ದರ್ಶನ್ ಜಯಣ್ಣ
ಅಪ್ಪನನ್ನ ಅಂಗಡಿಯಲ್ಲಿ ಕೆಲವು ಗಿರಾಕಿಗಳು ಹೀಗೆ ಕಾಲೆಳೆಯುತ್ತಿದ್ದರು. ಆಯುರ್ವೇದವನ್ನು ಅನೌಪಚಾರಿಕವಾಗಿ ಅಭ್ಯಾಸಮಾಡಿ ಔಷಧಿ ಕೊಡುವವರನ್ನು ಸಾಮಾನ್ಯವಾಗಿ ” ಅಳಲೆಕಾಯಿ ಪಂಡಿತ ” ಎನ್ನುವುದುಂಟು. ಅಳಲೆಕಾಯಿ ವಾತ, ಪಿತ್ತ, ತಲೆನೋವು ಮುಂತಾದ ತೊಂದರೆಗಳಿಗೆ ರಾಮಬಾಣ.
ಇಂತಿಪ್ಪ ಅಪ್ಪನನ್ನು ಅವರ ಕೆಲವು ಗೆಳೆಯರು ಅಂಗಡಿಗೆ ಬಂದಾಗಲೆಲ್ಲ ಕಾಲೆಳೆಯುತ್ತಿದ್ದರು. ಉತ್ತರ ಭಾರತದಲ್ಲಿ (ಈಗೀಗ ದಕ್ಷಿಣದಲ್ಲೂ) ಬೀದಿ ಬೀದಿಯಲ್ಲಿ ಟೆಂಟ್ ಹಾಕಿಕೊಂಡು ಅದರ ಮುಂದೊಂದು ಕಾರ್ ನಿಲ್ಲಿಸಿಕೊಂಡು ಪ್ರಪಂಚದ ಎಲ್ಲಾ ಸಮಸ್ಯೆಗಳಿಗೂ ‘ದವಾ ‘ ಕೊಡುವವರನ್ನು “ಪಾಷಾಣ್ ಕಾ ಪಂಡಿತ್ ” ಎಂದು ಗೇಲಿ ಮಾಡುವುದುಂಟು. ಅಪ್ಪನ ಗೆಳೆಯರು ಅದನ್ನೇ ಮಾಡುತ್ತಿದ್ದರು.
ಅಪ್ಪ ಸುಮಾರು ಮೂವತ್ತು ವರ್ಷಗಳ ಕಾಲ ತಾವು ಕಲಿತ ಆಯುರ್ವೇದವನ್ನ ಪ್ರಾಕ್ಟೀಸ್ ಮಾಡಿದ್ದರು. ಅದಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳನ್ನು ಅಗಸ್ತ್ಯ ಮುನಿಯಿಂದ ಈಗಿನ ಆರೋಗ್ಯ ದೀಪಿಕಾದವರೆಗೆ ಎಲ್ಲವನ್ನು ಸಂಪಾದಿಸಿ ಇಟ್ಟುಕೊಂಡು ರಾತ್ರಿಯ ಹೊತ್ತು ಬಿಡುವು ಮಾಡಿಕೊಂಡು ಓದುತ್ತಿದ್ದರು. ಅವರ ಓದಿನ ಕೋಣೆಯೇ ನನ್ನ ಸ್ಟಡಿ ಕೋಣೆ ಕೂಡ ಆಗಿತ್ತು.
ನಾನು ಒಮ್ಮೆ “ನಿಂಗೆ ಆಯುರ್ವೇದ ಎಲ್ಲಾ ಬರುತ್ತಲ್ಲ ಮತ್ತೆ ಅಷ್ಟೊಂದ್ ಯಾಕ್ ಓದುತ್ತೀಯ” ಎಂದು ಪೆಕರನಂತೆ ಕೇಳಿದ್ದೆ. ಆಗ ಅವರು ತಾನು ಔಪಚಾರಿಕವಾಗಿ ಓದಿಲ್ಲವಾದ್ದರಿಂದ ಎಷ್ಟೋ ಸಂಗತಿಗಳನ್ನು ತಿಳಿಯಲು ಈ ಪುಸ್ತಕಗಳು ಸಹಾಯಕ ಅಂದಿದ್ದರು.
