಕ ವಲಯವೂ ಸಹ ಸಮಕಾಲೀನ ಚಿತ್ರರಂಗ ಸೃಷ್ಟಿಸುತ್ತಿರುವ ಭ್ರಮಾಧೀನ ಜಗತ್ತು ಮತ್ತು ಸೂಪರ್‌ಮ್ಯಾನ್‌ ಪರಿಕಲ್ಪನೆಗಳತ್ತ ಗಮನಹರಿಸಬೇಕಿದೆ. ವಿಪುಲವಾಗಿ ಲಭ್ಯವಿರುವ ಕನ್ನಡ ಸಾಹಿತ್ಯ ಭಂಡಾರದಿಂದ ಹೆಕ್ಕಿ ತೆಗೆಯಬಹುದಾದ ಮಾನವೀಯ ಮೌಲ್ಯಗಳ ಸರಕುಗಳನ್ನು ಮೂಲೆಗೆ ತಳ್ಳಿರುವ ಸ್ಯಾಂಡಲ್‌ವುಡ್‌ (ಕೆಲವೇ ಅಪವಾದಗಳ ಹೊರತುಪಡಿಸಿ) ಇಂದು ಕನ್ನಡ ಜನತೆಗೆ ನೀಡುತ್ತಿರುವುದು ಅಮಾನುಷ ಹಿಂಸೆ, ಅಶ್ಲೀಲತೆ, ಯಾವ ಶಕ್ತಿಗೂ ನಿಲುಕದ ಸೂಪರ್‌ಮ್ಯಾನ್‌ ವ್ಯಕ್ತಿತ್ವ ಮತ್ತು ಹಿಂಸೆ-ಕ್ರೌರ್ಯವನ್ನು Romanticise ಮಾಡುವಂತಹ ಕತೆಗಳನ್ನು. ಈ ಜಾಲಿಯ ತೋಟವನ್ನೇ ಕೆಳಸ್ತರದ ಸಮಾಜಕ್ಕೆ ಗಂಧದ ವನದಂತೆ ಬಿಂಬಿಸುತ್ತಿರುವ ಚಿತ್ರರಂಗ ಮತ್ತು ಅದರ ವಾರಸುದಾರರು ಸಮಾಜಕ್ಕೆ ಏನು ನೀಡುತ್ತಿದ್ದಾರೆ ಎಂಬ ಪ್ರಶ್ನೆ ಚರ್ಚೆಗೊಳಗಾಗಬೇಕಿದೆ. ದರ್ಶನ್‌ ಪ್ರಕರಣದ ಸುತ್ತ ನಡೆಯುತ್ತಿರುವ ಸಂಕಥನಗಳ ಹಿನ್ನೆಲೆಯಲ್ಲಿ ಮೂಲತಃ ಚರ್ಚೆಯಾಗಬೇಕಿರುವುದು ಈ ಜಟಿಲ ಸವಾಲುಗಳು.

‍ಲೇಖಕರು Admin MM

August 4, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: