ಸಂತೋಷ್ ಕೌಲಗಿ ಮೆಲುಕು: ತೇಜಸ್ವಿಯೂ, ಮುಟ್ಟಿದರೆ ಮುನಿಯೂ…

ಸಂತೋಷ್ ಕೌಲಗಿ

ಸುಮಾರು ೩೦ ವರ್ಷದ ಹಿಂದಿನ ಮಾತು. ಜನವರಿ/ಫೆಬ್ರವರಿ ಸಮಯ, ಫುಕುವೊಕಾನ ಕೃಷಿ ವಿಚಾರವೆ ನಮ್ಮೆಲ್ಲರ ಕನಸು ಮನಸಿನಲ್ಲಿ. ಯಾವಾಗಲೂ ಅದರದೇ ಮಾತು. ಅದೇ ಗುಂಗಿನಲ್ಲೇ ಗೆಳೆಯ ಕೆ.ಪಿ.ಸುರೇಶ ಮತ್ತು ನಾನು ಬೈಕಿನಲ್ಲಿ ’ನಿರುತ್ತರ’ ಕ್ಕೆ ಹೋದೆವು. ಆಗಲೇ ’ಒಂದು ಹುಲ್ಲಿನ ಕ್ರಾಂತಿʼ ಓದಿ ’ಸಹಜ ಕೃಷಿ ಒಂದು ಪರಿಚಯ’ ಬರೆಯುವ ಇರಾದೆಯಲ್ಲಿದ್ದರು ತೇಜಸ್ವಿ. “ಅಲ್ಲ ಕಣಯ್ಯ ನಮ್ಮಲ್ಲಿ ಆ ಫುಕುವೊಕಾ ಹೇಳುವ ಕ್ಲೋವರ್‍ ಎಂಬ ಭೂ ಮುಚ್ಚಳಿಕೆಗೆ ಸಮಾನ ಸಸ್ಯ ಯಾವುದು ಇರಬಹುದು?” ಎಂದು ನಮ್ಮನ್ನು ಕೇಳಿದರು.

ನಮ್ಮ ಅನುಭವವಿಲ್ಲದ ವಯಸ್ಸಿನಲ್ಲಿ ನಾವು ಆಗಲೇ ಜಪಾನಿನ ಕೆಲವು ಗೆಳೆಯರನ್ನು ಕ್ಲೋವರ್‍ ಬೀಜಕ್ಕಾಗಿ ಸಂಪರ್ಕಿಸಿದ್ದೆವು. ಅದನ್ನು ತೇಜಸ್ವಿಯವರ ಮುಂದೆ ನಾವು ಹೇಳಿ ಇಷ್ಟರಲ್ಲೇ ಆ ಬೀಜ ಸಿಗಬಹುದು ಎಂದೆವು. “ಏ, ಅವೆಲ್ಲ ಆಗಲ್ಲ ಕಣಯ್ಯ, ಇಲ್ಲೇ ಲೋಕಲ್ ಆಗಿ ಇರೋದು ಹುಡುಕಬೇಕು. ಅಲ್ಲಿ ಬೀಜ ಇಲ್ಲಿಗೆ ಬಂದರೆ ಏನೇನು ಅನಾಹುತ ಕಾದಿರುತ್ತೋ ನಮಗೆ ಗೊತ್ತೇನ್ರಯ್ಯಾ?” ಎಂದರು. ನಾವು ಪೆಂಗರಂತೆ ನಿಂತೆವು. ಹೀಗೆ ಇಡೀ ದಿನ ಈ ನೆಲ ಮುಚ್ಚಳಿಕೆಯ ಬಗ್ಗೆಯೇ ಮಾತನಾಡುತ್ತಾ ಕಳೆದೆವು. ನೆಲ ಮುಚ್ಚಳಿಕೆಯ ಗಿಡದ ಸ್ವಭಾವಗಳೇನಿರಬೇಕು, ಅದು ಬೇರೆ ಸಸ್ಯಗಳನ್ನು ಎದುರಿಸಿ ಗೆಲ್ಲಲು ಇರಬೇಕಾದ ಗುಣಗಳೇನು, ಬೇಸಿಗೆಯಲ್ಲಿ ಅದು ಒಣಗಿ ಬೀಜ ಉದರಿಸಿ ಮತ್ತೆ ಮಳೆಗಾಲದಲ್ಲಿ ಎಲ್ಲ ಸಸ್ಯಗಳಿಗಿಂತ ಮೊದಲು ಹುಟ್ಟಿ ಭೂಮಿಯನ್ನು ಹೇಗೆ ಆಕ್ರಮಿಸ ಬೇಕು, ಸಾರಜನಕವನ್ನು ಹಿಡಿದಿಡುವ ಶಕ್ತಿಯನ್ನು ಹೇಗೆ ಹೊಂದಿರಬೇಕು, ಸೊಂಪಾಗಿ ಹಸಿರು ಗೊಬ್ಬರನ್ನು ಉತ್ಪತ್ತಿ ಮಾಡಬೇಕು ಹೀಗೆ…

