ಪುಟಪುಟದಲ್ಲು ಪ್ರೀತಿಯ ಸಿಂಚನ
ಜಿ.ಪಿ. ಬಸವರಾಜು
ಹೇಳಲೇ ಬೇಕಾದದ್ದು ಇನ್ನೂ ಇದೆ
(ಕವನ ಸಂಕಲನ)
ಲೇ: ಮಲ್ಲಿಕಾರ್ಜುನಗೌಡ ತೂಲಹಳ್ಳಿ
ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ
ಮೊ: 99161 97291
ಪ್ರೀತಿ ಎನ್ನುವುದು ಮನುಷ್ಯನ ಹುಟ್ಟಿನೊಂದಿಗೇ ಹುಟ್ಟಿಕೊಂಡದ್ದು. ಆಡಂ ಮತ್ತು ಈವ್ ಈ ಭೂಮಿಗೆ ಬಂದಾಗಲೇ ಪ್ರೀತಿಯನ್ನು ಹೊತ್ತು ತಂದರೆಂಬುದು ಒಂದು ನಂಬಿಕೆ. ನಮ್ಮ ಪುರಾಣಗಳ ತುಂಬ ಪ್ರೀತಿಯ ಹೊಳೆಯೇ ಹರಿದಿದೆ. ಋಷಿ ಮುನಿಗಳ ಮನೋ ನಿಗ್ರಹದ ಪರೀಕ್ಷೆ ನಡೆಯಬೇಕಾದರೆ ಈ ಪ್ರೀತಿಯ ಮೊದಲ ಪುಟವೇ ತೆರೆಯಬೇಕು.
ಪ್ರೀತಿಯ ಅಭಿವ್ಯಕ್ತಿಯಾಗಿ ಕಾವ್ಯದಲ್ಲಿ ತೆರೆದುಕೊಂಡಿರುವ ಪುಟಗಳು ಎಣಿಕೆಗೆ ಸಿಕ್ಕುವುದಿಲ್ಲ; ಅವು ಆಕಾಶದಲ್ಲಿ ಮಿನುಗುವ ಚುಕ್ಕೆಗಳ ಹಾಗೆ. ಹಲವು ಹಂತಗಳನ್ನು ದಾಟಿ ಬಂದಿರುವ ಕಾವ್ಯದ ಅಭಿವ್ಯಕ್ತಿಯಲ್ಲಿ ತಾನು ತೋರಿಸುತ್ತಿರುವ ಪ್ರೀತಿ ತಾಜಾ ಆಗಿರಬೇಕು, ಕಾವನ್ನು ಕಳೆದುಕೊಳ್ಳದೆ ಬಿಸಿಬಿಸಿಯಾಗಿರಬೇಕು ಎಂದು ಪ್ರತಿಯೊಬ್ಬ ಕವಿಯೂ ಪ್ರಯತ್ನಿಸುತ್ತಲೇ ಇರುತ್ತಾನೆ. ಈ ಪ್ರಯತ್ನ ಇಲ್ಲದೇ ಹೋದರೆ ಕಾವ್ಯ ಎಂದೋ ಹಳಸಲಾಗಿ, ಯಾರೂ ಮೂಸಿನೋಡುತ್ತಿರಲಿಲ್ಲ.
ಪ್ರೀತಿಯೇ ಆಗಲಿ, ವಿರಹವೇ ಆಗಲಿ, ಯಾತನೆಯೇ ಆಗಲಿ, ಅದು ಎದೆಯನ್ನು ಮುಟ್ಟಬೇಕು, ಹಿಂಡಬೇಕು. ಅದೇ ಕಾವ್ಯ.
ಮಾತುಗಳನ್ನು ಮೀರಿದ ಭಾವವೊಂದು ಉಕ್ಕಿದಾಗಲೇ ಕಾವ್ಯ ಕಾಣಿಸುವುದು. ಆದರೆ ಮಾತಿನಲ್ಲಿಯೇ ಹೇಳಬೇಕಾದ್ದು ಕವಿಗಳಿಗಿರುವ ಸವಾಲು. ಮಾತು ಮತ್ತು ಮಾತನ್ನು ಮೀರಿದ ಭಾವವನ್ನು ಹಿಡಿಯಲು ನಡೆಸುವ ಸೆಣಸಾಟದಲ್ಲಿಯೇ ಕಾವ್ಯದ ಎಳೆಗಳು ಇರುತ್ತವೆ. ಇವತ್ತು ಬರೆಯುತ್ತಿರುವ ಬಹುಪಾಲು ಕವಿಗಳು ಮಾತಿನ ಜಾಡಿನಲ್ಲಿಯೇ ಸಾಗಿ, ಭಾವ ಕಣ್ಮರೆಯಾಗಿ ಕಾವ್ಯವೆನ್ನುವುದು ಕೇವಲ ಹೇಳಿಕೆಗಳ ಹೆಣಿಗೆಯಾಗುತ್ತದೆ. ಕಾವ್ಯದ ಸೊಬಗಾಗಲಿ, ಕಾವಾಗಲಿ,ತೀವ್ರ ಒತ್ತಡವಾಗಲೀ ಇಲ್ಲದೇ ಹೋದರೆ ಕಾವ್ಯ ಕಾವ್ಯವಾಗಿ ಮೈತಳೆಯುವುದಿಲ್ಲ. ಇದು ಹೇಗೆ ಎಂದರೆ ಸುಲಭವಾದ ವಿವರಣೆ ಇದನ್ನು ಹೇಳಲಾರದು. ಮಾತಿನಲ್ಲಿದ್ದೂ ಮಾತಿನ ಹಂಗನ್ನು ಕಳೆದುಕೊಳ್ಳುವುದೇ ಕವಿತೆ.
ಅಪ್ಪಟ ಕವಿಯಾಗಿರುವ ಮಲ್ಲಿಕಾರ್ಜುನಗೌಡ ತೂಲಹಳ್ಳಿ ಈ ಪ್ರೀತಿ ಪ್ರೇಮದ ಕೇಂದ್ರವನ್ನೇ ಹಿಡಿದು ಸುತ್ತಿ ಸುಳಿದು ಕಟ್ಟಿರುವ ಕವಿತೆಗಳನ್ನೆಲ್ಲ ಒಂದೆಡೆ ತಂದು, ಅದನ್ನು ‘ಹೇಳಲೇಬೇಕಾದದ್ದು ಇನ್ನೂ ಇದೆ’ ಎಂದು ಕರೆದಿದ್ದಾರೆ. ಮತ್ತೆ ಮತ್ತೆ ಹೇಳಿದರೂ ಪ್ರೀತಿ ಮುಗಿಯುವುದಿಲ್ಲ. ತಲೆಮಾರು ಯಾವುದೇ ಇರಲಿ, ಪ್ರೀತಿ ಎಲ್ಲರಿಗೂ ಒಂದೇ; ಹೇಳಿ ಮುಗಿಯದ ಸರಕು. ಮಾತು ಮಾತು ಮಥಿಸಿದರೂ, ಪ್ರೀತಿಯ ಬೆಣ್ಣೆ ಕೈಗೆ ಸಿಕ್ಕಿತೆಂದು ಹೆಳಲಾಗುವುದಿಲ್ಲ. ‘ಹೇಳಲೇಬೇಕಾದದ್ದು ಇನ್ನೂ ಇದೆ’ ಎಂದೆನಿಸುವುದು ಈ ಕಾರಣಕ್ಕಾಗಿಯೇ. ಆದರೂ ಸೃಜನಶೀಲ ಬರಹಗಾರ ತಾನು ಹೇಳಬೇಕಾದದ್ದನ್ನೆಲ್ಲ ಈಗಲೇ ಇಲ್ಲಿಯೇ ಹೇಳಿಬಿಡುತ್ತೇನೆ, ಇದೇ ಕೊನೆಯ ಅಭಿವ್ಯಕ್ತಿ ಎಂದು ಹೊರಟಾಗಲೇ ನಿಜವಾದ ಕೃತಿ ಕೈಗೆ ಸಿಕ್ಕುವುದು. ಇಲ್ಲವಾದರೆ ಪ್ರತಿಯೊಂದು ಕೃತಿಯಲ್ಲಿಯೂ ಹೇಳಬೇಕಾದದ್ದು ಇನ್ನೂ ಇದೆ ಎಂದು ಹೇಳುತ್ತಲೇ ಇರಬೇಕಾಗುತ್ತದೆ. ಇನ್ನೂ ಇದೆ ಎನ್ನುವ ತತ್ವವನ್ನು ಕಣ್ಮುಂದಿಟ್ಟುಕೊಂಡು ಹೊರಡುವ ಕವಿಗೆ ಈ ಕಾವ್ಯದಲ್ಲಿ ಏನೂ ಸಿಕ್ಕದಿರುವ ಸಾಧ್ಯತೆಯೇ ಹೆಚ್ಚಿರುತ್ತದೆ.
ಮಲ್ಲಿಕಾರ್ಜುನಗೌಡ ಸವಕಲು ಭಾಷೆಯಲ್ಲಿ ಮಾತನಾಡುವುದಿಲ್ಲ. ಮಾತಿನ ತಾಜಾತನಕ್ಕೆ, ಹೊಸತನಕ್ಕೆ, ಲವಲವಿಕೆಗೆ ತುಡಿಯುತ್ತಲೇ ಇರುತ್ತಾರೆ. ಹೀಗಾಗಿ ಈ ಸಂಕಲನದಲ್ಲಿ ಪ್ರತಿಯೊಂದು ಪದ್ಯವೂ ಹೊಸ ಭಾಷೆಯಲ್ಲಿ ಮಿಂಚುವುದನ್ನು ಕಾಣಬಹುದು.
’ವಸಂತದ ಕಾಡಲ್ಲಿ
ಮಧುಮಗಳಂತಿರುವ ಗಿಡ
ನಿನ್ನ ನೆನಪಿಸಿ
ನರಗಳಲ್ಲಿ ನದಿಯುಕ್ಕಿಸಿದೆ’
-ಎನ್ನುವಲ್ಲಾಗಲೀ, ಅಥವಾ
‘ಮೆಲ್ಲಗೆ ಶುರುವಾದ ತಂಗಾಳಿ
ನಿನ್ನ ಮೈಗಂಧ ತಂದು
ಸುಮ್ಮನಿದ್ದ ಎದೆಯ ಕದ ತೆರೆದಿದೆ.’
ಎನ್ನುವ ನುಡಿಯಾಗಲಿ ಸವಕಲು ಎನ್ನಿಸುವುದಿಲ್ಲ.
‘ಪರಿಚಯದ ಕ್ಷಣದಲ್ಲಿ
ಹುಣ್ಣಿಮೆಯ ತೇರಾಗಿ ಕಣ್ಣಿಗಿಳಿದುಬಿಟ್ಟೆ’,
ಈ ಘಳಿಗೆಗಳೇ
ಚಿಟ್ಟೆಯ ಮೈಗೆ
ಅಂದವ ನೇಯ್ದಿರಬೇಕು
ಹೂವಿನ ಒಡಲಿಗೆ
ಗಂಧ ಸುರಿದಿರಬೇಕು’,
‘ನಾನು
ಎಳೆಬಿಸಿಲ ದವಡೆಯಲಿ
ಆಕೆ ಮೈಗಂಟಿದ ನಕ್ಚತ್ರ ಕೊಡವಿ
ನನ್ನ ನೋಡಿದಳು’
-ಹೀಗೆ ಹಲವಾರು ಸಾಲುಗಳನ್ನು ತೋರಿಸಬಹುದು. ಇದು ಕವಿಯ ಪ್ರತಿಭಾ ಸಾಮರ್ಥ್ಯ.
ಇಷ್ಟಾದರೂ ಈ ಸಂಕಲನದಲ್ಲಿ ಪ್ರೀತಿ ಮತ್ತು ಅದರ ಇನ್ನೊಂದು ಮುಖವಾದ ವಿರಹ ನಮ್ಮನ್ನು ಇಡಿಯಾಗಿ ಆವರಿಸುವುದೇ ಇಲ್ಲ. ಪ್ರತಿಮೆ, ರೂಪಕಗಳನ್ನು ತಂದು ತಂದು ಸುರಿದರೂ ಪ್ರೀತಿ ಹೂವಾಗಿ ಅರಳಿ ಘಮಘಮಿಸುತ್ತ ನಮ್ಮೊಳಕ್ಕೆ ಇಳಿಯುವುದಿಲ್ಲ. ಪುಷ್ಕಿನ್‍ನಲ್ಲಿ ಅಥವಾ ನೆರೂಡನಲ್ಲಿ ಅಥವಾ ಏಟ್ಸ್ ನಲ್ಲಿ ಪ್ರೀತಿ ಎಂದರೆ ಅದು ಸಾವು ಬದುಕಿನ ಪ್ರಶ್ನೆ; ಅಳಿವು ಉಳಿವಿನ ಪ್ರಶ್ನೆ. ತಮ್ಮ ರಕ್ತಮಾಂಸಗಳನ್ನೇ ಬಸಿದು ಈ ಕವಿಗಳು ಪ್ರೀತಿಯನ್ನು ಕಂಡುಕೊಳ್ಳಲು ಹೆಣಗುತ್ತಾರೆ ಎನಿಸುತ್ತದೆ. ಹೇಳುವುದೆಲ್ಲ ಇಲ್ಲಿಗೇ ಮುಗಿಯಿತು ಎಂದು ಹೊರಡುವವರ ಪರಿ ಇದು ಇರಬಹುದು.
ಮಲ್ಲಿಕಾರ್ಜುನಗೌಡರ ಪ್ರಯತ್ನ ಈ ದಿಕ್ಕಿನಲ್ಲಿ ನಡೆಯುವುದು ಸಾಧ್ಯವಾಗಬೇಕು. ಪ್ರೀತಿ ಎನ್ನುವುದು ಮುಖಕ್ಕೆ ಬಳಿದುಕೊಳ್ಳುವ ಪೌಡರ್ ಅಲ್ಲ ಅಥವಾ ತುಟಿರಂಗಿನ ಲಿಪ್ ಸ್ಟಿಕ್ ಕೂಡಾ ಅಲ್ಲ. ಅದನ್ನೆಲ್ಲ ಮೀರಿದ ಜೀವದ ಉಸಿರು. ಮಲ್ಲಿಕಾರ್ಜುನಗೌಡರಿಗೆ ಇದು ತಿಳಿಯದ ಸಂಗತಿಯೇನೂ ಅಲ್ಲ. ‘ಹೇಳಿಯೇ ತೀರುವ’ ಪ್ರೀತಿ’ ಯ ದಿಕ್ಕಿನಲ್ಲಿ ಅವರು ಹೆಜ್ಜೆಹಾಕಲಿ.
ಚೆನ್ನಾಗಿದೆ