ತೇಜೋ ತುಂಗಭದ್ರಾ: ‘ಇದನ್ನು ಈ ಚಾಳೀಸು ಹಾಕಿಯೇ ಓದಬೇಕು’ ಅಂತ ನಿರ್ಧರಿಸಿ ಓದಿದಂತೆ ಕಾಣುತ್ತಿದೆ..

ಖ್ಯಾತ ಲೇಖಕ ವಸುಧೇಂದ್ರ ಅವರ ಇತ್ತೀಚಿನ ಕೃತಿ ‘ತೇಜೋ ತುಂಗಭದ್ರಾ’ 

ಈ ಕೃತಿಯನ್ನು ವಸುಧೇಂದ್ರ ವಿಭಿನ್ನವಾಗಿ ಓದುಗರ ಬಳಿ ಕೊಂಡೊಯ್ದಿದ್ದರು. ಅದು ಇಲ್ಲಿದೆ.

ಈ ಕೃತಿಯ ಓದಿನ ಸಂಭ್ರಮವನ್ನು ಅವಧಿ ಈಗಾಗಲೇ ಹಂಚಿಕೊಂಡಿತ್ತು. ಅದು ಇಲ್ಲಿದೆ.

ವಿಮರ್ಶಕ ಎಚ್ ಎಸ್ ರೇಣುಕಾರಾಧ್ಯ ಅವರು ತೇಜೋ ತುಂಗಭದ್ರಾದ ಬಗ್ಗೆ ತಮ್ಮ ವಿವರ ಗ್ರಹಿಕೆಯನ್ನು ಕಟ್ಟಿಕೊಟ್ಟರು. ಅದು ಇಲ್ಲಿದೆ .

ಖ್ಯಾತ ಕವಯತ್ರಿ ಲಲಿತಾ ಸಿದ್ಧಬಸವಯ್ಯ ಅವರು ರೇಣುಕಾರಾಧ್ಯರ ಬರಹಕ್ಕೆ ಪ್ರತಿಕ್ರಿಯಿಸಿದ್ದು, ರೇಣುಕಾರಾಧ್ಯರೂ ಸಹಾ ತಮ್ಮ ಅನಿಸಿಕೆಯನ್ನು ಮಂಡಿಸಿದ್ದಾರೆ. ಅದು ಇಲ್ಲಿದೆ 

ಈಗ ಸಂತೋಷ್ ಕುಮಾರ್ ಎಲ್ ಎಂ ಅವರು ಎಚ್ ಎಸ್ ರೇಣುಕಾರಾಧ್ಯ ಅವರ ಅನಿಸಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಓದಿ-

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆಗೂ ಸ್ವಾಗತ.

ನಿಮ್ಮ ನೋಟ, ವಿಮರ್ಶೆಯನ್ನು [email protected] ಗೆ ಕಳಿಸಿಕೊಡಿ. 

ಸಂತೋಷ್ ಕುಮಾರ್ ಎಲ್.ಎಂ.

ಹಿರಿಯರಾದ ಎಚ್ ಎಸ್ ರೇಣುಕಾರಾಧ್ಯರಿಗೆ ವಂದನೆಗಳು.  

ಮೇಲ್ನೋಟಕ್ಕೆ ನೀವು ಕೃತಿ ಓದುವ ಮುಂಚೆಯೇ “ಇದನ್ನು ಈ ಚಾಳೀಸು ಹಾಕಿಯೇ ಓದಬೇಕು” ಅಂತ ನಿರ್ಧರಿಸಿ ಓದಿದಂತೆ ಕಾಣುತ್ತಿದೆ.

ಆ ಕೃತಿಯನ್ನು ಮೆಚ್ಚಿರುವ ಓದುಗರನ್ನು,ವಿಮರ್ಶಕರನ್ನು “ಕನ್ನಡ ಪುಸ್ತಕ ವಿಮರ್ಶೆ ನಿಮ್ಮಿಂದಲೇ ಅಧೋಗತಿ ತಲುಪಿದೆ” ಎಂದು ನಿಂದಿಸಿ ತಪ್ಪು ಮಾಡಿದ್ದೀರಿ.

ನಾನು ಆ ಕೃತಿಯನ್ನು ಓದಿದ ಮೇಲೆ ನಿಮ್ಮ ಅಪವಾದಗಳೆಲ್ಲ ಜೊಳ್ಳಾಗಿಯೇ ಕಂಡ ಕಾರಣ ನನ್ನ ದೃಷ್ಟಿಗೆ ದಕ್ಕಿದ್ದರಲ್ಲಿ ನಿಮ್ಮ ಪ್ರಶ್ನೆಗಳಿಗೆ ಉತ್ತರ ಕೊಡುವ ಪ್ರಯತ್ನ ಮಾಡಿದ್ದೇನೆ.
——————————————————————————

ತೇಜೋ ತುಂಗಭದ್ರಾ ಕಾದಂಬರಿಯ ಬಗ್ಗೆ ನಿಮ್ಮ ಅಭಿಪ್ರಾಯಗಳ ಬಗ್ಗೆ ನನ್ನ ಅನಿಸಿಕೆ.

ತಾವೇ ಹೇಳಿದಂತೆ “ಇಡೀ ಕಾದಂಬರಿಯ ಮಿತಿಯ ಬಗ್ಗೆ ಅಷ್ಟೂ ಜನ ಓದುಗರಲ್ಲಿ (ಆ ಕಾದಂಬರಿಯ ಆರಂಭದ ನಾಲ್ಕೂ ಪುಟದ ಹದಿನೇಳು ಜನರ ಪ್ರತಿಕ್ರಿಯೆಯಲ್ಲಿ) ಒಬ್ಬರೂ ಕೂಡ ಹೇಳಿಲ್ಲದಿರುವುದನ್ನು” ತಾವು ಗಮನಿಸಿದ್ದೀರ. ಅದಕ್ಕಾಗಿಯೇ “ನಾನೂ ಯಾಕೆ ಇದಕ್ಕೆ ವ್ಯತಿರಿಕ್ತವಾಗಿಯೇ ಪ್ರತಿಕ್ರಿಯೆ ಕೊಡಬಾರದು” ಅಂತಲೇ ನಿರ್ಧಾರಕ್ಕೆ ಬಂದಿರಿ ಎಂದು ನೀವು ಹೇಳಿದ ರೀತಿಯಲ್ಲೇ ಕಂಡು ಬರುತ್ತದೆ.

ಇರಲಿ ವಿಷಯಕ್ಕೆ ಬರೋಣ. ನೀವು ಈ ಕಾದಂಬರಿಯನ್ನು ನಿಜವಾಗಿ ಪೂರ್ತಿ ಓದಿದ್ದೇ ಆದರೆ ಇವುಗಳನ್ನು ಗಮನಿಸಿ.

೧. ಲೆಂಕಸೇವೆ: ಕ್ಷತ್ರಿಯನೊಬ್ಬ ರಾಜನ ಒಳಿತಿಗಾಗಿ ನಿರ್ದಿಷ್ಟ ಸಂದರ್ಭಗಳಲ್ಲಿ ತನ್ನನ್ನು ತಾನೇ ಬಲಿಕೊಟ್ಟುಕೊಳ್ಳುವ ಪದ್ಧತಿ. ಈ ಪದ್ಧತಿಯ ಬಗ್ಗೆ, ಅದರ ಒಳಿತು-ಕೆಡುಕನ್ನು ನೋಡದೇ ಮೂಢನಂಬಿಕೆಯಂತೆ ಪಾಲಿಸುತ್ತಿರುವ ವಿಜಯನಗರ ಸಾಮ್ರಾಜ್ಯದ ಅರಸ ಕೃಷ್ಣದೇವರಾಯನ ಬಗ್ಗೆ ಕಾದಂಬರಿ ಹೇಳುತ್ತದೆ ತಾನೇ? ಅದು ನಡೆದದ್ದು ಭಾರತದಲ್ಲಿ ತಾನೇ?  ಹಿಂದೂ ಜನರೊಳಗೆ ತಾನೇ? ಬೇರೆಲ್ಲ ಅಂಶಗಳಂತೆಯೇ ಇದನ್ನೂ ಪರಿಗಣಿಸುವಿರಾದರೆ ಇದೂ ಹಿಂದೂ ವಿರೋಧಿ ತಾನೇ? ಏಕೆ ಅದರ ಬಗ್ಗೆ ನಿಮ್ಮ ತಕರಾರಿಲ್ಲ?

೨. ಸತಿ: ತೇಂಬಕ್ಕ ತನ್ನ ಪತಿ ಮಾಪಳನಾಯಕನ ಸಾವಿನ ನಂತರ ಆತನೊಡನೆ ತಾನೂ ತೋಳು ಕೈ (ಸತೀ ಸಹಗಮನ) ಪದ್ಧತಿಯ ಪ್ರಕಾರ ಸಮಾಧಿಯಾಗುತ್ತಾಳೆ. ಆ ಸನ್ನಿವೇಶವಂತೂ ಕಾದಂಬರಿ ಓದುವಾಗಲೇ ಕಣ್ಣು ಒದ್ದೆಯಾಗುವಷ್ಟು ದುಃಖ ತರಿಸುತ್ತದೆ. ಅಷ್ಟೇ ಅಲ್ಲ. ಆ ಕ್ಷಣಕ್ಕೆ ನಾವೂ ಅದೇ ಕಾಲದಲ್ಲಿ ಬದುಕಿದ್ದೇವೆ ಅನಿಸಿದಂತಾಗಿ ಈ ಪದ್ಧತಿ ಮುಗಿದರೆ ಸಾಕಪ್ಪ ಅನ್ನಿಸುವಷ್ಟು ಆಕ್ರೋಷ ಮೂಡುತ್ತದೆ. ಆ ಅನಿಷ್ಟ ಪದ್ಧತಿ ಇದ್ದದ್ದೂ ವಿಜಯನಗರ ಸಾಮ್ರಾಜ್ಯದಲ್ಲಿ ತಾನೇ? ಇಲ್ಲೂ ಅಷ್ಟೇ. ಲೇಖಕರು ವಿಜಯನಗರವನ್ನು ಹೊಗಳುತ್ತಿಲ್ಲ. ಅದೇಕೆ ನಿಮ್ಮ ಕಣ್ಣಿಗೆ ಬಿದ್ದಿಲ್ಲ?

೩. ಕೃಷ್ಣದೇವರಾಯನ ವೈಷ್ಣವೀಕರಣದ ಬಗ್ಗೆ ಲೇಖಕರು ನಿರಾಸಕ್ತಿ ವಹಿಸುತ್ತಾರೆ ಎಂದಿದ್ದೀರಿ. ಕಥೆಯಲ್ಲಿ ತಾನು ಪಟ್ಟಕ್ಕೆ ಬಂದ ನಂತರ ಕೃಷ್ಣದೇವರಾಯನು ಮಾಡುವ ಕೆಲಸ ಇದೇ ತಾನೇ?  ತೆಂಬಕಪುರದ ಹೆಸರು ಶೈವ ರೀತಿಯ ಹೆಸರು (ತ್ರಯಂಬಕೇಶ್ವರನ ಹೆಸರಿನದ್ದು) ಎಂದು ಅದನ್ನು ವೈಷ್ಣವ ಹೆಸರಾಗಿ ಬದಲಾಯಿಸಬೇಕೆಂದು ಆ ಊರನ್ನು “ವೈಷ್ಣವಪುರ” ಅಂತ ಬದಲಾಯಿಸಲು ಬರುತ್ತಾನೆ. ದೊರೆಯೆದುರು ಮಾತನಾಡದೇ ಊರಿನ ಎಲ್ಲರೂ ಬಾಯಿ ಮುಚ್ಚಿಕೊಂಡು ಸುಮ್ಮನಿರುವಾಗ ಅಡವಿಸ್ವಾಮಿಯು ಕೃಷ್ಣದೇವರಾಯನಿಗೆ ತನ್ನ ಅಸಮ್ಮತಿ ಸೂಚಿಸಿ, “ನೀವು ಬದಲಾಯಿಸಿಕೊಳ್ಳಿ. ಆದರೆ ಶಿವಭಕ್ತನಾದ ತಾನು ಆ ಹೆಸರಿನಿಂದ ಈ ಊರನ್ನು ಕರೆಯಲಾರೆ” ಎಂದು ಸಮಸ್ತ ಜನರೆದುರಿಗೆ ನಾಲಿಗೆ ಕತ್ತರಿಸಿಕೊಳ್ಳುತ್ತಾನೆ ತಾನೇ? ಈ ಘಟನೆಯಲ್ಲಿ ನಿಮಗೆ  ಕೃಷ್ಣದೇವರಾಯನ ವೈಷ್ಣವೀಕರಣ ಕಾಣದೇ ಇನ್ನೇನು ಕಾಣಿಸಿತು? ಅಥವಾ ನಿಮಗೆ ಬೇಕಿದ್ದಷ್ಟು ಕಾಣಿಸಲಿಲ್ಲವೇ? ಸೂಕ್ಷ್ಮ ಓದುಗನಿಗೆ ಇದು ಅರ್ಥವಾಗುತ್ತದೆ.

೪. ಇವೆರಡೂ ಹೇಳಿಕೆಗಳನ್ನು ನೀವೇ ಬರೆದದ್ದು:
“ಪೋರ್ಚುಗಲ್ ನ ಲಿಸ್ಬನ್ ನಲ್ಲಿ ವಾಸವಾಗಿದ್ದ ಕ್ಯಾಥಲಿಕ್ ಗೇಬ್ರಿಯಲ್ ಮತ್ತು ಯಹೂದಿ ಬೆಲ್ಲಾ ಹಾಗೂ ತೆಂಬಕಪುರದಲ್ಲಿ ಬಂದು ವಾಸ ಮಾಡುತ್ತಿದ್ದ ವೈಷ್ಣವ ಕೇಶವ ಮತ್ತು ತೆಂಬಕಪುರದ ನಿವಾಸಿ ಶೈವ ಹಂಪವ್ವ ಈ ಎರಡೂ ಜೋಡಿಗಳ ಪ್ರೇಮವನ್ನು ಪೊರ್ಚುಗೀಸ್, ಆದಿಲ್ ಶಾಹಿ ಅರಸರು ಮತ್ತು ವಿಜಯನಗರ ಅರಸರುಗಳ ಆಳ್ವಿಕೆಯ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಆಡಳಿತ ಅಂದರೆ ಇಡೀ ಪ್ರಭುತ್ವ ಹೇಗೆ ಸಾಮಾನ್ಯರ ಬದುಕನ್ನು ಸರ್ವನಾಶ ಮಾಡುತ್ತವೆ ಎಂಬುದನ್ನು ವಸುದೇಂದ್ರರ ಬರಹದ ಕೌಶಲ ಓದುಗನ ಮನವನ್ನು ಕಲಕಿ, ಮುಟ್ಟಿಸುತ್ತದೆ”

ಈ ಎರಡೂ ಜೋಡಿಗಳ ಪ್ರೇಮವನ್ನು ಪೊರ್ಚುಗೀಸ್, ಆದಿಲ್ ಶಾಹಿ ಅರಸರು ಮತ್ತು ವಿಜಯನಗರ ಅರಸರುಗಳ ಆಳ್ವಿಕೆಯ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಆಡಳಿತ ಅಂದರೆ ಇಡೀ ಪ್ರಭುತ್ವ ಹೇಗೆ ಸಾಮಾನ್ಯರ ಬದುಕನ್ನು ಸರ್ವನಾಶ ಮಾಡುತ್ತವೆ ಎಂದು ನೀವೇ ಹೇಳಿದ ಮೇಲೆ ಮತ್ತೆ ನೀವೇ ” ವಿಜಯನಗರ ಬಿಟ್ಟರೆ ಉಳಿದ ಪ್ರದೇಶ ಅಷ್ಟು ಸುರಕ್ಷಿತವಲ್ಲ ಎಂಬಂತೆ ಲೇಖಕರು ಹೇಳುತ್ತಾರೆ ” ಅನ್ನುತ್ತೀರ.

ನಿಮ್ಮ ಎರಡೂ ಹೇಳಿಕೆಗಳು ಪೂರ್ತಿ ತದ್ವಿರುದ್ಧವಾದವು!

೫. ಕಥೆಯಲ್ಲಿ ಅಗ್ವೇದ ಹೇಳಿದ್ದನ್ನು ನೀವು ಮೊದಲು ಪರಿಗಣಿಸಿದ್ದೀರಿ. ಆಕೆ ವಿಜಯನಗರ ಸಾಮ್ರಾಜ್ಯದಲ್ಲಿ ಒಬ್ಬ ವೇಶ್ಯೆ ಕೂಡ ಘನತೆಯಿಂದ ಜೀವನ ಸಾಗಿಸಬಹುದೆನ್ನುವುದು. ಅದಕ್ಕಾಗಿಯೇ ತಾನು ಹೇಗಾದರೂ ಮಾಡಿ ಅತ್ತ ಹೊರಟಿದ್ದೇನೆನ್ನುವುದು. ಆ ಪಾತ್ರ ಹೇಳುವುದನ್ನಷ್ಟೇ ತಾವು ಗಮನಿಸಿದಿರೋ? ಅಥವಾ ಮುಂದೆ ಕಥೆಯಲ್ಲಿ ಬರುವ ಘಟನೆಗಳನ್ನೂ ಗಮನಿಸಿದಿರೋ? ಅದಿರಲಿ. ಕೃಷ್ಣದೇವರಾಯ ಗುಣಸುಂದರಿಯ ಜೊತೆ ಗೌರವದಿಂದ ನಡೆದುಕೊಳ್ಳುವ ರೀತಿಯನ್ನು ಓದಿದಿರಿ ತಾನೇ?

೬. ಕಥೆಯಲ್ಲಿ ನೌಕಾಯಾನದ ಸಮಯದಲ್ಲಿ ಜಾಕೋಮ್ ಭಾರತ ದೇಶದ ಅನಿಷ್ಟ ಜಾತಿಪದ್ಧತಿಯ ಬಗ್ಗೆ ಗ್ಯಾಬ್ರಿಯಲ್’ಗೆ ಹೇಳುತ್ತಾನೆ. ಅಲ್ಲೂ ಸಹ ವಿದೇಶಿಗನಾದ ಗ್ಯಾಬ್ರಿಯೆಲ್’ಗೆ  ಒಂದೇ ಧರ್ಮದೊಳಗೂ ಒಬ್ಬರನ್ನೊಬ್ಬರು ದ್ವೇಷಿಸುತ್ತಾರೆಯೇ ಎಂದು ಕುತೂಹಲದಿಂದಲೇ ಕೇಳುತ್ತಾನೆಯಲ್ಲವೇ? ನಿಮ್ಮ ಪ್ರಕಾರ ಲೇಖಕರ ಉದ್ದೇಶ ಬೇರೆಯದಾಗಿದ್ದರೆ ಈ ಭಾಗವನ್ನೇಕೆ ಸೇರಿಸುತ್ತಿದ್ದರು?

೬. ನಿಮ್ಮ ಪ್ರಶ್ನೆ ಹೀಗಿದೆ: ಈ ಕಾದಂಬರಿಯಲ್ಲಿ ಬರುವ ಮಾಪಳ ಮತ್ತು ತೆಂಬಕ್ಕಳ ಮಗಳಾದ ಈಶ್ವರಿ ಎನ್ನುವ ಎಂಟು/ ಹತ್ತು ವರ್ಷದ ಮಗುವಿಗೆ ಹಿಂಸೆಯನ್ನು ತೋರಿಸುವ (ಎರಡು- ಮೂರು ದೃಶ್ಯಗಳಿವೆ) ಮತ್ತು ಕಡೆಗೆ ಹಿಂಸೆ ಮತ್ತು ಕ್ರೌರ್ಯವನ್ನು ಆ ಮಗು ಒಂದು ರೀತಿಯಲ್ಲಿ ಎಂಜಾಯ್ ಮಾಡುವ ದೃಶ್ಯಗಳನ್ನು ಲೇಖಕರು ಕಟ್ಟಿಕೊಡುತ್ತಾರೆ. (ತನ್ನ ತಂದೆಯನ್ನು ಕೊಂದಿದ್ದ, ಈಗ ತಂದೆಯ ಸ್ಥಾನದಲ್ಲಿದ್ದ ಕೇಶವ ಲೆಂಕನಾಗಿ ಆತ್ಮಾರ್ಪಣೆಗೊಂಡ ಸಂದರ್ಭದಲ್ಲಿ ಎಂಟು ವರ್ಷದ ಮಗು ಈಶ್ವರಿ “ಅತ್ಯಂತ ಉತ್ಸಾಹದಿಂದ ಚಪ್ಪಾಳೆ ತಟ್ಟಿ ನಮ್ಮಪ್ಪನ್ನು ಕೊಂದಿದ್ದು ಈತನೇ” ಎಂದು ಕೂಗಿದಳು) ಇದು ನಿಜಕ್ಕೂ ಆಘಾತಕರವಾದದ್ದು. ಒಬ್ಬ ಸೃಜನಶೀಲ ಲೇಖಕ ಹಿಂಸೆ ಮತ್ತು ಕ್ರೌರ್ಯವನ್ನು ಆ ಎಳೆ ಮನಸ್ಸುಗಳಿಂದ ದೂರವಿರಿಸಬೇಕಲ್ಲವೆ? ಆದರೆ ಅದು ಇಲ್ಲಿ ಆಗಿಲ್ಲ.

ಈಶ್ವರಿ ಇಲ್ಲಿ ಪುಟ್ಟ ಮಗು ನಿಜ. ಆದರೆ ಆಕೆ ಚಿಕ್ಕಂದಿನಿಂದ ಕಂಡಿದ್ದಾದರೂ ಏನು? ನೆನಪಿಸಿಕೊಳ್ಳಿ? ಅಪ್ಪ ಅಮ್ಮನ ಮಧ್ಯೆ ಮಾತುಕಥೆಯೇ ಇಲ್ಲ. ತಾನು ಹುಟ್ಟಿದ್ದರೂ ಇನ್ನೊಂದು ಗಂಡು ಮಗು ಬೇಕೆನ್ನುವ ಅಮ್ಮ ತೆಂಬಕ್ಕ. ಅಪ್ಪನಿಗೆ ಇನ್ನೊಂದು ಮದುವೆ ಮಾಡಿಸಲು ತಯಾರಾದ ಅಮ್ಮ. ಇದರ ಮಧ್ಯೆ ಹೆಣ್ಣೊಬ್ಬಳಿಗಾಗಿ ನಡೆಯುವ ಕುಸ್ತಿ ಕಾಳಗದಲ್ಲಿ ಅಪ್ಪನನ್ನು ಯಾರೋ ಒಬ್ಬ ಕುಸ್ತಿಪಟು (ಕೇಶವ) ಕಣ್ಣೆದುರೇ ಕೊಲ್ಲುವುದು. ಕಣ್ಣೆದುರೇ ಅಪ್ಪನನ್ನು ಕಳೆದುಕೊಂಡ ಮಗು ಆಘಾತದಿಂದ ಹೊರಬರುವ ಮೊದಲೇ ಮತ್ತೆ ತನ್ನ ಕಣ್ಣೆದುರೇ ಅಮ್ಮ ತೆಂಬಕ್ಕ ಗಂಡನೊಡನೆ ಸತೀ ಪದ್ಧತಿಯ ಮೂಲಕ ಸಮಾಧಿಯಾಗುವುದು. ಎರಡೇ ದಿನಗಳಲ್ಲಿ ಅಪ್ಪ ಅಮ್ಮನನ್ನು ಕಳೆದುಕೊಂಡ ಪುಟಾಣಿ ಈಶ್ವರಿ ತನ್ನ ಅಪ್ಪನನ್ನು ಕೊಂದ ಕೇಶವನ ಮನೆಯಲ್ಲೇ ಬೆಳೆಯುತ್ತ ಆವನನ್ನೇ ಅಪ್ಪನೆಂದು ಕರೆಯುವ ಪ್ರಮೇಯ ಒದಗಿ ಬರುವುದು. ಅಷ್ಟೇ ಅಲ್ಲ. ಆತ ಅಪರಾಧಿ ಪ್ರಜ್ಞೆಯಲ್ಲಿ ಇವಳಿಗೆ ಯಾವುದೇ ಪ್ರೀತಿ ತೋರಿಸದಿರುವುದು. ವಿಜಯನಗರಕ್ಕೆ ಹೋಗುವಾಗ ತಾನೂ ಜೊತೆ ಬರುತ್ತೀನೆಂದ ಈಶ್ವರಿಯನ್ನು ಕೇಶವ ಬೇಡವೆನ್ನುವುದು. ಆದರೂ ಆಕೆ ಹಠ ಮಾಡಿ ಹೋಗುವುದು. ನಂತರ ಗೂಢಾಚಾರನೊಬ್ಬ ವಿಜಯನಗರ ಸಾಮ್ರಾಜ್ಯದ ರಹಸ್ಯಗಳನ್ನು ಶತ್ರುಗಳಿಗೆ ರವಾನಿಸುತ್ತಿದ್ದಾನೆ ಅಂದ ತಕ್ಷಣ ಆತನನ್ನು ಇವಳ ಕಣ್ಣೆದುರೇ ರಾಜಬೀದಿಯಲ್ಲಿ ಮಾರುಕಟ್ಟೆಯ ಮಧ್ಯವೇ ಆನೆಯೊಂದರ ಕಾಲಿನಲ್ಲಿ ತುಳಿಸಿ ಕೊಲ್ಲಲಾಗುತ್ತದೆ. ನಂತರ ಆಕೆ ಭಯಪಟ್ಟಾಗ ಕೇಶವ ಆಕೆಗೆ ಹೊಡೆಯುತ್ತಾನೆ ತಾನೇ? ಇವೆಲ್ಲ ಘಟನೆಯಿಂದಲೂ ಜರ್ಜರಿತಳಾದ ಈಶ್ವರಿಗೆ ತೀವ್ರ ಜ್ವರ ಬರುತ್ತದೆ. ಆಗಲೂ ಆ ಮಗುವಿನ ಬಗ್ಗೆ ಆತನಿಗೆ ಪ್ರೀತಿಯಿಲ್ಲ. ಆಗಲೇ ಆ ಮಗುವಿನ ಮನಸ್ಸಿನಲ್ಲಿ ಈ ತನ್ನ ಪರಿಸ್ಥಿತಿಗೆ ಕಾರಣ “ಕೇಶವನೇ” ಅಂತ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯೂರುತ್ತದೆ. ಇದೇ ಕಾರಣಕ್ಕೆ  ಲೆಂಕಸೇವೆಯಲ್ಲಿ ಆತನ ರುಂಡ ಬೇರೆಯಾದಾಗ ಈ ಮಗುವಿಗೆ ಆ ಕ್ಷಣಕ್ಕೆ ಸಮಾಧಾನ ತರುತ್ತದೆ. ಇದರಲ್ಲಿ ತನ್ನ ಅಪ್ಪನನ್ನು ಕೊಂದಾತನ ಬಗ್ಗೆ ದ್ವೇಷವಿತ್ತೇ ಹೊರತು ನೀವಂದುಕೊಂಡ ಹಾಗೆ ಹಿಂಸೆಯನ್ನು ಎಂಜಾಯ್ ಮಾಡುವ ಸ್ಟುಪಿಡಿಟಿ ಇರಲಿಲ್ಲ!

೭. ನಿಮ್ಮ ಹೇಳಿಕೆ:  ಅಮ್ಮದಕಣ್ಣ ಅವಳಿಂದ ದೂರವಾಗಿಯೇ ಉಳಿಯುತ್ತಾನೆ. ಕಡೆಗೆ ತನ್ನನ್ನು ಬಿಟ್ಟು ಹೋಗಬೇಡ ಎಂದು ಹಂಪವ್ವ ಬೇಡಿಕೊಂಡರೂ “ಆ ಸಂಬಂಧಕ್ಕೆ ಅಮ್ಮದಕಣ್ಣ ಸಿದ್ಧನಿರಲಿಲ್ಲ” ಎಂದೇ ಲೇಖಕರು ಹೇಳುತ್ತಾರೆ. ಕಡೆಗೂ ಈ ಎರಡೂ ಜೀವಗಳು ಒಂದಾದವೊ ಇಲ್ಲವೊ ಎಂಬುದನ್ನು ಹೇಳುವುದೇ ಇಲ್ಲ. ಅಂದರೆ ಲೇಖಕರಿಗೆ ಈ ಎರಡು ಭಿನ್ನ ಧರ್ಮಿಯರನ್ನು ಒಂದು ಮಾಡಬೇಕೆನ್ನುವ ಧೋರಣೆ ಯಾಕೊ ಮನಸ್ಸಿಗೆ ಒಪ್ಪಿತವಾಗಿಲ್ಲ. ಆಳದಲ್ಲಿ ಈ ಧರ್ಮಕೆಡಿಸಲು, (ಹಂಪಮ್ಮ ಒಪ್ಪಿದರೂ ) ಲೇಖಕರ ಮನಸ್ಸು ಒಪ್ಪುವುದೇ ಇಲ್ಲ.

ಇಲ್ಲಿ ನೀವು ಕಾದಂಬರಿಯ ಕಡೆಯ ದೃಶ್ಯವನ್ನು ಹೇಳುತ್ತಿರಿವಿರಿ. ಅಮ್ಮದಕಣ್ಣ ಹಂಪಮ್ಮನನ್ನು ಕೆಲಸಕ್ಕೆ ಸೇರಿಸಲು ಗೋವಾಗೆ ಕರೆದುಕೊಂಡು ಹೋಗಿ ಆ ಮನೆಯಲ್ಲಿ ಅಧಿಕಾರಿಯೊಂದಿಗೆ ಮಾತನಾಡಿ ಆಕೆಯನ್ನು ಆ ಮನೆಯ ಕೆಲಸಕ್ಕೆ ಸೇರಿಸಿ ಇನ್ನೇನು ಹೊರಡಬೇಕು ಅನ್ನುವಾಗ ಆ ಆಧಿಕಾರಿಯ ಪತ್ನಿ ಎದುರಾಗುತ್ತಾಳೆ. ನೋಡಿದರೆ ಆಕೆಯೇ ಅಮ್ಮದಕಣ್ಣ ತಾನು ಪೋರ್ಚುಗಲ್ಲಿನಲ್ಲಿಯೇ ಬಿಟ್ಟು ಬಂದಿದ್ದ ಪ್ರೇಯಸಿ. ಈಗ ಅಲ್ಲಿ ಅವರೆಲ್ಲರ ನೋವಿನ ದೃಶ್ಯ ಮುಗಿದ ನಂತರ ಆತ ಬೇಸರದಲ್ಲಿಯೇ ಹೊರಡಲು ಅನುವಾದಾಗ ಹಂಪಮ್ಮ ಆತನಿಗೆ”ಬಿಟ್ಟು ಹೋಗಬೇಡ” ಅನ್ನುತ್ತಾಳೆ. ಈಗಷ್ಟೇ ತನ್ನ ಜೀವದ ಗೆಳತಿಯ ಆ ಅವಸ್ಥೆ ನೋಡಿ ಬಂದವನು ಹಂಪಮ್ಮ ಕೇಳಿದಾಕ್ಷಣ ಇನ್ನೊಂದು ಸಂಬಂಧಕ್ಕೆ ಸರಿ ಅಂದುಬಿಡುತ್ತಾನೆಯೇ? ಸೂಕ್ಷ್ಮವಾಗಿ ಆಲೋಚಿಸಿ ಸರ್!

ಹಂಪಮ್ಮ ಬದುಕುವಾಸೆಯಿಂದ ಸತಿಯನ್ನೇ ತಿರಸ್ಕರಿಸಿ ಬಂದಿದ್ದಾಳೆ. ಈಗ ಅವಳಿಗೆ ಬದುಕು ಬೇಕು. ಅತ್ತ ಪ್ರೇಯಸಿಯನ್ನು ಕಳೆದುಕೊಂಡ ಅಮ್ಮದಕಣ್ಣ ಕೂಡ ಒಂಟಿ. ಆತನನ್ನು ಆಕೆಯೇ ಇಷ್ಟಪಟ್ಟು ಜೊತೆಯಾಗಲು ಬಯಸುವುದರಲ್ಲಿ ತಪ್ಪೇನಿದೆ?

ನಿಮ್ಮ ಮಾಹಿತಿಗೆ; ಆ ಕಾದಂಬರಿಯ ಕಡೆಯ ಸಂಭಾಷಣೆ ಗ್ಯಾಬ್ರಿಯಲ್’ನಿಂದ ಮುಕ್ತಾಯ ಹೊಂದುವುದಿಲ್ಲ. ಅದು ಮುಕ್ತಾಯವಾಗುವುದು “ನಾನು ನಿನ್ನೊಡನೆ ಬರಲು ಸಿದ್ಧ” ಅನ್ನುವ ಹಂಪಮ್ಮನ ಹೇಳಿಕೆಯಿಂದ. ಪುಸ್ತಕದಲ್ಲಿರುವುದು ಹೀಗೆ. ಮುಂದೆ ಓದಿ.

ಗ್ಯಾಬ್ರಿಯಲ್ ‘ನಾನೊಂದು ದೇಶದವನು, ನೀನು ಮತ್ತೊಂದು ದೇಶದವಳು. ಒಂದಕ್ಕೊಂದು ಸಂಬಂಧವಿಲ್ಲದ ಸಂಸ್ಕೃತಿಯಲ್ಲಿ ಬೆಳೆದವರು. ಇಬ್ಬರಿಗೂ ಹೊಂದಾಣಿಕೆಯಾಗುವುದಿಲ್ಲ ಹಂಪಮ್ಮಾ’ ಎನ್ನುತ್ತಾನೆ. ಅದಕ್ಕೆ ಅವಳು ‘ಕಣ್ಣಾ, ಹಲವಾರು ಬಗೆಯ ಕುಲಾವಿಗಳನ್ನು ಹೊಲಿದವಳು ನಾನು. ಚೈನಾ ದೇಶದ ರೇಶ್ಮೆ, ನಮ್ಮ ಸೀಮೆಯ ಹತ್ತಿ ಬಟ್ಟೆ, ಅರಬ್ಬರ ಮಸ್ಲಿನ್, ಪರ್ಶಿಯಾದವರ ಡಮಾಸ್ಕ್ ಬಟ್ಟೆಗಳನ್ನು ಸೇರಿಸಿ ಕುಲಾವಿಗಳನ್ನು ಸುಂದರವಾಗಿ ಮಾಡಿದ್ದೇನೆ. ಬಣ್ಣಗಳನ್ನು ಸರಿಯಾಗಿ ಸೇರಿಸಿದರೆ ಎಲ್ಲವೂ ಸೊಗಸಾಗಿ ಹೊಂದಿಕೊಳ್ಳುತ್ತದೆ. ಇನ್ನು ನಿಮ್ಮ ದೇಶದ ಉಣ್ಣೆ ಬಟ್ಟೆಯನ್ನು ಬಳಸುವುದು ಕಷ್ಟವೆ?’ ಎನ್ನುತ್ತಾಳೆ.

ಅಂದರೆ ಆಲೋಚಿಸಿ. ಪತಿ ಸತ್ತಾಗ ಸತಿಸಹಗಮನಕ್ಕೆ ಸಿದ್ಧಳಿದ್ದವಳು ಈಗ “ನಾ ನಿನ್ನೊಡನೆ ಬದುಕು ಸಾಗಿಸಬಲ್ಲೆ” ಅಂತ ಆ ಮೇಲಿನಂತೆ ಹೇಳುತ್ತಿದ್ದಾಳೆ. ಅದೇ ಸದ್ಯಕ್ಕೆ ನೀವು ಅರ್ಥ ಮಾಡಿಕೊಳ್ಳಬೇಕಾದ transformation (ಮಾರ್ಪಾಡು). ಅವರಿಬ್ಬರು ಒಂದಾದರೋ, ಬಿಟ್ಟರೋ ಅದನ್ನು ನೀವು ಓದುಗರಾಗಿ ಮುಂದುವರಿಸಿಕೊಳ್ಳಿ.

ಕಡೆಯ ಮಾತು:  ಇಡೀ ಕಾದಂಬರಿಯನ್ನು ನಿಮಗೆ ಬೇಕೆಂದ ರೀತಿಯಲ್ಲೇ ಧರ್ಮಗಳ ಕಣ್ಣಿನಿಂದಲೇ ನೋಡುವುದಾದರೇ  ಇದೇ ಪುಸ್ತಕದ ಎರಡು ಹೇಳಿಕೆಗಳನ್ನು ಗಮನಿಸುವುದೊಳ್ಳೆಯದು.

1.   ಧರ್ಮಗಳ ವಿಷಯ ಗೇಬ್ರಿಯಲ್’ಗೆ ಯಾವತ್ತೂ ಸಂಕೀರ್ಣವೆನಿಸುತ್ತೆ. ಇಡೀ ಜಗತ್ತಿಗೆ ಒಂದೇ ಧರ್ಮವಿದ್ದರೆ ಚೆನ್ನಾಗಿತ್ತು. ಹೀಗೆ ಒಬ್ಬರನ್ನೊಬ್ಬರು ಅಧರ್ಮಿಗಳೆಂದು ಜರಿದು ಬಡಿದಾಡುವ ಸಂದರ್ಭ ಇರುತ್ತಿರಲಿಲ್ಲ ಎಂದು ಕೆಲವೊಮ್ಮೆ ಅನ್ನಿಸುತ್ತದೆ ಆದರೆ ಹಿಂದೆಯೇ ಧರ್ಮವಲ್ಲದಿದ್ದರೆ ಜನರು ಬೇರೆಯದಕ್ಕೆ ಜಗಳವಾಡುತ್ತಿದ್ದರಲ್ಲವೆ ಎಂದು ಹೊಳೆಯುತ್ತದೆ. ಈ ಮಾನವ ದ್ವೇಷದಲ್ಲಿ ಧರ್ಮದ ಪಾತ್ರವೆಷ್ಟು. ಮನುಷ್ಯರ ಪಾತ್ರವೆಷ್ಟು? ಬಹುಶಃ  ಜಗಳವಾಡುವುದು ಮನುಷ್ಯರ ಹುಟ್ಟುಗುಣವೆ? ಹಸಿವೆ, ನಿದ್ದೆ, ನೀರಡಿಕೆಗಳಿಗೆ ದೇಹವನ್ನು ತೃಪ್ತಿಪಡಿಸಿದಂತೆ ಜಗಳವಾಡಿಯೂ ಅದನ್ನು ತೃಪ್ತಿಪಡಿಸಬೇಕೇ?

2. ಪಾಪಪ್ರಜ್ಞೆಯೆನ್ನುವುದು ಹೊರಗಿನಿಂದ ಬಲವಂತವಾಗಿ ತುಂಬುವಂತಹದ್ದಲ್ಲ. ಯಾವುದೋ ಪಾದ್ರಿಯೋ, ಧಾರ್ಮಿಕ ಗ್ರಂಥವೋ, ಕಾನೂನೋ ಜೀವಿಯೊಂದರಲ್ಲಿ ನೀತಿ-ಅನೀತಿಗಳ ವಿವರಗಳನ್ನು ಕಟ್ಟಿಕೊಡಬೇಕಾಗಿಲ್ಲ. ಸೂಕ್ಷ್ಮನಾದ ವ್ಯಕ್ತಿಗೆ ಆಂತರಿಕವಾಗಿಯೇ ಅದರ ಅರಿವಾಗುತ್ತದೆ. ಸರಿ-ತಪ್ಪುಗಳು ಸ್ಪಷ್ಟವಾಗಿ ಗೋಚರಿಸತೊಡಗುತ್ತವೆ.

ಇವಷ್ಟೇ ಅಲ್ಲ. ಈ ಕಾದಂಬರಿಯಲ್ಲಿ ಎರಡು ಕಡೆ “ಧರ್ಮವನ್ನು ಆಯ್ಕೆ ಮಾಡಬೇಕೋ? ಅಥವ, ಬದುಕನ್ನು ಆಯ್ಕೆ ಮಾಡಬೇಕೋ?” ಅಂತ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕಾದ ಸನ್ನಿವೇಶಗಳು ಸೃಷ್ಟಿಯಾಗಿ ಎರಡೂ ಕಡೆ ಆ ಪಾತ್ರಗಳು ಬದುಕನ್ನು ಆಯ್ದುಕೊಳ್ಳುತ್ತವೆಯೇ ಹೊರತು ಧರ್ಮವನ್ನಲ್ಲ.

ಇವೆಲ್ಲವನ್ನೂ ಗಮನಿಸಿದಾಗ ವಸುಧೇಂದ್ರರವರ ಕೃತಿಯಲ್ಲಿ ಇನ್ನೇನೋ ದುರುದ್ದೇಶದಿಂದ ಎರಡು ಧರ್ಮವನ್ನು ತುಚ್ಛವಾಗಿಸಿ, ಒಂದನ್ನು ಅತೀ ಹೆಚ್ಚು ಅನ್ನುವಂತೆ ಕಂಡಿಲ್ಲ ಅನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅವರು ಧರ್ಮಕ್ಕಿಂತ ಬದುಕು ಮುಖ್ಯ ಎಂದು ಎಲ್ಲ ಕಡೆ ಮಾನವತಾವಾದವನ್ನು ಪ್ರತಿಪಾದಿಸುತ್ತಾರೆಯೇ ವಿನಃ ನೀವು ಅರೋಪಿಸಿದ ರೀತಿ ಅಲ್ಲ.

ಧನ್ಯವಾದಗಳು!

ಸಂತೋಷ್ ಕುಮಾರ್ ಎಲ್.ಎಂ.

‍ಲೇಖಕರು avadhi

February 7, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Lohith DS

    ಸಂತೋಷ,
    ನಿಮ್ಮ ಸ್ಪಷ್ಟನೆ ಸಮಾಧಾನ ನೀಡಿತು.
    ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎಂಬಂತೆ ಸಾರಾ ಸಗಟಾಗಿ ಆರೋಪಿಸಿದಂತಿದೆ ರೇಣುಕಾರಾದ್ಯ ಅವರ ವಿಮರ್ಶೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: