ತೇಜಾವತಿ ಎಚ್ ಡಿ ಓದಿದ ‘ಅತ್ತಿಮಬ್ಬೆ’

ಅವಸಾನದ ಅಂಚಿನಲ್ಲಿದ್ದ ಜಿನಧರ್ಮದ ಪತಾಕೆ ಹಾರಿಸಿದ್ದು ಚಾರಿತ್ರ್ಯ ಮೇರು ಅತ್ತಿಮಬ್ಬೆ…

ತೇಜಾವತಿ ಎಚ್ ಡಿ

ಕಾದಂಬರಿಕಾರರಾದ ಬಾಳಾಸಾಹೇಬ ಲೋಕಾಪುರ ಅವರು ಬರೆದಿರುವ “ಚಾರಿತ್ರ ಮೇರು ಅತ್ತಿಮಬ್ಬೆ” ಕಾದಂಬರಿಯು 10ನೇ ಶತಮಾನದ ಐತಿಹಾಸಿಕ ವಸ್ತುವನ್ನು ಆಧರಿಸಿದ್ದು. ಇದು ಅತ್ತಿಮಬ್ಬೆಯನ್ನು ಕುರಿತು ಈವರೆಗೆ ಬರೆದಿರುವ ಎರಡನೆಯ ಕಾದಂಬರಿ.

“ಚಾರಿತ್ರ ಮೇರು” ಎನ್ನುವ ಬಿರುದು ರನ್ನ ಕವಿ ಕೊಟ್ಟದ್ದು. ವೀರತೆ ಹಾಗೂ ವೈರಾಗ್ಯದ ಮೂರ್ತಿಯಾಗಿದ್ದ ಅತ್ತಿಮಬ್ಬೆಗೆ ಮಹಿಳಾ ಸೇನೆಯನ್ನು ತರಬೇತುಗೊಳಿಸಿದ ಮೊದಲ ಕನ್ನಡ ನಾರಿ ಎಂಬ ಹೆಗ್ಗಳಿಕೆಯಿದೆ. ಹತ್ತು ಮತ್ತು ಹನ್ನೊಂದನೆಯ ಶತಮಾನದಲ್ಲಿ ಜೈನ ಧರ್ಮಕ್ಕೊದಗಿದ ಬಿಕ್ಕಟ್ಟಿನಿಂದ ರಾಜಾಶ್ರಯ ತಪ್ಪಿದ್ದ ಸಂದರ್ಭದಲ್ಲಿ ಪುನಃ ಜೈನ ಧರ್ಮದ ಪತಾಕೆಯನ್ನು ಹಾರಿಸಿ ಅಸ್ತಿತ್ವವನ್ನು ಉಳಿಸಿದ್ದು ಅತ್ತಿಮಬ್ಬೆ. ತನ್ನ ಜೀವಮಾನದ ಉದ್ದಕ್ಕೂ ಸಾಹಿತ್ಯ, ಕಲೆ, ವಾಸ್ತುಶಿಲ್ಪಗಳಿಗೆ ಪ್ರೋತ್ಸಾಹ ನೀಡಿದಳು. ರನ್ನನ ಕೀರ್ತಿ ಜಗತ್ತಿಗೆ ಬೆಳಗುವಲ್ಲಿ ಕಾರಣರಾದ ಇಬ್ಬರು ಮಹಾನ್ ಚೇತನಗಳೆಂದರೆ ಅತ್ತಿಮಬ್ಬೆ ಮತ್ತು ಚಾವುಂಡರಾಯ. ಎಂ ಎಂ ಕಲಬುರ್ಗಿಯವರ “ಸತ್ಯದ ವಾಸ್ತವ ರೂಪ ಇತಿಹಾಸ ಹಾಗೂ ಸತ್ಯದ ಕಲಾ ರೂಪ ಸಾಹಿತ್ಯ” ಎನ್ನುವ ಮಾತು ಇಲ್ಲಿ ಋಜುವಾತಾಗಿದೆ.

ಕಾದಂಬರಿಯು ಆರಂಭದಲ್ಲೇ ತೆರೆದುಕೊಳ್ಳುವ ಪಾತ್ರ ನಾಗಮಯ್ಯ ಮತ್ತವನ ಕುದುರೆ ಕಾದಂಬರಿಕಾರರ ವೀರಕೇಸರಿ ಅಮಟೂರು ಬಾಳಪ್ಪನನ್ನು ಮತ್ತೊಮ್ಮೆ ನೆನಪಿಸಿ “ಅಹಿಂಸೆಯೇ ನೆಲದ ಧರ್ಮ”ವೆಂದು ಸಾರುತ್ತದೆ. ನಾಗಮಯ್ಯನ ‘ಅಶ್ವಾಂಗದ’ ಕುದುರೆಯ ಮೂಲಕ “ನನ್ನ ದೊರೆ ಮೋಡವನ್ನು ಕಂಡು ಸಂಭ್ರಮಿಸುವ ನವಿಲಿನ ಗುಣದವರು” ಎಂದು ಮಾತನಾಡಿಸುವ ಕೃತಿಯ ಕರ್ತೃ ನೆಲದ ಭಕ್ತಿ, ಪರಿಸರದೊಂದಿಗಿನ ಒಡನಾಟ, ಜೀವನ ತೃಪ್ತಿ, ಅಹಿಂಸಾ ಗುಣಗಳು ಅಧ್ಯಾತ್ಮಿಕ ಒಲವು ಆದರ್ಶ ಮೌಲ್ಯಗಳು ಎಲ್ಲವನ್ನೂ ಕಟ್ಟಿಕೊಟ್ಟಿದ್ದಾರೆ. ನಾಗಮಯ್ಯನ ಇಬ್ಬರು ಮಕ್ಕಳಲ್ಲಿ ಮೊದಲ ಮಗ ಮಲ್ಲಪಯ್ಯನ ಕೈಹಿಡಿದ ಸೊಸೆ ಒಬ್ಬ ಜಿನಭಕ್ತೆ. ಸಂಸ್ಕಾರವಂತ ವಧುವಾಗಿ ಮಹಾ ಶೂರನಾದ ಮಲ್ಲಪಯ್ಯನಿಗೆ ಆದರ್ಶ ಮಡದಿಯಾಗಿ ಸಂಸಾರ ತೂಗಿಸುತ್ತಾಳೆ. ಕಾದಂಬರಿಯಲ್ಲಿ ಅಪ್ಪಕಬ್ಬೆ ಹಾಗೂ ಮಲ್ಲಪಯ್ಯರ ಫ್ಲಾಶ್ಬ್ಯಾಕ್ ಸ್ಟೋರಿ ಒಂದು ರೀತಿಯ ರಮಣೀಯತೆಯನ್ನು ನೀಡುತ್ತದೆ. ಇವರಿಬ್ಬರ ಸುಖ ದಾಂಪತ್ಯಕ್ಕೆ ಸಾಕ್ಷಿಯಾಗಿ ಜನಿಸಿದ ಅತ್ತಿಮಬ್ಬೆ ಕಾದಂಬರಿಯ ನಾಯಕಿ. ಅವಳು ತಾಯಿಯ ಸಂಸ್ಕಾರ ತಂದೆಯ ಜ್ಞಾನ ಸಂಪಾದನೆಗಳನ್ನು ಮೈಗೂಡಿಸಿಕೊಂಡು ತನ್ನ ಇಡೀ ಸಮಯವನ್ನು ಅದಕ್ಕಾಗಿ ಮೀಸಲಿರಿಸಿದ್ದಳು. ಎಳವೆಯಲ್ಲಿಯೇ ಅವಳ ನಡವಳಿಕೆಗಳಲ್ಲಿ ಗಂಭೀರತೆ ಪ್ರಬುದ್ಧತೆಗಳು ಬೆರೆತುಹೋಗುತ್ತವೆ. ಇನ್ನು ಧರ್ಮದ ಆಚರಣೆಯಲ್ಲಿ ಧರ್ಮರಾಜನಿಗೆ ಸರಿಸಮನಾಗಿದ್ದ ಅವಳ ಚಿಕ್ಕಪ್ಪ ಪೊನ್ನಮಯ್ಯನೊಡನೆ ಹೆಚ್ಚು ಸಲಿಗೆಯಿಂದ ಇರುವ ಅತ್ತಿಮಬ್ಬೆ ಚಿಕ್ಕಂದಿನಲ್ಲೇ ಜೈನ ಧರ್ಮದ ಜಿಜ್ಞಾಸೆಗೆ ಸಂಬಂಧಿಸಿದಂತೆ ವಯಸ್ಸಿಗೂ ಮೀರಿದ ಪ್ರಶ್ನೆಗಳನ್ನು ಕೇಳುವುದರ ಮೂಲಕ ಎಲ್ಲರನ್ನು ಮೂಕ ವಿಸ್ಮಿತರನ್ನಾಗಿ ಮಾಡುತ್ತಾಳೆ. ಚಿಕ್ಕಪ್ಪ ತಂದಿದ್ದ ಬೋರಂಗಿಯನ್ನು ಮರಳಿ ಗಿಡಮರಗಳ ಬಳಿ ಬಿಡಿಸುವ ಪ್ರಸಂಗಗಳು ಅವಳ ಅಹಿಂಸಾ ಮನೋಧರ್ಮವನ್ನು ಸಾಕ್ಷೀಕರಿಸುತ್ತವೆ. ಅವಳ ಈ ಗುಣವನ್ನು ಪೊನ್ನ ಕವಿಯೂ ಮೆಚ್ಚಿಕೊಂಡಿರುತ್ತಾನೆ. ಅತ್ತಿಮಬ್ಬೆ ಮತ್ತು ಗುಂಡಮಬ್ಬೆ ಸಹೋದರಿಯರು ತಮ್ಮ ಚಿಕ್ಕಪ್ಪನಿಂದಲೇ ಯುದ್ಧ ಕಲೆಗಳನ್ನು ಕರಗತ ಮಾಡಿಕೊಂಡು ಶಾಸ್ತ್ರ ಪಾಂಡಿತ್ಯವನ್ನು ಅಭಯಕೀರ್ತಿ ಗುರುಗಳಿಂದ ಪಡೆಯುತ್ತಾರೆ. 

ಚಾಲುಕ್ಯರ ಆಹವಮಲ್ಲ ತೈಲಪನ ದಂಡನಾಯಕನಾಗಿದ್ದ ಮಲ್ಲಪಯ್ಯ ಹಾಗೂ ಸೋದರ ಪೊನ್ನಮಯ್ಯರು ಪೊನ್ನ ಕವಿಯಿಂದ “ಶಾಂತಿನಾಥ ಪುರಾಣ”ವನ್ನು ಬರೆಸಿ ಕನ್ನಡಾಂಬೆಗೆ ಬಾಗಿನ ಅರ್ಪಿಸುವುದರ ಮೂಲಕ ಕನ್ನಡಕ್ಕೊಂದು ಮಹತ್ವದ ಕೊಡುಗೆ ನೀಡಿದ್ದಾರೆ. ಆಗ ಅದಾಗಲೇ ಪಂಪನ “ಅದಿಪುರಾಣ”ವು ಭರತ ಬಾಹುಬಲಿಯರನ್ನು ಕೇಂದ್ರೀಕರಿಸಿ ಅಹಿಂಸೆಯ ಮಹತ್ವವನ್ನು ಸಾರುವ ಕೃತಿಯಾಗಿ ಹೊರ ಹೊಮ್ಮಿತ್ತು. ಪೊನ್ನ ಕವಿಯ ನಿತ್ಯದ ಬರಹದ ನಂತರ ಗೋಷ್ಠಿ ಕೇಳಿ ಖುಷಿ ಪಡುತ್ತಿದ್ದ ಮನೆಯ ಸದಸ್ಯರಲ್ಲಿ ಅತ್ತಿಮಬ್ಬೆಯೂ ಮುಂಚೂಣಿಯಲ್ಲಿದ್ದಳು. ಇದು ಅವಳ ಸಾಹಿತ್ಯಾಸಕ್ತಿಗೆ ಉದಾಹರಣೆ.

ಕಾದಂಬರಿಯು ಐತಿಹಾಸಿಕ ವಸ್ತುವನ್ನು ಆಧರಿಸಿರುವುದರಿಂದ ಅರಸರ ಆಳ್ವಿಕೆ, ಯುದ್ಧ, ರಕ್ಷಣೆ ಮೊದಲಾದ ಅಂಶಗಳನ್ನು ಅಗತ್ಯಕ್ಕೆ ತಕ್ಕಂತೆ ಅಲ್ಲಲ್ಲಿ ವಿವರಿಸುತ್ತ ಸಾಗುತ್ತದೆ. ರಾಮ ಲಕ್ಷ್ಮಣರಂತಿದ್ದ ಸಹೋದರರು ರಾಜ್ಯಕ್ಕೆ ಕಿರೀಟದಂತಿದ್ದು ಮಾತೃಭೂಮಿಯ ಸೇವೆಗಾಗಿ ಸದಾ ಕಂಕಣಬದ್ಧರಾಗಿರುವಾಗಲೇ ಪೊನ್ನಮಯ್ಯ ತನ್ನ ಅತಿಯಾದ ಆತ್ಮವಿಶ್ವಾಸ ಹಾಗೂ ಧೈರ್ಯದಿಂದ ಗೋವಿಂದನ ಸಂಚಿಗೆ ಬಲಿಯಾಗುವುದು ವಿಷಾದವನ್ನುಂಟು ಮಾಡುತ್ತದೆ. ಪೊನ್ನಮಯ್ಯನ ಮರಣವು ಅತ್ತಿಮಬ್ಬೆಯ ಯುದ್ಧವನ್ನು ಧಿಕ್ಕಕರಿಸಲು ಪ್ರಬಲ ಕಾರಣವಾಗುತ್ತದೆ. ನಾಗಮಯ್ಯನು ಸಲ್ಲೇಖನ ವ್ರತದ ನಿರೀಕ್ಷೆಯಲ್ಲಿದ್ದಾಗ ಪುಂಗನೂರಿಗೆ ಆಗಮಿಸುವ ತರುಣ ವೀರ ನಾಗದೇವನಿಗೆ ಅತ್ತಿಮಬ್ಬೆಯನ್ನು ಮದುವೆ ಮಾಡುವ ಆಲೋಚನೆ, ಮುಂದೆ ನಡೆಯುವ ಎಲ್ಲ ಪ್ರಸಂಗಗಳು ಒಂದಕ್ಕೊಂದು ಪೂರಕವಾಗಿ ಘಟಿಸುತ್ತವೆ. ಇಲ್ಲಿ ನಾಗದೇವ ಶೈವ ಪರಂಪರೆ ಅತ್ತಿಮಬ್ಬೆ ಜೈನ ಪರಂಪರೆಯವರಾದರೂ ಜೀವನ ನಡೆಸಲು ಕೇವಲ ಧರ್ಮಾಚರಣೆ ತೊಡಕಾಗದು ಎಂಬ ನಿಲುವು ಧರ್ಮಾತೀತವಾದದ್ದು.

ಅತ್ತಿಮಬ್ಬೆಯ ಮದುವೆ ಪ್ರಸ್ತಾಪವಾದಾಗ ಚಿಕ್ಕಂದಿನಿಂದಲೂ ಅಡಿ ಬೆಳೆದು ಬಿಟ್ಟಿರಲಾಗದ ಕಾರಣಕ್ಕೆ ತಂಗಿ ಗುಂಡಮಬ್ಬೆಯನ್ನೂ ಮದುವೆ ಮಾಡಿಕೊಳ್ಳುವಂತೆ ಕರಾರಿಡುತ್ತಾಳೆ. ಇಂತಹ ಪ್ರಸಂಗಗಳು ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿದ್ದದ್ದು ಚರಿತ್ರೆಯ ಪುಟಗಳಿಂದ ತಿಳಿಯುತ್ತದೆ. ಮಾಸ್ತಿಯವರ ಮದಲಿಂಗನ ಕಣಿವೆ ಕಥೆಯಲ್ಲಿಯೂ ಇದೇ ರೀತಿಯ ಪ್ರಸಂಗ ನಡೆಯುವುದು ನೆನಪಾಗುತ್ತದೆ. ಹೊಯ್ಸಳರ ರಾಜ ವಿಷ್ಣುವರ್ಧನನನ್ನು ಮದುವೆಯಾಗುವ ಸಂದರ್ಭ ಬಂದಾಗ ಶಾಂತಲೆಯು ಕೂಡ ತನ್ನ ಜೀವದ ಗೆಳತಿ ಲಕ್ಷ್ಮಿಯನ್ನೂ ಮದುವೆ ಮಾಡಿಸುತ್ತಾಳೆ. ಆಗ ಬಹುಪತ್ನಿತ್ವ ರಾಜ ವಂಶಜರಲ್ಲಿ ಸರ್ವೇ ಸಾಮಾನ್ಯವಾದ ವಿಚಾರ. ಹೀಗಾಗಿ ಆಂಧ್ರದ ಕುಲಾಂಗನೆಯರು ಕನ್ನಡದ ನೆಲ ಮಾನ್ಯಖೇಟಕ್ಕೆ ಕಾಲಿಟ್ಟ ಸುಸಂದರ್ಭ ಅತ್ತಿಮಬ್ಬೆ ತನ್ನೊಡನೆ ಶಾಂತಿನಾಥ ಪುರಾಣವನ್ನು ಹೊತ್ತು ತರುವುದು ಅವಳ ಅಭಿರುಚಿ ಆಸಕ್ತಿಗಳಿಗೆ ಹಿಡಿದ ಕನ್ನಡಿ.

ಇದರ ಜೊತೆಗೆ ಜಿನವಲ್ಲಭ ಅಬ್ಬಲಬ್ಬೆ ದಂಪತಿಗೆ ಅದೃಷ್ಟದ ಮಗುವಾಗಿ ಜನಿಸುವ ರನ್ನನ ಕತೆ ಆರಂಭವಾಗುತ್ತದೆ. ರನ್ನ ಒಂದು ಮಹತ್ಕಾರ್ಯಕ್ಕಾಗಿಯೇ ಜನ್ಮ ತಳೆದವನಾಗಿ ಪಾರ್ಶ್ವಜಿನ ಭಟಾರ ಗುರುಗಳ ಮಾರ್ಗದರ್ಶನದಂತೆ ಚಾವುಂಡರಾಯನನ್ನು ಸಂಧಿಸಿ ಮುಂದೆ ಹಲವು ಸತ್ಕಾರ್ಯಗಳಿಗೆ ಇವರ ಗೆಳೆತನ ಕಾರಣವಾಗುತ್ತದೆ. ಅಲ್ಲಿಂದ ಅಜಿತ ಸೇನಾಚಾರ್ಯರ ಭೇಟಿ ರನ್ನನ ಸಾಹಿತ್ಯ ಪೋಷಣೆಗೆ ಮತ್ತಷ್ಟು ಅವಕಾಶಗಳನ್ನು ಒದಗಿಸುತ್ತದೆ. ಅಂದಿನ ರಾಜಾಶ್ರಯಗಳು ಕಲೆ ಸಾಹಿತ್ಯಗಳ ನಿಜ ಪೋಷಕರಾಗಿ ದೊರಕಿದ್ದು ಕನ್ನಡ ಸಾಹಿತ್ಯ ಪರಂಪರೆಗೆ ಅವರ ಕೊಡುಗೆಗಳು ಸ್ಮರಣೀಯ. ಜೈನ ಧರ್ಮ ಅಹಿಂಸಾ ತತ್ವದ ಮೇಲೆ ರೂಪಿತವಾಗಿರುವುದರಿಂದ ನಾವಿಲ್ಲಿ ಎಲ್ಲರಲ್ಲೂ ಕೊನೆಗೆ ವೈರಾಗ್ಯ, ಸಮಾಜಮುಖಿ ಮನಸ್ಥಿತಿಯನ್ನು ಕಾಣಬಹುದು. ಅದಕ್ಕೆ ನಾಗಮಯ್ಯ ಚಾವುಂಡರಾಯನು ಹೊರತಲ್ಲ. ಒಂದು ಹಂತದಲ್ಲಿ ವೈರಾಗ್ಯ ಮೂಡಿ ಜಗತ್ತಿಗೆ ಏನಾದರೂ ಕೊಡುಗೆಯನ್ನು ನೀಡುವ ಯೋಚನೆಯಲ್ಲಿ ಮುಳುಗಿ ಅಂತಿಮವಾಗಿ ತನ್ನ ತಾಯಿ ಕಾಳಲದೇವಿಯ ಅಭಿಲಾಷೆಯಂತೆ ಚಾವುಂಡರಾಯನು ‘ಕಳ್ವಪ್ಪು’ವಿನಲ್ಲಿ ಇದ್ದ ದೊಡ್ಡಬೆಟ್ಟ ಮತ್ತು ಚಿಕ್ಕಬೆಟ್ಟಗಳಿಗೆ ಮರು ನಾಮಕರಣ ಮಾಡಿ ಇಂದ್ರಗಿರಿ ಹಾಗೂ ಚಂದ್ರಗಿರಿಯನ್ನಾಗಿಸಿ ಅಲ್ಲಿ ವಿಶ್ವದ ಶಾಂತಿಯ ಸಂಕೇತವಾಗಿ ಬೃಹತ್ ಗೊಮ್ಮಟನ ಮೂರ್ತಿಯನ್ನು ಅರಿಷ್ಠನೇಮಿಯ ಮೂಲಕ ಕೆತ್ತಿಸಿ ಅನಾವರಣಗೊಳಿಸುತ್ತಾನೆ. ಹಾಗೂ ತನ್ನ ಆತ್ಮೀಯ ಸ್ನೇಹಿತ ಶ್ರೀ ಕವಿರನ್ನ ಹಾಗೂ ಚಾವುಂಡರಾಯರ ಹಸ್ತಾಕ್ಷರಗಳನ್ನು ಮೂಡಿಸುತ್ತಾರೆ. ಇಲ್ಲಿ ಸಣ್ಣದಾಗಿ ಬರುವ ಗುಳಕಾಯಜ್ಜಿಯ ಕಥೆಯು ಶ್ರೀರಾಮನ ಭಕ್ತಿಗೆ ಪಾತ್ರವಾದ ಅಳಿಲು ಸೇವೆಯನ್ನು ನೆನಪಿಸುತ್ತದೆ.