ಅಪ್ಪ ಓದಿದ್ದು SSLC ವರೆಗೆ ಮಾತ್ರ ಅಥವಾ ಓದಲಿಕ್ಕಾಗಿದ್ದು ಎಂದರೆ ಸೂಕ್ತ. ಆ ವರ್ಷ SSLC ಯಲ್ಲಿ ಸೆಕೆಂಡ್ ಕ್ಲಾಸ್ ಪಡೆದು ಪಾಸುಮಾಡಿ ಮುಂದೆ ಸಿದ್ದಗಂಗಾ ಕಾಲೇಜಿನಲ್ಲಿ ಕಾಮರ್ಸ್ ತೆಗೆದುಕೊಂಡು ಓದಬೇಕೆಂದು ಅಪ್ಪನ ಇಷ್ಟವಿತ್ತಾದರೂ ಓದಿಸುವವರಿರಲಿಲ್ಲ.
ಅಪ್ಪನ ಅಪ್ಪ ಅಂದರೆ ನನ್ನ ತಾತ, ಅಪ್ಪ ಏಳನೆಯ ಕ್ಲಾಸ್ಸಿನಲ್ಲಿದ್ದಾಗ ಶುಗರ್ ಎಂಬ ಆಗಿನ ಮಾರಣಾಂತಿಕ ಖಾಯಿಲೆಗೆ ತುತ್ತಾಗಿದ್ದರು. ಏನೆಲ್ಲಾ ಇಲಾಜು ಮಾಡಿಸಿದರೂ ತಾತ ತಮ್ಮ ನಲವತ್ತನೇ ವಯಸ್ಸಿಗೇ ಅಸು ನೀಗಿದ್ದರು. ಆಗ ಅಪ್ಪನಿಗೆ 12 ವರ್ಷ. ಐದು ಜನ ಅಕ್ಕ ತಂಗಿಯರಿದ್ದ ಅಪ್ಪ ತಮ್ಮ ಮೊದಲ ಭಾವನ ಮನೆಯಲ್ಲಿ ಇದ್ದು ಅವರ ಗ್ರಂಥಿಗೆ ಅಂಗಡಿಯಲ್ಲಿ ಕೆಲಸಮಾಡಿಕೊಂಡೇ ಹತ್ತನೇ ಕ್ಲಾಸ್ ಪಾಸ್ ಮಾಡಿದ್ದರು.
ಅವರ ಭಾವನಿಗೆ ಯಾರು ಚುಚ್ಚಿ ಕೊಟ್ಟರೋ ತಿಳಿಯದು. ನಿನ್ನನ್ನ ಮುಂದೆ ನಾನು ಓದಿಸಲಿಕ್ಕಾಗದು ಎಂದುಬಿಟ್ಟರು. ಅಪ್ಪನ ಆಸೆಯ ಕಡಲಲ್ಲಿ ಅಲ್ಲೋಲ ಕಲ್ಲೋಲ. ಆದರೂ ಅಪ್ಪ ಸುಮ್ಮನಿರುವ ಆಸಾಮಿಯಲ್ಲ. ಸಂಜೆ ಕಾಲೇಜಿನ ಅಪ್ಲಿಕೇಶನ್ ತಂದು “ಅಣ್ಣಯ್ಯ ಸಂಜೆ ಕಾಲೇಜಿಗೆ ಸೇರಿಕೋತಿನಿ, ಬೆಳಿಗ್ಗೆ ಅಂಗಡಿ ಕೆಲಸ ಮಾಡಿ ಸಂಜೆ ಕಾಲೇಜಿಗೆ ಹೋಗುತ್ತೀನಿ ” ಎಂದರು.
