ಕವಿಶೈಲದ ನೆತ್ತಿಯ ಮೇಲಿನ ಮುಂಜಾವು ಮತ್ತು ಸೂರ್ಯಾಸ್ತ
ಸುಮಾರು 7 ದಿನಗಳ ಕಾಲ ಮೂಡಿಗೆರೆ, ಜನ್ನಾಪುರ, ಸಕಲೇಶಪುರ, ಭದ್ರಾ ಹಾಗೂ ಹೇಮಾವತಿ ನದಿ ಪ್ರದೇಶ, ಮುತ್ತೋಡಿ ಮೀಸಲು ಅರಣ್ಯ ಪ್ರದೇಶ, ಚಾರ್ಮಾಡಿ ಮೊದಲಾದ ಪಶ್ಚಿಮ ಘಟ್ಟ ಪ್ರದೇಶ, ಚಿಕ್ಕಮಗಳೂರು ಮುಂತಾದ ಪ್ರದೇಶಗಳಲ್ಲಿ ತೇಜಸ್ವಿಯವರ ಸಾಕ್ಷ್ಯಚಿತ್ರದ ಚಿತ್ರೀಕರಣ ಮುಗಿಸಿ ಏಳನೇ ದಿನದ ಕೊನೆಗೆ ನಾವು ಚಿಕ್ಕಮಗಳೂರು ಜಿಲ್ಲೆ ಬಿಟ್ಟು ಮುಂದಕ್ಕೆ ಹೊರಟಿದ್ದೆವು.
ಆ ಏಳು ದಿನಗಳಲ್ಲಿ ಸುಮಾರು 20 ಗಂಟೆಗಳಿಗೂ ಮೀರಿದ ತೇಜಸ್ವಿಯವರ ಒಡನಾಡಿಗಳ ಮಾತುಗಳು, ಅನುಭವಗಳು, ಘಟನೆಗಳು ದಾಖಲಾಗಿದ್ದವು.ಆದರೆ ಅದು ಬರೀ ಅರ್ಧ ಕೆಲಸ ಮಾತ್ರ ಎಂಬಂತಾಗಿತ್ತು.ಕಾರಣ ಸಾಕ್ಷ್ಯಚಿತ್ರಕ್ಕಾಗಿ ಮಾತನಾಡಿಸಿ ಚಿತ್ರೀಕರಿಸಬೇಕಾದ ತೇಜಸ್ವಿಯವರ ಆಪ್ತ ಒಡನಾಡಿಗಳು ಇನ್ನೂ ಬಹಳಷ್ಟು ಮಂದಿ ಇದ್ದರು.
ಏಳನೇ ದಿನದ ಕೊನೆಯಲ್ಲಿ ಕೊಟ್ಟಿಗೆಹಾರ, ಬಾಳೆಹೊನ್ನೂರು, ಕೊಪ್ಪ ಮುಖಾಂತರ ಕುಪ್ಪಳ್ಳಿ ಸೇರುವ ಮೂಲಕ ಚಿಕ್ಕಮಗಳೂರು ಜಿಲ್ಲೆ ಬಿಟ್ಟು ಶಿವಮೊಗ್ಗ ಜಿಲ್ಲೆ ಪ್ರವೇಶಿಸಿದ್ದೆವು.ನಮ್ಮ ಮುಂದಿನ ಚಿತ್ರೀಕರಣವಿದ್ದದ್ದು ಕುಪ್ಪಳ್ಳಿಯಲ್ಲಿ.Ofcourse ಕುಪ್ಪಳ್ಳಿಯನ್ನು ಚಿತ್ರೀಕರಿಸದೇ ತೇಜಸ್ವಿಯವರ ಸಾಕ್ಷ್ಯಚಿತ್ರವನ್ನು ಕಟ್ಟುವುದಾದರೂ ಹೇಗೆ? ಹಾಗಾಗಿ ಕುಪ್ಪಳ್ಳಿ ನಮ್ಮ ನೆಕ್ಸ್ಟ್ ಲೊಕೇಶನ್ ಆಗಿತ್ತು.
ಮಧ್ಯಾಹ್ನ 12 ಗಂಟೆಯ ಸುಮಾರಿಗೆ ನರೇಂದ್ರ ರೈ ದೇರ್ಲರವರ ಮಾತುಗಳನ್ನು ಚಿತ್ರೀಕರಿಸಿಕೊಂಡು ಕೊಟ್ಟಿಗೆಹಾರ ಬಿಟ್ಟ ನಾವು ದಾರಿಯುದ್ದಕ್ಕೂ ಗಾಡಿ ನಿಲ್ಲಿಸಿ ಸುಂದರವಾಗಿ ಕಂಡ ಮಾಂಟೇಜು ಚಿತ್ರಿಕೆಗಳನ್ನು, ಹಾಗೂ ಮಲೆನಾಡಿನ ಕೆಲವು ವಿಶಿಷ್ಟ ಆಚರಣೆಗಳನ್ನು ಚಿತ್ರೀಕರಿಸುತ್ತಾ ಕುಪಳ್ಳಿ ತಲುಪುವಷ್ಟರಲ್ಲಿ ಸಮಯ ಸಂಜೆ ೫ ಗಂಟೆ ಸುಮಾರು ಆಗಿತ್ತು.
ದಾರಿಯಲ್ಲಿ ಕಂಡ ಹಲವು ಸಂಗತಿಗಳಲ್ಲಿ ತುಂಬಾ ಇಂಟರೆಸ್ಟಿಂಗ್ ಅನ್ನಿಸಿದವೆಂದರೆ ಬಾಳೆಹೊನ್ನೂರಿನ ಬಳಿ ಕೆಸರುಮಯವಾದ ಗದ್ದೆ ಬಯಲಿನಲ್ಲಿ ನಡೆಯುತ್ತಿದ್ದ ವಾಲಿಬಾಲ್, ಕಬ್ಬಡ್ಡಿ ಮೊದಲಾದ ಆಟೋಟಗಳು, ಹೆಂಗಸರ ಹಗ್ಗ ಜಗ್ಗಾಟ ಸ್ಪರ್ಧೆ, ಮುಂತಾದವು. ಜೊತೆಗೆ ಕಣ್ಮನಗಳು ನೋಡಿ ನೋಡಿ ಸಾಕೆನ್ನುವಷ್ಟು ಚಂದದ ಮಲೆನಾಡಿನ ಹಚ್ಚ ಹಸಿರು ಸೌಂದರ್ಯರಾಶಿ.ಹಾಗಾಗಿ ಕೊಟ್ಟಿಗೆಹಾರದಿಂದ ಕುಪ್ಪಳ್ಳಿಯವರೆಗಿನ ಆ ಜರ್ನಿ ಏಳು ದಿನಗಳ ಸತತ ಚಿತ್ರೀಕರಣದ ಆಯಾಸವನ್ನು ಎಷ್ಟೋ ಕಡಿಮೆ ಮಾಡಿ ನಮ್ಮಲ್ಲಿ ಹೊಸ ಉತ್ಸಾಹ, ಹುರುಪು ತಂದುಕೊಟ್ಟಿದ್ದವು.
ಸಂಜೆ ಹೊತ್ತಿಗೆ ನಮ್ಮ ವ್ಯಾನು ಕೊಪ್ಪ ತೀರ್ಥಹಳ್ಳಿ ಮುಖ್ಯರಸ್ತೆ ಬಿಟ್ಟು ’ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ’ ಎಂಬ ಕಲ್ಲಿನ ಬೋರ್ಡ್ ಬಳಿ ಎಡತಿರುವು ಪಡೆದು ಅಂಕುಡೊಂಕಾದ ಇಳಿಜಾರು ರಸ್ತೆಯಲ್ಲಿ ಸಾಗಿ ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪುರವರ ಅಪ್ಪಟ ಮಲೆನಾಡಿನ ಸೊಗಡಿನ ಕುಪ್ಪಳ್ಳಿ ಮನೆಯ ಮುಂದೆ ಬಂದು ನಿಂತಿತು. ಕುಪ್ಪಳ್ಳಿಯ ಭವ್ಯವಾದ ಆ ಮನೆಯನ್ನು ಮೊದಲ ಬಾರಿಗೆ ನೋಡಿದವರು ಯಾರೇ ಆಗಲಿ ’ವಾವ್!!!’ ಎಂದು ಉದ್ಘಾರ ತೆಗೆಯದೇ ಸುಮ್ಮನಿರಲು ಸಾಧ್ಯವಿಲ್ಲ. ಅಂತಹ ಭವ್ಯ ಮನೆ ಅದು. ಸರ್ಕಾರದ ವತಿಯಿಂದ ಆ ಮನೆ ಸ್ಮಾರಕ ಎಂದು ಘೋಷಿತವಾದ ನಂತರ ತುಂಬಾ ಹಳೆಯದಾಗಿದ್ದ ಕುವೆಂಪುರವರ ಮೂಲ ಮನೆಯನ್ನು ಕೆಡವಿ ಅದೇ ಆಕಾರದಲ್ಲಿ, ಅದೇ ತಳಹದಿಯ ಮೇಲೆ ಮೂಲ ಮನೆಗೆ ತುಂಬಾ ವ್ಯತ್ಯಾಸವಿಲ್ಲದಂತೆ ಹೊಸದಾಗಿ ಮನೆಯನ್ನು ನವೀಕರಿಸಲಾಗಿದೆ. ’ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ’ ಈ ಮನೆಯ ಉಸ್ತುವಾರಿ ನಿರ್ವಹಿಸುತ್ತಿದೆ.ನಾನು ಮತ್ತು ಹೇಮಂತ ಇದಕ್ಕೂ ಮೊದಲು ಹಲವು ಬಾರಿ ಕುಪ್ಪಳ್ಳಿ ಮನೆಯನ್ನು ನೋಡಿದ್ದೆವು.ಆದರೆ ನಮ್ಮ ಕ್ಯಾಮೆರಮನ್ ದರ್ಶನ್ ಹಾಗೂ ನಿತಿನ್ ಈ ಮನೆ ನೋಡುತ್ತಿದ್ದದ್ದು ಅದೇ ಮೊದಲ ಸಾರಿ.ಹಾಗಾಗಿ ಅವರ ಕಣ್ಣುಗಳಲ್ಲಿ, ಮಾತುಗಳಲ್ಲಿ ಅಚ್ಚರಿ ಎದ್ದು ಕಾಣುತ್ತಿತ್ತು.ಕುಪ್ಪಳ್ಳಿಯಲ್ಲಿ ಕುವೆಂಪುರವರ ಆ ಮನೆ, ಅದರ ಒಳಹೊರಗು, ಕವಿಶೈಲ, ಮುಂತಾದವುಗಳನ್ನು ಚಿತ್ರೀಕರಿಸುವ ಯೋಜನೆ ನಮ್ಮದಾಗಿತ್ತು.
ಅದಕ್ಕಾಗಿ ಆ ಮನೆ ಹಾಗೂ ಸುತ್ತಮುತ್ತಲ ಪ್ರದೇಶದ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿಗಳಾದ ಶ್ರೀ ಕಡಿದಾಳು ಪ್ರಕಾಶ್ ರವರ ಅನುಮತಿಯನ್ನು ಮೊದಲೇ ಪಡೆದುಕೊಂಡಿದ್ದೆವು. ಶ್ರೀ. ಕಡಿದಾಳು ಪ್ರಕಾಶ್ ರವರು ಸಂತೋಷದಿಂದಲೇ ಅನುಮತಿ ಕೊಟ್ಟಿದ್ದರ ಜೊತೆಗೆ ಅವರ ಸಿಬ್ಬಂದಿಗೆ ಹೇಳಿ ಕುಪ್ಪಳ್ಳಿಯ ಗೆಸ್ಟ್ ಹೌಸಿನಲ್ಲಿ ಒಂದು ರಾತ್ರಿಯ ಮಟ್ಟಿಗೆ ಉಳಿದುಕೊಳ್ಳಲು ವಸತಿ ಸೌಲಭ್ಯವನ್ನೂ ಕಲ್ಪಿಸಿದ್ದರು. ಹಾಗಾಗಿ ನಾವು ಕುಪ್ಪಳ್ಳಿಗೆ ತಲುಪಿದ ಕೂಡಲೇ ಪ್ರತಿಷ್ಠಾನದ ಸಿಬ್ಬಂದಿಯೊಬ್ಬರು ಬಂದು ಪ್ರಕಾಶ್ ರವರು ಹೇಳಿರುವುದಾಗಿ ಹೇಳಿ ನಮ್ಮನ್ನು ಗೆಸ್ಟ್ ಹೌಸಿಗೆ ಕರೆದುಕೊಂಡು ಹೋಗಿ ರೆಸ್ಟ್ ತೆಗೆದುಕೊಳ್ಳುವಂತೆ ಹೇಳಿದರು. ಆದರೆ ನಾವು ಸಂಜೆ ಸೂರ್ಯಾಸ್ತದ ಹೊತ್ತಿನಲ್ಲಿ ಕವಿಶೈಲದ ನೆತ್ತಿಯಲ್ಲಿ ಕಾಣುವ ಸೂರ್ಯಾಸ್ತವನ್ನು ಚಿತ್ರೀಕರಿಸಬೇಕೆಂದಿದ್ದರಿಂದ ಅವರು ಕೊಟ್ಟ ರೂಮಿನಲ್ಲಿ ನಮ್ಮಗಳ ಲಗೇಜ್ ಇಟ್ಟು ಕ್ಯಾಮೆರ ಹೊತ್ತುಕೊಂಡು ಕವಿಶೈಲದ ನೆತ್ತಿಗೆ ಬಂದೆವು. ಸಮಯ ಸಂಜೆ 6 ಗಂಟೆಯ ಸುಮಾರು.
ಕವಿಶೈಲದ ನೆತ್ತಿಯಲ್ಲಿ ಕಾಣುವ ಸೂರ್ಯಾಸ್ತವನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಿ ಅನುಭವಿಸಬೇಕೆಂಬುದು ನನ್ನ ಅಭಿಪ್ರಾಯ. ‘ಪದಗಳಿಗೆ ನಿಲುಕದ್ದು’ ಅಂತಾರಲ್ಲ ಅಂತದ್ದೊಂದು ಅದ್ಭುತ ಅನುಭವ ಕವಿಶೈಲ ಹಾಗೂ ಅದರ ನೆತ್ತಿಯಿಂದ ಕಾಣುವ ಸುತ್ತಲಿನ ಹಸಿರು ರಾಶಿ ಮತ್ತು ಸೂರ್ಯಾಸ್ತ ನೋಡಿದಾಗ ಆಗುತ್ತದೆ. ಕುವೆಂಪುರವರ ಹಲವು ಕವಿತೆ, ಕೃತಿಗಳಿಗೆ ಸ್ಪೂರ್ತಿಯಾದ ಜಾಗ ಈ ಕವಿಶೈಲ. ಅದೇ ಕಾರಣಕ್ಕೊ ಏನೊ ಕುವೆಂಪುರವರ ಅಂತ್ಯಕ್ರಿಯೆಯನ್ನು ಕವಿಶೈಲದ ನೆತ್ತಿಯಲ್ಲೇ ಮಾಡಿ ಅಲ್ಲಿ ಸಮಾಧಿ ನಿರ್ಮಿಸಲಾಗಿದೆ.ಜೊತೆಗೆ ಬೃಹತ್ ಗಾತ್ರದ ಕಲ್ಲುಗಳಿಂದ ನಿರ್ಮಿಸಲಾಗಿರುವ ಕಮಾನಿನಾಕಾರದ ಬೃಹತ್ ಚೌಕಟ್ಟುಗಳು ಆ ಪ್ರದೇಶದ ಕಲಾತ್ಮಕತೆಯನ್ನು ಹೆಚ್ಚಿಸಿವೆ.ಆ ಎಲ್ಲಾ ಪ್ರಕೃತಿಯ ಸೊಬಗನ್ನು ಕ್ಯಾಮೆರದಲ್ಲಿ ಸೆರೆಹಿಡಿಯುವುದು ಅಸಾಧ್ಯವಾದರೂ ನಮಗೆ ದಕ್ಕಿದಷ್ಟನ್ನು ಚಿತ್ರೀಕರಿಸಿಕೊಂಡೆವು.ಸ್ವಲ್ಪ ಹೊತ್ತಿನಲ್ಲೇ ಸೂರ್ಯ ಮುಳುಗಿ ಸಂಪೂರ್ಣ ಕತ್ತಲಾವರಿಸಿತು.ಆದರೂ ಅಲ್ಲಿಂದ ವಾಪಸ್ ಬರಲು ಮನಸಾಗದೇ ಆ ಬಂಡೆಗಳ ಮೇಲೆ ಸುಮಾರು ಹೊತ್ತು ಕುಳಿತಿದ್ದು 8 ಗಂಟೆಯ ಹೊತ್ತಿಗೆ ನಮ್ಮ ರೂಮಿನ ಕಡೆ ವಾಪಸ್ ಹೊರಟು ಬಂದೆವು. ಕವಿಶೈಲದಿಂದ ಕೆಳಗಡೆಗೆ ವಾಪಸ್ ಬರುವ ದಾರಿಯಲ್ಲಿ ನವಿಲೊಂದು ನಮ್ಮ ಕಣ್ಣೆದುರೇ ಸಿಳ್ಳು ಹಾಕುತ್ತಾ ಹರಿ ಹೋದಾಗ ನಾವು ಆಶ್ಚರ್ಯದ ಜೊತೆಗೆ ಭಯಪಟ್ಟಿದ್ದು ಸುಳ್ಳಲ್ಲ. ರಾತ್ರಿ ಕುಪ್ಪಳ್ಳಿ ಹತ್ತಿರದ ಗಡಿಕಲ್ಲು ಎಂಬ ಊರಿನ ಹೋಟೆಲೋಂದರಲ್ಲಿ ಊಟ ಮಾಡಿ ಬಂದು ನಿದ್ರೆಗೆ ಶರಣಾದೆವು.
ಬೆಳಿಗ್ಗೆ 5 ಗಂಟೆಗೆ ಎದ್ದಾಗ ಕುಪ್ಪಳ್ಳಿಯ ಮೇಲೆ ದಟ್ಟ ಮಂಜು, ಜೊತೆಗೆ ಅಸಾಧ್ಯ ಚಳಿ. ಆ ಚಳಿಯಲ್ಲಿ ಎದ್ದು ಹೊರಗೆ ಹೋಗಲು ಎಳ್ಳಷ್ಟೂ ಇಷ್ಟವಿಲ್ಲದಿದ್ದರೂ ಹೋಗಲೇಬೇಕಾದ್ದರಿಂದ ಎಲ್ಲರೂ ನಾಮಕಾವಾಸ್ತೆ ಮುಖ ತೊಳೆದ ಹಾಗೆ ಮಾಡಿ 6 ಗಂಟೆಯ ಸುಮಾರಿಗೆ ಚಿತ್ರೀಕರಣ ಪ್ರಾರಂಭಿಸಿದೆವು. ಕುಪ್ಪಳ್ಳಿ ಮನೆಯ ಒಳ ಹೊರಗು, ಬೆಳಗಿನ ಹೊತ್ತಿನಲ್ಲಿ ಕಾಣುವ ಕವಿಶೈಲ, ತೇಜಸ್ವಿಯವರ ಸಮಾಧಿ ಸ್ಥಳ, ಕುವೆಂಪು ಹಾಗೂ ತೇಜಸ್ವಿಯವರ ಹೆಸರಿನಲ್ಲಿ ನಿರ್ಮಿಸಿರುವ ಫೋಟೋ ಗ್ಯಾಲರಿಗಳು, ಮುಂತಾದವುಗಳನ್ನು ಸಾಧ್ಯವಾದಷ್ಟೂ ವಿವರವಾಗಿ ಚಿತ್ರೀಕರಿಸಿಕೊಂಡೆವು. ಎಲ್ಲಾ ಮುಗಿಯುವಾಗ ಸಮಯ ಬೆಳಿಗ್ಗೆ 11 ಗಂಟೆ.ಅಲ್ಲಿಗೆ ಕುಪ್ಪಳ್ಳಿಯ ನಮ್ಮ ಚಿತ್ರೀಕರಣ ಮುಗಿದಿತ್ತು.ಬೆಳಿಗ್ಗಿನಿಂದ ನಾವ್ಯಾರೂ ಏನೂ ತಿಂದಿರಲಿಲ್ಲವಾದ್ದರಿಂದ ಅಸಾಧ್ಯ ಹಸಿವು. ನಮಗೆ ಕೊಟ್ಟಿದ್ದ ಗೆಸ್ಟ್ ಹೌಸಿನ ರೂಮಿಗೆ ವಾಪಸ್ ಬಂದು ನಮ್ಮ ಲಗೇಜುಗಳನೆಲ್ಲಾ ವ್ಯಾನಿಗೆ ತುಂಬಿಕೊಂಡು ನಮ್ಮನ್ನು ಆತ್ಮೀಯವಾಗಿ ಕಂಡ ಅಲ್ಲಿನ ಸಿಬ್ಬಂದಿ ವರ್ಗದವರಿಗೆ ಧನ್ಯವಾದ ಹೇಳಿ ಕುಪ್ಪಳ್ಳಿ ಬಿಟ್ಟಾಗ 12 ಗಂಟೆ.
ಅಲ್ಲಿಂದ ಮತ್ತೆ 2 ಕಿಲೊಮೀಟರ್ ದೂರದ ಗಡಿಕಲ್ಲಿಗೆ ಬಂದು ಹೊಟ್ಟೆತುಂಬಾ ತಿಂದು ದೇಹಕ್ಕೆ ಚೈತನ್ಯ ಬಂದ ನಂತರ ತೀರ್ಥಹಳ್ಳಿ, ಮಂಡಗದ್ದೆ ದಾಟಿ ಶಿವಮೊಗ್ಗ-ತೀರ್ಥಹಳ್ಳಿ ರಸ್ತೆಯಲ್ಲಿ ತೀರ್ಥಹಳ್ಳಿಯಿಂದ ಹೊರಟರೆ ಶಿವಮೊಗ್ಗಕ್ಕಿಂತಲೂ ಸುಮಾರು ಮೂರು ಕಿಲೊಮೀಟರ್ ಮೊದಲು ಟೋಲ್ಗೇಟ್ ಬಳಿ ಸಿಗುವ ’ಹೊಸಳ್ಳಿ’ ಎಂಬ ಊರಿನ ಬಳಿ ‘ಡಾ||ಪ್ರಫುಲ್ಲಚಂದ್ರ’ ಎಂಬ ಬೋರ್ಡಿನಲ್ಲಿದ್ದ ಬಾಣದ ಗುರುತು ತೋರಿಸುತ್ತಿದ್ದ ರಸ್ತೆಯ ಕಡೆ ನಮ್ಮ ವ್ಯಾನು ಹೊರಟಿತು. ನಿತಿನ್ ರಸ್ತೆಯ ಮೇಲೆ ಹೋಗುತ್ತಿದ್ದ ಕೆಲವರ ಬಳಿ ’ಸಾರ್ ಪ್ರಫುಲ್ ಚಂದ್ರ ಅವ್ರ ಮನೆ ಯಾವ್ದು…?’ ಅಂತ ಕೇಳುತ್ತಾ ಅವರು ತೋರಿದ ದಾರಿಯಲ್ಲಿ ವ್ಯಾನ್ ಓಡಿಸಿ ಕಡೆಗೆ ಒಂದು ಮನೆಯ ವಿಶಾಲ ಅಂಗಳದಲ್ಲಿ ಗಾಡಿ ನಿಲ್ಲಿಸಿದ. ವ್ಯಾನಿನಿಂದ ಕೆಳಗಿಳಿದು ಸುತ್ತಲೂ ಒಮ್ಮೆ ನೋಡಿದೆ. ಒಂದು ಕಡೆ ಸುಸಜ್ಜಿತವಾದ ಮನೆ, ಇನ್ನೊಂದು ಕಡೆ ಕೃಷಿಗೆ ಸಂಬಂಧಿಸಿದ ಉಪಕರಣಗಳನ್ನಿಡುವ ಶೆಡ್ ಗಳು, ಮಧ್ಯೆ ವಿಶಾಲ ಅಂಗಳ, ಅಲ್ಲೇ ಒಂದು ಮೂಲೆಗೆ ನಿಂತ ದೇವಾನಂದ್ ಸಿನಿಮಾದಲ್ಲಿ ನೋಡಿದಂತಿದ್ದ ಸುಮಾರು 60 ವರ್ಷ ಹಳೆಯದಾದ ಹಸಿರು ಬಣ್ಣದ ಒಂದು ಜೀಪು. ಮತ್ತೊಂದು ಕಡೆ ಟ್ರ್ಯಾಕ್ಟರು, ಮನೆಯ ಹಿಂದೆ ಮುಂದೆ ಸಮೃದ್ಧವಾದ ಅಡಿಕೆ ತೋಟ ಇದೆಲ್ಲಾ ನೋಡಿ ಇದ್ಯಾವುದೊ ಸಿನಿಮಾ ಚಿತ್ರೀಕರಣಕ್ಕೊಸ್ಕರ ಹಾಕಿದ ಮಲೆನಾಡಿನ ಜಮೀನ್ದಾರನ ಮನೆಯ ಸೆಟ್ ನಂತೆ ಅನ್ನಿಸತೊಡಗಿತು.
ಹಾಗೆ ನೋಡುತ್ತಿರಬೇಕಾದರೆ ಜೀಪಿನ ಮರೆಯಿಂದ ನಮ್ಮ ವ್ಯಾನಿನ ಕಡೆಗೆ ಬರುತ್ತಿದ್ದ ಸುಮಾರು 75 ವರ್ಷ ವಯಸ್ಸಿನ ಆಂಗ್ರಿ ಯಂಗ್ ಮ್ಯಾನ್ ಒಬ್ಬರು’ಏನ್ರಿ ಪರಮೇಶ್ವರ್, ಅಡ್ರೆಸ್ ಹೇಳಿದ್ರೆ ಗೊತ್ತು ಮಾಡ್ಕೊಳ್ಳೊಲ್ವಲ್ರಿ, ಯಂಗ್ ಸ್ಟರ್ಸ್ ನೀವು ಫೈರ್ ಥರ ಇರ್ಬೇಕು….ಹತ್ತು ಸಲ ಫೋನ್ ಮಾಡ್ತೀರಿ ಒಂದು ಅಡ್ರೆಸ್ ಕೇಳಕ್ಕೆ…ಬನ್ನಿ…’ ಎಂದು ನನ್ನ ಹೆಗಲ ಮೇಲೆ ಕೈಹಾಕಿ ಕರೆದುಕೊಂಡು ಹೋದರು. ಹೆಸರು ಡಾ||ಪ್ರಫುಲ್ಲಚಂದ್ರ, ತೇಜಸ್ವಿಯವರ ತಾಯಿಯ ತಮ್ಮ ಉರ್ಫ್ ಸೋದರಮಾವ. ಇವರನ್ನು ಬಹಳ ಕಷ್ಟಪಟ್ಟು ಹಿಡಿದಿದ್ದೆ ಮತ್ತು ಅಷ್ಟೇ ಕಷ್ಟಪಟ್ಟು ತೇಜಸ್ವಿಯವರ ಬಗ್ಗೆ ಮಾತನಾಡಲು ಒಪ್ಪಿಸಿದ್ದೆ. ಕಾರಣ ಡಾ||ಪ್ರಫುಲ್ಲಚಂದ್ರರವರು ಪ್ರಶಸ್ತಿ ವಿಜೇತ ಮಾದರಿ ಕೃಷಿಕ. ಶಿವಮೊಗ್ಗದ ಹೊಸಳ್ಳಿ ಬಳಿಯ ಇವರ ಕೃಷಿ ಕ್ಷೇತ್ರಕ್ಕೆ ಪ್ರತಿದಿನ ದೇಶದ ಮೂಲೆ ಮೂಲೆಗಳಿಂದ ರೈತರು, ಸಂದರ್ಶಕರು ಬಂದು ಇವರ ಬೇಸಾಯ ಕ್ರಮ, ಇವರ ಮಾದರಿ ತೋಟ ನೋಡಿಕೊಂಡು ಇವರೊಂದಿಗೆ ಸುಧಾರಿತ ರೀತಿಯಲ್ಲಿ ಬೇಸಾಯ ಮಾಡುವ ಕ್ರಮಗಳನ್ನು ತಿಳಿದುಕೊಂಡು ಹೋಗುತ್ತಿರುತ್ತಾರೆ. ಹಾಗಾಗಿ ಇವರನ್ನು ತೇಜಸ್ವಿಯವರ ಬಗ್ಗೆ ಮಾತನಾಡಲು ಒಪ್ಪಿಸುವುದು ತುಸು ಕಷ್ಟವೇ ಆಗಿತ್ತು.ಆದರೆ ಎಷ್ಟೇ ಕಷ್ಟವಾದರೂ ಪ್ರಫುಲ್ಲಚಂದ್ರರನ್ನು ತೇಜಸ್ವಿಯವರ ಕುರಿತು ಮಾತನಾಡಲು ಮನವೊಲಿಸಲೆಬೇಕೆಂದು ನಾವು ನಿರ್ಧರಿಸಿದ್ದೆವು.ಏಕೆಂದರೆ ಪ್ರಫುಲ್ಲಚಂದ್ರರವರು ತೇಜಸ್ವಿಯವರೊಂದಿಗೆ ಆಡಿಬೆಳೆದವರು.ಬಾಲ್ಯದ ತುಂಟಾಟ, ಕೀಟಲೆ, ಗಲಾಟೆ, ಗದ್ದಲಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದವರು.ಹಾಗಾಗಿ ತೇಜಸ್ವಿಯವರ ಬಾಲ್ಯದ ಕುರಿತು ತಿಳಿದುಕೊಳ್ಳಲು ಇವರ ಮಾತುಗಳು ನಮಗೆ ತುಂಬಾ ಮುಖ್ಯವಾಗಿದ್ದವು.ಕುಪ್ಪಳ್ಳಿಯಿಂದ ಹೊರಟಾಗ ಅವರಿಗೆ ಫೋನ್ ಮಾಡಿ ’ಸಂಜೆಯೊಳಗೆ ನಿಮ್ಮ ಮನೆಗೆ ಬರ್ತೇವೆ ಸಾರ್’ ಎಂದು ಹೇಳಿದ್ದೆ.ಅವರು ಒಪ್ಪಿಕೊಂಡಿದ್ದರು.
ಆಗ ಸಮಯ ಸಂಜೆ 4 ಗಂಟೆ.ಸುಮಾರು 75 ವರ್ಷ ವಯಸ್ಸಿನ ಪ್ರಫುಲ್ಲಚಂದ್ರರಲ್ಲಿ 25 ವಯಸ್ಸಿನ ಯುವಕರಂತಹ ಉತ್ಸಾಹ, ಜೀವನ ಪ್ರೀತಿ, ಲವಲವಿಕೆ ಕಂಡು ನನಗೆ ಆಶ್ಚರ್ಯವಾಯಿತು.
60 ವರ್ಷ ಇತಿಹಾಸದ ತೇಜಸ್ವಿ ಜೀಪು!!!
ನಾನು ತೇಜಸ್ವಿಯವರ ಬಗ್ಗೆ ಮಾತನಾಡುವಂತೆ ಅವರಿಗೆ ಕೇಳಬೇಕು ಎಂದುಕೊಳ್ಳುತ್ತಿರಬೇಕಾದರೆ ಪ್ರಫುಲ್ಲಚಂದ್ರರವರು ’ಬನ್ನಿ ಒಂದು ರೌಂಡ್ ಸುತ್ತಾಡ್ಕೊಂಡ್ ಬರೋಣ…’ ಎಂದು ಹೇಳಿ ಅಲ್ಲಿ ನಿಂತಿದ್ದ ಜೀಪು ಹತ್ತಿ ಸ್ಟೀರಿಂಗ್ ಹಿಡಿದು ಕುಳಿತರು. ನಮಗೆಲ್ಲರಿಗೂ ಮತ್ತೆ ಆಶ್ಚರ್ಯ, ಈ ವಯಸ್ಸಿನಲ್ಲಿ ಇವರು ಇಷ್ಟು ಓಲ್ಡ್ ಮಾಡೆಲ್ ಜೀಪು ಓಡಿಸ್ತಾರ…ಹೋಗ್ಲಿ ಆ ಜೀಪು ಸ್ಟಾರ್ಟಾದ್ರು ಆಗುತ್ತ???’ ಅಂತ. ಸುಮ್ಮನಿರಲಾರದೆ ಅದನ್ನು ಅವರಿಗೆ ಹೇಳಿಯೂಬಿಟ್ಟೆ.ಅದಕ್ಕವರು ’ಹತ್ರಿ ಸುಮ್ನೆ…ನೋಡೋರಂತೆ…’ ಎಂದು ಸಣ್ಣಗೆ ಗದರಿ ಜೀಪು ಹತ್ತಿಸಿಕೊಂಡರು.ಸ್ಟಾರ್ಟ್ ಆಗೋದೆ ಡೌಟು ಎಂದುಕೊಂಡಿದ್ದ 60 ವರ್ಷದ ಓಲ್ಡ್ ಮಾಡೆಲ್ ಜೀಪು ಒಂದೇ ಸಲಕ್ಕೆ ಸ್ಟಾರ್ಟ್ ಆಗಿ ನಮ್ಮ ಹುಬ್ಬೇರುವಂತೆ ಮಾಡಿತು.ಜೀಪಿನ ಹಿಂದೆ ಕುಳಿತಿದ್ದ ನಿತಿನ್, ಹೇಮಂತ, ನಾನು ಮತ್ತು ಮುಂದೆ ಪ್ರಫುಲ್ಲಚಂದ್ರರ ಪಕ್ಕ ಕುಳಿತಿದ್ದ ದರ್ಶನ್ ಎಲ್ಲರೂ ಒಬ್ಬರಿಗೊಬ್ಬರ ಮುಖ ನೋಡಿಕೊಂಡೆವು.ಆ ನೋಟಗಳು ’ಇದು ನಮ್ಮ ನಾಲ್ಕೂ ಜನರ ಬದುಕಿನ ಅಂತಿಮ ಯಾತ್ರೆ. ಹಾಗಾಗಿ ಕಡೆ ಬಾರಿ ಎಲ್ರನ್ನೂ ಸರಿಯಾಗಿ ನೋಡ್ಕೊಂಡ್ ಬಿಡಿ. ಅಕಸ್ಮಾತ್ ಜೀಪು ಓಡಿಸಲು ಕುಳಿತಿರುವ ಅಜ್ಜ ಯಾವುದಾದರೂ ಗುಂಡಿಗೊ, ಬಾವಿಗೊ ಜೀಪು ಬೀಳಿಸಿ ನಮ್ಮನ್ನು ಕೊಲ್ಲದೇ ವಾಪಸ್ ಕರೆದುಕೊಂಡು ಬಂದ್ರೇ ಎಲ್ರದ್ದೂ ಒಟ್ಟಿಗೆ ಬರ್ತ್ ಡೇ ಪಾರ್ಟಿ ಮಾಡೋಣ’ ಎಂಬ ಮನಸಿನೊಳಗಿನ ಭಾವ ಎಲ್ಲರ ಮುಖಗಳಲ್ಲೂ ಎದ್ದು ಕಾಣುತ್ತಿತು.
ದರ್ಶನ್ ಅಂತು ಡೋರ್ ಇಲ್ಲದ ಓಪನ್ ಜೀಪಿನ ಸೀಟಿನ ತುದಿಯಲ್ಲಿ ಇನ್ನೇನು ಹೊರಗೆ ಹಾರೇ ಬಿಡುತ್ತೇನೆ ಎಂಬಂತೆ ಭಯದಿಂದ ಕುಳಿತಿದ್ದರು. ಪ್ರಫುಲ್ಲಚಂದ್ರರವರು ’ಸರಿಯಾಗ್ ಕೂತ್ಕೊಳ್ರಿ, ಯಾಕೆ ಕೂರಾಕ್ಕಾಗ್ದೇ ಇರೊ ಅಂತ ಪ್ರಾಬ್ಲಮ್ ಏನಾದ್ರು ಇದ್ಯೇ ನಿಮಗೆ’ ಎಂದು ಅವರಿಗೆ ಗದರಿಸಿ ಒಳಗಡೆ ಸರಿಯಾಗಿ ಕೂರುವಂತೆ ಹೇಳಿ ಜೀಪನ್ನು ಚಲಾಯಿಸತೊಡಗಿದರು.ಅಂತಿಮ ಯಾತ್ರೆಯಂತೆ ಕಾಣುತ್ತಿದ್ದ ಆ ಜೀಪ್ ಪ್ರಯಣ ಪ್ರಾರಂಭವಾಯಿತು.ಎಲ್ಲರೂ ಭಯ, ಗಾಬರಿಗೊಳಗಾಗಿ ರಸ್ತೆಯಲ್ಲಿ ಜೀಪು ಸಣ್ಣ ಗುಂಡಿ ಹತ್ತಿ ಇಳಿದರೂ ಯಾವುದೋ ದೊಡ್ಡ ಕಮರಿಗೆ ಬಿದ್ದಂತೆ ಉರುಳಾಡುತ್ತಿದ್ದೆವು.ಪ್ರಫುಲ್ಲಚಂದ್ರರವರು ಜೀಪನ್ನು ರಸ್ತೆ ಬಿಟ್ಟು ಅವರ ತೋಟದ ಒಳಗೆ ಡ್ರೈವ್ ಮಾಡತೊಡಗಿದರು. ಪ್ರಯಾಣ ಮುಂದುವರೆದಂತೆ ಪ್ರಫುಲ್ಲಚಂದ್ರರವರಿಗೆ ಡ್ರೈವಿಂಗ್ ಮೇಲೆ ಇದ್ದ ಕಂಟ್ರೋಲ್, ಕರಾರುವಾಕ್ಕುತನ ಕಂಡು ಕ್ರಮೇಣ ನಮ್ಮ ಭಯಗಳು ಕಡಿಮೆಯಾಗತೊಡಗಿದವು.
ಪ್ರಾರಂಭದಲ್ಲಿ ತೋಟದ ಬಗ್ಗೆ, ಕೃಷಿಯ ಬಗ್ಗೆ ಮಾತನಾಡುತ್ತಿದ್ದ ಅವರು ನಂತರ ನಮ್ಮ ಹಾದಿಗೆ ಬಂದು ತೇಜಸ್ವಿಯವರ ಕುರಿತು ಮಾತನಾಡತೊಡಗಿದರು. ಅವರು ಮೊದಲು ಹೇಳಿದ್ದೇ ಆ ಜೀಪಿನ ಬಗ್ಗೆ, ಏಕೆಂದರೆ ಅದು ತೇಜಸ್ವಿಯವರ ಜೀಪಂತೆ!!!
ಅವರು ಹೇಳಿದ ಆ ಜೀಪ್ ಕತೆ ಹೀಗಿದೆ, ತುಂಬಾ ವರ್ಷಗಳ ಹಿಂದೆ, ಸುಮಾರು 60 ವರ್ಷ ಆಗಿರ್ಬೇಕು, ಈ ಜೀಪನ್ನ ತೇಜಸ್ವಿ 800 ರೂಪಾಯಿಗೆ ತಂದ. ಅದು ಹೊಸದು ಅಲ್ವೇನೊ, ಬೇರೆಯವರು ಬಳಸಿದ್ರು ಅಂತ ಕಾಣುತ್ತೆ.ಅಮೇಲೆ ಸ್ವಲ್ಪ ದಿನ ಉಪಯೋಗಿಸಿ ಇದನ್ನ ಎನ್.ಡಿ ಸುಂದರೇಶನಿಗೆ ಕೊಟ್ಟ. ಎನ್.ಡಿ ಸುಂದರೇಶ್ ನನ್ನ ಸೋದರ ಮಾವನ ಮಗ.ತೇಜಸ್ವಿ ನನ್ನ ಮೊದಲನೇ ಅಕ್ಕನ ಮಗ.ನಾನು ಇದನ್ನ ಎನ್.ಡಿ ಸುಂದರೇಶನಿಂದ 2,500 ರೂಪಾಯಿಗೆ ಕೊಂಡುಕೊಂಡೆ.ಆವತ್ತಿನಿಂದ ಈ ಜೀಪು ನನ್ನತ್ರಾನೇ ಉಳ್ಕೊಂಡಿದ್ದೆ.ಇವತ್ತಿಗೂ ಗಟ್ಟಿಮುಟ್ಟಾಗಿದೆ, ಯಾವ ಖಾಯಿಲೆ, ಕಸಾಲೆನೂ ಇಲ್ಲದೇ ಹೆಲ್ತಿಯಾಗಿದೆ’ ಎಂದು ಅವರು ಗಟ್ಟಿಯಾಗಿ ನಕ್ಕರು.ಅಷ್ಟರಲ್ಲಿ ನಾವು ಅಂತಿಮ ಯಾತ್ರೆ ಎಂದುಕೊಂಡಿದ್ದ ಆ ಜೀಪ್ ಯಾತ್ರೆ ಸುಗಮವಾಗಿ ಮುಗಿದಿತ್ತು.
“ಅವನು ಯಮ ತರ್ಲೆ ಅಂದ್ರೆ ನೀವು ಇಮ್ಯಾಜಿನ್ನೇ ಮಾಡಕ್ಕಾಗಲ್ಲ…!!!”
ಜೀಪ್ ಇಳಿದು ಅವರು ಮುಂದುವರೆಸಿದರು, ’ತೇಜಸ್ವಿ ಚಿಕ್ಕೊನಿದ್ದಾಗ ಅವನಿಗೆ ಪ್ರಾಮಿನೆನ್ಸ್ ಜಾಸ್ತಿ ಕೊಡೋರು ಅಮ್ಮ. ಅಮ್ಮ ಇವನಿಗ್ಯಾಕ್ ಜಾಸ್ತಿ ಪ್ರಾಮಿನೆನ್ಸ್ ಕೊಡ್ತಿದ್ರು ಅಂದ್ರೆ ಮೊದಲ್ನೇ ಮಗಳ ಮಗ. ನಾನು ಕೊನೆಯವನು. ನನ್ನನ್ನ ಯಾರೂ
ಕೇರೇ ಮಾಡ್ತಿರ್ಲಿಲ್ಲ. ಆದ್ರೆ ನನ್ನನ್ನ ತೇಜಸ್ವಿ ತಾಯಿ ಅಂದ್ರೆ ನಮ್ಮಕ್ಕ ತುಂಬಾ ಪ್ರೀತ್ಸೋರು. ಯಾಕಂದ್ರೆ ನಾನೇ ಕೊನೆಯವ್ನು ಅಂತ. ನನಗೆ ತೇಜಸ್ವಿ ಮೇಲಿದ್ದ ಸಿಟ್ಟೇನು ಅಂದ್ರೆ ಯವಾಗ್ಲೂ ಅಮ್ಮ ಅವನನ್ನೇ ಕೇರ್ ಮಾಡ್ತಾರಲ್ಲ ನನ್ಯಾಕ್ ಕೇರ್ ಮಾಡೋಲ್ಲ ಅಂತ..ಎಲ್ಲಾ ಅವನಿಗೆ ಪ್ರೊಟೆಕ್ಷನ್ ಇರೋದು ಮನೆನಲ್ಲಿ.ಅಮೇಲೆ ಅವನು ಯಮ ತರ್ಲೆ ಅಂದ್ರೆ ನೀವು ಇಮ್ಯಾಜಿನ್ನೇ ಮಾಡಕ್ಕಾಗಲ್ಲ. ಎಲ್ಲಾ ಚಾಡಿ ಹಚ್ಚಾಕೋದು, ಕೀಟ್ಲೆ ಮಾಡೋದು ಎಲ್ಲಾ ಮಾಡ್ತಿದ್ದ ತೇಜಸ್ವಿ ಚಿಕ್ಕುಡುಗನಲ್ಲಿ.
ಒಂದ್ಸಾರಿ ಏನಾಯ್ತು, ಗುಂಟೋರಿ ಆಟ ಆಡ್ತೀವಿ ಅಂತೇಳಿ ಇವನನ್ನ ನಾಯಿ ಬೋನೊಳಗೆಕೂಡಾಕ್ಬುಟ್ವಿ.ಯಾಕಂದ್ರೆ ಆಗ ನಾವೆಲ್ಲ ಕೊಬ್ರಿನ, ಬೆಲ್ಲಾನ ಕದ್ದು ಹಂಚ್ಕೊಬೇಕಾಗ್ತಿತ್ತು.ಅದಕ್ಕೆ ಏನ್ ಮಾಡ್ಬಿಟ್ವಿ ಪ್ಲಾನ್ ಮಾಡಿ ಗುಂಟೋರಿ ಆಟ ಆಡ್ತೀವಿ ಅಂತೇಳಿ ಇವನನ್ನ ನಾಯಿ ಬೋನೊಳಗೆ ಕೂಡಾಕಿ ಬೀಗ ಹಾಕ್ಬಿಟಿದ್ವಿ.ಇವನೇನ್ ಕೂಗೋದು, ಕಿರುಚೋದು ಜೋರಾಯ್ತು.’ನನ್ನನ್ನ ನಾಯಿ ಬೊನೊಳಗೆ ಕೂಡಾಕ್ಬಿಟಿದಾರೆ, ಅವರು ಇವರು…’ ಅಂತೆಲ್ಲಾ.ಅಷ್ಟರಲ್ಲಿ ಅಣ್ಣ ಬರೋದಕ್ಕೂ, ಇವನು ನಾಯಿಗೂಡ್ನಿಂದ ಆಚೆ ಬರೋದಕ್ಕೂ ಸರಿಹೋಯ್ತು. ಅಲ್ಲಿಗೆ ಎಲ್ಲಾ ಮುಗಿದೀಯ್ತು..ಹಹಹ…’ ಎಂದು ಬಾಲ್ಯದ ಘಟನೆಯೊಂದನ್ನು ನೆನಪಿಸಿಕೊಂಡು ಮಗುವಿನಂತೆ ನಕ್ಕರು ಡಾ||ಪ್ರಫುಲ್ಲಚಂದ್ರ. ನಂತರ ಅವರೇಮುಂದುವರೆಸಿದರು, ’ಆಮೇಲೆ ಚಿಕ್ಕವನಿದ್ದಾಗಲೇ ಅವನು ಏನಾದ್ರು ಹಿಡಿದ ಅಂದ್ರೆ ಅದು ಹಾಳಾದ್ರು ಪರ್ವಾಗಿಲ್ಲ ಅದರ ಬೆನ್ನು ಹತ್ತಿಅದನ್ನ ಸಂಪೂರ್ಣ ನೋಡಿ, ತಿಳ್ಕೊಂಡು ಬಿಡೋನು. ಅದು ಅವನ ಲೈಫ್ ಪೂರ್ತಿ ಇತ್ತು ನೋಡಿ.ಫೋಟೋಗ್ರಫಿಗೆ ಕೈ ಹಾಕಿದ್ರೆ ಕೊನೆ ತನಕ ಬಿಡ್ತಿರ್ಲಿಲ್ಲ, ಮೀನು ಹಿಡಿಯಕ್ಕೆ ಶುರು ಮಾಡಿದ ಅಂದ್ರೆ ಎಲ್ಲಾ ಬಿಟ್ಟು ಅದನ್ನೇ ಸರ್ವಸ್ವ ಮಾಡ್ಕೊಂಡ್ ಬಿಡೋನು.ಫುಲ್ ಇನ್ವಾಲ್ಮೆಂಟು…ಅದನ್ನ 100% ಮಾಡಿ ಅದನ್ನ ಚೆನ್ನಾಗ್ ಬೆಂಡೆತ್ತಿ ಕೈ ಬಿಟ್ಟು ಬಿಡೋನು.ಹಂಗೆ ಪರ್ಫೆಕ್ಷನಿಸ್ಟ್ ಅವನು.ಅದೇ ಥರ ಟಾರ್ಗೆಟ್ ಶೂಟಿಂಗಿನಲ್ಲೂ ಅಷ್ಟೇನೆ, ಕೋವಿ ಹಿಡಿದ ಅಂದ್ರೆ ಗುರಿ ಬಿತ್ತು ಅಂತ್ಲೇ ಅರ್ಥ ಅದು.ಕೊನೆಕೊನೆಗೆ ಏನಾಯ್ತು ಅಂದ್ರೆ ಕಂಪ್ಯೂಟರ್ ಹಿಂದೆ ಬಿದ್ದು ದಿನಕ್ಕೆ 16-18 ಗಂಟೆ ಕೆಲಸ ಮಾಡೋನು.He was fantastic!!!.ಅವನ ವೇ ಆಫ್ ಥಿಂಕಿಂಗೇ ಬೇರೆ.ಹಾಗ್ ನೋಡುದ್ರೆ ನನಗೂ ಅವನಿಗೂ ಅರ್ಥ ಸಂಬಂದವೇ ಇಲ್ಲ ನನ್ನ ಅವನ ಇಂಟರೆಸ್ಟ್ ಗಳಲ್ಲಿ.ಎಂದು ನಗುತ್ತಾ ಮಾತು ಮುಂದುವರಿಸಬೇಕು ಎನ್ನುವಷ್ಟರಲ್ಲಿ ಪ್ರಫುಲ್ಲಚಂದ್ರರ ಮಗ ಬಂದು ’6ಗಂಟೆ, ಹೊರಟೋಗ್ತಾರೆ, ಲೇಟಾಗುತ್ತೆ…’ ಎಂದು ಅಸ್ಪಷ್ಟವಾಗಿ ಅವರ
ಅಪ್ಪನ ಬಳಿ ಹೇಳಿದರು.ತಕ್ಷಣ ಪ್ರಫುಲ್ಲಚಂದ್ರರವರು ’ಓಹ್…ಹೌದಲ್ಲ, ಮರೆತಿದ್ದೆ. ಪರಮೇಶ್ವರ ಸಾರಿ!! ನಾನು ಸ್ವಲ್ಪ ಲಾಯರ್ ನೋಡೋಕೆ ಹೋಗ್ಬೇಕು.ಬೆಳಿಗ್ಗೇನೆ ಹೇಳಿದ್ದೆ ಬರ್ತೀನಿ ಅಂತ. ನೀವು ಕಾಫಿ ಕುಡ್ಕೊಂಡ್ ಅಮೇಲೆ ಹೋಗಿ’ ಎಂದು ಹೇಳಿ ಆತುರಾತುರವಾಗಿ ಹೊರಟೇಹೋದರು.ತೇಜಸ್ವಿಯವರ ಬಗ್ಗೆ ಪ್ರಫುಲ್ಲಚಂದ್ರರವರ ಬಳಿ ಕೇಳಬೇಕಾಗಿದ್ದ ವಿಷಯಗಳು ತುಂಬಾ ಇದ್ದವು.ಹಾಗಾಗಿ ನಮಗೆ ಭ್ರಮನಿರಸನವಾಯಿತು.ಅದೇ ಬೇಸರದಲ್ಲಿ ಸಂಜೆ ಅಲ್ಲಿಂದ ಹೊರಟು ಶಿವಮೊಗ್ಗಕ್ಕೆ ಬಂದೆವು.ಅಲ್ಲಿ ತೇಜಸ್ವಿಯವರ ಹಿಂದೆ ಕಾಡು ಮೇಡು ಅಲೆದ ವ್ಯಕ್ತಿಯೊಬ್ಬರನ್ನು ಮಾತನಾಡಿಸಬೇಕಿತ್ತು.ಅವರಿಗೆ ಫೋನ್ ಮಾಡಿದೆ.ಅವರು ಲ್ಯಾಂಡ್ ಮಾರ್ಕ್ ಹೇಳಿ ಈಗಲೇ ಬರಬಹುದೆಂದು ಹೇಳಿದರು.ಅವರು ಹೇಳಿದ ಹಾಗೆ ಶಿವಮೊಗ್ಗ ನಗರದಲ್ಲಿನ ಅವರ ಮನೆಯ ಮುಂದೆ ಹೋದೆವು.ಗೇಟಿನ ಮೇಲೆ ಡಾ|| ಮಂಜಪ್ಪ, ಎಂಬ ಬೋರ್ಡು ತೂಗುತ್ತಿತ್ತು.ನಮ್ಮ ವ್ಯಾನಿನ ಸದ್ದು ಕೇಳಿ ಕೆಂಪು ಸ್ವೆಟರ್ ಧರಿಸಿದ್ದ ಸುಮಾರು 45 ವಯಸ್ಸಿನ ವ್ಯಕ್ತಿಯೊಬ್ಬರು ಮನೆಯಿಂದ ಹೊರಬಂದು ಆತ್ಮೀಯವಾಗಿ ನಗುತ್ತಾ ನಮ್ಮನ್ನು ಸ್ವಾಗತಿಸಿದರು.ಪರಸ್ಪರ ಪರಿಚಯ ಎಲ್ಲವೂ ಮುಗಿದ ನಂತರ ನೇರವಾಗಿ ತೇಜಸ್ವಿಯವರ ಒಡನಾಟದ ಕುರಿತು ಮಾತನಾಡುವಂತೆ ಅವರಿಗೆ ಕೇಳಿದೆ. ಅವರು ನಗುತ್ತಾ ಮಾತು ಪ್ರಾರಂಭಿಸಿದರು,
Theoryಎಂಬ ಪುಸ್ತಕದ ಬದನೆಕಾಯಿ vs Practical knowledge
’ನನ್ನೆಸ್ರು ಡಾ|| ಮಂಜಪ್ಪ ಅಂತ, ಪ್ರೊಫೆಸರ್ ಆಫ್ ಫಿಶರೀಸ್, ಅಗ್ರಿ ಯೂನಿವರ್ಸಿಟಿ, ಶಿವಮೊಗ್ಗ. ನಾನು ನನ್ನ ಎಜುಕೇಶನ್ ಎಲ್ಲಾ ಮುಗಿಸಿ ಕೃಷಿ ಇಲಾಖೆಗೆ ಕೆಲಸಕ್ಕೆ ಸೇರ್ಕೊಂಡಾಗ ನನಗೆ ಮೂಡಿಗೆರೆಗೆ ಪೋಸ್ಟಿಂಗ್ ಆಯ್ತು. ಆಗ ತೇಜಸ್ವಿಯವ್ರು ನಮ್ಮ ಕೃಷಿ ಸಂಶೋಧನಾ ಆಫೀಸಿಗೆ ಬರ್ತಾ ಇದ್ರು.ಆಗ ನನಗೂ ಅವರಿಗೂ ಪರಿಚಯ ಆಯ್ತು.ಆದ್ರೆ ತುಂಬಾ ಮುಖ್ಯವಾಗಿ ತೇಜಸ್ವಿಯವರ ಜೊತೆ ಒಡನಾಟ ಪ್ರಾರಂಭ ಆಗೋದಿಕ್ಕೆ ಕಾರಣ ಫಿಶಿಂಗು’ ಎಂದರು.’ಅದು ಹೇಗೆ?ಸ್ವಲ್ಪ ವಿವರವಾಗಿ ಹೇಳ್ತೀರ…’ ಎಂದು ನಾನು ಅವರನ್ನು ಪ್ರಶ್ನಿಸಿದೆ.ಮಂಜಪ್ಪನವರು ಮುಂದುವರೆಸಿದರು, ’ಹ್ಯಾಗೆ ಅಂದ್ರೆ, ನಾನು ಆಗ್ತಾನೆ ಮೀನುಗಾರಿಕೆನಲ್ಲಿ ಮಾಸ್ಟರ್ ಡಿಗ್ರಿ ಮುಗಿಸಿ ಕೆಲಸಕ್ಕೆ ಸೇರ್ಕೊಂಡಿದ್ದೆ.ನಾನು ಓದಿದ್ದು ಫಿಶರೀಸ್ ಆದ್ದರಿಂದ ನನಗೂ ತೇಜಸ್ವಿಯವ್ರಿಗೂ ಸ್ವಲ್ಪ ಜಾಸ್ತಿ ಒಡನಾಟ ಪ್ರಾರಂಭ ಆಯ್ತು.ಮೀನು ಅನ್ನೊ ಕಾಮನ್ ಎಲಿಮೆಂಟು ನನ್ನ ಅವರ ಮಧ್ಯದಲ್ಲಿ ವಿಶ್ವಾಸ ಬೆಳೆಸೋದಕ್ಕೆ ಕಾರಣ ಆಯ್ತು’ ಎಂದರು.’ಸರಿ ಹಾಗಿದ್ರೆ, ಫಿಶಿಂಗ್ ಬಗ್ಗೇನೆ ಹೇಳಿ ಸಾರ್.ಹೇಗಿದ್ವು ತೇಜಸ್ವಿಯವರ ಜೊತೆಗಿನ ಅವತ್ತಿನ ದಿನಗಳು?’ ನಾನು ಕೇಳಿದೆ.ಅವರು ಒಂದೊಂದೇ ನೆನಪಿಸಿಕೊಳ್ಳುತ್ತಾ ಹೋದರು, ’ಮೀನು ಹಿಡಿಯೋದು ಅಂದ್ರೆ ತೇಜಸ್ವಿಯವ್ರಿಗೆ ಅತ್ಯುತ್ಸಾಹ. ಬಹಳ ಉತ್ಸಾಹದಿಂದ ಇರ್ತಿದ್ರು ಯಾವಾಗ್ಲೂ.
ಮೀನು ಹಿಡಿಯಕ್ಕೆ ಹೋಗೋಕೆ ಮುಂಚೆ ನಾವು ಕೆಲವು ಪ್ರಿಪರೇಶನ್ಸ್ ಮಾಡ್ಕೊಳ್ತಿದ್ವಿ. ಒಂದು, ಅವರ ತೋಟದಲ್ಲೇ ಇರತಕ್ಕಂತ ತೊರೆಗಳಲ್ಲಿ, ಕೆರೆಗಳಲ್ಲಿ ಹಾಗೂ ಕಲ್ಲಿನ ಸಂಧಿ ವಾಸ ಮಾಡ್ತಕ್ಕಂತ ಏಡಿಗಳನ್ನ, ಅವುಗಳನ್ನ ಕಲ್ಲೇಡಿಗಳು ಅಂತ ಕರೀತಾರೆ, ಅವರೇ ಸ್ವತಃ ಪ್ಯಾಂಟ್ ಮಡಚಿ ನೀರಿಗಿಳಿದು ಆ ಏಡಿಗಳನ್ನ ಬರಿಗೈಯಲ್ಲಿ ಹಿಡಿದು, ಅವುಗಳ ಕಾಲು ಮುರಿದು ಅದನ್ನ ಒಂದು ಚೀಲದೊಳಗಡೆ ಹಾಕ್ಕೊಳ್ತ ಇದ್ರು. ಆ ಏಡಿಗಳನ್ನ ಹಿಡಿಯಕ್ಕೆ ಫಿಶರೀಸ್ ಓದಿ ಬಂದ ನನಗೇ ತುಂಬಾ ಭಯ ಆಗ್ತಿತ್ತು.Though ನಾನು ಮೀನುಗಾರಿಕೆ ಓದಿದ್ರೂ ಪ್ರಾಕ್ಟಿಕಲ್ ನಾಲೆಡ್ಜ್ ಇರ್ಲಿಲ್ಲ ಹಾಗಾಗಿ.ಎರಡ್ನೇದು, ಎರೇಹುಳು. ತೇಜಸ್ವಿಯವರ ತೋಟದಲ್ಲಿ ಎಲ್ಲೇ ಅಗೆದ್ರೂ ಎರೆಹುಳಗಳು ಸಾಕಷ್ಟು ಸಿಕ್ತಿದ್ವು.ಇದನ್ನೂ ತೇಜಸ್ವಿಯವರೇ ಪಿಕಾಸಿ ತಗೊಂಡು ಅಗೆದು ಮಣ್ಣು ಬಿಡಿಸಿ ಎರೇಹುಳಗಳನ್ನ ಹಿಡಿದು ಒಂದು ಡಬ್ಬಿಗೆ ಹಾಕ್ಕೊಳ್ತಿದ್ರು.ಇಷ್ಟು ಪ್ರಿಪರೇಷನ್ ಮಾಡ್ಕೊಂಡು ನಾವು ಮೀನು ಹಿಡಿಯಕ್ಕೆ ಹೋಗ್ತಾ ಇದ್ವಿ.ಮತ್ತೆ ಮೀನು ಹಿಡಿಯಕ್ಕೆ ಹೋಗೋದು ಅಂದ್ರೆ ಪಕ್ಕಾ ಟೈಮಿಂಗ್ಸ್ ನಮ್ಮದು.ಸಂಜೆ ನಾಲ್ಕು ಗಂಟೆಗೆ ಹೋಗ್ತಾ ಇದ್ವಿ. ಯಾರಾದ್ರೂ ನೋಡಿದ್ರೆ ತೇಜಸ್ವಿಯವ್ರು ಮೀನು ಹಿಡಿಯಕ್ಕೆ ಹೋಗ್ತಾ ಇದಾರೆ ಅಂದ್ರೆ ಸಂಜೆ ನಾಲ್ಕು ಗಂಟೆ ಅಂತಾನೇ ಅರ್ಥ. ನಾಲ್ಕು ಗಂಟೆಗೆ ಹೋದೋರು ಸಾಯಂಕಾಲ ಏಳು, ಏಳುವರೆಗೆ ವಾಪಸ್ ಬರ್ತಾ ಇದ್ವಿ.
ಅಮೇಲೆ ಮೀನು ಹಿಡಿಯೋಕೆ ಕೂತ್ವಿ ಅಂದ್ರೆ ನಮಗೆ ಸುತ್ತಾ ಏನಾಗ್ತಿದೆ, ಯಾರು ಬಂದ್ರು, ಯಾರು ಹೋದ್ರು ಅಂತ ಗೊತ್ತಾಗ್ತಾನೇ ಇರ್ಲಿಲ್ಲ. Because ಫಿಶಿಂಗಿನಲ್ಲಿMain is concentration. ಯಾಕಂದ್ರೆ ಮೀನು ಹಿಡಿವಾಗ ಒಂದು ಸೂಕ್ಷ್ಮತೆ ಏನು ಅಂದ್ರೆ ಒಂದ್ ಸಲ ಏನಾದ್ರೂ ಗಲಾಟೆ ಆದ್ರೆ, ಡಿಸ್ಟರ್ಬ್ ಆದ್ರೆ, ಸದ್ದು ಕೇಳಿದ್ರೆ ಮೀನುಗಳು ಮತ್ತೆ ಗಾಳದ ಕಡೆ ತಿರುಗಿಯೂ ನೋಡಲ್ಲ. ಅವು ಹುಶಾರಾಗ್ಬಿಡ್ತಾವೆ. ಅದಕ್ಕೆ ಸ್ಪಾಟಿಗೆ ಹೋದ ತಕ್ಷಣ ಕಂಪ್ಲೀಟ್ ಸೈಲೆಂಟ್ ಆಗ್ಬಿಡ್ತಿದ್ವಿ.ಹಾಗೆ ಅಷ್ಟು ಸೂಕ್ಷ್ಮವಾಗಿ ನಾವು ಕೆಲಸ ಮಾಡ್ತಿದ್ವಿ ನಾವು.ಅದನೆಲ್ಲಾ ತೇಜಸ್ವಿಯವರೇ ನಮಗೆ ಹೇಳ್ಕೊಡ್ತಾ ಇದ್ರು’ ಎಂದು ಮಾತಿಗೆ ಅಲ್ಪವಿರಾಮ ಕೊಟ್ಟರು.ನಾನು ಆವತ್ತಿನ ಫಿಶಿಂಗ್ ದಿನಗಳಲ್ಲಿ ಮರೆಯಲಾಗದಂತಹ ಘಟನೆ ಯಾವುದಾದರೂ ಇದೆಯ ಸಾರ್?’ ಎಂದು ಅವರನ್ನು ಕೇಳಿದೆ.’ಓ…ತುಂಬಾ ಇದಾವೆ’ ಎಂದರು.’ಒಂದೆರಡು ಘಟನೆ ಹೇಳ್ತೀರ…’ ಎಂದು ಅವರಿಗೆ ಕೇಳಿದೆ. ಮಂಜಪ್ಪನವರು ನಗುತ್ತ ಕೆಲ ಘಟನೆಗಳನ್ನು ಹಂಚಿಕೊಳ್ಳತೊಡಗಿದರು, ’ನಾವು ಪ್ರಾರಂಭದಲ್ಲಿ ಮೀನು ಹಿಡಿಯಕ್ಕೆ ಅಂತ ಹೋಗ್ತಾ ಇದ್ದಿದ್ದು ಇಲ್ಲಿ ಸಕಲೇಶಪುರದ ಹತ್ರ ಹಾನುಬಾಳ್ ಅಂತ ಒಂದು ಜಾಗ ಇದೆ, ಅಲ್ಲಿ ಹೇಮಾವತಿ ನದಿಗೆ. ಅದೊಂದು Narrow ರಿವರ್ ಅದು.
ಇದು ಸುಮಾರು 20 ವರ್ಷದ ಹಿಂದಿನ ಘಟನೆ.ಆ ನದಿ ಚಿಕ್ಕದ್ದಾದ್ರೂ ಅದರಲ್ಲಿ ಒಳ್ಳೊಳ್ಳೆ ಗುಂಡಿಗಳಿದ್ವು.ಅಲ್ಲಿ ಮೀನುಗಳೆಲ್ಲಾ ಬಂದು ಸೇರ್ಕೊಂಡು ಅದು ಒಂತರಾ ಕಪ್ಪಗೆ ಮಸಿ ಥರ ಕಾಣೋದು.ತೇಜಸ್ವಿಯವರು ಆ ಗುಂಡಿ ಹತ್ರ ಕೂತ್ಕೊಂಡು ಸ್ಪಿನ್ನರ್ ಹಾಕಿ ಮೀನು ಹಿಡಿಯೋಕೆ ಟ್ರೈ ಮಾಡ್ತಿದ್ರು. (ಸ್ಪಿನ್ನರ್: ಬಣ್ಣಬಣ್ಣದ ಕುಚ್ಚಿನಿಂದ ಮುಚ್ಚಿರುವ ಗಾಳ. ಮೇಲಿನಿಂದ ರಾಡಿನ ಚಕ್ರ ತಿರುಗಿಸಿದರೆ ನೀರಿನ ಒಳಗಿರುವ ಗಾಳ ನೀರಿನಲ್ಲಿ ತಿರುಗಿ ಮೀನುಗಳನ್ನು ಆಕರ್ಷಿಸುತ್ತದೆ. ಮೀನುಗಳು ತಿರುಗುತ್ತಿರುವ ಬಣ್ಣದ ಕುಚ್ಚಿನ ಗಾಳವನ್ನು ಯಾವುದೊ ಹುಳವೆಂದು ತಿಳಿದಿ ಅದಕ್ಕೆ ಬಾಯಿ ಹಾಕಿ ಗಾಳಕ್ಕೆ ಸಿಕ್ಕಿ ಬೀಳುತ್ತವೆ). ಹಾಗೆ ಅವರು ಕೂತು ಸ್ಪಿನ್ನರ್ ತೆಗೆದು ನೀರಿಗೆ ಹಾಕಿ ಒಂದು ಸಲ ತಿರುಗಿಸಿದ್ರು ಅಷ್ಟೆ.ಕೈಯಲ್ಲಿ ಹಿಡಿದಿದ್ದ ರಾಡು ಟೈಟಾಗಿ ಪೂರ್ತಿ ಬೆಂಡಾಗೋಕೆ ಶುರುವಾಯ್ತು.ನಮ್ಮ ಅಭ್ಯಾಸ ಏನು ಅಂದ್ರೆ ನದಿ ಹತ್ರ ಹೋಗೊವರ್ಗೂ ಅಷ್ಟೇನೆ ಎಲ್ರೂ ಒಟ್ಟಿಗೆ ಹೋಗ್ತಿದ್ದಿದ್ದು.ಅಮೇಲೆ ಎಲ್ರೂ ದೂರ ದೂರ ಹೋಗಿ ಒಬ್ಬೊಬ್ರೇ ಕೂತು ಫಿಶಿಂಗ್ ಮಾಡ್ತಿದ್ವಿ. ಅವತ್ತು ನಾನು, ರಘು(ರಾಘವೇಂದ್ರರವರು), ರಾಮದಾಸ್ ಅವರು, ಮತ್ತೆ ತೇಜಸ್ವಿಯವರು ಒಟ್ಟು ನಾಲ್ಕು ಜನ ಹೋಗಿದ್ವಿ ಅಲ್ಲಿಗೆ. ಇವರು ಯಾವಾಗ ಕೈಲಿದ್ದ ರಾಡು ಪೂರ್ತಿ ಬೆಂಡಾಗೋಕೆ ಶುರುವಾಯ್ತೊ ’ಮಂಜಪ್ಪ, ರಘು ಎಲ್ರೂ ಬನ್ರಿ’ ಅಂತ ಕೂಗಿದ್ರು.ಹೋಗಿ ನೋಡ್ದಾಗ ಕೈಲಿದ್ದ ರಾಡು ಬೆಂಡಾಗ್ತಾನೇ ಇದೆ.ತಕ್ಷಣ ನಮಗೆ ಗೊತ್ತಾಯ್ತು, ಯಾವುದೊ ದೊಡ್ಡ ಮೀನೇ ಸಿಕ್ಕಿದೆ ಅಂತ. ಅಮೇಲೆ ಎಲ್ರೂ ಸೇರಿ ಕಷ್ಟಪಟ್ಟು ಆ ಮೀನನ್ನ ಮೇಲಕ್ಕೆ ಎಳ್ಕೊಂಡ್ವಿ.ಅದು ಬಾಳೆ ಮೀನು ಸುಮಾರು 18 ಕೆ.ಜಿ ಸೈಜ಼್ ಇತ್ತು.ನಮಗಂತೂ ತುಂಬಾ ಖುಷಿ.ಯಾಕಂದ್ರೆ ಅಲ್ಲಿವರೆಗೂ ಅಷ್ಟು ದೊಡ್ಡ ಬಾಳೆಮೀನೇ ನೋಡಿರ್ಲಿಲ್ಲ ನಾವ್ಯಾರು. ನಾನಂತು ಪುಸ್ತಕದಲ್ಲಿ, ಮಾರ್ಕೆಟ್ಟಿನಲ್ಲಿ, ಕಾಲೇಜ್ ಲ್ಯಾಬೊರೇಟರಿನಲ್ಲಿ ಕಾಲು ಕೆ.ಜಿ, ಅರ್ಧ ಕೆಜಿ ಕ್ಯಾಟ್ ಫಿಶ್ ನೋಡಿದ್ನೇ ಹೊರತು ಅಷ್ಟು ದೊಡ್ಡ ಮೀನು ಇರಬಹುದು ಅನ್ನೊ ಕಲ್ಪನೆ ಕೂಡ ಇರ್ಲಿಲ್ಲ ನನಗೆ. ಅಮೇಲೆ ಮತ್ತೆ ಸ್ಪಿನ್ನರ್ ಹಾಕಿದ್ರು ಮತ್ತೊಂದ್ ಮೀನು ಸಿಕ್ತು, ಹಾಗೆ ಸುಮಾರು ಮೀನು ಹಿಡಿದ್ವಿ ಅವತ್ತು.ಅಮೇಲೆ ಅದನ್ನೆಲ್ಲಾ ನಮ್ಮ ರಘು ಮನೆಗೆ ತಗೊಂಡ್ ಹೋಗಿ ರಾತ್ರಿ ಎಲ್ಲಾ ಅವರ ಮನೇಲೆ ಕ್ಲೀನ್ ಮಾಡಿ ಇರೊಬರೊ ಥರದ ಅಡಿಗೆ ಎಲ್ಲಾ ಮಾಡಿ ಬೇಜಾರಾಗೊವರೆಗೂ ತಿಂದ್ವಿ.ಭಾಳೆ ಮೀನುಗಳು ಅಷ್ಟು ದೊಡ್ಡದಾಗಿ ಬೆಳೀಬೇಕು ಅಂದ್ರೆ ಸುಮಾರು ಏಳೆಂಟು ವರ್ಷ ಆ ಗುಂಡಿನಲ್ಲೇ ಸೇರ್ಕೊಂಡಿರ್ಬೇಕು.ಇಲ್ಲಾಂದ್ರೆ ಅಷ್ಟು ದೊಡ್ಡದಾಗಿ ಬೆಳೆಯೋದಿಲ್ಲ ಅವು.ನದೀಲಿ ನೀರು ಜಾಸ್ತಿ ಆದಾಗ ಗುಂಡಿ ಬಿಟ್ಟು ಮೇಲಕ್ಕೆ ಬರ್ತವೆ, ನೀರು ಕಡಿಮೆ ಆದಾಗ ಮತ್ತೆ ಅದೇ ಗುಂಡಿ ಒಳಗಡೆನೇ ಹೋಗಿ ಸೇರ್ಕೊತಾವೆ.ಸೊ ಅದೊಂದು ಒಳ್ಳೆ ಅನುಭವ ತೇಜಸ್ವಿಯವರ ಜೊತೆ ನನಗೆ ಆಗಿದ್ದು.
ಅಂದ್ರೆ ಅಲ್ಲಿವರೆಗೂ ಫಿಶಿಂಗ್ ಅನ್ನೋದರ ಪ್ರಾಕ್ಟಿಕಲ್ Experience ಇರ್ಲಿಲ್ಲನನಗೆ.ಬರೀ ಬುಕ್ಸ್ ಓದಿ ಡಿಗ್ರಿ ತಗೊಂಡ ಹಾಗಾಗಿತ್ತು.ಜೊತೆಗೆ ರಾಡು, ರೀಲು, ಪಾಠದಲ್ಲಿ ಓದಿದ್ದೆ, ಮೀನು ಹಿಡೀತಾರೆ ಅನ್ನೊದು ಕೇಳಿದ್ದೆ ಅಷ್ಟೆ. ಆದ್ರೆ ಹ್ಯಾಗ್ ಮೀನು ಹಿಡಿತಾರೆ, ಹಿಡಿಯೊ ಕ್ರಮ ಏನು ಅಂತ ಗೊತ್ತಿರ್ಲಿಲ್ಲ. ತೇಜಸ್ವಿಯವರ ಜೊತೆ ಸೇರಿದ ಮೇಲೆ ಪುಸ್ತಕ ಓದೋದಕ್ಕಿಂತಲೂ ಅಥವ ಪುಸ್ತಕದಲ್ಲಿಲ್ಲದೇ ಇರೋದಕ್ಕಿಂತಲೂ ಹೆಚ್ಚಿನ ಜ್ಞಾನ ಸಿಕ್ತಾ ಹೋಯ್ತು.
“ಪ್ರಾಣಾಪಾಯದಿಂದ ಎಸ್ಕೇಪ್!!!”
ಇನ್ನೊಂದು ಮರೆಯಕ್ಕೆ ಆಗ್ದೇ ಇರೊ ಅಂತಹ ಘಟನೆ ಒಂದಿದೆ.ಅವತ್ತು ನಾನು ತೇಜಸ್ವಿಯವ್ರು ಇಬ್ರೇ ಅವರ ಸ್ಕೂಟರಿನಲ್ಲಿ ಇಲ್ಲಿ ಖಾಂಡ್ಯದ ಹತ್ರ ಭದ್ರಾ ನದಿಗೆ ಫಿಶಿಂಗಿಗೆ ಅಂತ ಬಂದ್ವಿ.ಸ್ವಲ್ಪ ಮುಂದೆ ಸ್ವಲ್ಪ ಮುಂದೆ ಅಂತ ಮುಂದೆ ಹೋಗ್ತಾ ಹೋಗ್ತಾ ಕೊನೆಗೆ ತಿರುಗಿ ನೋಡಿದ್ರೆ ಕರೆಕ್ಟಾಗಿ ಭದ್ರಾ ನದಿ ಮಧ್ಯಕ್ಕೆ ಬಂದು ನಿಂತಿದ್ವಿ.ಮಧ್ಯದಲ್ಲಿ ಒಂದು ವಿಶಾಲವಾದ ಬಂಡೆ ಇದೆ.ಅಲ್ಲಿಗೆ ಬಂದುಬಿಟ್ಟಿದ್ವಿ.ಸರಿ ಜಾಗ ಚೆನ್ನಾಗಿದೆ ಅಂತ ಅಂದ್ಕೊಂಡು ಇಬ್ರೂ ಬೇರೆ ಬೇರೆ ಕಡೆ ಕೂತ್ಕೊಂಡ್ವಿ.ಅದು ಹೇಗಿತ್ತು ಅಂದ್ರೆ ನನಗೆ ತೇಜಸ್ವಿಯವ್ರು ಕಾಣ್ತಿರ್ಲಿಲ್ಲ, ಆದ್ರೆ ಅವ್ರಿಗೆ ನಾನು ಕೂತಿರೋದು ಚೆನ್ನಾಗಿ ಕಾಣಿಸ್ತಿತ್ತು.ಹಾಗೆ ಇಬ್ರೂ ನಮ್ಮ ನಮ್ಮ ಪಾಡಿಗೆ ಕೂತು ಮೀನು ಹಿಡೀತಾ ಇದ್ವಿ.ಸ್ವಲ್ಪ ಹೊತ್ತಾದ್ಮೇಲೆ ನೋಡ್ತೀನಿ ತೇಜಸ್ವಿ ಎದ್ದು ನಿಂತ್ಕೊಂಡು ನನ್ ಕಡೆ ಕೈ ತೋರಿಸ್ಕೊಂಡು ಗಾಬರಿಯಾಗಿ ಏನೊ ಕೂಗಿ ಹೇಳ್ತಾ ಇದಾರೆ.ಆದ್ರೆ ನದಿ ಹರಿಯೊ ಸದ್ದಿನಲ್ಲಿ ಅವರು ಏನ್ ಹೇಳ್ತಾ ಇದಾರೆ ಅಂತ ಕೇಳಿಸ್ತಿರ್ಲಿಲ್ಲ. ಆದ್ರೆ ಏನೊ ಪ್ರಾಬ್ಲಮ್ ಇದೆ ಅಂತ ಮಾತ್ರ ಗೊತಾಯ್ತು.ನಾನಂದುಕೊಂಡೆ ಇವರಿಗೇನೊ ಪ್ರಾಬ್ಲಮ್ ಆಗಿದೆ ಅಂತ. ಆದ್ರೆ ಅವರು ‘ಹಿಂದೆ ನೋಡು, ಹಿಂದೆ ನೋಡು’ ಅಂತ ಸನ್ನೆ ಮಾಡ್ತಿದ್ರು. ಅವರು ಏನೊ ತಿರುಗಿ ನೋಡು ಅಂತ ಹೇಳ್ತಿದಾರಲ್ಲ ಅಂತ ತಿರುಗಿ ನೋಡ್ತೀನಿ… ಒಂಟಿ ಕಾಡಾನೆ ಹಿಂದೆಯಿಂದ ನನ್ನ ಕಡೆ ಬರ್ತಾ ಇದೆ!!! ಇಷ್ಟೇ ದೂರದಲ್ಲಿ ಒಂದು ಹತ್ತೇ ಅಡಿ ಡಿಸ್ಟನ್ಸ್ನಲ್ಲಿ. ನನಗಂತೂ…ಏನ್ ಮಾಡ್ಬೇಕು ಅಂತ ತೋಚಲೇ ಇಲ್ಲ. ಈ ಕಡೆ ಓಡಿ ಹೋಗೋಣ ಅಂದ್ರೆ ತುಂಬಿ ಹರೀತಾ ಇರೊ ನದಿ, ಆ ಕಡೆ ಆನೆ!!! ನೋಡು ನೋಡ್ತಾ ಇದ್ದ ಹಾಗೆ ಆನೆ ನಾಲ್ಕೇ ಅಡಿ ದೂರಕ್ಕೆ ಬಂದುಬಿಡ್ತು.ಸದ್ಯ ಪುಣ್ಯಕ್ಕೆ ಅಲ್ಲೊಂದು ಚಿಕ್ಕ ಬಂದೆ ಥರದ ಒಂದು ಕಲ್ಲಿತ್ತು ಅದರ ಹಿಂದಕ್ಕೆ ಸರ್ಕೊಂಡೆ ನಾನು.ಆ ಆನೆ ನನ್ನನ್ನ ಸವರಿಕೊಂಡೆ ಮುಂದಕ್ಕೆ ಹೋಯ್ತು.ಆಮೇಲೆ ತೇಜಸ್ವಿಯವರು ಬಂದು ’ಏನ್ ಮಾರಾಯ ನೀನು ಆನೆ ಬರ್ತಾ ಇದ್ರು ಕಲಿನ ಥರ ನಿಂತಿದ್ಯಲ್ಲ. ಪಕ್ಕಕ್ಕೆ ಹೋಗೋಕೆ ಗೊತ್ತಾಗಲ್ವ..?’ ಅಂತ ಬೈದ್ರು.ಆದ್ರೆ ಅವತ್ತು ನನಗೆ ಆಗಿದ್ದ ಗಾಬರೀಲಿ ಕೈಕಾಲು ಆಡದೇ ಎಲ್ಲಾ ಮರೆತು ಹೋಗಿದ್ದೆ.ಸದ್ಯ ಬದುಕ್ತೀನಿ ಅನ್ನೊ ನಂಬಿಕೇನೆ ಇರ್ಲಿಲ್ಲ. ಈಗ ಹ್ಯಾಗೊ ನಿಮ್ಮ ಮುಂದೆ ಕೂತಿದ್ದೀನಿ…ಹೆಹೆಹೆ…’ ಎಂದು ವಿಚಿತ್ರವಾಗಿ ನಕ್ಕರು.ಅವರ ನಗುವಿನ ಜೊತೆ ನಮ್ಮಗಳ ಕೋರಸ್ ಸೇರಿಕೊಂಡಿತು.
’ಇನ್ನೊಂದ್ಸಾರ್ತಿ ತೇಜಸ್ವಿಯವರು ಪ್ರಾಣಾಪಾಯದಿಂದ ಪಾರಾಗಿದ್ರು!!!’ ಎಂದು ಪೀಠಿಕೆ ಹಾಕಿ ನಮ್ಮ ಕುತೂಹಲ ಕೆರಳಿಸಿ ನಂತರ ಆ ಘಟನೆಯನ್ನು ಹಂಚಿಕೊಳ್ಳತೊಡಗಿದರು.ಮತ್ತೊಂದ್ಸಾರ್ತಿ ಅದೇ ಭದ್ರಾ ನದಿಗೆ ಹೋಗ್ಬೇಕಾಯ್ತು.ಹೋಗಿದ್ವಿ.ಹಾಗೆ ನದಿ ದಂಡೇಲಿ ನಡ್ಕೊಂಡ್ ಹೋಗ್ತಿದ್ವಿ.ಅಲ್ಲಿ ಒಂದು ಚಿಕ್ಕ ಹೊಂಡ ದಾಟಿ ಹೋಗ್ಬೇಕಿತ್ತು.ನಾನು ಆ ಹೊಂಡದಿಂದ ದೂರಕ್ಕಿದ್ದೆ.ತೇಜಸ್ವಿ ಮುಂದೆ ಮುಂದೆ ಹೋಗ್ತಿದ್ರು.ಆ ಹೊಂಡದ ದಾರಿನಲ್ಲಿ ಎಲೆ, ಕಸ, ಹುಲ್ಲು ಎಲ್ಲಾ ಬಿದ್ದಿತ್ತು. ಇವರು ಅದನ್ನ ಗಟ್ಟಿ ದಾರಿ ಅಂತಾನೇ ತಿಳ್ಕೊಂಡು ಮುಂದೆ ಒಂದೇ ಒಂದು ಹೆಜ್ಜೆ ಇಟ್ರು ಅಷ್ಟೇ…ಸೊಂಟದವರೆಗೂ ಹೂತು ಹೋಗಿಬಿಟ್ರು!!! ಉಸುಕು ಅದು, ನನಗಂತು ತಕ್ಷಣ ಇದನ್ನ ನಂಬೋಕೆ ಆಗ್ಲಿಲ್ಲ. ಒಳ್ಳೆ ಸಿನಿಮಾದಲ್ಲಿ ನೋಡೋ ಹಾಗೆ ಇವರು ಉಸುಕಿನೊಳಗೆ ಮುಳುಗಿಹೋಗ್ತಾ ಇದಾರೆ.ನಾನು ಏನ್ ಮಾಡ್ಬೇಕು ಅಂತ ಗೊತ್ತಾಗ್ದೇ ಗರ ಬಡಿದವನ ಥರ ನಿಂತೇ ಇದ್ದೆ.ಅಮೇಲೆ ಅವ್ರೇ ’ರೀ ಮಂಜಪ್ಪ ಏನ್ರಿ ನೋಡ್ತಿದ್ದೀರ, ಬಂದು ಕೈಕೊಡ್ರಿ’ ಅಂದ್ರು. ನಾನು ಕೈ ಕೊಟ್ಟು ಏಳಿಯೋಕೆ ನೋಡ್ತೀನಿ ಆಗ್ತಾನೇ ಇಲ್ಲ. ಕಾಲಿಗೆ ಚಪ್ಪಲಿ ಹಾಕಿದ್ರಲ್ಲ ಅದು ಕಾಲಿಗೆ ಸಿಕ್ಕಾಕ್ಕೊಂಡು ಇವ್ರನ್ನ ಮೇಲಕ್ಕೆ ಬರೋಕೆ ಬಿಡ್ತಿಲ್ಲ. ಅದು ಅಲ್ದೇ ಇವ್ರುದ್ದು ದೊಡ್ಡ ದೇಹ. ನನಗಂತೂ ಕೈಕಾಲೆಲ್ಲಾ ನಡುಕ ಬಂದು ಬಿಡ್ತು. ಅಮೇಲೆ ಏನೇನೊ ಸರ್ಕಸ್ ಮಾಡಿ ತೇಜಸ್ವಿಯವ್ರನ್ನ ಮೇಲಕ್ಕೆ ಎಳ್ಕೊಂಡೆ.ಅವ್ರು ಮೇಲಕ್ಕೆ ಬಂದು ’ಥೂ ಎಂಥದ್ರಿ ಇದು… ನಾವ್ ಈ ಮೀನ್ ಹಿಡಿಯಕ್ ಬಂದು, ಹಿಂಗೆ ಪ್ರಾಣ ಕಳ್ಕೊಂಡು…ಬೇಕೆನ್ರಿ ಇವೆಲ್ಲ ನಮಗೆ’ ಅಂದ್ರು. ನಾನಂದುಕೊಂಡೆ ಇನ್ನು ಇವರು ಫಿಶಿಂಗ್ ಮಾಡೋದಿಲ್ಲ,ಬಿಟುಬಿಡ್ತಾರೆ ಅಂತ. ಆದ್ರೆ ಆ ಕ್ಷಣಾನೇ ತಕ್ಷಣ ಎದ್ದು ’ನಡೀರಿ ಫಿಶಿಂಗ್ ಮುಗ್ಸೋಣ..!!!’ ಅಂತ ಹೇಳಿ ನನ್ನನ್ನ ಕರ್ಕೊಂಡ್ ಫಿಶಿಂಗ್ ಮುಗಿಸ್ಕೊಂಡ್ ಬಂದ್ರು. ಅಮೇಲೆ ತುಂಬಾ ಸಲ ಹುಲಿಯ ಹೆಜ್ಜೆ ಗುರುತುಗಳನ್ನ ನದೀ ತೀರದಲ್ಲಿ ನೋಡಿದೀವಿ. ಆದ್ರೂ ಇವರು ಯಾವ್ದುಕ್ಕೂ ಹೆದರ್ತಿರ್ಲಿಲ್ಲ. ’ನಡೀರ್ರಿ ನೋಡೇ ಬಿಡಾಣ..’ ಅಂತ ಮುನ್ನುಗ್ಗಿ ಹೋಗ್ತಾ ಇದ್ರು. ಅದು ತೇಜಸ್ವಿಯವರ ಒಂದು ನಿಜವಾದ ಗುಣ. ಅವರಿದಾರೆ ಅನ್ನೊ ನಂಬಿಕೆ, ಧೈರ್ಯದ ಮೇಲೆ ನಾವು ಇರ್ತಿದ್ವಿ. ಇಲ್ಲ ಅಂದ್ರೆ ಆ ಕಾಡಿನಲ್ಲಿ ಒಬ್ಬೊಬ್ಬರೇ ಓಡಾಡ್ಕೊಂಡು…ಊಹುಂ ಸಾಧ್ಯಾನೇ ಇಲ್ಲ ಬಿಡಿ ಈಗ…. ಸೊ ಇದು ನನ್ನ ಮತ್ತು ತೇಜಸ್ವಿಯವರ ನಡುವಿನ ಒಡನಾಟ ಅಂದ್ರೆ….’ ಎಂದು ಹೇಳಿ ಅವರ ತೇಜಸ್ವಿ ನೆನಪುಗಳಿಗೆ ಮಂಗಳ ಹಾಡಿದರು ಡಾ|| ಮಂಜಪ್ಪನವರು.
ಅಲ್ಲಿಗೆ ಅವತ್ತಿನ ಚಿತ್ರೀಕರಣ ಪ್ಯಾಕ್ ಅಪ್.ಡಾ||ಮಂಜಪ್ಪನವರಿಗೆ ಧನ್ಯವಾದ ಹೇಳಿ ಅವರ ಮನೆಯಿಂದ ಹೊರಟು ಬಂದು ಶಿವಮೊಗ್ಗದ ಲಾಡ್ಜೊಂದರಲ್ಲಿ ರೂಮು ಪಡೆದು ರಾತ್ರಿ ಕಳೆಯಲು ನಿರ್ಧರಿಸಿದೆವು.ರಾತ್ರಿಯೆಲ್ಲಾ ಮನಸ್ಸು ಶಿವಮೊಗ್ಗದಿಂದ ಕೆಲವೇ ಕಿಲೊಮೀಟರುಗಳ ಅಂತರದಲ್ಲಿನ ಹೊಳೆಹೊನ್ನೂರಿನ ಬಳಿಯ ಭಗವತಿಕೆರೆ ಎಂಬ ಊರೊಂದರ ಹೆಸರನ್ನು ಧ್ಯಾನಿಸುತ್ತಿತ್ತು. ಏಕೆಂದರೆ ಮರುದಿನ ಬೆಳಿಗ್ಗೆ ಆ ಭಗವತಿಕೆರೆ ಎಂಬ ಊರಿನಲ್ಲಿ ಕಡಿದಾಳು ಶಾಮಣ್ಣ ಎಂಬ ಅಪ್ಪಟ ಮನುಷ್ಯನನ್ನು ತೇಜಸ್ವಿಯವರ ಸಾಕ್ಷ್ಯಚಿತ್ರದ ನೆಪದಲ್ಲಿ ಭೇಟಿಯಾಗಿ ಮಾತನಾಡುವ ಅಪರೂಪದ ಅವಕಾಶ ನನ್ನದಾಗಲಿತ್ತು.
ಮುಂದುವರೆಯುವುದು…
ಪರಮೇಶ್ವರ್ ಅವರ ’ಮತ್ತೆ ಮತ್ತೆ ತೇಜಸ್ವಿ’ಯ ಟ್ರೇಲರ್ ನಿಮಗಾಗಿ
http://www.youtube.com/watch?v=QeAhShKaPao
ಗಾಂಧಿನಗರ, ಜಯನಗರ ಹಾಗೂ ಕೋರಮಂಗಲದ ಸಪ್ನ ಪುಸ್ತಕ ಮಳಿಗೆಗಳಲ್ಲಿ, ಜಯನಗರದ ಟೋಟಲ್ ಕನ್ನಡ ಮಳಿಗೆಯಲ್ಲಿ, ರೇಸ್ ಕೋರ್ಸ್ ಬಳಿಯ ನವಕರ್ನಾಟಕ ಪುಸ್ತಕ ಮಳಿಗೆಯಲ್ಲಿ “ಮತ್ತೆ ಮತ್ತೆ ತೇಜಸ್ವಿ” ಸಾಕ್ಷ್ಯಚಿತ್ರದ ಡಿವಿಡಿಗಳು ದೊರೆಯುತ್ತವೆ.
ಹೆಚ್ಚಿನ ಮಾಹಿತಿಗಾಗಿ ಟೋಟಲ್ ಕನ್ನಡದ ಲಕ್ಷ್ಮಿಕಾಂತ್ (ಡಿವಿಡಿ ವಿತರಣೆಯ ಹಕ್ಕುದಾರರು) ರವರನ್ನು ಸಂಪರ್ಕಿಸಿ. Mobile No: 9986222402
ಅನುಭವ ಕಥನ ಸುಂದರವಾಗಿ ಮೂಡಿ ಬಂದಿದೆ
kutuhalabharitha swarasya baraha.tejasvi matthomme hutti banni.saahasapoorna jivana nimmadu. tejasvi bagge tilidukollalu naanu sadaa kutuuhali.
ತೇಜಸ್ವಿ ಅವರನ್ನು ಅತ್ಯಂತ ಆಪ್ತವಾಗಿ ಚಿತ್ರಿಸುತ್ತ ಅಪಾರ ತಾಳ್ಮೆ ಹಾಗೂ ಶ್ರದ್ದೆಯಿಂದ ನೀವು ಹೊರತಂದಿರುವ ಡಿವಿಡಿ ತೇಜಸ್ವಿ ಅವರಿಗೆ ಸಂದ ನಿಜ ಗೌರವ. ಈ ಕಥಾನಕವೂ ಅನನ್ಯವಾಗಿದೆ
-ಅನಿಲ ತಾಳಿಕೋಟಿ