ತೇಜಸ್ವಿಯವರ ತಲೆಗೆ ಏನಾದರೂ ಹೊಕ್ಕರೆ ಅದಕ್ಕೊಂದು ತಾರ್ಕಿಕ ಅಂತ್ಯ ಕಾಣದೆ ಅವರಿಗೆ ಸಮಾಧಾನವಾಗುತ್ತಿರಲಿಲ್ಲ. ಸಂಜೆ ಮೂಡಿಗೆರೆಯ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ವಿಜ್ಙಾನಿ ಡಾ. ಚಂದ್ರಶೇಖರ (ಅವರು ಮದ್ದೂರಿನವರು ಎಂದು ನೆನಪು) ತೇಜಸ್ವಿಯವರ ಮನೆಗೆ ಬಂದರು. ಅವರೊಂದಿಗೂ ಈ ನೆಲಮುಚ್ಚಿಗೆಯ ಬಗ್ಗೆ ಚರ್ಚೆ ಪಾರಂಭವಾಯಿತು. ಈ ಮೊದಲೇ ಈ ಬಗ್ಗೆ ಒಂದೆರಡು ಸುತ್ತಿನ ಚರ್ಚೆ ಚಂದ್ರಶೇಖರ ಅವರೊಂದಿಗೂ ಆಗಿತ್ತು. ಅವರೂ ಅದೇ ಗುಂಗಿನಲ್ಲಿದ್ದರು. ಮಾತನಾಡುತ್ತಾ, ಆಡುತ್ತಾ ಅವರು ಮುಳ್ಳಿಲ್ಲದ ಮುಟ್ಟಿದರೆ ಮುನಿ ಗಿಡದ ಬಗ್ಗೆ ಪ್ರಸ್ತಾಪಿಸಿದರು. ಅದು ನೋಡಲು ಮಾಮೂಲಿ ಮುಟ್ಟಿದರೆ ಮುನಿ ಗಿಡದಂತೆಯೇ ಇರುತ್ತದೆ. ಆದರೆ ಮುಳ್ಳು ಇರುವುದಿಲ್ಲ, ಅದನ್ನು ಮುಟ್ಟಿದರೆ ಅದರ ಎಲೆ ಮುಚ್ಚಿಕೊಳ್ಳುವುದು ಸ್ವಲ್ಪ ನಿಧಾನ ಎಂದರು. ಮುಳ್ಳಿಲ್ಲದೇ ಇರುವುದರಿಂದ, ಇದನ್ನು ಬೆಳೆಸಿದರೆ ತೊಂದರೆ ಇಲ್ಲ ಎಂದರು. ನಮ್ಮ ಮಿಕ್ಕ ಬೇಡಿಕೆಗಳಾದ ಸೊಂಪಾಗಿ ಎಲೆ ಉದುರಿಸಬೇಕು, ಸಾರಜನಕ ಹಿಡಿದಿಡುವ ಗುಣ ಇರಬೇಕು ಎಂಬ ಪ್ರಶ್ನೆಗಳಿಗೂ ಅವರು ವೈಜ್ಞಾನಿಕ ಶಬ್ದಗಳನ್ನು ಬಳಸಿ ಈ ಗಿಡವೇ ಅತ್ಯಂತ ಸೂಕ್ತ ಎನ್ನುವಂತೆ ಮಾತನಾಡಿದರು.  ಜೊತೆಗೆ ಅದರ ಹೂವು ಜೇನನ್ನು ಆಕರ್ಷಿಸುವುದರಿಂದ  ತೋಟದಲ್ಲಿ ಪರಾಗ ಸ್ಪರ್ಶ ಹೆಚ್ಚಾಗಿ ಇಳುವರಿ ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ ಎಂಬುದನ್ನೂ ಹೇಳಿದರು. ನಾವು ’ಸ್ವಯಂವರ’ದಲ್ಲಿ ಮುಳ್ಳಿಲ್ಲದ ನಾಚಿಕೆ ಮುಳ್ಳಿಗೆ (ಮಿಮೋಸಾ ಇನ್ವಿಸಾ) ಹೂವಿನ ಹಾರ ಹಾಕಲು ತೀರ್ಮಾನಿಸಿದೆವು.

ನಂತರ ಬೀಜ  ಪಡೆಯುವ ಬಗ್ಗೆ ನಮ್ಮ ಮಾತು ಹರಿಯಿತು. ಅದನ್ನೂ ಅವರು ಬಹಳ ಸುಲಭವಾಗಿ ಬಗೆಹರಿಸಿದರು. ತಮ್ಮ ಸಂಶೋಧನಾ ಕೇಂದ್ರದಲ್ಲಿ ಈಗ ಅದು ಬೀಜ ಬಿಟ್ಟಿರುವುದಾಗಿಯೂ, ನಾಳೆ ತಮ್ಮ ಸಹಾಯಕನನ್ನು ಬಿಟ್ಟು ಒಂದಿಷ್ಟು ಬೀಜ ಆರಿಸುವುದಾಗಿಯೂ ಹೇಳಿ, ಮಾರನೆಯ ದಿನ ಬೀಜ ನೀಡುವ ಭರವಸೆಯನ್ನೂ ನೀಡಿದರು. ತೇಜಸ್ವಿಯವರು “ಇದೊಂದು ಗಿಡ ಟ್ರೈ ಮಾಡ್ರಯ್ಯಾ,ಇದೇನಾದ್ರೂ ಯಶಸ್ವಿ ಆದರೆ ಒಂದು ಹೆಜ್ಜೆ ಮುಂದೆ ಹೋದಂತೆ” ಎಂದರು. ನಮ್ಮ ಪಡ್ಡೆತನಕ್ಕೆ ಅವರು ಇಂಬು ನೀಡಿದರು. ನಾವು ಫುಕುವೊಕಾರಾಗಲು ಒಂದೆರಡು ಅಡಿ ಕೆಳಗಿದ್ದೇವೆ ಎನಿಸತೊಡಗಿತು. ತೇಜಸ್ವಿ ಅವರೂ ಆ ಗಿಡವನ್ನು ಅಷ್ಟೊಂದು ಸೂಕ್ಷ್ಮವಾಗಿ ಗಮನಿಸಿದ್ದಂತೆ ಕಾಣಲಿಲ್ಲ. ಹೊರದೇಶದಿಂದ ಬರಬಹುದಾದ ಗಿಡಗಳು ತರಬಹುದಾದ ಸಮಸ್ಯೆಗಳ ಬಗ್ಗೆ ಮಾತನಾಡಿದರೆ ಹೊರತು ಮಲೆನಾಡಿನ ಮೂಲೆಯಲ್ಲಿ ಮಳೆಗೆ ಹೆದರಿ ಸುಮ್ಮನೆ ಕುಳಿತಿರುವ ಸಸ್ಯವೊಂದು ಬಯಲು ಸೀಮೆಯಲ್ಲಿ ಏನು ಮಾಡಬಹುದು ಎಂದು ಅವರಿಗೆ ಹೊಳೆಯಲಿಲ್ಲ. ನಾವಂತೂ ಬಿಡಿ, ೨೮/೩೦ ವರ್ಷದ ಅನನುಭವಿಗಳು. ನಮ್ಮ ಹೀರೋ ಹೇಳಿದ್ದನ್ನು ಮಾಡಲು ಸಜ್ಜಾಗಿ ನಿಂತಿದ್ದವರು.

ಅಂದು ರಾತ್ರಿ ಮಲಗಿದಾಗ ಕನಸಿನಲ್ಲಿ ಬರೀ ಮಿಮೋಸಾ ಇನ್ವಿಸಾ. ಅದು ಸೊಂಪಾಗಿ ಬೆಳೆದು ಇಡೀ ತೋಟವನ್ನು ಆಕ್ರಮಿಸಿದೆ, ಎಲ್ಲೆಲ್ಲೂ ಹಸಿರು, ಡಿಸೆಂಬರ್‌ನಲ್ಲಿ ಹೂವು ಬಿಟ್ಟಿದೆ, ಜೇನುಗಳು ದಂಡುಗಳಲ್ಲಿ ಬಂದು ಮಕರಂದವನ್ನು ಹೀರುತ್ತಿವೆ, ಬೇಸಿಗೆಯಲ್ಲಿ ಅದು ರಾಶಿ, ರಾಶಿ ಎಲೆ ಉದುರಿಸಿ ಭೂಮಿಗೆ ದಂಡಿಯಾಗಿ ಗೊಬ್ಬರ ಸೇರಿಸಿದೆ, ಹೀಗೆ ಕನಸಿನ ಮೇಲೆ ಕನಸು.

ಬೆಳಗಾಯಿತು ಮತ್ತೆ ತೇಜಸ್ವಿಯವರೊಂದಿಗೆ ಸುತ್ತಾಟ ಮತ್ತು ಫುಕುವೊಕಾನ ಸುತ್ತಲೇ ಮಾತು. ಚಂದ್ರಶೇಖರ್‍ ಅವರ ಕಛೇರಿಗೆ ಹೋಗಿ ಮಿಮೋಸ ಬೀಜವನ್ನು ’ಮಹಾ ಪ್ರಸಾದ’ವೆಂಬಂತೆ ಪಡೆದು ಊರ ಕಡೆಗೆ ಹೊರಟೆವು. ಅದು ೧/೨ ಕೆ ಜಿಯಷ್ಟಿತ್ತು.

ನಮ್ಮದು ಮಳೆ ಕಡಿಮೆ ಬರುವ ಪ್ರದೇಶ. ಮರಳು ಮಿಶ್ರಿತ ಕೆಂಪು ಮಣ್ಣು. ಎಲ್ಲ ಕಡೆ ಬಯಲು. ಅಂತಹ ಫಲವತ್ತಲ್ಲದ ಭೂಮಿ. ಅಂತರ್ಜಲವೂ ಕಡಿಮೆ. ಉಳುಮೆ ಮಾಡದೆ ಬಿಟ್ಟರೆ ಹುಲ್ಲೋ ಹುಲ್ಲು. ಬೇಸಿಗೆಯಲ್ಲಿ ಯಾರಾದರೂ ಬೆಂಕಿಗೆ ತಗಲಿಸಿದರೆ ಮುಗಿಯಿತು, ಸರ್ವನಾಶ. ಅಂತಹ ಜಾಗದಲ್ಲಿ ನಾರಾಯಣರೆಡ್ಡಿ ಅವರ ಅಪ್ಪಣೆಯ ಮೇರೆಗೆ ಸುಮಾರು ೬ ಎಕರೆಯಲ್ಲಿ ಸೀಬೆಯ ತೋಟವನ್ನು ಈ ಮಿಮೊಸಾ ಬೀಜ ಸಿಗುವ ಎರಡು ವರ್ಷ ಮುಂಚೆಯಷ್ಟೇ ಪ್ರಾರಂಭಿಸಿದ್ದೆವು. (ನಾರಾಯಣರೆಡ್ಡಿಯವರ ಹನಿ ನೀರಾವರಿ ಕತೆ ಮುಂದೊಮ್ಮೆ ಹೇಳುವೆ) ಜನವರಿಯಲ್ಲಿ ಭರಣಿಯ ಮಳೆಯಲ್ಲಿ ಸೀಬೆ ತೋಟದ ಒಂದು ಭಾಗವನ್ನು ಅಚ್ಚು ಕಟ್ಟಾಗಿ ಉತ್ತು ಅಲ್ಲಿ ಈ ಮಿಮೋಸಾ ಬೀಜವನ್ನು ಬಿತ್ತಿದೆವು. (ಇರುವ ಸ್ವಲ್ಪ ಬೀಜವನ್ನು ಆದಷ್ಟು ಬೇಗ ದ್ವಿಗುಣಗೊಳಿಸಿ ಇಡೀ ತೋಟಕ್ಕೆ ಬಿತ್ತುವ ಉದ್ದೇಶ ನಮ್ಮದು) ಬಯಲು ಸೀಮೆಯ ಈ ವಾತಾವರಣದಲ್ಲಿ ಆ ಗಿಡಕ್ಕೆ  ಸಾಕಷ್ಟು ಬಿಸಿಲು, ಹದವಾದ ಮಳೆ ಇಲ್ಲಿ ಸಿಕ್ಕಿತು ಎನಿಸುತ್ತದೆ. ಆ ವರ್ಷದ ಕಡೆಗೆ ನಾವು ಬಿತ್ತಿದ ಜಾಗದಲೆಲ್ಲಾ ಈ ಗಿಡ ಹರಡಿ, ಜನವರಿಯಲ್ಲಿ ಬೀಜ ಬಿಡಲು ಪ್ರಾರಂಭಿಸಿತು. ಸುಮಾರು ೮/೧೦ ಕೆಜಿ ಬೀಜ ದೊರಕಿತು. ಸಾಕಷ್ಟು ಎಲೆ ಮತ್ತು ಕಡ್ಡಿ ಒಣಗಿ ಭೂಮಿಯ ಮೇಲೆ ಒಂದು ಪದರ ನಿರ್ಮಾಣವಾಗಿತ್ತು. ನಮಗೆ ಸಂತೋಷವೋ ಸಂತೋಷ.

ಮುಂದಿನ ಮುಂಗಾರಿನಲ್ಲಿಇಡೀ ತೋಟಕ್ಕೆ ಈ ಬೀಜ ಬಿತ್ತಿದೆವು. ಆ ವರ್ಷವೇ ಇಡೀ ತೋಟವನ್ನು ಇದು ಆಕ್ರಮಿಸಿಕೊಂಡು ನಾವು ನಮ್ಮ ಶತ್ರುಗಳು ಎಂದು ಭಾವಿಸಿದ್ದ ಹಲವಾರು ಬೇರೆಯ ಗಿಡಗಳನ್ನು ನಾಶಮಾಡಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸತೊಡಗಿತು. ನಮಗೆ ಗೆದ್ದೆವೆಂಬ ಭಾವ. ಅದರ ಮಾರನೆಯ ವರ್ಷ ನಮ್ಮ ಸೀಬೆಯ ಗಿಡಗಳಿಗೆ ಮೂರು-ನಾಲ್ಕು ವರ್ಷ. ನಾವು ಪ್ರಾರಂಭದಲ್ಲಿ ಹಾಕಿದ ಗೊಬ್ಬರದ ಪರಿಣಾಮವೋ, ಮಾಡಿದ ಆರೈಕೆಯ ಪರಿಣಾಮವೋ (ಹೊಸ ಅಗಸ ಎತ್ತಿ ಎತ್ತಿ ಒಗೆದ) ಸೀಬೆ ಗಿಡದಲ್ಲಿ ಕಾಯಿಗಳು ಜೊಂಪೆ, ಜೊಂಪೆಯಾಗಿ ದೊಡ್ಡ ದೊಡ್ಡ ಗಾತ್ರದಲ್ಲಿ ಬಿಡತೊಡಗಿದವು (ಅಲಹಾಬಾದ್ ಸಫೇದ್) ಕೆಳಗೆ ಸುಂದರ ಭೂ ಮುಚ್ಚಳಿಕೆ, ಗಿಡದ ತುಂಬ ಕಾಯಿ, ಇನ್ನೇನು ಬೇಕು? ನಾವು ಪುಕುವೊಕಾ ಎಂದುಕೊಳ್ಳಲು ಅನುಮಾನವೇ ಉಳಿಯಲಿಲ್ಲ. ಆದರೆ ನಮಗಿನ್ನೂ ಬಿಳಿಯ ಗಡ್ಡ ಬರುವ ವಯಸ್ಸಾಗಿರಲಿಲ್ಲ. ಆಗಾಗ್ಗೆ ಇದರ ಬಗ್ಗೆ ಗುರುಗಳಾದ ತೇಜಸ್ವಿಯವರಿಗೆ ವರದಿ ಸಲ್ಲಿಸುತ್ತಿದ್ದೆವು. ನನ್ನ ಮದುವೆಗೆ ಬರಲಾಗದಿದ್ದರಿಂದ ಆರು ತಿಂಗಳ ನಂತರ ನಮ್ಮನ್ನು ಹರಸಲು ಬಂದ ತೇಜಸ್ವಿಯವರೂ ಅದನ್ನು ನೋಡಿ, ಭಲೆ ಭಲೆ ಎಂದರು. ಅದೇ ವರ್ಷ ಸೆಪ್ಟೆಂಬರ್‍/ಅಕ್ಟೋಬರ್‌ನಲ್ಲಿ ನಮ್ಮಲ್ಲಿಗೆ ಹಾಸನದಿಂದ ಆಕಾಶವಾಣಿಯ ಗೆಳೆಯ ವಿಜಯ ಅಂಗಡಿ ಬಂದಿದ್ದರು. ಅವರು ಆಗಲೇ ಫುಕುವೊಕಾನ ಶಿಷ್ಯನಾಗಿ ಭೂಮಿಯಿಂದ ಅರ್ಧ ಅಡಿ ಮೇಲೆ ಓಡಾಡುತ್ತಿದ್ದರು. ಅವರಿಗೆ ನಮ್ಮ ಈ ಅದ್ಭುತ ತೋಟವನ್ನು ನೋಡಿ ಹಿಗ್ಗೋ ಹಿಗ್ಗು. ನಳ ನಳಿಸುತ್ತಿದ್ದ ತೋಟ, ಗಿಡದ ತುಂಬ ಕಾಯಿ, ನೆಲ ಮುಚ್ಚಿಗೆ. ಪಕ್ಕದ ಬೆಟ್ಟದಲ್ಲಿ ಹುಟ್ಟು ಕಟ್ಟಿದ್ದ ಹೆಜ್ಜೇನುಗಳ ಸಂಭ್ರಮದ ಹಾರಾಟ, ಆಗಲೇ ಅವರು ಇನ್ನೊಂದೆರಡು ವಾರದಲ್ಲಿ ತಮ್ಮ ಬಾನುಲಿ ಬಳಗದ ಸದಸ್ಯರನ್ನೆಲ್ಲಾ ಈ ತೋಟ ತೋರಿಸಲು ಕರೆದು ತರಲು ಅನುಮತಿ ಕೋರಿದರು.

ನಮಗೂ ಬಾಲ್ಯ. ಪ್ರಚಾರದ ಚಪಲ, ಜನ ನೋಡಬೇಕು , ಭೇಷ್ ಎನ್ನಬೇಕು ಎಂಬ ಆಸೆ. ಅದೂ ವಿಜಯ್ ಅಂಗಡಿ ಪ್ರಸಾರ ಮಾಧ್ಯಮದಲ್ಲೇ ಇರುವಾಗ, ಸೈ ಎಂದೆವು. ಮುಂದೊಂದು ವಾರದಲ್ಲಿ ಒಂದು ದೊಡ್ಡ ಬಸ್ಸಿನ ತುಂಬ ಹಾಸನದ ರೈತರನ್ನು ತುಂಬಿಕೊಂಡು ವಿಜಯ್ ಅಂಗಡಿ ಇಳಿದೇ ಬಿಟ್ಟರು. ರೈತರು ತೋಟವನ್ನು ನೋಡಿ ಸಂತೋಷಪಟ್ಟರು, ಬೇಕಾದಷ್ಟು ದೊಡ್ಡ ದೊಡ್ಡ, ಸಿಹಿಯಾದ  ಸೀಬೆಯ ಹಣ್ಣನ್ನು ತಿಂದು ಹಾಡಿ ಹೊಗಳಿ ಹೋದರು. ಹೋಗುವಾಗ ವಿಜಯ್ ಅಂಗಡಿ ಮುಂದಿನ ವರ್ಷ ನಮಗೆ ಮಿಮೋಸಾದ ಬೀಜ ಒಂದು ಕ್ವಿಂಟಾಲ್‌ನಷ್ಟು ಕೊಡಣ್ಣ ಎಂದು ಹೇಳಿ ಹೋದರು. ನಮಗೆ ಫುಕುವೊಕಾ ಆಗಲು ಅರ್ಧ ಅಡಿ ಉಳಿದಿದೆ ಎನಿಸತೊಡಗಿತು. ಆದರೆ  ಹಾಳಾದ್ದು ಗಡ್ಡ ಬಿಳಿಯಾಗಲು  ಇನ್ನೂ ಎರಡು ದಶಕ ಕಾಯಬೇಕಿತ್ತು. 

ಬೇಸಿಗೆಯಲ್ಲಿ ಬೀಜ ಸಂಗ್ರಹಿಸಿ ವಿಜಯ್ ಅಂಗಡಿಗೆ ಒಂದು ಕ್ವಿಂಟಾಲ್‌ನಷ್ಟು ನೀಡಿ ಹಣವನ್ನೂ ಪಡೆದಾಯ್ತು. ಗೆಳೆಯ ಸುರೇಶ ತನ್ನ ಮಲೆನಾಡಿನ ಮನೆಗೆ ಹೋಗಿ ಮಲೆನಾಡಿನ ರೈತರಿಗೆ ಇದರ ಮಹಿಮೆಯನ್ನು ತಿಳಿಸಿ ರಾಘವೇಂದ್ರ ಸ್ವಾಮಿಗಳ ಮಠದ ಮಂತ್ರಾಕ್ಷತೆಯಂತೆ ಇಷ್ಟಿಷ್ಟೇ ಬೀಜವನ್ನು ನೀಡಿ ಜೋಪಾನವಾಗಿ ಕಾಪಾಡಿ ಅಭಿವೃದ್ಧಿಪಡಿಸಲು ಆಶೀರ್ವಾದಪೂರ್ವಕವಾಗಿ ಈ ಬೀಜವನ್ನು ವಿತರಿಸತೊಡಗಿದ. ಆದರೆ ಮಲೆನಾಡಿನಲ್ಲಿ ಆತನ ಆಶೀರ್ವಾದ ಫಲಿಸಲಿಲ್ಲ. ಅದು ನಮ್ಮಲ್ಲಿ ಫಲಿಸತೊಡಗಿತು. ಆಗಷ್ಟೇ ಶ್ರೀರಂಗಪಟ್ಟಣದ ಬಳಿಯ ಮಹದೇವಪುರದ ಬಳಿ ಇಸ್ಕಾನ್‌ ಅವರು ತೋಟವೊಂದನ್ನು ಅಭಿವೃದ್ಧಿ ಪಡಿಸತೊಡಗಿದ್ದರು. ಅಲ್ಲಿದ್ದ ಸ್ವಾಮಿಯೊಬ್ಬರಿಗೆ ಈ ಗಿಡದ ಮಹತ್ವ ಅರಿವಾಗಿ ಅವರೂ ನಮ್ಮಲ್ಲಿ ಬೀಜಕ್ಕೆ ಬಂದರು, ಅವರಿಗೂ ಕೊಟ್ಟೆವು. ವಿಜಯ್ ಅಂಗಡಿ  ಕೃಷಿ ಕಾರ್ಯಕ್ರಮದಲ್ಲಿ ಈ ಗಿಡದ ಬಗ್ಗೆ ಮಾತನಾಡಿದ ಕಾರಣ ಎಲ್ಲೆಲ್ಲಿಂದಲೋ ಈ ಬೀಜಕ್ಕಾಗಿ ಕಾಗದಗಳು ಬರತೊಡಗಿದವು ( ಆಗಿನ್ನೂ ಮೊಬೈಲ್ ಫೋನ್ ಇರಲಿಲ್ಲ)  ನಾವು ಪುಕುವೊಕಾ ಆದೆವು ಎಂದು ಕೊಳ್ಳಲು ನಮಗಿದ್ದ ಒಂದೆ ಅಡ್ಡಿ ಎಂದರೆ ನಮ್ಮ ಕರಿಯ ಗಡ್ಡ!

ಹೀಗೆ ಇನ್ನೊಂದೆರಡು ವರ್ಷ ಕಳೆಯಿತು. ಒಂದು ದಿನ ಪ್ರಜಾವಾಣಿಯಲ್ಲಿ ಮಹದೇವಪುರ ಇಸ್ಕಾನ್ ತೋಟದಲ್ಲಿ ಯಾವುದೋ ಅಪರಿಚಿತ ಗಿಡ ತಿಂದು ೬ ಹಸುಗಳು ಒಂದೇ ದಿನ ಸತ್ತು ಹೋಗಿವೆ ಎಂಬ ಸುದ್ದಿ ಬಂತು. ಅದು ನಮ್ಮ ಮಿಮೋಸಾ ಗಿಡದ ಪ್ರಭಾವವೇ ಆಗಿತ್ತು. ಅಲ್ಲಿ ಸಾಕಿದ್ದ ಹಸುಗಳು ಇಷ್ಟಪಟ್ಟು ಮಿಮೋಸಾದ ಸೊಪ್ಪನ್ನು ಮೇಯುತ್ತಿದ್ದರಿಂದ ಅದನ್ನೇ ಅವುಗಳಿಗೆ ಅತಿಯಾಗಿ ನೀಡಿದ ಪರಿಣಾಮ ಅವು ನೆಗೆದು ಬಿದ್ದಿದ್ದವು. ಈ ಗಿಡವು ಪ್ರಾಣಿಗಳಿಗೆ ಮಾರಕ ಎಂದು ಆ ಸ್ವಾಮಿಗಳು ಹೇಳಿಕೆ ನೀಡಿ ರೈತರು ಎಚ್ಚರ ವಹಿಸುವಂತೆ ಸೂಚಿಸಿದರು. ನನಗೆ ಎದೆ ಹೊಡೆದುಕೊಳ್ಳಲು ಪ್ರಾರಂಭವಾಯಿತು. ಇದನ್ನೆಲ್ಲಾ ವಿವರಿಸಿ ಆತಂಕದಿಂದ ಸುರೇಶನಿಗೆ ಪತ್ರ ಬರೆದೆ. ಅವನು ಮಲೆನಾಡಿನಲ್ಲಿ ಆ ಗಿಡ ಅಷ್ಟೊಂದು ಸೊಂಪಾಗಿ ಬೆಳೆಯುತ್ತಿಲ್ಲವೆಂದು ತಿಳಿಸಿದ. ಅವನ ಪತ್ರದ ಒಕ್ಕಣೆಯಲ್ಲಿ ಬಯಲು ಸೀಮೆಯಲ್ಲಿ ಹೆಚ್ಚಿನ ಬೀಜ ಹಂಚಿರುವವನು ನೀನೆಂದೂ ಹಾಗಾಗಿ ತನಗೆ ಏನೂ ಅಪಾಯವಿಲ್ಲವೆಂದೂ ಬರೆದಿರುವಂತೆ ತೋರಿತು. ಆದರೆ ಇಲ್ಲಿ ಅದೇ ಗಿಡ ರಕ್ತಬೀಜಾಸುರನಂತೆ ಬೆಳೆಯುತ್ತಿತ್ತು. ನನಗೆ ಭಯ ಉಂಟಾಗತೊಡಗಿತು. ಏನಾದರೂ ತನಿಖೆ ಉಂಟಾದರೆ ಏನು ಮಾಡುವುದು? ತೇಜಸ್ವಿ ಮತ್ತು ಚಂದ್ರಶೇಖರ್ ಅವರ ಹೆಸರು ಹೇಳಿ ನಾನು ಅಮಾಯಕ ಎಂದು ಹೇಳಿಬಿಡಬೇಕೆಂದು ತೀರ್ಮಾನಿಸಿದೆ. ಆದರೆ ಅದೃಷ್ಟವಶಾತ್ ಹಾಗೆ ಆಗಲಿಲ್ಲ.

ತೇಜಸ್ವಿಯವರಿಗೆ ಈ ಕತೆ ಹೇಳಿದರೆ, “ಹೌದೇನಯ್ಯಾ, ಭಾಳ ಕಷ್ಟ ಕಣಯ್ಯಾ ಇವೆಲ್ಲಾ” ಎನ್ನುತ್ತಾ ನಕ್ಕು ಬಿಟ್ಟರು. ಅಲ್ಲೊಲ್ಲೋ ಆಡು ಸತ್ತ, ಕುರಿ ಸತ್ತ, ಹಸು ಸತ್ತ ಸುದ್ದಿ ಮೇಲಿಂದ ಮೇಲೆ ಕೇಳತೊಡಗಿತು. ಆದರೆ ಯಾರೂ ನಮ್ಮ ಮೇಲೆ ಕ್ರಮಕೈಗೊಳ್ಳುವ ಮಟ್ಟಕ್ಕೆ ಹೋಗಲಿಲ್ಲ. ಈ ಗಿಡದಿಂದಲೇ ಹೀಗೆ ಆಯಿತು ಎಂದು ಹೇಳುವಷ್ಟು ಖಚಿತತೆ ಅವಗಿರಲಿಲ್ಲ. ಇಲ್ಲಿ ನಮ್ಮ ತೋಟದಲ್ಲಿ ಮಿಮೋಸಾ ನಮ್ಮನ್ನು ನುಂಗುವಂತೆ ಬೆಳೆಯ ತೊಡಗಿತು. ಆಗ ನಮ್ಮ ಗಡ್ಡದಲ್ಲಿ ಅಲ್ಲೊಂದು ಇಲ್ಲೊಂದು ಬಿಳಿಯ ಕೂದಲು ಕಾಣತೊಡಗಿತ್ತು. ಮುಂದೆ ಕೆಲವು ವರ್ಷಗಳಲ್ಲಿ ಮಳೆ ಕಡಿಮೆಯಾಗಿ ನಮ್ಮ ಕೊಳವೆ ಬಾವಿ ಒಣಗಿ ನಮ್ಮ ಸೀಬೆಯ ತೋಟ ನೆಲ ಕಚ್ಚಿತು. ಆದರೆ ಮಿಮೋಸಾ ಶನಿಯಂತೆ ನಮ್ಮ ಬೆನ್ನು ಹತ್ತಿತ್ತು. ನಮ್ಮ ಎತ್ತು ಮಾರಿದ್ದ ಕಾರಣ, ಪಕ್ಕದ ತೋಟದ ಗೆಳೆಯ ಚಂದ್ರು ಅವರ ಎತ್ತನ್ನು ಒಂದು  ದಿನ ಉಳುಮೆಗೆ ತಂದೆವು. ಉಳುಮೆಯಾದ ನಂತರ ನಮ್ಮ ಗೋಪಾಲ ಅವುಗಳನ್ನು ಮಿಮೋಸಾ ಬೆಳೆದಿದ್ದ ಜಾಗಕ್ಕೆ ಬಿಟ್ಟ. ಅವುಗಳು ಅದರ ರುಚಿ ಕಂಡು ಹೊಟ್ಟೆ ತುಂಬ ಸಂತೋಷದಿಂದ ಮೇಯ್ದು ತಮ್ಮ ಮನೆಗೆ ಹೋದವು.

ಬೆಳಿಗ್ಗೆ ಚಂದ್ರ ಕೊಟ್ಟಿಗೆಗೆ ಹೋಗಿ ನೋಡಿದಾಗ ಆ ಎರಡೂ ದೊಡ್ಡ ಎತ್ತುಗಳು ಕಾಲು ನೀಡಿಕೊಂಡು ಸತ್ತು ಬಿದ್ದಿದ್ದು ನೋಡಿ ಗಾಬರಿಯಾಗಿ ಹೋದ. ತಲಾಶ್ ಮಾಡಲಾಗಿ ಅದು ಮಿಮೋಸಾ ಮಹಿಮೆ ಎಂಬುದು ತಿಳಿಯಿತು. ಆದರೆ ಸಜ್ಜನಿಕೆಯ ಚಂದ್ರು ನಮ್ಮೊಂದಿಗೆ ಜಗಳಕ್ಕೆ ಬರಲಿಲ್ಲ. ಮುಂದೆ ಅವನು ಮನೆ ಕಟ್ಟುವಾಗ ನಾಲ್ಕಾರು ದೊಡ್ಡ, ದೊಡ್ಡ ನೀಲಗಿರಿ ದಿಮ್ಮಿಗಳನ್ನು ಅವನಿಗೆ ಉಚಿತವಾಗಿ ನೀಡಿ ಅವನೊಂದಿಗೆ ಸಂಬಂಧ ಸರಿಪಡಿಸಿಕೊಂಡೆವು.  ಈ ಮಧ್ಯೆ ಈ ಬೀಜಗಳು ಯಾವಾಗಲೋ ನನ್ನ ಮಾವನ ಮನೆಯ ರಾಂಪುರದ ತೋಟಕ್ಕೆ ಹೋಗಿ ಅಲ್ಲೆಲ್ಲಾ ಬೆಳೆಯ ತೊಡಗಿತು. ಅಲ್ಲಿ ಪೂರ್ಣಾವಧಿ ಯಾರೂ ಇಲ್ಲದ ಕಾರಣ ಹಳ್ಳಿಯವರು ತಂತಿ ಕಿತ್ತು ದನಗಳನ್ನು ಒಳಗೆ ಬಿಟ್ಟು ಮೇಯಿಸುವ ಚಾಳಿ ಮಾಡಿಕೊಂಡಿದ್ದಾರೆಂಬ ಸುದ್ದಿ ಬರುತ್ತಿತ್ತು. ಏನೂ ಮಾಡಲಾಗದೇ ಹಾಳಾಗಿ ಹೋಗಲಿ ಎಂದು  ಸುಮ್ಮನೆ ಇದ್ದೆ.  ಹೀಗಿರುವಾಗ ಒಂದೆರಡು ವರ್ಷದ ಹಿಂದೆ ಒಂದು ಬೆಳಿಗ್ಗೆ ೧೦ ಗಂಟೆ ಹೊತ್ತಿನಲ್ಲಿ ನಮ್ಮೂರಿನ ಪೊಲೀಸ್ ಠಾಣೆಯಿಂದ ಬುಲಾವ್ ಬಂತು. ಅಲ್ಲಿಗೆ ಹೋಗಿ ನೋಡಿದರೆ ಪಕ್ಕದ ಹಳ್ಳಿಗೆ ಹಳ್ಳಿಯೇ ಜಮಾಯಿಸಿದೆ.

ಒಂದು ವ್ಯಾನಿನಲ್ಲಿ ಒಂದು ಸತ್ತ ಮಿಶ್ರ ತಳಿಯ ಹಸು ಇದೆ, ನಾಲ್ಕಾರು ಸತ್ತ  ಆಡುಗಳಿವೆ. ಅವು ಮಿಮೋಸಾ ಮೇಯ್ದು ನಿಗರಿಕೊಂಡಿದ್ದವು. ಅಲ್ಲಿ ನೆರೆದಿದ್ದವರೆಲ್ಲರೂ ನನ್ನನ್ನು ಕೆಕ್ಕರಿಸಿ ನೋಡುತ್ತಿದ್ದಾರೆ. ಪೋಲೀಸ್ ಠಾಣೆಯ ಒಳಹೋದೆ. ಇನ್ಸ್‌ಪೆಕ್ಟರ್‍ “ನೀವು ಸಜ್ಜನರು. ಇಲ್ಲಿಗೆಲ್ಲ ಬರಬಾರದು ಅಲ್ಲೇ ಏನಾದರೂ ವ್ಯವಹಾರ ಮುಗಿಸಿ ಸಾರ್‍” ಎಂದರು. ನಾನು ಹೊರಬಂದೆ. ಯಾರು ಯಾರು ನನ್ನ ಹಿತೈಷಿಗಳು ಎಂದು ಭಾವಿಸಿದ್ದೆನೋ, ಅವರೆಲ್ಲರೂ ರಣರಂಗದಲ್ಲಿ ಶತ್ರುಗಳಂತೆ ನಿಂತಿದ್ದರು. ಬಾಯಿಗೆ ಬಂದಂತೆ ಬಯ್ಯುತ್ತಿದ್ದರು. ದೂರದಲ್ಲಿ ಕುಳಿತಿದ್ದ ಹೆಂಗಸೊಂದು ಗೊಳೋ ಎಂದು ಅಳುತ್ತಿತ್ತು. ನನ್ನನ್ನು ನೋಡಿ ಅದು ತನ್ನ ದನಿಯನ್ನು ಇನ್ನೂ ಏರಿಸಿ ಎದೆಯನ್ನು ಬಡಿದು, ಬಡಿದು ಅಳತೊಡಗಿತು. ಅಲ್ಲಿದ್ದ ಒಂದಿಬ್ಬರಿಗೆ ಮನೆಯ ಹತ್ತಿರ ಬರ ಹೇಳಿ ನಾನು ನಡೆದೆ. ನನ್ನ ಹಿಂದೆ ಬಂದ ಅವರು ಈಗ ಬಹಳ ಸಂಭಾವಿತರಾಗಿ ನನ್ನ ಪರವಾಗಿ ಇರುವಂತೆ ಮಾತನಾಡತೊಡಗಿದರು. “೬೦ ಸಾವಿರ ಕೊಟ್ಟು ಬಿಡಿ ಅಣ್ಣಾ” ಎಂದರು. ನಾನು ಹೌಹಾರಿ ಹೋದೆ. ತೇಜಸ್ವಿಯವರಿಗೆ ಹೇಳೋಣವೆಂದರೆ ಅವರು ಆಗಲೇ ಪ್ರಯಾಣ ಬೆಳೆಸಿ ೬/೭ ವರ್ಷವಾಗಿತ್ತು. ಕಡೆಗೆ ೩೦ ಸಾವಿರಕ್ಕೆ ತೀರ್ಮಾನ ಮಾಡಿ ಹಣ ಹೊಂದಿಸಿ ಕೊಟ್ಟು ಕಳುಹಿಸಿದೆ.  ಅಲ್ಲಿದ್ದ ನನ್ನ ಹಿತೈಷಿಯೊಬ್ಬ ಇನ್ನ ೧೦ ಸಾವಿರ ಕೊಟ್ಟು ಆಡನ್ನು ನೀವೇ ಇಟ್ಟುಕೊಳ್ಳಿ, ನಾನು ಅದನ್ನು ಮಾರಿ ಹಣ ಕೊಡುತ್ತೇನೆ ಎಂದ. ನನಗೆ ಆಗಲೇ ತಲೆ ಕೆಟ್ಟು ಚಿತ್ರಾನ್ನ ಆಗಿತ್ತು.ಇವನು ಬೇರೆ ಮಾಂಸ ಮಾರಲು ಹೋಗು ಎನ್ನುತ್ತಿದ್ದಾನೆ. ಎಲ್ಲಿಲ್ಲದ ಕೋಪ ಬಂತು. “ಅವೆಲ್ಲ ಆಗಲ್ಲ, ಸುಮ್ನೆ ಹೋಗಯ್ಯ, ನನ್ನ ಕೈಲಿ ಬೈಸಿಕೋ ಬೇಡ” ಎಂದು ಅವನನ್ನು ತೇಜಸ್ವಿ ಧಾಟಿಯಲ್ಲಿ ಬೈದು ಕಳುಹಿಸಿದೆ. ನಂತರ ಅವರು ಆಡನ್ನು ಪಾಲು ಹಾಕಿ ೨೦ ಸಾವಿರ ಮಾಡಿಕೊಂಡರೆಂದು ಆತ ಹೇಳಿ ನನ್ನ ದಡ್ಡತನಕ್ಕೆ ಬೈಯತೊಡಗಿದ.

ಇನ್ನು, ಕಳೆದ ಎರಡು ವರ್ಷಗಳಿಂದ ಎಲ್ಲಿಲ್ಲದ ಮಳೆ. ಮಿಮೋಸಾಕ್ಕೆ ಎಲ್ಲಿಲ್ಲದ ಸಂತೋಷ.ಹು ಚ್ಚಂತೆ ಬೆಳೆಯುತ್ತಿದೆ. ಕಳೆದ ಎರಡು ವರ್ಷಗಳಿಂದ ನಾವೂ ಅದರ ವಿರುದ್ದ ರಣಕಹಳೆಯನ್ನು ಊದಿದ್ದೇವೆ. ಈ ವರ್ಷ ಅದು ಬೀಜ ಆಗುವ ಹೊತ್ತಿಗೆ ಅದನ್ನು ಸರ್ವನಾಶ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ಸಾವಿರಾರು ರೂಪಾಯಿ ಉಳುಮೆಗೆ, ವೀಡರ್‌ಗೆ ಖರ್ಚು ಮಾಡಿದ್ದೇವೆ. ಆದರೂ ಮೊನ್ನೆಯ ದಿನ ನಮ್ಮ ರಾಂಪುರದ ಪಕ್ಕದ ಜಮೀನಿನ ರೈತ ರಾಜಣ್ಣ, “ಅಣ್ಣ, ಆ ಬಡ್ಡತ್ತದ್ದು ಮುಟ್ಟಿದ್ರೆ ಮುನಿ  ಒಂದಿಷ್ಟು ತಂತಿ ದಾಟಿ ನಮ್ಮ ಒಲಕ್ಕೆ ಬಂದ್ ಬಿಟ್ಟವೆ, ಏನ್ ಮಾಡ್ತೀರಿ? ಕೀಳ್ಸಿ ಕೊಡಿ” ಎಂದ. ನನಗೆ ಒಂದಿಷ್ಟು ನೆರವಾಗುವ ದೃಷ್ಟಿಯಿಂದ “ಓಗ್ಲಿ, ನಾನೇ ಅದನ್ನು ನಾಶ ಮಾಡ್ತೀನಿ ಒಂದ್ ಬಾಟ್ಲು ರೌಂಡಪ್ ಕೊಡಿಸ್ ಬುಡಿ, ಬರೀ ೭೦೦ ರೂಪಾಯಿ” ಅಂದ. ನನ್ನ ತಲೆ ತಿರುಗತೊಡಗಿತು. ಮೂವತ್ತು ವರ್ಷದ ಹಿಂದೆ ಗುರುಗಳು ತೋರಿದ ಭೂ ಮುಚ್ಚಳಿಕೆಯನ್ನು ನಾಶ ಮಾಡಲು ನಾನು ಮಾಡಬೇಕಾಗಿರುವ ಹರಸಾಹಸದ ಬಗ್ಗೆ ನನಗೆ ನಗು ಬರುತ್ತಿದೆ. ಅವನಿಗೆ ರೌಂಡ್ ಅಪ್ ಕೊಡಿಸಲೋ, ಇಲ್ಲವೇ ನಾಲ್ಕು ಸಾವಿರ ಖರ್ಚು ಮಾಡಿ ಕೀಳಿಸಲೋ ಗೊತ್ತಾಗುತ್ತಿಲ್ಲ. ಮುಟ್ಟಿದರೆ ಮುನಿ ಇಡೀ ದೇಶವನ್ನು ಆಕ್ರಮಿಸುತ್ತಿರುವ, ಏಕ ಸಂಸ್ಕೃತಿ, ಏಕ ಧರ್ಮದ ಅಪಾಯದ ರೂಪಕದಂತೆ ನನಗೆ ಕಾಣುತ್ತಿದೆ. ಈ ಹೊತ್ತಿಗೆ ನನ್ನ ಗಡ್ಡ ಪೂರ್ಣ ಬೆಳ್ಳಗಾಗಿದೆ, ನಾಲ್ಕು ತಿಂಗಳ ಹಿಂದೆ ಮೊಮ್ಮಗ ಬಂದಿದ್ದಾನೆ. ಗುರುಗಳು ನನ್ನಿಂದ ದೂರವಾಗಿ ೧೦ ವರ್ಷ ಕಳೆದಿದೆ. ಆದರೆ ಮಿಕ್ಕೆಲ್ಲವೂ ಹಾಗೇ ಇರುವಂತೆ ಕಾಣುತ್ತಿದೆ. ನನ್ನ ತಲೆಮಾರಿನ ಗೆಳೆಯರು ಚಿದಂಬರ ರಹಸ್ಯದ ಕ್ರಾಂತಿಕಾರಿ ಯುವಕರಂತೆ ಕಾಣುತ್ತಿದ್ದೇವೆ. ನಾವು ಭೇಟಿಯಾದಾಗ ನಾವು ಮಾಡಿರುವ ಸಾಹಸಗಳನ್ನು ನೆನೆದು ಬಿದ್ದು, ಬಿದ್ದು ನಗುತ್ತೇವೆ.

‍ಲೇಖಕರು Admin

September 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: