
ಹರೀಶ ಕೋಳ್ಗುಂದ
ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಅನ್ನೋದು ನಾನು ಬಾಲ್ಯದಿಂದ ಅಂಟಿಸಿಕೊಂಡು ಬಂದ ಒಂದು ಗೀಳು. ವ್ಯಕ್ತಿಯಾಗಿಯೂ, ವ್ಯಕ್ತಿತ್ವವಾಗಿಯೂ ಅತ್ಯಾಕರ್ಷಕವೆನಿಸುವ ಇವರ ಬರವಣಿಗೆ ಯಾರಲ್ಲಾದರೂ ಓದಿನ ಹುಚ್ಚು ಹಿಡಿಸಲಿಲ್ಲ ಅಂದರೆ ಅವರು ಖಂಡಿತ ಮನೋವಿಕಲರೇ ಸರಿ. ಇವರನ್ನು ಕಣ್ಣಾರೆ ಕಾಣಲಾಗದ್ದು ನನ್ನ ಒಂದು ದೌರ್ಭಾಗ್ಯವೇ ಅಂದುಕೊಳ್ಳುತ್ತೇನೆ. ಆದರೆ ಅವರ ಬರಹಗಳಲ್ಲಿ ಅವರಿನ್ನೂ ಜೀವಂತ ಇದ್ದಾರೆ ಎನ್ನುವುದೂ ಸುಳ್ಳಲ್ಲ…
ಅವರ ಕೃತಿಗಳನ್ನು ಓದಿದವರಿಗೆ ಅವರ ಮನೆ ಮತ್ತು ತೋಟಗಳ ಪರಿಚಯ ಇದ್ದೇ ಇರುತ್ತದೆ. ‘ನಿರುತ್ತರ’ ಇದು ಅವರ ಮನೆಗೆ ಅವರಿಟ್ಟ ಹೆಸರು. ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಿಂದ ಸ್ವಲ್ಪ ದೂರದಲ್ಲೇ ಇವರ ಮನೆ ಇದೆ. ಯಾರೇ ಸ್ಥಳೀಯರನ್ನು ಕೇಳಿದರೂ ಆತ್ಮೀಯವಾಗಿ ಅವರ ಮನೆಯ ದಾರಿ ತೋರಿಸುತ್ತಾರೆ.

ಸಾಹೇಬ್ರು ಮತ್ತು ಮೇಡಮ್ ಇಬ್ಬರೂ ಗತಿಸಿದ ನಂತರ ಅವರ ಮನೆ ಮತ್ತು ತೋಟವನ್ನು ಸಧ್ಯಕ್ಕೆ ‘ಶಿವು’ ಎಂಬುವವರು ಕಾಪಾಡಿಕೊಂಡು ಹೋಗುತ್ತಿದ್ದಾರೆ. ನಿರುತ್ತರವನ್ನು ಕಾಣಲು ಹೋದ ಯಾರನ್ನೇ ಆಗಲಿ ಅತ್ಯಂತ ಆತ್ಮೀಯತೆಯಿಂದ ಬರಮಾಡಿಕೊಂಡು ತೇಜಸ್ವಿ ಸರ್ ಮತ್ತು ರಾಜೇಶ್ವರಿ ಮೇಡಮ್ ಬಗ್ಗೆ ಅತ್ಯಂತ ಉತ್ಸುಕತೆಯಿಂದಲೇ ಹೇಳುತ್ತಾರೆ. ಇವರು ತೇಜಸ್ವಿಯವರ ಜೊತೆ ಶಿಕಾರಿಗೆ ಹೋದದ್ದು, ಸದಾ ನಗುಮುಖದಿಂದಲೇ ಇರುತ್ತಿದ್ದ ಸಾಹೇಬ್ರು ಸುಳ್ಳು ಮತ್ತು ಸೋಮಾರಿತನಗಳನ್ನು ಕಂಡರೆ ನಿಷ್ಠುರವಾಗಿ ಖಂಡಿಸುತ್ತಿದ್ದುದು, ರಾತ್ರಿ ಸುಮಾರು ಒಂದರವರೆಗೂ ಬರೆಯುತ್ತಿದ್ದುದು, ತೋಟವನ್ನು ನಿರ್ಮಿಸಿದ್ದು, ಮತ್ತೆ ರಾಜೇಶ್ವರಿ ಮೇಡಮ್ ಕೂಡ ಮನೆಗೆ ಯಾರೇ ಬಂದರೂ ನೆಂಟರು ಬಂದಹಾಗೆ ಕಾಣುತ್ತಿದ್ದುದು ಹೀಗೆ ಸುಮಾರು ವಿಷಯಗಳ ಬಗ್ಗೆ ಹಂಚಿಕೊಳ್ಳುತ್ತಾರೆ.
ಮನೆಯ ಬಗ್ಗೆ ವಿಚಾರಿಸಿದಾಗ “ಅಮ್ಮಾವ್ರು ಹೋದ ನಂತರ ಮನೆಯ ವಸ್ತುಗಳನ್ನು ಒಂದಿಷ್ಟೂ ಆಚೀಚೆ ಮಾಡಿಲ್ಲ. ಅವು ಹೇಗಿದ್ದವೋ ಹಾಗೇ ಇವೆ. ಯಾವಾಗಲಾದರೊಮ್ಮೆ ಮನೆಗೆ ಸುಷ್ಮಿತಾ ಮೇಡಮ್ ಬಂದಾಗ ಅದನ್ನು ಶುಚಿಗೊಳಿಸುತ್ತೇನೆ. ಬೀಗದ ಕೈ ಕೂಡಾ ಅವರ ಬಳಿಯಲ್ಲಿಯೇ ಇದೆ” ಎಂದರು. ನಿರಾಶರಾದ ನಮ್ಮ ಮುಖವನ್ನು ನೋಡಿ ಅದಕ್ಕೆ ಕಾರಣವನ್ನೂ ಹೀಗೀಗೆ ಎಂದು ವಿವರಿಸಿದರು. ಶಿಕ್ಷಕರೊಂದಿಗೆ ನಿರುತ್ತರಕ್ಕೆ ಭೇಟಿ ಕೊಟ್ಟ ಕೆಲ ಶಾಲಾ ಮಕ್ಕಳು ಅವರ ಮನೆಯ ಕೆಲ ವಸ್ತುಗಳನ್ನೇ ಮಂಗಮಾಯ ಮಾಡಿಬಿಟ್ಟರಂತೆ. ಆವಾಗಿನಿಂದ ಸುಷ್ಮಿತಾ ಮೇಡಮ್ ರವರೇ ಖುದ್ದಾಗಿ ಬೀಗ ಹಾಕಿಕೊಂಡು ತೆಗೆದುಕೊಂಡು ಹೋಗಿದ್ದಾರಂತೆ. “ಡಿಸೆಂಬರ್ ೧೪ರಂದು ಬನ್ನಿ ಸರ್ ಅವತ್ತು ಮೇಡಮ್ ಒಂದು ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಅವತ್ತು ಬಾಗಿಲು ತೆರೆದಿರುತ್ತೆ” ಎಂದರು. ಮತ್ತು ಅವರು ಇದನ್ನು ಒಂದು ಸ್ಮಾರಕವನ್ನಾಗಿ ಮಾಡುವ ಕನಸು ಹೊತ್ತಿರುವುದಾಗಿಯೂ ತಿಳಿಸಿದರು.ಅಲ್ಲಿನ ತೋಟ, ಮನೆಯ ಪರಿಸರವನ್ನು ಕಂಡ ಖುಷಿಯಿಂದ ಆಚೆ ಬಂದ ನಮಗೆ ಮೂಡಿಗೆರೆ ಬಸ್ ನಿಲ್ದಾಣದ ಪಕ್ಕದಲ್ಲಿ ‘ಕೃಷ್ಣೆಗೌಡನ ಆನೆ’ ಕಥೆಯಲ್ಲಿ ಬರುವ ‘ಪೋಸ್ಟ್ ಮ್ಯಾನ್ ಜಬ್ಬಾರ್ ಸಾಹೇಬ್’ ರ ದರ್ಶನವೂ ಆಯಿತು. ತುಂಬಾ ಖುಷಿಯಿಂದಲೇ ಅವರೂ ಸಹ ಅವರ ಮತ್ತು ತೇಜಸ್ವಿಯವರ ಒಡನಾಟದ ಕುರಿತಾಗಿ ಮತ್ತು ತಮ್ಮ ಇತಿವೃತ್ತಾಂತದ ಕುರಿತಾಗಿ ತಿಳಿಸಿದರು. ಒಟ್ಟಿನಲ್ಲಿ ತೇಜಸ್ವಿಯವರ ಮಾಯಾಲೋಕದಲ್ಲಿ ಒಂದು ಸುತ್ತಾಟ ಮಾಡಿದ ತೃಪ್ತಿ ನಮ್ಮದಾಗಿದ್ದಂತೂ ಸತ್ಯ..
0 ಪ್ರತಿಕ್ರಿಯೆಗಳು