ಜಿ.ಹೆಚ್ ನಾಯಕರ ಸ್ಮೃತಿಕೋಶದಿಂದ ಅವರ ದೀರ್ಘಕಾಲದ ಗೆಳೆಯ ತೇಜಸ್ವಿಯವರ ನೆನಪುಗಳನ್ನು ಕೇಳಿ ದಾಖಲಿಸಿಕೊಂಡ ನಂತರ ನಮ್ಮ ಹುಡುಕಾಟ ಮುಂದುವರೆದದ್ದು ತೇಜಸ್ವಿ ಆಡಿ ಬೆಳೆದ ಮನೆಯಲ್ಲಿ.ಆ ಮನೆಯ ಹೆಸರು ’ಉದಯರವಿ’.
’ಉದಯರವಿ’ ಎಂಬ ಅರ್ಥಗರ್ಭಿತವಾದ ಈ ಹೆಸರು ಕನ್ನಡ ಸಾಹಿತ್ಯಲೋಕದ ಕುರಿತು ಆಸಕ್ತಿ ಇರುವ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಹೌದು ಈ ’ಉದಯರವಿ’ ಭಾರತಕ್ಕೆ ರಾಷ್ಟ್ರಕವಿಯೊಬ್ಬರನ್ನ ಕೊಟ್ಟ ಮನೆ, ವಿಶ್ವಮಾನವ ಸಂದೇಶದ ಮೂಲಕ ನನ್ನಂತಹ ನಿಮ್ಮಂತಹ ಕೋಟ್ಯಾಂತರ ಮನಸ್ಸುಗಳನ್ನು ಅರಳಿಸಿದ, ಸಂವೇದನಾಶೀಲತೆಯನ್ನು ಹಿಗ್ಗಿಸಿದ, ಜಡ್ಡುಗಟ್ಟಿದ ಸಂಪ್ರದಾಯಗಳು, ಕಂದಾಚಾರಗಳಿಂದ ಹೊರಬಂದು ವೈಚಾರಿಕರಾಗಿ ಬದುಕಲು ಕಲಿಸಿದ ಸಾಹಿತ್ಯಲೋಕದ ಮೌಂಟ್ ಎವರೆಸ್ಟ್, ಕನ್ನಡಿಗರ ಹೆಮ್ಮೆಯ ಕವಿ, ಯುಗದ ಕವಿ, ಜಗದ ಕವಿ, ಶ್ರೀ ರಾಮಾಯಣ ದರ್ಶನದಿಂದಲೇ ಜಗಕೆ ವಂದಿಸಿದ ಕವಿ ಶ್ರೀ ಕುವೆಂಪುರವರು ಬದುಕಿ ಬಾಳಿದ ಮನೆ ಈ ಉದಯರವಿ. ಇಂತಹ ಈ ಉದಯರವಿ ಮನೆ ತೇಜಸ್ವಿ ಬಾಲ್ಯದ ಸಹಜ ತುಂಟಾಟ, ತರಲೆಗಳೊಂದಿಗೆ ಆಡಿ ಬೆಳೆದ ಮನೆಯೂ ಹೌದು.ತೇಜಸ್ವಿ ತೇಜಸ್ವಿಯಾಗಿ ರೂಪುಗೊಳ್ಳಲು ಈ ಉದಯರವಿಯ ಪ್ರಭಾವ, ಕೊಡುಗೆಗಳು ಸಹ ಬಹಳಷ್ಟಿವೆ.ಇಂತಹ ಈ ಮನೆಯಲ್ಲಿ ನಮ್ಮ ಮುಂದಿನ ತೇಜಸ್ವಿ ಹುಡುಕಾಟ ಮುಂದುವರೆದಿತ್ತು.ಅಲ್ಲಿ ತೇಜಸ್ವಿಯನ್ನು ಹುಡುಕಿಕೊಡಲು ಕಾದಿದ್ದವರು ತೇಜಸ್ವಿಯವರ ತಂಗಿ ಶ್ರೀಮತಿ ತಾರಿಣಿ ಹಾಗು ಅವರ ಪತಿ ಶ್ರೀ ಚಿದಾನಂದ ಗೌಡರು.
ಜಿ.ಹೆಚ್ ನಾಯಕರ ಮನೆಯಿಂದ ಹೊರಟಿದ್ದೆ ನಮ್ಮ ವ್ಯಾನು ನೇರಮೈಸೂರಿನ ವಿವಿ ಮೊಹಲ್ಲಾದ ಉದಯರವಿ ಮುಂದೆ ನಿಂತಿತ್ತು. ವ್ಯಾನ್ ಇಳಿದು ಆ ಮನೆಯ ಮುಂದಿನ ಅಂಗಳದಲ್ಲಿ ನಿಂತು ಆ ಸುಂದರ ಅಂಗಳದಲ್ಲಿ ಕುವೆಂಪುರವರು ಹೇಗೆಲ್ಲ ಓಡಾಡಿರಬಹುದು, ಎಲ್ಲಿ ಕೂತು ತಮ್ಮ ವಿಶ್ವವಿಖ್ಯಾತ ಕವಿತೆಗಳನ್ನ, ಕಾದಂಬರಿ, ನಾಟಕಗಳನ್ನ, ಕಥೆಗಳಿಗೆ ಜೀವಕೊಟ್ಟಿರಬಹುದು ಎಂದು ನನ್ನಷ್ಟಕ್ಕೆ ನಾನೇ ಕಲ್ಪಿಸಿಕೊಳ್ಳುತ್ತಿರಬೇಕಾದರೆ ಒಳಗಿನಿಂದ ಡಾ.ಚಿದಾನಂದ ಗೌಡರು ಮುಗುಳ್ನಗೆಯೊಂದಿಗೆ ಹೊರಬಂದು ನಮ್ಮನ್ನು ಮನೆಯೊಳಕ್ಕೆ ಸ್ವಾಗತಿಸಿದರು. ಉದಯರವಿ ತುಂಬಾ ಹಳೆಯ ಮನೆ.ಆ ಕಾಲದ ಅಭಿರುಚಿಗೆ, ಅವಶ್ಯಕತೆಗಳಿಗೆ ತಕ್ಕ ಹಾಗೆ ನಿರ್ಮಿಸಿರುವ ಮನೆ.ಆ ಇಡೀ ಮನೆಯನೊಮ್ಮೆ ವಿವರವಾಗಿ ನೋಡಿದೆ.ಮನೆಯ ಪ್ರತಿಯೊಂದು ಮೂಲೆಯಲ್ಲೂ ಅಚ್ಚುಕಟ್ಟುತನ ಎದ್ದು ಕಾಣುತಿತ್ತು.ಅಷ್ಟರಲ್ಲಿ ತೇಜಸ್ವಿರವರ ತಂಗಿ ತಾರಿಣಿರವರು ಹೊರಬಂದರು.ನಾವು ಅವರಿಗೆ ವಂದಿಸಿ ನಮ್ಮ ಪರಿಚಯ ಮಾಡಿಕೊಂಡೆವು.ಹಲವು ಬಾರಿ ಫೋನಿನಲ್ಲಿ ಅವರೊಂದಿಗೆ ಸಾಕ್ಷ್ಯಚಿತ್ರ ಕುರಿತು ಮಾತಾಡಿದ್ದು ಬಹಳ ಬೇಗ ಹೊಸ ಪರಿಚಯದ ಮುಜುಗರ ಕಳೆದುಕೊಳ್ಳಲು ಸಹಕಾರಿಯಾಯಿತು.
ತಾರಿಣಿರವರುಹಾಗುಡಾ.ಚಿದಾನಂದ ಗೌಡರು ಬಹಳ ಮೃದುಮಾತಿನ, ಅತ್ಯಂತ ಸೌಜನ್ಯಯುತ ವ್ಯಕ್ತಿಗಳು.ತಾರಿಣಿರವರನ್ನು ಹುಡುಕಿಕೊಂಡು ಹೋಗಿದ್ದರ ಮುಖ್ಯ ಕಾರಣ ತೇಜಸ್ವಿಯವರ ಬಾಲ್ಯದ ಬಗ್ಗೆ, ಮನೆಯಲಿನ ತೇಜಸ್ವಿ ಹೇಗಿರುತ್ತಿದ್ದರು ಎಂಬುದನ್ನು ತಿಳಿಯಬೇಕೆಂಬ ಕುತೂಹಲದಿಂದ. ಮೊದಲಿಗೆ ಶ್ರೀಮತಿ ತಾರಿಣಿ ಹಾಗು ಡಾ.ಚಿದಾನಂದ ಗೌಡ ಇಬ್ಬರಿಗೂ ನಮ್ಮ ಸಾಕ್ಷ್ಯಚಿತ್ರದ ಸಂಪೂರ್ಣ ರೂಪುರೇಷೆಗಳನ್ನು ವಿವರಿಸಿದೆ. ಅದಾದ ಕೆಲ ನಿಮಿಷಗಳ ನಂತರ ಶ್ರೀಮತಿ ತಾರಿಣಿರವರು ಅಣ್ಣ ತೇಜಸ್ವಿಯ ನೆನಪುಗಳನ್ನು ಒಂದೊಂದಾಗಿ ನಮ್ಮೊಂದಿಗೆ ಹಂಚಿಕೊಳ್ಳಲಾರಂಭಿಸಿದರು. ಮೊದಲಿಗೆ ಅವರ ಮಾತು ಪ್ರಾರಂಭವಾಗಿದ್ದು ತೇಜಸ್ವಿಯ ಬಾಲ್ಯದ ಬಗ್ಗೆ, ನೌ ಓವರ್ ಟು ಶ್ರೀಮತಿ ತಾರಿಣಿ;
ಅಣ್ಣ ತಂಗಿಯರ ಬಾಲ್ಯದ ತುಂಟಾಟಗಳು
“ಬಾಲ್ಯದಲ್ಲಿ ನಾನು ತುಂಬಾ ಚಿಕ್ಕವಳಿರಬೇಕಾದ್ರೆ ಅವನೇ ದೊಡ್ಡಣ್ಣ ಆಗಿದಿದ್ದರಿಂದ ಅವನ ಹಿಂದೇನೆ ಓಡಾಡ್ಕೊಂಡಿರ್ತಿದ್ದೆ. ಅವನು ಹಂಗೆ ನನ್ನೂ ಸೇರಿಸಿ ಇನ್ನೂ ಅನೇಕರನ್ನ ಜೊತೆ ಸೇರಿಸ್ಕೊಂಡು ಒಟ್ಟಿಗೆ ಓಡಾಡೋದು, ಆಟ ಆಡೋದು ಮಾಡ್ತಿದ್ದ. ನಾನಂತು ಅವನ ಅನೇಕ ಚಟುವಟಿಕೆಗಳಲ್ಲಿ, ರಾದ್ದಾಂತಗಳಲ್ಲಿ ಅವನ ಪಾಲುದಾರಳಾಗಿರ್ತಿದ್ದೆ. ನನಗಾಗ ಬರೀ ನಾಲ್ಕು ವರ್ಷ ಅಷ್ಟೇ. ಆಗ್ಲೇ ಅವನು ನನ್ನನ್ನ ಕರ್ಕೊಂಡು ಊರು ಸುತ್ತುತ್ತಾ ಇದ್ದ. ಅಷ್ಟೂ ವಯಸ್ಸಿಗೆ ತುಂಬಾ ದೂರದೂರದವರೆಗೂ, ಕೆಲವು ಸಲ ಅಂತೂ ಕುಕ್ಕರಹಳ್ಳಿ ಕೆರೆವರೆಗೂ ಹೋಗಿ ಮೀನು ಹಿಡ್ಕೊಂಡು ಬರೋದು, ಮನೇಲಿ ಬೈಸಿಕೊಳ್ಳೋದು ಎಲ್ಲಾ ನಡೀತಿತ್ತು. ಏನೇ ಆದರೂ ನಾನಂತೂ ಅವನ ಹಿಂದೆ ಓಡಾಡೋದು ಮಾತ್ರ ಬಿಡಲಿಲ್ಲ.
ನಂತರ ಅವನ ಹೈಸ್ಕೂಲ್ ದಿನಗಳಲ್ಲಿ ನಾನು ಸ್ವಲ್ಪ ದೊಡ್ಡವಳಾಗಿದ್ದೆ, ಅವನು ದೊಡ್ಡವನಾಗಿದ್ದಿದ್ರಿಂದ ಸ್ನೇಹಿತರ ಜೊತೆಗೇನೆ ಅವನ ಒಡಾಟ ಜಾಸ್ತಿ ಆಗ್ತಿತ್ತು. ಮನೇಲಿದ್ದಾಗ ಮಾತ್ರ ಏನಾದ್ರು ಮಾಡ್ಬೇಕಾದ್ರೆ ಅವನು ನಾನು ಒಟ್ಟಿಗೆ ಓಡಾಡ್ಕೊಂಡಿರ್ತಿದ್ವಿ. ಅವನ ಹೈಸ್ಕೂಲ್ ದಿನಗಳನ್ನ ನೆನಪು ಮಾಡ್ಕೊಂಡಾಗ ನನಗೆ ನೆನಪಾಗೊ ಸಂಗತಿ ಅಂದರೆ ಅವನಿಗೆ ಸೈಕಲ್ ಮೇಲಿದ್ದ ವಿಪರೀತ ಹುಚ್ಚು. ಸೈಕಲ್ ಕೈಗೆ ಬಂದ ಮೇಲಂತೂ ಅವನು ಅದರ ಮೇಲೇನೆ ಊರೂರು ಸುತ್ತುತ್ತಾ ಇದ್ದ. ತುಂಬಾ ದೂರದೂರ ಎಲ್ಲ ಹೋಗಿ ಬರೋನು. ಜೊತೆಗೆ ಅವನ ಸ್ನೇಹಿತರು ಬೇರೆ. ಎಲ್ಲಕ್ಕಿಂತ ಮುಖ್ಯವಾಗಿ ಅವನುಸೈಕಲ್ ಯಾವತ್ತೂ ಹೊಸದರ ಥರ ಇರಬೇಕು ಅಂತ ಬಯಸೋನು. ಅವನೇ ಆ ಸೈಕಲ್ಲನ ಬಿಚ್ಚಿ ರಿಪೇರಿ ಮಾಡಿ, ಫಳಫಳ ಅಂತ ಹೊಳೆಯೊ ಹಂಗೆ ಮಾಡಿ ಸರಿ ಮಾಡ್ಕೊಂಡು ಓಡಾಡ್ತಿರೋನು. ನಾನು ಅವನ ಸೈಕಲ್ ರಿಪೇರಿನ ತುಂಬಾ ಆಸಕ್ತಿಯುತವಾಗಿ ಕಣ್ ಕಣ್ ಬಿಟ್ಕೊಂಡು ನೋಡ್ತಾ ಇರ್ತಿದ್ದೆ. ಕೆಲವು ಸಲ ಅವನು ಅವನ ಸೈಕಲ್ ರಿಪೇರಿ ವ್ಯವಹಾರದಲ್ಲಿ ನನ್ನೂ ಸೇರಿಸಿಕೊಂಡು ಬಿಡೋನು. ಏನಾದ್ರು ಸಣ್ಣಪುಟ್ಟ ಸಹಾಯ ಬೇಕಾದಾಗ ’ಬಾ ಮಾಡು’ ಅಂತ ಹೇಳಿ ನನ್ನನ್ನ ಕರೀತಿದ್ದ, ಅದು ಇದು ತಂದು ಕೊಡು ಅಂತಿದ್ದ. ಹೀಗೆ ನಾನು ಅವನ ಹಿಂದೇನೆ ಓಡಾಡ್ಕೊಂಡು ಇರ್ತಿದ್ದೆ.
ಆಮೇಲೆ ಹೈಸ್ಕೂಲ್ ಮುಗಿದು ಕಾಲೇಜಿಗೆ ಹೋಗೋಕೆ ಶುರು ಮಾಡಿದ ಮೇಲೆ ಅವನ ಹೊರಗಡೆ ಚಟುವಟಿಕೆಗಳು ಜಾಸ್ತಿ ಆಯ್ತು. ದಿನದ ಹೆಚ್ಚು ಕಾಲ ಸ್ನೇಹಿತರ ಜೊತೇನೆ ಓಡಾಡ್ಕೊಂಡಿರೋನು. ಹಂಗಾಗಿ ದಿನದ ಹೆಚ್ಚು ಕಾಲ ಅವನ ಜೊತೆ ಇರೋಕ್ಕಾಗ್ತಿರ್ಲಿಲ್ಲ. ನಾನು ನನ್ನ ಕೆಲಸ ಮಾಡ್ಕೊಂಡಿರ್ತಿದ್ದೆ. ಓದು ಮುಗಿದ ಮೇಲೆ ಅವನು ಮೈಸೂರು ಬಿಟ್ಟು ಮೂಡಿಗೆರೆ ಕಡೆ ಕಾಫಿ ತೋಟ ಮಾಡ್ತೀನಿ ಅಂತ ಹೋದ ನಂತರ ವಾಪಸ್ ಮೈಸೂರಿಗೆ ಬಂದಾಗ ಅಥವ ಪತ್ರಗಳಲ್ಲಿ, ಫೋನಿನಲ್ಲಿ ಮಾತುಕತೆ ನಡೀತಿತ್ತು…” ತೇಜಸ್ವಿಯವರ ತಂಗಿ ತಾರಿಣಿರವರು ಅವರ ಅಣ್ಣನ ನೆನಪುಗಳನ್ನ ಹೀಗೆಒಂದೇ ಸಮನೆ ಹೇಳತೊಡಗಿದರು. ನಂತರ ನಾನೇ ಮುಂದಾಗಿ ಕೆಲವು ಖಚಿತ ಪ್ರಶ್ನೆಗಳನ್ನು ಅವರಿಗೆ ಕೇಳತೊಡಗಿದೆ. ಅವುಗಳಲ್ಲಿ ಮೊದಲನೆಯದು ತೇಜಸ್ವಿಯವರ ಸಂಗೀತದ ಆಸಕ್ತಿ ಕುರಿತದ್ದು. ಆ ಪ್ರಶ್ನೆಗೆ ತಾರಿಣಿರವರು ಹಳೆಯ ಘಟನೆಗಳನ್ನು ನೆನಪಿಸಿಕೊಂಡು ನಿಧಾನಕ್ಕೆ ಮಾತು ಪ್ರಾರಂಭಿಸಿದರು,
ತೇಜಸ್ವಿ-ಶಾಮಣ್ಣನ ಜುಗಲ್ಬಂದಿ
“ಅವನಿಗೆ ಸಂಗೀತದ ಬಗ್ಗೆ ಹೇಗೆ ಆಸಕ್ತಿ ಬಂತೊ ನನಗೆ ಅಷ್ಟಾಗಿ ನೆನಪಿಲ್ಲ. ಆದರೆ ಒಂದಿನ ಅವನು ಇದ್ದಕ್ಕಿದ್ದ ಹಾಗೆ ಒಂದು ಸಿತಾರ್ ಹಿಡ್ಕೊಂಡು ಬಂದು ಅದನ್ನ ತುಂಬಾ ಚೆನ್ನಾಗಿ ಬಾರಿಸೋಕೆ ಶುರು ಮಾಡಿದಾಗಲಂತೂ ನಾವೆಲ್ಲ ಬೆರಗಾಗಿ ಬಾಯಿಬಿಟ್ಕೊಂಡು ನೋಡಿದ್ವಿ. ಅದು ಹೇಗೆ ಇವನು ಇಷ್ಟು ಚೆನ್ನಾಗಿ ಸಿತಾರ್ ನುಡಿಸೋಕೆ ಕಲಿತ? ಅಂತ ನಮಗೆ ಅರ್ಥಾನೇ ಆಗ್ಲಿಲ್ಲ. ಅದರೆ ಒಂದೇನು ಅಂದರೆ ಅವನು ಎಲ್ಲಾ ಥರದ ಸಂಗೀತದ ಗ್ರಾಮಫೋನ್ ಪ್ಲೇಟ್ ಗಳನ್ನ ತುಂಬಾ ಹಾಕ್ಕೊಂಡು ಕೇಳೋನು. ಹಾಗೆ ಹಲೀಂ ಜಾಫರ್, ರವಿಶಂಕರ್ ಇವರದೆಲ್ಲಾ ಸಿತಾರ್ ನ ಗ್ರಾಮಫೋನ್ ಪ್ಲೇಟ್ಸ್ ಹಿಡ್ಕೊಂಡು ಬಂದು ಅವನ್ನೆಲ್ಲಾ ತುಂಬಾ ಹಾಕ್ಕೊಂಡು ಕೇಳೋನು. ಕೆಲವು ಸಾರ್ತಿ ತುಂಬಾ ಜೋರಾಗಿ ಸೌಂಡ್ ಕೊಟ್ಟು, ನಮಗೆ ಪರೀಕ್ಷೆಗೆ ಓದಿಕೊಳ್ಳೋಕೆ ಕಷ್ಟ ಆಗಿ ಆಮೇಲೆ ಅಪ್ಪ ಅಮ್ಮನಿಗೆ ಹೇಳಿ ಸೌಂಡ್ ಕಡಿಮೆ ಮಾಡಿಸ್ತಿದ್ದಿದ್ದು ನಡೀತಿತ್ತು.
ಆಮೇಲೆ ಸ್ವಲ್ಪ ದಿನ ಆದ್ಮೇಲೆ ನಾವ್ಯಾರೂ ನಂಬೋಕೆ ಆಗದಂತ ಒಂದು ಸುದ್ದಿ ನಮ್ಮ ಕಿವಿಗೆ ಬಿತ್ತು. ಇವನು, ಶಾಮಣ್ಣ ಇಬ್ಬರೂ ಸೇರ್ಕೊಂಡು ಕಾಲೇಜಿನಲ್ಲಿ ಅದೇನೊ ಸಂಗೀತದ ಜುಗಲ್ಬಂದಿ ಪ್ರೊಗ್ರಾಮ್ ಕೊಟ್ರು ಅಂತ. ನಮಗೆಲ್ರಿಗೂ ಆಶ್ಚರ್ಯ, ’ಇವನು ಯಾವ ಗುರುಗಳ ಹತ್ರಾನೂ ಇನ್ನೂ ಸರಿಯಾಗಿ ಅಭ್ಯಾಸಕ್ಕೆ ಸೇರ್ಕೊಂಡಿಲ್ಲ. ಅದು ಹ್ಯಾಗೆ ಜುಗಲ್ಬಂದಿ ಪ್ರೊಗ್ರಾಮ್ ಕೊಟ್ರು’ ಅಂತ. ನಾನೂ ಆಗ ಒಬ್ಬರು ಗುರುಗಳ ಸಂಗೀತದ ಅಭ್ಯಾಸ ಮಾಡ್ತಿದ್ದೆ. ಹಾಗಾಗಿ ’ನಾವಿನ್ನೂ ಬೇಸಿಕ್ಸ್ ಕಲಿಯೋದರಲ್ಲೇ ಇದೀವಿ. ಇವನು ನೋಡಿದ್ರೆ ಯಾವ ಗುರುಗಳು ಇಲ್ಲದೇ ಆಗಲೇ ಜುಗಲ್ಬಂದಿ ಅದು ಇದು ಅಂತ ಮಾಡ್ತಿದಾನಲ್ಲ ಅಂತ ಆಶ್ಚರ್ಯ ಆಯ್ತು. ಮರುದಿನ ಕಾಲೇಜಿಗೆ ಹೋದ್ರೆ ಬರೀ ಇದೇ ಸುದ್ದಿ. ‘ತೇಜಸ್ವಿ-ಶಾಮಣ್ಣನ ಜುಗಲ್ಬಂದಿ ತುಂಬಾ ಚೆನ್ನಾಗಿತ್ತು ಹಾಗೆ ಹೀಗೆ’ ಅಂತ. ಆಮೇಲೆ ಅಂದುಕೊಂಡ್ವಿ ಗೊತ್ತಿದಿದ್ರೆ ನಾವು ಹೋಗಬಹುದಿತ್ತು ಅಂತ. ಆಮೇಲೆ ಅವನಿಗೆ ರಾಗಜ್ಞಾನ ಚೆನ್ನಾಗಿತ್ತು. ರೇಡಿಯೋದಲ್ಲಿ ಯಾವುದಾದರೂ ಸಂಗೀತ ಬರ್ತಿದ್ರೆ ನನ್ನನ್ನ ಕರೆದು ’ಇದ್ಯಾವ ರಾಗ ಹೇಳು ನೋಡೋಣ…’ ಅಂತಿದ್ದ. ನಾನು ಯಾವ ರಾಗ? ಏನು ಎತ್ತ?ಅಂತ ಗೊತ್ತಾಗದೇ ತಡಬಡಾಯಿಸ್ತಿದ್ದೆ. ಆಗ ಅವನು ’ಆ ರಾಗಕ್ಕೆ ಹಿಂದೂಸ್ತಾನಿನಲ್ಲಿ ಹೀಗಂತಾರೆ, ದಕ್ಷಿಣಾದಿನಲ್ಲಿ ಹೀಗಂತಾರೆ…’ ಅಂತ ತಿಳಿಸಿ ಹೇಳೋನು. ಆಗ ನನಗೆ ಮಾತ್ರ ಅಲ್ಲ ನಮ್ಮ ತಂದೆಯವರಿಗೂ ಆಶ್ಚರ್ಯ ಆಗೋದು, ’ಹೇಗೆ ಇವನು ಇಷ್ಟೆಲ್ಲಾ ಕಲಿತ?’ ಅಂತ. ಅಷ್ಟರಮಟ್ಟಿಗೆ ಅವನು ಕೆಲವು ವರ್ಷಗಳು ಸಂಗೀತದಲ್ಲೇ ಮುಳುಗಿ ಹೋಗಿದ್ರು. ಆದರೆ ಕೆಲವು ಸಲ ಹಲೀಂ ಜಾಫರ್ (ಪ್ರಸಿದ್ದ ಸಿತಾರ್ ಕಲಾವಿದರು) ಮೈಸೂರಿಗೆ ಬಂದ್ರೆ ಅವರತ್ರ ಹೋಗ್ತಿದ್ದ. ರವಿಶಂಕರ್ ಬಂದ್ರೆ ಅವರ ಹತ್ರಾನೂ ಹೋಗ್ತಿದ್ದ. ಹೀಗೆ ಅವನು ಇಷ್ಟಪಟ್ಟಿದ್ದನ್ನ ಕಲಿಯೋದರಲ್ಲಿ ಚುರುಕಾಗಿದ್ದಿದ್ದರಿಂದ ಅದೆಲ್ಲಾ ಸಾಧ್ಯ ಆಯ್ತು ಅಂತ ನನಗನ್ಸುತ್ತೆ…” ತಾರಿಣಿರವರು ತೇಜಸ್ವಿ ಸಂಗೀತದ ಹುಚ್ಚು ಹತ್ತಿಸಿಕೊಂಡಿದ್ದ ಆದಿನಗಳ ಕುರಿತು ಸ್ವಾರಸ್ಯಕರವಾಗಿ ಮಾತನಾಡಿದರು. ನಂತರದ ಪ್ರಶ್ನೆ ಇದ್ದದ್ದು ತೇಜಸ್ವಿಯ ಫೋಟೋಗ್ರಫಿ ಹುಚ್ಚಿನ ಪ್ರಾರಂಭದ ದಿನಗಳ ಬಗ್ಗೆ. ತಾರಿಣಿರವರು ಆ ಕುರಿತ ಹಿಂದಿನ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳತೊಡಗಿದರು.
ಫೋಟೋಗ್ರಫಿ ಹುಚ್ಚು
“ಆಗಿನ ಕಾಲದಲ್ಲಿ ಕ್ಯಾಮೆರ ತಗೊಳ್ಳೋದು ಬಹಳ ಕಷ್ಟ ಇತ್ತು. ಆದರೆ ತೇಜಸ್ವಿಗೆ ಕ್ಯಾಮೆರ ಕೊಂಡುಕೊಬೇಕು, ಫೋಟೋ ತೆಗಿಬೇಕು ಅನ್ನೊ ಆಸೆ ಮಾತ್ರ ಬೆಟ್ಟದಷ್ಟಿತ್ತು. ಆದರೆ ಅಪ್ಪ, ಅಮ್ಮನ ಹತ್ತಿರ ದುಡ್ಡು ಕೇಳೋಕೆ ಅವನಿಗೆ ಇಷ್ಟ ಇರಲಿಲ್ಲ. ಹಾಗಾಗಿ ಅವನು ಕ್ಯಾಮೆರ ತಗೋಬೇಕು ಅಂತ ದುಡ್ಡು ಕೂಡಿಸ್ತಿದ್ದ. ಒಂದ್ಸಲ ರಾಮಕೃಷ್ಣಾಶ್ರಮದಿಂದ ಶಾರದದೇವಿಯವರ ಹುಟ್ಟು ಹಬ್ಬಕ್ಕೊ ಏನೋ ಒಂದು Essay ಕಾಂಪಿಟಿಷನ್ ಮಾಡಿದ್ರು. ಅದರಲ್ಲಿ ಇವನು ಒಂದು Essay ಬರೆದು ಕಳಿಸಿದಾನೆ. ಅದೇನು ಬರೆದನೊ, ಏನೊಅಂತು ಇವನಿಗೆ ಆ ಸ್ಪರ್ಧೆನಲ್ಲಿ prizeಬಂದಿತ್ತು! Thirdprize. ಅದು ನನಗೂ ಗೊತ್ತಿರಲಿಲ್ಲ, ತಂದೆಯವರಿಗೂ ಗೊತ್ತಿರಲಿಲ್ಲ. ಅ prize ಬಂದ ದುಡ್ಡಿನಲ್ಲಿ ತೇಜಸ್ವಿ ಚಿಕ್ಕದೊಂದು ಬಾಕ್ಸ್ ಕ್ಯಾಮೆರ ತಗೊಂಡಿದ್ದ. ಆ ಬಾಕ್ಸ್ ಕ್ಯಾಮೆದಲ್ಲೇ ನಮ್ಮನ್ನೆಲ್ಲಾ ನಿಲ್ಲಿಸಿ ಫೋಟೋ ತೆಗೆದ. ಅದು ಅಂತ ಓಳ್ಳೆ ಕ್ಯಾಮೆರ ಅಲ್ಲ ಅಂತ ಕಾಣುತ್ತೆ ಹಾಗಾಗಿ ಅದರಲ್ಲಿ ಫೋಟೋಗಳು ಚೆನ್ನಾಗಿ ಬರ್ತಿರ್ಲಿಲ್ಲ. ಕೂದಲೆಲ್ಲಾ ಕಪ್ಪು ಅಂದರೆ ಕಪ್ಪಗೆ, ಮುಖ ಎಲ್ಲಾ ತುಂಬಾ ಬೆಳ್ಳಗೆ ಬೂದಿಬೂದಿ ಥರ ಬರ್ತಿತ್ತು. ನಾವೆಲ್ಲ ದೆವ್ವಗಳ ಥರ ಕಾಣ್ತಿದ್ವಿ ಅದರಲ್ಲಿ. ಆ ಥರದ ಕ್ಯಾಮೆರದಲ್ಲೇ ಅವನು ಫೋಟೋಗ್ರಫಿ ಶುರು ಮಾಡಿದ್ದು.
ಆಗ ತೆಗೆದ ಫೋಟೋಗಳೂ ಸಹ ಕೆಲವು ನನ್ನತ್ರ ಈಗ್ಲೂ ಇದಾವೆ. ಅಮೇಲೆ ಹಂಗೆ ದುಡ್ಡು ಒಟ್ಟು ಹಾಕಿ ಹಳೆ ಕ್ಯಾಮೆರ ಮಾರೋದು ಹೊಸ ಕ್ಯಾಮೆರ ತಗೊಳ್ಳೋದು ಹೀಗೆ ಮಾಡ್ತಿದ್ದ. ನಂತರ ಬಹುಶಃ ಇಂಟರ್ಮೀಡಿಯಟ್ ನಲ್ಲಿರಬೇಕು ಆಗ ಅವನು ಶಿವಮೊಗ್ಗದಲ್ಲಿ ನಮ್ಮಜ್ಜಿ ಮನೇಲಿ ಓದ್ತಿದ್ದ. (ಮೈಸೂರಿನಲ್ಲಿ ಇಂಟರ್ಮೀಡಿಯಟ್ ಫೇಲ್ ಆಗಿದ್ದರಿಂದ ಕುವೆಂಪುರವರು ಅವರನ್ನ ಶಿವಮೊಗ್ಗದ ಅಜ್ಜಿ ಮನೆಗೆ ಕಳಿಸಿದ್ರಲ್ಲ. ಇಲ್ಲಿದ್ರೆ ಸ್ನೇಹಿತರ ಜೊತೆ ಸೇರಿ ಹಾಳಾಗ್ತನೆ ಅಂತ). ಅಲ್ಲಿ ತೇಜಸ್ವಿ ಅವನಿದ್ದ ರೂಮನ್ನೇ ಡಾರ್ಕ್ ರೂಂ ಮಾಡ್ಕೊಂಡು, ಕಿಟಕಿ ಬಾಗಿಲಿಗೆಲ್ಲ ಪ್ಲಾಸ್ಟರ್ ಅಂಟಿಸಿ, ಒಂಚೂರು ಬೆಳಕು ಬರದ ಹಾಗೆ ಮಾಡಿ ಅಲ್ಲೇ ಡೆವಲಪಿಂಗು, ಪ್ರಿಂಟಿಂಗು ಪ್ರತಿಯೊಂದನ್ನೂ ತಾನೆ ಸ್ವತಃ ಮಾಡಿ ಚೆನ್ನಾಗಿ ಸ್ಟಡಿ ಮಾಡ್ತಿದ್ದ. ಒಂದ್ಸಾರಿ ಇಲ್ಲಿ ಉದಯರವಿ ಮನೇಲಿದ್ದಾಗ ನನ್ನನ್ನ ಏನೋ ಡೆವಲಪ್ ಮಾಡೋಕೆ ಅಂತ ನಿಲ್ಲಿಸಿ ಅದೆಷ್ಟೊ ಹೊತ್ತು ಅದೇನೊ ತಿರುಗಿಸ್ತಾ ಇರು ಅಂತ ಹೇಳಿದ್ದ. ನಾನು ಅವನು ಹೇಳಿದ ಹಾಗೆ ತಿರುಗಿಸ್ತಾ ಇದ್ದೆ. ಆದರೆ ಸಮಯ ಹೆಚ್ಚುಕಮ್ಮಿ ಆಗ್ಬಿಟ್ಟು ಫೋಟೋಗಳೆಲ್ಲಾ ಹಾಳಾಯ್ತು, ಇಡೀ ರೀಲು ವೇಸ್ಟ್ ಆಯ್ತು ಅಂತ ಗೊಣಗ್ತಿದ್ದ. ಆದರೆ ನನಗೆ ಅದರ ತಲೆಬುಡ ಏನೂ ಗೊತ್ತಿಲ್ದೆ ಇದ್ದಿದ್ರಿಂದ ಏನಾಯ್ತು ಏನು ಬಗ್ಗೆ ತುಂಬಾ ತಿಳ್ಕೊಂಡಿದ್ದ.
ಒಂದೊಂದ್ಸಾರ್ತಿ ನನಗೂ ಹೇಳೋನು ’ನೋಡು ನೀನು ಕ್ಯಾಮೆರ ಹಿಡ್ಕೊಂಡು ನಿಂತಾಗ ಕೂತಾಗ ಜನಗಳಿಗೆ ಫೋಕಸ್ ಮಾಡಿ ಮಾಡಿ ನೋಡ್ತಾ ಇರು. ನಿನಗೂ ಅರ್ಥ ಆಗುತ್ತೆ ಫೋಟೋಗ್ರಫಿ ಅಂದ್ರೆ ಏನು ಅಂತ” ಅಂತ. ಸುಮಾರು ವಿಷಯಗಳನ್ನ ಹೇಳೂ ಕೊಟ್ಟಿದ್ದ. ಆದರೆ ನಾನು ಅವನು ಹೇಳಿದ್ದನ್ನ ಸೀರಿಯಸ್ಸಾಗೇನು ತಗೊಂಡು ಅಭ್ಯಾಸ ಮಾಡ್ಲಿಲ್ಲ. ಅವನು ಮಾತ್ರ ದೊಡ್ಡ ಫೋಟೋಗ್ರಾಫರ್ ಆಗ್ಬಿಟ್ಟ”ತಾರಿಣಿರವರು ಒಂದೊಂದೇ ಘಟನೆಗಳನ್ನ, ವಿಷಯಗಳನ್ನ ನಮ್ಮೆದುರು ಬಿಡಿಸಿಡುತ್ತಾ ಹೋದರು. ನಂತರ ಅವರ ಮಾತು ತಿರುಗಿದ್ದು ತೇಜಸ್ವಿಯವರ ಫಿಶಿಂಗ್ ಹವ್ಯಾಸದ ಬಗ್ಗೆ. ಫಿಶಿಂಗ್ ಕುರಿತ ತೇಜಸ್ವಿಯವರ ಆಸಕ್ತಿ ಬಾಲ್ಯದಲ್ಲೇ ಇತ್ತು ಎಂಬುದನ್ನು ಅವರು ಬಹಳ ಹಿಂದಿನ ಘಟನೆಯೊಂದನ್ನು ಉದಾಹರಿಸುವ ಮೂಲಕ ಹೇಳತೊಡಗಿದರು. (ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ತೇಜಸ್ವಿ ತುಂಬಾ ತೀವ್ರವಾಗಿ ಹಚ್ಚಿಕೊಂಡಿದ್ದ ಬಹುಪಾಲು ಹವ್ಯಾಸಗಳೆಡೆಗಿನ ಆಸಕ್ತಿ ಅವರ ಬಾಲ್ಯಕಾಲದಲ್ಲೇ ಮೊಳಕೆ ಒಡೆದಿತ್ತು ಎಂಬ ಅಂಶ ಗೊತ್ತಾಗುತ್ತದೆ). ತೇಜಸ್ವಿಯವರ ಬಾಲ್ಯದ ಫಿಶಿಂಗ್ ಹುಚ್ಚಿನ ಕುರಿತ ತಾರಿಣಿರವರನೆನಪುಗಳು ಇಲ್ಲಿವೆ.
ಏಯ್ ಕತ್ತೆ ಬಡ್ಕೊಬೇಡ ಏನಾಗಲ್ಲ ಸುಮ್ನಿರೆ
“ಚಿಕ್ಕಂದಿನಂದಲೇ ಮೀನು ಹಿಡಿಯೋಕೆ ಅಂತ ಅವನು ನನ್ನನ್ನ ಕುಕ್ಕರಹಳ್ಳಿ ಕೆರೆವರೆಗೂ ಕರ್ಕೊಂಡು ಹೋಗ್ತಿದ್ದ. ಹೋದಾಗ ಅವನು ನೀರಿಗಿಳಿದು ಬಟ್ಟೆನಲ್ಲಿ ಮೀನು ಹಿಡಿದು ಹಿಡಿದು ದಡಕ್ಕೆ ಎಸೆಯೋದು, ನಾನು ಅದನ್ನೆಲ್ಲಾ ಹಿಡಿದು ಗಂಟು ಕಟ್ಟೋದು ಮಾಡ್ತಿದ್ದೆ. ಆಗ ತೇಜಸ್ವಿ ಎಷ್ಟು ಆಳಾಳಕ್ಕೆ ಹೋಗ್ತಿದ್ದ ಅಂದ್ರೆ ನನಗೆ ಭಯ ಆಗಿ ನಾನು ದಡದಲ್ಲೇ ನಿಂತ್ಕೊಂಡು ’ಏಯ್ ತೇಜಸ್ವಿ ಹೋಗ್ಬೇಡ ಬಾರೊ, ಹೋಗ್ಬೇಡ ಬಾರೊ…’ ಅಂತ ಕೂಗ್ತಿದ್ದೆ. ಆಗ ಅವನು ತಿರುಗಿ ನಿಂತ್ಕೊಂಡು ’ಏಯ್ ಕತ್ತೆ ಏನಾಗಲ್ಲ ಸುಮ್ನಿರು ಬಡ್ಕೋಬೇಡ..’ ಅಂತ ನನಗೆ ಬೈದಿದ್ದಂತೂ ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ. ಒಂದ್ಸಲ ನಾವು ಎಷ್ಟೊತಾದ್ರೂ ಮನೆಗೆ ಬರಲಿಲ್ಲ ಅಂತ ಹೇಳಿ ನಮ್ಮ ತಂದೆಯವರು ನಮ್ಮನ್ನ ಹುಡುಕ್ಕೊಂಡು ಕೆರೆ ಹತ್ತಿರ ಬಂದಿದ್ರು. ಆಗ ನಾನು ಕೈ ತುಂಬ ಮೀನಿನ ಗಂಟು ಹಿಡ್ಕೊಡು ನಿಂತಿದ್ದೆ. ತೇಜಸ್ವಿ ಕೆರೆ ಒಳಗೆ ನಿಂತು ಮೀನು ಹಿಡೀತಿದ್ದ. ಅದನ್ನ ನೋಡಿ ತಂದೆಯವರು ಚೆನ್ನಾಗಿ ಬೈದು ಮನೆಗೆ ಕರ್ಕೊಂಡು ಹೋಗಿದ್ದೂ ಕೂಡ ಅಷ್ಟೇ ಚೆನ್ನಾಗಿ ನೆನಪಿದೆ.
ಹಾಗೆ ಅವನಿಗೆ ಆಗ್ಲೇ ಮೀನನ್ನ ಹೇಗೆ ಹಿಡಿಬೇಕು ಅಂತೆಲ್ಲಾ ಗೊತ್ತಿತ್ತು ಅಂತ ಕಾಣುತ್ತೆ. ಆಮೇಲಂತೂ ಎಂತೆಂಥ ಮೀನುಗಳನ್ನ ಹಿಡ್ಕೊಂಡು ಬರ್ತಿದ್ದ ಅಂದ್ರೆ ಒಂದ್ಸಾರ್ತಿ ನನ್ನಷ್ಟೆತ್ತರದ್ದು ಸುಮಾರು ಐದು ಅಡಿ ಉದ್ದದ್ದ ಮೀನು ಹಿಡ್ಕೊಂಡು ಬಂದಿದ್ದ. ಅದನ್ನ ಮೂಡಿಗೆರೆಯಿಂದ ಮೈಸೂರಿಗೆ ಬರೋವಾಗ್ಲೊ ಏನೊ ದಾರಿನಲ್ಲಿ ಎಲ್ಲೊ ಹಿಡ್ಕೊಂಡು ಬಂದಿದ್ದ. ಅದು ಸರಿ ರಾತ್ರಿ ಆಗಿತ್ತು. ಆಗ ನಮ್ಮಮ್ಮ ಎದ್ದು ಅದನ್ನೆಲ್ಲಾ ಕ್ಲೀನ್ ಮಾಡಿ, ಅಡಿಗೆ ಮಾಡಿ ತಿಂದಿದ್ದಾಯ್ತು. ಆದರೂ ಆ ಮೀನು ಖಾಲಿನೇ ಆಗ್ಲಿಲ್ಲ. ಅದಕ್ಕೆ ನಮ್ಮಮ್ಮ ಅದರಲ್ಲೇ ಉಪ್ಪಿನಕಾಯಿ ಬೇರೆ ಹಾಕಿದ್ರು. ಬಹಳ ರುಚಿಯಾಗಿತ್ತದು. ಹೀಗೆ ನಡೀತಿದ್ದಾಗ ನಾನು ಒಂದಿನ ಕೇಳ್ದೆ, “ನೀನು ಯಾವಾಗ್ಲೂ ಮೀನು ಹಿಡಿಯೋಕೆ ಹೋಗ್ತಿಯಲ್ಲ, ನಾನು ಬರ್ತೀನಿ’ ಅಂತ. ಸರಿ ಅಂತ ಹೇಳಿ ಅವನು ನನ್ನನ್ನ ಕರ್ಕೊಂಡು ಹೋದ. ಅವತ್ತು ಜೊತೆಗೆ ರಾಮದಾಸ್ ಮತ್ತವರ ಮಕ್ಕಳು, ತೇಜಸ್ವಿ ಮಕ್ಕಳು ಸುಸ್ಮಿತ, ಈಶಾನ್ಯೆ ಎಲ್ಲರೂ ಇದ್ರು. ರಾಮದಾಸ್ ಇವನಿಗೆ ತುಂಬಾ ಒಳ್ಳೆ ಕಂಪನಿ ಅಂತ ಕಾಣ್ಸುತ್ತೆ. ಅದಕ್ಕೆ ಯಾವಾಗ ನೋಡಿದ್ರೂ ಅವರ ಜೊತೇನೇ ಹೋಗ್ತಿದ್ದ.
ಅವತ್ತು ನಾವೆಲ್ಲರು ಕಾವೇರಿ ಹೊಳೆಗೆ ಮೀನು ಹಿಡಿಯೋಕೆ ಅಂತ ಹೋದ್ವಿ. ಆದರೆ ಅವತ್ತು ಮಳೆ ಬಂದು ಹೊಸನೀರು ಬಂದಿದ್ದರಿಂದ ಮೀನೇನು ಸಿಗಲಿಲ್ಲ ಅಂತ ತೇಜಸ್ವಿ ಹೇಳ್ದ. ನಾನಂತು ತುಂಬಾ ತಿಂಡಿ ತಗೋಂಡು ಹೋಗಿದ್ದೆ. ಅವನು ಮೀನು ಹಿಡೀತಾ ಕೂತಿದ್ದಾಗ ನಾನು ಆ ತಿಂಡಿನೆಲ್ಲಾ ಚೆನ್ನಾಗಿ ತಿಂದುಕೊಂಡುಬಿಟ್ಟಿದ್ದೆ. ಕಡೇಲಿ ನಾನು ಅವನನ್ನ ಕೇಳ್ದೆ ’ಯಾವಾಗ ನೋಡಿದ್ರು ಗಾಳ ಹಾಕ್ಕೊಂಡು ಕೂತಿರ್ತೀಯಲ್ಲ ಏನು ಸಿಗುತ್ತೆ ಅದ್ರಿಂದ?’ ಅಂತ. ಅದಕ್ಕೆ ಅವನು ಹೇಳ್ದ, ’ನಿನಗೆ ಗೊತ್ತಿಲ್ಲ. ಅದನ್ನ ನೋಡ್ತಾ ಇದ್ರೆ ಇಡೀ ಮೀನಿನ ಪ್ರಪಂಚಾನೆ ಅರ್ಥ ಆಗುತ್ತೆ. ನೀನು ಒಂದ್ಸಾರ್ತಿ ಗಾಳ ಹಾಕ್ಕೊಂಡು ಕೂತ್ಕೊ ನಿನಗೂ ಆ ಅನುಭವ ಏನು ಅಂತ ಅರ್ಥ ಆಗುತ್ತೆ’ ಅಂತ. ಹಾಗೆ ಅವನು ಮೀನುಗಳ ಜಗತ್ತನ್ನ ಅರ್ಥ ಮಾಡ್ಕೊಳ್ಳೋಕೋಸ್ಕರ ಹಾಗೆ ಕೂರ್ತಿದ್ದ ಅಂತ ನನಗೆ ಗೊತ್ತಾಯ್ತು” ತಾರಿಣಿರವರು ತೇಜಸ್ವಿಯವರ ಫಿಶಿಂಗ್ ಹವ್ಯಾಸದ ಹಿಂದಿನ ತಾವು ಅರ್ಥೈಸಿಕೊಂಡ ಕಾರಣವನ್ನು ಹೇಳಿಕೊಂಡರು. ಹೊರಗೆ ಯಾವುದೊ ಗುಂಪು ಪಟಾಕಿ ಹೊಡೆಯುತ್ತಿದ್ದುದ್ದರಿಂದ ಆ ಶಬ್ದ ಚಿತ್ರೀಕರಣಕ್ಕೆ ಅಡ್ಡಿಯಾಗಬಹುದಾದ್ದರಿಂದ ಈ ಹಂತದಲ್ಲಿ ಹತ್ತು ನಿಮಿಷಗಳ ಕಾಲ ಚಿತ್ರೀಕರಣ ನಿಲ್ಲಿಸಿ ವಿರಾಮ ತೆಗೆದುಕೊಂಡೆವು. ಈ ಅವಧಿಯಲ್ಲಿ ತಾರಿಣಿರವರು ಹೇಳಿದ ಒಂದೊಂದೇ ಸಂಗತಿಗಳನ್ನು ನಾನು ಮೆಲುಕು ಹಾಕುತ್ತಿದ್ದೆ. ತಾರಿಣಿರವರ ಮುಗ್ಧ ಮಾತುಗಳು ಮನಕೆ ಸಂತೋಷ ಉಂಟುಮಾಡುತ್ತಿದ್ದವು. ಚಿತ್ರೀಕರಣ ಮತ್ತೆ ಪ್ರಾರಂಭವಾದಾಗ ತಾರಿಣಿರವರಿಗೆ ತೇಜಸ್ವಿಯವರ ಪ್ರಯೋಗಶೀಲತೆಯ ಕುರಿತು ಮಾತನಾಡುವಂತೆ ವಿನಂತಿಸಿದೆ. ಅವರು ಆ ಕುರಿತು ಮಾತು ಪ್ರಾರಂಭಿಸಿದರು,
ಪ್ರಯೋಗಶೀಲತೆಯೇ ಪ್ರಾಣ
“ಚಿಕ್ಕಂದಿನಲ್ಲೇ ನೋಡ್ತಿದ್ದೆ, ಏನೋ ಬಿಚ್ಚೋನು, ಹಾಕೋನು. ಒಂದ್ಸಲ ನೋಡಿದ್ರೆ ಓದಕ್ಕೆ ಹೆಲ್ಪ್ ಆಗ್ಲಿ ಅಂತ ಕೊಟ್ಟಿದ್ದ ಗಡಿಯಾರ ಒಂದು ಸಂಪೂರ್ಣವಾಗಿ ಬಿಚ್ಕೊಂಡು ಕೂತಿತ್ತು. ಅದು ನಮ್ಮ ತಂದೆಯವರದ್ದು. ’ಇದೇನೊ ಹೀಗೆಲ್ಲ ಆಗೋಗಿದೆ?’ ಅಂತ ಕೇಳಿದ್ರೆ ’ನಾನೇ ಬಿಚ್ಚಿದೆ! ಅದು ಹೇಗೆ ಕೆಲಸ ಮಾಡುತ್ತೆ ನೋಡೋಣ ಅಂತ’ ಅಂತ ಹೇಳ್ದ. ಆಮೇಲೆ ಅವನೇ ಅದನ್ನ ಸರಿ ಮಾಡಿದ. ಮನೆನಲ್ಲಿ ಏನಾದ್ರು ದೀಪದ ಸ್ವಿಚ್ ಹೋಗಿದ್ರೆ ಹಾಕೋನು, ರಿಪೇರಿ ಮಾಡೋನು. ಅದ್ರಿಂದ ಕೆಲವು ಸಲ ತೊಂದರೇನೂ ಆಗ್ತಾ ಇತ್ತು. ಒಂದ್ಸಾರ್ತಿ ಫ್ರಿಡ್ಜ್ ಕೆಟ್ಟು ಹೋಗಿತ್ತು. ಇವನು ನಾನು ಸರಿ ಮಾಡ್ತೀನಿ ಅಂತ ಬಂದು ಆ ವೈರ್ ಎಲ್ಲಾ ಸಿಕ್ಕಾಪಟ್ಟೆ ಎಳೆದು ಹಾಕಿಬಿಟ್ಟು ಸ್ವಲ್ಪ ಹಾಳಾಗಿದ್ದಿದ್ದು ಅದು ಪೂರ್ತಿ ಹಾಳಾಗೋಯ್ತು. ಅದಕ್ಕೆ ಅಪ್ಪ ಅಮ್ಮ ’ನೀನು ಏನೂ ಮುಟ್ಟಬೇಡ. ನೀನು ಕೈ ಇಟ್ರೆ ಎಲ್ಲಾ ಹಾಳಾಗುತ್ತೆ’ ಅಂತ ಬೈತಿದ್ರು. ಆಮೇಲೆ ಅವನು ಸ್ಕೂಟ್ರು, ಕಾರು, ಜೀಪನೆಲ್ಲಾ ಎಷ್ಟು ಚೆನ್ನಾಗಿ ಬಿಚ್ಚಿ ರಿಪೇರಿ ಮಾಡೋನು ಅಂದ್ರೆ ನಮಗೆ ಆಶ್ಚರ್ಯ ಆಗೋದು ’ಇವನು ಅದು ಹ್ಯಾಗೆ ಕಲಿತ? ಎಲ್ಲಿ ಇದನೆಲ್ಲಾ ಕಲಿತ ಅಂತ.
ಒಂದಿನ ಇಡೀ ಸ್ಕೂಟ್ರನ್ನ ಸಂಪೂರ್ಣವಾಗಿ ಬಿಚ್ಚಿ ಅದನ್ನಎರಡು ಬ್ಯಾಗ್ ತುಂಬಾ ತುಂಬಿಟ್ಟಿದ್ದ. ನಮ್ಮ ತಂದೆ ನೋಡಿ ಕೇಳ್ದಾಗ ಅದೇನೊ ರಿಬೋರ್ ಮಾಡ್ಬೇಕು, ರಿಪೇರಿ ಮಾಡ್ಬೇಕು ಅದು ಇದು ಅಂತ ಏನೇನೊ ಹೇಳ್ದ. ಆಮೇಲೆ ಅದನ್ನ ಜೋಡಿಸ್ಬೇಕಾದ್ರೆ ಎಲ್ಲಿ ನನ್ನನ್ನ ಕರೆದು ಕೆಲಸ ಕೊಟ್ಬಿಡ್ತಾನೊ ಅಂತ ನಾನು ಅವನ ಕಣ್ಣುತಪ್ಪಿಸಿ ಓಡಾತಿದ್ದೆ. ಆಗ ಅವನು ರಾಜೇಶ್ವರಿನ ಕರೆದು ಹಿಡ್ಕೊಳ್ಳೋಕೆ ಹೇಳ್ದ. ಅವರು ತುಂಬಾ ಹೊತ್ತು ಹಿಡ್ಕೊಂಡ್ರು. ಆಮೇಲೆ ರಾಜೇಶ್ವರಿಗೆ ಬೋರಾಯ್ತು ಅಂತ ಕಾಣುತ್ತೆ ಆಮೇಲೆ ನನ್ನನ್ನ ಕರೆದ ’ಬಾ ಇದನ್ನ ಹಿಡ್ಕೊ ಸ್ವಲ್ಪ’ ಅಂತ. ನಾನು ಅವನು ಏನು ಮಾಡ್ತಿದಾನೆ ಅಂತ ಕುತೂಹಲದಿಂದ ನೋಡ್ತಾ ಅವನು ಹೇಳಿದ ಹಾಗೆ ಅವನಿಗೆ ಸಹಾಯ ಮಾಡ್ತಿದ್ದೆ. ಅವನು ‘ಅದನ್ನ ಹಿಡ್ಕೊ, ಇದನ್ನ ಹಿಡ್ಕೊ, ಅದನ್ನೆತ್ತು, ಇದನ್ನ ಬಗ್ಗಿಸು’ ಅಂತ ಹೇಳಿ ಹೇಳಿ ಅಂತು ಕೊನೆಗೆ ಆ ಸ್ಕೂಟ್ರನ್ನ ಸಂಪೂರ್ಣವಾಗಿ ಫಿಟ್ ಮಾಡಿ ನಿಲ್ಲಿಸಿ ನಮ್ಮ ತಂದೇನ ಕರೆದು ’ಅಣ್ಣ ಇಲ್ಲಿ ನೋಡಿ ನಮ್ಮ ಸ್ಕೂಟ್ರು ಹೇಗೆ ಹೊಸದರ ಥರ ಕಾಣ್ತಾ ಇದೆ’ ಅಂತ ತೋರಿಸಿದ್ದ. ನಮ್ಮ ತಂದೆಗೆ ಅದನ್ನ ನಂಬೋಕೆ ಆಗ್ಲಿಲ್ಲ. ಅವರು ಇವನು ಇಡೀ ಸ್ಕೂಟ್ರು ಬಿಚ್ಚಿ ಮೂಟೆ ಕಟ್ಟಿ ಇಟ್ಟಿದ್ದು ನೋಡಿ ’ಇನ್ನು ಸ್ಕೂಟ್ರನ್ನ ಮರೆತುಬಿಡೋದು ಓಳ್ಳೇದು’ ಅಂದ್ಕೊಂಡಿದ್ರು. ಹಾಗೆ ಅವನು ಹಿಡಿದ ಕೆಲ್ಸ ಸಾಧಿಸೊವರೆಗೂ ಬಿಡ್ತಿರ್ಲಿಲ್ಲ.
ಆಮೇಲೆ ಇನ್ನೊಂದ್ಸಾರ್ತಿ ನಮ್ಮ ತಂದೆ ಕಾರು ಏನೊ ಸಮಸ್ಯೆ ಆದಾಗ ಅವನೇ ಅದನ್ನ ಬಿಚ್ಚಿ ಕೆಳಗೆ ಅದೆಂತದೊ ಹಾಕ್ಕೊಂಡು ಮಲ್ಕೊಂಡು ರಿಪೇರಿ ಮಾಡಿ ನಮಗೂ ತೋರಿಸ್ತಿದ್ದ, ’ನೋಡಿ ಇದು ಹೀಗೀಗೆ ಈ ಥರಕ್ಕೆ ಈ ಥರ ಆಗಿದೆ’ ಅಂತ. ಹಾಗೆ ರಿಪೇರಿ ಮಾಡೋವಾಗ್ಲಂತು ಅವನ ಮುಖದಿಂದ ಒಂದೇ ಸಮ ಧಾರಾಕಾರವಾಗಿ ಬೆವರು ಇಳಿದು ಹೊಗ್ತಿದ್ರು ಅವನು ತಲೆ ಕೆಡಿಸ್ಕೊಳ್ಳದೆ ಅವನ ಪಾಡಿಗೆ ಅವನು ರಿಪೇರಿ ಮಾಡ್ತಿರ್ತಿದ್ದ. ಆಗ ನಾನು ಅವನನ್ನ ಕೇಳ್ದೆ ’ಇದೆಲ್ಲಾ ಎಲ್ಲಿ ಕಲಿತೆ ನೀನು?’ ಅಂತ. ಅದಕ್ಕೆ ಅವನಂದ ’ನೋಡು ಇದೆಲ್ಲ ಏನು ಅಂತಬ್ರಹ್ಮ ವಿದ್ಯೆ ಅಲ್ಲ. ಒಂದ್ಸಾರಿ ಗಟ್ಟಿಮನಸ್ಸು ಮಾಡಿ ಕೈಹಾಕಿದ್ರೆ ಮುಗೀತು. ತನ್ನಷ್ಟಕ್ಕೆ ತಾನೆ ಅರ್ಥ ಆಗ್ತಾ ಹೋಗುತ್ತೆ. ನೀನು ಒಂದು ಕೆಲ್ಸ ಮಾಡು, ಮೊದಲು ಯಾವುದಾದ್ರೂ ಸೈಕಲ್ ನ ಟೈರ್ ಬಿಚ್ಚಿಬಿಡು. ಆಮೇಲೆ ಅದನ್ನ ಹೇಗೆ ಬಿಚ್ಚಿದೆಯೊ ಹಾಗೆ ಜೋಡ್ಸು. ನಿನಗೇ ಅರ್ಥ ಆಗುತ್ತೆ ಆ ಪ್ರೊಸೆಸ್ ಹೇಗೆ ಅಂತ’ ಅಂತ ಹೇಳಿದ್ದ. ಆದ್ರೆ ಅವನು ಹೇಳಿದನ್ನ ಕೇಳಿಸಿಕೊಂಡನೇ ಹೊರತು ಯಾವುದಕ್ಕೂ ಕೈ ಹಾಕೋದಿಕ್ಕೆ ಆಗ್ಲಿಲ್ಲ ನನಗೆ…” ಹೀಗೆ ತಾರಿಣಿರವರು ಅಣ್ಣನೊಂದಿಗಿನ ಒಡನಾಟದ ಮಧುರ ನೆನಪುಗಳನ್ನು ಮೆಲುಕು ಹಾಕುತ್ತ ಆ ನೆನಪುಗಳ ರುಚಿಯನ್ನು ಸವಿಯುತ್ತಾ ಹೋದರು.
ಆ ಸಂದರ್ಭದಲ್ಲಿ ತಾರಿಣಿರವರು ಅಕ್ಷರಶಃ ಮಗುವಿನಂತಾಗಿ ಆ ದಿನಗಳಿಗೆ ಜಾರಿದ್ದರು.ಅದು ಅವರ ಮಾತಿನಲ್ಲಿ, ಕಣ್ಣಿನಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿತ್ತು.
ಮುಂದೆ ನಾನು ಯಾವ ಪ್ರಶ್ನೆಯನ್ನೇ ಕೇಳದಿದ್ದರೂ ಅವರು ತಮಗೆ ಜ್ಞಾಪಕ ಬಂದ ಅಣ್ಣ ತೇಜಸ್ವಿಯೊಂದಿಗೆ ಕಳೆದ ಕೆಲ ಸ್ವಾರಸ್ಯಕರ ಘಟನೆಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು,
ಅಮ್ಮನ ಮುದ್ದು ಮಗ ತೇಜಸ್ವಿ
ತೇಜಸ್ವಿಗೆ ತುಂಬಾ ಬೇಗ ಸಿಟ್ಟು ಬಂದು ಬಿಡೋದು.ಅದಕ್ಕೆ ಸಂಬಂಧಪಟ್ಟ ಒಂದು ಘಟನೆ ನೆನಪಿದೆ. ಆಗ ತೇಜಸ್ವಿ ಕಾಲೇಜಿಗೆ ಹೋಗ್ತಿದ್ದ. ಆ ಸಂದರ್ಭದಲ್ಲಿಅವನು ಕಾಲೇಜಿಗೆ ಹೋಗ್ಬೇಕಾದ್ರೆ ನಮ್ಮಮ್ಮ ಅವನಿಗೆ ಪ್ರತಿದಿನ ಹಾಲು ಕೊಡೋರು ಕುಡುಕೊಂಡು ಹೋಗು ಅಂತ. ಇವನು ಹಾಲು ಕುಡಿದುಬಿಟ್ಟು ಆ ಲೋಟಾನ ಮನೆಲಿದ್ದ ಕಬ್ಬಿಣದ ಬೀರು ಮೇಲೆ ಇಟ್ಟು ಹೋಗ್ಬಿಡ್ತಿದ್ದ. ಇವನು ಎತ್ತರ ಇದ್ನಲ್ಲ ಹಾಗಾಗಿ ಆ ಕಬ್ಬಿಣದ ಬೀರು ಮೇಲೆ ಲೋಟ ಇಟ್ಟು ಹೋಗ್ಬಿಡ್ತಿದ್ದ. ಆದರೆ ನಾನಾಗ್ಲಿ ಅಮ್ಮ ಆಗ್ಲಿ ಅಷ್ಟು ಎತ್ತರ ಇಲ್ಲದಿದ್ದರಿಂದ ಲೋಟ ಎತ್ತುಕೊಬೇಕು ಅಂದ್ರೆ ಅದು ಕೈಗೆಟುಕ್ತಿರಲಿಲ್ಲ. ಆಗ ಸ್ಟೂಲ್ ಹಾಕ್ಕೊಂಡು ಮೇಲೆ ಹತ್ತಿ ಆ ಲೋಟ ಎತ್ತುಕೊಬೇಕಿತ್ತು. ಅವನೇನು ಬೇಕು ಬೇಕಂತ ಏನು ಹಾಗೆ ಮಾಡ್ತಿರ್ಲಿಲ್ಲ. ಕಾಲೇಜಿಗೆ ಹೋಗೊ ಆತುರದಲ್ಲೊ ಅಥವ ಬಗ್ಗಿ ಯಾರು ಲೋಟ ಕೆಳಗಿಡ್ತಾರೆ ಅಂತಲೊ ಏನೊ ಹಾಗೆ ಮಾಡ್ತಿದ್ದ. ಪ್ರತಿದಿನ ಹೀಗೇ ನಡಿಯೋದು.ಅಮ್ಮ ತುಂಬಾ ಸಾರಿ ’ಲೋಟ ಮೇಲಿಟ್ಟು ಹೋಗ್ಬೇಡ’ ಅಂತ ಹೇಳಿದ್ರು. ಆದರೆ ಇವನು ಮಾತ್ರ ಎಷ್ಟು ಹೇಳಿದ್ರು ಹಾಗೆ ಮಾಡ್ತಿದ್ದ. ಒಂದಿನ ಯಥಾಪ್ರಕಾರ ಇವನು ಹಾಲುಕುಡಿದು ಲೋಟ ಬೀರು ಮೇಲಿಟ್ಟು ಕಾಲೇಜಿಗೆ ಹೋಗ್ತೀನಿ ಅಂತ ಹೇಳಿ ಹೋದ. ಆಗ ಅಪ್ಪ ವೈಸ್ ಛಾನ್ಸೆಲರ್ ಆಗಿದ್ರು. ಹಾಗಾಗಿ ಮನೆನಲ್ಲಿ ಕೆಲಸದವರು ಇದ್ರು. ಅಮ್ಮ ಅವ್ರಲ್ಲಿ ಒಬ್ರನ್ನ ಕರೆದು ’ಹೋಗಿ ತೇಜಸ್ವಿನ ಅರ್ಜೆಂಟಾಗಿ ಬರ್ಬೇಕಂತೆ ಅಂತ ಹೇಳಿ ಕರ್ಕೊಂಡ್ ಬಾ’ ಅಂತ ಹೇಳಿ ಕಳ್ಸಿದ್ರು.ಅಷ್ಟೊತ್ತಿಗಾಗ್ಲೆ ತೇಜಸ್ವಿ ಹೋಗಿ ಬಹಳ ಹೊತ್ತಾಗಿತ್ತು.ಆ ಕೆಲಸದವರು ಹೋಗಿ ಇವನನ್ನ ಕರ್ಕೊಂಡ್ ಬಂದ್ರು. ಬಂದೋನು ಹೊರಗಡೆನೇ ನಿಂತ್ಕೊಂಡು ’ಏನಮ್ಮ ಕರೆದಿದ್ದು?…ಲೇಟಾಯ್ತು ಹೊರಡ್ಬೇಕು…ಬೇಗ ಹೇಳು’ ಅಂತ ಕೂಗ್ತಿದ್ದ. ಅದಕ್ಕೆ ಅಮ್ಮ ’ಒಂದ್ನಿಮಿಷ ಒಳಗಡೆ ಬಂದು ಹೋಗು’ ಅಂದ್ರು. ಅವನು ಬಂದು ’ಏನು?’ ಅಂದಾಗ ಅಮ್ಮ ’ಬೀರು ಮೇಲಿಟ್ಟಿರೊ ಲೋಟ ಎತ್ತಿಕೊಟ್ಟು ಹೋಗು’ ಅಂದ್ರು. ನಾನಂದುಕೊಂಡೆ ’ಈಗ ಇವನು ಗ್ಯಾರಂಟಿ ಕೋಪ ಮಾಡ್ಕೊಂಡು ಕಿರಚಾಡ್ತಾನೆ, ಅಷ್ಟು ದೂರದಿಂದ ಇದಕ್ಕೋಸ್ಕರ ಕರೆಸಿದ್ದ ಅಂತ’ ಅಂತ ಅಂದ್ಕೊಂಡ್ರೆ ಅವನು ಕೂಲಾಗಿ ’ಅಯ್ಯೊ ಇಷ್ಟೇನ…? ಇಷ್ಟಕ್ಕೆ ಬರೊಕೆ ಹೇಳಿದ್ದ?’ ಅಂತ ಗೊಣಗಿಕೊಂಡು ಲೋಟ ಎತ್ತಿಕೊಟ್ಟು ಏನೂ ಮಾತಾಡದೆ ಹೋದ. ನನಗಂತೂ ನಗು ತಡೆಯೋಕಾಗ್ಲಿಲ್ಲ. ಅವನು ಹೋದ್ಮೇಲೆ ಅಮ್ಮ ನಾನು ಇಬ್ರೂ ಬಿದ್ದು ಬಿದ್ದು ನಕ್ಕಿದಾಯ್ತು.ಅದಾದ್ಮೇಲೆ ಅವನು ಮತ್ತೆ ಯಾವತ್ತೂ ಲೋಟ ಬೀರು ಮೇಲೆ ಇಡಲಿಲ್ಲ…” ತಾರಿಣಿರವರು ಆ ಘಟನೆಯನ್ನು ನೆನಪು ಮಾಡಿಕೊಂಡು ನಗಲಾರಂಭಿಸಿದರು.ನಾವು ಸಹ ಅವರ ನಗುವಿನಲ್ಲಿ ಭಾಗಿಗಳಾದೆವು.
ನಂತರ ಮತ್ತೊಂದು ಸ್ವಾರಸ್ಯಕರ ಘಟನೆ ಅವರ ಸ್ಮೃತಿಕೋಶದಿಂದ ಹೊರಬರಲಾರಂಭಿಸಿತು.
ಕುಕಿಂಗ್ ನಲ್ಲೂ Experiment!
“ತೇಜಸ್ವಿಗೆ ಹೊಸಹೊಸದು ಏನಾದರೂ experiment ಮಾಡದೇ ಹೋದ್ರೆ ಸಮಾಧಾನನೇ ಆಗ್ತಿರ್ಲಿಲ್ಲ. ಕಡೆಗೆ ಅದು ಯಾವ ಹಂತಕ್ಕೆ ಹೋಗಿಬಿಡೋದು ಅಂದ್ರೆ ಅಡಿಗೆನಲ್ಲೂ ಪ್ರಯೋಗ ಮಾಡ್ತೀನಿ ಅಂತ ಹೊರಟುಬಿಡ್ತಿದ್ದ. ಒಂದ್ಸಾರಿ ಏನಾಯ್ತು ಇವನ ಕ್ಲೋಸ್ ಫ್ರೆಂಡ್ ಶ್ಯಾಂಸುಂದರ್ ಅಂತ ಒಬ್ರು ಇದ್ರು, ಅವ್ರನ್ನ ರಾತ್ರಿ ಮನೆಗೆ ಕರ್ಕೊಂಡು ಬಂದಿದ್ದ. ಆಗ ಇವನು ಸುಮ್ನಿರದೇ ಯಾವುದೊ ಅಡಿಗೆ ಬುಕ್ ತಗೊಂಡು ಬಂದು ಅದ್ರಲ್ಲಿ ಬರೆದಿದ್ದ ಯಾವುದೊ ಜ್ಯೂಸ್ ಮಾಡ್ತೀನಿ ಅಂತ ಅಡಿಗೆ ಮನೇಲಿ ದಡಬಡ ಅಂತ ಸದ್ದು ಮಾಡ್ಕೊಂಡು ಓಡಾಡ್ತಿದ್ದ. ಅವನ ಫ್ರೆಂಡಿಗೆ ಟ್ರೀಟ್ ಕೊಡ್ಬೇಕು ಅಂತೇನೊ ಇರಬೇಕು! ಆಗ ಅವನು ಆ ಅಡಿಗೆ ಪುಸ್ತಕದಲ್ಲಿ ಬರೆದಿದ್ದ ಹಾಗೆ ಅದೇನೊ ಕಂಡೆನ್ಸ್ಡ್ ಮಿಲ್ಕ್ ಅಂತೆ, ಸಕ್ಕರೆ ಅಂತೆ ಇನ್ನೂ ಏನೇನೋ ಎಲ್ಲ ಅದೂ ಆಪುಸ್ತಕದಲ್ಲಿ ಹೇಳಿರೊ ಪ್ರಮಾಣದಲ್ಲಿ ಹಾಕಿ ಯಾವುದೊ ಜ್ಯೂಸ್ ಮಾಡೋಕೆ ಟ್ರೈ ಮಾಡ್ತಿದ್ದ.ಅದು ನೋಡಿದ್ರೆ ಕಡೆಗೆಹತ್ತು ದೊಡ್ಡ ಲೋಟದಷ್ಟು ಜ್ಯೂಸ್ ಆಗ್ಬಿಟ್ಟಿತ್ತು. ಆಮೇಲೆ ಇವನು ಒಂದು ದೊಡ್ಡ ಲೋಟದಲ್ಲಿ ಆ ಜ್ಯೂಸ್ ಹಾಕ್ಕೊಂಡು ಹೋಗಿ ಶ್ಯಾಂಸುಂದರ್ ಗೆ ಕೊಟ್ಟ. ಅವರು ಆ ಲೋಟದ Sizeನೋಡಿ ಗಾಬರಿಯಾಗಿ “ಅಯ್ಯೊ ಏನ್ರಿ ಇದು?ಇಷ್ಟು ಜ್ಯೂಸ್ ಹೇಗ್ರಿ ಕುಡಿಯೋದು?’ ಅಂತಿರ್ಬೇಕಾದ್ರೆ ಇವನು ’ಅಯ್ಯೊ, ಮಾರಾಯ್ರ ಗಟ್ಟಿಯಾಗಿ ಮಾತಾಡ್ಬೇಡ್ರಿ.ನಿಮ್ಮ ಕಾಲಿಗೆ ಬೀಳ್ತೀನಿ, ಹೇಗಾದ್ರೂ ಕುಡಿದು ಮುಗಿಸ್ರಿ.ಇನ್ನೂ ಹತ್ತು ಲೋಟ ಇದೆ.ಗೊತ್ತಾದ್ರೆ ನಮ್ಮಮ್ಮ ಬೈತಾರೆ…’ ಅಂತಿದ್ದ. ಅದು ನನ್ನ ರೂಮಿಗೆ ಚೆನ್ನಾಗಿ ಕೇಳಿಸ್ತಾ ಇತ್ತು.ನಾನು ಅದನೆಲ್ಲಾ ಕೇಳಿಸ್ಕೊಂಡು ನಕ್ಕೊಂಡು ಇರ್ತಿದ್ದೆ.ಹಾಗೆಲ್ಲ ಅವನು ಪ್ರಯೋಗ ಮಾಡೋಕೆ ತುದಿಗಾಲಲ್ಲಿ ನಿಂತಿರ್ತಿದ್ದ” ಅಣ್ಣನ ನೆನಪುಗಳು ತಾರಿಣಿರವರ ನಗುವನ್ನು ಹೆಚ್ಚಿಸುತ್ತಾ ಹೋದವು.ಹಾಗೆ ಕೆಲ ಹೊತ್ತು ನಗುತ್ತಿದ್ದ ತಾರಿಣಿರವರು ಇದ್ದಕ್ಕಿದ್ದಂತೆ ಮೌನವಾದರು. ನಾನು ಯಾಕೆ ಹೀಗೆ ದಿಢೀರ್ಎಂದು ಮೌನವಾದರು ಎಂದು ಯೋಚಿಸುತ್ತಿರಬೇಕಾದರೆ ಅವರು ತೇಜಸ್ವಿಯ ಕಡೆಯ ದಿನಗಳ ಬಗ್ಗೆ ಮಾತನಾಡಲಾರಂಭಿಸಿದರು,
ನೀನು ಮಾತಾಡ್ತಾ ಇದ್ರೆ ಅಪ್ಪ ಅಮ್ಮನೇ ಮಾತಾಡಿದ ಹಾಗಾಗುತ್ತೆ
“ಅವನ ಕಡೆ ದಿನಗಳಲ್ಲಿ ನಾನು ಶಿಮೊಗ್ಗದಲ್ಲಿದ್ದಾಗ ಅವನು ಅಲ್ಲಿಗೆ ಎರಡ್ಮೂರು ಸಾರ್ತಿ ಬಂದಿದ್ದ. ಆಗ್ಲೇ ಅವನ ಆರೋಗ್ಯ ಏರುಪೇರಾಗಿತ್ತು.ಎಷ್ಟು ಅವನಿಗೆ ಹೇಳ್ದೆ ’ಮೈಸೂರಿಗೆಹೋಗೋ ಆಸ್ಪತ್ರೆಗೆ ತೋರಿಸ್ಕೊಳ್ಳೊ’ ಅಂತ. ಅವನಂದ ’ಹೂಂ ನೀನು ಬಾರೆ ಮೈಸೂರಿಗೆ. ಆಮೇಲೆ ನಾನು ಮೈಸೂರಿಗೆ ಬರ್ತೀನಿ’ ಅಂದಿದ್ದ. ಹಾಗೆ ಆಮೇಲೆ ನಾವು ಚಿದಾನಂದರಿಗೆ ವೈಸ್ ಛಾನ್ಸಲರ್ ಕೆಲಸದ ಅವಧಿ ಮುಗಿದ ಮೇಲೆ ಮೈಸೂರಿಗೆ ವಾಪಸ್ ಬಂದ್ಮೇಲೆ ಅವನಿಗೆ ಉದಯರವಿ ಮನೆಯಿಂದ ಫೋನ್ ಮಾಡಿದ್ದೆ. ಅವನು ಫೋನ್ ಎತ್ತುಕೊಂಡು ಹೇಳ್ದ ’ಅಬ್ಬ, ನೀನು ಮಾತಾಡ್ತಾ ಇದ್ರೆ ಆ ಮನೆಯಿಂದ ಅಪ್ಪ ಅಮ್ಮ ಇಬ್ರೂ ಮಾತಾಡಿದ ಹಂಗಾಗುತ್ತೆ.ನೀನು ಅಲ್ಲೇ ಇರೆ.ಆ ಮನೆ ಬಿಟ್ಟು ಎಲ್ಲೂ ಹೋಗ್ಬೇಡ’ ಅಂದಿದ್ದ. ಅಷ್ಟೊತ್ತಿಗಾಗಲೆ ಅಪ್ಪ ಅಮ್ಮ ಇಬ್ರೂ ತೀರ್ಕೊಂಡಿದ್ರು.ಹಾಗೆ ಅವನಿಗೆ ಅಷ್ಟು ಆ ಮನೆ ಬಗ್ಗೆ, ಅಪ್ಪ ಅಮ್ಮನ ಬಗ್ಗೆ ಪ್ರೀತಿ ಇತ್ತು.ನಾನು ಅದೇ ಮನೆನಲ್ಲಿ ಇರಬೇಕು ಅಂತಲೂ ಇತ್ತು.ಆಮೇಲೆ ಅವನು ಮೈಸೂರಿಗೆ ಬಂದ, ಆಸ್ಪತ್ರೆಗೆ ತೋರಿಸ್ಕೊಂಡು ಹುಷಾರೂಆಗಿದ್ದ. ಅವನು ಆಸ್ಪತ್ರೆಗೆ ತೋರಿಸ್ಕೊಂಡು ವಾಪಸ್ ಹೋಗೋಕೆ ಎರಡು ದಿನ ಮುಂಚೆ ನಾನು ಶಿಮೊಗ್ಗಕ್ಕೆ ಹೋಗ್ಬೇಕಾಗಿತ್ತು.ಅದಕ್ಕೆ ಅವನಂದ ’ನೀನು ಶಿಮೊಗ್ಗಕ್ಕೆ ಹೋಗೋದಾದ್ರೆ ಹಾಗೆ ಮೂಡಿಗೆರೆಗೂ ಬಂದು ಹೋಗು’ ಅಂದ. ನಾನು ಅವನು ಇಷ್ಟು ಹೇಳ್ತಿದ್ದಾನಲ್ಲ ಅಂತ ಹೋಗಿದ್ದೆ.
ಜೊತೆಗೆ ಇನ್ನೊಂದೇನಾಗಿತ್ತು ಅಂದ್ರೆ ನಮ್ಮತ್ರ ಒಂದು ಹಳೆ ಕಾರಿತ್ತು.ಅದು ಸರಿಯಾಗಿ ಕೆಲಸ ಮಾಡ್ತಿರ್ಲಿಲ್ಲ. ಅವನು ಅದನ್ನ ಮಾರಿ ಬೇರೆ ತಗೊ ಬೇರೆ ತಗೊ ಅಂತ ಹೇಳ್ತಿರ್ತಿದ್ದ. ಕಡೆಗೆ ನಾವು ಅದನ್ನ ಮಾರಿ ಹೊಸ ಕಾರ್ ಬುಕ್ ಮಾಡಿದ್ವಿ.ಆದರೆ ಅದಿನ್ನೂ ಬಂದಿರಲಿಲ್ಲ. ಅದಕ್ಕೆ ನಾನು ಬಾಡಿಗೆ ಕಾರ್ ಮಾಡ್ಕೊಂಡು ಹೋಗಿದ್ದೆ ಮೂಡಿಗೆರೆಗೆ.ಅದನ್ನ ನೋಡಿ ಅವನು ’ಇದೇನೆ ಇದು?ಹೊಸ ಕಾರಿನಲ್ಲಿ ಬರ್ತೀಯ ಅಂತಿದ್ರೆ ಮತ್ತೆ ಬಾಡಿಗೆ ಕಾರೇ ಮಾಡ್ಕೊಂಡು ಬಂದಿದೀಯಲ್ಲ’ ಅಂದ. ಆಮೇಲೆ ಅವತ್ತು ಒಂದು ರಾತ್ರಿ ಒಂದು ಹಗಲು ಅವನ ತೋಟದಲ್ಲೇ ಇದ್ದೆ. ಅವತ್ತು ರಾತ್ರಿ ಅಂತು ಅವನು ಅದ್ಯಾಕೊ ಗೊತ್ತಿಲ್ಲ ರಾತ್ರಿ ತುಂಬಾ ಹೊತ್ತಿನವರೆಗೂ ನನ್ನ ಜೊತೆ ಮಾತಾಡ್ತಾ ಕೂತಿದ್ದ. ನಮ್ಮ ಬಾಲ್ಯದ ದಿನಗಳನೆಲ್ಲ ತುಂಬ ನೆನಪು ಮಾಡ್ಕೊಂಡು ಸಂತೋಷಪಡ್ತಿದ್ದ. ನಾನು ’ಸರಿ ಹೋಗಿ ಮಲ್ಕೊಳಪ್ಪ ಲೇಟಾಯ್ತು’ ಅಂತ ಹೇಳ್ದೆ. ಮಾರನೇದಿನ ನಾನು ಮೈಸೂರಿಗೆ ವಾಪಸ್ ಬಂದೆ. ಹಿಂದೇನೇ ಸುದ್ದಿ ಬಂತು ನಮ್ಮಣ್ಣ ಹೋಗ್ಬಿಟ್ಟ ಅಂತ…ಅಷ್ಟೆ ಎಲ್ಲ ಮುಗಿದು ಹೋಯ್ತು…” …………………………..”
ಉದಯರವಿ ಮನೆಯ ವಿಶಾಲವಾದ ಹಾಲಿನಲ್ಲಿ ಸುಧೀರ್ಘವಾದದ್ದೊಂದು ಮೌನ, ಸೂಜಿಬಿದ್ದರೂ ಕೇಳಿಸುವಷ್ಟೂ ನಿಶಬ್ದ. ಕೆಲ ಹೊತ್ತಿನ ನಂತರ ತುಂಬಿಬರುತ್ತಿದ್ದ ಕಣ್ಣುಗಳನ್ನು ಉಟ್ಟಿದ್ದ ಸೀರೆಯಲ್ಲಿ ಒರೆಸಿಕೊಂಡ ತಾರಿಣಿರವರು ’ಅಷ್ಟೆ ಇನ್ನೇನು ಹೇಳೊಕ್ಕಾಗುತ್ತೆ? ಏನೂ ಹೇಳಕ್ಕಾಗೋದಿಲ್ಲ…ಮುಗೀತು ಅಷ್ಟೆ…!’ ಎಂದು ಹೇಳಿ ಅಣ್ಣ ತೇಜಸ್ವಿಯ ನೆನಪುಗಳಿಗೆ ಪೂರ್ಣವಿರಾಮ ಹಾಕಿದರು.ನಮ್ಮ ಹುಡುಗನೊಬ್ಬ ಅವರಿಗೆ ಹಾಕಿದ್ದ ಮೈಕ್ ಬಿಚ್ಚಿಕೊಳ್ಳಲು ಎದ್ದ.
(ಹುಡುಕಾಟ ಮುಂದುವರೆಯುವುದು…)
– ಲೇಖನ ಹೃದಯ ಸ್ಪರ್ಶಿಯಾಗಿದೆ, ಓದುತ್ತಿದ್ದ ಹಾಗೆ ತೇಜಸ್ವಿ ಮತ್ತು ಕಡಿದಾಳ ಶಾಮಣ್ಣ ಅವರು ತಮ್ಮ ಸಿತಾರ ಕಲಿಕೆಯ ಬಗೆಗೆ ಬರೆದ ಬರವಣಿಗೆ ನೆನಪು ಬಂತು. ಲೇಖನದ ಕೊನೆಗೆ ಬರುತ್ತಿದ್ದಂತೆ ಏಕೋ ಮನಸು ಭಾರವಾಯಿತು.
ಲೇಖನ ಮನಮುಟ್ಟುವಂತಿದೆ
ಧನ್ಯವಾದಗಳು
ತೇಜಸ್ವಿ ಇನ್ನೂ ಸ್ವಲ್ಪ ಕಾಲವಾದ್ರು ಬದುಕಬೇಕಿತ್ತು