ತೇಜಾವತಿ ಎಚ್ ಡಿ ಓದಿದ ‘ಅಮೋಘಸಿದ್ಧ ಜನಪದ ಮಹಾಕಾವ್ಯ’

ಕರಿತೆಲಿ ಮಾನವರಲ್ಲಿ ಗುರುಪರಂಪರೆ ಬೆಳೆಸಿದ ಮಾಂತ್ರಿಕ ಕಾವ್ಯ

ತೇಜಾವತಿ ಎಚ್ ಡಿ

ಹಿರಿಯ ಕಥೆಗಾರರಾದ ಡಾ. ಚೆನ್ನಪ್ಪ ಕಟ್ಟಿ ಅವರು ಸಂಪಾದಿಸಿರುವ ʻಅಮೋಘಸಿದ್ಧ ಜನಪದ ಕಾವ್ಯʼವನ್ನು ಹಾಡಿದವರು, ʻಅವಧು ಬನಸಿದ್ಧ ಹಿರಕೂರʼ.

ಮಹಾರಾಷ್ಟ್ರದ ಹತ್ತೂರಿನ ಇವರು ಮೌಖಿಕವಾಗಿ ಕಾಪಿಟ್ಟುಕೊಂಡು ಬಂದಿದ್ದ ದೇಸಿ ಸಂಸ್ಕೃತಿಯ ಈ ಮಹಾಕಾವ್ಯದ ಲಿಖಿತ ರೂಪದ ದಾಖಲೆ. ನಮ್ಮ ನಾಡು ನುಡಿಯ ಸಿರಿ ಪರಂಪರೆಗಳನ್ನು ಮುಂದಿನ ಪೀಳಿಗೆಗೆ ಹಲವು ವಿವಿಧೋದ್ದೇಶಗಳಿಗಾಗಿ ಬಳಸಲು ದೊರಕುವ ಮಹತ್ವಪೂರ್ಣ ಸರಕುಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಈ ಕೃತಿಯ ಸಂಪಾದನೆ ಶ್ಲಾಘನೀಯ.

1970 ರ ದಶಕದಲ್ಲಿ ಜನಪದ ಮಹಾಕಾವ್ಯಗಳ ಸಂಪಾದನೆ ಕಾರ್ಯ ಆರಂಭವಾಗಿ, ಅವುಗಳ ಅಧ್ಯಯನಕ್ಕೆ ವ್ಯವಸ್ಥಿತ ವೇದಿಕೆಯನ್ನು ನಿರ್ಮಿಸಿಕೊಟ್ಟಿದ್ದು ಪ್ರೊ. ಜೀ. ಶಂ. ಪರಮಶಿವಯ್ಯನವರು. ಅವರ ‘ದಕ್ಷಿಣ ಕರ್ನಾಟಕ ಜನಪದ ಕಾವ್ಯ ಪ್ರಕಾರಗಳು’ ಸಂಶೋಧನಾ ಗ್ರಂಥದಲ್ಲಿ ಸಂಪಾದನೆಗೆ ತೊಡಗುವ ವಿದ್ವಾಂಸರಿಗೆ ಪ್ರೇರಕ ಅಂಶಗಳಿವೆ. ಶಿಷ್ಟ ಕಾವ್ಯದಲ್ಲಿರುವಂತೆ ಜನಪದದಲ್ಲೂ ಮಹಾಕಾವ್ಯಗಳಿವೆ. ಅವುಗಳ ಪ್ರತಿಪಾದನೆಯ ವಸ್ತುವಿನ ಆಧಾರದ ಮೇಲೆ ಮಾಂತ್ರಿಕ, ವೀರ, ರೋಮ್ಯಾಂಟಿಕ್ ಮತ್ತು ಚಾರಿತ್ರಿಕ ಮಹಾಕಾವ್ಯ.. ಹೀಗೆ ನಾಲ್ಕು ಪ್ರಕಾರಗಳನ್ನು ನೋಡಬಹುದು. 

ʻಅಮೋಘಸಿದ್ಧ ಮಹಾಕಾವ್ಯʼವು ಮಾಂತ್ರಿಕ ಕಾವ್ಯ ಹಾಗೂ ಗುರು ಪರಂಪರೆಗೆ ಸೇರಿದ್ದು, ಇದರ ನಾಯಕ ಕುರುಬ (ಹಾಲುಮತ) ಸಮಾಜದ ಗುರುಪರಂಪರೆಯಲ್ಲಿ ಒಬ್ಬನೆಂದು ಗುರುತಿಸಿಕೊಂಡಿದ್ದು, ಇಡೀ ಕಾವ್ಯ ಅವನ ಸಿದ್ದಾಟಿಕೆಗಳನ್ನು ಮಹಿಮೆಗಳ ರೂಪದಲ್ಲಿ ವರ್ಣಿಸುತ್ತದೆ.

‘ಶಿವನೆ ನಮ್ಮಯಿ ದೇವರ ಬಂದಾನ ಘೇ
ಸ್ವಾಮಿ ನಮ್ಮಯಿ ದೇವರ ಬಂದಾನ ಘೇ’
ಎಂಬ ಸ್ತುತಿಯಿಂದ ಆರಂಭವಾಗುವ ಕಾವ್ಯದಲ್ಲಿ ಒಟ್ಟು ಒಂದು ನೂರ ಹನ್ನೊಂದು ಸಂದುಗಳಿವೆ.

ಪ್ರತಿ ಸಂದುವೂ ಈ ಸ್ತುತಿಯಿಂದ ಆರಂಭವಾಗಿ ನಂತರ ಒಂದೊಂದು ‘ಲಾಗೋಳಿ’ಯನ್ನು ಜೋಡಿಸಲಾಗಿರುತ್ತದೆ. 

‘ಏ ಹಾಡೇನಪ್ಪ ನಾವು ಹಾಡೇವು
ಹಾಲಿನಂತ ದೇವರಿಗೆ
ಸೀತಾಳೆಯಂತ ಪೂಜಾರಿ
ಸೀತಾಳೆಯಂತ ಪೂಜಾರಿಗೊಬ್ಬ
ಸಮುದರದಂತ ಭಗತಾನೊ’
ಹೀಗೆ ಮುಂದಿನ ಮಾರ್ಗದ ಜಾಡಿಯ ಸಿದ್ದಾಟಿಕೆಗಳ ಕತೆಗಳು ಸಂದುಗಳಲ್ಲಿ ಸಾಗುತ್ತವೆ. ಅದನ್ನು ʻಮಾರ್ಗʼ ಎನ್ನುತ್ತಾರೆ.

‘ಸತ್ಯ ಧರಮರ ಮಾರಗ
ಹಾಡಿನ ಭೇದೆಲ್ಲಿದ್ದಾವ
ಹಾಡಿನ ಭೇದೆಲ್ಲಿದ್ದಾವೆ
ನಮ ಜಾಡಿಯ ಮನಿಯಲೈದಾವೆ’
ʻಮಾರ್ಗʼದ ಕತೆಯಲ್ಲಿ ಬರುವ ಒಂದು ಕತೆಯ ಎಳೆಯೇ ಜಾಡಿ. ಅಮೋಘಸಿದ್ದನ ಸಿದ್ದಾಟಿಕೆಗಳಿಂದ ಮಹಿಮೆಗಳನ್ನು ವರ್ಣಿಸುವುದರಿಂದ ಇಲ್ಲಿ ಇಡೀ ಕತೆಯನ್ನು ಹನ್ನೆರಡು ಮಹಿಮೆಗಳಲ್ಲಿ ಓದಬಹುದು.

ಕಾವ್ಯದ ತುಂಬೆಲ್ಲಾ ಸ್ಥಳಗಳ/ಊರುಗಳ ಹೆಸರನ್ನು ಮುರಿದು ಕಟ್ಟಲಾಗಿದೆ.

‘ಗುರುವಿನ ಕರುಣೆಯು ಆಗಬೇಕಾದರೆ
ಗರ್ವವ ಬಿಡಬೇಕು
ಮೋಕ್ಷ ಸುಖವನು ಪಡೆಯಬೇಕಾದರೆ
ಶರೀರವನ್ನು ದೂರಿಡಬೇಕು
ಶಶಿಧರನ ಕೃಪೆಯಾಗಬೇಕಾದರೆ
ಶಿಶುವಿನಂತೆ ಮೊರೆಯಿಡಬೇಕು’
ಗುರುಕಾರುಣ್ಯವನ್ನು ಪಡೆಯಬಹುದಾದ ಮಾರ್ಗವನ್ನು ತಿಳಿಸುವ ಈ ಸಾಲುಗಳು ಇಲ್ಲಿ ನೆನಪಾಗುತ್ತವೆ. ಈ ಮಹಾಕಾವ್ಯ ಕೂಡ ಗುರು ಪರಂಪರೆಯನ್ನು ಎತ್ತಿಹಿಡಿಯುವ ಒಂದು ಅಗ್ರಕಾವ್ಯ. ಕೈಲಾಸ ಮಂಡಲದಲ್ಲಿ ಆರಂಭವಾಗುವ ಕತೆ ಇತರ ಜಾನಪದ ಕಥೆಗಳಂತೆ ವಿಶ್ವಸೃಷ್ಠಿಯನ್ನು ಹೇಳದೆ ನೇರವಾಗಿ ಕಥಾನಾಯಕನ ಜನನವನ್ನು ಹೇಳುತ್ತದೆ.

ಪರಮೇಶ್ವರನ ನೇತೃತ್ವದ ದೇವರ ಸಭೆಯಲ್ಲಿ ಮೂರು ಲೋಕಗಳ ಸಮಾಚಾರವನ್ನು ವಿಚಾರಿಸಲಾಗಿ ತ್ರಿಲೋಕ ಸಂಚಾರಿ ನಾರದರ ಮೂಲಕ ಮರ್ತ್ಯ ಲೋಕದಲ್ಲಿನ ʻಕರಿತೆಲೆ ಮಾನವರುʼ ಗುರುವನ್ನು ಮರೆತು ನಡೆಯುತ್ತಿರುವ ಮಾಹಿತಿ ತಿಳಿದು, ಅವರಲ್ಲಿ ಗುರು ಪರಂಪರೆಯನ್ನು ಬೆಳೆಸಲು ಭೂಲೋಕಕ್ಕೆ ಹೋಗಲು ನಂದಿಯು ಆಯ್ಕೆಯಾಗುತ್ತಾನೆ. ಅವನು ಎಂಟು ವರಗಳೊಂದಿಗೆ, ಶಿವನೂ ತನ್ನ ಜೊತೆಗೆ ಬರಬೇಕೆಂಬ ಬೇಡಿಕೆಯಿಡುತ್ತಾನೆ. ಆಗ ಶಿವನಿಂದ ಪಡೆದ ಮಳೆ ಕೀಲಿನವ, ಬೆಳೆ ಕೀಲಿನವ, ಹೋಮದ ಕಂಬಳಿಯವ, ನೇಮದ ಬೆತ್ತದವ, ಭಂಡಾರ ಭರಣಿಯವ, ಹುಟ್ಟು ಬಂಜೆಯರಿಗೆ ತೊಟ್ಟಿಲು ಭಾಗ್ಯ ನೀಡುವವ.. ಈ ಎಲ್ಲ ವರಗಳು ಮುಂದೆ ಅಮೋಘಸಿದ್ಧನ ಬಿರುದುಗಳಾಗುತ್ತವೆ.

ಪಾರ್ವತಿಯ ಗರ್ಭದಲ್ಲಿ ಪಾಪನಿಲ್ಲದ ಪಿಂಡವಾಗಿ ಜನಿಸುವ ಅಮೋಘಸಿದ್ಧನ ಏಳನೇ ವಯಸ್ಸಿಗೆ ಬೀಜಮಂತ್ರ ಹಾಗೂ ಬೋಧ ಮಂತ್ರವನ್ನು ಕಿವಿಯಲ್ಲಿ ಊದಿ ಗುರೂಪದೇಶ ಮಾಡಿದ ಶಿವನು, ಮಕಣಾಪುರದಲ್ಲಿ ನೆಲೆಸಿ ಗುರುಗೌರಿ ಸೋಮಲಿಂಗನ ಹೆಸರಿನಲ್ಲಿ ಭೂಲೋಕದ ಗುರುವಾಗುತ್ತಾನೆ. ಇಲ್ಲಿ ಗಮನಿಸಬಹುದಾದ ಮತ್ತೊಂದು ಅಂಶ, ಸಿದ್ಧಿಪುರುಷರೆಲ್ಲರೂ ನಿರ್ದಿಷ್ಟ ಉದ್ದೇಶದ ಅನುಷ್ಠಾನಕ್ಕಾಗಿ, ಲೋಕ ಕಲ್ಯಾಣಕ್ಕಾಗಿಯೇ ಜನಿಸಿರುತ್ತಾರೆ, ಹಾಗೆಯೇ ಅವರ ಹುಟ್ಟು-ಸಾವುಗಳು ಕೂಡ ಪೂರ್ವ ನಿಯೋಜಿತವೇ ಎನ್ನುವುದು.

ಗುರು ಶಿಷ್ಯತನವನ್ನು ಪರೀಕ್ಷಿಸಲು ಹಲವಾರು ಪರೀಕ್ಷೆಗಳನ್ನು ಒಡ್ದುತ್ತಾನೆ. ಇಲ್ಲಿ ಗುರುಪರಂಪರೆ ಬೆಳೆಸಲು ಜನ್ಮತಾಳಿದ ಅಮೋಘಸಿದ್ಧನು ಕೂಡ ಸ್ವತಃ ಶಿವನ ಗುರುಪರೀಕ್ಷೆ ಎದುರಿಸಿ ಮೆಚ್ಚಿಸುವುದನ್ನು, ಶಿವನು ‘ನಾಶರೂಪ’ದಲ್ಲಿ ಬಂದಾಗ ತನ್ನ ನಾಲಗೆಯಿಂದ ನೆಕ್ಕಿ ಗುರುವಿನ ರೋಗವನ್ನು ಕಳೆಯುವಲ್ಲಿ ನೋಡಬಹುದು. ಇಂತಹ ಎಷ್ಟೋ ಪ್ರಸಂಗಗಳನ್ನು ಇತರ ಜನಪದ ಕಾವ್ಯಗಳು ನೆನಪಿಸುತ್ತವೆ. ಪರಮೇಶ್ವರನೊಂದಿಗೆ ಪಗಡೆಯಾಡುತ್ತಿದ್ದ ಪಾರ್ವತಿ ತಮ್ಮ ಸದರ ಮಂಟಪದಲ್ಲಿ ಬಾಗಿದ ಮುತ್ತಿನ ತೆನಿಗೋಳ ನೋಡಿ, ಶಿಶುಮಗನು ಪರಮೇಶ್ವರನನ್ನು ಮರೆತಿರುವ ಸಂಕೇತವೆಂದು ಭಾವಿಸುವುದು, ಎಲ್ಲಾ ಕಾಲಕ್ಕೂ ಕೆಲ ಧಾರ್ಮಿಕ ನಂಬಿಕೆಗಳು ಜೀವಂತವಾಗಿರುವ ಸೂಚನೆ ನೀಡುತ್ತವೆ. ಭವಿಷ್ಯದ ಘಟನೆಗಳಿಗೆ ಶಕುನ, ಹೇಳಿಕೆ, ಕನಸುಗಳ ಮೂಲಕ ಸುಳಿವು ನೀಡುವುದು.. ಜನಪದ ಕಾವ್ಯಗಳ ಮತ್ತೊಂದು ವೈಶಿಷ್ಟ್ಯ. ಇಲ್ಲಿ ದೇವಲೋಕದ ಕೊರವಂಜಿಯ ಶಕುನ ಹಾಗೂ ಮಾಶ್ಯಾಳ ಮಾದಿಗನು ನುಡಿದ ಹೇಳಿಕೆಗಳು ಇದಕ್ಕೆ ಪೂರಕವಾಗುತ್ತವೆ.

ತನ್ನ ಕೈಂಕರ್ಯವನ್ನು ಈಡೇರಿಸಲು ಮಾನವನಾದ ಅಮೋಘಸಿದ್ಧನು ಮಾನವನಾಟ ಆರಂಭಿಸಿ, ಒಂದೊಂದೇ ಮಹಿಮೆಗಳನ್ನು ತೋರಿಸುತ್ತಾ ಸಾಗುತ್ತಾನೆ. ಏಳ್ಹಟ್ಟಿ ನಗರಾಯನ ಮಗಳಾದ ಪದ್ಮಾವತಿಯನ್ನು ಮದುವೆಯಾಗುವ ಮುಂದಿನ ಭಾಗಗಳು ಮಾಂತ್ರಿಕ ಚಮತ್ಕಾರಗಳನ್ನು ಓದುಗನಿಗೆ ನೀಡುತ್ತವೆ. ಪದ್ಮಾವತಿ ಹಾಗೂ ಅಮೋಘಸಿದ್ಧನ ಮನಸುಗಳನ್ನು ಬೆಸೆಯುವ ಪ್ರಸಂಗಗಳು ಲೌಕಿಕದ ಸಹಜ ಭಾವನೆಗಳಿಗೆ ಒಳಗಾಗುವ ಪಾತ್ರಗಳಾಗಿ ಕಾಣಿಸುತ್ತವೆ. ನೇಮದ ಬೆತ್ತ, ಹೋಮದ ಕಂಬಳಿಯೊಂದಿಗೆ ಪದ್ಮಾವತಿಯ ವಿವಾಹದ ಶಾಸ್ತ್ರ ಅಮೋಘಸಿದ್ಧನ ಅನುಪಸ್ಥಿತಿಯಲ್ಲಿ ನೆರವೇರುವುದು ವಿಶೇಷ ಅನುಭವ.

ಇನ್ನು, ಇಲ್ಲಿ ಬರುವ ಅಮೋಘಸಿದ್ಧನ ಆಜ್ಞಾನುವರ್ತಿಗಳಾಗಿದ್ದ ಹಿಂಡು ದೆವ್ವಗಳ ಗಂಡನಾಗಿದ್ದ ಪ್ರಧಾನಿ ಭೂತಾಳಿ ಸಿದ್ಧನ ಮಹಿಮೆಗಳು, ಬಾಳೇದ ಖಂಡ್ರಾಯ ಏಳುಕೋಟಿ ಜನರನ್ನು ಒಮ್ಮೆಲೇ ಒಟ್ಟುಗೂಡಿಸುವುದು, ಮಣುರ ಯಲ್ಲಮ್ಮ ಉಧೋ ಉಧೋ ಎಂದು ಗಿಡಮರಗಳನ್ನು ಬಂಡಿಯನ್ನಾಗಿ ಪರಿವರ್ತಿಸುವುದು, ಎಲ್ಲವನ್ನು ವಾಸ್ತವಕ್ಕೆ ಎಷ್ಟು ಹತ್ತಿರವೆಂಬ ವೈಜ್ಞಾನಿಕತೆ ಇಣುಕಿ ತಾಳೆ ಹಾಕಿ, ಚಿಂತಿಸುತ್ತಲೇ ಕಾವ್ಯಗಳ ಮೆರುಗನ್ನು ಹೆಚ್ಚಿಸಲು ನಮ್ಮ ಜನಪದರು ಮಾಡಿರುವ, ಇಂತಹ ಅನೇಕ ಚಮತ್ಕಾರಗಳು ಹಾಗೂ ತರ್ಕಕ್ಕೂ ಸಿಗದ ಮೋಡಿ ಕಲೆಯನ್ನು ಸ್ಮರಿಸಬಹುದು.

ಜನಪದ ಪುರಾಣ ಕಾವ್ಯದಲ್ಲಿ ಸಾಮಾನ್ಯವಾಗಿ ಮರಣಕ್ಕೆ ಸ್ಥಾನವಿಲ್ಲ.. ಹಾಗೇನಾದರೂ ಘಟಿಸಿದರೆ ಕಥೆಯ ಕೇಂದ್ರ ಪಾತ್ರ ತನ್ನ ಸಿದ್ದಾಟಿಕೆಯಿಂದ ಮರುಜೀವ ಕೊಡುತ್ತದೆ. ಅಂತೆಯೇ ಇಲ್ಲಿ ಅವಮಾನದ ಪ್ರತೀಕಾರಕ್ಕಾಗಿ ಅಮೋಘಸಿದ್ಧ ಹೂಡುವ ಆಟದಲ್ಲಿ ನಗರಾಯನು ತನ್ನ ಸಂದು ರೋಗ ನಿವಾರಣೆಯಾಗಲು ಕೊರವಂಜಿ ಶಕುನ ಕೇಳಿ ಜಡೆಯ ಕೂಸನ್ನು ತನ್ನ ಮನೆದೇವರ ಮುಂದೆ ಬಲಿಕೊಟ್ಟು ಗುರುವಿಗೆ ಶರಣಾದಾಗ ತನ್ನ ಸಿದ್ಧಿ ಶಕ್ತಿಯಿಂದ ಭಂಡಾರ ಹೊಡೆದು ಬದುಕಿಸುವ ಪ್ರಸಂಗ ನಡೆಯುತ್ತದೆ. ಈ ಪ್ರಸಂಗ ಅದೆಷ್ಟೋ ಜನಪದ ಕತೆಗಳಲ್ಲಿ ದೇವರ ಹೇಳಿಕೆಯಂತೆ, ಬಾವಿ ಕೆರೆಗಳನ್ನು ಕಟ್ಟಿಸಿ ಬೇಡಿದ ಹಾರವಾಗಿ ಹೋದ ಭಾಗೀರಥಿ, ಕೆಂಚಮ್ಮ, ಚೆನ್ನಮ್ಮ ನಾಗತಿಯಂಥಹ ಹೆಣ್ಣುಮಕ್ಕಳನ್ನು ನೆನಪಿಸುತ್ತದೆ. ಇವರೆಲ್ಲ ಜನಪದ ಕಾವ್ಯಗಳಲ್ಲಿ ಸಿದ್ಧಿಸಾಧಕಿಯರೇ ಆಗಿದ್ದಾರೆ. ಇಂದಿಗೂ ಮಾಟ, ಮೋಡಿ, ನಿಧಿಶೋಧದಂತಹ ಕೆಲಸಗಳಿಗೆ ನಕಾರಾತ್ಮಕವಾಗಿಯು ನರಬಲಿ ಘಟನೆಗಳು ನಡೆಯುತ್ತಿರುವುದು ವಿಷಾದ.

ಇನ್ನು, ಅಮೋಘಸಿದ್ಧನು ಗುರುಪರಂಪರೆ ಹಾಗೂ ವಲಯದ ವಿಸ್ತರಣೆಗಾಗಿ ಅಹ್ಮದ್ ನಗರದ ಭೀಮರಾಯನ ಮಗ ಮಂಗರಾಯ, ಕೆಮ್ಮನಕೋಲದ ಗುರುಸಿದ್ದಗೌಡ ಗುರುಬಾಯಿಯ ಮಗ ಕರಣಿ ಮಲಕಾರಿಸಿದ್ದ ಹಾಗೂ ಅಮಗೊಂಡ ಸುಗದೇವಿಯರ ಮಗ ಮಾಯದ ಮಾದಣ್ಣನನ್ನು ಪುಣ್ಯದ ಮಕ್ಕಳಾಗಿ ಪಡೆಯುತ್ತಾನೆ. ಅಬಗೊಂಡ ಸುಗದೇವಿಯರಿಗೆ ತೊಟ್ಟಿಲ ಭಾಗ್ಯವನ್ನು ಕರುಣಿಸುವುದು ಕೂಡ ಒಂದು ಪವಾಡ. ಸುಗದೇವಿ ಗುರುವನ್ನು ಅನುಮಾನಿಸಿದ್ದಕ್ಕಾಗಿ ಅವಳ ಒಂದು ಮಗು ದಾರಿಮಧ್ಯೆ ಭೂಮಿ ಸೇರುವುದನ್ನು ಕಾಣಬಹುದು. ಇದು ದೈವ, ಗುರುವಿನೆಡೆಗೆ ಭಕ್ತಿ ಮತ್ತು ನಂಬಿಕೆಯಿರಬೇಕು ಎಂಬ ಸತ್ಯವನ್ನು ತೋರಿಸುತ್ತದೆ.

ಮೂವರೂ ಶಿಶುಮಕ್ಕಳು ಗುರುವಿನ ಸೇವೆಯಲ್ಲಿ ನಿರತರಾಗಿದ್ದಾಗ ಮಾದಣ್ಣನಿಗೆ ಮೂಡುವ ಬೆನ್ನು ಭುಜಗಳ ಆಸೆ ನೆಪವಾಗಿ, ಅದು ಪದುಮವ್ವಳ ಮನದ ಇಂಗಿತವೂ ಆಗಿ ಕಾಣಿಸುತ್ತದೆ. ಮಾದಣ್ಣನ ಮೂಲಕ ಪಡೆದಪ್ಪನಲ್ಲಿ ಬೇಡಿಕೆಯಿಟ್ಟು ಅವತಾರ ಅವಧುಸಿದ್ಧ, ಬುದ್ಧಿಯುಳ್ಳ ಬಿಳಿಯಾನಿಸಿದ್ಧ, ಆಚಾರಗೌಡ ಸೋಮಣ್ಣ ಮುತ್ಯಾ ಹಾಗೂ ಕಡಿಹುಟ್ಟ ಕನ್ನಿಪ್ಪೊಡೆಯ ಈ ನಾಲ್ಕು ಗಂಡುಮಕ್ಕಳನ್ನು ಹಾಗೂ ರೆಬಕವ್ವ ಎಂಬ ಹೆಣ್ಣು ಮಗಳನ್ನು ವರವಿನ ಮಕ್ಕಳಾಗಿ ಪಡೆಯುತ್ತಾಳೆ. ಲೋಕಜ್ಞಾನಿಯಾದ ಅಮೋಘಸಿದ್ಧನು ಎಚ್ಚರಿಸಿದರೂ ಅರಿಯದೆ ಮುನ್ನಡೆದ ಕಾರಣದಿಂದ, ಮುಂದೆ ಲೋಕರೂಢಿಯಂತೆ ಪುಣ್ಯದ ಮಕ್ಕಳು ಮತ್ತು ವರವಿನ ಮಕ್ಕಳಿಗೆ ದಾಯಾದಿತನ ಬೆಳೆದು ನಾಡ ಸಾಧುನಿ, ದೇಶಸಾಧುನಿ ಹಾಗೂ ಭಕ್ತ ಸಾಧುನಿಗಾಗಿ ಹಾತೊರೆಯುತ್ತಾರೆ.

ಗುರುವಿನ ಆಜ್ಞೆ ಮೀರಿದ ವರವಿನ ಮಕ್ಕಳು ವಿಜಯಪುರದ ಬಾದಶಹಾ ಹಾಗೂ ಶೇಖ್ ಸೈಯದರೊಂದಿಗೆ ಹಲವು ಸವಾಲುಗಳನ್ನು ಎದುರಿಸಿ, ವಿಜಯಿಗಳಾಗಿ ತಂದೆಯನ್ನು ಭೇಟಿಯಾಗಲು ಬಂದಾಗ ಈ ಧರ್ಮರ ಬಾಯಿಂದಲೇ ಸುಳ್ಳು ಹೊರಬರುತ್ತದೆ. ಮಾದಣ್ಣ ಏಳು ಮಠಗಳನ್ನು ಸ್ಥಾಪಿಸಿ ಗುರು ಪರಂಪರೆಯನ್ನು ಸಿದ್ದಾಟಿಕೆಗಳಿಂದ ಬೆಳಗುತ್ತಾನೆ. ನಂತರ ವರವಿನ ಮಕ್ಕಳ ಆಶಯದಂತೆ ಅಧಿಕಾರ ಕೇಂದ್ರವನ್ನು ನಿರ್ಮಿಸಲು, ಅಮೋಘಸಿದ್ದನ ಸಲಹೆಯ ಮೇರೆಗೆ ಸಿದ್ದರ ಶಿವಮನಿ ಹಾಗೂ ಧರಮರ ಕಟ್ಟೆ ನಿರ್ಮಾಣವಾಗಿ, ಕ್ರಮೇಣ ವರವಿನ ಮಕ್ಕಳು ಆರಾಜಕತೆಗಳ ಮೂರ್ತಿಗಳಾಗಿ ಅಲ್ಲಿನ ಗುರುಪರಂಪರೆ ಅವಸಾನದತ್ತ ಸಾಗುತ್ತದೆ.

ಮುಂದಿನ ಪೀಳಿಗೆಯಲ್ಲಿ ಓಗೆಣ್ಣ ಮುತ್ಯಾನ ಮಹಿಮೆಗಳು ಒಂದಷ್ಟು ನಡೆದು ಧರ್ಮ ಕೈ ಹಿಡಿಯುತ್ತದೆ. 

‘ಏ ಕಂಬಳೆಪ್ಪ ಕಂಬಳಿ
ಅರತವಗ ಕರಿಕಂಬಳಿ
ಆರಿದವಗ ಜೀವಕ ಮುಂಬಳಿ
ಇಟ್ಟಲ್ಲೆ ಇರುವುದು ಕಂಬಳಿ
ಕರದಲ್ಲಿ ಬರುವುದು ಕಂಬಳಿ
ಹಾವಾಗಿ ಹರಿದಾಡೊ ಕಂಬಳಿ
ಬೆಂಕ್ಯಾಗಿ ಉರಿವೂದು ಕಂಬಳಿ
ಚೇಳಾಗಿ ಚಿಮ್ಮೂದು ಕಂಬಳಿ’
ಈ ಹಾಡು ಅಮೋಘಸಿದ್ಧನ ಕಂಬಳಿಯ ಮಹಿಮೆಯನ್ನು ಅವನ ಸಿದ್ಧಿಯನ್ನು ಅರಿವಾಗಿಸುತ್ತದೆ. ಅಮೋಘಸಿದ್ಧನು ಮುಮ್ಮಟಗುಡ್ಡದಲ್ಲಿ ಸೂತ್ರ ಕೋಲುಗಳಿಲ್ಲದೆ ಅಂತರಡೇರೆ ನಿರ್ಮಿಸಿ ಸಿದ್ಧಿಸಾಧನೆ ಮಾಡುವುದು, ಏರುವ ಅಲೆಗಳ ಮೇಲೆ ಕಂಬಳಿ ಹಾಸಿ ಭಂಡಾರದ ಭರಣಿಯಿಟ್ಟು ನದಿ ದಾಟುವುದು ಇವೆಲ್ಲ ಇವನ ಶಕ್ತಿಗೆ ಭಕ್ತಿಗೆ ನಿದರ್ಶನಗಳು.

ಹೀಗೆ ಭವ್ಯ ಪರಂಪರೆಯುಳ್ಳ ಅಮೋಘಸಿದ್ದನ ಪುರಾಣವನ್ನು ದಿಮ್ಮು ಇಡಿಸಿ ಹಾಡಿಸಲಾದ ಭಕ್ತರ ಮನೆತನಕ್ಕೆ ಹರಕೆಯ ಹಾಡಿನ ರೂಪದಲ್ಲಿ ಆಶೀರ್ವದಿಸುವ ಪರಂಪರೆ ಬೆಳೆದುಬಂದಿದೆ.

‘ನಿನ್ನ ಭುವಿಯ ಒಳಗ್ಯಾನು
ಹಾಗಲ ಬಳ್ಯಾಗಿ ಹಬ್ಬಲಿ
ಕುಂಬಳ ಕುಡಿಯೊಂದು ಚಿಗುರಲಿ
ಕುಡಿಗೊಂದು ಮಿಡಿಗಳಾಗಲಿ’
ಹೀಗೆ ಬೇಡಿಕೆ ಮತ್ತು ಈಡೇರಿಕೆಗಳು ಫಲಿತಗೊಂಡಾಗ ಭಕ್ತರ ಹೃದಯ ಪರವಶವಾಗಿ ಧನ್ಯತೆಯ ಭಾವ ಮೂಡುತ್ತದೆ. ಇದೊಂದು ಮುಂದಿನ ತಲೆಮಾರಿನ ಸಂಸ್ಕೃತಿಯ ಅಧ್ಯಯನಕ್ಕೋ, ಸಂಶೋಧನೆಗೋ ಒದಗಬಲ್ಲ ಸಂಗ್ರಹಯೋಗ್ಯ ಸ್ವತ್ತಾಗಿದೆ.

‍ಲೇಖಕರು Admin

October 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: