(ಇಲ್ಲಿಯವರೆಗೆ…)
ಹಾಳಾಗುತ್ತೆ, ನಾಶವಾಗುತ್ತೆ ಅಂತ ಕೊರಗ್ತಾ ಕೂರ್ಬೇಡಿ..
’1971-72ರ ಸುಮಾರಿನಲ್ಲಿ ನಾನು ಕಾಲೇಜ್ ಓದ್ತಿದ್ದಾಗ ಕಾಲೇಜಿನ ಕಾರ್ಯಕ್ರಮಕ್ಕೆ ಇವ್ರನ್ನ ಇನ್ವೈಟ್ ಮಾಡಿದ್ವಿ. ಕಪ್ಪು ಬಣ್ಣದ ಬುಲ್ಗಾನಿ ಗಡ್ಡದ ತೇಜಸ್ವಿ ನಮ್ ಕಾಲೇಜಿಗೆ ಬಂದ್ರು. ಅದೇ ಮೊದಲು ನಾನು ಅವ್ರನ್ನ ನೇರವಾಗಿ ನೋಡಿದ್ದು. ಅಲ್ಲಿವರೆಗೂ ಅವ್ರನ್ನ ಬರೀ ಪುಸ್ತಕದಲ್ಲಿ ಅವರಕಥೆ ಕಾದಂಬರಿಗಳಲ್ಲಿ ಮಾತ್ರ ನೋಡಿದ್ವಿ, ಕೇಳಿದ್ವಿ. “ಬದಲಾವಣೆ ತರೋದು ಯುವ ಶಕ್ತಿ ಕೈಯಲ್ಲಿರುತ್ತೆ. ಚೈನಾ ದೇಶದಲ್ಲಿ ಮಾವುತ್ಸೇ ತುಂಗಾ ಹೇಳಿದ್ದು ಇದನ್ನೇ, ’ನೀವು ಯಾರು ಏನು ಬೇಕಾದ್ರೂ ನಾಶ ಮಾಡಿ… ಒಂದಲ್ಲ ಒಂದು ದಿನ ಅದನ್ನ ನೀವೇ ಮರುಸೃಷ್ಟಿ ಮಾಡ್ತೀರಿ. ಹಾಗಾಗಿ ಮೊದಲು ನೀವು ನಾಶ ಮಾಡಿದ್ರೆ ತಪ್ಪೇನಾಗೋದಿಲ್ಲ. ಒಂದು ಕ್ರಾಂತಿ ಆಗ್ಬೇಕಾದ್ರೆ ಅನೇಕ ಸಂಗತಿಗಳು ನಾಶ ಆಗ್ತವೆ. ಆದ್ರೆ ನಾಶ ಆಗಿದ್ದನ್ನ ಆ ಶಕ್ತಿಗಳೆಲ್ಲಾ ಪುನರ್ಗೂಡಿ ಮರುಸೃಷ್ಟಿ ಮಾಡ್ಬ್ಕಾಗುತ್ತೆ. ಹಾಗಾಗಿ ಚೈನಾ ದೇಶ ಪೂರ್ತಿ ನಾಶ ಆದ್ರೂ ಅದು ಹೊಸ ಚೈತನ್ಯಪೂರಿತ, ಹೊಸ ಜೀವಂತಿಕೆ ತುಂಬಿದ ದೇಶವಾಗುತ್ತೆ’ ಅಂತ. ಹಾಗಾಗಿ ಹಾಳಾಗುತ್ತೆ, ನಾಶವಾಗುತ್ತೆ ಅಂತ ಕೊರಗ್ತಾ ಕೂರ್ಬೇಡಿ”.
ಹೀಗಂತ ಅವತ್ತು ವಿದ್ಯಾರ್ಥಿಗಳನ್ನೆಲ್ಲ ಕುರಿತು ಅವರು ಆಡಿದ ಮಾತುಗಳು ನನಗೆ ಅಲ್ಲಿವರೆಗೂ ಇದ್ದ ಯೋಚನಾ ಧಾಟಿಯನ್ನೇ ಬದಲಾಯಿಸಿಬಿಡ್ತು. ನನ್ನ ಜೀವನದ ಪ್ರಮುಖವಾದ ಘಟ್ಟ ಅಂದ್ರೆ ಅದೇ…’ ಹೀಗೆ ಮಾತು ಪ್ರಾರಂಭಿಸಿದವರು ಚಿಕ್ಕಮಗಳೂರಿನ ಜನಮಿತ್ರ ಪತ್ರಿಕೆಯ ಸಂಪಾದಕರು ಹಾಗೂ ಟೈಂಸ್ ಆಫ್ ಇಂಡಿಯಾದ ವರದಿಗಾರರು, ಪಶ್ಚಿಮಘಟ್ಟ ರಕ್ಷಣಾ ಆಂದೋಲನದಲ್ಲಿ ಸಕ್ರಿಯ ಕಾರ್ಯಕರ್ತರು ಹಾಗೂ ಸುಮಾರು ಮೂವತ್ತು ವರ್ಷಗಳ ಕಾಲ ತೇಜಸ್ವಿಯವರೊಂದಿಗೆ ಒಡನಾಟವಿಟ್ಟುಕೊಂಡಿದ್ದ ಚಿಕ್ಕಮಗಳೂರಿನ ಗಿರಿಜಾಶಂಕರ್ ರವರು. ಮರುದಿನ ಬೆಳಿಗ್ಗೆಯ ಮೊದಲ ಚಿತ್ರೀಕರಣ ಗಿರಿಜಾಶಂಕರ್ ರವರದ್ದಾಗಿತ್ತು. ಬೆಳಿಗ್ಗೆ 8ಗಂಟೆಯ ಹೊತ್ತಿಗೆ ಚಿಕ್ಕಮಗಳೂರಿನ ಅವರ ಮನೆ ಸೇರಿ ಅಂದಿನ ಚಿತ್ರೀಕರಣ ಪ್ರಾರಂಭಿಸಿದ್ದೆವು. ಅವರು ಅವರ ಅಂದಿನ ಎಲ್ಲಾ ಕೆಲಸ ಕಾರ್ಯಗಳನ್ನು ನಮ್ಮ ಚಿತ್ರೀಕರಣದ ಕಾರಣದಿಂದಾಗಿ ಬದಿಗೊತ್ತಿ ಕುಳಿತಿದ್ದರು. ಗಿರಿಜಾಶಂಕರ್ ರವರು ತೇಜಸ್ವಿಯವರ ಪರಿಸರ ಕಾಳಜಿ ಹಾಗೂ ಪರಿಸರಕ್ಕೆ ಸಂಬಂಧಿಸಿದ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದವರಾದ್ದರಿಂದ ಇವರ ಮಾತುಗಳು, ಅಂದಿನ ಘಟನೆಗಳ ನೆನಪುಗಳು ಸಾಕ್ಷ್ಯಚಿತ್ರಕ್ಕೆ ತುಂಬಾ ಮುಖ್ಯವಾಗಿದ್ದವು. ಇವರ ಜೊತೆ ಅಂದಿನ ಪರಿಸರ ಸಂರಕ್ಷಣಾ ಹೋರಾಟಗಳಲ್ಲಿ ಜೊತೆಯಾಗಿದ್ದ ಮತ್ತೊಬ್ಬರೆಂದರೆ ಚಿಕ್ಕಮಗಳೂರಿನ ಡಿವಿ ಗಿರೀಶ್. ಇವರಿಬ್ಬರ ಮಾತುಗಳ ಚಿತ್ರೀಕರಣವನ್ನು ಒಟ್ಟಿಗೆ ಮಾಡಬೇಕೆಂದುಕೊಂಡೆದ್ದೆವಾದರು ಗಿರೀಶ್ ರವರು ಗಿರಿಜಾ ಶಂಕರ್ ರವರ ಮನೆಗೆ ಬರುವುದು ತಡವಾಗುತ್ತದೆ ಎಂದು ತಿಳಿದಿದ್ದರಿಂದ ಗಿರೀಶ್ ರವರ ಮಾತುಗಳ ಚಿತ್ರೀಕರಣ ನಂತರ ಮಾಡಲು ನಿರ್ಧರಿಸಿ ಚಿತ್ರೀಕರಣ ಪ್ರಾರಂಭಿಸಿದ್ದೆವು.
ಗಿರಿಜಾ ಶಂಕರ್ ಮೇಲಿನಂತೆ ತೇಜಸ್ವಿಯೊಂದಿಗಿನ ಒಡನಾಟದ ಪ್ರಾರಂಭದ ದಿನಗಳನ್ನು ನೆನಪಿಸಿಕೊಳ್ಳುವ ಮೂಲಕ ಮಾತು ಪ್ರಾರಂಭಿಸಿದರು. “ಆರು ತಿಂಗಳ ಮಗುವಾಗಿದ್ದಾಗಿನಿಂದಲೂ ನಾನು ಈ ಪಶ್ಚಿಮ ಘಟ್ಟದಲ್ಲಿ ಆಡಿ ಬೆಳೆದವನೇ ಆಗಿದ್ರೂ ಆಗೆಲ್ಲ ನನಗೆ ಈ ಪರಿಸರ, ಪ್ರಕೃತಿ ಇದರ ಬಗ್ಗೆ ಅಷ್ಟು ಆಸಕ್ತಿ ಇರಲಿಲ್ಲ. ಆದರೆ ಉಲ್ಲಾಸ್ ಕಾರಂತರ ಸಂಪರ್ಕ ಆದ ನಂತರ ನಮ್ಮ ಸುತ್ತಲಿನ ಪರಿಸರ, ಕಾಡು, ಇಲ್ಲಿನ ಹಕ್ಕಿ ಪಕ್ಷಿಗಳು, ಇಲ್ಲಿನ ಜೀವವೈವಿಧ್ಯತೆ ಕಡೆಗೆಲ್ಲಾ ನನ್ನ ಆಸಕ್ತಿ ಬೆಳೀತು. ಮುಂದೆ ಅದು ತೇಜಸ್ವಿಯವರ ಸಂಪರ್ಕದಿಂದಾಗಿ ಮತ್ತಷ್ಟು ಹೆಚ್ಚಾಗ್ತಾ ಹೋಯ್ತು”
“ಸ್ವಲ್ಪ ವಿವರವಾಗಿ ಹೇಳ್ತೀರ?”ನಾನು ಪ್ರಶ್ನಿಸಿದೆ. ಗಿರಿಜಾ ಶಂಕರ್ ತಮ್ಮ ಫ್ರೆಂಚ್ ಬೇರ್ಡ್ ಗಡ್ಡದ ಮೇಲೆ ಕೈಯಾಡಿಸುತ್ತಾ ದೀರ್ಘವಾದ ಉಸಿರೊಂದನ್ನು ತೆಗೆದುಕೊಂಡು ಅಂದಿನ ದಿನಗಳ ಘಟನೆಗಳನ್ನು ವಿವರಿಸಲು ಪ್ರಾರಂಭಿಸಿದರು.
“ಇದೆಲ್ಲಾ ಮತ್ತೆ ರಿಪೇರಿ ಆಗ್ಬೇಕಾದ್ರೆ ಇನ್ನೊಂದ್ ನೂರು ವರ್ಷ ಬೇಕಲ್ರಿ”
“1989ರಲ್ಲಿ ನಾವು ’ಪಶ್ಚಿಮ ಘಟ್ಟ ಉಳಿಸಿ, ಸೇವ್ ವೆಸ್ಟರ್ನ್ ಘಾಟ್ಸ್’ ಅನ್ನೊ ಬಹುದೊಡ್ಡ ಆಂದೋಲನ ಹಮ್ಮಿಕೊಂಡಿದ್ವಿ. ಕನ್ಯಾಕುಮಾರಿಯಿಂದ ಗೋವಾದ ತಾಪಿ ನದಿಯವರೆಗೂ ಕಾಲ್ನಡಿಗೆಯಲ್ಲಿ ಸಂಚರಿಸಿ ಪಶ್ಚಿಮ ಘಟ್ಟದ ಈಗಿನ ಸ್ಥಿತಿಗತಿಗಳ ಬಗ್ಗೆ ತಿಳ್ಕೋಬೇಕು ಜೊತೆಗೆ ಎಲ್ರಿಗೂ ತಿಳಿಸ್ಬೇಕು ಅನ್ನೋದು ನಮ್ಮ ಉದ್ದೇಶ ಆಗಿತ್ತು. ಶಿವರಾಮ ಕಾರಂತರು ಈ ಆಂದೋಲನ ಉದ್ಘಾಟನೆ ಮಾಡಿದ್ರು. ನಾನು ಈ ಮಾರ್ಚ್ ನಲ್ಲಿ ಚಿಕ್ಕಮಗಳೂರು ಜಿಲ್ಲಾ ಸಂಚಾಲಕನಾಗಿ ಕೆಲಸ ಮಾಡ್ತಿದ್ದೆ. ಈ ಮಾರ್ಚ್ ಚಿಕ್ಕಮಗಳೂರಿಗೆ ಬಂದಾಗ ಕಳಸದಲ್ಲಿ ಒಂದು ಬೃಹತ್ ಸಮಾವೇಶ ಹಮ್ಮಿಕೊಂಡಿದ್ವಿ. ನಾನು ವೇದಿಕೆ ಮೇಲಿದ್ದೆ. ಆಗ ಜನಗಳ ಮಧ್ಯೆ ಇದ್ದಕ್ಕಿದ್ದ ಹಾಗೇ ಏನೊ ಗೊಂದಲ ಗಡಿಬಿಡಿ ಶುರುವಾಯ್ತು. ಏನದು ಅಂತ ಕೇಳ್ದಾಗ ಯಾರೊ ಹೇಳಿದ್ರು ’ತೇಜಸ್ವಿ ಬಂದ್ರು’ ಅಂತ. ನೋಡಿದ್ರೆತೇಜಸ್ವಿ ನಿಜವಾಗ್ಲೂ ಆ ಸಭೆಗೆ ಬಂದಿದ್ರು. ನಾವ್ಯಾರೂ ಅವ್ರಿಗೆ ಅಫಿಶಿಯಲ್ಲಾಗಿ ಆಹ್ವಾನ ಕೊಡದೇ ಇದ್ರೂ ಅವ್ರು ವಿಷಯ ತಿಳ್ಕೊಂಡು ಆ ಸಭೆಗೆ ಬಂದು ಜನಗಳ ಜೊತೆ ನಿಂತಿದ್ರು. ತಕ್ಷಣ ನಾನೇ ಹೋಗಿ ಅವ್ರನ್ನ ವೇದಿಕೆಗೆ ಕರ್ಕೊಂಡ್ ಬಂದೆ. ಸಾಮಾನ್ಯವಾಗಿ ಯಾವತ್ತೂ ವೇದಿಕೆ ಹತ್ತದೇ ಇದ್ದವರು ಅವತ್ತು ಪರಿಸರಕ್ಕೆ ಸಂಬಂಧಪಟ್ಟ ಕೆಲಸ ಅಂತ ಹೇಳಿ ವೇದಿಕೆಗೆ ಬರೋಕೆ ಒಪ್ಕೊಂಡು ಬಂದ್ರು.
ಅವತ್ತು ಆ ಸಭೆನಲ್ಲಿ ನನ್ನದ್ದು ಮುಖ್ಯ ಭಾಷಣ ಇತ್ತು. ಆದ್ರೆ ನಾನು ಭಾಷಣ ಮಾಡೋದಕ್ಕಿಂತಲೂ ಈ ಸಂದರ್ಭದಲ್ಲಿ ತೇಜಸ್ವಿಯವರು ಮಾತಾಡೋದು ಸೂಕ್ತ ಅನ್ನಿಸಿ ನೀವು ಮಾತಾಡ್ಬೇಕು ಅಂತ ಕೇಳ್ಕೊಂಡೆ. ಅವ್ರು ಒಪ್ಕೊಂಡು ಮಾತಾಡೊಕೆ ನಿಂತ್ರು. ಅವರು ಅವತ್ತು ಎಷ್ಟು ಸರಳವಾಗಿ ’ಯಾಕೆ ನಾವು ಈ ಪಶ್ಚಿಮ ಘಟ್ಟಗಳನ್ನ ಉಳಿಸಿಕೊಳ್ಳಬೇಕು?’ ಅಂತ ಹೇಳಿದ್ರು ಅಂದ್ರೆ ನನಗೆ ಮಾತ್ರ ಅಲ್ಲ ಅಲ್ಲಿದವರು ಎಲ್ರಿಗೂ ಅವರ ಮಾತು ಸರಿ ಅನ್ನಿಸ್ತು. ಅವ್ರು ಹೇಳಿದ್ದು ಇಷ್ಟೆ “ಒಂದು ಸಲ ನಾವು ಈ ಉಷ್ಣವಲಯದ ಕಾಡುಗಳನ್ನ ಕಳ್ಕೊಂಡ್ರೆ ಮತ್ತೆ ರಿಕ್ರಿಯೇಟ್ ಮಾಡೋಕ್ ಆಗಲ್ಲ. ಆ ಸಂಕೀರ್ಣತೆಯಲ್ಲಿ ಮತ್ತೆ ಕಾಡನ್ನು ಸೃಷ್ಟಿ ಮಾಡೋಕೆ ಆಗಲ್ಲ. ನಾವು ಮರಗಳನ್ನು ನೆಡಬಹುದು, ಆದ್ರೆ ಅದು ನೆಡುತೋಪಾಗುತ್ತೆ ಅಥವ ಒಂದು ಪ್ಲಾಂಟೇಷನ್ ಥರ ಆಗುತ್ತೆ ಹೊರತು ಒಂದನ್ನೊಂದು ಅವಲಂಬಿಸಿದ ಸಂಕೀರ್ಣ ವ್ಯವಸ್ಥೆ ಆಗೋದಿಲ್ಲ. ಒಂದು ವೃಕ್ಷ, ಅದಕ್ಕೆ ಹಬ್ಬಿರೊ ಬಳ್ಳಿ, ಆ ಬಳ್ಳಿಯಲ್ಲಿ ಬಿಡೊ ಹೂವ್ವು, ಆ ಹೂವ್ವಿನ ಜೇನು ಹೀರೋಕೆ ಬರೊ ಕೀಟ, ಆ ಕೀಟವನ್ನ ತಿನ್ನೊಕೆ ಬರೊ ಹಕ್ಕಿ, ಹುಳ ಇತ್ಯಾದಿ, ಇವನ್ನ ನಂಬಿದ ಬೇಟೆಯ ಪ್ರಾಣಿಗಳು ಹೀಗೆ ಸರಪಳಿ ತರೋಕ್ಕಾಗಲ್ಲ. ಹಾಗಾಗಿ ನಾವು ಈ ಪಶ್ಚಿಮ ಘಟ್ಟದ ಕಾಡುಗಳನ್ನ ಉಳಿಸಿಕೊಳ್ಳಬೇಕಾಗ್ತದೆ” ಅಂತ ತುಂಬಾ ಸರಳವಾಗಿ ಎಲ್ರಿಗೂ ಅರ್ಥ ಆಗೋ ಹಾಗೆ ಹೇಳಿದ್ರು. ಅಲ್ಲಿಂದ ನನ್ನ ಅವರ ಸಂಪರ್ಕ ಸ್ವಲ್ಪ ಜಾಸ್ತಿ ಆಯ್ತಾ ಹೋಯ್ತು”
ಎಂದು ಮಾತು ನಿಲ್ಲಿಸಿದರು.
ನಂತರ ಸರ್…? ಮತ್ತೆ ಪ್ರಶ್ನಿಸಿದೆ.
“ನಂತರ ಕುದುರೆಮುಖ ಗಣಿಗಾರಿಕೆ ಬಗ್ಗೆ ನಾವು ಧ್ವನಿ ಎತ್ತಿದಾಗ ತೇಜಸ್ವಿ ನಮ್ ಜೊತೆ ತುಂಬಾ ಸಕ್ರಿಯವಾಗಿ ಪಾಲ್ಗೊಂಡ್ರು. ನಾನು ಒಂದಿನ ಅವರ ಮನೆಗೆ ಹೋಗಿ ’ಸಾರ್ ನಾವು ಈ ಥರ ಕುದುರೆಮುಖ ಗಣಿಗಾರಿಕೆ ಬಗ್ಗೆ ಕೇಸ್ ಹಾಕ್ತಿದ್ದೀವಿ. ನೀವು ಇದರಲ್ಲಿ ಭಾಗಿ ಆಗ್ಬೇಕು. ಅಪ್ಲಿಕೇಶನ್ನಿಗೆ ಸೈನ್ ಹಾಕ್ಬೇಕು’ ಅಂತ ಹೇಳ್ದಾಗ ಅವರ ಫಸ್ಟ್ ರಿಯಾಕ್ಷನ್ನೇ ’ಅಲ್ರಿ ಆ ಕುದುರೆಮುಖ ಗಣಿಗಾರಿಕೆ ಸುತ್ತಾಮುತ್ತಾ ಇರೋರೆಲ್ಲಾ ಸೈನ್ ಹಾಕಿದಾರೇನ್ರಿ? ಗಣಿಗಾರಿಕೆಯಿಂದ ಅವ್ರಿಗೆ ಎಫೆಕ್ಟ್ ಆಗಿ ಅಮೇಲೆ ನಮ್ಮತ್ರ ಬರೋವಾಗ ಮೊದಲು ಅವರು ಸೈನ್ ಹಾಕ್ಬೇಕೊ ಅಥವ ನಾನೊ’ ಅಂತ ಕೇಳಿದ್ರು. ನಾನು ’ಇಲ್ಲ ಸಾರ್ ಅಲ್ಲಿನವರು ಸೈನ್ ಹಾಕಿದಾರೆ. ಅಲ್ಲಿ ಸುರೇಶ್ ಇಂತಹ ಕೆಲವು ಯುವಕರು ಮುಂದೆ ಬಂದು ಈ ಅಪ್ಲಿಕೇಷನ್ನಿಗೆ ಸೈನ್ ಹಾಕಿದಾರೆ’ ಅಂತ ಅವ್ರಿಗೆ ಹೇಳ್ದೆ. ತಕ್ಷಣ ಅವ್ರು ಒಪ್ಕೊಂಡು ಸೈನ್ ಮಾಡಿದ್ದಷ್ಟೇ ಅಲ್ಲ ಅವತ್ತಿನ ಕೆಲವು ರಾಜಕಾರಣಿಗಳಿಗೆ ಫೋನ್ ಮಾಡಿ ಅವತ್ತಿನ ಪರಿಸ್ಥಿತಿಯನ್ನ ವಿವರಿಸಿದರು. ಅವತ್ತಿನ ಭದ್ರಾ ನದಿ ಹಾಳಾಗಿರೋದರ ಬಗ್ಗೆ ವಿವರಿಸಿದರು. ಒಂದ್ಸಲ ಅಂತು ಅವ್ರು ಎಷ್ಟ್ ಸಿಟ್ಟಿನಲ್ಲಿ ಮಾತಾಡಿದ್ರು ಅಂದ್ರೆ ’ಏನ್ರಿ ಭದ್ರಾ ನದಿ ಮೊದಲೆಲ್ಲಾ ಎಷ್ಟು ಚೆನ್ನಾಗಿ ಕಾಣ್ತಾ ಇತ್ರಿ. ಈಗ ನೋಡಿದ್ರೆ ಕೊಚ್ಚೆಗುಂಡಿ ಥರ ಕಾಣುತ್ತಲ್ರಿ. ಇದೆಲ್ಲಾ ಮತ್ತೆ ರಿಪೇರಿ ಆಗ್ಬೇಕಾದ್ರೆ ಇನ್ನೊಂದ್ ನೂರು ವರ್ಷ ಬೇಕಲ್ರಿ. ಅವರು ಗಣಿ ತೋಡಿ ತೆಗೆದಿರುವ ಜಾಗದಲ್ಲಿ ಮತ್ತೆ ಜೀವವೈವಿಧ್ಯ ಜೀವ ತಳಿಬೇಕಾದ್ರೆ ಅಲ್ಲಿ ನೂರಾರು ವರ್ಷ ಮಳೆಬಿದ್ದು, ಹಸಿರು ಚಿಗುರಿ ಅದು ಪಾಚಿ ಆಗಿ ಜೀವ ಪಡೆಬೇಕಾದ್ರೆ ಶತಮಾನಾನೇ ಬೇಕಲ್ರಿ’ ಅಂತ ಸಿಟ್ಟಿನಲ್ಲಿ ಹೇಳಿದ್ರು. ನಮಗೂ ಅವ್ರು ಹೇಳ್ತಿರೋದೆಲ್ಲ ಸರಿ ಅಂತ ಗೊತ್ತಾಗ್ತಿದ್ರು ನಾವ್ಯಾರು ಏನೂ ಮಾಡೋಹಾಗಿರಲಿಲ್ಲ.
“ನಾವು ಯಾವಾಗ್ಲೂ ರೈಲ್ವೇ ಲೈನ್ ಥರನೇ ಇರೋದಕ್ಕಾಗೋದಿಲ್ಲ”
ಮುಂದೆ ಅವರು ಮಾಡಿದ ಕಾಫಿ ಬೋರ್ಡ್ ವಿರುದ್ಧದ ಹೋರಾಟಗಳಾಗಲಿ, ಭದ್ರಾ ಅಭಯಾರಣ್ಯ ಉಳಿಸಿ ಹೋರಾಟ ಆಗಲಿ ಅಥವ ಕುವೆಂಪು ಜೈವಿಕ ವನ ಮಾಡ್ಬೇಕು ಅನ್ನೊ ಹೋರಾಟಗಳಲ್ಲಾಗಲಿ ಅವರಿಗೆ ಪ್ರತಿಯೊಂದು ಹೋರಾಟದ ಬಗ್ಗೇನೂ ಸ್ಪಷ್ಟವಾದ ನಿಲುವು, ನಿರ್ದಿಷ್ಟ ಕಾರಣಗಳಿದ್ದವು. ಅವರು ತೇಜಸ್ವಿ ಬಂದ್ರು ತೇಜಸ್ವಿ ಬಂದ್ರು…ಹೇಳ್ತಿದ್ದಿದ್ದು ’ಹೋರಾಟ ಅಂದ್ರೆ ಅದು ಸುಮ್ಮನೆ ಭಾವಾವೇಶ, ಕೂಗಾಟ ಕಿರುಚಾಟ ಅಲ್ಲ. ಯಾವುದೇ ಪ್ರತಿಭಟನೆ, ಹೋರಾಟದ್ ಹಿಂದೇನೂ ಒಂದು ನಿರ್ದಿಷ್ಟ ಕಾರಣ ಮತ್ತೆ ಆ ಕಾರಣದ ಮೂಲಕ ಒಂದು ನಿರ್ದಿಷ್ಟ ಪ್ರತಿಫಲ ಸಿಗೋಹಾಗಿರಬೇಕು. ಅದು ಬಿಟ್ಟು ಸುಮ್ ಸುಮ್ನೆ ಅವೇಶದಿಂದ ಕೂಗಾಡಿದ್ರೆ ಏನೂ ಪ್ರಯೋಜನ ಆಗೋದಿಲ್ಲ’ ಅಂತಿದ್ರು. ಹಾಗಾಗಿ ದಲಿತ ಚಳುವಳಿ ಮತ್ತು ರೈತ ಚಳುವಳಿ ವಿಫಲವಾದಾಗ್ಲೂ ಅವ್ರಿಗೆ ನೋವಿತ್ತು. ಮತ್ತು ಈ ವಿಫಲತೆಗೆ ಕಾರಣ ಆ ಚಳುವಳಿಯಲಿದ್ದ ಕೆಲವರ ನಿಲುವುಗಳು, ಅಸ್ಪಷ್ಟ ನಿರ್ಧಾರಗಳೇ ಕಾರಣ ಅಂತ ಹೇಳ್ತಿದ್ರು. ’ನಾವು ಯಾವಾಗ್ಲೂ ರೈಲ್ವೇ ಲೈನ್ ಥರನೇ ಇರೋದಕ್ಕಾಗೋದಿಲ್ಲ. ವಿ ನೆವರ್ ಮೀಟ್ ಈಚ್ ಅದರ್ ಅಂತ. ಯಾವುದಾದರೂ ಒಂದು ಹಂತದಲ್ಲಿ ರಾಜಿ ಆಗ್ಬೇಕಾಗುತ್ತೆ. ರಾಜಿ ಆಗೋದು ಅಂದ್ರೆ ಸರಂಡರ್ ಆಗೋದು ಅಂತಲ್ಲ. ರಾಜಿ ಆಗಿ ಅಲ್ಲಿಂದ ಮತ್ತೆ ಮುಂದಕ್ಕೆ ಚಳುವಳಿಯನ್ನ ತಗೊಂಡ್ ಹೋಗ್ಬೇಕಾಗುತ್ತೆ. ಆವೇಶದಿಂದ ಏನೂ ಆಗೋದಿಲ್ಲ. ಅದರಲ್ಲೂ ಸರ್ಕಾರದ ವಿರುದ್ಧ ಹೋರಾಟ ಮಾಡ್ಬೇಕು ಅಂತಾದಾಗ ನಮ್ಮ ಹೋರಾಟಕ್ಕೂ ಸ್ಪಷ್ಟವಾದ ಉದ್ದೇಶ, ಸ್ಪಷ್ಟ ನಿಲುವು ಇರ್ಬೇಕಾಗ್ತದೆ’ ಅಂತ ಹೇಳ್ತಿದ್ರು.
ಇದೆಲ್ಲದ್ರಿಂದ ಕ್ರಮೇಣ ನಮ್ಮ ದೃಷ್ಟಿಕೋನವೂ ಬದಲಾಗ್ತಾ ಬಂತು. ಮುಖ್ಯವಾಗಿ ನಿಷ್ಠೆ ಅಂದ್ರೆ ಏನು ಅಂತ ಅವ್ರಿಂದ ನಾವು ಕಲ್ತುಕೊಂಡ್ವಿ. ಅವರು ಯಾವುದೇ ಕೆಲಸಕ್ಕೆ ಕೈ ಹಾಕ್ತಾರೆ ಅಂದ್ರು ಅದರಲ್ಲಿ ಫೋಕಸ್ ಇರ್ತಿತ್ತು. ಒಂದು ರೀತಿ ಹೇಳ್ಬೇಕು ಅಂದ್ರೆ ಲೇಸರ್ ಕಿರಣಗಳಿಗಿರುವ ಫೋಕಸ್ಸು ಅವರ ಮನಸ್ಸಿಗಿತ್ತು. ಅದು ಬರವಣಿಗೆ ಆಗಿರ್ಲಿ, ಫೋಟೋಗ್ರಫಿ ಆಗಿರ್ಲಿ, ಪೈಂಟಿಂಗ್ ಆಗಿರ್ಲಿ ಯಾವುದೇ ವಿಷಯ ತಗೊಂಡ್ರು ಪಕ್ಕ ಕಾನ್ಸನ್ಟ್ರೇಷನ್ನು ಮತ್ತೆ ಪಕ್ಕ ಪ್ರಾಕ್ಟಿಕಲ್ಲು. ಕುದುರೆಮುಖದ ವಿಚಾರದಲ್ಲಿ ನಾವು ಎಷ್ಟೇ ಭಾವಾವೇಶದಿಂದ ಹೋರಾಡಿದ್ರು ನಮಗೆ ಜಯ ಸಿಕ್ತಿರ್ಲಿಲ್ಲ. ಆದ್ರೆ ತೇಜಸ್ವಿಯವರ ಹೇಳಿದ ಹಾಗೆ ಸುಪ್ರಿಂ ಕೋರ್ಟಿಗೆ ವೈಜ್ಞಾನಿಕವಾಗಿ ಅಲ್ಲಿ ನಡೀತಿರೊ ಅನಾಹೂತಗಳ ಬಗ್ಗೆ ಮನವರಿಕೆ ಮಾಡಿಕೊಟ್ಟ ನಂತರವಷ್ಟೇ ನಮಗೆ ಜಯ ಸಿಕ್ಕಿದ್ದು, ಗಣಿಗಾರಿಕೆ ನಿಂತಿದ್ದು’ ಎಂದು ಗಿರಿಜಾ ಶಂಕರ್ ರವರು ಮಾತನಾಡುತ್ತಿದ್ದಾಗ ಅವರ ಪತ್ನಿ ಕಾಫಿ ತಂದಿಟ್ಟರು. ಅಲ್ಲಿಗೆ ನಮ್ಮ ಚಿತ್ರೀಕರಣಕ್ಕೆ ಶಾರ್ಟ್ ಬ್ರೇಕ್ ಬಿತ್ತು. ನಾವು ನಮ್ಮ ಹುಡುಗರು ಹಾಗೂ ಗಿರಿಜಾಶಂಕರ್ ರವರು ಕಾಫಿ ಗುಟುಕರಿಸಿ ಮುಗಿಸಿದ ನಂತರ ಅವರು ಮತ್ತೆ ತೇಜಸ್ವಿ ನೆನಪಿನ ಗಂಟು ಮೂಟೆಗೆ ಕೈ ಹಾಕಿ ಒಂದೊಂದೇ ನೆನಪುಗಳನ್ನು ಮುತ್ತುಗಳಂತೆ ಆರಿಸಿ ನಮಗೆ ನೀಡಲಾರಂಭಿಸಿದರು.
“ದೇವ್ರಿದಾನೆ ಅನ್ನೋನು ಮೂರ್ಖ ಇಲ್ಲ ಅನ್ನೋನೂ ಮೂರ್ಖ!!!”
“ವಿಷಯಗಳನ್ನ ತುಂಬಾ ಚೆನ್ನಾಗ್ ಅನಲೈಸ್ ಮಾಡೋರು ಅವ್ರು. ಇದು ಯಾಕೆ ಹೀಗಿದೆ? ಹೀಗಾದ್ರೆ ಹೇಗಾಗುತ್ತೆ? ತಪ್ಪಾದ್ರೆ ಏನ್ ಮಾಡ್ಬೇಕು? ಅದನ್ನ ಸರಿ ಮಾಡೋದು ಹೇಗೆ? ಹೀಗೆ ವಿವರ ವಿವರವಾಗಿ ಪ್ರತಿಯೊಂದು ವಿಷಯವನ್ನು ಬಿಡಿಸಿ ಬಿಡಿಸಿ ನೋಡ್ತಿದ್ರು. ಒಂದ್ಸಾರ್ತಿ ನಾನು ’ಸಾರ್ ದೇವ್ರಿದ್ದಾನ? ಇದ್ರೆ ನಿಮಗೆ ಅವನಲ್ಲಿ ನಂಬಿಕೆ ಇದ್ಯ?’ ಅಂತ ಕೇಳ್ದೆ. ಅದಕ್ಕವರು ’ನೋಡ್ರಿ ದೇವ್ರಿದಾನೆ ಅನ್ನೋನು ಮೂರ್ಖ ಇಲ್ಲ ಅನ್ನೋನೂ ಮೂರ್ಖ!!! ಈ ವಿಚಾರವಾಗಿ ಶತಮಾನಗಳಿಂದ ಚರ್ಚೆ, ವಾಗ್ವಾದ ನಡೀತಾನೆ ಇದೆ. ಇದ್ರಿಂದ ಯಾವನಿಗಾದ್ರು ಲಾಭ ಆಗಿದ್ಯೇನ್ರಿ? ಸುಮ್ನೆ ಮಾತಿನ ಚಟ ತೀರಿಸ್ಕೊಳ್ಳೊಕೊ ಅಥವ ತಮ್ಮ ಅಸ್ಥಿತ್ವ ಉಳಿಸಿಕೊಳ್ಳೊಕ್ಕೊ ಇಂತ ಬೇಡದ ಚರ್ಚೆ ಮಾಡ್ತಾ ಕಾಲ ಕಳೀತಾರೆ. ನಿಮಗೂ ಏನೂ ಮಾಡೋಕ್ ಕೆಲ್ಸ ಇಲ್ವೇನ್ರಿ? ಇಂಥ ತರಲೆ ವಿಷ್ಯ ಎಲ್ಲ ತಗೊಂಡ್ ಬಂದು ಸುಮ್ನೆ ಸಮಯ ಹಾಳ್ ಮಾಡ್ತೀರಿ’ ಅಂತ ಸರಿಯಾಗ್ ಬೈದ್ರು. ಹಾಗೆ ಅವರು ಸ್ಟ್ರೈಟ್ ಟು ಫೇಸ್ ಅಂತಾರಲ್ಲ ಹಾಗೆ. ಒಂದ್ಸಾರ್ತಿ ನನಗೆ ಫೋನ್ ಮಾಡಿ ’ರೀ ಆ ಕಾದಂಬರಿ ಓದಿದ್ರೇನ್ರಿ?’ ಅಂದ್ರು. ನಾನು ’ನಿನ್ನೆ ತಾನೆ ಓದಿ ಮುಗಿಸ್ದೆ ಸಾರ್.ಯಾಕೆ? ಅಂತ ಕೇಳ್ದೆ. ಅದಕ್ಕವರು ’ಅಲ್ರಿ ಏನಾಗಿದೆ ರೀ ಇವ್ರಿಗೆಲ್ಲ…? ಅಲ್ಲ ಅದೊಂದ್ ಕಾದಂಬರಿಯೇನ್ರಿ…? ಅಷ್ಟು ಅನಾರೋಗ್ಯಕರವಾಗಿ ಬರೆಯೋದಕ್ಕಿಂತಲೂ ಸುಮ್ನಿರೋದು ವಾಸಿ ಅಲ್ವೇನ್ರಿ’ ಅಂತ ಕನ್ನಡದ ಒಬ್ಬ ದೊಡ್ಡ ಕಾದಂಬರಿಕಾರನ ಬರವಣಿಗೆ ಬಗ್ಗೆ ಇದ್ದ ಅಸಮಧಾನವನ್ನ ನೇರವಾಗಿ ಹೇಳ್ಕೊಂಡಿದ್ರು. ಯಾರು ಏನ್ ತಿಳ್ಕೋತಾರೆ? ಸಂಕೋಚ…ರಾಜಿ…ಹಿಂದೊಂದು ಮುಂದೊಂದು ಇಂತಾವೆಲ್ಲ ಮಾಡ್ತಾನೆ ಇರಲಿಲ್ಲ.
ಇದಕ್ಕೆ ಸಂಬಂಧಪಟ್ಟ ಒಂದು ಘಟನೆ ನೆನಪಾಗ್ತಿದೆ…’ಒಂದ್ಸಾರ್ತಿ ಈ ಸಾಹಿತ್ಯ ಪರಿಷತ್ ನಿಂದ ಇಲ್ಲಿ ಒಂದು ಕಾರ್ಯಕ್ರಮ ಆಯ್ತು. ಅದಕ್ಕೆ ತೇಜಸ್ವಿನ ಕರೆದು ಸ್ಟೇಜ್ ಮೇಲೆ ಕೂರಿಸಿದ್ರು. ಕಾರ್ಯಕ್ರಮದ ಮಧ್ಯದಲ್ಲಿ ಅಧ್ಯಕ್ಷರು ಭಾಷಣ ಮಾಡ್ತಾ ’ನಾವು ತುಂಬಾ ವರ್ಷಗಳಿಂದ ತೇಜಸ್ವಿಯವ್ರನ್ನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡ್ಬೇಕು ಅಂತ ಯೋಚಿಸ್ತಿದ್ದೀವಿ. ಆದ್ರೆ ತೇಜಸ್ವಿ ಇದಕ್ಕೆ ಒಪ್ತಾರೋ ಇಲ್ಲವೊ ಅಂತ ತಿಳೀದೆ ಇದುವರೆಗೂ ಅವರ ಹೆಸರೇ ಪ್ರಸ್ತಾಪ ಆಗಿಲ್ಲ. ಅವ್ರೇನಾದ್ರು ಒಪ್ಕೋತಾರೆ ಅಂದ್ರೆ ಅವ್ರನ್ನ ಈ ವರ್ಷದ ಅಧ್ಯಕ್ಷರನ್ನಾಗಿ ಮಾಡ್ಬೇಕು ಅಂತಿದ್ದೀವಿ’ ಅಂತ ಹೇಳಿದ್ರು. ನಾನು ಆಗ್ಲೇ ಹೇಳ್ದೆ ತೇಜಸ್ವಿ ಸರಿಯಾಗಿ ಬೈತಾರೆ ಅಂತ. ತೇಜಸ್ವಿ ಮಾತಾಡೋಕೆ ನಿಂತವ್ರೇ ’ಅಲ್ರಿ ಎಂಥಾ ಮೂರ್ಖತನದ ಪರಮಾವಧಿ ನಿಮ್ಮದು. ಅಲ್ಲ ನಾನು ಒಪ್ಕೋತೀನಿ ನೀವು ನನ್ನನ್ನ ಸಮ್ಮೇಳನದ ಅಧ್ಯಕ್ಷ ಮಾಡಿ ಅಂತ ಬಂದು ಬೇಡ್ಕೊಳ್ಳೇನ್ರಿ ನಿಮ್ಮತ್ರ. ನೀವು ಅಧ್ಯಕ್ಷನ್ನ ಮಾಡಿದ ಮೇಲೆ ಒಪ್ಕೊಳ್ಳೋದು ಬಿಡೋದು ನನಗೆ ಬಿಟ್ಟಿದ್ದು. ಅದು ಬಿಟ್ಟು ಒಪ್ಕೊಳಿ ಅಮೇಲೆ ಅಧ್ಯಕ್ಷನನ್ನಾಗಿ ಮಾಡ್ತೀವಿ ಅಂತೀರಲ್ಲ ನಿಮ್ಮ ಮುಟ್ಠಾಳತನಕ್ಕೆ ಏನ್ರಿ ಹೇಳ್ಲಿ…’ಅಂತ ನೇರವಾಗಿ ಹೇಳಿದ್ರು. ಹಾಗೆ ಅವರ ಸ್ವಭಾವ. ಇವ್ರೇನೊ ದೊಡ್ದವರು, ಇವರು ಚಿಕ್ಕವರು. ಇವನಿಗೊಂದು ಅವನಿಗೊಂದು ಆ ಥರ ಬೇರೆ ಬೇರೆ ಸ್ಕೇಲ್ ಗಳೇ ಅವ್ರಿಗೆ ಗೊತ್ತಿರ್ಲಿಲ್ಲ. ತಪ್ಪು ಅನ್ಸಿದ್ರೆ ತಪ್ಪು ಅಷ್ಟೆ. ಅದ್ರಲ್ಲಿ ಹಿಂದು ಮುಂದಿಲ್ಲ.
“’ನಿಮ್ಮ ಅಯೋಗ್ಯತನಕ್ಕೆ ಇಷ್ಟು ಬೆಂಕಿ ಹಾಕ…”
ಒಂದ್ಸಾತ್ರಿ ನನಗೂ ಸರಿಯಾಗಿ ಕ್ಲಾಸ್ ತಗೊಂಡಿದ್ರು’ ಎಂದು ನಕ್ಕರು ಗಿರಿಜಾಶಂಕರ್. “ಯಾವಾಗ ಸರ್? ಏನಾಯ್ತು ಹೇಳಿ?”ಎಂದು ಹೇಮಂತ ಅವರನ್ನು ತುಂಬಾ ಕುತೂಹಲದಿಂದ ಕೇಳಿದ.
ಅವರು ಹಾಗೇ ನಗುತ್ತಾ ಆ ಘಟನೆಯನ್ನು ವಿವರಿಸಿತೊಡಗಿದರು..’ಒಂದ್ಸಾರ್ತಿ ಅವರ ತೋಟಕ್ಕೆ ಹೋಗಿದ್ದೆ. ಅವರು ತೆಗೆದಿದ್ದ ಫೋಟೋ ನೋಡ್ತಾ ಕೂತಿದ್ದೆ. ಒಂದು ಫೋಟೋ ನೋಡಿ ’ಸಾರ್ ಈ ಹಕ್ಕಿ ಯಾವ್ದು ಸಾರ್?’ ಅಂದೆ. ಶುರುವಾಯಿತು. ನೋಡಿ ಪೂಜೆ, ಪ್ರಸಾದ, ಮಂಗಳಾರತಿ ಎಲ್ಲಾ…’ನಿಮ್ಮ ಅಯೋಗ್ಯತನಕ್ಕೆ ಇಷ್ಟು ಬೆಂಕಿ ಹಾಕ….!!!ಈ ಹಕ್ಕಿ ಯಾವ್ದು ಅಂತ ಕೇಳ್ತೀರಲ್ರಿ…ಅದು ಇಂಥ ಹಕ್ಕಿ…ಹೀಗೆ ಬದುಕುತ್ತೆ…’ ಅಂತೆಲ್ಲಾ ಸರಿಯಾಗಿ ಬೈಯೋಕೆ ಶುರು ಮಾಡಿದ್ರು. ನಾನು ’ಹೋಗ್ಲಿ ಬಿಡಿ ಸಾರ್ ಅದಕ್ಕೆ ನನ್ನ ಅಯೋಗ್ಯತನಕ್ಕೆ ಯಾಕೆ ಬೆಂಕಿ ಹಾಕ್ಬೇಕು. ನಾನು ಈ ಹಕ್ಕಿ ನೋಡಿಲ್ಲ ಅದಕ್ಕೆ ಕೇಳ್ದೆ. ಅದಕ್ಯಾಕ್ ಬೈತೀರ’ ಅಂದೆ. ಅದಕ್ಕವರು ’ಇಷ್ಟು ವರ್ಷ ಈ ಮಲೆನಾಡ್ನಲ್ಲೇ ಹುಟ್ಟಿ ಬೆಳೆದಿದ್ದೀರ..ಈ ಹಕ್ಕಿ ನೋಡಿಲ್ಲ ಅಂತೀರಲ್ಲ. ಇದು ಮಲ್ನಾಡಿನಲ್ಲಿ ಮನೆ ಸುತ್ತಮುತ್ತಾನೇ ವಾಸ ಮಾಡುತ್ತೆ. ಅದನ್ನೂ ನೋಡಿಲ್ಲ ಅಂದ್ರೆ ನೋಡೋ ಕಣ್ಣಿಲ್ಲ, ಮನಸಿಲ್ಲ, ನೋಡಿಲ್ಲ ಅಷ್ಟೆ’ ಅಂತ ಮತ್ತಷ್ಟು ಬೈದ್ರು. ನನಗೂ ಅನ್ನಿಸ್ತು..’ಹೌದು ನಮ್ಮ ಸುತ್ತ ಮುತ್ತಾ ಇರೋ ಪಕ್ಷಿ, ಪ್ರಾಣಿ, ಗಿಡಮರ, ಪರಿಸರವನ್ನೇ ನಾವು ಸರಿಯಾಗಿ ನೋಡಿರೋದಿಲ್ವಲ್ಲ’ ಅಂತ. ಅಮೇಲೆ ಅವ್ರು ಬೈಯೋದು ಅಂದ್ರೆ ಸೀರಿಯಸ್ಸಾಗಿ ಬೈತಿದ್ರು. ಬೇರೆ ಯಾರಾದ್ರು ಬೈದ್ರೆ ದೊಡ್ಡ ಮಾನನಷ್ಟ ಕೇಸ್ ಆಗ್ಬೇಕಾದ ಬೈಗುಳಗಳೆಲ್ಲಾ ಇವರು ಬಾಯಿನಲ್ಲಿ ತುಂಬಾ ಸುಂದರವಾಗಿ, ಸಿಹಿಯಾಗಿ ಕೇಳೋದು. ಯಾಕಂದ್ರೆ ಆ ಬೈಗುಳದ ಹಿಂದೆ ಕಳಕಳಿ ಆತ್ಮೀಯತೆ ಇರ್ತಿತ್ತು ಅದಕ್ಕೆ.
“ಬರೀ ಬೆತ್ತಲೆ ಹೋಗ್ಬೇಕು, ಮೈಮೇಲೆ ಏನೂ ಇರಬಾರದು ಬಟ್ಟೆ”
ಮಾತು ನಂತರ ತೇಜಸ್ವಿಯವರ ಕುತೂಹಲದ ಬಗ್ಗೆ ಪ್ರಾರಂಭವಾಯಿತು. ಗಿರಿಜಾಶಂಕರ್ ರವರು ತೇಜಸ್ವಿಯವರ ತಣಿಯದ ಕುತೂಹಲಕ್ಕೆ ಸಂಬಂಧಿಸಿದ ಕೆಲ ಘಟನೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳತೊಡಗಿದರು. ’ಬೆಳಿಗ್ಗೆ ಬೆಳಿಗ್ಗೇನೆ ಒಂದ್ಸಾರ್ತಿ ಅವರ ಮನೆಗೆ ಹೋಗಿದ್ದೆ. ಅವರು ಹೊರಗಡೆ ತುಂಬಾ ಇನ್ವಾಲ್ವ್ ಆಗಿ ಏನೋ ನೋಡ್ತಾ ನಿಂತಿದ್ರು. ನಾನ್ ಹೋಗಿ ’ಏನ್ ಸಾರ್ ಅದು?’ ಅಂತ ಕೇಳ್ದೆ. ಅದಕ್ಕವರು ಎದುರುಗಡೆ ಕೈತೋರಿಸಿ ’ನೋಡ್ರಿ ಅಲ್ಲಿ ಎಷ್ಟೊಂದು ಚಿಟ್ಟೆಗಳು ಸಾಲು ಸಾಲಾಗಿ ಹೋಗ್ತಾ ಇದಾವೆ. ಬೆಳಿಗ್ಗೆಯಿಂದ ನೋಡ್ತಾ ಇದೀನಿ ಸಾವಿರಾರು ಚಿಟ್ಟೆಗಳು ಒಂದರ ಹಿಂದೆ ಒಂದು ರೈಲ್ ಹೋದಂಗ್ ಹೋಗ್ತಾ ಇದಾವಲ್ರಿ. ಇವೆಲ್ಲ ಎಲ್ಲಿಗ್ ಹೋಗ್ತಾ ಇದಾವೆ ನೋಡೋಣ ಅಂದ್ರೆ ಸುಡುಗಾಡು ಕಾಡ್ನಲ್ಲಿ, ಹಳ್ಳದಲ್ಲಿ ಇಳಿದು ಹೋಗ್ಬೇಕಲ್ರಿ…’ಅಂತ ತುಂಬಾ ಬೆರಗು ಕಣ್ಣು ಬಿಟ್ಕೊಂಡು ಆ ಚಿಟ್ಟೆಗಳನ್ನೇ ನೋಡ್ತಾ ನಿಂತುಬಿಟ್ರು.
ಇನ್ನೊಂದ್ಸಾರ್ತಿ ಅವರ ಮನೆಗೆ ಹೋದಾಗ ಅವರು ಒಂದು ಕಾಯಿ ತಂದು ತೋರಿಸಿ
’ಇದ್ಯಾವ್ದ್ರಿ ಇದು ಕಾಯಿ. ಯಾವ್ ಮರದ್ದು ಇದು? ನಿಮಗೇನಾದ್ರು ಗೊತ್ತೇನ್ರಿ?’ ಅಂತ ಕೇಳಿದ್ರು. ಪುಣ್ಯಕ್ಕೆ ಆ ಕಾಯಿ ಯಾವ್ದು ಅಂತ ನನಗೆ ಗೊತ್ತಿತ್ತು ನಾನ್ ಹೇಳ್ದೆ ’ಸಾರ್ ಅದು ಗಣಪೆ ಕಾಯಿ ಅಂತ. ಈ ಶಿರಸಿ, ಸಿದ್ದಪುರ, ಯಲ್ಲಾಪುರ ಈ ಭಾಗದ ಕಾಡಿನಲ್ಲಿ ಹೆಚ್ಚು ಬೆಳೆಯುತ್ತೆ…’ ಅಂತ. ಅದನ್ನ ಕೇಳಿ ಅವ್ರಿಗೆ ತುಂಬಾ ಖುಷಿಯಾಗೋಯ್ತು. ಗಣಪೆ ಕಾಯಿ ಅಂತಾನ ಇದರ ಹೆಸರು? ತಿಂಗಳಿಂದ ಇದನ್ನ ಇಟ್ಕೊಂಡು ಹುಡುಕ್ತಿದ್ದೆ ಕಣ್ರಿ..ಗೊತ್ತಾಗಿರ್ಲಿಲ್ಲ….’ಅಂತ ಮಗು ಥರ ಖುಶಿಪಟ್ಟಿದ್ರು. ಅಮೇಲೆ ಮದ್ದಾಲೆ ಮರ ಅಂತ ಒಂದಿದೆ. ಅದರ ಬಗ್ಗೆ ಒಂದ್ಸಲ ಕೇಳಿದ್ರು, ಅವತ್ತು ನನ್ ಜೊತೆ ಗಿರೀಶ್ ಕೂಡ ಇದ್ರು, ’ಅಲ್ರಿ ಮದ್ದಾಲೆ ಮರ ಅಂತ ಇದ್ಯಂತಲ್ರಿ.ಅದು ತುಂಬಾ ಮೆಡಿಸಿನಲ್ ಪವರ್ ಇರೊ ಮರ ಅಂತಲ್ರಿ. ಯಾರೊ ಅದನ್ನ ಕುಡೀತಾರಂತಲ್ಲ….’ ಅಂತ ಕೇಳಿದ್ರು. ನಮಗೂ ಗೊತ್ತಿಲ್ದೆ ಸುಮ್ಮನಾಗಿದ್ವಿ. ಆದ್ರೆ ಒಂದ್ಸಲ ಕುದುರೆಮುಖಕ್ಕೆ ಒಬ್ರು ಸಸ್ಯಶಾಸ್ತ್ರಜ್ಞರು ಬಂದಿದ್ರು. ಅವರ ಜೊತೆ ಮಾತಾಡ್ತಾ ತೇಜಸ್ವಿ ಈ ಮದ್ದಾಲೆ ಮರದ ಬಗ್ಗೆ ಕೇಳಿದ್ರು. ಅವರು ಇವರಿಗೆ ’ಹೌದು ಸಾರ್ ಮದ್ದಾಲೆ ಅಂತ ಒಂದು ಜಾತಿ ಮರ ಇದೆ. ಅದರಲ್ಲಿ ಮೆಡಿಸಿನಲ್ ಕ್ವಾಲಿಟೀಸ್ ಇರೋದು ನಿಜ. ಈ ಕಳಸ ಈ ಭಾಗದಲ್ಲಿ ಅಂದ್ರೆ ಸೌತ್ ಕೆನರಾ ಇನ್ಫ್ಲುಯನ್ಸ್ ಜಾಸ್ತಿ ಇರೊ ಭಾಗಗಳಲ್ಲಿ ಈ ಮರದ ತೊಗಟೆ ಬಳಸ್ತಾರೆ. ’ಈ ಭೀಮನ ಅಮವಾಸ್ಯೆಯ ಹಿಂದಿನ ರಾತ್ರಿ ದೇವಾನುದೇವತೆಗಳೆಲ್ಲಾ ಆ ಮರದ ಮೇಲೆ ಬಂದು ಕೂತಿರ್ತಾವೆ. ಆ ರಾತ್ರಿ ಹೋಗಿ ಆ ಮರದ ತೊಗಟೆನ ಕಿತ್ತುಕೊಂಡು ಬಂದು ಕಷಾಯ ಮಾಡಿ ಕುಡಿದ್ರೆ ಎಂಥಾ ಖಾಯಿಲೆ ಇದ್ರು ವಾಸಿ ಆಗ್ಬಿಡುತ್ತೆ ಅನ್ನೊ ಒಂದು ನಂಬಿಕೆ ಆ ಭಾಗದ ಜನರಲ್ಲಿದೆ,. ಆ ದಿನ ರಾತ್ರಿ ಅಲ್ಲಿಗೆ ಬರೀ ಬೆತ್ತಲೆ ಹೋಗ್ಬೇಕು, ಮೈಮೇಲೆ ಏನೂ ಇರಬಾರದು ಬಟ್ಟೆ ಅನ್ನೊ ನಂಬಿಕೆ ಸಹ ಆ ಜನಗಳಲ್ಲಿದೆ’ ಅಂತ ವಿವರಿಸಿದ್ರು. ಅಮೇಲೆ ತೇಜಸ್ವಿ ಹೋಗಿ ಆ ಮರ ನೋಡ್ಕೊಂಡೂ ಬಂದ್ರು. ಹೀಗೆ ಅವರ ಕುತೂಹಲ ಅಂದ್ರೆ ಅದು ಹೇಳಿಮುಗಿಸೊ ಅಂಥದ್ದಲ್ಲ’ ಎಂದು ಗಿರಿಜಾಶಂಕರ್ ಮಾತಿಗೆ ಅಲ್ಪ ವಿರಾಮ ಘೋಷಿಸಿದರು.
ಅಷ್ಟೊತ್ತಿಗೆ ಗಿರಿಜಾಶಂಕರ್ ರವರ ಗೆಳೆಯ ಗಿರೀಶ್ ಬಂದರು. ನಾವು ಪರಸ್ಪರ ಪರಿಚಯ ಮಾಡಿಕೊಂಡು ಹಸ್ತಲಾಘವ ಮಾಡಿಕೊಂಡೆವು. ಎಲ್ಲರೂ ಸೆಟ್ಲ್ ಆದ ನಂತರ ಮತ್ತೆ
ಚಿತ್ರೀಕರಣ ಮುಂದುವರೆಯಿತು.
“ಪೌಡರ್ ಹಾಕ್ಕೊ, ಮೇಕಪ್ ಬಳ್ಕೊ, ಅಂತೆಲ್ಲಾ ಕಾಟ ಕೊಟ್ರೆ ಮಾತ್ರ ನಿನ್ ಕಾಲು ಮುರಿದು ಬಿಡ್ತೀನಿ”
ತೇಜಸ್ವಿಯವರ ಸರಳತೆ ಬಗ್ಗೆ ಹೇಳ್ತೀರ? ನಾನು ಅವರಲ್ಲಿ ಪ್ರಶ್ನಿಸಿದೆ. ಗಿರೀಶ್ ರವರು ಸ್ವಭಾವತಃ ಮೌನಿಯಾದ್ದರಿಂದ ಗಿರಿಜಾಶಂಕರ್ ರವರೇ ಮಾತು ಮುಂದುವರೆಸಿದರು.
’ಅವರಿಗೆ ಆಕರ್ಷಣೆಗಳಿರಲಿಲ್ಲ. ಚೆನ್ನಾಗಿ ಬಟ್ಟೆ ಹಾಕ್ಬೇಕು, ಚೆನ್ನಾಗ್ ಪ್ರೆಸೆಂಟ್ ಮಾಡ್ಕೋಬೇಕು ಇಂಥ ಯೋಚನೆಗಳೆಲ್ಲ ಅವರಿಗೆ ಬರ್ಲೇ ಇಲ್ಲ. ಅವ್ರಿರ್ತಿದ್ದದ್ದೇ ತುಂಬಾ
ಒಡ್ಡೊಡ್ಡಾಗಿ…ಒಂದ್ಸಾರ್ತಿ ಗಡ್ಡ ಕಟ್ ಮಾಡಿಸ್ಕೊಂಡ್ರೆ ಮತ್ತೊಂದ್ಸಾರ್ತಿ ಹಾಗೆ ಇರ್ತಿದ್ರು. ಅದೇ ಹಳೆ ಪ್ಯಾಂಟು, ಶರ್ಟು ಅವರ ಡ್ರೆಸ್ ಕೋಡು. ಅದು ಬಣ್ಣ ಮಾಸಿರ್ಲಿ, ಕಿತ್ತೋಗಿರ್ಲಿ ಅವರು ಕೇರೇ ಮಾಡ್ತಿರ್ಲಿಲ್ಲ.
ಒಂದ್ಸಲ ಯಾವ್ದೊ ಟಿವಿಯವರು ತೇಜಸ್ವಿಯವ್ರನ್ನ ಇಂಟರ್ವ್ಯೂ ಮಾಡ್ಬೇಕು ಅಂತ ಬಂದ್ರು. ನಾನು ಅವ್ರತ್ರ ಹೋಗಿ ’ಸಾರ್ ಈ ಥರ ಈಥರ ಟಿವಿಯವ್ರಂತೆ, ಇಂಟರ್ವ್ಯೂ ಅಂತೆ’ ಅಂತ ಮೆತ್ತಗೆ ಕೇಳ್ದೆ. ತಕ್ಷಣ ಅವ್ರು ’ನೋಡು ಮಾರಾಯ ಏನ್ ಬೇಕಾದ್ರು ಮಾತಾಡಣ, ಯಾರಿಗೆ ಬೇಕಾದ್ರು ಇಂಟರ್ವೂ ಕೊಡೊಣ…ಆದ್ರೆ ಮಾತ್ರ ಪೌಡರ್ ಹಾಕ್ಕೊ, ಮೇಕಪ್ ಬಳ್ಕೊ, ಅಂತೆಲ್ಲಾ ಕಾಟ ಕೊಟ್ರೆ ಮಾತ್ರ ನಿನ್ ಕಾಲು ಮುರಿದು ಬಿಡ್ತೀನಿ ಮೊದ್ಲೇ ಹೇಳ್ತಾ
ಇದೀನಿ ನಿನಗೆ’ ಅಂತ ಬೈದಿದ್ರು. ಒಂದು ಘಟನೆ ನೆನಪಿಗೆ ಬರ್ತಾ ಇದೆ ನೀವು ಸರಳತೆ ಅಂತ ಕೇಳಿದ್ದಕ್ಕೆ ಹೇಳ್ತಿದ್ದೀನಿ, ’ಇವರಿಗೆ ಪಂಪ ಪ್ರಶಸ್ತಿ ಬಂತು ಅಂತ ಅನೌನ್ಸ್ ಆಯ್ತಲ್ಲ ಆಗ ನಾನು ಗಿರೀಶ್ ಇಬ್ರೂ ಫೋನ್ ಮಾಡಿ ’ಸಾರ್ ಅಭಿನಂದನೆಗಳು ಸಾರ್…ಪಂಪ ಪ್ರಶಸ್ತಿ ಬಂದಿದ್ದಕ್ಕೆ. ನೀವು ಪ್ರಶಸ್ತಿ ತಗೊಳ್ಳೊದಿಕ್ಕೆ ಯಾವಾಗ ಹೋಗ್ತೀರಿ ಅಂತ ಹೇಳಿ. ನಾನು, ಗಿರೀಶು, ಪ್ರದೀಪ್ ಎಲ್ರೂ ಬರ್ತೀವಿ ಜೊತೆಗೆ’ ಅಂತ್ ಹೇಳಿದ್ದೆ ತಡ…ಅವರು ’ಅಲ್ರಿ ನಿಮಗೇನ್ ತಲೆ ನೆಟ್ಗಿದ್ಯೇನ್ರಿ? ಅಲ್ರಿ ನಾನು ಬೆಂಗಳೂರಿನವರೆಗೂ ಹೋಗಿ ಅಲ್ಲಿ ಆ ವೇದಿಕೆ ಮೇಲೆ ಕೂತ್ಕೊಂಡು ಅವರು ವಾಚಾಮಗೋಚರವಾಗಿ ಹೊಗಳಿದ್ರೆ ಹೊಗಳಿಸ್ಕೊಂಡು, ಬಂದೋರೆಲ್ರೂ ಹಾಕೊ ಹಾರಕ್ಕೆ ಕತ್ತು ಒಡ್ಕೊಂಡು, ಭಾಷಣ ಗೀಷಣ ಅಂತೆಲ್ಲ ಹೊಡ್ಕೊಂಡು ಪ್ರಶಸ್ತಿ ತಗೊಂಡ್ ಬರ್ಬೇಕೇನ್ರಿ. ಪಂಪನ ಬಗ್ಗೆ ನನಗೆ ತುಂಬಾ ಗೌರವ ಇದೆ. ’ಮನುಷ್ಯ ಜಾತಿ ತಾನೊಂದೇ ವಲಂ’ ಅಂತ ಹೇಳಿದವನು ಅವನು. ಹಾಗಾಗಿ ಪ್ರಶಸ್ತಿ ಬೇಡ ಅಂತ ಹೇಳೊಲ್ಲ. ಆದ್ರೆ ಅಲ್ಲಿಗೆ ಹೋಗಿ ಪ್ರಶಸ್ತಿ ತಗೊಂಡ್ ಬರೋದೆಲ್ಲ ಸಾಧ್ಯ ಇಲ್ಲಾರಿ’ ಅಂತ ನೇರವಾಗಿ ಹೇಳಿದ್ರು ಹಾಗೇ ಮಾಡಿದ್ರು ಕೂಡ. ಕಡೇಗೆ ಸರ್ಕಾರದವರು ಇವರ ಮನೆಗೇ ಪ್ರಶಸ್ತಿ ತಂದು ಇಟ್ಟು ಹೋದ್ರು. ಹಾಗೆ ಅವ್ರು ಪ್ರಚಾರ ಬೇಕು, ತನ್ನನ್ನ ಎಲ್ರೂ ಗಮನಿಸ್ತಿರ್ಬೇಕು, ಸುದ್ದೀಲಿರ್ಬೇಕು ಅನ್ನೊ ಥರದ ಯಾವ ಚಪಲಗಳು ಅವರಿಗಿರಲಿಲ್ಲ’ ಎನ್ನುತ್ತಾ ಮಾತಿಗೆ ವಿರಾಮ ಕೊಟ್ಟರು.
‘’ಒಂದೊಳ್ಳೆ ಕ್ಯಾಟರ್ ಪಿಲ್ಲರ್ ತಗೊಂಡ್ ಬಾರಯ್ಯ”
ನಂತರ ಗಿರೀಶ್ ರವರಿಂದ ಮಾತನಾಡಿಸಬೇಕೆಂದುಕೊಂಡು ಅವರನ್ನು ತೇಜಸ್ವಿ ಒಡನಾಟದ ಬಗ್ಗೆ ಕೇಳಿದೆ. ಗಿರೀಶ್ ನಿಧಾನವಾಗಿ ಮಾತು ಪ್ರಾರಂಭಿಸಿದರು, ’ತೇಜಸ್ವಿ ಜೊತೆ ನಾವು ಹೆಚ್ಚಿಗೆ ಮಾತಾಡ್ತಿದ್ದದ್ದೇ ಪಶ್ಚಿಮ ಘಟ್ಟದ ಬಗ್ಗೆ, ಪರಿಸರ ಹಾಳಾಗ್ತಿರೋದರ ಬಗ್ಗೆ. ನಿಮಗೆ ಗಿರಿಜಾಶಂಕರ್ ಈಗಾಗ್ಲೇ ಆ ವಿಷಯದ ಬಗ್ಗೆ ತುಂಬಾ ಹೇಳಿದಾರೆ ಅಂದ್ಕೋತೀನಿ. ಹಾಗಾಗಿ ಅದರ ಬಗ್ಗೆ ನಾನು ಹೆಚ್ಚಿಗೆ ಮಾತಾಡೊಲ್ಲ. ಆದ್ರೆ ನನಗೆ ಈ ಕ್ಷಣದಲ್ಲಿ ಅನ್ನಿಸೋದೇನು ಅಂದ್ರೆ ’ತೇಜಸ್ವಿ ಇವತ್ತು ನಮ್ ಜೊತೆ ಇದ್ದಿದ್ರೆ ಹೇಮಾವತಿ ನದಿನಲ್ಲಿ ನಡೀತಿರೊ ಮರಳು ದಂಧೆ ಆಗ್ಬಹುದು, ಅಥವ ಪಶ್ಚಿಮ ಘಟ್ಟಗಳಲ್ಲಿ ನಡೀತಿರೊ ಎಷ್ಟೊ ಅನಾಹೂತಗಳು ತಪ್ತಿತ್ತು ಅಂತ ಹೇಳೊಲ್ಲ… ಆದ್ರೆ ಕಡಿಮೆ ಆಗ್ತಿದ್ವು ಅಂತ ನನಗನ್ಸುತ್ತೆ. we missed him early…ಅಷ್ಟೆ.
ಇನ್ನೊಂದ್ ವಿಶೇಷ ಏನು ಅಂದ್ರೆ ಅವರು ಏನೇ ಮಾಡಿದ್ರು ಬೆಸ್ಟ್ ಮಾಡೋಕೆ ಟ್ರೈ ಮಾಡ್ತಿದ್ರು ಅಂಡ್ ಅವ್ರಿಗೆ ದಿ ಬೆಸ್ಟ್ ವಸ್ತುಗಳು ಎಲ್ಲಿ ಸಿಕ್ತಾವೆ ಅಂತಾನೂ ಚೆನ್ನಾಗಿ ಗೊತ್ತಿತ್ತು. ಒಂದ್ಸಾರ್ತಿ ನನ್ ಫ್ರೆಂಡ್ ಒಬ್ರು ಜರ್ಮನಿಗೆ ಹೊರಟಿದ್ರು. ಅವರು ತೇಜಸ್ವಿನ ನೋಡ್ಬೇಕು ಅಂದ್ರು ಕರ್ಕೊಂಡ್ ಹೋದೆ. ಮಾತುಕತೆ ಎಲ್ಲಾ ಆಯ್ತು. ನನ್ ಫ್ರೆಂಡ್ ಇದ್ದೋರು ’ಸಾರ್ ಜರ್ಮನಿಯಿಂದ ನಿಮಗೇನಾದ್ರು ತಂದುಕೊಡ್ತೀನಿ. ಏನ್ ಬೇಕು ಕೇಳಿ ಸಾರ್’ ಅಂದ್ರು. ’ಇವರು ತಕ್ಷಣ ಯೋಚನೇನೇ ಮಾಡ್ದೇ ’ಒಂದೊಳ್ಳೆ ಕ್ಯಾಟರ್ ಪಿಲ್ಲರ್ ತಗೊಂಡ್ ಬಾರಯ್ಯ’ ಅಂದ್ರು. ಅದೇ ನಾವು ಚಾಟರಬಿಲ್ಲು ಅಂತೀವಲ್ಲ ಅದು. ’ಅದ್ಯಾಕೆ ಸಾರ್ ನಿಮಗೆ? ಅದು ಅಲ್ದೆ ಅದೇನ್ ಜರ್ಮನಿಯಿಂದ ತರೊ ವಸ್ತುನ? ಇಲ್ಲೇ ಬೇಕಾದಷ್ಟು ಸಿಗ್ತಾವೆ’ ಅಂದೆ ನಾನು. ’ನಿನಗೊತ್ತಾಗಲ್ಲ ಕಣಯ್ಯ…ನಮ್ಮಲ್ಲಿ ಸಿಗೊ ಚಾಟರಬಿಲ್ಲಿನ ರಬ್ಬರ್ರು ಬೇಗ ಕಿತ್ತೋಗ್ ಬಿಡುತ್ತೆ. ಅಲ್ಲಿ ಒಳ್ಳೆ ಐಟಮ್ ಸಿಗುತ್ತೆ. ಅದಕ್ಕೆ ತಗೊಂಡ್ ಬಾ ಅಂದಿದ್ದು. ತೋಟದಲ್ಲಿ ಮಂಗ ಒಡ್ಸಕ್ಕೆ ಬೇಕಾಗ್ತದೆ…!!!’ ಅಂದ್ರು. ನಾವಂತು ಇವರೇನು ಹೀಗೆ ಪ್ರತಿಯೊಂದರು ಬಗ್ಗೇನೂ ಇಷ್ಟು ಅಥಾರಿಟೇಟಿವ್ ಆಗಿ ಮಾತಾಡ್ತಾರಲ್ಲ..ಅಂತ ಆಶ್ಚರ್ಯ ಪಡ್ತಿದ್ವಿ’ ಇಡೀ ಚಿತ್ರೀಕರಣದಲ್ಲಿ ಗಿರೀಶ್ ಹೇಳಿದ ಮಾತುಗಳು ಇಷ್ಟೇ.
ಹಾಗಾಗಿ ನಾನು ಮತ್ತೆ ಗಿರಿಜಾಶಂಕರ್ ರ ಕಡೆಯಿಂದಲೇ ಮಾತು ಮುಂದುವರೆಸುವಂತೆ ಕೇಳಿದೆ. ಅವರು ಮುಂದುವರೆಸುತ್ತಾ ಹೋದರು…
“ಅದು ತುಂಬಾ ಉದ್ದ ಇದೆ. ನಿಂತು ಹಾಡೋಕೆ ಕಷ್ಟ ಆಗುತ್ತೆ”
’ಅವರು ರಿಜಿಡ್ ಅಲ್ಲ. ನಾನ್ ಹೇಳಿದ್ದೇ ಸರಿ, ನಾನ್ ಬ್ರಹ್ಮ…’ಅಂತೆಲ್ಲಾ ಅವರು ಯಾವತ್ತೂ ನಡ್ಕೊಂಡಿಲ್ಲ. ಏನಾದ್ರೂ ಗೊತ್ತಿಲ್ಲ ಅಂದ್ರೆ ಕೇಳಿ ತಿಳ್ಕೊಳ್ಳೋರು, ಗೊತ್ತಿದ್ರೆ ನಮಗೂ ಹೇಳೋರು. ಇದು ಹೀಗೆ ’ಇದಮಿತ್ಥಂ’ ಅನ್ನೊ ಅಂತಹ ಧೋರಣೆಗಳೆಲ್ಲ ಇರಲಿಲ್ಲ. ಒಂದ್ಸಾರ್ತಿ ನಮ್ಮ ನಾಡಗೀತೆ.. ಜೈಭಾರತ ಜನನಿಯ ತನುಜಾತೆ’ ಇದ್ಯಲ್ಲ ಅದು ತುಂಬಾ ಉದ್ದ ಆಯ್ತು, ಹಾಗಾಗಿ ಅದರಲ್ಲಿ ಕೆಲವು ಸಾಲುಗಳನ್ನ ಬಿಟ್ರೆ ಹೇಗೆ ಅಂತ ಒಂದು ತಕರಾರು ಬಂತು. ಆಗ ಇವರು ’ನಿಜ ಅದು ತುಂಬಾ ಉದ್ದ ಇದೆ. ಎಲ್ರೂ ನಿಂತು ಹಾಡೋಕೆ ಕಷ್ಟ ಆಗುತ್ತೆ. ಅರ್ಥ ಕೆಡದ ಹಾಗೆ ಕೆಲವು ಸಾಲುಗಳನ್ನ ಬಿಟ್ರು ತಪ್ಪಿಲ್ಲ’ ಅಂತ ಹೇಳಿದ್ರು. ಹಾಗೆ ವಾಸ್ತವವಾದಿ ಅವರು.
ಗಿರಿಜಾ ಶಂಕರ್ ಹೇಳಿದ ಸಂಘ ಸಂಸ್ಥೆಗಳ ಕುರಿತ ಘಟನೆಯೊಂದು ಹೀಗಿದೆ, ’ಒಂದ್ಸಾರ್ತಿ ಯಾರೊ ಒಕ್ಕಲಿಗರ ಸಂಘದವರು ಬಂದು, ’ಸಾರ್ ನಾವು ಕುವೆಂಪು ಬಗ್ಗೆ ಕಾರ್ಯಕ್ರಮ ಮಾಡ್ತಾ ಇದೀವಿ. ನೀವು ಬರ್ಬೇಕು’ ಅಂತ ಹೇಳ್ದಾಗ ಇವ್ರು ’ನೋಡ್ರಿ ಪಂಪ, ರನ್ನ, ಕುಮಾರವ್ಯಾಸ ಇವ್ರೆಲ್ಲಾ ಬದುಕಿರೋದು ಅವರ ಜಾತಿಯಿಂದ ಏನ್ರಿ? ಹಾಗೇನಾದ್ರು ಅವರು ಅವರ ಜಾತಿಯವರಿಂದ ಉಳಿಬೇಕು ಅಂತಾಗಿದ್ರೆ ಇಷ್ಟೊತ್ತಿಗಾಗ್ಲೆ ಅವರೆಲ್ಲ ನಾಮಾವಶೇಶ ಆಗಿಬಿಡಬೇಕಿತ್ತು. ಯಾಕಂದ್ರೆ ಅವರ ಜಾತಿಯವರು ಇರೋದೆ ಬೆರಳೆಣಿಕೆ ಅಷ್ಟು. ಹಾಗಾಗಿ ಕುವೆಂಪು ಉಳಿಬೇಕಾದ್ದು ಅವರ ಕಾವ್ಯದಿಂದ, ಜಾತಿಯಿಂದಲ್ಲ’ ಅಂತ ಹೇಳಿ ಕಳಿಸಿದ್ರು. ಹೀಗೆ ಅವರ ಬಗ್ಗೆ ಮಾತಾಡೋಕೆ ಕೂತ್ರೆ ಇಡೀ ದಿನ ಕೂರಬಹುದು. ನೆನಪು ಬಂದ ಹಾಗೆ ಮೊಗೆದು ಮೊಗೆದು ಕೊಡ್ಬೇಕು…ಎಂದು ನಗುತ್ತಾ ಮಾತು ಮಾತು ಮುಗಿಸಲನುವಾದರು.
ಕೊನೆಯದೆಂಬಂತೆ ’ತೇಜಸ್ವಿಯವರು ಇಲ್ಲದಿರುವ ಈ ದಿನಗಳಲ್ಲಿ ನಿಮಗೇನನಿಸುತ್ತದೆ?’ ಎಂದು ಅವರನ್ನು ಕೇಳಿದೆ. ಅವರು ನಿಟ್ಟುಸಿರು ಬಿಡುತ್ತಾ ಪ್ರಾರಂಭಿಸಿದರು.
“ನಿಮ್ಜೊತೆ ಕಾರ್ಯಕ್ರಮಕ್ಕೆ ಬಂದ್ರೆ ಜನ ನನ್ನನ್ನು ಖದೀಮ ಅಂತ ನೋಡಲ್ವೇನ್ರಿ”
ದೊಡ್ಡ ಲಾಸ್ ಅದು. ಕ್ಲೀಷೆ ಅನ್ಸಿದ್ರು ತೇಜಸ್ವಿ ವಿಚಾರದಲ್ಲಿ ಇದು ಸತ್ಯ. ನಾನು ದೇಶಕ್ಕೆ ಲಾಸು, ನಾಡಿಗೆ ಲಾಸು ಅಂತೆಲ್ಲಾ ಹೇಳ್ತಿಲ್ಲ, ಆದ್ರೆ ನಮ್ಮ ಪರಿಸರಕ್ಕೆ ಅವರಿಲ್ಲದೊಂದು ದೊಡ್ಡ ನಷ್ಟ. ಕಾರಂತರನ್ನ ಬಿಟ್ರೆ ನಮ್ಮಲ್ಲಿ ಪರಿಸರದ ಬಗ್ಗೆ ಕೂಗ್ತಿದ್ದ ಮತ್ತೊಬ್ಬ ಸಾಹಿತಿ ಅಂದ್ರೆ ಅದು ತೇಜಸ್ವಿನೆ. ಹಾಗಾಗಿ ಅವ್ರಿದ್ದಿದ್ರೆ ಇವತ್ತಿನ ಎಷ್ಟೋ ಅನಾಹೂತಗಳಿಗೆ ಧ್ವನಿ ಆಗ್ತಿದ್ರು ಅನ್ಸುತ್ತೆ. ಜೊತೆಗೆ ಪರ್ಸನಲಿ ನಾವಂತು ಅವ್ರನ್ನ ತುಂಬಾ ಮಿಸ್ ಮಾಡ್ಕೋತೀವಿ. ಅವರ ಬೈಗುಳ, ಹಾಸ್ಯ, ಹರಟೆ, ಹೋರಾಟ, ಒಡನಾಟ ಇವನ್ನೆಲ್ಲಾ ನೆನೆಸ್ಕೊಂಡ್ರೆ ಎಂಥಾ ಒಳ್ಳೆ ದಿನಗಳವು. ಒದ್ದಾಟದಲ್ಲೇ ಒಂಥರ ಸುಖ, ನೆಮ್ಮದಿ ಇದ್ದಂತ ದಿನಗಳವು. ತೇಜಸ್ವಿ ನಮ್ಜೊತೆ ಇದಾರೆ ಅನ್ನೊದೆ ನಮಗೆಲ್ಲ ದೊಡ್ಡ ಕಾನ್ಫಿಡೆನ್ಸ್ ಆಗಿತ್ತು ನಮಗೆಲ್ಲ. ಮೊನ್ನೆ ಪೇಪರ್ ಓದ್ತಿದ್ದಾಗ ಈ ಗಣಿ ಹಗರಣದಲ್ಲಿ ಅರೆಸ್ಟ್ ಆದ್ರು ಅಂತ ಒಬ್ಬ ಫಾರೆಸ್ಟ್ ಆಫಿಸರ್ ಹೆಸರು, ಫೋಟೋ ಹಾಕಿದ್ರು. ಅದನ್ನ ನೋಡಿದ ತಕ್ಷಣ ನೆನಪಾಗಿದ್ದೆ ತೇಜಸ್ವಿ. ಯಾಕಂದ್ರೆ ಆ ಫಾರೆಸ್ಟ್ ಆಫೀಸರ್ ಇಲ್ಲಿ ಮುತ್ತೋಡಿ ರೇಂಜ್ ಅನಲ್ಲಿದಾಗ ಒಂದ್ಸಲ ಬಂದು ತೇಜಸ್ವಿಯವ್ರನ ವನ್ಯಜೀವಿ ಸಪ್ತಾಹ ಕಾರ್ಯಕ್ರಮ ಉದ್ಘಾಟನೆ ಮಾಡಿಕೊಡ್ಬೇಕು ಅಂದಾಗ ಇವರು ತಕ್ಷಣ ’ರೀ ನಿಮಗೆ ಸಂಬಳ ಎಷ್ಟ್ರೀ?’ ಅಂತ ಕೇಳಿದ್ರು. ಆತ ’30,000’ ಸಾರ್’ ಯಾಕೆ? ಅಂದ. ’ಅಲ್ರಿ ಸರ್ಕಾರ ನಿಮಗೆ ಮೂವತ್ತು ಸಾವಿರ ಸಂಬಳ ಕೊಡೋದು ನಿಮಗೆ ಸಾಲಲ್ವೇನ್ರಿ? ಕಾಡು ಹಾಳ್ ಮಾಡೊ ಖದೀಮರ ಜೊತೆ ಸೇರ್ಕೊಂಡು ಲಂಚ ಬೇರೆ ಹೊಡೀತೀರಲ್ರಿ. ನಿಮ್ಜೊತೆ ನಾನು ಕಾರ್ಯಕ್ರಮಕ್ಕೆ ಬಂದ್ರೆ ಅಮೇಲೆ ಜನ ನನ್ನನ್ನು ಖದೀಮ ಅಂತ ನೋಡಲ್ವೇನ್ರಿ. ಏನೂ ಬೇಡ. ನಾನು ಬರೊಲ್ಲ. ಒಂದ್ಕೆಲಸ ಮಾಡಿ ನೀವು ಮುತೋಡಿ ಫಾರೆಸ್ಟ್ ನ ಸರಿಯಾಗಿ ನೋಡ್ಕೊಳಿ. ಆಗ ಬೇಕಾದ್ರೆ ನಾನೇ ಬಂದು ನೀವು ತುಂಬಾ ದೊಡ್ಡ ಕೆಲಸ ಮಾಡಿದ್ದೀರಿ ಅಂತೇಳಿ ನಿಮಗೆ ಶಾಲು ಹೊದ್ಸಿ ಸನ್ಮಾನ ಮಾಡ್ತೀನಿ’ ಅಂತ ಮುಖಕ್ಕೆ ಹೊಡೆದ ಹಾಗೆ ಹೇಳಿ ಕಳಿಸಿದ್ರು. ಹೀಗೆ ನೆನಪುಗಳು ನುಗ್ಗಿ ಬರ್ತವೆ..’ ಎನ್ನುತ್ತಾ ಗಿರಿಜಾಶಂಕರ್ ಮತ್ತವರ ಗೆಳೆಯ ಡಿ.ವಿ ಗಿರೀಶ್ ತೇಜಸ್ವಿ ನೆನಪುಗಳಿಗೆ ಪೂರ್ಣವಿರಾಮ ಹಾಕಿದರು.ಸಮಯ ಸುಮಾರು ೧೧ ಗಂಟೆ ಆಗಿತ್ತು. ಆ ಗೆಳೆಯರಿಬ್ಬರಿಗೂ ಧನ್ಯವಾದ ತಿಳಿಸಿ ಚಿಕ್ಕಮಗಳೂರಿನ ಅವರ ಮನೆಯ ಕಡೆ ಬೆನ್ನು ಹಾಕಿ ಹೊರಟೆವು. ನಮ್ಮ ಮುಂದಿನ ಭೇಟಿ ಇದ್ದದ್ದು ತೇಜಸ್ವಿಯೊಂದಿಗೆ ಪ್ಯಾಪಿಲಾನ್, ಬರ್ಮುಡಾ ಟ್ರೈಯಾಂಗಲ್ ಮುಂತಾದ ಕೃತಿಗಳ ಬರವಣಿಗೆ ಹಂಚಿಕೊಂಡ ಅವರ ದೀರ್ಘಕಾಲದ ಒಡನಾಡಿ ಪ್ರದೀಪ ಕೆಂಜಿಗೆಯವರದ್ದು. ಅವರನ್ನು ಭೇಟಿ ಮಾಡಬೇಕಿದ್ದ ಚಿಕ್ಕಮಗಳೂರಿನ ಎಬಿಸಿ ಲಿಮಿಟೆಡ್ ನ ಕೇಂದ್ರ ಕಛೇರಿಯ ಕಡೆ ನಿತಿನ್ ಸ್ಟೀರಿಂಗ್ ಹಿಡಿದು ಕುಳಿತಿದ್ದ ವ್ಯಾನು ಓಡುತ್ತಿತ್ತು.
ಮುಂದುವರೆಯುವುದು
0 ಪ್ರತಿಕ್ರಿಯೆಗಳು
Trackbacks/Pingbacks