ಥಟ್ಟನೆ ಹೊಳೆಯಿತು ಯುಗಾದಿ ಬಂತೆಂದು!

ಡಿ.ಶಬ್ರಿನಾ ಮಹಮದ್ ಅಲಿ

**

ಶತಶತಮಾನದ

ಪಾತ್ರೆ..ಪಗಡಾ…

ಫಳ ಫಳ ಗುಟ್ಟುತಾ

ಜಗುಲಿಯ ಮೇಲೆ

ಬೊರಲು ಬಿದ್ದಿರಲು,

ಅಪ್ಪಳ ಸಂಡಿಗೆಯನು

ಕಚ್ಚಿಕೊಂಡ ರಂಗಿನ

ಕಾಟನ್ ಸೀರೆಯು

ತಂತಿಯ ಮೇಲೆ

ಹಾರಾಡುತಿರಲು,

ಮಸಿಧೂಳು ಮೆತ್ತಿದ

ಮೋಟು ಗೋಡೆಗಳು

ಸುಣ್ಣ-ಬಣ್ಣವು ಕುಡಿದು

ಸಿಂಗಾರಗೊಂಡಿರಲು

ಥಟ್ಟನೆ ಹೊಳೆಯಿತು

ಯುಗಾದಿ ಬಂತೆಂದು!

ಬಾಲ್ಯದ ಯುಗಾದಿಯ

ನೆನೆವುದೆ ಚೆಂದ!

ಸ್ವಾಗತ ಕೋರುವ

ಮಾವಿನ ತೋರಣ

ಮೈಮನ ತಂಪಾಗಿಸುವ

ಅಭ್ಯಂಜನ ಸ್ನಾನ

ಸಿಹಿಕಹಿ ಮಿಶ್ರಿತ

ಬೇವೂ ಬೆಲ್ಲ!

ಘಮಘಮಗುಟ್ಟುವ

ಹೋಳಿಗೆ ತುಪ್ಪ!

ಆಹಾ! ನೆನೆದರೆ ಸಾಕು

ಈಗಲೂ…

ಬಾಯಲಿ ನೀರು!

ಜಾತಿಯ ಮರೆತು

ಸೌಹಾರ್ದದಿ ಬೆರೆತು

ಅಮಿನಾ ಒಳಹೋಗು

ನಾಗರಾಜ ಮಾಮ 

ಬಂದಾ…

ಜಯಕ್ಕ ಹೊರಗಡೆ

ಬರಬೇಡ…

ಮುಸ್ತಫಾಮಾಮಾ 

ಬಾಗಿಲಲಿಹನೆನುತಾ…

ಸುಳಿವನು ನೀಡಲು

ಕೇಕೆಯ ಹಾಕಿ

ನಕ್ಕು ನಲಿದಾ….

ಅತ್ತೆ ಸೊಸೆ ಮಾವರ

ಸಂತಸದ ಯುಗಾದಿಯ 

ನೀರೆರಚಾಟವನು

ಮರೆಯುವುದುಂಟೆ?

ನವ ವಸ್ತ್ರವ ತೊಟ್ಟ

ಗಂಡೈಕ್ಳೆಲ್ಲಾ …

ಊರಾಮುಂದಿನ

ಗುಡಿಕಟ್ಟೆಯ ಮೇಲೆ!

ಸರಿಯೋ..ತಪ್ಪೋ….

ಯಕ್ಕಾ ರಾಜ ರಾಣಿ

ಆಟವನಾಡದೆ

ಹಳ್ಳಿಯ ಯುಗಾದಿ

ಮುಗಿವುದೇ ಇಲ್ಲ!

ಸೋತವರಿಗೆ ಗೆಲ್ಲುವಾಸೆ

ಗೆದ್ದವರಿಗೆ ಮತ್ತಷ್ಟು

ಗಳಿಸುವ ಅತಿಯಾಸೆ!

ಆಸೆ-ಅತಿಯಾಸೆಯ

ಒದ್ದಾಟದಲಿ ಸಿಲುಕಿದವರ

ಸೂರ್ಯೋದಯವು ಅಲ್ಲೆ!

ಚಂದ್ರೋದಯವೂ ಅಲ್ಲೆ!

ಇತ್ತ ಹಬ್ಬದ ದಿನದ 

ಇಳಿ ಸಂಜೆಯಲಿ

ಅನುದಿನ ಬಿಸಿಲ 

ದಗೆಯಲಿ ನೊಂದು 

ಬೆಂದ ಹೆಣ್ಣೈಕ್ಳೆಲ್ಲಾ

ತಂಪು ತಂಪಿನ 

ಬೇವಿನ ಕೊಂಬೆಗೆ

ಹಗ್ಗವನೆಸೆದು 

ಉಯ್ಯಾಲೆ ಕಟ್ಟಿ

ನಾಲ್ಕೈದು ಜನ 

ಒಟ್ಟಿಗೆ ನಿಂತು

ಆಕಾಶವ ಮುಟ್ಟೇ 

ತೀರುವೆವೆಂಬ

ತುಂಬು ಭರವಸೆಯಲಿ

ತೂಗಾಡುತಿರಲು…

ಹೆಂಗಳೆಯರ ಮೊಗದಲಿ

ನಗುವ ತರಿಸಲು

ಬಾಡಿದ ಹೂಗಳಿಗೆ

ನವಚೈತನ್ಯ ತುಂಬಲು

ಬಂದಿರಬಹುದೇ 

ಈ ಯುಗಾದಿ!

ಬಾಲ್ಯದ ಯುಗಾದಿ

ನೆನೆವುದೆ ಚೆಂದ!

ನೆನೆದರೆ ಆಗುವುದು

ಮಹಾದಾನಂದ!

‍ಲೇಖಕರು Admin MM

April 11, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಇಳೆಯ ಬೆಂಕಿಯನು ತಣಿಸಿಬಿಡಬಹುದಾದರೆ..

ಇಳೆಯ ಬೆಂಕಿಯನು ತಣಿಸಿಬಿಡಬಹುದಾದರೆ..

ಬಿ ಎಸ್ ದಿನಮಣಿ ** ನೆತ್ತಿಗೇರಿದ ಕಡುಕೋಪಇನ್ನೇನು ಸ್ಫೋಟಿಸಿಅನಾಹುತವಾಗಬೇಕುಪ್ರೀತಿಸುವ ಜೀವದ ಸಣ್ಣ ಒಂದು ಮುತ್ತುಅದನ್ನು ಜರ್ರನೆ...

ತಪ್ಪಿ ಬರುವ ಕನಸಿಗೊ ಬಣ್ಣವೆ ಇಲ್ಲ..

ತಪ್ಪಿ ಬರುವ ಕನಸಿಗೊ ಬಣ್ಣವೆ ಇಲ್ಲ..

ಸರೋಜಿನಿ ಪಡಸಲಗಿ ** ಕನಸುಗಳಿಗೆ ಮುನಿಸೇ ಸುಳಿವಿಲ್ಲ  ಅಚ್ಚರಿ ಮನಸೂ ಅತ್ತ ಹೋಗ್ತಿಲ್ಲ ಏನಾಯ್ತು ಗಡಬಡ ಯಾಕೀ ಮೌನ  ಬುದ್ಧಿ ಪೂರಾ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This