ಅದಕ್ಕೆ ಕೆಂಡಾಮಂಡಲವಾದ ಅವರ ಭಾವ “ನಿಮ್ಮನ್ನೆಲಾ ಓದಿಸಲಿಕ್ಕಾಗಲ್ಲ ನನಗೆ, ನಿನ್ನ ತಂಗಿಯರ ಮದುವೆ ಬೇರೆ ಮಾಡಬೇಕು, ಮನೆ ನಡೆಸಬೇಕು. ನೀನು ಅಂಗಡಿಯಲ್ಲಿ ಕೆಲಸಮಾಡಿಕೊಂಡಿದ್ದರೆ ಏನೋ ಮಾಡಬಹುದು” ಎಂದರು. ಅಲ್ಲಿಗೆ ಔಪಚಾರಿಕವಾಗಿ ಅಪ್ಪನ ಓದಿನ ಬಂಡಿ ಸಂಪೂರ್ಣ ನಿಂತೇ ಹೋಯಿತು.
ಮುಂದೆ ಅಪ್ಪ ಅವರ ಭಾವನ ಅಂಗಡಿಯಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಂಡರು. ‘ಗ್ರಂಥಿ’ ಎಂದರೆ ಆಯುರ್ವೇದದ ಪರಿಭಾಷೆಯಲ್ಲಿ ಉಪಯುಕ್ತವಾದ ನಾರು, ಬೇರು ಅಥವಾ ಕಾಯಿ ಎಂದರ್ಥ. ಆದರೆ ಗ್ರಂಥಿಗೆ ಅಂಗಡಿಯಲ್ಲಿ ಇದರ ಜೊತೆಗೇ ಪೂಜಾ ಸಾಮಗ್ರಿಗಳು, ಹೋಮ ಹವನದ ಸಮಿತ್ತುಗಳು, ಯುನಾನಿ, ಸಿದ್ದ ಔಷಧೀಯ ಪದಾರ್ಥವೆಲ್ಲಾ ಸಿಗ್ಗುತ್ತವೆ. ಇದು ಹತ್ತರಲ್ಲಿ ಹನ್ನೊಂದು ವ್ಯಾಪಾರದಂತಲ್ಲದೆ ಆಪೂರ್ವವಾದ ವೃತ್ತಿ ಕೌಶಲ್ಯವೇ ಆಗಿದೆ.
ಇದನ್ನ ಅಪ್ಪ ನಿಧಾನವಾಗಿ ಕಲಿಯಲು ಪ್ರಾರಂಭಿಸಿದರು. ಯಾವ ನಾರು ಬೇರು ಹೇಗಿರುತ್ತದೆ, ಅದನ್ನು ಬೇರೆ ಭಾಷೆಯಲ್ಲಿ ಏನೆಂದು ಕರೆಯುತ್ತಾರೆ, ಅದು ಎಲ್ಲಿ ಬೆಳೆಯುತ್ತದೆ, ಎಲ್ಲಿ ಸಿಗುತ್ತದೆ ಹೀಗೆ. ನಂತರದ ದಿನಗಳಲ್ಲಿ ಅದರ ಗುಣಮಟ್ಟದ ಬಗ್ಗೆ ತಿಳಿಯಬೇಕು. ಯಾವ ಗಿಡಮೂಲಿಕೆಗೆ ಎಷ್ಟು ಬೆಲೆಕೊಡಬೇಕು ಎಂಬುದು ಅದರಿಂದ ನಿರ್ಧಾರವಾಗುತ್ತದೆ.
ಕರ್ನಾಟಕಕ್ಕೆ ಮುಖ್ಯವಾಗಿ ಬೆಂಗಳೂರಿನ ತರಗುಪೇಟೆ, ಮಾಮೂಲುಪೇಟೆ, ಅವೆನ್ಯೂ ರಸ್ತೆಗಳ ಅಂಗಡಿಗಳಿಗೆ ಈ ಗ್ರಂಥಿಗಳು ತಮಿಳುನಾಡು, ಕೇರಳದಿಂದ ಬರುತ್ತವೆಯಾದ್ದರಿಂದ ಈ ಅಂಗಡಿಯವರೊಟ್ಟಿಗೆ ಅಪ್ಪನ ಸಂಬಂಧ ಗಾಢವಾಗುತ್ತ ಹೋಯಿತು. ಇದು ಪೂರೈಕೆ ಮತ್ತು ಗುಣಮಟ್ಟದ ದೃಷ್ಟಿಯಿಂದ ಅತೀ ಮುಖ್ಯಕೂಡ.
ಅಪ್ಪ ತಮ್ಮ ಭಾವನ ಪರವಾಗಿ ಬೆಂಗಳೂರಿಗೆ ವ್ಯಾಪಾರಕ್ಕೆ ಅಂದರೆ ಖರೀದಿಗೆ ಬರುವುದು ಹೀಗೆ ಪ್ರಾರಂಭವಾಯಿತು. ಹಳೆ ತರಗುಪೇಟೆಯ ವಾಸವಿ, ಮಾಮೂಲುಪೇಟೆಯ ಸುಗಂಧಿ, ಅವೆನ್ಯೂ ರಸ್ತೆಯ ಷರಾಫ್ ಚನ್ನಬಸಪ್ಪನವರ ಅಂಗಡಿಗಳಲ್ಲಿ ಖರೀದಿಮಾಡುತ್ತಿದ್ದರು. ಇಲ್ಲಿಗೆ ಬರಬರುತ್ತಾ ಇಲ್ಲಿನ ವ್ಯಾಪಾರ ವಹಿವಾಟು ನೋಡಿ ದಂಗಾದರು.
ತಮ್ಮ ಅಂಗಡಿಯಲ್ಲಿರುವ ಹತ್ತಾರು ಗಿಡಮೂಲಿಕೆಗಳೆಲ್ಲಿ ಇಲ್ಲಿರುವ ಸಾವಿರಾರು ಮೂಲಿಕೆಗಳೆಲ್ಲಿ! ನಿಧಾನವಾಗಿ ಅಂಗಡಿ ಪರಿಚಾರಕರ ಸಹಾಯದಿಂದ ಯಾವುದು ಏನು? ಯಾವ ಖಾಯಿಲೆಗೆ ಯಾವ ಬೇರು, ಕಾಯಿ ಉಪಯೋಗಿಸುತ್ತಾರೆ ಎಂದು ಕೇಳಿ ತಿಳಿಯುತ್ತಿದ್ದರು. ಕೆಲವೊಮ್ಮೆ ಅಂಗಡಿ ಮಾಲೀಕರು ಮುಖ್ಯವಾಗಿ ವೈಶ್ಯರು (ಅಂದ್ರ ಶೆಟ್ಟರು) ಕೆಂಡಾಮಂಡಲವಾಗುತ್ತಿದ್ದರು. ಕಾರಣ ಈ ಗುಪ್ತ ವಿದ್ಯೆಯನ್ನು ಬೇರಾರೂ ಕಲಿಯಬಾರದೆಂದು ! ಇದೇ ಕಾರಣಕ್ಕೆ ಆಯುರ್ವೇದ ನಮ್ಮ ದೇಶದಲ್ಲಿ ಜನಜನಿತವಾಗಲಿಲ್ಲ ಎಂದು ಅಪ್ಪ ಯಾವಾಗಲೂ ಹೇಳುತ್ತಿದ್ದರು.
ಹೀಗಿರುವಾಗ…. ಆಗಾಗ ಇವೇ ಅಂಗಡಿಗಳಿಗೆ ಬರುತ್ತಿದ್ದ ತಮಿಳು ಬ್ರಾಹ್ಮಣರೊಬ್ಬರು ಅಪ್ಪನನ್ನು, ಅವರ ಆಸಕ್ತಿಯನ್ನು ಗಮನಿಸಿದರು. ಅಪ್ಪನ ಸರಳ ಉಡುಗೆ, ಮಿತ ಮಾತು, ಆಸಕ್ತಿ ಅವರಿಗೆ ಹಿಡಿಸಿರಬೇಕು. ಅವರೇ ಒಂದು ದಿನ ತಮ್ಮ ಮುರುಕು ಕನ್ನಡದಲ್ಲಿ
“ಔಷಧಿ ಮಾಡೋದು ಹೇಳಿಕೊಡ್ತೀನಿ ಕಲಿತೀಯ? ” ಎಂದು ಕೇಳಿದರು.
ಅಪ್ಪ ಅದಕ್ಕೆ ” ಕಲೀತೀನಿ ಬುದ್ಧಿ ಆದರೆ ಹೇಗೆ ಎಲ್ಲಿ ಅಂತ ನೀವೇ ಹೇಳಿ ” ಅಂದರಂತೆ.
ಆ ಮಹಾನುಭಾವರು “ನನ್ನ ಜೊತೆ ಮದ್ರಾಸಿನಲ್ಲಿ ಒಂದು ವರ್ಷ ಇದ್ದು ಬಿಡು ಕಲಿಸುತ್ತೇನೆ ” ಎಂದರು. ಅಪ್ಪನಿಗೆ ಇದು ಅಸಾಧ್ಯವಾದುದರಿಂದ ಪರಿಸ್ಥಿತಿಯನ್ನೆಲ್ಲ ವಿವರಿಸಿದರು. ಇದರಿಂದ ಮತ್ತೂ ಉತ್ಸುಕರಾದ ಅವರು ” ಆಯಿತು ತಿಂಗಳ ಮೊದಲ ಶುಕ್ರವಾರ ನಾನು ಬೆಂಗಳೂರಿನಲ್ಲೇ ಇರುತ್ತೇನೆ ನನ್ನ ಮಗಳ ಮನೆಗೆ ಬಂದಾಗಲೆಲ್ಲ ಅರ್ಧ ದಿನ ಈ ಎಲ್ಲಾ ಅಂಗಡಿಗಳಿಗೆ ಬಂದು ಹೋಗುತ್ತೇನೆ ನಿನಗೆ ಸಾಧ್ಯವಾದಾಗಲೆಲ್ಲ ಬಂದು ಭೇಟಿ ಮಾಡು ಕಲಿಸುವೆ” ಅಂದರಂತೆ.
ಅಪ್ಪನಿಗೆ ಇಷ್ಟೇ ಸಾಕಿತ್ತು.
ಅವರು ತಮ್ಮ ಭಾವನಿಗೆ “ಅಣ್ಣಯ್ಯ ತಿಂಗಳಿನ ಮೊದಲ ಶುಕ್ರವಾರ ಮಾರುಕಟ್ಟೆಗೆ ಹೊಸ ಮಾಲು ಬರುತ್ತದೆಯಾದ್ದರಿಂದ ಆವಾಗಲೇ ಕೊಳ್ಳುವುದು ಸೂಕ್ತ” ಎಂದರಂತೆ. ಅದಕ್ಕೆ ಅವರ ಭಾವ ಸಮ್ಮತಿ ಸೂಚಿಸಿ “ಪರವಾಗಿಲ್ಲ ಕಣಯ್ಯಾ ಕೆಲಸ ಕಲಿತಾ ಇದ್ದೀಯ” ಎಂದಿದ್ದರಂತೆ !
ಹೀಗೆ ಶುರುವಾದ ಅಪ್ಪನ ಕಲಿಕೆ ಮೂರು ವರ್ಷಗಳ ಕಾಲ ಮುಂದುವರಿಯಿತು. ಕಡೆಗೊಮ್ಮೆ ಅವರ ಗುರುಗಳು ಮುಂದಿನ ಸಲ ಬರುವಾಗ ನನಗೆ ಗುರುದಕ್ಷಿಣೆ ತರಬೇಕು ಅಂದರು. ಅಪ್ಪನಿಗೆ ಏನು ತರಬೇಕೆಂದು ತಿಳಿಯದೇ ನಮ್ಮೂರಿನ ಶ್ರೀಧರಾಚಾರ್ ರಿಂದ ಎರಕಹೊಯ್ಯ್ದ ಪಂಚಲೋಹದ ಕೃಷ್ಣನ ವಿಗ್ರಹ, ರೇಷ್ಮೆ ಪಂಚೆ, ಟವಲ್ಲು ಮತ್ತು ಎಲೆ, ಅಡಿಕೆ, ಬಾಳೆಹಣ್ಣು ಮೇಲೆ 100 ರೂ ದಕ್ಷಿಣೆ ಎಲ್ಲವನ್ನೂ ಹೇಗೋ ಹೊಂದಿಸಿಕೊಂಡು ಬಂದರಂತೆ.
ಇದರಿಂದ ಖುಷಿಯಾದ ಅವರ ಗುರುಗಳು
” ನಿನ್ನ ಕಷ್ಟದಲ್ಲೂ ಇಷ್ಟನ್ನೆಲ್ಲ ಹೊಂದಿಸಿದ್ದೀಯಾ ಭೇಷ್, ಒಂದು ಲೋಟ ನೀರು ತಾ” ಎಂದರು.
ಆ ನೀರನ್ನು ಅಪ್ಪನಿಂದ ಮುಟ್ಟಿಸಿ “ಗಂಗೆ ಸಾಕ್ಷಿಯಾಗಿ, ಗುರು ಸಾಕ್ಷಿಯಾಗಿ, ತಂದೆ ತಾಯಿಯರ ಸಾಕ್ಷಿಯಾಗಿ, ಗ್ರಂಥಿ ಸಾಕ್ಷಿಯಾಗಿ ನಾನು ಕಲಿತ ವಿದ್ಯೆಯನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಆಯುರ್ವೇದವನ್ನು ಹಣಮಾಡುವ ದಾರಿಯನ್ನಾಗಿ ಮಾಡಿಕೊಳ್ಳುವುದಿಲ್ಲ” ಎಂದು ಪ್ರಮಾಣ ಮಾಡಿಸಿದರಂತೆ.
ಅಪ್ಪ ಆದ ಕಾರಣ ಬೆಳಿಗ್ಗೆ ಹೊತ್ತು ಗ್ರಂಥಿಗೆ ಅಂಗಡಿಯನ್ನು ಸೇವೆಗೆ, ಸಂಜೆಯ ಹೊತ್ತು ಜ್ಯೂಸು ಸೆಂಟರ್ ಅನ್ನು ವ್ಯಾಪಾರಕ್ಕೆ ಕಡೆತನಕ ನಡೆಸಿಕೊಂಡು ಬಂದರು.
ಅಪ್ಪ ಬದುಕಿದ್ದವರೆಗೆ ತಮ್ಮ ಗುರುಗಳನ್ನು ಧನ್ಯತೆಯಿಂದ ನೆನೆಸಿಕೊಳ್ಳುತ್ತಲೇ ಇದ್ದರು ಮತ್ತು ಯಾವತ್ತೂ ಆಯುರ್ವೇದವನ್ನು ದುಡ್ಡಿನ ದಾರಿ ಮಾಡಿಕೊಳ್ಳಲಿಲ್ಲ.
ಅಪ್ಪನ ಬಗ್ಗೆ ಆಪ್ತ ಬರಹ