ಕ್ಷಾತ್ರಯುಗದ ಸ್ಥಿತಿಗತಿಯ ಯುದ್ಧದಲ್ಲಿ ರಾಜಲಕ್ಷ್ಮಿ ಒಲಿಯುವ ರಾಜನು ಸೋತ ರಾಜನ ಹೆಣ್ಣು ಮಕ್ಕಳನ್ನು ಮದುವೆಯಾಗಿ ಕರೆತರುವ ಪದ್ಧತಿ ಕೆಲವೊಮ್ಮೆ ಒತ್ತಾಯಪೂರ್ವಕವು ಆಗಿರುತ್ತವೆ ಎಂಬುದನ್ನು ಪುಷ್ಠಿಕರಿಸುವುದು ತೈಲಪ ಹಾಗೂ ಜೀಕಬ್ಬೆಯ ಮದುವೆ. ಯಾವುದೇ ಕದನಗಳು ಕ್ಷಣಿಕ ವಿಜಯದ ಸುಖವನ್ನು ನೀಡಿದರೂ ಕೊನೆಗವು ದುಃಖ, ವಿಷಾದ, ಖಿನ್ನತೆ, ವಿರಕ್ತತೆ, ನಶ್ವರತೆಯತ್ತ ಮುಖ ಮಾಡುತ್ತವೆ. ತೈಲಪನಿಗೆ 16 ಬಾರಿ ಕ್ಷಮೆ ನೀಡಿದ ಮಂಜ ರಾಜನನ್ನು ಹೊಂಚು ಹಾಕಿ ಸೆರೆಹಿಡಿಯುವುದು, ತೈಲಪನ ತಂಗಿ ಕುಮುದಿನಿಗೆ ಮಂಜರಾಜನ ಮೇಲೆ ಪ್ರೇಮಾಂಕುರವಾಗುವುದು ಮಂಜರಾಜನನ್ನು ಪಾರು ಮಾಡಲು ಕುಮುದಿನಿ ತನ್ನ ದಾಸಿಯೊಂದಿಗೆ ಮಾಡುವ ಯೋಜನೆಯೇ ಮುಳುವಾಗಿ ಮಂಜರಾಜನ ಶಿರಚ್ಚೇದನದೊಂದಿಗೆ ಸಮಾಪ್ತಿಯಾಗುತ್ತದೆ. ಇದು ರಾಜಸತ್ತೆಯ ಪರಮಾಧಿಕಾರದ ಪ್ರತಿಧ್ವನಿಯಾದರೆ ಜೀವಪರ ಧ್ವನಿಯಾಗಿ ಪ್ರಶ್ನೆ ಎತ್ತುವ ಅತ್ತಿಮಬ್ಬೆ ಮತ್ತೊಂದು ಕಡೆಗೆ ಕಾಣುತ್ತಾಳೆ. ಕೊನೆಗಲ್ಲಿ ಸಿಗುವ ಸಮರ್ಥನೆ ನೆಲದ ರಕ್ಷಣೆ. ರಾಜಸತ್ತೆಯಲ್ಲಿ ಹೆಣ್ಣುಮಕ್ಕಳಿಗೆ ಪುರಸ್ಕಾರವಿಲ್ಲದಿದ್ದನ್ನು ಕುಮುದಿನಿ ಪಾತ್ರ ಕಾಣಿಸುತ್ತದೆ.

ಯುದ್ದೋನ್ಮಾದ ತೀವ್ರವಾಗಿದ್ದ ಕಾಲವದು. ನಾಗದೇವ ಸಾಲು ಸಾಲು ವಿಜಯ ಸ್ಥಾಪಿಸುತ್ತಿರುವಾಗ ಅತ್ತಿಮಬ್ಬೆಗೆ ಅಣ್ಣಿಗದೇವನ ಜನನವಾಗುತ್ತದೆ. ಅವಳ ಶಾಂತಿ ಸ್ಥಾಪನೆಯ ಉದ್ದೇಶ ಸದಾ ತುಡಿಯುತ್ತಲೇ ಇರುವ ವೇಳೆ ರಾಜ್ಯದ ತುಂಬೆಲ್ಲಾ ಜೀನಾಲಯಗಳ ಸ್ಥಾಪನೆಗೆ ಮುಂದಾದಳು. ಹಣತೆ ನಂದುವ ಮುನ್ನ ಪ್ರಕಾಶಮಾನವಾಗಿ ಉರಿಯುವಂತೆ ನಾಗದೇವನು ಔನ್ನತ್ಯವನ್ನು ಕಂಡು ಅಸುನೀಗುತ್ತಾನೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಆಗಿನ ಕಾಲದ ಸಾಮಾಜಿಕ ಪದ್ಧತಿಯಂತೆ ಸತಿ ಹೋಗುವುದಕ್ಕಾಗಿ ಅಕ್ಕ ತಂಗಿಯರ ನಡುವೆ ಅರ್ಥಪೂರ್ಣ ಸಂವಾದ ನಡೆದು ಕೊನೆಗೆ ಗುಂಡಮಬ್ಬೆ ಈ ಕರ್ತವ್ಯವನ್ನು ಪೂರ್ಣಗೊಳಿಸುತ್ತಾಳೆ. ಹುಟ್ಟಿನಿಂದ ಜೊತೆಯಲ್ಲಿದ್ದು ಅಗಲಿ ಇರಲಾಗದ ಬಂಧಕ್ಕೆ ಸಾಕ್ಷಿಯಾಗಿ ನಾಗದೇವನ ಕೈಹಿಡಿದ ಮಡದಿಯರಿಂದು ಕಾಲನ ಅಣತಿಯಂತೆ ಅಗಲಲೇಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಚರಿತ್ರೆಯಲ್ಲಿ ಇಂತಹ ಪದ್ಧತಿಗಳ ನೆಪದಲ್ಲಿ ಆಹುತಿಯಾದ ಜೀವಗಳೆಷ್ಟೋ ಅದರಿಂದಲೇ ಮುಕ್ತಿ ಪಡೆದವರೆಷ್ಟೋ ಕಂಡವರಾರು.. ಗುಂಡಮಬ್ಬೆಯ ಸಹಗಮನಕ್ಕೆ ಪೂರಕವಾಗಿ ಕಾದಂಬರಿಕಾರರು ಕಾರಣ ಪರಿಣಾಮಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಅಲ್ಲಿ ಜೈನ ಶಾಸ್ತ್ರಕ್ಕಿಂತಲೂ ಸಾಮಾಜಿಕ ಕಟ್ಟಳೆಗಳು ಹೆಚ್ಚು ಜಾಗೃತವಾಗಿದ್ದವು ಎಂಬುದನ್ನು ನಾವು ಮನಗಾಣಬಹುದು. ಮಗುವಿನ ಪಾಲನೆ ಪೋಷಣೆಗಾಗಿ ಬದುಕುಳಿದ ಅತ್ತಿಮಬ್ಬೆ ತನ್ನ ಇಡೀ ಬದುಕನ್ನು ತೀವ್ರ ಕಠಿಣ ವ್ರತಗಳ ಪಾಲನೆಯಲ್ಲಿ, ಪುಸ್ತಕಗಳ ಓದು, ಅನೇಕ ಧಾರ್ಮಿಕ ಸಾಮಾಜಿಕ ಕಾರ್ಯಗಳನ್ನು ಮಾಡುವುದರ ಮೂಲಕ ಹೆಸರಾಗಿದ್ದಾಳೆ. ಚರಿತ್ರೆಯಲ್ಲಿ ನಮಗೆ ಇಂತಹದ್ದೇ ಪರಿಸ್ಥಿಯಲ್ಲಿ ರಾಜ್ಯ ರಕ್ಷಣೆಗಾಗಿ ಸತಿ ಹೋಗದೆ ಉಳಿದ ಅಹಿಲ್ಯಾ ಬಾಯಿ ಹೋಳ್ಕರ್ ಕೂಡ ಈ ಸಂದರ್ಭದಲ್ಲಿ ನೆನಪಾಗುತ್ತಾಳೆ. ಬಹುಮುಖ್ಯವಾಗಿ ಶಾಂತಿನಾಥ ಪುರಾಣವನ್ನು ನೂರಾರು ಲಿಪಿಕಾರರಿಂದ ಪ್ರತಿ ಮಾಡಿಸಿದ ಪುಣ್ಯ ಕಾರ್ಯ ಅತ್ತಿಮಬ್ಬೆಯದು. 

ಇನ್ನು ರಾಜಾಶ್ರಯದ ನೆರಳಿನಲ್ಲಿದ್ದ ರನ್ನನ ಅನಿವಾರ್ಯ ಅತಂತ್ರ ಸ್ಥಿತಿ ನವ ದಾರಿಯ ಅನ್ವೇಷಣೆ ಎಲ್ಲವೂ ಸಹಜವಾಗಿ ಮೂಡಿಬಂದಿವೆ. ಅದೃಷ್ಟವೆನ್ನುವಂತೆ ಸುಯೋಗವೊಂದು ಬಂದೊದಗಿದ ಐತಿಹಾಸಿಕ ಘಳಿಗೆ ಗೊಮ್ಮಟನ ಮಹಾ ಮಸ್ತಕಾಭಿಷೇಕದಲ್ಲಿ ಮೇರು ವ್ಯಕ್ತಿತ್ವಗಳ ಮಿಲನವಾಗುತ್ತದೆ. ಈ ವೇಳೆ ಶ್ರವಣಬೆಳಗೊಳಕ್ಕೆ ಆ ಹೆಸರು ಬಂದ ಐತಿಹ್ಯವು ಅರ್ಥಪೂರ್ಣ. ಚಾವುಂಡರಾಯನ ಅರಿಕೆಯಿಂದ ರನ್ನನಿಗೆ ಅತ್ತಿಮಬ್ಬೆಯ ಆಶ್ರಯ ದೊರೆತದ್ದು ರನ್ನನ ಬದುಕಿನ ತಿರುವು. ಮುಂದೆ ಶಿರೂರಿನ ಬಸದಿಗೆ ಒಂದು ಶಾಸನ, ನಾಗದೇವನ ಹುಟ್ಟೂರಾದ ಸಿಂಧುವಿಗೆಯಲ್ಲಿನ ನಾಗೇಶ್ವರ ದೇವಾಲಯ ಕಟ್ಟಿಸಿ ಅಲ್ಲೊಂದು ಶಾಸನ ಬರೆಸುವ ಅತ್ತಿಮಬ್ಬೆ ಇಂತಹ ಸಾವಿರಾರು ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಾಳೆ. ರನ್ನನಿಗೆ ಅದಾಗಲೇ ಶಾಂತಿ ಎಂಬ ಹೆಂಡತಿಯಿದ್ದು ಅನಿರೀಕ್ಷಿತವಾಗಿ ಭೇಟಿಯಾಗುವ ಜಕ್ಕಿಯನ್ನು ಮದುವೆಯಾಗಲು ಅತ್ತಿಮಬ್ಬೆಯೂ ಒಪ್ಪಿಗೆ ಸೂಚಿಸಿದ್ದು ಸರಳವೆನಿಸಿದರೂ ಆಯಾ ಕಾಲಘಟ್ಟದ ಸಾಮಾಜಿಕ ವ್ಯವಸ್ಥೆಗಳ ಒಪ್ಪಿತ ಮಾದರಿಯಾಗಿ ತೋರುತ್ತದೆ. ಇನ್ನು ಜಕ್ಕಿಯು ಹೆಣ್ಣುಮಕ್ಕಳಿಗೆ ಬಿಗುವಿನ ವಾತಾವರಣದಲ್ಲೇ ತಾನೇ ಮೊದಲು ಪ್ರೇಮ ನಿವೇದನೆ ಮಾಡುವ ರೀತಿ ವ್ಯತಿರಿಕ್ತವಾಗಿದೆ. ಮತ್ಸರವಿಲ್ಲದ ಆದರ್ಶ ಸಂಸಾರದಲ್ಲಿ ರನ್ನನಿಗೆ ಮನೆಯೂ ಪೂರಕ ವಾತಾವರಣ ನೀಡಿತ್ತು.

ಮುಂದೆ ಯುದ್ಧದ ಸಂದರ್ಭದಲ್ಲಿ ಅತ್ತಿಮಬ್ಬೆಯಿಂದ ಕೆಲವು ಪವಾಡಗಳು ನಡೆದವೆಂದು ಪ್ರತೀತಿಗಳು ಹರಿದಾಡಿ ಅವಳ ವ್ಯಕ್ತಿತ್ವಕ್ಕೆ ದೈವತ್ತ್ವವನ್ನು ಕಲ್ಪಿಸುತ್ತವೆ. ಅವಳು ತನ್ನ ಸಂಪತ್ತೆಲ್ಲವನ್ನು ಜನಪರ ಕಾರ್ಯಗಳಿಗೆ ಬಳಸಿದ್ದಳು. ತನ್ನ ನೋಡಲು ಬರುವ ಭಕ್ತರಿಗಾಗಿ ಧರ್ಮಛತ್ರ ಕಟ್ಟಿಸಿ ಭೋಜನ ವ್ಯವಸ್ಥೆ ಮಾಡಿಸಿದ್ದಳು, ಹಳೆಯ ಬಸದಿಗಳ ಜೀರ್ಣೋದ್ದಾರ, ದಾನ ದತ್ತಿಗಳು, ಕಲೆ ಸಾಹಿತ್ಯಗಳಿಗೆ ಹೇರಳ ಪ್ರೋತ್ಸಾಹ ಜೈನಧರ್ಮ ಪೋಷಣೆ ಹೀಗೆ ಹತ್ತು ಹಲವು ಕಾರ್ಯಗಳ ಅನುಷ್ಠಾನದ ಮೂಲಕ ಚರಿತ್ರೆಯಲ್ಲಿ ಚಿರಸ್ಥಾಯಿಯಾದಳು. ರನ್ನನು ತನ್ನ ಆಶ್ರಯದಾತ ಸತ್ಯಾಶ್ರಯ ಇರಿವಬೇಡಂಗನನ್ನು ಭೀಮನೊಂದಿಗೆ ಸಮೀಕರಿಸಿ ಬರೆದ “ಸಾಹಸ ಭೀಮ ವಿಜಯ” ಕೃತಿಗೆ ಕವಿ ಚಕ್ರವರ್ತಿ ಬಿರುದು ದೊರೆಯುವುದರ ಜೊತೆಗೆ ಸಾಹಿತ್ಯ ಲೋಕಕ್ಕೆ ಒಂದು ಅಮೂಲ್ಯ ಕೊಡುಗೆಯಾಗಿ ಉಳಿದಿದೆ. ಅಜಿತನಾಥ ಪುರಾಣ ತಿಲಕದಲ್ಲಿ ಅತ್ತಿಮಬ್ಬೆಯ ಗುಣಗಳನ್ನು ಮುಂದಿನ ಪೀಳಿಗೆಗೆ ತಲುಪಿಸಿದ ರನ್ನ ತನ್ನ ಮಗನಿಗೆ ‘ರಾಯ’ ಹಾಗೂ ಮಗಳಿಗೆ ‘ ಅತ್ತಿಮಬ್ಬೆ’ ಎಂದು ನಾಮಕರಣ ಮಾಡುವ ಮೂಲಕ ತನ್ನ ಜೀವನದ ದಿಕ್ಕು ಬದಲಿಸಿದ ಎರಡು ಮೇರು ವ್ಯಕ್ತಿತ್ವಗಳಿಗೆ ಕೃತಜ್ಞತೆ ಸಲ್ಲಿಸಿದ್ದಾನೆ. ಅತ್ತಿಮಬ್ಬೆಯ ಮಾತೃ ಹೃದಯ ವೈಶಾಲ್ಯಾತೆಗೆ ಸಾಕ್ಷಿ ಅವಳು ಅಣ್ಣಿಗದೇವ, ರನ್ನ, ಸತ್ಯಾಶ್ರಯ ಇರಿವ ಬೇಡಂಗ ಮೂವರನ್ನು ಕಾಣುತ್ತಿದ್ದ ರೀತಿ. ಚರಿತ್ರೆಯಲ್ಲಿ ರಾಜನೊಬ್ಬ ತಾಯಿ ಸ್ಥಾನ ನೀಡಿ ತನ್ನೆಲ್ಲ ಕಾರ್ಯಗಳಿಗೆ ಸಲಹೆ ಸೂಚನೆಗಳನ್ನು ಹೀಗೆ ಪಡೆಯುತ್ತಿದ್ದದ್ದು ಆದರ್ಶ ಮಾತೃಪ್ರೇಮವೇ ಹೊರೆತು ಮತ್ತೇನಲ್ಲ. ಕಾದಂಬರಿಯಲ್ಲಿನ ಉಳಿದ ಪಾತ್ರಗಳು ಕಥೆಗೆ ತಕ್ಕಂತೆ ಬಂದು ಹೋಗುತ್ತವೆ. ಒಟ್ಟಾರೆಯಾಗಿ ಜೈನ ಧರ್ಮದ ಹೊಳಹುಗಳನ್ನು ಪರಿಚಯಿಸುತ್ತಲೇ ಅತ್ತಿಮಬ್ಬೆಯ ಮಹೋನ್ನತ ವ್ಯಕ್ತಿತ್ವ, ಅಹಿಂಸೆ, ಮಾತೃ ಪ್ರೇಮ, ತಾಯ್ನಾಡ ರಕ್ಷಣೆ ಮೊದಲಾದ ಅಂಶಗಳನ್ನು ಎತ್ತಿ ಹಿಡಿದಿರುವ ಈ ಕೃತಿ ಓದಲೇಬೇಕಾದದ್ದು.

‍ಲೇಖಕರು Admin

November 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: