ತೇಜಸ್ವಿಯವರ ಮೊದಲ ಭೇಟಿ, ನಂತರದ ಕಾಲೇಜು ದಿನಗಳ ಒಡನಾಟ, ನವ್ಯ ಕಾವ್ಯದ ಅಲೆ ಇತ್ಯಾದಿ ವಿಚಾರಗಳ ಕುರಿತು ತಮ್ಮ ನೆನಪುಗಳನ್ನು ಹಂಚಿಕೊಂಡ ನಂತರ ಜಿ.ಹೆಚ್ ನಾಯಕರ ಮಾತು ಹೊರಳಿದ್ದು ತೇಜಸ್ವಿ ಮೂಡಿಗೆರೆಗೆ ಬಂದ ನಂತರದ ದಿನಗಳ ಬಗ್ಗೆ. ತೇಜಸ್ವಿಯವರು ತಮ್ಮ ಸ್ವತಂತ್ರ, ಸ್ವಾಭಿಮಾನಕ್ಕೆ ಅಡ್ಡಿಯಾಗಬಹುದಾಗಿದ್ದ ಹಲವು ಸಂಗತಿಗಳಿಂದಾಗಿ (!!!) ಮೈಸೂರು ಬಿಟ್ಟು ದೂರದ ಮಲೆನಾಡಿನ ಮೂಲೆಯಲ್ಲಿ ಕೃಷಿ ಮಾಡಿಕೊಂಡು ಸ್ವತಂತ್ರವಾಗಿ ಬದುಕಲು ನಿರ್ಧರಿಸಿದ ಆ ದಿನಗಳ ನೆನಪುಗಳನ್ನು ಸ್ಪಟಿಕ ಶುಭ್ರ ಮನಸ್ಸಿನ ಜಿ.ಹೆಚ್ ನಾಯಕರು ಭಾವುಕರಾಗಿ ನಮ್ಮೊಂದಿಗೆ ಹಂಚಿಕೊಳ್ಳತೊಡಗಿದರು. ಜಿ.ಹೆಚ್ ನಾಯಕರ ಮಾತುಗಳನ್ನು ಅವರ ಮಾತುಗಳಲ್ಲೇ ಕೇಳೋಣ,
“ಬನ್ರಿ ನಿಮಗೊಂದು ಸರ್ಪ್ರೈಸ್ ಕೊಡ್ತೀನಿ…!”
“ತೇಜಸ್ವಿ ಮೂಡಿಗೆರೆಗೆ ಹೋಗಿದ್ದ ಪ್ರಾರಂಭದ ದಿನಗಳವು. ’ಮೂಡಿಗೆರೆ ಹತ್ತಿರದ ಜನ್ನಾಪುರದಲ್ಲಿ ತೋಟ ಮಾಡ್ತಿದ್ದೀನಿ ಕಣ್ರಿ’ ಅಂತ ಅವರೇ ಒಂದ್ಸಾರ್ತಿ ಹೇಳಿದ್ರು. ಆದರೆ ನಾನು ಮೂಡಿಗೆರೆಗೆ ಹೋಗೂ ಇರಲಿಲ್ಲ, ಅವರ ತೋಟ ನೋಡೂ ಇರಲಿಲ್ಲ. ಒಂದ್ಸಾರ್ತಿ ನನ್ನ ಪರಿಚಯಸ್ಥರೊಬ್ಬರು ಮೂಡಿಗೆರೆ ಸ್ಕೂಲ್ ಒಂದ್ರಲ್ಲಿ ಮೇಷ್ಟ್ರಾಗಿದ್ದೊರು ಯಾವುದೊ ಸಮಾರಂಭಕ್ಕೆ ನನ್ನನ್ನ ಮುಖ್ಯ ಅತಿಥಿ ಅಂತ ಕರೆದಿದ್ರು, ನಾನು ಹೋಗಿದ್ದೆ. ಹೋಗಿ ಭಾಷಣ ಮುಗಿಸಿ ಹೊರಟು ನಿಂತಾಗ ನನಗೆ ಅಲ್ಲಿಗೆ ಹೋಗಿದ್ದಕ್ಕೆ ಒಂದು ಪೈಸೆನೂ ಕೊಡೊ ಸೂಚನೆ ಕಾಣಿಸ್ಲಿಲ್ಲ. ಬಾಯಿ ಬಿಟ್ಟು ಹೇಗೆ ಕೇಳೋದು?ಅದು ಅಲ್ಲದೇ ನಾನು ಅಲ್ಲಿಂದ ನೇರವಾಗಿ ನಮ್ಮೂರು ಅಂಕೋಲೆಗೆ ಹೋಗೋನಿದ್ದೆ. ಪ್ಯಾಂಟ್ ಜೇಬಿಗೆ ಕೈ ಹಾಕಿ ಒಳಗೊಳಗೆ ಲೆಕ್ಕ ಮಾಡಿದ್ರೂ ನನ್ನ ಹತ್ರ ಇದ್ದ ಹಣ ಒಂದು ಕಡೆ ಬಸ್ ಚಾರ್ಜಿಗೂ ಸಾಕಾಗ್ತಿರಲಿಲ್ಲ. ನಾನು ಆಗ ಕೆಲಸಕ್ಕೆ ಸೇರಿ ಸಂಬಳ ಬರ್ತಿದ್ರೂ ಊರು ಕಡೆಯ ಏಷ್ಟೊ ಬಡ ಹುಡುಗರನ್ನ ಮೈಸೂರಿಗೆ ಕರ್ಕೊಂಡು ಬಂದು ಓದಿಸ್ತಿದ್ದೆ. ಹಾಗಾಗಿ ನನ್ನ ಹತ್ರ ದುಡ್ಡು ಇರ್ತಿದ್ದಿದ್ದೆ ಬಹಳ ಅಪರೂಪ. ಇಲ್ಲದ ಆದರ್ಶಗಳು ತಲೆಗೆ ತುಂಬಿದ ವಯಸ್ಸು ಅದು.ಸರಿ ಏನ್ ಮಾಡೋದು ಅನ್ನೊ ಚಿಂತೆನಲ್ಲೇ ಬಸ್ಟಾಂಡ್ ವರೆಗು ಬಂದೆ.
ಆಗ ’ತೇಜಸ್ವಿ ತೋಟ ಮಾಡಿದ್ದೀನಿ ಅಂತ ಹೇಳ್ತಾ ಇದ್ದಿದ್ದು ಇಲ್ಲೇ ಎಲ್ಲೊ ಅಲ್ವಾ?’ ಅಂತ ತಕ್ಷಣ ನೆನಪಾಯ್ತು.ಆದರೆ ಎಲ್ಲಿ?ಎಷ್ಟು ದೂರ?ಅಂತೆಲ್ಲ ಗೊತ್ತಿರಲಿಲ್ಲ. ಗೊತ್ತಿದ್ದರೆ ಹೋಗಿ ಅವರನ್ನಾದರು ಕೇಳಬಹುದಿತ್ತಲ್ಲ ಅಂತ ಅಂದ್ಕೊಳ್ತಿರಬೇಕಾದ್ರೆ ಮಳೆಹನಿಯೋಕೆ ಶುರುವಾಯ್ತು. ಮಳೆಯಿಂದ ರಕ್ಷಣೆ ಪಡೆಯೋಕೆ ಅಂತ ಬಸ್ ನಿಲ್ದಾಣದ ಒಳಕ್ಕೆ ಬೇಗ ಬೇಗ ಹೆಜ್ಜೆ ಹಾಕ್ತಿರಬೇಕಾದರೆ ಸ್ಕೂಟರ್ ಮೇಲೆ ಎಲ್ಲೊ ನೋಡಿದ್ದೀನಿ ಅಂತ ಅನ್ನಿಸೊ ಒಬ್ಬ ವ್ಯಕ್ತಿ ನಿಧಾನಕ್ಕೆ ಹೋಗ್ತಾ ಇದಾರೆ. ’ಅರೆ ತೇಜಸ್ವಿ ಅಲ್ವಾ!!! ಅಂತ ತಕ್ಷಣ ನೆನಪಾಯ್ತು.ಸ್ಕೂಟರಿನಲ್ಲಿ ನಿಧಾನಕ್ಕೆ ಹೋಗ್ತಿದ್ದ ಅವರ ಕಣ್ಣಿಗೂ ನಾನು ಬಿದ್ದೆ ಅಂತ ಕಾಣುತ್ತೆ ಸ್ಕೂಟರ್ ನಿಲ್ಲಿಸಿ ಹತ್ರ ಬಂದ್ರು. ಇಬ್ಬರಿಗೂ ಆಶ್ಚರ್ಯ! ಆ ಮಳೆಲೇ “ಏನ್ ಮಾರಾಯ್ರ ಇಲ್ಲಿ?ಎಲ್ಲಿಗೆ ಬಂದಿದ್ರಿ?ಎಲ್ಲಿಗೆ ಹೋಗ್ತಿದ್ದೀರಿ” ಅಂತ ಕೇಳ್ದೋರು ನನ್ನ ಉತ್ತರಕ್ಕೂ ಕಾಯದೇ “ಬನ್ರಿ ನನ್ ಜೊತೆ ಒಂದೆರಡು ದಿನ ಇದ್ದು ಹೋಗೋರಂತೆ.ತೋಟ ತೋರಿಸ್ತೀನಿ” ಅಂತ ಹೇಳಿ ನನ್ನನ್ನ ಸ್ಕೂಟರ್ ಮೇಲೆ ಕೂರಿಸಿಕೊಂಡು ಆ ಮಳೆಲೇ ಹೊರಟು ಬಿಟ್ರು.
ಆಮೇಲೆ ತೋಟ ತೋರಿಸ್ತೀನಿ ಅಂತ ಕರ್ಕೊಂಡ್ ಹೋದೋರು ಹೋಗಿದ್ದು ಅವರ ತೋಟಕ್ಕಲ್ಲ. ಅವರ ಫ್ರೆಂಡ್ ವಾಸು ತೋಟಕ್ಕೆ (ರಾಜೇಶ್ವರಿ ತೇಜಸ್ವಿಯವರ ಅಣ್ಣ).ಹೋದೋರು “ಬನ್ರಿ ನಿಮಗೊಂದು ಸರ್ಪ್ರೈಸ್ ಕೊಡ್ತೀನಿ…!” ಅಂದ್ರು.ನಾನು ’ಏನಪ್ಪ ಸರ್ಪ್ರೈಸು?” ಅಂದೆ.”ಬನ್ನಿ ತೋರಿಸ್ತೀನಿ…” ಅಂದೋರು ಹೋಗಿ ಒಂದು ಹುಡುಗೀನ ಕರೆದು “ನೋಡಿ ನಾನು ಮದುವೆ ಆಗೊ ಹುಡುಗಿ ಇವಳು!!!” ಅಂದ್ರು.ನಾನು ಓಳ್ಳೆ ಸರ್ಪ್ರೈಸ್ ಕೊಟ್ರಲ್ಲಪ್ಪ ಅಂತ ಅಂದ್ಕೊಂಡೆ.ತಕ್ಷಣ ತೇಜಸ್ವಿ ತೋರಿಸಿದ ಆ ಹುಡುಗೀನ ಎಲ್ಲೊ ನೋಡಿದ್ದೀನಲ್ಲ ಅಂತ ಅನ್ನಿಸೋಕೆ ಶುರುವಾಯ್ತು. ಆಮೇಲೆ ತುಂಬ ಹೊತ್ತಾದ್ಮೇಲೆ ನೆನಪ್ಯ್ತು ’ಮಹಾರಾಜ ಕಾಲೇಜಿನಲ್ಲಿ ನನ್ನ ಜೂನಿಯರ್ ಹುಡುಗಿಯರ ಗುಂಪಿನಲ್ಲಿ ನೋಡಿದ ಹುಡುಗಿ ಅದು ಅಂತ.
ರಾಜೇಶ್ವರಿ ಮಹಾರಾಜ ಕಾಲೇಜಿನಲ್ಲಿ ಫಿಲಾಸಫಿ ಎಂಎ ಮಾಡ್ಕೊಂಡಿದ್ರು. ಆಗೆಲ್ಲೊ ನೋಡಿದ ನೆನಪಿರಬೇಕು ಅಂದ್ಕೊಂಡೆ.ಇದಾದ ನಂತರ ತೇಜಸ್ವಿ ಕೋವಿ ತಗೊಂಡು ನನಗೆ ’ರೀ ನಾಯಕರೆ ಮುಂಡ ಉಟ್ಕೊಳ್ರಿ ಈ ತೋಟ ತೋರಿಸ್ತೀನಿ’ ಅಂದ್ರು.ನಾನು ಅವರು ಹೇಳಿದ್ರಲ್ಲ ಅಂತ ಉಟ್ಕೊಂಡು ಅವರ ಹಿಂದೆ ಹೋದೆ.ಅವರು ಒಂದು ಅದ್ಯಾವುದೊ ತುಂಬಾ ಒರಟು ಒರಟಾಗಿರೊ ಪ್ಯಾಂಟ್ ಹಾಕ್ಕೊಂಡು ಅದನ್ನ ಮಂಡಿವರೆಗೂ ಮಡಿಚಿಕೊಂಡಿದ್ರು.ಹೋಗ್ತಾ ಇರಬೇಕಾದ್ರೆ ದೂರದಲ್ಲಿ ಒಂದು ಮರದ ಮೇಲೆ ಕೂತಿದ್ದ ಕಾಡು ಕೋಳಿ ನೋಡಿ ಗುಂಡು ಹಾರಿಸಿ “ಬಿತ್ತು ಕಣ್ರೀ…!” ಅಂದರು.ಅವರದ್ದೇ ಆದ ವಿಶಿಷ್ಟವಾದ ಶೈಲಿ ಇತ್ತು ಅವರು ಮಾತಾಡೋದು.ಹಾಗೆ “ಬಿತ್ತು ಕಣ್ರೀ…” ಅಂದ್ರು.ಸರಿ ಆಮೇಲೆ ಆ ಕಾಡು ಕೋಳೀನ ಸುತ್ತ ಎಲ್ಲಾ ಹುಡುಕೋಕೆ ಶುರು ಮಾಡಿದ್ರು.ಆಗ ಅದೆಲ್ಲಿತ್ತೊ ಮಳೆ ಘನ ಘೋರವಾದ ಮಳೆ ಒಂದೇ ಸಮನೆ ಸುರಿಯೋಕೆ ಶುರುವಾಯ್ತು.ನಾನು ಹುಡುಕ್ತೀನಿ ಅಂದ್ರೆ “ಬೇಡ ಕಣ್ರಿ, ನೀವು ಬೇಡ” ಅಂತ ಹೇಳಿ ನನ್ನನ್ನ ಆ ಮರದ ಕೆಳಗೆ ನಿಲ್ಲಿಸಿ ಅವರು ಹುಡುಕಾಟ ಮುಂದುವರೆಸಿದ್ರು.ನಾನು “ಅಲ್ಲ ಅದಕ್ಕೆ ಈಡು ಬಿತ್ತೊ ಇಲ್ವೊ ಸುಮ್ನೆ ಯಾಕ್ ಹುಡುಕ್ತೀರಿ?” ಅಂದ್ರೆ, ಅವರು “ನಾನು ಈಡು ಹೊಡೆದ್ರೆ ಅದೂ ಬೀಳ್ಬೇಕು ಅದರಪ್ಪನೂ ಬೀಳ್ಬೇಕು.ನೀವು ಅಲ್ಲೇ ಮರದ ಕೆಳಗೆ ನಿಂತಿರಿ” ಅಂತ ಹೇಳಿ ತೋಟ ಇಡೀ ಹುಡುಕಾಡಿದ್ರು.ಕಡೆಗೆ ಎಷ್ಟು ಹುಡುಕಿದ್ರು ಅದು ಸಿಗಲೇ ಇದ್ದಾಗ ಅದನ್ನೂ, ಅದರ ಅಪ್ಪನ್ನೂ, ಅದರ ವಂಶನೆಲ್ಲಾ ಸೇರಿಸಿ ಬಾಯಿಗೆ ಬಂದ ಹಾಗೆ ಬೈಕೊಂಡು ನನ್ನನ್ನ ಕರ್ಕೊಂಡು ವಾಪಸ್ ಹೊರಟ್ರು.ಅವರು ಬೈಗುಳಗಳನ್ನ ತುಂಬ ಚೆನ್ನಾಗಿ ಬಳಸ್ತಿದ್ರು. ನಾನು ಅಂತಾವೆಲ್ಲ ಮಾತಾಡ್ತಿರ್ಲಿಲ್ಲ!
