ತೇಜಸ್ವಿಯನ್ನು ಹುಡುಕುತ್ತಾ : ಆಮೇಲೆ ಸಿಕ್ಕವರು ಗಿರೀಶ್ ಕಾಸರವಳ್ಳಿ

೨೦೧೨ರ ಆಗಸ್ಟ್ ತಿಂಗಳಲ್ಲಿ ಹನ್ನೊಂದು ದಿನಗಳ ಸಾಕ್ಷ್ಯಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ಬಂದ ಮೇಲೆ ಆ ತಿಂಗಳು ಹಲವು ಕಾರಣಗಳಿಂದಾಗಿ ಮತ್ತೆ ಚಿತ್ರೀಕರಣ ಮಾಡಲಾಗಲಿಲ್ಲ. ಆ ಕಾರಣಗಳಲ್ಲಿ ಮುಖ್ಯವಾದದ್ದು ಹಣಕಾಸಿನ ವ್ಯವಸ್ಥೆ. ಮುಂದಿನ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ಮಾಡಬೇಕಿತ್ತು. ಬೆಂಗಳೂರಿನಲ್ಲಿರುವ ತೇಜಸ್ವಿ ಒಡನಾಡಿಗಳನ್ನು ಮಾತನಾಡಿಸಿ ಅವರ ಮಾತುಗಳನ್ನು ಚಿತ್ರೀಕರಿಸಿಕೊಳ್ಳಬೇಕಿತ್ತು. ಅದಕ್ಕೆ ಬೇಕಿದ್ದ ಹಣಕಾಸನ್ನು ಸಾಕ್ಷ್ಯಚಿತ್ರದ ನಿರ್ಮಾಪಕರು “ಮುಂದಿನ ತಿಂಗ್ಳು ಫಸ್ಟ್ ವೀಕ್ ನಲ್ಲಿ ತಗೊಳಿ’ ಎಂದು ಹೇಳಿದ್ದರಿಂದ ಅಲ್ಲಿಯವರೆಗೂ ಕಾಯದೇ ಬೇರೆ ದಾರಿ ಇರಲಿಲ್ಲ. ಆದರೆ ಆ ಮಧ್ಯದಲ್ಲಿ ನಾನು ಬೆಂಗಳೂರಿನಲ್ಲಿ ಮಾತನಾಡಿಸಬೇಕಿದ್ದ ತೇಜಸ್ವಿ ಒಡನಾಡಿಗಳನ್ನು ಸಂಪರ್ಕಿಸಿ, ಕೆಲವರನ್ನು ನೇರವಾಗಿ ಕಂಡು ಮಾತನಾಡಿ ಚಿತ್ರೀಕರಣಕ್ಕೆ ಅವರೆಲ್ಲರ ಸಮಯ ತೆಗೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದೆ. ನಮ್ಮ ನಿರ್ಮಾಪಕರು ಕೊಟ್ಟ ಭರವಸೆಯಂತೆ ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಆ ಭಾಗದ ಚಿತ್ರೀಕರಣಕ್ಕೆ ಬೇಕಿದ್ದ ಹಣ ನಮ್ಮ ಕೈಗೆ ಸೇರಿಸಿದ್ದರಿಂದ ನಾನು ನಮ್ಮ ತಂಡದೊಂದಿಗೆ ಚರ್ಚಿಸಿ ಬೆಂಗಳೂರಿನಲ್ಲಿ ಸಾಕ್ಷ್ಯಚಿತ್ರದ ಚಿತ್ರೀಕರಣ ಆರಂಭಿಸಿದೆವು.

ಹಾಗೆ ಆರಂಭಿಸಿದ ಚಿತ್ರೀಕರಣದ ಪಟ್ಟಿಯಲ್ಲಿದ್ದ ಹೆಸರು ’ಗಿರೀಶ್ ಕಾಸರವಳ್ಳಿ’. ಕಾಸರವಳ್ಳಿಯವರನ್ನ ಪರಿಚಯ ಮಾಡಿಕೊಡುವಂತದ್ದೇನಿದೆ? ತಮ್ಮ ಸಿನಿಮಾ ಕಲಾಕೃತಿಗಳ ಮೂಲಕ ಜಗತ್ತಿನ ಗಮನ ಸೆಳೆದು, ವಿಶ್ವ ಸಿನಿಮಾ ರಂಗದಲ್ಲಿ ಭಾರತದ ಹೆಸರು ಪ್ರಕಾಶಿಸುವಂತೆ ಮಾಡಿರುವಂತಹ ಕೀರ್ತಿ ಶ್ರೇಷ್ಠರು ಗಿರೀಶ್ ಕಾಸರವಳ್ಳಿ. ಇವರನ್ನು ಸಾಕ್ಷ್ಯಚಿತ್ರಕ್ಕಾಗಿ ಮಾತನಾಡಿಸುವಲ್ಲಿ ಒಂದು ಪ್ರಮುಖವಾದ ಕಾರಣವಿತ್ತು. ಅದು ತೇಜಸ್ವಿಯವರ ಕೃತಿಗಳಿಗೂ ಮತ್ತು ಸಿನಿಮಾರಂಗಕ್ಕೂ ಇರುವ ಕೊಡುಕೊಳ್ಳುವಿಕೆಯ ಬಗ್ಗೆ ವಿಷಯ ಸಂಗ್ರಹಿಸಿ ದಾಖಲಿಸುವುದಾಗಿತ್ತು. ಈ ವಿಷಯದ ಜೊತೆಗೆ ಇನ್ನೂ ಕೆಲ ವಿಷಯಗಳನ್ನು ಸ್ಚ್ರಿಪ್ಟ್ ನಲ್ಲಿ ಗುರುತು ಹಾಕಿಕೊಂಡಿದ್ದೆ. ಹಾಗೆ ಎಲ್ಲಾ ಸಿದ್ಧತೆ ಮುಗಿಸಿ ಅವರು ನಮಗೆ ಸಮಯ ಕೊಟ್ಟ ಸೆಪ್ಟೆಂಬರ್ ತಿಂಗಳ ಆ ದಿನ ಬೆಳಿಗ್ಗೆ ಹನ್ನೊಂದು ಪ್ರಾರಂಭವಾಗಿತ್ತು. ಮೊದಲಿಗೆ ಕಾಸರವಳ್ಳಿಯವರು ತೇಜಸ್ವಿ ನೆನಪುಗಳ ಕಥೆ ಹಂಚಿಕೊಳ್ಳಲಾರಂಭಿಸಿದರು.

“ರೀ ಆ ಕಥೆ ಬೇಡ, ಬೇರೆ ಕಥೆ ಕೊಡ್ತೀನಿ ಸಿನಿಮಾ ಮಾಡಿ”

“ನಾನು ತೇಜಸ್ವಿಯವರ ಬಗ್ಗೆ ಬಹಳ ಕೇಳಿದ್ದೆ. ಆದರೆ ಮುಖತಃ ಅವರನ್ನ ನೋಡಿರಲಿಲ್ಲ. ಅವರ ಮೊದಲ ಪರಿಚಯ ಆಗಿದ್ದು ಅವರ ಪುಸ್ತಕಗಳ ಮೂಲಕ. ಅವರ ಹವ್ಯಾಸಗಳ ಬಗ್ಗೆ ಅಂತೂ ಬಹಳ ಕೇಳಿದ್ದೆ. ಅವರಿಗೆ ಫೋಟೋಗ್ರಫಿ ಬಗ್ಗೆ ಆಸಕ್ತಿ ಇದೆ, ಕಂಪ್ಯೂಟರ್ ಬಗ್ಗೆ ಆಸಕ್ತಿ ಇದೆ, ಸಂಗೀತದ ಬಗ್ಗೆ ಆಸಕ್ತಿ ಇದೆ, ಪರಿಸರ, ಪ್ರಾಣಿ, ಪಕ್ಷಿಗಳ ಬಗ್ಗೆ ಆಸಕ್ತಿ ಇದೆ, ಇವೆಲ್ಲಾ ಕೇಳಿದ್ದೆ. ಹಾಗೆ ಅವರ ಮೀನು ಹಿಡಿಯುವ ಸಾಹಸದ ಬಗ್ಗೇನೂ ಬಹಳ ವರ್ಣರಂಜಕವಾದ ಕಥೆಗಳನ್ನ ಕೇಳಿದ್ದೆ. ಹಾಗಿದ್ದಾಗ ೧೯೮೫-೮೬ ಅಂತ ಕಾಣುತ್ತೆ, ‘ತಬರನ ಕತೆ’ ಸಿನಿಮಾ ಮಾಡೋಣ ಅಂತೇಳಿ ಒಬ್ಬರು ನಿರ್ಮಾಪಕರು ನನ್ಹತ್ರ ಬಂದ್ರು. ‘ಸರಿ ಆಗ್ಲಿ’ ಅಂತ ಹೇಳಿ ಕೆಲಸ ಶುರು ಮಾಡಿದ್ವಿ. ಆದರೆ ಆ ನಿರ್ಮಾಪಕರು ಕಾರಣಾಂತರಗಳಿಂದ ಆ ಸಿನಿಮಾ ನಿರ್ಮಾಣ ಮಾಡ್ಲಿಲ್ಲ. ಕೊನೆಗೆ ನಾನೇ ಆ ಸಿನಿಮಾನ ನಿರ್ಮಾಣ ಮಾಡ್ಬೇಕಾಗಿ ಬಂತು. ಆಗ ಅದೇ ಮೊದಲ ಬಾರಿಗೆ ನಾನು ತೇಜಸ್ವಿಯವರನ್ನ ನೋಡಿದ್ದು.

ಅವರಿಗೆ ಕಾಗದ ಹಾಕಿದ್ದೆ. ‘ಮನೆಗೇ ಬನ್ನಿ’ ಅಂತ ಉತ್ತರ ಬರೆದಿದ್ರು. ಹೋದ್ವಿ. ಹೋಗಿ ಒಂದು ನಾಲ್ಕೈದು ದಿವ್ಸ ಅವರ ಮನೇನಲ್ಲೇ ಉಳ್ಕೊಂಡಿದ್ವಿ. ನಾವು ಹೋದಾಗ ಅವರ ಪ್ರಪ್ರಥಮ ರಿಯಾಕ್ಷನ್ನೇ ‘ಏಯ್ ಆ ಕತೆ ಯಾಕ್ ಮಾಡ್ತೀರಯ್ಯ? ಅದಕ್ಕಿಂತಲೂ ಒಳ್ಳೆ ಕತೆ ನನ್ನತ್ರ ಇದೆ, ಕೊಡ್ತೀನಿ ಅದನ್ನ ಸಿನಿಮಾ ಮಾಡಿ’ ಅಂದ್ರು. ನಾನು ‘ಇಲ್ಲ ಸಾರ್, ತಬರನ ಕತೆನೇ ಮಾಡ್ಬೇಕು ಅಂತ ತೀರ್ಮಾನ ಮಾಡ್ಕೊಂಡು ಬಂದಿದೀವಿ’ ಅಂತ ಹೇಳ್ದೆ. ಆಮೇಲೆ ಅವರು ಚಿತ್ರಕತೆ ಬಗ್ಗೆ ಎಲ್ಲ ತುಂಬಾ ವಿವರವಾಗಿ ಮಾತಾಡಿದ್ರು. ಆಗ ನಾನು ಗಮನಿಸಿದ ಇಂಟರೆಸ್ಟಿಂಗ್ ಅಂಶ ಏನು ಅಂದ್ರೆ, ಅವರ ಜೊತೆ ಮಾತಾಡೋದು ಅಂದ್ರೆ ಒಂದು ಸೋಫಾ ಮೇಲೆ ಅವರು ಕೂತ್ಕೋತಾರೆ, ಎದುರುಗಡೆ ಇನ್ನೊಂದು ಸೋಫಾ ಮೇಲೆ ನಾವು ಕೂತ್ಕೊಂಡು ಮಾತಾಡೋದು ಅಂತಲ್ಲ. ಅವರು ತೋಟದಲ್ಲಿ, ಕೆರೆ ಹತ್ರ, ಮನೆ ಸುತ್ತಾ ಮುತ್ತಾ, ಬೆಟ್ಟಗುಡ್ದಗಳಲ್ಲಿ ತಿರುಗಾಡ್ತಿರ್ತಾರೆ. ನಾವು ಅವರ ಜೊತೆಲೇ ತಿರುಗಾಡ್ತಿದ್ರೆ ಆಗ ಮಾತು ಬೆಳೆಯುತ್ತೆ.

ಒಂದಿನ ಅವರು ‘ಬನ್ರಿ ಇನ್ನರ್ ಗಿರಿಗೆ ಹೋಗಿ ಬರೋಣ’ ಅಂದ್ರು. ಇನ್ನರ್ ಗಿರಿ ಅಂತ ಬಾಬಾಬುಡನ್ ಗಿರಿ ವ್ಯಾಲಿನಲ್ಲಿ ಬರುತ್ತೆ. ಅಲ್ಲಿಗೆ ಹೋಗೋಣ ಬನ್ರಿ ಅಂದ್ರು. ನಾನು ‘ಯಾಕ್ ಸಾರ್?’ ಅಂದೆ. ‘ಸುಮ್ನೆ ಬನ್ನಿ’ ಅಂತ ಹೇಳಿ ಕರ್ಕೊಂಡ್ ಹೋದ್ರು. ಅಲ್ಲಿ ಹೋಗಿ ‘ನೋಡಿ ಕಾಡು ಎಷ್ಟು ಚೆನ್ನಾಗಿದೆ ಅನ್ನೋದು, ‘ನೋಡಿ ನೀರು ಎಷ್ಟು ಸ್ವಚ್ಛವಾಗಿ ಹರೀತಿದೆ’ ಅನ್ನೋದು. ‘ಈ ಸೀಸನ್ ಅಷ್ಟ್ರಲ್ಲಿ ನೀರು ಇನ್ನೂ ಜಾಸ್ತಿ ಇರ್ಬೇಕಿತ್ತು. ಯಾಕೊ ಈ ಸಲ ಕಡಿಮೆ ಇದೆ’ ಅನ್ನೋದು, ಬೇರೆ ಬೇರೆ ಪ್ರಾಣಿ, ಪಕ್ಷಿಗಳನ್ನ ತೋರ್ಸೋದು… ಹೀಗೆ ಬಹಳ ವಿಚಿತ್ರವಾದ ಹವ್ಯಾಸ ಅವರದ್ದು. ಎಲ್ಲಕ್ಕಿಂತ ಹೆಚ್ಚಾಗಿ ಆಗ ಅವರತ್ರ ಒಂದು ಸ್ಕೂಟ್ರಿತ್ತು. ಆ ಸ್ಕೂಟ್ರು ಬಗ್ಗೆ ಕಥೆ ಹೇಳೋದು. ತಮಾಷೆ ಏನು ಅಂದ್ರೆ, ನಾವು ಮೊದಲ್ನೇ ಸಲ ಅವರ ಮನೆಗೆ ಹೋದಾಗ ‘ತೇಜಸ್ವಿಯವರು ಎಲ್ಲಿ?’ ಅಂತ ಕೇಳ್ದಾಗ ಅವರು ಆ ಸ್ಕೂಟ್ರು ಕೆಳಗಡೆ ಮಲಕ್ಕೊಂಡು ಅದೇನೊ ಬಿಚ್ತಾ ಇದ್ರು! ನಮಗೆ ಆಶ್ಚರ್ಯ ಅನ್ಸಿದ್ದು ‘ತೇಜಸ್ವಿಯಂತಹ ಒಬ್ಬ ಪ್ರಸಿದ್ಧ ಲೇಖಕ ತಮ್ಮ ಎಲ್ಲಾ ಕೆಲಸ ಬಿಟ್ಟು ಹೀಗೆ ಸ್ಕೂಟ್ರು ರಿಪೇರಿ ಮಾಡ್ತಾ ಇದಾರಲ್ಲ’ ಅನ್ನೋದು. ಆಗ ನಾವು ಅವರ ಮನೆಗೆ ಹೋಗಿದಿದ್ದು ಹೀರೊ ಹೋಂಡಾ ಬೈಕ್ ನಲ್ಲಿ. ಆಗ ತಾನೆ ಅದು ಮಾರುಕಟ್ಟೆಗೆ ಬಂದಿತ್ತು. ನಾನು ನಮ್ಮ ಸಹ ನಿರ್ದೇಶಕ ಶ್ರೀನಿವಾಸ್ ಅಂತ ಒಬ್ರಿದ್ರು, ಇಬ್ರೂ ಆ ಹೋಂಡಾ ಬೈಕ್ ನಲ್ಲಿ ಹೋಗಿದ್ವಿ. ಆ ಬೈಕ್ ನೋಡಿದ ತೇಜಸ್ವಿ ತಬರನ ಕತೆ ಎಲ್ಲ ಬಿಟ್ಟು, ಚಿತ್ರಕತೆ, ಸಂಭಾಷಣೆ ಎಲ್ಲಾ ಮೂಲೆಗೆ ಹಾಕಿ ಆ ಬೈಕ್ ಬಗ್ಗೆ ವಿಚಾರ್ಸೋಕೆ ಶುರು ಮಾಡಿದ್ರು. ನಂತರ ಅವರು ‘ಕೊಡ್ರಿ ನೋಡೋಣ’ ಅಂತ ಹೇಳಿ ಅದನ್ನ ತಗೊಂಡು ಆಕಡೆ ಈಕಡೆ ಬಗ್ಸಿ ನೋಡೋದು, ಅದರಲ್ಲಿ ಏನು ವ್ಯತ್ಯಾಸ ಇದೆ ಅಂತ ನೋಡೋದು ಎಲ್ಲಾ ಮಾಡಿದ್ರು.

ಆಮೇಲೆ ಅವರತ್ರ ಒಂದು ಫಿಯಟ್ ಕಾರಿತ್ತು. ಆ ಕಾರಿನ ಬಗ್ಗೆ ನಮಗೆ ಕತೆ ಹೇಳೋದು ಹೀಗೆ ಅವರನ್ನ ಮೊದಲ್ನೇ ಸಲ ನೋಡಿದವ್ರಿಗೆ ‘ಏನಪ್ಪ, ಈ ಮನುಷ್ಯ ಹೀಗೆ ವಿಚಿತ್ರ..’ ಅಂತ ಅನ್ಸೊ ಹಾಗಿತ್ತು ಅವರ ವರ್ತನೆ. ಜೊತೆಗೆ ಅಲ್ಲೊಂದು ರಿಸರ್ಚ್ ಸೆಂಟರ್ ಇದೆ ಇವರ ತೋಟದ ಎದುರುಗಡೆ. ಅಲ್ಲಿ ರಿಸರ್ಚ್ ಮಾಡ್ತಿದವರೆಲ್ಲಾ ಇವರಿಗೆ ಫ್ರೆಂಡ್ಸ್. ಅವರನ್ನೆಲ್ಲಾ ಸಂಜೆ ತೋಟಕ್ಕೆ ಕರೆಯೋದು, ಮಾತಾಡೋದು, ಹೊಸಹೊಸ ವಿಚಾರಗಳ ಬಗ್ಗೆ ಚರ್ಚೆ ಮಾಡೋದು, ಏನೇನು ಬದಲಾವಣೆಗಳಾಗ್ತಾ ಇವೆ ಅಂತ ತಿಳ್ಕೊಳ್ಳೋದು…ಹಾಗೆ ನಡೀತಿತ್ತು. ನಂತರ ಅವರಿಗೆ ಬೇರೆ ಬೇರೆ ಚಳುವಳಿಗಳ ಜೊತೆ ಸಂಪರ್ಕ ಇತ್ತು. ಆ ಚಳುವಳಿಗೆ ಸಂಬಂಧಪಟ್ಟವರೆಲ್ಲಾ ಇವರ ಮನೆಗೆ ಬರ್ತಾ ಇದ್ರು. ಅವರ ಜೊತೆ ಮಾತಾಡೋದು….ಆ ಥರ ನನ್ನ ಅವರ ಒಡನಾಟ ಶುರುವಾಗಿದ್ದು ‘ತಬರನ ಕತೆ’ ಸಿನಿಮಾ ಮಾಡುವ ಪ್ರಯತ್ನದಲ್ಲಿ. ಫಸ್ಟ್ ಟೈಮ್ ಹೋದಾಗ ‘ಎಲ್ಲಿ ಉಳ್ಕೊಂಡಿದೀರಿ’ ಅಂತ ಕೇಳಿದ್ರು. ನಾನು ‘ಇಲ್ಲೇ ಯಾವ್ದೊ ಹೋಟೆಲ್ಲು’ ಅಂತ ಹೇಳ್ದೆ. ‘ಅಯ್ಯೊ ಹೋಟೆಲ್ ನಲ್ಲಿ ಯಾಕ್ರಿ ಉಳ್ಕೊಂಡಿದೀರಿ? ನಮ್ ಮನೆಗೇ ಬಂದು ಬಿಡಿ’ ಅಂದ್ರು. ನಾವೂ ಹೋದ್ವಿ. ಒಂದು ನಾಲ್ಕೈದು ದಿವ್ಸ ಅವರ ಮನೇನಲ್ಲೇ ಉಳ್ಕೊಂಡಿದ್ವಿ, ಸುದೀರ್ಘವಾಗಿ ಚರ್ಚೆ ನಡೆಸಿದ್ವಿ. ಎಲ್ಲಾ ಮುಗಿದ್ಮೇಲೆ ‘ನೆಕ್ಸ್ಟ್ ಟೈಮ್ ಬನ್ನಿ. ಆಗ ರೆಡಿ ಕತೆ ಬೇಡ. ನಾನು ಸಿನಿಮಾಗೋಸ್ಕರ ಅಂತಲೇ ಕತೆ ಬರ್ಕೊಡ್ತೀನಿ. ನೀವು ಸಿನಿಮಾ ಮಾಡಿ’ ಅಂತ ಹೇಳಿದ್ದು ನನಗೆ ನೆನಪಿದೆ.

“ಸಿನಿಮಾ ಬಗ್ಗೆ disappointment!”


ಆಮೇಲೆ ಅವರಿಗೆ ಆಸಕ್ತಿಗಳು ಬಹಳ ಅಲ್ವ. ಈಗ ಸಿನಿಮಾ ಅಂದ ತಕ್ಷಣ, ‘ನೀವು ಯಾವ ಕ್ಯಾಮೆರಾ ಉಪಯೋಗಿಸ್ತೀರ? ಯಾವ ಫಿಲ್ಮ್ ಬಳಸ್ತೀರ? ಯಾವ ಲೆನ್ಸ್ ಉಪಯೋಗಿಸ್ತೀರ?’ ಅಂತ ಕೇಳಿ ತಿಳ್ಕೊಳ್ಳೊ ಕುತೂಹಲ ಅವರಿಗಿತ್ತು. ಆದರೆ ಇಷ್ಟೆಲ್ಲಾ ತಿಳ್ಕೊಂಡಿದ್ರೂ ಅವರಿಗೆ ಪ್ರಾಕ್ಟಿಕಲ್ಲಾಗಿ ಸಿನಿಮಾ ಗೊತ್ತಿರ್ಲಿಲ್ಲ. ನಾವು ‘ತಬರನ ಕತೆ’ ಶೂಟಿಂಗ್ ಮಾಡೋಕೆ ಹೋದಾಗ ಅವರಿಗೆ ಸಿನಿಮಾ ಮೇಕಿಂಗ್ process ನೋಡಿ ಬಹಳ dissappoint ಆಗ್ಬಿಡ್ತು. ಯಾಕಂದ್ರೆ ನನಗೆ ಶಾಟ್ಸ್ ಹೇಗಿರುತ್ತೆ ಅಂತ ಸ್ಪಷ್ಟವಾಗಿ ಗೊತ್ತಿತ್ತು. So ನಾವು ಒಂದು ಮನೆಯ ದೃಶ್ಯದಲ್ಲಿ ಆ ಮನೆಯ ನಾಲ್ಕೂ ಗೋಡೆಗಳನ್ನ ಕಟ್ಟಿರ್ಲಿಲ್ಲ. ಎರಡೇ ಗೋಡೆ ಕಟ್ಟಿದ್ವಿ. ಛಾವಣಿ ಕೂಡ ಕಟ್ಟಿರ್ಲಿಲ್ಲ. ತೇಜಸ್ವಿ ಬಂದು ನೋಡಿದ್ದೇ ‘ಥು ಇದೆಂಥ ಮನೆ ಕಣಯ್ಯ ಇದು? ಒಂಚೂರೂ ಚೆನ್ನಾಗಿಲ್ಲ…’ ಅಂತ ಒಂದಷ್ಟು ಬೈದು ಸಿಟ್ಟು ಮಾಡ್ಕೊಂಡು ಹೊರಟೇ ಹೋದ್ರು. ನಾನು ಹೇಳ್ದೆ ‘ಸಾರ್ ಇಷ್ಟೇ ಶಾಟ್ಸ್ ಇರೋದು ಮನೆ ಒಳಗೆ. ಮಿಕ್ಕಿದ್ ಶಾಟ್ಸ್ ಬರೊಲ್ಲ ಅಂದ್ಮೇಲೆ ಉಳಿದ ಗೋಡೆ ಕಟ್ಟಿ ಏನ್ ಪ್ರಯೋಜ್ನ? ಈ ಕಡೆ ಗೋಡೆ ಕಟ್ಟಿ ಪಾತ್ರೆ ಇಟ್ರೆ ಏನ್ ಪ್ರಯೋಜ್ನ? ಯಾಕಂದ್ರೆ ಅಲ್ಲಿ ಕ್ಯಾಮೆರಾ ಇರುತ್ತೆ. ಹಾಗಾಗಿ ಕ್ಯಾಮೆರಾ ಹಿಂದೆ ಏನಿಟ್ಟು ಏನ್ ಪ್ರಯೋಜ್ನ?’ ಅಂತ ಅವರಿಗೆ ವಿವರಣೆ ಕೊಡೋಕೆ ಟ್ರೈ ಮಾಡ್ದೆ. ಆದರೆ ಅವರು ತುಂಬಾ upset ಆಗಿ ‘ಹಿಂಗಲ್ಲ ಕಣ್ರಯ್ಯ. ಪಕ್ಕ ಮಾಡ್ಬೇಕು’ ಅಂದ್ರು. ನಾನಂದೆ ‘ಸಾರ್ ನೀವು ‘ಪಕ್ಕ’ ಅಂತ ಹೇಳೊ ಹಾಲಿವುಡ್ ನವರು ಮಾಡೋದು ಇದನ್ನೇ. ಕ್ಯಾಮೆರ ಮುಂದೆ ಕಾಣೋದು ಮಾತ್ರ decorate ಮಾಡಿರ್ತಾರೆ. ಕ್ಯಾಮೆರ ಹಿಂದಿರೋದೆಲ್ಲಾ ಹೀಗೆ ಹರಕು ಹರಕಾಗಿರುತ್ತೆ’ ಅಂತ. ಆನಂತರ ಅವರು ಚಿತ್ರೀಕರಣದಲ್ಲಿ ಹೆಚ್ಚು ಭಾಗವಹಿಸ್ಲಿಲ್ಲ. ಆಗಾಗ ದೂರದಿಂದಲೇ ನೋಡಿ ಹೋಗ್ಬಿಡ್ತಿದ್ರು.

“ನೀನೇನ್ ಕ್ಯಾಮೆರ ತಿನ್ತಿಯ…?”

ಅವರಿಗೆ ಸಿನಿಮಾದ ಇತರೆ ವಿಭಾಗಗಳ ಬಗ್ಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ. ಈಗ ನಟರು ಹೇಗೆ ಮಾಡ್ತಾರೆ? ಸೌಂಡ್ ಹೆಂಗ್ ರೆಕಾರ್ಡ್ ಮಾಡ್ತೀರಿ? ಸಂಕಲನ ಹೆಂಗ್ ಮಾಡ್ತೀರಿ? ಅಂತ ಅವರು ಯಾವತ್ತೂ ತಲೆ ಕೆಡಿಸ್ಕೊಳ್ತಿರ್ಲಿಲ್ಲ. ಆದರೆ ಕ್ಯಾಮೆರ ಬಗ್ಗೆ ಮಾತ್ರ ವಿಶೇಷವಾದ ಆಸಕ್ತಿ ಇಟ್ಕೊಂಡು ಗಮನಿಸ್ತಿರ್ತಿದ್ರು. ಒಂದ್ಸಲ ಅವರೇ ಹೇಳಿದ್ರು, “ನಾನು ಎಷ್ಟು ಕ್ಯಾಮೆರ ಕೊಂಡುಕೊಳ್ತೀನಿ ಅಂದ್ರೆ…”, ಆಗ ಅವರ ತಮ್ಮಂದಿರು, ತಂಗಿಯರು ವಿದೇಶಗಳಿಗೆ ಹೋಗಿ ಬರ್ತಿದ್ರಲ್ಲ ಆಗ ಅಲ್ಲಿಂದ ಕ್ಯಾಮೆರ, ಲೆನ್ಸು ಅದು ಇದು ಅಂತ ತರಿಸ್ಕೊಳ್ತಿದ್ರಂತೆ. ಆಗ ಅವರ ತಮ್ಮ ಒಂದ್ಸಲ ತಮಾಷೆ ಮಾಡಿದ್ರಂತೆ “ಏನಯ್ಯ ನಾವು ಏಷ್ಟು ಕ್ಯಾಮೆರ ತಂದುಕೊಟ್ರು ಸಾಕಾಗೋದಿಲ್ವಲ್ಲ ನಿನಗೆ, ನೀನೇನ್ ಕ್ಯಾಮೆರ ತಿನ್ತಿಯ…?” ಅಂತ. ಅದನ್ನೂ ಅವರೇ ತಮಾಷೆಯಾಗಿ ಹೇಳ್ತಾ ಇದ್ರು’ ಹೀಗೆ ತಬರನ ಕತೆ ಸಿನಿಮಾ ಆದ ನೆನಪುಗಳನ್ನು ಹಂಚಿಕೊಳ್ಳುವುದರ ಮೂಲಕ ಶ್ರೀ ಗಿರೀಶ್ ಕಾಸರವಳ್ಳಿಯವರು ಅವರ ಮತ್ತು ತೇಜಸ್ವಿಯವರ ನಡುವಿನ ಒಡನಾಟದ ನೆನಪಿನ ಯಾತ್ರೆಯನ್ನು ಆರಂಭಿಸಿದರು.

ಮುಂದೆ ಅವರ ಮಾತು ತಿರುಗಿದ್ದು ತೇಜಸ್ವಿಯವರ ಕಂಪ್ಯೂಟರ್ ಆಸಕ್ತಿಯ ಬಗ್ಗೆ. “ಹಾಗೆ ಕ್ಯಾಮೆರ ಬಿಟ್ರೆ ನಂತರ ಆಸಕ್ತಿ ಇದ್ದಿದ್ದೇ ಕಂಪ್ಯೂಟರ್ ಬಗ್ಗೆ. ಆಗ ನನಗೆ ಕಂಪ್ಯೂಟರ್ ಬಗ್ಗೆ ಏನೇನೂ ಗೊತ್ತಿರ್ಲಿಲ್ಲ. ಆಗಲೇ ಅವರು ಕಂಪ್ಯೂಟರ್ ನಲ್ಲಿ ಏಷ್ಟೆಷ್ಟೋ ಸಾಧ್ಯತೆಗಳನ್ನ ಕಂಡುಕೊಂಡಿದ್ರು. ಇಂಟರೆಸ್ಟಿಂಗ್ ಏನು ಅಂದ್ರೆ ತಬರನ ಕತೆ ಆಗಿ ಮೂರ್ನಾಲ್ಕು ವರ್ಷದ ನಂತರ ಒಂದಿನ ಅವರು ಇದ್ದಕ್ಕಿದ್ದ ಹಾಗೆ ನನಗೆ ಫೋನ್ ಮಾಡಿ ‘ತಬರನ ಕತೆ ಸ್ಟಿಲ್ಸ್ ಎಲ್ಲ ಕಳ್ಸು’ ಅಂದ್ರು. ನಾನು ‘ಯಾಕ್ ಸಾರ್?’ ಅಂದೆ. ‘ಇಲ್ಲ ಏನಕ್ಕೊ ಬೇಕು, ಕಳ್ಸು’ ಅಂದ್ರು. ನಾನು ಎರಡು ಆಲ್ಬಮ್ ನಷ್ಟಿದ್ದ ಫೋಟೋಗಳನ್ನ ಅವರಿಗೆ ಕಳಿಸ್ದೆ. ಕಳಿಸಿ ನಂತರ ಕೇಳ್ದೆ ‘ಯಾಕೆ?’ ಅಂತ. (ಕಾಸರವಳ್ಳಿಯವರು ನಗುತ್ತಾ) ಅವರಂದ್ರು ‘ಫೋಟೋಕಾಮಿಕ್ಸ್ ಮಾಡೋಣ ಅಂತ ಕಣಯ್ಯ ತಬರನ ಕತೆ ಇಟ್ಕೊಂಡು’ ಅಂತ. ನೋಡಿ ಫೋಟೋಸ್ ನ ಕಂಪ್ಯೂಟರಿಗೆ ಫೀಡ್ ಮಾಡಿ ಅದರ ನೈಜ ರೂಪವನ್ನ ಬದಲಿಸಿ ಕಾರ್ಟೂನ್ ಥರ ಮಾಡಿ ಫೋಟೋ ಕಾಮಿಕ್ಸ್ ಮಾಡ್ಬೇಕು ಅಂತ ಹೊರಟಿದ್ರು. ಆದರೆ ಕ್ರಮೇಣ ಅವರು ಅದರಲ್ಲಿ ಆಸಕ್ತಿ ಕಳ್ಕೊಂಡ್ರೊ ಅಥವ ಮಾಡೋಕೆ ಗೊತ್ತಾಗ್ಲಿವೊ ಅಂತು ಅವರು ಅದನ್ನ ಮಾಡ್ಲಿಲ್ಲ. ನನಗೆ ಆಶ್ಚರ್ಯ ಅನ್ಸಿದ್ದು ಅಂದ್ರೆ ಒಂದ್ಸಲ ಕತೆ ಬರೆದಾಯ್ತು, ಅದು ಸಿನಿಮಾ ಆಗೂ ಬಂದಾಯ್ತು ಬಿಡು ಅಂತ ಅವರು ಅದರಲ್ಲಿ ಆಸಕ್ತಿ ಕಳ್ಕೊಳ್ಲಿಲ್ಲ ನೋಡಿ. ಅದನಿಟ್ಕೊಂಡು ಬೇರೆ ಇನ್ನೇನಾದ್ರೂ ಮಾಡ್ಬಹುದ ಅಂತ ಹುಡುಕ್ತಿದ್ರಲ್ಲ ಅದು ಅವರ ಜೀವನ ಪ್ರೀತಿ, ಲವಲವಿಕೆ ತೋರಿಸುತ್ತೆ’. ಕಾಸರವಳ್ಳಿಯವರ ಮಾತು ಹಾಗೆ ಮುಂದುವರೆದಿತ್ತು. ನಂತರ ಅವರೇ ಮಾತನ್ನು ತೇಜಸ್ವಿಯವರಿಗಿದ್ದ ಅಪರಿಮಿತ ಕುತೂಹಲದ ಕಡೆ ಹೊರಳಿಸಿದರು. ತೇಜಸ್ವಿಯವರ ಕುತೂಹಲಕ್ಕೆ ಸಂಬಂಧಪಟ್ಟಂತೆ  ಕಾಸರವಳ್ಳಿಯವರು ನಮ್ಮೊಂದಿಗೆ ಹಂಚಿಕೊಂಡ ಒಂದು ಸ್ವಾರಸ್ಯಕರ ಘಟನೆ ಇಲ್ಲಿದೆ,

“Brand new car & 3 hours discussion!”

ಒಂದ್ಸಲ ಸಂಜೆ ಯಾರದ್ದೊ ಮನೆಗೆ ಊಟಕ್ಕೆ ಕರೆದಿದ್ರು. ತೇಜಸ್ವಿ, ನಾನು ನಮ್ಮ ಸಹ ನಿರ್ದೇಶಕರು ಹೋಗಿದ್ವಿ. ಅದು ತೇಜಸ್ವಿಯವರ ಫ್ರೆಂಡ್ ಕಾಫಿ ಪ್ಲಾಂಟರ್ ಒಬ್ಬರ ತೋಟದೊಳಗಿದ್ದ ಮನೆ. ಅಲ್ಲಿ ಅವರ ಮನೆಗೆ ಒಂದು ಹೊಸ ಕಾರು ಬಂದಿತ್ತು. ಅದು ಯಾವ ಕಾರು ಅಂತ ಈಗ ನೆನಪು ಹೋಗಿದೆ ನನಗೆ. ಆ ಕಾರು ಕಂಡಿದ್ದೆ ತೇಜಸ್ವಿ ಹೋದ ಕೆಲಸ ಎಲ್ಲಾ ಮರೆತು ಆ ಕಾರ್ ಬಗ್ಗೆ ಚರ್ಚೆ ಶುರು ಮಾಡ್ಕೊಂಡ್ರು. ಕಾರ್ ಕೆಳಗೆ ಅದರ ಹತ್ರ ಕೂತ್ಕೊಂಡು ಆ ಕಾರು ಹೇಗೆ ಕೆಲ್ಸ ಮಾಡುತ್ತೆ? ಅದರ ಡೈನಾಮಿಕ್ಸ್ ಹೇಗಿದೆ? ಅದರ ಸಸ್ಪೆನ್ಷನ್ ಹೇಗೆ ಕೆಲ್ಸ ಮಾಡುತ್ತೆ ಈ ಥರ ಸುದೀರ್ಘವಾದ ಚರ್ಚೆ ಸುಮಾರು ರಾತ್ರಿ ಹತ್ತು ಗಂಟೆವರೆಗು! ಕೊನೆಗೆ ಆ ಮನೆಯವ್ರೇ ‘ನೀವೀಗ ತಕ್ಷಣ ಬರ್ಲಿಲ್ಲ ಅಂದ್ರೆ ಊಟಾನೇ ಹಾಕೋದಿಲ್ಲ’ ಅಂತ ಹೆದರಿಸಿದ ಮೇಲೇನೇ ಅವರು ಕೆಳಗಿಳಿದು ಬಂದಿದ್ದು. ಹಾಗೆ ಮಷಿನರಿ, ಟೆಕ್ನಾಲಜಿ ಅಂತಂದ್ರೆ ಅಷ್ಟು ಕ್ಯೂರಿಯಾಸಿಟಿ ಅವರಿಗೆ. ನಮ್ಮಲ್ಲಿ ಮಷಿನರಿ ಅಂದ ತಕ್ಷಣ ಅದು ಕ್ರಿಯಾಶೀಲತೆಗೊಂದು ದೊಡ್ಡ ಅಡ್ಡಿ ಅಂತ ಅಂದುಕೊಳ್ಳೋರೆ ಹೆಚ್ಚು. ಆದರೆ ತೇಜಸ್ವಿ ಹಾಗೆ ತಿಳ್ಕೊಂಡಿರಲಿಲ್ಲ.

ಮತ್ತೂ ಒಂದು ಮುಖ್ಯವಾದ ಅಂಶ ಅಂದರೆ ಅಂತಹ ಒಂದು ಮಗುಸಹಜ ಮುಗ್ಧ ಕುತೂಹಲ ನಮ್ಮಲ್ಲಿ ಬರ್ತಾ ಬರ್ತಾ ಕಡಿಮೆ ಆಗ್ತಾ ಇದೆ. ನಮ್ಮಲ್ಲಿ ಹೆಚ್ಚಿನವರು specialization ಕಡೆ ಮುಖ ಮಾಡ್ತಾ ಇದೀವಿ. ಉದಾ: ನನ್ನೇ ತಗೊಂಡ್ರು, ನನಗೆ ಸಿನಿಮಾ ಗೊತ್ತೇ ಹೊರತು ಬೇರೆ ವಿಷಯಗಳ ಬಗ್ಗೆ ಆಸಕ್ತಿ, ಕುತೂಹಲ ಅಷ್ಟಾಗಿಲ್ಲ. ನಾವೆಲ್ಲರು ನಮ್ಮ ನಮ್ಮ ಕ್ಷೇತ್ರಗಳ ಬಗ್ಗೆ ಮಾತ್ರ ತಿಳ್ಕೊಳ್ಳೋಕೆ, update ಆಗಿರೋಕೆ ಪ್ರಯತ್ನ ಪಡ್ತಿದ್ದೇವೆ ಹೊರತು ಬೇರೆ ಬೇರೆ ಇತರೆ ಕ್ಷೇತ್ರಗಳ ಬಗ್ಗೆ ‘ನಮಗ್ಯಾಕೆ ಬೇಕದು?’ ಅನ್ನೊವಂತಹ ನಿರ್ಲಕ್ಷ ಬಹುಪಾಲು ನಮ್ಮಲ್ಲಿ ಕಂಡುಬರ್ತಾ ಇದೆ. ಆದರೆ ತೇಜಸ್ವಿ ಅದಕ್ಕೆ ಅಪವಾದ ಅನ್ನೊ ಹಾಗೆ ಎಲ್ಲಾ ಕ್ಷೇತ್ರಗಳ ಬಗ್ಗೂ ಅಷ್ಟೇ ತೀವ್ರವಾದ ಆಸಕ್ತಿ ಬೆಳೆಸ್ಕೊಂಡಿದ್ರು. ಅದು ಅವರ ಶ್ರೇಷ್ಟತೆ ಅಂತ ನಾನು ತಿಳ್ಕೊಂಡಿದೀನಿ.

ಆಮೇಲೆ ಅವರ ಪ್ರಯೋಗಶೀಲ ಮನಸ್ಸಿನ ಬಗ್ಗೆ ಕೂಡ ನನಗೆ ತುಂಬಾ ಮೆಚ್ಚುಗೆ, ಗೌರವ ಇದೆ. ನೀವು ಅವರಿಗೆ ಏನೇ ಹೇಳಿ, ಏನೇ ಕೊಡಿ ಅದನ್ನ ಮಾಮೂಲಿ ರೀತಿ ಬಿಟ್ಟು ಬೇರೆ ರೀತಿ ನೋಡೋಕೆ ಸಾಧ್ಯವ ಅಂತ ಅವ್ರು ಯಾವಾಗ್ಲೂ ಯೋಚಿಸ್ತಾ ಇದ್ರು. ಅವರು ಮಾಡಿದ್ರು ಅಂತಲ್ಲ, ಸುಮ್ನೆ Metapharical ಆಗಿ ಹೇಳ್ತೀನಿ, ಒಂದು ಮಗು ಕೈಗೆ ಒಂದು ಬೊಂಬೆ ಕೊಡ್ತೀರಿ ಅಂತಿಟ್ಕೊಳಿ. ಆ ಗೊಂಬೆ ಜೊತೆಗೆ ಆಡೋದರ ಜೊತೆಗೆ ಕುತೂಹಲ ಜಾಸ್ತಿ ಆದರೆ ಆ ಮಗು ಏನ್ ಮಾಡುತ್ತೆ ಅದನ್ನ ಬಿಚ್ಚಿ, ಒಳಗೇನಿದೆ ಅಂತ ನೋಡಿ ಖುಷಿಪಡುತ್ತಲ್ವ. ಅದು ಹಾಳಾಗಿಬಿಡುತ್ತೆ ಅನ್ನೋದು ಸೆಕೆಂಡರಿ. ಆದರೆ ಒಳಗೇನಿದೆ, ಅದು ಹೇಗೆ ಕೆಲಸ ಮಾಡುತ್ತೆ ಅಂತ ನೋಡೊ ಕುತೂಹಲ ಇದೆಯಲ್ಲ ಆ ಗುಣ ತೇಜಸ್ವಿಯವರಲ್ಲೂ ಕೊನೆವರೆಗೂ ಇತ್ತು. ನೀವು ಏನೇ ಹೇಳಿ ‘ಇದು ಹೀಗಾಗೋಕೆ ಸಾಧ್ಯ ಇಲ್ವ? ಹೀಗೂ ಇದನ್ನ ಯಾಕ್ ನೋಡ್ಬಾರ್ದು?’ ಅಂತ ಪ್ರತಿಸಲ ಹೊಸಹೊಸ ದಿಕ್ಕಿನಲ್ಲೇ ಅವರು ಯೋಚ್ನೆ ಮಾಡ್ತಾ ಇದ್ರು. ಅವರು ಭಾಗವಹಿಸಿದ್ದ ಕೆಲವು ಸಭೆ, ಸೆಮಿನಾರ್ ಗಳನ್ನ ನಾನು ಗಮನಿಸಿದ್ದೀನಿ. ಅಲ್ಲಿ ಅವರು ಬೇಕುಬೇಕಂತಲೇ ಯಾವುದೊ ಒಂದು ಹೊಸ ನಿಲುವನ್ನ ತಗೊಂಡು ಇಡೀ ಸಭೆಯನ್ನ ಒಂದು ಕ್ಷಣ ತಬ್ಬಿಬ್ಬು ಮಾಡಿಬಿಡ್ತಿದ್ರು. ಬೇಕುಬೇಕಂತಲೆ! ಯಾಕಂದ್ರೆ ಬೇರೆ ಥರ ಯೋಚ್ನೆ ಮಾಡ್ಲಿ ಅಂತ. ಯಾವಾಗ್ಲೂ ಒಂದೇ ಥರ ಯೋಚ್ನೆ ಮಾಡಿ ಒಂದು Patternಗೆ ಸಿಕಾಕೊಂಡು steriotypic ಆಗ್ತಿರ್ತೀವಲ್ಲ ಅದನ್ನ ಬ್ರೇಕ್ ಮಾಡ್ಲಿ ಅಂತ. ಸೋ ಅದು ತೇಜಸ್ವಿಯವರ ವ್ಯಕ್ತಿತ್ವದಲ್ಲೇ ಇತ್ತದು.

“ಕಾಸರವಳ್ಳಿಯವರ ಸಿನಿಮಾದಲ್ಲಿ ತೇಜಸ್ವಿ actingu!”

“ಸಾರ್ ತೇಜಸ್ವಿಯವ್ರೇನು ಸಿನಿಮಾದಲ್ಲಿ ಆಕ್ಟ್ ಮಾಡಬೇಕು ಅಥವ ಸಿನಿಮಾ ಡೈರೆಕ್ಷನ್ ಮಾಡ್ಬೇಕು ಅಂತ ನಿಮ್ಹತ್ರ ಯಾವಾಗ್ಲಾದ್ರೂ ಹೇಳ್ಕೊಂಡಿದ್ದುಂಟ?” ಕುತೂಹಲದ ಪ್ರಶ್ನೆಯೊಂದನ್ನು ನಾನು ಕಾಸರವಳ್ಳಿಯವರಿಗೆ ಕೇಳಿದೆ. ಆ ಪ್ರಶ್ನೆ ಮುಗಿಯುವ ಮೊದಲೇ ಶ್ರೀ ಕಾಸರವಳ್ಳಿಯವರು ನಗಲು ಪ್ರಾರಂಭಿಸಿದರು. ಅವರ ನಗುವಿನ ಹಿಂದೆ ಏನೋ ಸ್ವಾರಸ್ಯಕರವಾದ ಘಟನೆಯೊಂದಿರಬೇಕೆಂದು ನಾನು ಊಹಿಸುತ್ತಿರಬೇಕಾದರೆ ಅವರು ಹಾಗೆ ನಗು ಮುಂದುವರೆಸುತ್ತಲೇ ಮಾತು ಪ್ರಾರಂಭಿಸಿದರು, ‘ಸಿನಿಮಾ ನಿರ್ದೇಶನ ಮಾಡ್ಬೇಕು, ಅಥವ ಮಾಡೊ ಆಸಕ್ತಿಯಿದೆ ಅಂತ ಅವರು ಯಾವತ್ತೂ ನನ್ಹತ್ರ ಹೇಳ್ಕೊಂಡಿಲ್ಲ. ಆದರೆ ನಾನೇ ಒಂದ್ಸಲ ತಬರನ ಕತೆ ಮಾಡೊ ಟೈಮ್ ನಲ್ಲೇ ಅವರಿಗೆ act ಮಾಡಿ ಸರ್ ಅಂತ ಕೇಳಿ ಬೈಸಿಕೊಂಡಿದ್ದೆ. ತಬರನ ಕತೆಯ ಈರೇಗೌಡ್ರು ಪಾತ್ರಕ್ಕೆ ಅಂತ ಕಾಣುತ್ತೆ ‘ ನೀವೇ ಯಾಕೆ ಆ ಪಾತ್ರ ಮಾಡ್ಬಾರ್ದು?’ ಅಂತ ಕೇಳಿದ್ದೆ. ಅದಕ್ಕವರು ‘ಏಯ್ ಸುಮ್ನೆ ನನ್ನ ತಲೆ ತಿನ್ನ್ಬೇಡ್ರಿ. ನನಗೆ ಆಕ್ಟಿಂಗ್, ಗೀಕ್ಟಿಂಗ್ ಎಲ್ಲ ಬರಲ್ಲ…’ ಅಂತ ಒಂದಷ್ಟು ಬೈದು ಕಳಿಸಿದ್ರು’ ಅವರು ನಗು ಸ್ವಲ್ಪ ಹೊತ್ತು ಹಾಗೆ ಜಾರಿಯಲ್ಲಿತ್ತು. ನಂತರ ಮಾತು ಮುಂದುವರೆದದ್ದು ತೇಜಸ್ವಿಯವರ ಸರಳತೆಯ ಬಗ್ಗೆ. ಈ ಕುರಿತು ನಮ್ಮ ಪ್ರಶ್ನೆಗೆ ಶ್ರೀ ಕಾಸರವಳ್ಳಿಯವರು ಅವರ ನೆನಪುಗಳನ್ನು ಜೋಡಿಸತೊಡಗಿದರು.

“ಪ್ರಕೃತಿ ಸಹಜ ಸರಳತೆ!”

‘ಸರಳತೆ ಅದು ತೋರಿಕೆಯ ಸರಳತೆ ಅಲ್ಲ. ಚೆನ್ನಾಗಿ ಡ್ರೆಸ್ ಮಾಡ್ಕೊಂಡ್ ಮೆರಿಬೇಕು, ಯಾರೊ ನೋಡಿ ನನ್ನನ್ನ ಮೆಚ್ಚಬೇಕು…ಈ ಥರದ ಯಾವ ತೋರಿಕೆಗಳು ಅವರಲ್ಲಿ ಇರಲಿಲ್ಲ. ಅವರು ಯಾರ ಜೊತೆ ಬೇಕಾದ್ರೂ, ಎಂಥವರ ಜೊತೆ ಬೇಕಾದ್ರೂ mingle ಆಗ್ತಾ ಇದ್ರು. ಅವರು ಅವರ ಪೇರೆಂಟ್ಸ್ ಬಗ್ಗೆ bother ಮಾಡ್ಕೊಂಡಿದಾರೆ ಅಂತ ನನಗೆ ಯಾವತ್ತೂ ಅನ್ಸಿಲ್ಲ. ಸೊ ಅದಕ್ಕೆ ಅದು ತೋರಿಕೆಯ ಸರಳತೆ ಅಲ್ಲ ಅಂತ ಹೇಳಿದ್ದು. ಬಹಳ ಸಹಜವಾಗಿ ಬಂದಂತ ಸರಳತೆ ಅದು. ಉದಾ: ಯಾರೋ ನೋಡಬೇಕು ಅಂತ ಬಂದ್ರೆ ಸ್ವಲ್ಪ ಮುಖ್ಯವಾದ ವ್ಯಕ್ತಿ ಅನ್ಸಿದ್ರೆ ಅವರನ್ನ ಕರ್ಕೊಂಡು ಬಂದು ಮಣೆ ಹಾಕೋದು, ಇನ್ಯಾರೊ ಸಾಮಾನ್ಯರು ಬಂದ್ರೆ ‘ಅವನೇನ್ ಬಿಡು’ ಬಿಡು ಅಂತ ಉಪೇಕ್ಷೆ ಮಾಡೋದೆಲ್ಲ ಇರುತ್ತಲ್ಲ, ನಾನು ಅವರನ್ನ ಹತ್ತಿರದಿಂದ ಕಂಡಷ್ಟೂ ದಿನ ಅವರು ಯಾವತ್ತೂ ಹಾಗ್ ನಡ್ಕೊಂಡಿಲ್ಲ. ಅವರು ಪಕ್ಕದ ಮನೆ ಮಾರ, ಸಿದ್ದ ಇಂತಹ ಸಾಮಾನ್ಯರನ್ನ ಹೇಗ್ ಟ್ರೀಟ್ ಮಾಡ್ತಿದ್ರೊ ಹಾಗೆ ದೊಡ್ದವರನ್ನೂ ಟ್ರೀಟ್ ಮಾಡ್ತಿದ್ರು. ಒಂದ್ಸಲ ‘ತಬರನ ಕತೆ’ ಸಿನಿಮಾಗೆ ಬಂದು ಕ್ಲಾಪ್ ಮಾಡ್ಲಿ ಅಂತ ಡಿಸಿ ಅವರತ್ರ ಕರ್ಕೊಂಡ್ ಹೋಗಿದ್ರು. ಅವರಾತ್ರಾನೂ ಅದೇ attitude ಇಟ್ಕೊಂಡ್ ಮಾತಾಡ್ತಿದ್ರು. ‘ನೀವೇನೊ ದೊಡ್ದವರು, ಮಹಾಪುರುಷರು’ ಅನ್ನೊ ಥರದ ಧೋರಣೆ ತೋರಿಸ್ತಾನೇ ಇರಲಿಲ್ಲ. ಆಮೇಲೆ ಅಲ್ಲಿ ಹ್ಯಾಂಡ್ ಪೋಸ್ಟ್ ಹತ್ರ ನಿಂತುಕೊಳ್ಳೋದು, ಯಾರ್ಯಾರು ಬರ್ತಿರ್ತಾರೆ ಅವರತ್ರ ಎಲ್ಲಾ ಮಾತಾಡೋದು…ಹೀಗೆ ಬಹಳ ಕ್ಯಾಷುಯಲ್ ಆಗಿರ್ತಿದ್ರು.

ಹೀಗೆ ಶ್ರೀ ಗಿರೀಶ್ ಕಾಸರವಳ್ಳಿಯವರ ತೇಜಸ್ವಿ ನೆನಪುಗಳು ಒಂದೊಂದಾಗಿ ಹರಿದುಬಂದವು. ಅಲ್ಲಿಗೆ ಶ್ರೀ ಕಾಸರವಳ್ಳಿಯವರಿಂದ ಸಾಕ್ಷ್ಯಚಿತ್ರಕ್ಕೆ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ವಿಷಯಗಳು ನಮಗೆ ದೊರಕಿದಂತಾಗಿತ್ತು. ಅವರ ಮಾತುಗಳ ಚಿತ್ರೀಕರಣವನ್ನು ಅಂತ್ಯ ಮಾಡುವುದಕ್ಕಿಂತ ಮೊದಲು ‘ತೇಜಸ್ವಿಯವರ ಒಡನಾಟದಲ್ಲಿ ಮರೆಯಲಾಗದ ಘಟನೆ ಯಾವುದಾದರೂ ಇದ್ದರೆ ಹಂಚಿಕೊಳ್ಳಿ ಸರ್’ ಎಂದು ನಾನು ಕೇಳಿದ ಪ್ರಶ್ನೆಗೆ ಅವರು ತುಸು ಯೋಚಿಸಿ ಆ ಮರೆಯಲಾಗದ ನೆನಪನ್ನು ಹಂಚಿಕೊಳ್ಳತೊಡಗಿದರು,

“ಸಿನಿಮಾ ಡೈಲಾಗ್ ರೈಟರ್ ತೇಜಸ್ವಿ!”

‘ತಬರನ ಕತೆ ಚಿತ್ರಕತೆ ಎಲ್ಲಾ ಮುಗಿದಿತ್ತು. ಆಗ ಅದಕ್ಕೆ ಸಂಭಾಷಣೆಯನ್ನ ತೇಜಸ್ವಿಯವರೇ ಬರಿಬೇಕು ಅನ್ನೋದು ನನ್ನ ಒತ್ತಾಯ ಆಗಿತ್ತು. ಅವರು ಒಪ್ಪಿಕೊಂಡಿದ್ರು. ಆದರೆ ಎಷ್ಟು ಸಲ ಕೇಳಿದ್ರು ‘ಇನ್ನೂ ಆಗಿಲ್ಲ, ನನಗೆ ಸಮಯ ಇಲ್ಲ, ಆ ಕೆಲ್ಸ ಇದೆ ಈ ಕೆಲ್ಸ ಇದೆ’ ಅಂತ ಹೇಳಿ ಹೇಳಿ ಮುಂದಕ್ಕೆ ಹಾಕ್ತಾ ಇದ್ರು. ಕೊನೆಗೆ ನಮ್ಮ ಚಿತ್ರೀಕರಣ ಪ್ರಾರಂಭ ಮಾಡೊ ದಿನ ಹತ್ರ ಬಂದ್ರು ಅವರು ಸಂಭಾಷಣೆ ಬರೆದು ಕೊಡಲೇ ಇಲ್ಲ. ನಾಳೆ ಶೂಟಿಂಗ್ ಪ್ರಾರಂಭ ಆಗ್ಬೇಕಿತ್ತು. ಆಗ ಹಿಂದಿನ ದಿನ ನಮ್ಮ ಮ್ಯಾನೇಜರ್ ನ ಅವರ ಮನೆಗೆ ಕಳ್ಸಿ ಸಂಭಾಷಣೆ ಬರೆದು ಆಗಿದ್ರೆ ತಗೊಂಡು ಬನ್ನಿ ಅಂತ ಹೇಳಿ ಕಳ್ಸಿದ್ದೆ. ಅವರು ಹೋಗಿ ಬರಿಕೈಯಲ್ಲಿ ವಾಪಸ್ ಬಂದ್ರು. ‘ಯಾಕ್ರಿ?’ ಅಂತ ಕೇಳಿದ್ದಕ್ಕೆ ‘ಅವರಿನ್ನೂ ಬರೆದಿಲ್ವಂತೆ ಸಾರ್. ನಾನು ‘ನಾಳೆಯಿಂದ ಶೂಟಿಂಗ್ ಇದೆ. ಅರ್ಜೆಂಟ್ ಬರ್ಕೊಡಿ ಸಾರ್’ ಅಂದಿದ್ದಕ್ಕೆ ‘ಇಲ್ಲ ನನಗೀಗ ಪುರುಸೊತ್ತಿಲ್ಲ ನಾನು ಮೀನು ಹಿಡಿಯೊಕ್ಕೆ ಹೋಗ್ಬೇಕು’ ಅಂತ ಹೇಳಿ ಹೊರಟೇಹೋದ್ರು ಸಾರ್’ ಅಂದ್ರು. ಏನ್ ಮಾಡೋದು ಅಂತ ತಿಳಿದೆ ಕೊನೆಗೆ ನಾನೇ ಸಂಭಾಷಣೆ ಬರೆಯೋಕೆ ಕೂತೆ. ಹಾಗೆ ನಾನು ಬರೆದ ಸಂಭಾಷಣೆಯನ್ನ ತೇಜಸ್ವಿಯವ್ರು ನೋಡಿ ಏನಾದ್ರೂ ಬದಲಾವಣೆ ಇದ್ರೆ ಮಾಡ್ಲಿ ಅಂತ ಅವ್ರಿಗೆ ಕಳ್ಸಿದ್ದೆ.

ಅವರು ಅದನ್ನ ನೋಡಿ ಚೆನ್ನಾಗಿದೆ ಅಂತ ಹೇಳಿ ಕೆಲವು ಪದಗಳನ್ನ ಅಲ್ಲಲ್ಲಿ ತಿದ್ದಿ ಕಳಿಸಿದ್ರು. ಅದು ತುಂಬಾ ಚೆನ್ನಾಗಿತ್ತು ಅವರು ಮಾಡಿದ್ದ ಕರೆಕ್ಷನ್ಸ್. ಅದು ಇದ್ದಿದ್ರೆ ಒಳ್ಳೆ ದಾಖಲೆ ಆಗೊರೋದು. ಆದರೆ ಯಾರೊ ಅದನ್ನ ರಿಸರ್ಚ್ ಮಾಡ್ತೀವಿ ಅಂತ ತಗೊಂಡ್ ಹೋಗಿ ಕಳೆದಾಕಿಬಿಟ್ರು. ಹಾಗೆ ತಬರನ ಕತೆ ನಂತರ ‘ಕುಬಿ ಮತ್ತು ಇಯಾಲ’ ಮಾಡಿದಾಗ ಮತ್ತೆ ತೇಜಸ್ವಿಯವರನ್ನೇ ಸಂಭಾಷಣೆ ಬರ್ಕೊಡಿ ಅಂತ ಕೇಳಿದಾಗ ‘ಇಲ್ಲ ಗಿರೀಶಾನೇ ಚೆನ್ನಾಗಿ ಬರೀತಾನೆ. ಅವನೇ ಬರೀಲಿ’ ಅಂತ ಹೇಳಿ ಪ್ರೊತ್ಸಾಹಿಸಿದ್ರು. so ನಾನು ‘ಕುಬಿ ಮತ್ತು ಇಯಾಲ’ ದಿಂದ ಸ್ವತಂತ್ರವಾಗಿ ಸಂಭಾಷಣೆ ಬರೆಯೋಕೆ ಪ್ರಾರಂಭ ಮಾಡಿದೆ. ಮುಂದೆ ನನ್ನ ಸಿನಿಮಾಗಳಿಗೆ ನಾನೇ ಸಂಭಾಷಣೆ ಬರ್ಕೊಳ್ಳೋಕೆ ಪ್ರಾರಂಭ ಮಾಡಿದ್ದು ಅಲ್ಲಿಂದ. ಅದಕ್ಕೆ ಮುಖ್ಯ ಕಾರಣ ತೇಜಸ್ವಿಯವರು ಕೊಟ್ಟ confidence’

ಶ್ರೀ ಕಾಸರವಳ್ಳಿಯವರು ಮರೆಯಲಾಗದ ಘಟನೆಯನ್ನ ಹಂಚಿಕೊಂಡದ್ದು ಹೀಗೆ. ಕೊನೆಯದಾಗಿ ಕುತೂಹಲಕ್ಕೆಂಬಂತೆ ‘ಸಾರ್ ಒಂದು ವೇಳೆ ತೇಜಸ್ವಿಯವರದ್ದೇ ಬೇರೆ ಯಾವುದಾದ್ರೂ ಕೃತಿಯನ್ನ ಸಿನಿಮಾ ಮಾಡ್ಬೇಕು ಅಂತಾದ್ರೆ ಯಾವ ಕೃತಿಯನ್ನ ಆರಿಸಿಕೊಳ್ತೀರಿ?’ ಎಂದು ಅವರನ್ನ ಕೇಳಿದೆ. ಅವರು ಯೋಚಿಸುವ ಗೋಜಿಗೆ ಹೋಗದೆ ಕ್ವಚಿತ್ತಾಗಿ ಹೇಳಿದರು ‘I will go for “ನಿಗೂಢ ಮನುಷ್ಯರು”. ಯಾಕಂದ್ರೆ ಅದರಲ್ಲಿ ಸಿನಿಮ್ಯಾಟಿಕ್ possiblities ತುಂಬಾ ಇದಾವೆ…’ ಅಲ್ಲಿಗೆ ಶ್ರೀ ಗಿರೀಶ್ ಕಾಸರವಳ್ಳಿಯವರ ತೇಜಸ್ವಿಯವರ ನೆನಪುಗಳ ಚಿತ್ರೀಕರಣ ಮುಗಿಯಿತು. ಅವರಿಗೆ ಧನ್ಯವಾದ ಹೇಳಿ ನಾನು ನಮ್ಮ ತಂಡ ಅವರ ಮನೆಯಿಂದ ಹೊರಬಂದೆವು. ಅಂದಿನ ದಿನದ ಅಂತ್ಯದೊಳಗೆ ಮುಖ್ಯವಾದ ಇನ್ನೂ ಮೂರ್ನಾಲ್ಕು ಜನ ತೇಜಸ್ವಿ ಒಡನಾಡಿಗಳನ್ನು ಭೇಟಿಯಾಗಿ ಮಾತುಕತೆ ನಡೆಸುವುದಿತ್ತು.

(ಹುಡುಕಾಟ ಮುಂದುವರೆಯುವುದು…)

 

‍ಲೇಖಕರು avadhi

February 9, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. h a patil

    – ತೇಜಸ್ವಿಯವರ ಕುರಿತು ಗಿರೀಶ ಕಾಸರವಳ್ಳಿಯವರ ಜೊತೆ ನಡೆಸಿದ ಮಾತುಕತೆ ತುಂಬಾ ಸ್ವಾಸ್ಯಕರವಾಗಿದೆ. ತೇಜಸ್ವಿ ವ್ಯಕ್ತಿತ್ವ ಮತ್ತು ಆಸಕ್ತಿಗಳ ಕುರಿತ ಅವರ ನಿರೂಪಣೆಯನ್ನು ದಾಖಲಿಸಿದ್ದರಲ್ಲಿ ಒಂದು ವಿನುತನತೆಯಿದೆ. ಆಸಕ್ತಿಯಿಂದ ಓದಿಸಿಕೊಂಡು ಹೋಗುವುದರ ಜೊತೆಗೆ ಅದು ಮನದಾಳದಲ್ಲಿ ಒಂದು ನೆನಪಾಗಿ ಉಳಿಯುವಷ್ಟು ಗಾಢವಾಗಿದೆ. ಇನ್ನಷ್ಟು ತೇಜಸ್ವಿ ಕುರಿತ ಬರಹಗಳ ನಿರೀಕ್ಷೆಯಲ್ಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: