“ಕನ್ನಡ ಯೂನಿಕೋಡ್ ಅಭಿವೃದ್ಧಿಗೆ ಶ್ರಮಿಸಿದ ಡಾ.ಚಿದಾನಂದ ಗೌಡರ ನೆನಪುಗಳಿಂದ”
ಉದಯರವಿ ಮನೆಯಲ್ಲಿ ತೇಜಸ್ವಿಯವರ ತಂಗಿ ತಾರಿಣಿರವರನ್ನು ಮಾತನಾಡಿಸಿದ ನಂತರ ನಮ್ಮೊಂದಿಗೆ ತೇಜಸ್ವಿ ಕುರಿತ ನೆನಪುಗಳನ್ನು ಹಂಚಿಕೊಳ್ಳತೊಡಗಿದವರು ತಾರಿಣಿರವರ ಪತಿ ಡಾ.ಚಿದಾನಂದ ಗೌಡರು. ಚಿದಾನಂದ ಗೌಡರ ಬಗ್ಗೆ ಹೇಳೋದಾದರೆ ಅವರು ಕುವೆಂಪು
ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳು.ಮುಖ್ಯವಾಗಿ ಈಗ ಎಲ್ಲೆಡೆ ಕೇಳಿಬರುತ್ತಿರುವ ಕನ್ನಡ ಯೂನಿಕೋಡ್ ತಂತ್ರಾಂಶ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿರುವಂತಹವರು.ನಾವು ಡಾ.ಚಿದಾನಂದ ಗೌಡರನ್ನು ಮಾತನಾಡಿಸಲು ಕುಳಿತ ಮೊದಲಲ್ಲೇ ಅವರು ಮಾತು ಪ್ರಾರಂಭಿಸಿದ್ದು ಈ ಯೂನಿಕೋಡ್ ಆಧರಿತ ಕನ್ನಡ ತಂತ್ರಾಂಶ, ಈ ತಂತ್ರಾಂಶಕ್ಕಾಗಿ ತೇಜಸ್ವಿಯವರು ಕಂಡ ಕನಸು ಮತ್ತು ಪಟ್ಟ ಶ್ರಮದ ಬಗ್ಗೆ. ಚಿದಾನಂದ ಗೌಡರ ನೆನಪುಗಳನ್ನು ಅವರ ಮಾತುಗಳಲ್ಲೇ ಕೇಳೋಣ,
“ಕನ್ನಡ ಉಳಿಬೇಕ? ಕಂಪ್ಯೂಟರ್ರು, ಸಾಫ್ಟ್ವೇರು, ಇಂಟರ್ನೆಟ್ಟು ಇಲ್ಲೆಲ್ಲಾ ಕನ್ನಡ ತನ್ನಿ”
“ನಿಮಗೆಲ್ಲಾ ಗೊತ್ತಿರೊ ಹಾಗೆ ಇವತ್ತಿನ ಜಗತ್ತಿನಲ್ಲಿ ಕಂಪ್ಯೂಟರಿನ ಬಳಕೆ ಹೆಚ್ಚುತ್ತಾ ಇದೆ.ಅದಕ್ಕೆ ತಕ್ಕ ಹಾಗೆ ಅದಕ್ಕೆ ಸಂಬಂಧಪಟ್ಟ ತಂತ್ರಾಂಶಗಳ ಬಳಕೆ ಸಹ ಹೆಚ್ಚುತ್ತಾ ಇದೆ.ತಂತ್ರಾಂಶ ಅಂದ್ರೆ, ಕಂಪ್ಯೂಟರ್ ನ ಬಳಸಬೇಕು ಅಂದರೆ ಅದಕ್ಕೆ ಸಂಬಂಧಪಟ್ಟ ಒಂದು ಸಾಫ್ಟ್ವೇರ್ ಬೇಕು.ಅದನ್ನ ತಂತ್ರಾಂಶ ಅಂತ ಕರೀತಾರೆ. ಈ ಸಾಫ್ಟ್ವೇರ್ ಎಲ್ಲಾ ಕ್ಷೇತ್ರಗಳಲ್ಲಿಯೂ ಬಳಕೆಗೆ ಬರ್ತಾ ಇದೆ.ಅದು ತುಂಬಾ ಸಂತೋಷದ ವಿಷಯ.ಆದರೆ ಅದು ಹೆಚ್ಚಾಗಿ ಇಂಗ್ಲೀಷಿನಲ್ಲಿ ಬಳಕೆಗೆ ಬರ್ತಾ ಇದೆ. ಕನ್ನಡ ಭಾಷೆನಲ್ಲಿ ಅದಕ್ಕೆ ಸಂಬಂಧಪಟ್ಟ
ಸಾಫ್ಟ್ವೇರ್ ಗಳನ್ನ ಹೆಚ್ಚು ಹೆಚ್ಚು ಬಳಕೆ ಮಾಡೋದಿಕ್ಕೆ ಆಗ್ತಾ ಇಲ್ಲ. ಕನ್ನಡದಲ್ಲಿ ಬಳಕೆ ಸಾಧ್ಯ ಇಲ್ಲ ಅಂತಲ್ಲ. ಸಾಧ್ಯ ಇದೆ ಮತ್ತು ಬಳಕೆ ಒಂದು ಮಟ್ಟಿಗೆ ನಡೀತಾ ಇದೆ.
ಆದರೆ ಅದರಲ್ಲಿ ಹಲವಾರು ಸಮಸ್ಯೆಗಳು, ಬಿಕ್ಕಟ್ಟುಗಳು ಕಾಣಿಸಿಕೊಳ್ತಾ ಇದ್ದವು. ಹಾಗಾಗಿ ತೇಜಸ್ವಿಯವರ ಉದ್ದೇಶ ಮತ್ತು ಅವರ ಮನಸ್ಸಿನಲ್ಲಿ ಏನಿತ್ತು ಅಂದರೆ, “ಸಾಧ್ಯವಾದಲೆಲ್ಲಾ, ಈಗ ಎಲ್ಲೆಲ್ಲಿ ನಾವು ಇಂಗ್ಲೀಷ್ ಭಾಷೆ ಬಳಸಿ ಕಂಪ್ಯೂಟರನ್ನ ಬಳಸ್ತೀವೊ ಅಲ್ಲೆಲ್ಲಾ ಇಂಗ್ಲೀಷಿನಷ್ಟೇ ಸಮರ್ಥವಾಗಿ ಕನ್ನಡವನ್ನ ಬಳಸೋಕೆ ಸಾಧ್ಯ ಆಗ್ಬೇಕು. ಹಾಗೆ ಕನ್ನಡವನ್ನ ಕಂಪ್ಯೂಟರ್ ನಲ್ಲಿ, ತಂತ್ರಾಂಶಗಳಲ್ಲಿ, ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನಗಳಲ್ಲಿ ಬಳಸೋಕೆ ಸಾಧ್ಯ ಆದರೆ ಮಾತ್ರ ಕನ್ನಡ ಉಳಿಯುತ್ತೆ.ಇಲ್ಲ ಅಂದರೆ ಇಲ್ಲ” ಇದು ತೇಜಸ್ವಿಯವರ ಆಲೋಚನೆ ಆಗಿತ್ತು. ಯಾಕಂತಂದ್ರೆ, ನಿಮಗೆ ಗೊತ್ತಿರಬಹುದು, ಹಿಂದೆ ಇಂಗ್ಲೀಷ್ ಟೈಪ್ ರೈಟರುಗಳು ಬಂದಾಗ ಇಲ್ಲಿ ಕನ್ನಡ ಟೈಪ್ ರೈಟರುಗಳು ಸಿಗ್ತಾ ಇಲ್ಲ ಅಂತ ಹೇಳಿ ಕನ್ನಡ ಆ ಕಾಲದಲ್ಲಿ ಆಡಳಿತ ಭಾಷೆಯಾಗಿ ಉಳಿದಿರಲಿಲ್ಲ. ನಂತರ ತುಂಬಾ ಸಮಯ ಆದ್ಮೇಲೆ ಕನ್ನಡ ಟೈಪ್ ರೈಟರುಗಳು ಬಂದ ನಂತರ ಮತ್ತೆ ಆಡಳಿತದಲ್ಲಿ ಕನ್ನಡ ಭಾಷೆ ಬಳಸೋಕೆ ಪ್ರಾರಂಭ ಮಾಡಿದ್ರು. ಹಾಗೆ ಈ ಕನ್ನಡ ತಂತ್ರಾಂಶ ಸಹ ಅದೇ ರೀತಿ ಆಗುವ ಸಾಧ್ಯತೆ, ಅಪಾಯ ಇದೆ ಅನ್ನೋದನ್ನ ತೇಜಸ್ವಿ ಆಗಲೇ ಮನಗಂಡಿದ್ದರು.ತದನಂತರ ಸುಮ್ಮನೆ ನಾಮಕಾವಾಸ್ತೆ ಅನ್ನೊ ಹಾಗೆ ಕೆಲವು ಕನ್ನಡ ತಂತ್ರಾಂಶಗಳು ಬಂದವು.ಆದರೆ ಅವುಗಳಲ್ಲಿ ಹಲವಾರು ನ್ಯೂನ್ಯತೆಗಳಿದ್ದವು. ಈ ನ್ಯೂನ್ಯತೆಗಳ ಕಾರಣದಿಂದಾಗಿ ಬಹುಪಾಲು ಜನ ಕಂಪ್ಯೂಟರಿನಲ್ಲಿ ಕನ್ನಡ ಬಳಕೆ ಮಾಡೋಕ್ಕಾಗೋದಿಲ್ಲ, ಅದು ಕಂಪ್ಯೂಟರ್ ಭಾಷೆಗೆ ಸರಿಯಾಗಿ ಹೊಂದಿಕೊಳ್ಳೋದಿಲ್ಲ, ಅದಕ್ಕೆ ಬಳಸೋದಿಲ್ಲ, ಅಂತ ಹೇಳ್ತಾ ಇದ್ರು. ಬಹುಪಾಲು ಆಫೀಸುಗಳಲ್ಲೂ ಸಹ ಇದೇ ಮಾತು ಕೇಳಿ ಬರ್ತಾ ಇತ್ತು. ಹಾಗಾಗಿ ತೇಜಸ್ವಿ ಏನು ಹೇಳ್ತಾ ಇದ್ರು ಅಂದರೆ, “ಪ್ರತಿನಿತ್ಯದ ವ್ಯವಹಾರದಲ್ಲಿ ಕನ್ನಡವನ್ನ ಸಮರ್ಥವಾಗಿ ಬಳಸೋಕೆ ಆಗ್ಲಿಲ್ಲ ಅಂದ್ರೆ ಕನ್ನಡ ಸಹ ಸಂಸ್ಕೃತದ ಹಾಗೆ ಮೃತ ಭಾಷೆ ಆಗುತ್ತೆ” ಅಂತ. ಯಾಕಂದರೆ ದಿನೇ ದಿನೇ ನಿತ್ಯದ ವ್ಯವಹಾರದಲ್ಲಿ ಕಂಪ್ಯೂಟರ್ ಬಳಕೆ ಹೆಚ್ಚಾಗ್ತಾ ಇದೆ. ಅದು ಶೇರ್ ಮಾರ್ಕೆಟ್ ವ್ಯವಹಾರದಿಂದ ಹಿಡಿದು ಮನೆಯಲ್ಲೇ ಕೂತುಕೊಂಡು ಒಂದು ಕೆಜಿ ಈರುಳ್ಳಿನ ಆನ್ ಲೈನ್ ನಲ್ಲಿ ಆರ್ಡರ್ ಮಾಡಿ ತರಿಸಿಕೊಳ್ಳೊವರೆಗೂ ಕಂಪ್ಯೂಟರ್ ಮತ್ತು ತಂತ್ರಾಂಶಗಳ ಬಳಕೆ ಆಗ್ತಿರೋದನ್ನ ನಾವೆಲ್ಲಾ ನೋಡ್ತಾ ಇದೀವಿ.
ಹಾಗಾಗಿ ಇನ್ಮುಂದೆ ವ್ಯವಹಾರ ಎಲ್ಲಾ ಕಂಪ್ಯೂಟರ್ ಮುಖಾಂತರವೇ ಆಗುತ್ತೆ. ಹಾಗಾಗಿ ಕನ್ನಡವನ್ನ ಇಂಗ್ಲೀಷಿನ ಹಾಗೆ ಸಮರ್ಥವಾಗಿ ಬಳಸಬೇಕು ಅಂತಂದ್ರೆ ಅದಕ್ಕೆ ಕೆಲವು ತಂತ್ರಾಂಶದ ಅವಶ್ಯಕತೆ ಇದೆ ಅಂತ ಮನಗಂಡು ತೇಜಸ್ವಿಯವರು ಮೊದಲು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದ ಬಿ.ಎ ವಿವೇಕ ರೈಯವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ರು. ಹಾಗೆ ನಂತರ ಹಾಸನದಲ್ಲಿ ತಂತ್ರಾಂಶ ಅಭಿವೃದ್ಧಿಯಲ್ಲಿ ನುರಿತ ಕೆಲವು ಹುಡುಗರಿದ್ದರು, ಅವರನ್ನ ಒಟ್ಟಿಗೆ ಸೇರಿಸಿಕೊಂಡು ಕನ್ನಡಕ್ಕೊಂದು ಸರ್ವಸಮರ್ಥವಾದ ತಂತ್ರಾಂಶ ಮಾಡ್ಬೇಕು ಅಂತೇಳಿ ’ಕುವೆಂಪು ಕನ್ನಡ ತಂತ್ರಾಂಶ’ ಅಂತ ಒಂದು ಕನ್ನಡ ತಂತ್ರಂಶವನ್ನ ಮಾಡಿದ್ರು. ’ಕುವೆಂಪು ಕನ್ನಡ ತಂತ್ರಾಂಶ’ ಮಾಡಿ ಅದನ್ನ ಹಂಪಿ ವಿಶ್ವವಿದ್ಯಾನಿಲಯದ ಮೂಲಕ ಬಿಡುಗಡೆ ಮಾಡಿದ್ದಾರೆ.ಅದರ ಸೋರ್ಸ್ ಕೋಡ್ ಕೂಡ ಸುಲಭವಾಗಿ ಎಲ್ಲರಿಗೂ ಸಿಗುತ್ತೆ.ಅದಕ್ಕೆ ಒಂದು ಸಮಿತಿಯನ್ನ ಮಾಡಿದ್ರು.ಆ ಸಮಿತಿಯಲ್ಲಿ ನಾನೂ ಸಹ ಇದ್ದೇನೆ.ಆದರೆ ಅಷ್ಟಕ್ಕೇ ಕೆಲಸ ಮುಗೀಲಿಲ್ಲ. ಅದು ಒಂದು ಹಂತ ಅಷ್ಟೆ.
ಇನ್ನೊಂದು ಹಂತ ಏನು ಅಂದ್ರೆ, ಆಗ ಹಳೆಯ ಕಾಲದ ಆಸ್ಕಿ(ASCII) ವಿಧಾನ ಅಂತಿತ್ತು. ಅದು ಒಂಥರ ಕಿರಿಕಿರಿ ಉಂಟು ಮಾಡುವ ವಿಧಾನ. ಈಗ ಈ ತಂತ್ರಾಂಶಗಳು ಹೇಗೆ ಕೆಲಸ ಮಾಡುತ್ತೆ ಅಂತ ಹೇಳಿದ್ರೆ ನಿಮಗೆ ಸುಲಭವಾಗಿ ಅರ್ಥ ಆಗುತ್ತೆ, ಈಗ ನೀವು ಕನ್ನಡದಲ್ಲಿ ಒಂದು ಪತ್ರ ಟೈಪ್ ಮಾಡ್ತೀರಿ. ಮಾಡಿ ಅದನ್ನ ಅಮೇರಿಕಾದಲ್ಲಿ ಕೂತವನಿಗೊ ಅಥವ ಜಗತ್ತಿನ ಇನ್ಯಾವುದೊ ಮೂಲೆನಲ್ಲಿ ಕೂತವನಿಗೊ ಈಮೇಲ್ ಮುಖಾಂತರ ಕಳಿಸ್ತೀರಿ.ಹಾಗೆ ಕಳಿಸಿದ ಕನ್ನಡದಲ್ಲಿ ಟೈಪ್ ಮಾಡಿದ ಪತ್ರ ಅಲ್ಲಿ ತೆಗೆದು ಓದುವವನಿಗೂ ಹಾಗೆ ನೀವು ಟೈಪ್ ಮಾಡಿ ಕಳಿಸಿದ ಹಾಗೆ ಓಪನ್ ಆಗ್ಬೇಕು.ಅದು ಸರಿಯಾದ ವಿಧಾನ. ಈಗ ಇಂಗ್ಲೀಷ್ ಹಾಗೆ ಪ್ರಪಂಚದ ಯಾವ ಮೂಲೆಗೆ ಹೋದ್ರೂ ಒಬ್ಬ ಕಂಪ್ಯೂಟರ್ ಮುಖಾಂತರ ಕಳಿಸಿದ ಸಂದೇಶ ಅವನು ಕಳಿಸಿದ ಹಾಗೆ ಮತ್ತೊಬ್ಬನಿಗೆ ಸಿಗುತ್ತೆ.ಇಂಗ್ಲೀಷಿನವರು ಆ ಹಂತಕ್ಕೆ ತುಂಬಾ ಹಿಂದೇನೆ ಬೆಳೆದುಬಿಟ್ಟಿದ್ದಾರೆ.ಆದರೆ ಕನ್ನಡದಲ್ಲಿ ಹಾಗಾಗ್ತಿಲ್ಲ ಈಗ. ಈಗಿರುವ ಆಸ್ಕಿ(ASCII) ವಿಧಾನದಲ್ಲಿ ನುಡಿ ತಂತ್ರಾಂಶವನ್ನೊ, ಅಥವ ಬೇರೆ ಇನ್ಯಾವುದೊ ಕನ್ನಡ ತಂತ್ರಾಂಶವನ್ನೊ ಬಳಸಿ ಕಳಿಸಿದ ಕನ್ನಡದ ಸಂದೇಶ ಆ ಕಡೆ ಅದನ್ನ ಓದುವವನಿಗೂ ಹಾಗೆ ಕಾಣಬೇಕು ಅಂತಿದ್ರೆ ಅವನು ಈ ಕಡೆ ನೀವು ಯಾವ ತಂತ್ರಾಂಶ ಬಳಸಿ ಸಂದೇಶ ಕಳಿಸಿದ್ರಲ್ಲ (ಉದಾ: ನುಡಿ ತಂತ್ರಾಂಶ) ಅದೇ ತಂತ್ರಾಂಶ ಅವನ ಕಂಪ್ಯೂಟರಿನಲ್ಲೂ Install ಆಗಿರಬೇಕು. ಆಗಲೇ ಆ ಸಂದೇಶ ಅವನು ಓದೋಕೆ ಸಾಧ್ಯ. ಅಪ್ಪಿತಪ್ಪಿ ಅವನು ಬೇರೆ ಬರಹನೊ ಅಥವ ಇನ್ಯಾವುದೊ ತಂತ್ರಾಂಶ ಹಾಕ್ಕೊಂಡಿದ್ದ ಅಂತ ಇಟ್ಕೊಳಿ ಆಗ ನುಡಿ ಬಳಸಿ ಕಳಿಸಿದ ಕನ್ನಡ ಸಂದೇಶ ಬಾಕ್ಸ್ ರೂಪದಲ್ಲಿ ಕಾಣ್ಸುತ್ತೆ. ಇದು ಕನ್ನಡ ತಂತ್ರಾಂಶಗಳಲ್ಲಿ ಇರತಕ್ಕಂತಹ ಮೂಲ ಸಮಸ್ಯೆ. ಅದಕ್ಕೆ ಅದನ್ನ ನಿವಾರಿಸಬೇಕು ಅಂತಿದ್ರೆ ಈಗಿನ ಆಸ್ಕಿ(ASCII) ವಿಧಾನ ಹೋಗಿ ಕನ್ನಡಕ್ಕೆ ಯೂನಿಕೋಡ್ ವಿಧಾನ ಬರಬೇಕು. ಅದೊಂದೇ ಇದಕ್ಕೆಲ್ಲಾ ಪರಿಹಾರ. ಇದನ್ನ ತೇಜಸ್ವಿ ಬಹಳ ಹಿಂದೇನೆ ಮನಗಂಡು ಅದನ್ನ ತೀವ್ರವಾಗಿ ಪ್ರತಿಪಾದಿಸುತ್ತಿದ್ದರು.ಜೊತೆಗೆ ಇದು ಒಬ್ಬರು ಇಬ್ಬರು ಸೇರ್ಕೊಂಡು ಮಾಡೋವಂತಹ ಕೆಲಸ ಅಲ್ಲ. ಇದನ್ನ ದೊಡ್ದ ಮಟ್ಟದಲ್ಲಿ ಅಂದರೆ ಸರ್ಕಾರದ ಹಂತದಲ್ಲಿ ಇದು ಜಾರಿಗೆ ಬರಬೇಕು ಅಂತ ಹೇಳ್ತಿದ್ರು.
ಈಗ ಕನ್ನಡದ ಯೂನಿಕೋಡ್ ಕೆಲಸ ಸರ್ಕಾರದ ಹಂತದಲ್ಲಿ ಕೊನೆಯ ಹಂತದಲ್ಲಿದೆ.ನನಗೆ ಒಂದು ವಾರದ ಹಿಂದೆ ಬಂದ ಮಾಹಿತಿಯ ಪ್ರಕಾರ ಸದ್ಯದಲ್ಲೇ ಕ್ಯಾಬಿನೆಟ್ ನಲ್ಲಿ ಅದರ ಬಗ್ಗೆ ಚರ್ಚೆ ಆಗಿ ಯೂನಿಕೋಡ್ ಕಡ್ಡಾಯ ಮಾಡುವ ತಯಾರಿಗಳು ನಡೀತಾ ಇವೆ.ಸರ್ಕಾರದ ಹಂತದಲ್ಲಿ ತಂತ್ರಾಂಶ ಸಮಿತಿ ಅಂತ ಒಂದಿದೆ.ಅದರಲ್ಲಿ ಹತ್ತನ್ನೆರಡು ಸದಸ್ಯರಿದ್ದಾರೆ.ನಾನು ಅದರಲ್ಲಿ ಒಬ್ಬ ಸದಸ್ಯ. ನಾವೆಲ್ಲಾ ಸೇರಿ ಹಲವು ಬಾರಿ ಚರ್ಚೆ ಮಾಡಿ ’ಇಷ್ಟೆಲ್ಲಾ ಕೆಲಸಗಳು ಆಗ್ಬೇಕಾಗಿವೆ ಕನ್ನಡದ ತಂತ್ರಾಂಶದ ಬಗ್ಗೆ’ ಅಂತ ಹೇಳಿ ಒಂದು ವರದಿಯನ್ನ ಸರ್ಕಾರಕ್ಕೆ ಕೊಟ್ಟಿದ್ದೇವೆ.ಪತ್ರಿಕೆಗಳಲ್ಲಿ ಈ ರೀತಿ ಯೂನಿಕೋಡ್ ಗೆ ಸಂಬಂಧಪಟ್ಟ ಹಾಗೆ ಕೆಲಸ ಮಾಡಬಲ್ಲ ವೃತ್ತಿನಿರತರನ್ನ ಆಹ್ವಾನ ಮಾಡಿದ್ದೇವೆ.ಕೆಲವರು ’ಕನ್ನಡ ಯೂನಿಕೋಡ್ ಮಾಡ್ತೇವೆ’ ಅಂತ ಹೇಳಿ ಮುಂದೆ ಬಂದಿದ್ದಾರೆ. ಈಗ ಹಾಸನದ ಕೆಲವು ಹುಡುಗರು ಅದನ್ನ ತಗೊಂಡು ಕೆಲಸ ಮಾಡ್ತಾ ಇದಾರೆ. ಅದೂ ಕೂಡ ಈಗ ಮುಕ್ತಾಯದ ಹಂತದಲ್ಲಿದೆ.ನಂತರ ಸರ್ಕಾರ ಸುತ್ತೋಲೆ ಹೊರಡಿಸಿದ್ರೆ ’ಎಲ್ಲರೂ ಕಡ್ಡಾಯವಾಗಿ ಯೂನಿಕೋಡ್ ಬಳಸಬೇಕು’ ಅಂತ, ಆಗ ಇದು ಕಾರ್ಯರೂಪಕ್ಕೆ ಬರ್ತದೆ.ಆಗ ಕನ್ನಡ ಸಂಸ್ಕೃತದ ಹಾಗೆ ಮೃತಭಾಷೆ ಆಗೋದಿಲ್ಲ. ಜೊತೆಗೆ ಅದರ Source Code ಉಚಿತವಾಗಿ ಎಲ್ಲರಿಗೂ ಸಿಗಬೇಕು. ಇದು ಕನ್ನಡ ಭಾಷೆಯ ಉಳಿವಿನ ಬಗ್ಗೆ ತೇಜಸ್ವಿಯವರ ನಿಲುವು ಮತ್ತು ದೂರದೃಷ್ಟಿ ಆಗಿತ್ತ” ಡಾ.ಚಿದಾನಂದ ಗೌಡರು ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ಯುಗದಲ್ಲಿ ಕನ್ನಡ ಭಾಷೆ ಆ ವೇಗಕ್ಕೆ, ತಂತ್ರಜ್ಞಾನದ ಅವಶ್ಯಕತೆಗಳಿಗೆ ಹೊಂದಿಕೊಂಡು ಹೋಗದಿದ್ದರೆ ಹೇಗೆ ನಾಮಾವಷೇಶ ಆಗುವ ಅಪಾಯ ಇದೆ ಎಂಬ ತೇಜಸ್ವಿಯವರ ದೂರದೃಷ್ಟಿಯ ಬಗ್ಗೆ, ಕನ್ನಡ ತಂತ್ರಾಂಶದ ಗೊಂದಲ, ಪರಿಹಾರಗಳ ಬಗ್ಗೆ ಸಾಧ್ಯವಾದಷ್ಟು ಸರಳವಾಗಿ ವಿವರಿಸಿದರು.
(ಈ ಸಂದರ್ಶನ ನಡೆದದ್ದು ೨೦೧೨ರ ಆಗಸ್ಟ್ ನಲ್ಲಿ. ಈಗ ಕೆಲವೇ ದಿನಗಳ ಹಿಂದೆ ಕನ್ನಡದ ಯೂನಿಕೋಡ್ ಬಿಡುಗಡೆ ಆಗಿರುವುದನ್ನು ಗಮನಿಸಬಹುದು)
“ಕುವೆಂಪುರವರಿಗೆ ಬಂದ ಕ್ಯಾಲ್ಕುಲೇಟರ್ ಗಿಫ್ಟ್…”
ತಂತ್ರಾಂಶದ ಮಾತುಗಳೆಲ್ಲಾ ಮುಗಿದ ನಂತರ ಕುವೆಂಪು-ತೇಜಸ್ವಿ ಇಬ್ಬರ ಸಾಮ್ಯತೆಯ ಬಗ್ಗೆ ನಾನು ಕೇಳಿದ ಪ್ರಶ್ನೆಗೆ ಅವರು ದೀರ್ಘವಾಗಿ ಯೋಚಿಸಿ ಉತ್ತರಿಸಲು ಪ್ರಾರಂಭಿಸಿದರು, “ನೋಡಿ ನಾನು ಕುವೆಂಪುರವರು ಹಾಗು ತೇಜಸ್ವಿ ಇಬ್ಬರನ್ನೂ ಕಂಡಿದ್ದನಲ್ಲ, ನೀವು ಹೇಳೊ ಹಾಗೆ ಅವರಿಬ್ಬರಲ್ಲಿ ಅನೇಕ ವಿಚಾರಗಳಲ್ಲಿ ಸಾಮ್ಯತೆ ಇತ್ತು. ಅದರ ಜೊತೆಗೆ ಅನೇಕ ವೈರುಧ್ಯಗಳು ಇದ್ದವು.ಉದಾಹರಣೆಗೆ ಕಾಡು, ನೋಡಿ ಕುವೆಂಪುರವರು ’ಕಾಡಿನ ಕವಿಯು ನಾ’ ಅಂತ ಹೇಳ್ಕೊಂಡ್ರು.’ಕಾಡು ಅಂದರೆ ಒಂಥರ ತಾಯಿ, ಕಾಡು ಅಂದರೆ ಒಂಥರ ದೇವರು ಮತ್ತು ಕಾಡು ಅಂದರೆ ಒಂಥರ ಮನದನ್ನೆ’ ಈ ರೀತಿ ಕುವೆಂಪುರವರು ಕಾಡನ್ನ ಒಬ್ಬ ಸಂತ ಕವಿಯಾಗಿ ನೋಡ್ತಾ ಇದ್ರು.ಅವರ ಮಲೆಗಳಲ್ಲಿ ಮದುಮಗಳಾಗಲಿ ಅಥವ ಕಾನೂರು ಹೆಗ್ಗಡತಿಯಾಗಲಿ ಅವೆಲ್ಲಾ ಕಾಡಿನ ಮಧ್ಯೇನೇ ನಡೆಯುತ್ವೆ ಮತ್ತು ಅವರ ಕೃತಿಗಳಲ್ಲಿ ಕಾಡಿನ ವರ್ಣನೆ ತುಂಬಾ ಮನಮೋಹಕವಾಗಿ ಕಂಡುಬರುತ್ತೆ.ತೇಜಸ್ವಿನ ತಗೊಂಡ್ರೆ ಅವ್ರಿಗೂ ಕಾಡು ಅಂದ್ರೆ ತುಂಬಾ ಪ್ರೀತಿ. ಆದರೆ ಅವರು ಕುವೆಂಪುರವರ ಹಾಗೆ ಕಾಡನ್ನ ಸಂತಕವಿಯ ಹಾಗೆ ನೋಡ್ತಾ ಇರ್ಲಿಲ್ಲ, ವರ್ಣಿಸುತ್ತಾ ಇರ್ಲಿಲ್ಲ. ಅವರು ಕಾಡನ್ನ ಒಂದು ರೀತಿಯಲ್ಲಿ ವಿಜ್ಞಾನಿಯ ಹಾಗೆ, ಸಂಶೋಧಕ, ಅನ್ವೇಷಕನ ಹಾಗೆ ಅವರು ಕಾಡನ್ನ ನೋಡ್ತಾ ಇದ್ರು. ಆ ರೀತಿ ಅನ್ವೇಷಕನ ಮನಸ್ಸಿನಿಂದ ಅವರು ಗಮನಿಸಿದ ಕಾಡು ಹಾಗೂ ಅದರ ವಿವರಣೆ ಅವರ ಕೃತಿಗಳಲ್ಲಿ ಕಂಡುಬರ್ತದೆ.ಅವರೊಂದು ರೀತಿ ವೈಜ್ಞಾನಿಕ ಮನಸ್ಥಿತಿಯಲ್ಲಿ ಕಾಡನ್ನ ಗಮನಿಸ್ತಿದ್ರು. ಇದು ಒಂದು ಕುವೆಂಪು ಮತ್ತು ತೇಜಸ್ವಿಯವರಿಗಿರುವ ಸಾಮ್ಯ ಮತ್ತು ಭೇಧ.ಅದೇ ರೀತಿ ತೇಜಸ್ವಿ ಹೇಗೆ ಕನ್ನಡ ಉಳಿಬೇಕು ಅಂದ್ರೆ ಕಂಪ್ಯೂಟರ್ ನಲ್ಲಿ, ತಂತ್ರಾಂಶಗಳಲ್ಲಿ ಕನ್ನಡ ಸಮರ್ಥವಾಗಿ ಬಳಕೆ ಆಗ್ಬೇಕು ಅಂತಿದ್ರು ಹಾಗೆ ಕುವೆಂಪುರವರು ಕನ್ನಡ ಉಳಿಬೇಕು ಅಂದ್ರೆ ಕನ್ನಡ ಮಾಧ್ಯಮ ಕಡ್ಡಾಯವಾಗಿ ಬರಬೇಕು ಮತ್ತು ಆಡಳಿತ ಭಾಷೆಯಾಗಿ ಕನ್ನಡ ಬೆಳಿಬೇಕು ಅಂತ ಪ್ರತಿಪಾದಿಸುತ್ತಿದ್ದರು. ಇದು ಮತ್ತೊಂದು ಅವರಿಬ್ಬರ ನಡುವಿನ ಸಾಮ್ಯ ಮತ್ತು ಭೇಧ.
ಆಮೇಲೆ ಈ ಧರ್ಮ, ಜಾತಿ, ಮತ ಇವುಗಳ ಬಗ್ಗೆ ಎಲ್ಲ ಕುವೆಂಪುರವರು ತೀವ್ರ ವಿರೋಧಿಗಳಾಗಿದ್ರು.ಅವರ ಪಂಚಮಂತ್ರ, ಸಪ್ತಸೂತ್ರ ಇದೆಯಲ್ಲ ಅದರಲ್ಲಿ ಅವರು ಹೇಳಿದ್ದು ‘ಜಾತಿ ವಿನಾಶ ಆಗ್ಬೇಕು, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ, ಮನುಜಮತ ವಿಶ್ವಪಥ’, ಹಾಗೆ ಕುವೆಂಪುರವರು ಜಾತಿವಿನಾಶಕ್ಕೆ ಕರೆ ಕೊಟ್ಟವರು.ಅದೇ ರೀತಿ ತೇಜಸ್ವಿ ಸಹ ಜಾತಿ ವಿನಾಶಕ್ಕೆ ಬೆಂಬಲಿಸಿದವರು.ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅದನ್ನ ಆಚರಣೆಯಲ್ಲಿ ತಂದು ತೋರಿಸಿದರು.ತಮ್ಮ ಮದುವೆ, ತಮ್ಮ ಮಕ್ಕಳ ಮದುವೆಯ ಸಂದರ್ಭದಲ್ಲಿ ಜಾತಿ ಮತ ನೋಡದೆ ಮದುವೆ ಮಾಡುವ ಮೂಲಕ ಅವರು ಕುವೆಂಪುರವರು ಹೇಳಿದ ಆದರ್ಶಗಳನ್ನ ಕಾರ್ಯರೂಪಕ್ಕೆ ತಂದರು.ಇದು ಅವರಿಬ್ಬರ ನಡುವಿನ ಮತ್ತೊಂದು ಸಾಮ್ಯ ಮತ್ತು ಭೇಧ. ಆಮೇಲೆ ನೀವು ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಕ್ಕೆ ಬಂದರೆ ಕುವೆಂಪುರವರು ವಿಜ್ಞಾನಕ್ಕೆ ಸಂಬಂಧಪಟ್ಟ ಅನೇಕ ವಿಷಯಗಳನ್ನ ಓದಿಕೊಂಡಿದ್ರು.ಅವರ ರಾಮಾಯಣ ದರ್ಶನಂ ಗಮನಿಸಿದರೆ ಅದರಲ್ಲಿ ವಿಜ್ಞಾನಕ್ಕೆ ಸಂಬಂಧಪಟ್ಟ ಅನೇಕ ಅಂಶಗಳು ಅದರಲ್ಲಿ ಬರ್ತವೆ. ಜಿ.ಟಿ ನಾರಾಯಣ ರಾವ್ ಅವರು ‘ರಾಮಾಯಣ ದರ್ಶನಂನಲ್ಲಿ ವೈಜ್ಞಾನಿಕ ಅಂಶಗಳು’ ಅಂತ ಒಂದು ಪುಸ್ತಕವನ್ನೇ ಬರೆದಿದ್ದಾರೆ. ಅದೇ ರೀತಿ ತೇಜಸ್ವಿಯವರಿಗೂ ಸಹ ವಿಜ್ಞಾನದ ಬಗ್ಗೆ ಆಳವಾದ ಆಸಕ್ತಿ, ಅಧ್ಯಯನ ಇತ್ತು.ಅವರು ವಿಜ್ಞಾನವನ್ನ ಅಕೆಡೆಮಿಕ್ ಆಗಿ ಓದದೇ ಇದ್ದರೂ ಅವರು ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಅದನ್ನ ಆಳವಾಗಿ ಅಭ್ಯಾಸ ಮಾಡಿ ಅದರಲ್ಲಿ ಕಂಡುಕೊಂಡ ಸತ್ಯಗಳನ್ನ ಅವರ ಕಥೆ, ಕಾದಂಬರಿಗಳಲ್ಲಿ ತಂದಿದಾರೆ.ಇನ್ನು ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಹಾಗೆ ಹೇಳ್ಬೇಕು ಅಂತಂದ್ರೆ ಕುವೆಂಪುರವರು ಕಂಪ್ಯೂಟರ್ ಯುಗಕ್ಕಿಂತಲೂ ಸ್ವಲ್ಪ ಹಿಂದಿನವರು. ಅವರಿಗೆ ಈ ಕಂಪ್ಯೂಟರ್ರು, ಸಾಫ್ಟ್ವೇರು ಇವೆಲ್ಲ ಅಷ್ಟು ಗೊತ್ತಿರಲಿಲ್ಲ.
ಇದಕ್ಕೆ ಸಂಬಂಧಪಟ್ಟ ಹಾಗೆ ಒಂದು ಘಟನೆ ಹೇಳ್ತೀನಿ, ಒಂದು ಸಾರಿ, 1970ರ ದಶಕದಲ್ಲಿ ಅಂತ ಕಾಣುತ್ತೆ ಕುವೆಂಪುರವರ ಸಂಬಂಧಿಕರೊಬ್ಬರು ಇವರಿಗೆ ಅಂತ ಇಂಗ್ಲೆಂಡಿನಿಂದ ಒಂದು ಕ್ಯಾಲ್ಕುಲೇಟರ್ ಕಳಿಸಿದ್ರು. ಆಗ ಕ್ಯಾಲ್ಕುಲೇಟರ್ ಇಂಡಿಯಾದಲ್ಲಿ ಸಿಕ್ತಿರ್ಲಿಲ್ಲ. ಈಗ ನೀವು ನೋಡಬಹುದು, ಅದೇ ರೀತಿಯ ಕ್ಯಾಲ್ಕುಲೇಟರ್ ಗಳು ರಸ್ತೆ ಮೇಲೆ ಹತ್ತಿಪ್ಪತ್ತು ರೂಪಾಯಿಗೆ ಸಿಗ್ತಾವೆ.ಆ ಕ್ಯಾಲ್ಕುಲೇಟರ್ ಇಂಗ್ಲೆಂಡಿನಿಂದ ಬೆಂಗಳೂರಿಗೆ ಬಂತು. ಆಗ ಕುವೆಂಪುರವರಿಗೆ ಆ ಕಛೇರಿಯಿಂದ ಒಂದು ಸೀರಿಯಸ್ಸಾದ ಪತ್ರ ಬಂತು, “ನಿಮಗೆ ಗೊತ್ತಿಲ್ವೆ ಈ ರೀತಿ ವಿದೇಶಗಳಿಂದ ಅನಾವಶ್ಯಕವಾಗಿ ವಸ್ತುಗಳನ್ನ ತರಿಸ್ಕೊಬಾರದು ಅಂತ. ನಿಮ್ಮ ಸಂಬಂಧಿಗಳಿಗಾದರೂ ವಿವೇಚನೆ ಬೇಡ್ವೆ? ಹೋಗ್ಲಿ ನೀವಾದ್ರೂ ಯಾಕೆ ಅವರಿಗೆ ಬೇಡ ಅಂತ ಹೇಳಲಿಲ್ಲ. ಈಗ ನಾವು ನಿಮ್ಮ ಮೇಲೆ ಗಂಭೀರವಾದ ಕ್ರಮ ಏಕೆ ಕೈಗೊಳ್ಳಬಾರದು?’ ಅಂತ ಒಂದು ಪತ್ರ ಬಂತು.ಕುವೆಂಪುರವರಿಗೆ ಏನು ಮಾಡ್ಬೇಕು ಅಂತ ತಿಳೀಲಿಲ್ಲ. ನಂತರ ಅವರ ಸಂಬಂಧಿಯೊಬ್ಬರು ಬೆಂಗಳೂರಿಗೆ ಹೋಗಿ ಅದನ್ನ ತಗೊಂಡುಬಂದ್ರು.ಅದಕ್ಕೆ ತುಂಬಾ ದಂಡ ಕಟ್ಟಬೇಕಾಗಿ ಬಂತು.ಹಾಗೆ ಕುವೆಂಪುರವರು ಕಂಪ್ಯೂಟರ್ ಮುಂತಾದ ತಂತ್ರಜ್ಞಾನದ ಹಿಂದಿನ ಕಾಲದವರು.ಆದರೆ ತೇಜಸ್ವಿ 1990ರ ಹೊತ್ತಿಗಾಗಲೇ ಅವರ ಮನೆಯಲ್ಲಿ ಎರಡ್ಮೂರು ಕಂಪ್ಯೂಟರ್ ತಂದಿಟ್ಟುಕೊಂಡಿದ್ರು.ಅದರಲ್ಲೇ ಉದಯರವಿ ಪ್ರಕಾಶನದ್ದು, ಪುಸ್ತಕ ಪ್ರಕಾಶನದ್ದು ಪುಸ್ತಕಗಳ ಡಿಟಿಪಿ ವರ್ಕ್ ಮತ್ತು ಆ ಪುಸ್ತಕಗಳಿಗೆ ಮುಖಪುಟ ಮತ್ತು ಚಿತ್ರಗಳನ್ನ ಬಿಡಿಸ್ತಾ ಇದ್ರು.ಸೊ ಇದು ಮತ್ತೊಂದು ಮುಖ್ಯವಾದ ಸಾಮ್ಯ ಮತ್ತು ಭೇಧ ಕುವೆಂಪು ಮತ್ತು ತೇಜಸ್ವಿಯವರ ನಡುವೆ”ಚಿದಾನಂದ ಗೌಡರು ಕುವೆಂಪು-ತೇಜಸ್ವಿ ಸಾಮ್ಯ-ಭೇಧಗಳ ಬಗ್ಗೆ ತುಂಬಾ ಅದ್ಭುತವಾಗಿ ವಿವರಿಸಿ ಹೇಳಿದರು.
ನಂತರ ಅವರ ಮಾತು ತೇಜಸ್ವಿಯವರ ಬಹುಮುಖ ಆಸಕ್ತಿಗಳ ಕಡೇ ಹೊರಳಿಕೊಂಡಿತು,
” ತೇಜಸ್ವಿಗೆ ಸವಾಲಾದ ಫಾರಿನ್ ಕಾರ್ಟ್ರಬಲ್…”
“ಅವರು ಈ ಆಟೋಮೊಬೈಲ್ಸು, ಇಂಜಿನಿಯರಿಂಗು ಇವೆಲ್ಲಾ ಕಾಲೇಜಿಗೆ ಹೋಗಿ ಓದಿದವರಲ್ಲ. ಆದರೆ ಶಾಸ್ತ್ರೀಯವಾಗಿ ಈ ವಿಷಯಗಳನೆಲ್ಲಾ ಅಭ್ಯಾಸ ಮಾಡಿದವರಿಗಿಂತಲೂ ಚೆನ್ನಾಗಿ ಈ ಕೆಲಸಗಳನೆಲ್ಲಾ ಮಾಡ್ತಿದ್ರು.ಆಗ ನಾನು ತಾರಿಣಿನ ಮದುವೆ ಆದ ಹೊಸದು.ಆಗ ನೋಡ್ತಿದ್ನಲ್ಲ ಅವರು ಜೀಪಿನ ಎಲ್ಲಾ ಬಿಡಿಭಾಗಗಳನ್ನು ಸಂಪೂರ್ಣವಾಗಿ ಬಿಚ್ಚಿಹಾಕಿ ಅವನ್ನೆಲ್ಲಾ ರಿಪೇರಿ ಮಾಡಿ ಪುನಃ ಅವನ್ನೆಲ್ಲಾ ಹಾಗೆ ವಾಪಸ್ ಜೋಡಿಸ್ತಾ ಇದ್ರು.ಅಷ್ಟು ಆಳವಾಗಿ ಅವರು ಆ ವಿಷಯದಲ್ಲಿ ನೈಪುಣ್ಯತೆ ಹೊಂದಿದ್ರು.ಅದೊಂದೇ ವಿಷಯ ಅಂತಲ್ಲ. ಅವರು ಯಾವ ಯಾವ ಕ್ಷೇತ್ರಗಳಿಗೆ ಕೈಹಾಕಿದಾರೆ ಅಲ್ಲೆಲ್ಲಾ ಅವರು ಅದರ ಆಳಕ್ಕೆ ಇಳಿದು ಕೆಲಸ ಮಾಡಿದಾರೆ.ಅದು ಫೋಟೊಗ್ರಫಿ ಇರಬಹುದು, ಮೀನು ಹಿಡಿಯೋದೆ ಇರಬಹುದು, ಕಂಪ್ಯೂಟರ್ ಇರಬಹುದು, ರಿಪೇರಿ ಕೆಲಸ ಇರಬಹುದು ಪ್ರತಿಯೊಂದರಲ್ಲು ಅವರು ಆಳಕೆ ಹೋಗೋದಿಕ್ಕೆ ಪ್ರಯತ್ನಿಸ್ತಿರ್ತಿದ್ರು.ಅದು ಅವರ ವೈಶಿಷ್ಟ್ಯ. ತುಂಬಾ ಹಿಂದಿನದೊಂದು ಘಟನೆ ಹೇಳ್ತೀನಿ, ಆಗ ತಾನೆ ನನ್ನ ತಾರಿಣಿ ಮದುವೆ ಆಗಿತ್ತು.ಆಗ ನಾವು ನಮ್ಮ ಊರಿಗೆ ಹೋಗ್ಬೇಕು ಅಂತ ಹೊರಟಾಗ ಕುವೆಂಪುರವರು, ಅವರದ್ದೊಂದು ಕಾರಿತ್ತು, ಅದರಲ್ಲಿ ಹೋಗಿಬನ್ನಿ ಅಂದ್ರು.ನಾವು ಹೊರಟಿದ್ವಿ.ನಮ್ಮೂರು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಹತ್ತಿರ. ಆಗ ದಾರಿನಲ್ಲಿ ಹೋಗ್ತಿರಬೇಕಿದ್ರೆ ಆ ಕಾರು ಸಡನ್ನಾಗಿ ಅಫ್ ಆಗಿ ನಿಂತುಬಿಡ್ತಿತ್ತು.ಒಂದು ಸಾರ್ತಿ ಎರಡು ಸಾರ್ತಿ ಆದರೆ ಓಕೆ ಅನ್ನಬಹುದಿತ್ತು.ಆದರೆ ಆ ಕಾರು ಸ್ವಲ್ಪ ದೂರ ಹೋಗೋದು ನಿಂತುಬಿಡೋದು, ಸ್ವಲ್ಪ ದೂರ ಹೋಗೋದು ಮತ್ತೆ ನಿಂತುಬಿಡೋದು ಹೀಗೆ ತುಂಬಾ ಸಲ ನಿಂತು ಹೋಗಿ ನಮಗೆ ಕಿರಿಕಿರಿ ಮಾಡ್ಬಿಡ್ತು.ವಾಪಸ್ ಬಂದ್ಮೇಲೆ ಅದನ್ನ ತುಂಬಾ ಜನ expert ಮೆಕ್ಯಾನಿಕ್ ಗಳಿಗೆ ತೋರಿಸಿದ್ವಿ. ಆವರು ಯಾರು ಬಂದು ನೋಡಿದ್ರು ಆ ಕಾರಿನ ಸಮಸ್ಯೆ ಏನು ಅಂತ ಯಾರಿಗೂ ಕಂಡುಹಿಡಿಯೋಕೆ ಆಗಲೇ ಇಲ್ಲ.
ಆಗ ತೇಜಸ್ವಿ ಅದರ ಬಗ್ಗೆ ತುಂಬಾ ಯೋಚನೆ ಮಾಡಿ, ಯಾವುದೊ ಪುಸ್ತಕಾನೆಲ್ಲಾ ಓದಿ ರೆಫರ್ ಮಾಡಿ ಕೊನೆಗೆ ಅದರ ಸಮಸ್ಯೆ ಏನು ಅಂತ ಕಂಡುಹಿಡಿದುಬಿಟ್ರು!ಸಮಸ್ಯೆ ಏನಾಗಿತ್ತಂದ್ರೆ, ಆ ಕಾರು ಚಳಿ ದೇಶದವರಿಗಾಗಿ ಮಾಡಿದ ಕಾರು.ಕೆನಡಾ, ಯೂರೋಪ್ ಈ ದೇಶದವರಿಗಾಗಿ ಮಾಡಿದ ಕಾರದು.ಅಲ್ಲಿ ಚಳಿ ಜಾಸ್ತಿ ಮತ್ತು ಉಷ್ಣಾಂಶ ಕಡಿಮೆ ಇರುತ್ತಲ್ಲ ಹಾಗಾಗಿ ಆ ವಾತಾವರಣಕ್ಕೆ ಹೊಂದಿಕೊಳ್ಳೊ ಹಾಗೆ ಆ ಕಾರನ್ನ ರೂಪಿಸಿದ್ರು. ಆದರೆ ಆ ಕಾರು ನಮ್ಮ ದೇಶಕ್ಕೆ ಬಂದ ನಂತರ, ನಮ್ಮ ದೇಶದಲ್ಲಿ ಅಷ್ಟು ಚಳಿ ಇರೊಲ್ವಲ್ಲ, ಮತ್ತು ಉಷ್ಣಾಂಶನೂ ಸ್ವಲ್ಪ ಜಾಸ್ತಿನೇ ಹಾಗಾಗಿ ಇಲ್ಲಿನ ಹವಾಗುಣಕ್ಕೆ ತಕ್ಕಹಾಗೆ ಅದರ ಇಂಜಿನ್ನನ್ನ ಸರಿ ಹೊಂದಿಸಿಕೊಳ್ಳಬೇಕಿತ್ತು. ತೇಜಸ್ವಿ ಅದನ್ನ ಕಂಡುಹಿಡಿದು ತಾವೇ ಅದನ್ನೆಲ್ಲಾ ಬಿಚ್ಚಿ ಸರಿಯಾಗಿ ಹೊಂದಿಸಿ ರೆಡಿ ಮಾಡಿಬಿಟ್ರು!!! ನಂತರ ಆ ಕಾರು ಯಾವತ್ತೂ ತೊಂದರೆ ಕೊಡಲೇ ಇಲ್ಲ. ಇದು ತೇಜಸ್ವಿಯವರ ಕಾರ್ಯ ನೈಪುಣ್ಯತೆಗೆ ಸಾಕ್ಷಿ.ಅದು ನನಗೆ ತೇಜಸ್ವಿ ಪರಿಚಯ ಆಗ್ತಿದ್ದ ಪ್ರಾರಂಭದ ದಿನಗಳಾಗಿದ್ರಿಂದ ನನಗೆ ಇದು ಒಂದು ರೀತಿ ಪವಾಡ ಅನ್ಸೋಕೆ ಶುರುವಾಗಿಬಿಟ್ಟಿತ್ತು.ನೋಡಿ ಕಾಲೇಜಿನಲ್ಲಿ ಕಲೆಯ ವಿಷಯವನ್ನ ಓದಿದ ತೇಜಸ್ವಿ ತಾವು ಅಕೆಡೆಮಿಕ್ ಆಗಿ ಓದದೇ ಇದ್ದದ್ದಕ್ಕಿಂತಲೂ ಹೆಚ್ಚು ವಿಷಯಗಳನ್ನ ಎಷ್ಟು ಆಳವಾಗಿ ಸ್ವಂತ ಶ್ರಮದಿಂದ ಅಧ್ಯಯನ ಮಾಡಿ ತಿಳ್ಕೊಂಡಿದ್ರು.ಮುಂಬರುವ ಎಲ್ಲಾ ವಿದ್ಯಾರ್ಥಿಗಳಿಗೂ ಇದೊಂದು ದೊಡ್ಡ ಆದರ್ಶ ಅಂತ ನಾನು ತಿಳ್ಕೊಂಡಿದೀನಿ…” …ಗೌಡರು ಅವರ ಮಾತುಗಳಿಗೆ ಅಂತ್ಯ ಹಾಡಿದರು.ಅವರಿಗೂ ಹಾಗೂ ತಾರಿಣಿರವರಿಗೂ ಧನ್ಯವಾದ ಅರ್ಪಿಸಿ ಉದಯರವಿಯಿಂದ ಹೊರಟಾಗ ಸಮಯ ಸಂಜೆ 8 ಗಂಟೆ ಮೇಲಾಗಿತ್ತು.
ಅಂದೇ ತೇಜಸ್ವಿಯವರ ಆಪ್ತಮಿತ್ರ ಶ್ರೀರಾಮ್ ರವರನ್ನು ಮಾತನಾಡಿಸಬೇಕೆಂದುಕೊಂಡಿದ್ದರೂ ಅದು ಅವರ ಅನಾರೋಗ್ಯದ ಕಾರಣದಿಂದಾಗಿ ಸಾಧ್ಯವಾಗಲಿಲ್ಲ. ಹಾಗಾಗಿ ’ಮತ್ತೆ ಮತ್ತೆ ತೇಜಸ್ವಿ’ ಸಾಕ್ಷ್ಯಚಿತ್ರದ 11 ದಿನಗಳ ಮೊದಲ ಹಂತದ ಚಿತ್ರೀಕರಣ ಅಲ್ಲಿಗೆ ಮುಗಿದಂತಾಗಿ ರಾತ್ರಿ ಬೆಂಗಳೂರಿನ ಕಡೆ ಹೊರಟೆವು. ದಾರಿಯಲ್ಲಿ ಶ್ರೀರಂಗಪಟ್ಟಣದ ಡಾಬ ಒಂದರಲ್ಲಿ ಊಟ ಮಾಡುತ್ತಿದ್ದಾಗ ಹೇಮಂತ ’ಮುಂದೆ…?’ ಎಂದು ಚುಟುಕಾಗಿ ಕೇಳಿದ ಪ್ರಶ್ನೆಗೆ ಅಷ್ಟೇ ಚುಟುಕಾಗಿ ’…ನೋಡೋಣ’ ಎಂದುತ್ತರಿಸಿದೆ. ಮುಂದಿನ ಕೆಲಸಗಳು ನನಗೂ ಆಗ ಸ್ಪಷ್ಟವಿರಲಿಲ್ಲ. ನಂತರ ಊಟ ಮುಗಿಸಿ ವ್ಯಾನ್ ಹತ್ತಿದ್ದೇ ನಮ್ಮ ಕ್ಯಾಮೆರಮ್ಯಾನ್ ದರ್ಶನ್, ಹನ್ನೊಂದು ದಿನಗಳ ಸುದೀರ್ಘ ಪಯಣದ ಆಯಾಸಕ್ಕೊ ಏನೊ, ಸೀಟಿಗೆ ತಲೆ ಒರಗಿಸಿದವರೇ ನಿದ್ರೆಗೆ ಜಾರಿಬಿಟ್ಟರು. ನಾನು ಮತ್ತು ಹೇಮಂತ ಸ್ಟೀರಿಂಗ್ ಹಿಡಿದಿದ್ದ ನಿತಿನ್ ಮಲಗಿಬಿಟ್ಟಾನು ಎಂಬ ಕಾರಣಕ್ಕೆ ಅವನೊಂದಿಗೆ ಅವನ ಹಳೆಪ್ರೇಮ ಕಥೆಗಳನೆಲ್ಲಾ ಪ್ರಸ್ತಾಪಿಸಿ ಅವನನ್ನು ರೇಗಿಸುವ ನೆಪದಲ್ಲಿ ಮೈಸೂರು-ಬೆಂಗಳೂರು ಹಾದಿ ಸವೆಸಿದ್ದೆವು. ವ್ಯಾನು ನನ್ನ ರೂಮಿನ ಮುಂದೆ ನಿಂತಾಗ ಕಣ್ಣುಜ್ಜಿಕೊಂಡು ವಾಚ್ನೋಡಿಕೊಂಡೆ. ಜಾವದ ಎರಡು ಗಂಟೆ ತೋರಿಸುತ್ತಿತ್ತು…
(ಮುಂದುವರೆಯುವುದು…)
ಜಿ ಎಚ್ ನಾಯಕ ನೆನಪು: ನನ್ನೊಳಗಿನ ತೇಜಸ್ವಿ..
0 ಪ್ರತಿಕ್ರಿಯೆಗಳು