ನಲ್ಲತಂಬಿ ಕಂಡ ‘ತ್ರಿಭಂಗ್’

ಕೆ ನಲ್ಲತಂಬಿ

ನೃತ್ಯದ ಭಂಗಿಗಳಲ್ಲಿ ಒಂದು. ಇದು ಒಡಿಸ್ಸಿ ನಾಟ್ಯದಲ್ಲಿ ಹೆಚ್ಚಾಗಿ ಬಳಸಲ್ಪಡುತ್ತದೆ. ಈ ಭಂಗಿಗಳು ಸುಮಾರು ನಾಲ್ಕು ಬಗೆಯಾಗಿರುತ್ತವೆ. ಇವು ಸುಮಾರು 2000 ವರ್ಷಗಳ ಹಿಂದಿನಿಂದ ಭಾರತೀಯ ನಾಟ್ಯಶಾಸ್ತ್ರದಲ್ಲಿ ಬೆಳೆದು ಬಂದಿದೆ. ಇವು ಸಾಮಾನ್ಯವಾಗಿ ಮೂರು ಬಗೆಯಾದವು.

ಅಭಂಗ್: ಒಂದು ಕಾಲನ್ನು ಸ್ವಲ್ಪವಾಗಿ ಬಳುಕಿಸಿ ನಿಲ್ಲುವ ಒಂದು ಭಂಗಿ.
ಸಮಭಂಗ್: ಬಳುಕದೆ ದೇಹವನ್ನು ನೇರವಾಗಿ ನಿಲ್ಲಿಸುವ ಭಂಗಿ.
ತ್ರಿಭಂಗ್: ದೇಹವನ್ನು ಮೂರುಕಡೆ ಬಳುಕಿಸಿ ಕಾಲು, ನಡು, ಭುಜಗಳಿಗೆ ಸಣ್ಣ ತಿರುವು ಕೊಟ್ಟು ನಿಲ್ಲುವುದು.
(ಅತಿ ಭಂಗ್ – ಎಂಬ ಮತ್ತೊಂದು ಬಗೆಯೂ ಇದೆ)

ಇವನ್ನು ಉಪಮೆಯಗಳಾಗಿಸಿ ಮೂರು ಹೆಣ್ಣು ಜೀವಗಳ ಬದುಕನ್ನು ಕಥೆಯಾಗಿ ಕಟ್ಟಿಕೊಡುವ ಪ್ರಯತ್ನವನ್ನು ರೇಣುಕಾ ಶಹಾನೆಯವರ ಕಥೆ ಮಾಡಿದೆ. ತಾಯಿಯಾಗಿ ನಯಂತಾರ ಆಪ್ಟೆ (ತನ್ವೀ ಆಜ್ಮಿ) ಮಗಳಾಗಿ ಅನುರಾಧ ಆಪ್ಟೆ (ಕಾಜೋಲ್ ) ಮೊಮ್ಮಗಳಾಗಿ ಮಾಶಾ ಮೆಹ್ತಾ (ಮಿಥಿಲ ಪಾಲ್ಕರ್) ನಟಿಸಿದ್ದಾರೆ.

ಅಮ್ಮ ಲೇಖಕಿ. ಮಗಳು ಸಿನಿಮಾ ನಟಿ. ಮೊಮ್ಮಗಳು ಒಂದು ಸಂಪ್ರದಾಯ ಕುಟುಂಬದ ಸೊಸೆ. ಹೀಗೆ ಮೂರು ತಲೆಮಾರಿನ ವಿಭಿನ್ನ ಜೀವನವನ್ನು ಕಣ್ಣ ಮುಂದೆ ತಂದು ನಿಲ್ಲಿಸುವ ಪ್ರಯತ್ನ. ಹೆಣ್ಣು ತನ್ನ ಸ್ವಂತಿಕೆಯೊಂದಿಗೆ ಬದುಕಲು ಪ್ರಯತ್ನ ಮಾಡುವಾಗ ಸಮಾಜದಲ್ಲಿ ಏನೆಲ್ಲಾ ಎದುರಿಸಬೇಕಾಗುತ್ತದೆ ಎಂಬುದೇ ಕಥೆಯ ತಿರುಳು. ಅವರವರ ಆಯ್ಕೆಗಳನ್ನು ಸುಂದರವಾಗಿ ಅಭಿವ್ಯಕ್ತಿಗೊಳಿಸುವುದರಿಂದಲೇ ಆ ಪಾತ್ರಗಳೂ ಸಿನಿಮಾನೂ ನಮಗೆ ಹಿಡಿಸುತ್ತದೆ.

ಕುಟುಂಬದ ಜವಾಬ್ದಾರಿಗಳನ್ನು ಹೊರದೆ ಲೇಖಕಿಯಾಗಿ ಮಾತ್ರವೇ ಉಳಿದು, ತನ್ನಿಚ್ಛೆಯಂತೆ ಬದುಕನ್ನು ಬದುಕಿ ಬಿಡಬೇಕು, ಅದು ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಚಿಂತೆಯೇ ಮಾಡದ ಅಮ್ಮ. ಅಮ್ಮನ ಬದುಕಿನ ಏರುಪೇರುಗಳನ್ನು ನೋಡಿಯೇ ಬದುಕಿ, ಸಿಡುಕಿಯಾಗಿ, ಯಾರಿಗೂ ತಗ್ಗಿ ಬಗ್ಗಿ ನಡೆಯದ ಮಗಳು- ಅವಳೂ ಸಹ ಅವಳ ಬದುಕು ತನ್ನ ಮಗಳ ಮೇಲೆ ಹೇಗೆ ಪ್ರಭಾವ ಬೀರಬಹುದೆಂದು ಆಲೋಚಿಸದೆ ಹೋಗುವುದು! ಅಜ್ಜಿ, ಅಮ್ಮನ ಗೊಂದಲದ ಬದುಕುಗಳನ್ನು ನೋಡಿ ತನ್ನ ಬದುಕನ್ನು ಹೊಂದಾಣಿಕೆ ಮಾಡಿಕೊಂಡು ಶಾಂತವಾಗಿ ಬದುಕಲು ಯತ್ನಿಸುವ ಮೊಮ್ಮಗಳು.

ಈ ನಡುವೆ ಅಮ್ಮನ ಬದುಕಿನಲ್ಲಿ ಬಂದುಹೋಗುವ ಮೂರು ವಿಭಿನ್ನ ಗಂಡು ಪಾತ್ರಗಳು. ಮಗಳ ಬದುಕಿನಲ್ಲಿ ಬಂದು ಹೋಗುವ ಗಂಡಸರು. ಇವರೆಲ್ಲಾ ಅವರವರ ಪಾತ್ರಗಳನ್ನು ಸೊಗಸಾಗಿ ಮಾಡಿದ್ದಾರೆ. ವಿಶೇಷವಾಗಿ ಅಮ್ಮನ ಆತ್ಮಕಥೆ ಬರೆಯಲು ನೆರವಾಗುವ ಲೇಖಕನ ಪಾತ್ರದಲ್ಲಿ ಬರುವ ಕುನಾಲ್ ರಾಯ್ ಕಪೂರ್ ಮರೆಯಲಾಗದ ಪಾತ್ರ. ಕಾಜೋಲನ್ನು ತುಂಟ ಹುಡುಗಿಯಾಗಿ, ಫ್ಯಾಮಿಲಿ ಗರ್ಲ್ ಆಗಿ ನೋಡಿ ಪಳಗಿದ ನಮಗೆ ಅವಳು ಇಂತಹ ಸಿಡುಕು ಪಾತ್ರಕ್ಕೂ ಹೊಂದಿಕೊಳ್ಳುವುದು, ಅವಳೊಬ್ಬ ಶ್ರೇಷ್ಠ ನಟಿ ಎಂಬುದನ್ನು ನಿರೂಪಿಸುತ್ತದೆ.

ಸಿನಿಮಾದ ಸ್ಕ್ರೀನ್ ಪ್ಲೇ, ಟೈಟ್ ಎಡಿಟಿಂಗ್ ಸಿನಿಮಾವನ್ನು ಮತ್ತಷ್ಟು ಸುಂದರಗೊಳಿಸುತ್ತದೆ. ಅನುರಾಧಾಳ ತಮ್ಮನಾಗಿ, ಪ್ರಕೃತಿ ಶಕ್ತಿಗಳ ಉಪಾಸಕನಾಗಿ, ಇಸ್ಕಾನ್ ಭಕ್ತನಾಗಿ ಬರುವ ರಬೀಂದೋ (ವೈಭವ್ ತತ್ವಡಿ) ಪಾತ್ರ ಸ್ವಲ್ಪ ಸಮಯವೇ ಬಂದರೂ ಮನಸ್ಸಿನಲ್ಲಿ ಉಳಿದುಬಿಡುತ್ತದೆ.

ಏನೇ ನಾವು ‘ಡೋಂಟ್ಕೇರ್’ ಎಂದು ನಮ್ಮ ಬದುಕನ್ನು ಹೇಗೆ ಬೇಕಾದರೂ ಬದುಕುತ್ತೇವೆ ಎಂದು ಹೇಳಿಕೊಂಡರೂ ಅದು ನಮ್ಮ ಸುತ್ತಲಿರುವವರ ಮೇಲೆ ಏನು ಪರಿಣಾಮ ಬೀರಬಹುದು – ಅದರ ಬಗ್ಗೆ ನಮ್ಮ ನಿಲುವೇನು? ಅಷ್ಟೇ ಅಲ್ಲ ನಮ್ಮ ಬದುಕು ಕೇವಲ ನಮ್ಮ ಬದುಕಾಗಿ ಮಾತ್ರವೇ ಉಳಿದುಬಿಡುತ್ತದೆಯೇ? ಎಂಬ ಪ್ರಶ್ನೆಗಳು ಕಾಡುತ್ತವೆ.

ಸಿನಿಮಾ ನೋಡಿ, ನಿಮ್ಮ ಮನಸ್ಸಲ್ಲೂ ಅನೇಕ ಪ್ರಶ್ನೆಗಳು ಏಳಬಹುದು.

‍ಲೇಖಕರು Avadhi

January 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Poornima

    ತ್ರಿಭಂಗ ಒಳ್ಳೆಯ ಸಿನಿಮಾ ನಿಜ.
    ಮಾಶಾಳ ಅಪ್ಪ ಡಿಮಿತ್ರಿ ಮಾಶಾಳ ಅಮ್ಮನನ್ನು ಹೊಡೆಯುವಾಗ ಭಗವಾ ಬಣ್ಣದ – ಓಂ, ಶ್ರೀ ಬರಹಗಳನ್ನು ಹೊತ್ತ ಕುರ್ತಾ ಹಾಕಿಲ್ಲದೇ ಇದ್ದಿದ್ದರೆ ಇಡೀ ಸಿನಿಮಾ ಸ್ತ್ರೀಪರ ದನಿಯನ್ನು ಮಾತ್ರ ಧ್ವನಿಸುತ್ತಿತ್ತು ಹಾಗೂ ಯಾವುದೇ ಪಂಥ-ಧರ್ಮ-ಇಸಂಗಳ ಮೇರೆ ಮೀರಿ ನಿಲ್ಲುತ್ತಿತ್ತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: