ಸೂರ್ಯೋದಯ ಸೂರ್ಯಾಸ್ತಗಳ
ಏರಿ ಮೇಲೆ
ತುಂಬೆ ತಂಗಡೆ ಸುಣ್ಣಗುಬ್ಬಿ ಹೂಗಳ
ಪರಿಮಳ ಹೊದ್ದ ಈಡನ್ ಗಾರ್ಡನ್‌ಗಳಲ್ಲಿ
ನೆರಿಗೆ ಹಿಡಿದು ಹೆಜ್ಜೆಗೆ ಹೆಜ್ಜೆ ಬೆರೆಸಿದ ಪ್ರಣಯ ಪಕ್ಷಿಗಳು
ದಿಗಂತದಲ್ಲಿ ಬಾನು ಭುವಿ ಒಂದಾಗಿ ಕರಗುವ
ಸಾಮರಸ್ಯದ ಸಂಕೇತ ನೋಡುತ್ತಾ
ಕಲ್ಲುಗಳಲ್ಲಿ ಕೆತ್ತಿ ಬಿಟ್ಟು ಹೋದ ತಾಜ್ ಮಹಲ್‌ಗಳು
ಮುಳ್ಳುಗಳಿಂದಲೂ ಆಕರ್ಷಸುತ್ತಿದ್ದ ಸೀಗೆಕಾಯಿ ಗಜ್ಜುಗ
ತೂಬಿನ ಬಳಿಯ ಸೇತುವೆ ಮೇಲೆ ಕುಳಿತು
ರಾಶಿ ರಾಶಿ ರಾಸುಗಳ ನಡುವೆ
ಆನೆಯಾಟ ಚೌಕಬಾರ ಆಡಿ
ಸೋತು ಗೆದ್ದ ಚರಿತ್ರೆಯನು ಕೂಗಿ ಹೇಳುತ್ತದೆ
ಗದ್ದೆಗಳ ಬಯಲಲ್ಲಿ ಬೆರೆತು
ಕಬಡ್ಡಿ, ಉಪ್ಪಾರ ಪಟ್ಟೆ, ಚಿನ್ನಿ ದಾಂಡು, ತೂತು ಚೆಂಡು,
ಲಗೋರಿ, ಕೋಲಿಗೆ ಕಲ್ಲು ಮುಟ್ಟಿಸಿ, ಕಣ್ಣಮುಚ್ಚಾಲೆ ಆಡಿ
ತಂಡಗಳ ಮುಖಂಡತ್ವದಲ್ಲಿ ಗೆದ್ದ ಸೋತ
ಸ್ಪರ್ಧೆ ಪಾರಿತೋಷಕಗಳ ನೆನಪ ಬಿಚ್ಚಿ ಹೇಳುತ್ತದೆ
ಅಲ್ಲಲ್ಲಿ ಬೆಳೆದ ಅಂಬಳ್ಳಿಗಳಲ್ಲಿ
ನೆಗೆದ ಹಗ್ಗದಾಟ
ಒಂಟಿ ಜೋಡಿಯಾಟ
ಪ್ರೇಮ ನಿವೇದನೆಗೆ ಅರಳಿ ನಿಂತಿದ್ದ
ಕಾಳಿದಾಸ ಹೂವು
ಬದಿಯಲ್ಲೇ ನಿಂತು ಮುನಿಯುವ ಮುತ್ತುಗ
ಕೆರೆಯ ಆಳದಿಂದಲೇ ಕೈಮಾಡುವ
ಬಿಳಿಯ ಆಬಳಿ ಕೆಂದಾವರೆ
ಇಲ್ಲಿ ಮುಳುಗಿ ಮತ್ತೆಲ್ಲೋ ಕತ್ತು ತೋರುವ ನೀರುಕೋಳಿ
ಕೆರೆಯೊಳಗೆ ಡೇರೆ ಹೊಡೆಯುವ ವಳ್ಳೆಪಿಂಗ
ಕೆರೆಬಡುಕ ಗೊದ್ದೆಮಟ್ಟೆ
ದಡದ ಬಿಲದಲ್ಲಿನ ಏಡಿಕಾಯಿ ಸೀಗಡಿ ಮೀನು
ಛಂಗನೆ ಬೇಟೆಯಾಡಲು ಬರುತ್ತಿದ್ದ ಸಮ್ಮರ್ ಕಾಗೆ
ರಣಹದ್ದು ಬೇಟೆ ನಾಯಿ
ಬೆದರಿ ಗುಕ್ಕು ಬಿಟ್ಟು
ಹಾರಿ ಹೋಗುತ್ತಿದ್ದ ಬೆಳ್ಳಕ್ಕಿಗಳ ದಂಡಿನ
ಕಥೆ ಹೇಳುತ್ತದೆ
ಕರಿ ಕಲ್ಲುಗಳ ನಡುವೆ
ಸಮೃದ್ಧವಾಗಿ ಬೆಳೆಯುತ್ತಿದ್ದ ಕಾರೆ ಗಿಡ
ಹಣ್ಣು ಕೀಳಲು ಹೋದವರ
ಕೆಣಕುತ್ತಿದ್ದ ತುರಿಕೆ ಸೊಪ್ಪು
ಉಸಿರಲ್ಲೇ ಹೆದರಿಸುತ್ತಿದ್ದ
ನಾಗರಗಳು ಇನ್ನು ಏನೇನೋ…
ಬಂಡೆಗಳ ಮೇಲೆ ಕುಳಿತು
ಬಟ್ಟೆ ಒಗೆಯುವ
ಊರ ನಾರಿಯರ ಕಷ್ಟ ಸುಖ
ವ್ಯತಿರಿಕ್ತ ಪರಿಸ್ಥಿತಿಗೆ ಕೆರೆಗೆ ಹಾರವಾದ
ಅದೆಷ್ಟೋ ಅನಾಮಧೇಯ ದೇಹಗಳು
ಅಮ್ಮಂದಿರ ಜೊತೆಗೆ ಹೋದ
ಪುಟ್ಟ ಪೋರರ ಈಜಿನ ತಾಲೀಮು
ಕುರಿ ದನ ಎಮ್ಮೆಗಳ ಸವಾರಿ
ಮೈ ತೊಳೆಯುವಾಟ
ಮದುವೆಯಾದ ಮೈನೆರೆದ ಯುವತಿಯರ
ಗಂಗಮ್ಮನ ಪೂಜೆ
ಬಿರುಕು ಬಿಟ್ಟ ಭೂಮಿಯಲ್ಲಿ ಬಿಲ್ಲೆಯಾಗಿ ಎದ್ದ
ಎರೆ ಮಣ್ಣಿನ ಆಟದ ಗೊಂಬೆಗಳು
ಉತ್ಸವಗೊಂಡು ಬಂದ ಗಣಪನ ವಿಸರ್ಜನೆ
ಹೀಗೆ
ಹುದುಗಿಹೋದ
ಸಮೃದ್ಧ ಕತೆಗಳ ಹೂರಣವ ಬಿಚ್ಚಿಡುತ್ತದೆ
ತಾಯ್ನಾಡಿನ ಕೆರೆಯ ಕುರುಹು ಹಿಡಿದು ಬಂದ
ದೂರದ
ಸಂಶೋಧಕನಿಗೆ
0 Comments