ಆಮೇಲೆ ಮನೆಗೆ ಬಂದು ನೋಡ್ತೀನಿ ನನ್ನ ಮೈಯೆಲ್ಲಾ ರಕ್ತ! ಕಾಲಿನ ತುಂಬಾ ಇಂಬಳಗಳು ರಕ್ತ ಹೀರುತ್ತಾ ಇವೆ.ನನಗದು ಹೊಸ ಅನುಭವ.ಹಾಗಾಗು ಗಾಬರಿ ಆಗೋಯ್ತು.ನಂತರ ತೇಜಸ್ವಿನೇ ಅವನ್ನೆಲ್ಲಾ ಒಂದೊಂದಾಗಿ ತೆಗೆದು ಬಿಸಾಕಿ ಸುಣ್ಣನೊ ಮತ್ತೇನೊ ತಂದು ಗಾಯಗಳಿಗೆಲ್ಲಾ ಹಚ್ಚಿದ್ರು.ಜೊತೆಗೆ ನಾನು ಉಟ್ಕೊಂಡಿದ್ದ ಪಂಚೆ ಪೂರ್ತಿ ರಕ್ತದ ಮಡುವಿನಲ್ಲಿ ಅದ್ದಿ ತೆಗೆದ ಹಾಗಾಗಿತ್ತು.ಆ ಹೊಸ ವಾತಾವರಣದಲ್ಲಿ ನಾನೊಂತರ ಹೊಸದಾಗಿ ಹೊರಗಾದ ಹುಡುಗಿ ಹಾಗೆ ಅವಮಾನ, ನಾಚಿಕೆ ಆಗಿ ಮುದುರಿಕೊಂಡೆ ಕೂತಿದ್ದೆ.ಆಮೇಲೆ ಒಗೆದ್ರೂ ರಕ್ತದ ಕಲೆಗಳು ಹೋಗಿರ್ಲಿಲ್ಲ ಆ ಪಂಚೆಯಿಂದ. ಇದೆಲ್ಲಾ ಫಜೀತಿ ಅಗೊವಷ್ಟರಲ್ಲಿ ಸಾಯಂಕಾಲ ಆಗಿತ್ತು.ಆ ಸಾಯಂಕಾಲ ತೇಜಸ್ವಿ “ನಾಯಕರೆ ಬನ್ರಿ ನನ್ನ ತೋಟಕ್ಕೆ ಹೋಗೋಣ. ಭತ್ತದ ಗದ್ದೆ ಮಾಡಿದ್ದೀನಿ ತೋರುಸ್ತೀನಿ…” ಅಂತ ಹೇಳಿ ನನ್ನನ್ನ ಜನ್ನಾಪುರದ ಹತ್ತಿರದ ಅವರ ತೋಟಕ್ಕೆ ಕರ್ಕೊಂಡು ಹೋದ್ರು.
ಹೋದೋರು ಹೋಗ್ತಿದ್ದ ಹಾಗೆನೇ ಕೋವಿ ಕೈಗೆ ತಗೊಂಡು ತೋಟದೊಳಗೆ ಹೊರಟ್ರು.ನಾನು ಅವರ ಹಿಂದೆ ಹೆಜ್ಜೆ ಹಾಕಿದೆ.’ಚಿತ್ರಕೂಟ’ ಅಂತ ಆ ತೋಟದ ಹೆಸರು.ತೋಟ ಅನ್ನೋದಕ್ಕಿಂತಲೂ ಅದೊಂತರ ದೊಡ್ಡ ಅರಣ್ಯದ ಥರಾನೇ ಇತ್ತದು.ಕಾಡು ಕಡಿದು ಸುಮಾರು ೭೦ ಎಕರೆ ವಿಶಾಲವಾಗಿ ಮಾಡಿದ್ದ ತೋಟ ಅದು.ತೋಟದ ಮಧ್ಯೆ ಹೋಗ್ತಿರಬೇಕಾದ್ರೆ ಅಲ್ಲೊಂದು ಕಡೆ ಮೇಲೆ ಆಕಾಶದಲ್ಲಿ ಹಕ್ಕಿಗಳು ಸಾಲಿನಲ್ಲಿ ಹೋಗ್ತಿದ್ವು.ತಕ್ಷಣ ಇವರು ಕೋವಿ ಸಿದ್ದಮಾಡ್ಕೊಂಡು “ನಾಯಕರೆ ಮೇಲೆ ನೋಡ್ರಿ” ಅಂದ್ರು.ನೋಡಿದೆ.ಹಕ್ಕಿಗಳು ಸಾಲಿನಲ್ಲಿ ಹೋಗ್ತಿದ್ವು.ಹಕ್ಕಿಗಳು ಸಾಲಿನಲ್ಲಿ ಹೋಗೋದು ನನಗೇನು ಹೊಸದಾಗಿರಲಿಲ್ಲ. ಯಾಕಂದ್ರೆ ನಾನೂ ಹಳ್ಳಿಲೇ ಹುಟ್ಟಿ ಬೆಳೆದವನು.ಹಾಗಾಗಿ ಏನು ನೋಡೋದು ಅಂತಿರಬೇಕಾದರೆ ತೇಜಸ್ವಿ “ನೋಡಿ ಆ ಸಾಲಿನಲ್ಲಿ ಯಾವುದಾದ್ರು ಒಂದು ಹಕ್ಕೀನ ಗುರುತು ಇಟ್ಕೊಂಡು ಅದರ ನಂಬರ್ ನನಗೆ ಹೇಳಿ.ಮತ್ತೆ ಆ ಹಕ್ಕಿಯಿಂದ ನಿಮ್ಮ ಕಣ್ಣು ತೆಗಿಬೇಡಿ.ಅದನ್ನೇ ನೋಡ್ತಾ ಇರಿ” ಅಂದ್ರು.ನಾನು ’ಯಾಕೆ?’ ಅಂತ ಮನಸ್ಸಿನಲ್ಲೇ ಅಂದ್ಕೊಂಡು ಹೇಳ್ದೆ, ಐದೊ, ಆರೊ ಯಾವ್ದೊ ಒಂದು ನಂಬರ್ರು.ನಾನು ನಂಬರ್ ಹೇಳಿ ಆ ಹಕ್ಕಿನೇ ನೋಡ್ತಾ ಇದೀನಿ ಇದ್ದಕ್ಕಿದ್ದಂಗೆ “ಢಮ್…” ಅನ್ಸಿದ್ರು. ಬಿತ್ತಲ್ರಿ!!! ಅದೇ ಸೇಮ್ ಹಕ್ಕಿ ಬಿತ್ತು!!!.ನನಗೆ ನಂಬೋಕೆ ಆಗ್ಲಿಲ್ಲ. ನನಗೆ ಇದೇನಿದು ಇವನು ನಮ್ಮ ಸ್ನೇಹಿತನೇನ?ಅನ್ನಿಸೊವಷ್ಟು ಆಶ್ಚರ್ಯ, ಬೆರಗು ಶುರುವಾಯ್ತು ಅವರ ಬಗ್ಗೆ.
ಮೊದಲಿಗೆ ತುಂಟ ಹುಡುಗ ಅಂತ ಇದ್ದ ಭಾವನೆಯಿಂದ ಹೇಗೆ ಅವರು Tranformation ತಗೊಳ್ತಿದ್ರು ಅಂತ ನೆನೆಸ್ಕೊಂಡಾಗ ನನಗೆ ಈಗಲೂ ಮೈ ಜುಂ ಅನ್ಸುತ್ತೆ.ನನಗೆ ಇದೆಂತ ತೇಜಸ್ವಿ ಇದು, ಓಳ್ಳೆ ಪಾರ್ಥ ಸಾಹಸ ಆಯ್ತಲ್ಲ ಇವರದ್ದು ಅಂತ ಅಂದುಕೊಂಡೆ. ತೇಜಸ್ವಿ ಬಗ್ಗೆ ಒಂದು ರೀತಿ ಬೆರಗು ಶುರುವಾಗಿದ್ದು ಹಾಗೆ.ಆಮೇಲೆ ಅವರ ಭತ್ತದ ಗದ್ದೆ ತೋರಿಸಿದ್ರು.ಸುಮಾರು ಹತ್ತು ಎಕರೆಗೆ ಸೊಂಪಾಗಿ ಭತ್ತ ಬೆಳೆಸಿದ್ರು. ಆಮೇಲೆ ವಾಸು ತೋಟದಲ್ಲಿ ಕೈಗೆ ಸಿಗದೇ ಹೋದ ಕಾಡು ಕೋಳೀನ ಮತ್ತೆ ಬಾಯಿಗೆ ಬಂದ ಹಾಗೆ ಬೈದು ’ನಾಯಕರೆ ಆ ಬಡ್ಡಿಮಗಂದು ನಾಯಿಗೊ ನರಿಗೊ ಪಲಾವ್ ಆಗಿಬಿಟ್ಟಿರುತ್ತೆ ಕಣ್ರಿ’ ಅಂತ ಮತ್ತೆ ಅದರ ಅಪ್ಪ, ಅಮ್ಮ ಎಲ್ರನ್ನೂ ಸೇರಿಸಿ ಅವರ ಭಾಷೆನಲ್ಲಿ(?) ಬೈದ್ರು. ಒಂದು ವಿಷಯ ಹೇಳ್ಬೇಕು ತೇಜಸ್ವಿ ಅವರ ಇತರೆ ಸ್ನೇಹಿತರ ಜೊತೆಗೆ ಮಾತಾಡಿಸ್ತಿದ್ದ ರೀತಿಗೂ ನನ್ನ ಜೊತೆ ಮಾತಾಡ್ತಿದ್ದ ರೀತಿಗೂ ತುಂಬಾ ವ್ಯತ್ಯಾಸ ಇತ್ತು.ಅವರು ಮಾತಾಡ್ತಿದ್ದೆ ಒಂಥರ ಒರಟು ಅಂತಾನೇ ಅನ್ನಬಹುದಾದ ಸ್ಟೈಲ್ ನಲ್ಲಿ.ಆ ಒರಟುತನದಲ್ಲೂ ಪ್ರೀತಿ ಇರ್ತಿತ್ತು.ಆದರೆ ನನ್ನ ವಿಷಯದಲ್ಲಿ ಮಾತ್ರ ಅವರು ನಮ್ಮ ಸ್ನೇಹ, ಗೌರವಕ್ಕೆ ಧಕ್ಕೆ ಆಗದಂತಹ ಭಾಷೆ ಬಳಸಿ ಮಾತಾಡ್ತಿದ್ರು.ಬೇರೆಯವರ ಜೊತೆ ಹಾಗೆ ಮಾತಾಡ್ತಿರ್ಲಿಲ್ಲ ಅವರು.ಅದ್ಯಾಕೆ ನನ್ನ ಬಗ್ಗೆ ಹಾಗೆ ವಿಶೇಷವಾದ ಗೌರವ, ಪ್ರೀತಿ ಇಟ್ಕೊಂಡಿದ್ರೊ ನನಗೆ ಇವತ್ತಿಗೂ ಅರ್ಥ ಆಗಿಲ್ಲ. ಮಾರನೇ ದಿನ ನಾನು “ಹೋಗ್ತೀನಿ ಕಣ್ರಿ ತೇಜಸ್ವಿ.ಊರಿಗೆ ಹೋಗ್ಬೇಕು” ಅಂತ ಹೇಳಿ ನಾನು ಹೊರಟೆ.ಪಾಪ ನನ್ನ ಪರಿಸ್ಥಿತಿ ಅರ್ಥ ಮಾಡ್ಕೊಂಡು ದಾರಿ ಖರ್ಚಿಗೆ ಬೇಕಾಗಿದ್ದಷ್ಟು ದುಡ್ಡು ಕೊಟ್ಟು ಬಸ್ಟಾಂಡಿಗೆ ಬಂದು ಬಸ್ ಹತ್ತಿಸಿ ಕಳಿಸಿಕೊಟ್ರು. ಅವರ ದೊಡ್ಡತನ ಮಾತಲ್ಲಿ ಹೇಳೋದು ಕಷ್ಟ…” ಜಿ.ಹೆಚ್ ನಾಯಕರು ತಮ್ಮ ಕನ್ನಡಕ ತೆಗೆದು ತುಂಬಿ ಬಂದಿದ್ದ ಕಣ್ಣುಗಳನ್ನು ಒರೆಸಿಕೊಳ್ಳುತ್ತಾ ಗೆಳೆಯನೊಂದಿಗೆ ಕಳೆದ ಹಳೆಯ ದಿನಗಳ ಮಧುರ ನೆನಪುಗಳನ್ನು ನೆನಪಿಸಿಕೊಂಡರು.
ನಂತರ ಜಿ.ಹೆಚ್ ನಾಯಕರು ಹಂಚಿಕೊಳ್ಳಲು ಪ್ರಾರಂಭಿಸಿದ ಘಟನೆಯ ಬಗ್ಗೆ ಮಾತನಾಡಲು ಅವರ ಪತ್ನಿ ಶ್ರೀಮತಿ ಮೀರರವರು ಜೊತೆಯಾದರು.”ತೇಜಸ್ವಿ ಮತ್ತವರ ಕುಟುಂಬ ನಮ್ಮ ಬಗ್ಗೆ ಇಟ್ಟಿದ್ದ ನಂಬಿಕೆ, ಗೌರವ ಎಷ್ಟಿತ್ತು ಅಂತ ಹೇಳೋಕೆ ನಿಮಗೆ ಈ ವಿಷಯ ಹೇಳಲೇಬೇಕು.ನಮ್ಮ ಮಗಳು ಪ್ರೀತಿ ಅದೇನಾಯ್ತೊ ಏನೊ ನನಗೆ ಇವತ್ತಿಗೂ ಸರಿಯಾಗಿ ಗೊತ್ತಾಗ್ತಿಲ್ಲ ಊರಿಗೆ ಅಜ್ಜನ ಮನೆಗೆ ಹೋಗಿದ್ದಾಗ ತೀರ್ಕೊಂಡು ಬಿಟ್ಟಳು.ಐದಾರು ವರ್ಷ ಅಷ್ಟೇ ಅವಳಿಗಾಗ. ನಾನು ಇವಳು ಆ ದುಖಃದಲ್ಲಿದ್ದ ಸಮಯ ಅದು.ಅದೂ ಅಲ್ಲದೇ ಇಲ್ಲ ಸಲ್ಲದ ಆರೋಪಗಳನೆಲ್ಲ ಹೊತ್ಕೊಂಡಿದ್ದ ಕಾಲ ಅದು.ನನ್ನನ್ನ ನವ್ಯದವನು, ಕುವೆಂಪು ವಿರೋಧಿ, ಅಂತೆಲ್ಲಾ ತುಂಬಾ ದೊಡ್ಡವರು ಅನ್ನಿಸಿಕೊಂಡವರೆ ಹಣೆಪಟ್ಟಿ ಹಚ್ಚಿ ನನ್ನ ವೃತ್ತಿ ಬದುಕನ್ನೇ ಮುಗಿಸಿ ಹಾಕೊ ಏರ್ಪಾಡು ಮಾಡ್ತಿದ್ರು ಆಗ.ನನ್ನ ವೃತ್ತಿ ಜೀವನದಲ್ಲಿ ಆಗಬಾರದ ಅನ್ಯಾಯಗಳಾಗಿವೆ.ಈಗ ಅದನ್ನೆಲ್ಲಾ ಹೇಳ್ಕೊಂಡು ಪ್ರಯೋಜನ ಇಲ್ಲ. ಅದರ ಜೊತೆಗೆ ಮಗಳನ್ನ ಕಳ್ಕೊಂಡು ಕಷ್ಟಗಳ ಭಾರ ಹೆಚ್ಚಾಗಿತ್ತು.ಆಗ ತೇಜಸ್ವಿ ಒಂದಿನ ಅವರ ದೊಡ್ಡ ಮಗಳು ಸುಸ್ಮಿತನ್ನ ಅವರ ಸ್ಕೂಟರ್ ಮೇಲೆ ನಮ್ಮ ಮನೆಗೆ ಕರ್ಕೊಂಡು ಬಂದು ಅವಳನ್ನ ನಮ್ಮ ಮೀರ ಮಡಿಲಲ್ಲಿ ಹಾಕಿದ್ರು.ಮೀರ ಆಗ ಗಂಗೋತ್ರಿ ಶಾಲೆಯಲ್ಲಿ ಟೀಚರ್ ಆಗಿದ್ಳು.ಆ ಮಗು ಸುಸ್ಮಿತ ತೀರಿಹೋದ ನಮ್ಮ ಮಗಳು ಪ್ರೀತಿ ವಾರಿಗೆಯವಳೆ.ಹೆಚ್ಚುಕಡಿಮೆ ಒಂದೇ ವಯಸ್ಸಿನವರು ಇಬ್ಬರೂ.ಅಲ್ಲಿ ಮೂಡಿಗೆರೆನಲ್ಲಿ ಮಗಳಿಗೆ ಓದೋಕೆ ತೊಂದ್ರೆ ಆಗುತ್ತೆ ಅಂತಲೊ ಏನೊ ಇರಬೇಕು.ಕುವೆಂಪುರವರ ಮನೆನಲ್ಲಿ ಆಗ ಅವರಿಬ್ಬರು ಗಂಡ ಹೆಂಡತಿ ಅಷ್ಟೇ ಇದ್ದದ್ದು.ಹಾಗಾಗಿ ಅವರಿಗೆ ನೋಡ್ಕೊಳ್ಳೋಕೆ ಆಗಲ್ಲ ಅಂತನೂ ಇರಬೇಕು.ಅಂತು ನಮ್ಮ ಮಗಳದ್ದೇ ವಯಸ್ಸಿನ ಸುಸ್ಮಿತ ನಮ್ಮ ಮನೆಗೆ ಬಂದಳು.ನಮಗೆ ಸ್ವತಃ ನಮ್ಮ ಮಗಳು ಪ್ರೀತಿನೇ ವಾಪಸ್ ಬಂದಷ್ಟು ಸಂತೋಷ ಆಗಿತ್ತು.ನೆನೆಸ್ಕೊಂಡ್ರೆ ಭಾವುಕನಾಗ್ತೀನಿ.
ನನ್ನ ಮತ್ತು ಮೀರಾಳ ಮೇಲೆ ತೇಜಸ್ವಿ ಮತ್ತು ರಾಜೇಶ್ವರಿ ಇಬ್ಬರಿಗೂ ವಿಶ್ವಾಸ ಎಷ್ಟಿತ್ತು ಅಂತ ಇದರಿಂದ ಸ್ಪಷ್ಟ ಆಯ್ತು ನಮಗೆ.ಆ ಮಗು ಸುಸ್ಮಿತ ಬಹಳ ಬೇಗ ನಮಗೆ ಹೊಂದಿಕೊಂಡಳು.ಇವಳು ಮೊದಲ ಆದ್ಯತೆ ಯಾವಾಗಲೂ ಆ ಮಗೂಗೇ ಕೊಡ್ತಿದ್ದಳು.ನಂತರ ನಮ್ಮ ಮಕ್ಕಳು.ಐದು ವರ್ಷ ಸುಸ್ಮಿತ ನಮ್ಮ ಮನೇಲಿದ್ದು ಓದಿದ್ದಳು.ಆ ಮಗು ನಮ್ಮ ಮನೆಯಲ್ಲಿದಷ್ಟೂ ಕಾಲ ತೇಜಸ್ವಿ ಮತ್ತು ರಾಜೇಶ್ವರಿ ಇಬ್ಬರೂ ನಮ್ಮ ಮೇಲೆ ಪೂರ್ತಿ ನಂಬಿಕೆ ಇಟ್ಟು ನಿಜವಾದ ಅರ್ಥದಲ್ಲಿ ದೊಡ್ಡತನ ತೋರಿಸಿದ್ರು. ನೋಡಿ ’ಕುವೆಂಪು ವಿರೋಧಿ’ ಅಂತ ಜಗತ್ತೇ ನನ್ನನ್ನ ದೂಷಿಸುತ್ತಿದ್ದರೂ ತೇಜಸ್ವಿ ಮಾತ್ರ ಅದ್ಯಾವುದಕ್ಕೂ ತಲೆ ಕೆಡಿಸ್ಕೊಳ್ಳದೇ ನಮ್ಮ ಮೇಲೆ ಅಷ್ಟು ನಂಬಿಕೆ, ವಿಶ್ವಾಸ ಇಟ್ಟು ನಡ್ಕೊಂಡ್ರಲ್ಲ ನೆನೆಸ್ಕೊಂಡ್ರೆ ನನಗೆ ಗೊತ್ತಿಲ್ಲದೇ ಕಣ್ಣೀರು ಬರುತ್ತೆ. ಅದೊಂದು ರೀತಿ ನಮ್ಮ ಬಗ್ಗೆ ಸಿಕ್ಕ ಕ್ಯಾರೆಕ್ಟರ್ ಸರ್ಟಿಫಿಕೇಟ್ ಅಂತ ಹೇಳ್ಬಹುದು” ಭಾವುಕರಾಗಿ ಮಾತು ಕಟ್ಟಿದವರಂತಾಗಿ ಮಾತನಾಡುತ್ತಿದ್ದ ಜಿ.ಹೆಚ್ ನಾಯಕರ ಸಹಾಯಕ್ಕೆ ಅವರ ಶ್ರೀಮತಿ ಮೀರರವರು ಬಂದು ಮಾತು ಮುಂದುವರೆಸಿದರು.
ತುಸು ಹೊತ್ತಿನ ನಂತರ ಜಿ.ಹೆಚ್ ನಾಯಕರು ಸಾವರಿಸಿಕೊಂಡು ತೇಜಸ್ವಿ ನೆನಪಿನ ಗಣಿಯನ್ನು ಮತ್ತೆ ಬಗೆಯತೊಡಗಿದರು.ಅವರ ಮುಂದಿನ ಮಾತುಗಳು ತೇಜಸ್ವಿಯವರ ಸಾಹಿತ್ಯದ ಹಾದಿಯನ್ನು ಕುರಿತದ್ದಾಗಿದ್ದವು.
“ಚಿಕ್ಕಮಗಳೂರಿಗೆ ಎಂಥದ್ದೊ ಶಾಪ ಕಣ್ರಿ…!”
“ತೇಜಸ್ವಿ ನವ್ಯರ ಜೊತೆ ಬೆಳಕಿಗೆ ಬಂದರೂ ನಂತರ ನವ್ಯರು ಬರೀತಿದ್ದ ಸಾಹಿತ್ಯ ಮಾರ್ಗವನ್ನ ಪ್ರಬಲವಾಗಿ ವಿರೋಧಿಸೋಕೆ ಶುರು ಮಾಡಿದ್ರು.ಅದಕ್ಕೆ ಕಾರಣಾನೂ ಇತ್ತು.’ಅಬಚೂರಿನ ಪೋಸ್ಟಾಫೀಸು’ ಮುನ್ನುಡಿನಲ್ಲಿ ಬರ್ಕೊಂಡಿದಾರೆ ನೋಡಿ. ಕುವೆಂಪುರವರ ಕಲಾತ್ಮಕತೆ, ಕಾರಂತರ ಜೀವನ ದೃಷ್ಟಿ, ಲೋಹಿಯಾ ತತ್ವಚಿಂತನೆ ಈಮೂರು ತನ್ನ ಮೇಲೆ ಗಾಢವಾದ ಪ್ರಭಾವ ಬೀರಿವೆ ಅಂತ. ಹಾಗಾಗಿ ಒಂದು ರೀತಿ ಬುದ್ದಿವಂತರ ವಲಯದವರ ಸಾಹಿತ್ಯ ಅಂತ ಅನ್ನಿಸಿಕೊಂಡಿದ್ದ ನವ್ಯ ಸಾಹಿತ್ಯವನ್ನ ಅವರು ವಿರೋಧಿಸಿ ಅವರದ್ದೇ ಆದ ಹೊಸ ಮಾರ್ಗವನ್ನ ಕಂಡುಕೊಂಡರು. ಯಾಕೆ ಈ ವಿಚಾರ ಹೇಳಿದೆ ಅಂತಂದ್ರೆ, ತೇಜಸ್ವಿ ಮೈಸೂರು ಬಿಟ್ಟು ಹೋದ ನಂತರ ಅವರ ಕಥೆಗಳು ಅವರು ಕಂಡುಕೊಂಡ ಹೊಸ ಮಾರ್ಗದಲ್ಲಿ ಮೂಡಿಬರೋಕೆ ಪ್ರಾರಂಭ ಆದವು.ಅದಕ್ಕೆ ಮೊದಲು ’ಯಮಳ ಪ್ರಶ್ನೆ’ ’ಸ್ವರೂಪ’ ಇದರ ಬಗ್ಗೆ ಎಲ್ಲ ಹೇಳಿದ್ನಲ್ಲ. ಆಮೇಲೆ ತೇಜಸ್ವಿ ಪ್ರತಿಯೊಂದು ಕಥೆ ಬರೆಯೋಕೆ ಮುಂಚೆ ಕಾಯ್ತಿದ್ರು ಅಂತ ನನಗನ್ಸುತ್ತೆ.ನಾನು ಈ ಪದ ಉದ್ದೇಶಪೂರ್ವಕವಾಗಿಯೇ ಹೇಳ್ತಿದ್ದೀನಿ, ಅವರು ’ಕಾಯ್ತಿದ್ರು’ ಅವರ ಮನಸ್ಸಿನಲ್ಲಿ ಮೂಡಿದ ಕಥೆಗಳಿಗೆ ಹೊಸ ರೂಪ ಬರೋವರೆಗು.
ಒಂದು ಉದಾಹರಣೆ, ಅವರು ಆಗಾಗ ಮೈಸೂರಿಗೆ ಬರ್ತಿದ್ರಲ್ಲ ಆಗ ತಪ್ಪದೇ ನಮ್ಮ ಮನೆಗೆ ಬಂದೇ ಬರ್ತಿದ್ರು.ಬಂದು ಅದು ಇದು ಅಂತ ಏನೆಲ್ಲಾ ವಿಚಾರದ ಬಗ್ಗೆ ಮಾತಾಡ್ತಿದ್ರಲ್ಲ ಆಗ ಒಂದ್ಸಲ ಒಂದು ನಾನು ಕೇಳಿದೆ “ಏನ್ ಮಾಡ್ತಿದ್ದೀರಿ ತೇಜಸ್ವಿ?” ಅಂತ. ಅವರು “ಒಂದು ಕಥೆ ಬರೀತಿದ್ದೀನಿ ಕಣ್ರಿ.ಆದರೆ ಏನೋ ಬಗೆಹರಿಬೇಕಿದೆ” ಅಂದ್ರು.ಇದೇ ಮಾತು ಬಳಸಿದ್ರು “ಏನೋ ಬಗೆಹರಿಬೇಕಿದೆ” ಅಂತ. ನಾನು “ಏನು?” ಅಂದೆ.”ನೋಡಿ ಈ ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಾವೊವ್ಬ ದೊಡ್ಡ ಸಾಹಿತಿನೂ ಇಲ್ವಲ್ರಿ.ನಿಮಗೇನಾದ್ರು ಗೊತ್ತ ಯಾರಾದ್ರು?” ಅಂದ್ರು.ನಾನು “ತುಂಬಾ ದೊಡ್ಡ ಸಾಹಿತಿಗಳು ಅಂತ ಯಾರೂ ಇಲ್ಲ. ಯಾಕೆ?” ಅಂತ ಕೇಳಿದೆ.ಅವರು “ನೋಡ್ರಿ ಈ ಚಿಕ್ಕಮಗಳೂರು ಜಿಲ್ಲೆಗೆ ಏನೋ ಒಂದು ಶಾಪ ಕಣ್ರಿ.ಇಲ್ಲಿಂದ ಹೆಸರು ಹೇಳಬಹುದಾದ ಒಬ್ಬ ದೊಡ್ಡ ಕಲಾವಿದ ಆಗ್ಲಿ, ಸಾಹಿ ಆಗ್ಲಿ ಬಂದಿಲ್ಲ ಕಣ್ರಿ.ಬಹುಶಃ ಈ ಜಿಲ್ಲೆಯ ಸಮೃದ್ಧತೆಯೇ ಇದಕ್ಕೆ ಅಂಟಿಕೊಂಡಿರಿ ಶಾಪ ಇರಬೇಕು ಅಂತ ಕಾಣುತ್ತೆ.ಅದಕ್ಕೆ ಅದನ್ನಿಟ್ಟುಕೊಂಡು ಒಂದು ಕಥೆ ಬರಿತಿದ್ದೀನಿ” ಅಂದ್ರು.ನಾನು “ಅಲ್ಲ ಚಿಕ್ಕಮಗಳೂರಿನಲ್ಲಿ ಸಾಹಿತಿಗಳು, ಕಲಾವಿದರು ಇಲ್ಲದೇ ಇರೋದಕ್ಕೂ ನಿಮ್ಮ ಕಥೆಗೂ ಏನು ಸಂಬಂಧ?” ಅಂತ ಮನಸ್ಸಿನಲ್ಲೇ ಅಂದುಕೊಂಡೆ.ಆಮೇಲೆ ಸ್ವಲ್ಪ ಕಾಲ ಬಿಟ್ಟು ಅವರದ್ದು ’ಅವನತಿ’ ಅಂತ ಒಂದು ಕಥೆ ಬಂತು.ಅದನ್ನ ಓದಿದಾಗ ತೇಜಸ್ವಿ ಯಾಕೆ ಅವತ್ತು ನನ್ನ ಜೊತೆ ಆ ವಿಷಯದ ಬಗ್ಗೆ ಮಾತಾಡಿದ್ರು ಅಂತ ಗೊತ್ತಾಯ್ತು.
“ಆ ಕಥೆ ನೀವು ಓದಿದ್ದೀರ?” ನಾಯಕರು ನನ್ನನ್ನು ಕೇಳಿದರು.”ಓದಿದ್ದೀನಿ ಸರ್” ಅಂದೆ.ಅವರು ಮುಂದುವರೆಸಿದರು, “ನೋಡಿ ಆ ಕಥೆನಲ್ಲಿ ಸೂರಾಚಾರಿ ಅಂತ ಒಬ್ಬ ಶಿಲ್ಪಿ ಬರ್ತಾನೆ.ಅವನು ಒಬ್ಬ ಅತ್ಯುತ್ತಮ ಕಲಾವಿದ. ಆದರೆ ಅವನು ಬದುಕುತ್ತಿರೊ ಆ ಪರಿಸದಲ್ಲಿರೊ ಜನಕ್ಕೆ ಅವನ ಸೂಕ್ಷ್ಮವಾದ ಕಲಾವಂತಿಕೆ ಬೇಕಾಗಿಲ್ಲ. ತುಂಬಾ ಕ್ರೂಡ್ ಆದ ಶಿಲ್ಪಗಳು, ಅಂದರೆ ಮಾರಮ್ಮ ಇತ್ಯಾದಿ ಇಷ್ಟಪಡೊ ಜನ ಅವರು.ಹಾಗಾಗಿ ಅಂತ ಜನಗಳು ಇರೊ ಆ ಪರಿಸರದಲ್ಲಿ ವಾಸಮಾಡ್ತಿರೊ ಸೂರಾಚಾರಿ ಅಂತಹ ಶ್ರೇಷ್ಟ ಕಲಾವಿದ ಎತ್ತು ಗಾಡಿ ರಿಪೇರಿ ಮಾಡ್ತಾ, ದನಗಳ ದಲ್ಲಾಳಿ ಕೆಲಸ ಮಾಡ್ತಾ ತುಂಬಾ ಸಾಧಾರಣವಾಗಿ ಬದುಕ್ತಿರ್ತಾನೆ.ಹಾಗೆ ಅವನತಿ ಅನ್ನೊ ಆ ಕಥೆ ಪರಿಸರಕ್ಕೂ ಆ ಪರಿಸರದಲ್ಲಿ ಬದುಕೊ ಜೀವಿಗಳಿಗೂ ಇರುವ ಸಂಬಂಧವನ್ನ, ಪ್ರಭಾವವನ್ನ ತೋರಿಸೊ ಅಂತ ಕಥೆ.ಮತ್ತೆ ಆ ಕಥೆನಲ್ಲಿ ಒಬ್ಬಳು ಅಪ್ರತಿಮ ಸುಂದರಿ ಬರ್ತಾಳೆ. ಅವಳು ಎಂಥಾ ಅಪ್ರತಿಮ ಸುಂದರಿ ಅಂದರೆ ಅಂತಹ ಸುಂದರಿ ಸುತ್ತಮುತ್ತ ಎಲ್ಲೂ ಅಂತವಳು ಇರೋದೇ ಇಲ್ಲ. ಆದರೆ ದುರಂತ ಅಂದ್ರೆ ಅಂತ ಸೌಂದರ್ಯವನ್ನ ಅಸ್ವಾಧಿಸುವ ಮನಸ್ಸು ಆ ಸುತ್ತ ಮುತ್ತ ಯಾರಿಗೂ ಇರೋದೆ ಇಲ್ಲ. ಮತ್ತೊಂದು ವಿರೋಧಾಭಾಸ ಅಂದ್ರೆ ಅವಳ ಸೌಂದರ್ಯ ಅಸ್ವಾಧಿಸುವುದು ಬಿಟ್ಟು ಜನ ಅವಳ ಮೊಲೆ ಹಾಲನ್ನ ಕಣ್ಣಿಗೆ ಔಷಧಿ ಅಂತ ಬಳಸ್ತಿರ್ತಾರೆ. ಹಾಗಾಗಿ ಪರಿಸರ ದರಿದ್ರವಾಗಿದ್ರೆ ಅಲ್ಲಿನ ಜೀವಿಗಳ ಮೇಲೆ ಆಗುವ ಪರಿಣಾಮ ಏನು ಅನ್ನೋದು ಆ ಕಥೆ ಪರೋಕ್ಷವಾಗಿ ಹೇಳುತ್ತೆ.ಇದು ತೇಜಸ್ವಿಯ ಸಾಹಿತ್ಯದ ಆಳ.
ಮತ್ತೊಂದು ಅವರ ಅತ್ಯುತ್ತಮ ಕಥೆ ’ತುಕ್ಕೋಜಿ’ ನೀವು ಓದಿರಬಹುದು.ನನ್ನ ಪ್ರಕಾರ ’ತುಕ್ಕೋಜಿ’ ಅವರ ಉತ್ತಮವಾದ ಕಥೆ.ಅದರ ಪಾತ್ರಗಳೆಲ್ಲ ಸಾಮಾನ್ಯ ಅಂದ್ರೆ ಸಾಮಾನ್ಯವಾದವು.ಆ ಕಥೆನಲ್ಲಿ ಬರುವ ಒಬ್ಬ ಟೈಲರ್, ಅವನು ಆ ಸುತ್ತಿಗೆ ಒಬ್ಬ ಒಳ್ಳೆ ಟೈಲರ್ ಆಗಿರ್ತಾನೆ.ಹ್ಯಾಗೆ ಅಂದ್ರೆ ಅವನು ಅಳತೇನೇ ತೆಗೆದುಕೊಳ್ಳದೆ ಕೇವಲ ಕಣ್ಣಳತೆನಲ್ಲೇ ನೋಡಿ ಪರ್ಫೆಕ್ಟಾಗಿ ಮ್ಯಾಚ್ ಆಗೊವಂತ ಬಟ್ಟೆ ಹೊಲೆಯೋದ್ರಲ್ಲಿ ಅವನು ಆ ಸೀಮೆಗೆ ಹೆಸರುವಾಸಿ.ಅಂತ ತುಕ್ಕೋಜಿ ಕೇವಲ ತನ್ನ ಹೆಂಡತಿ ಜೊತೆ ಮನಸ್ತಾಪ ಮಾಡ್ಕೊಂಡು, ಪ್ರತಿದಿನ ಜಗಳ ಆಡ್ತಾ ಆಡ್ತಾ ತನ್ನ ಎಫಿಶಿಯೆನ್ಸಿಯನ್ನೇ ಕಳ್ಕೊಂಡು ಬಿಡ್ತಾನೆ. ಕೇವಲ ಕಣ್ಣಳತೆನಲ್ಲೇ ನೋಡಿ ಅಚ್ಚುಕಟ್ಟಾಗಿ ಬಟ್ಟೆ ಹೊಲೀತಿದ್ದ ತುಕ್ಕೋಜಿ ಈಗ ಸರಿಯಾಗಿ ಟೇಪ್ ತಗೊಂಡು ಅಳತೆ ಮಾಡಿ ಹೊಲೆದ್ರೂ ಅವುಗಳಲ್ಲಿ ಏನಾದ್ರೂ ಒಂದು ವ್ಯತ್ಯಾಸ ಕಾಣಿಸಿಕೊಳ್ಳೋಕೆ ಶುರುವಾಗುತ್ತೆ. ಆಮೇಲೆ ಆ ಊರಿನ ಚಪ್ಪಲಿ ಹೊಲೆಯುವವನ ಹತ್ತಿರ ಬರುವವರೆಲ್ಲರ ಚಪ್ಪಲಿಗಳು ಒಂದೇ ಕಡೆ ಹೆಚ್ಚು ಸವೆದಿರೋದು ಕ್ಂಡು ಬರುತ್ತೆ. ಕಾರಣ ಏನು ಅಂತ ನೋಡಿದ್ರೆ ತುಕ್ಕೋಜಿ ಹೊಲೆದುಕೊಟ್ಟ ಬಟ್ಟೆಗಳು ಫಿಟಿಂಗ್ ಸರಿ ಇಲ್ಲದೇ ಆ ಬಟ್ಟೆಗಳನ್ನ ಹಾಕ್ಕೊಂಡವ್ರು ಆ ಬಟ್ಟೆಗಳಿಗೆ ಹೊಂದಿಕೊಳ್ಳೋದಿಕ್ಕೆ ಪ್ರಯತ್ನಪಟ್ಟು ಒಂದೇ ಕಡೆ ಭಾರ ಬಿಟ್ಟು ನಡೆದು ಚಪ್ಪಲಿಗಳೆಲ್ಲಾ ಒಂದೇ ಕಡೆ ಸವೆಯೋಕೆ ಶುರುವಾಗ್ತವೆ. ಆಮೇಲೆ ನಿಧಾನಕ್ಕೆ ಆ ಊರಿಗೆ ಹೊಸ ನಾಗರೀಕತೆ ಆವರಿಸಿಕೊಳ್ಳೋಕೆ ಪ್ರಾರಂಭ ಆಗುತ್ತೆ.ಹಾಗೆ ಒಬ್ಬ ಅತಿಸಾಮಾನ್ಯನ ಬದುಕಿನ ಅಲ್ಲೋಲಕಲ್ಲೋಲಗಳು ಹೇಗೆ ಒಂದು ಸಿವಿಲೈಜ಼ೇಷನ್ನಿನ ಆಗಮನಕ್ಕೆ, ಬದಲಾವಣೆಗೆ ಕಾರಣ ಆಗ್ತವೆ ಅನ್ನೋದನ್ನ ’ತುಕ್ಕೋಜಿ’ ಅನ್ನೊ ಕಥೆ ಸೂಚ್ಯವಾಗಿ ಹೇಳುತ್ತೆ.ಈ ರೀತಿ ತೇಜಸ್ವಿ ಅವರ ಕಥೆಗಳ ಬಗ್ಗೆ ನನ್ನ ಜೊತೆ ಚರ್ಚೆ ಮಾಡ್ತಿದ್ರಲ್ಲ ಅದು ನನಗೆ ಸಿಕ್ಕ ದೊಡ್ಡ ಗೌರವ ಅಂತ ನಾನು ತಿಳ್ಕೊಂಡಿದೀನಿ.
(ಜಿ.ಹೆಚ್ ನಾಯಕರ ಮುಂದಿನ ನೆನಪುಗಳು ಮುಂದಿನ ವಾರ)
I think the best part of ‘ತೇಜಸ್ವಿಯನ್ನು ಹುಡುಕುತ್ತಾ’ series is coming now.
ಜಿ.ಎಚ್.ನಾಯಕರ ಮಾತುಗಳನ್ನು ಸಮರ್ಥವಾಗಿ ಹಿಡಿದಿಟ್ಟಿದ್ದಿರಿ.ಒಳ್ಳೆಯ ಲೇಖನ.
– ಜಿ.ಎಚ್.ನಾಯಕರು ಕಂಡ ತೇಜಸ್ವಿಯವರ ವ್ಯಕ್ತಿ ಚಿತ್ರವನ್ನು ಬಹಳ ಚೆನ್ನಾಗಿ ಕಟ್ಟಿ ಕೊಟ್ಟಿದ್ದೀರಿ. ಸೊಗಸಾದ ಲವಲವಿಕೆಯ ಬರಹ ಮುದ ಗೊಳಿಸಿತು.