ತೂತು ಕಾಸು to ಡಿಜಿಟಲ್ ಮನಿ!

ಕೇಶವ್‌ ರೆಡ್ಡಿ ಹಂದ್ರಾಳ

ಗಾಳಿಯಲ್ಲೂ ಓಡಾಡುತ್ತಿದೆ ದುಡ್ಡು !!

ವಾರದ ಹಿಂದೆ ಊರಿನಿಂದ ನಮ್ಮಣ್ಣ ಫೋನ್ ಮಾಡಿ ‘ಒಳ್ಳೆ ಮಳೆ ಬಂದೈತೆ ಒಂದೈದ್ ಸಾವ್ರ ದುಡ್ ಕಳ್ಸೊ ಕೇಶ್ವಣ್ಣ ತುಂಬಾ ತಾಪತ್ರಯ ಆಗೈತೆ’ ಎಂದಿದ್ದ. ಮಳೆ, ಹಬ್ಬ, ಮದುವೆ, ಜಾತ್ರೆ, ತಿಥಿ, ಹೆರಿಗೆ ಮುಂತಾದವುಗಳು ಸದಾ ನಮ್ಮ ರೈತ ಸಮುದಾಯಕ್ಕೆ ತಾಪತ್ರಯಗಳನ್ನು ಇನ್ನಿಲ್ಲದಂತೆ ತಂದೊಡ್ಡುವ ಸಂಗತಿಗಳೇ ಆಗಿವೆ.

ಭಿಕ್ಷುಕರಿಂದ ಹಿಡಿದು ಜಗತ್ತಿನ ಆಗರ್ಭ ಶ್ರೀಮಂತರವರೆಗೂ ಸದಾ ದುಡ್ಡಿನ ಆಭಾವವನ್ನು ಎದುರಿಸುತ್ತಿರುವುದೊಂದು ವಿಸ್ಮಯ ಮತ್ತು ಸೋಜಿಗವೇ ಸರಿ. ಈಗಲೂ ನಮ್ಮ ಬಯಲು ಸೀಮೆಯ ಕಡೆ ‘ಹೋಗಲೇ ಅತ್ತ ಪಾಲಿಡಾಲ್ ಕುಡ್ಯೋಕೂ ಐವತ್ ರೂಪಾಯಿ ಇಲ್ದಂಗಾಯ್ತ’ ‘ನಮ್ ತಾಯಾಣೆಗೂ ಒಂದು ನಯಾಪೈಸ ಇಲ್ಲಪ್ಪ ಬೇಕಾದ್ರೆ ಜೇಬ್ನ ತಲಾಸ್ ಮಾಡ್ಕೊ’ ಮುಂತಾದ ಮಾತುಗಳು ಕೇಳಿಸುತ್ತವೆ.

ಇತ್ತೀಚೆಗೆ ದುಡ್ಡು ಭೂಮಿ, ಬಿಲ್ಡಿಂಗ್, ಅಪಾರ್ಟ್ಮೆಂಟ್, ಷೇರು, ಬೆಳ್ಳಿ- ಬಂಗಾರ ಇತ್ಯಾದಿ ಘನ ರೂಪಗಳನ್ನು ಧರಿಸುವುದರಿಂದಲೇ ಎಂಥ ಶ್ರೀಮಂತರಾಗಲೀ ಕ್ಯಾಶ್ ಹೊಂದಿಸುವುದರಲ್ಲಿ ಸಾಕಾಗಿ ಹೋಗುತ್ತಾರೆಂಬುದು ಅರ್ಥಶಾಸ್ತ್ರ ವಿದ್ಯಾರ್ಥಿಯಾದ ನನ್ನ ಅಂದಾಜು ಮತ್ತು ಗುಮಾನಿ. ಜೊತೆಗೆ ದುಡ್ಡಿನ ದೇವತೆ ಲಕ್ಷ್ಮಿಯು ವಿಪರೀತ ಚಂಚಲೆಯಾಗಿರುವುದರಿಂದ ಯಾರೊಂದಿಗೂ ಫರ್ಮನೆಂಟಾಗಿ ನೆಲೆಯೂರುವುದಿಲ್ಲವಂತೆ.

ನಾನು ಬೆಂಗಳೂರಿಗೆ ಓದಲು ಬಂದಾಗ ವರಲಕ್ಷ್ಮಿ ಹಬ್ಬ ಮಾಡುವಾಗ ನಮ್ಮ ಅತ್ತಿಗೆ ‘ಲಕ್ಷ್ಮಿ ಓಡಿ ಹೋಗಬಾರದೆಂದು ವರಲಕ್ಷ್ಮಿ ಹಬ್ಬದಲ್ಲಿ ಚಿಕ್ಕಪೇಟೆಯ ಶೇಟುಗಳು ದುಡ್ಡನ್ನು ಪೂಜೆ ಮಾಡಿ, ಬಿಳಿ ಬಟ್ಟೆಯಲ್ಲಿ ಸುತ್ತಿ ಚಪ್ಪಲಿಯಲ್ಲಿ ಬಡಿಯುತ್ತಾರೆ. ಅದುಕ್ಕೆ ಲಕ್ಷ್ಮಿ ಕಾಲು ಮುರ್ಕಂಡು ಅವರ ಮನೆಗಳಲ್ಲೆ ಬಿದ್ದಿರ್ತಾಳಂತೆ’ ಎಂದು ಹೇಳಿ ನನ್ನನ್ನು ಆಶ್ಚರ್ಯಪಡಿಸಿದ್ದಳು. ಆದರೆ ನಾವು ಐದು ಪೈಸೆ ಕೆಳಕ್ಕೆ ಬಿದ್ದರೂ ಏನೋ ಅಚಾತುರ್ಯವಾದಂತೆ ಎತ್ತಿ ಕಣ್ಣಿಗೊತ್ತಿಕೊಂಡು ಜೋಪಾನವಾಗಿ ಜೇಬಿಗಿಳಿಸಿಕೊಳ್ಳುತ್ತಿದ್ದೆವು!

ನಮ್ಮಣ್ಣನ ಮಾತುಗಳನ್ನು ಕೇಳಿ ಇನ್ನೂ ಉತ್ತರಕ್ಕೆ ಹುಡುಕಾಡುತ್ತಿರುವಾಗಲೇ ‘ಅರ್ಜೆಂಟ್ಟೊ ಕೇಶ್ವಣ್ಣ ಫೋನ್ ಪೇ ಮಾಡ್ಬಿಡಲೆ’ ಎಂದಿದ್ದ. ‘ಆಯ್ತೇಳಣ್ಣ’ ಎಂದು ನನ್ನ ಮಗನಿಗೆ ಫೋನ್ ಮಾಡಿ ದುಡ್ಡು ಕಳಿಸಲು ಹೇಳಿದ್ದೆ. ಹಳ್ಳಿಗಾಡಿನ ಕುಟುಂಬದಲ್ಲಿ ಹುಟ್ಟಿ ನೌಕರಿ ಸೇರಿದವರ ಗಂಜರಗೋಳು ಅನುಭವಿಸಿದವರಿಗೆ ಮಾತ್ರವೇ ಗೊತ್ತಿರುತ್ತದೆ. ಇನ್ನು ಕೆಲವರಂತೂ ಕೆಲಸ ಸಿಕ್ಕ ಕೂಡಲೇ ಹಳ್ಳಿಯಿಂದ ಹಿಡಿದು ಎಲ್ಲವನ್ನೂ ಮರೆತು ಬಿಡುತ್ತಾರೆ. ಅಂಥವರಿಗೆ ಅಂಥ ಮಹಾನ್ ತಾಪತ್ರಯಗಳೇನೂ ಬಾಧಿಸುವುದಿಲ್ಲ. ಅವರಾಯಿತು, ಅವರ ಹೆಂಡತಿ ಮಕ್ಕಳಾಯಿತು. ಅದಿರಲಿ, ನನಗೆ ಯಾವ ತಂತಿಯೂ ಇಲ್ಲದೆ ದುಡ್ಡೆಂಬ ಲಕ್ಷ್ಮೀದೇವಿ ಗಾಳಿಯ ಮೂಲಕ ಕ್ಷಣಾರ್ಧದಲ್ಲಿ ಸಾವಿರಾರು ಮೈಲಿ ಬೇಕಾದರೂ ಬೆಳಕಿಗಿಂತಲೂ ವೇಗದಲ್ಲಿ ಓಡಿ ಇನ್ನೊಬ್ಬರ ಅಕೌಂಟಿಗೆ ಬೀಳುತ್ತಾಳೆಂಬುದೇ ನಂಬಲೂ ಆಗದ ವಿಸ್ಮಯದ ಸಂಗತಿಯಾಗಿ ಕಾಡುತ್ತಿದೆ.

ಈಗ ನಗರ, ಪಟ್ಟಣ, ಹಳ್ಳಿಗಳೆನ್ನದೆ ದುಡ್ಡನ್ನು ಫೋನುಗಳ ಮೂಲಕವೇ ರವಾನಿಸುತ್ತಾರೆ. ಫುಟ್ಪಾತ್ ಅಂಗಡಿಯವರು, ತಳ್ಳೊಗಾಡಿಯವರು, ಆಟೋದವರು ಹೀಗೆ ಎಲ್ಲರೂ ಫೋನ್ ಪೇ ಕೆಲಸಗಳಲ್ಲಿ ಲೀಲಾಜಾಲವಾಗಿ ತೊಡಗಿಸಿಕೊಂಡಿದ್ದಾರೆ. ಖಂಡಿತವಾಗಿಯೂ ನಾನಿನ್ನೂ ಕಲಿತಿಲ್ಲ. ಮಗನಿಂದ ಹೇಳಿಸಿಕೊಂಡರೂ ಇನ್ನೂ ಸಕ್ಸೆಸ್ ಆಗಿಲ್ಲ. ಕಲಿಯುತ್ತೇನೆಂಬ ನಂಬಿಕೆಯಂತೂ ಇದೆ. ನಾನು ATM ಕಾರ್ಡ್ ಉಪಯೋಗಿಸಲು ಕಲಿತಿದ್ದು ನಾಲ್ಕು ತಿಂಗಳ ಹಿಂದೆಯಷ್ಟೇ.

ಇದೆಲ್ಲವನ್ನೂ ನೋಡುತ್ತಿದ್ದರೆ ನನಗೆ ಬಾಲ್ಯದ ದಿನಗಳು ನೆನಪಾಗುತ್ತವೆ. ನಾನು ಹೈಸ್ಕೂಲು ಓದಲು ಬೆಂಗಳೂರಿಗೆ ಬಂದ ಮೇಲೆ ದುಡ್ಡು ಬೇಕಾದರೆ ಎಂಟು ದಿನ ಮೊದಲೇ ಕಾಗದ ಬರೆಯಬೇಕಿತ್ತು. ಕಾಗದ ನೋಡಿದ ಮೇಲೆ ದುಡ್ಡು ಅಡ್ಜೆಸ್ಟ್ ಮಾಡಿ, ಅವರು ಮನಿ ಆರ್ಡರ್ ಮಾಡಿ, ಅದು ತಲುಪಬೇಕಾದರೆ ಎರಡು ವಾರಗಳಾದರೂ ಹಿಡಿಸುತ್ತಿತ್ತು. ಒಮ್ಮೊಮ್ಮೆ ಪೋಸ್ಟ್ ಮ್ಯಾನನ್ನು ಹುಡುಕಿಕೊಂಡು ಪೋಸ್ಟ್ ಆಫೀಸಿಗೂ ಹೋಗುತ್ತಿದ್ದದ್ದುಂಟು.

ಕಾಲೇಜು ಹೋಗುತ್ತಿದ್ದಾಗ ನನ್ನ ಕೆಲವು ಗೆಳೆಯರು ಎಂಟು ದಿವಸ ಮೊದಲೇ ಪೋಸ್ಟ್ ಮ್ಯಾನಿನಿಂದ ಸ್ವಲ್ಪ ದುಡ್ಡು ಪಡೆದು ಮನಿ ಆರ್ಡರ್ ಬಂದಾಗ ಇಸಿದುಕೊಂಡಿದ್ದ ದುಡ್ಡಿನ ಮೇಲೆ ಐದಾರು ರೂಪಾಯಿ ಜಾಸ್ತಿ ಸೇರಿಸಿ ಹಿಂದಕ್ಕೆ ಕೊಡುತ್ತಿದ್ದರು. ದುಡ್ಡಿಗಂತೂ ಆಗ ತುಂಬಾ ಬೆಲೆಯಿತ್ತು. ಕೆಲವು ವರ್ಷಗಳ ಹಿಂದೆ ಸರ್ಕಾರ ಇಪ್ಪತ್ತೈದು ಪೈಸೆಯ ಚಲಾವಣೆಯನ್ನು ನಿಲ್ಲಿಸಿದಾಗ ನನಗಂತೂ ತುಂಬಾ ಹೊಟ್ಟೆ ಉರಿದಿತ್ತು. ಪ್ರೈಮರಿ ಸ್ಕೂಲಿನಲ್ಲಿದ್ದಾಗ ಹುಡುಗರಿಗೆ ನಾಲ್ಕಾಣೆಯೋ, ಎಂಟಾಣೆಯೋ ಸಿಕ್ಕಿದರೆ ಸ್ವರ್ಗವೇ ಭೂಮಿಗಿಳಿದುಬಿಡುತ್ತಿತ್ತು. ನಾನು ಮಿಡ್ಲಿಸ್ಕೂಲು ಓದುವಾಗ ಒಂದು ಐಸ್ ಕ್ಯಾಂಡಿಯ ಬೆಲೆ ಎರಡು ಪೈಸೆ ಇತ್ತು. ಅದೂ ಇಲ್ಲದವರು ಐಸ್ ಕ್ಯಾಂಡಿ ಡಬ್ಬದಿಂದ ಸೋರುತ್ತಿದ್ದ ನೀರನ್ನು ಕೈಯಲ್ಲಿಡಿದು ನೆಕ್ಕಿಕೊಳ್ಳುತ್ತಿದ್ದರು. ಅದಕ್ಕೂ ತಳ್ಳಾಟ, ಜಗಳ!

ಊರಿಗೆ ಹೋದಾಗಲೆಲ್ಲ ನೂರಾನಾಲ್ಕು ವರ್ಷಗಳಾದರೂ ಇನ್ನೂ ಗಲಗಲ ಮಾತನಾಡುವ ತಿಪ್ಪಯ್ಯನ ಹೆಂಡತಿ ನಾರಾಯಣಮ್ಮ, ನಾರೆಪ್ಪನವರ ನಂಜಮ್ಮ ‘ಹೋಗಪ್ಪಯ್ಯ ಇವೊತ್ತಿನ ಐನೂರು ರೂಪಾಯಿ ನಮ್ಮ ಕಾಲದ ತೂತು ಕಾಸಿಗೆ ಸಮವಲ್ಲ’ ಎಂದು ಗತ ವೈಭವವನ್ನು ನೆನಪಿಸಿಕೊಳ್ಳುತ್ತಾರೆ. ತೂತು ಕಾಸಿನ ಚಲಾವಣೆ ಕಂಡಿಲ್ಲವಾದರೂ ನಮ್ಮ ಪೆಟ್ಟಿಗೆಯಲ್ಲಿ ಸುಮಾರು ತೂತು ಕಾಸಿದ್ದುದ್ದನ್ನು ನಾನು ನೋಡಿದ್ದೆ.

ಎರಡು ತಲೆಮಾರಿನ ನೂರಾರು ಹೆರಿಗೆಗಳನ್ನು ಮಾಡಿಸಿದ್ದ ನಮ್ಮೂರ ಸೂಲಗಿತ್ತಿ ತಿಮ್ಮಕ್ಕಜ್ಜಿಯಂತೂ ಊರಿನಲ್ಲಿ ಗಂಡು ಮಕ್ಕಳಿಗೆ ಆರೇಳು ತಿಂಗಳಾಗುತ್ತಲೇ ‘ಅಮ್ಮಯ್ಯ ಹುಡುಗನ ಉಡ್ದಾರುಕ್ಕೆ ಒಂದು ತೂತು ಕಾಸೋ ಇಲ್ಲ ಒಂದು ಹೊಂಗೆ ಕಾಯೋ ಕಟ್ಟು. ಇಲ್ಲದಿದ್ರೆ ಮಗ ಬುಲ್ಲಿಮರಿನ ಹಿಸ್ಕೊಂಡಿಸ್ಕೊಂಡು ಸಣ್ಣ ಆಗೋತ್ತೈತೆ’ ಎಂದು ಎಚ್ಚರಿಕೆಯನ್ನು ಕೊಡುತ್ತಿದ್ದಳು. ಹಾಗಾಗಿ ಇದ್ದವರು ತೂತುಕಾಸು ಕಟ್ಟಿದರೆ, ಇಲ್ಲದವರು ಒಣಗಿದ ಹೊಂಗೆಕಾಯಿಗೆ ತೂತು ಮಾಡಿ ಕಟ್ಟುತ್ತಿದ್ದರು.

ಕೆಲವು ಮಕ್ಕಳು ಹೊಂಗೆಕಾಯಿ, ತೂತುಕಾಸು ಬಿಟ್ಟು ಬುಲ್ಲಿಮರಿಯನ್ನೆ ಹಿಸುಕಿಕೊಳ್ಳುತ್ತಿದ್ದರು. ಆಗ ತಿಮ್ಮಕ್ಕಜ್ದಿ ‘ಬಲು ಪಾಕ್ಡ ಆಗ್ತಾನೆ ಅಮ್ಮಣ್ಣಿ ನಿನ್ ಮಗ. ಈಗ್ಲೆ ಹಿಂಗಾದ್ರೆ ಪ್ರಾಯಕ್ಕೆ ಬಂದಾಗ ಏನೋ ಎತ್ತೋ..’ ಎಂದು ಕಟವಾಯಿಯಲ್ಲಿ ಸೋರುತ್ತಿದ್ದ ಎಲೆಡಿಕೆ ರಸವನ್ನು ಸೆರಗಿನಲ್ಲಿ ಒರೆಸಿಕೊಳ್ಳುತ್ತಾ ಮಕ್ಕಳ ಬುಲ್ಲಿಮರಿಗೆ ಮುತ್ತು ಕೊಟ್ಟು ಸೆರಗಿನಿಂದ ದೃಷ್ಟಿ ತೆಗೆಯುತ್ತಿದ್ದಳು. ನಾನು ಎಂಟನೆ ಕ್ಲಾಸಿಗೆ ಬೆಂಗಳೂರಿಗೆ ಹೊರಟಾಗ ತಿಮ್ಮಕ್ಕಜ್ಜಿ ತನ್ನ ಸೆರಗಿನಲ್ಲಿ ಗಂಟು ಹಾಕಿಕೊಂಡಿದ್ದ ಹತ್ತು ರೂಪಾಯಿ ಕೊಡುತ್ತಾ ‘ಅಪ್ಪಯ್ಯ ಕೇಶ್ವ ನೀನೇನೂ ಕಮ್ಮಿ ಆಗಿರ್ಲಿಲ್ಲ, ನಿನ್ನ ಉಡ್ದಾರುಕ್ಕೆ ನಾಲ್ಕು ತೂತು ಕಾಸು ಕಟ್ಟಿದ್ರೂ, ಯಾವ್ದುನ್ನೂ ಮುಟ್ದೆ ಬುಲ್ಲಿನೇ ಹಿಸ್ಕಂಬ್ತಿದ್ದೆ. ಯಾಸಟ್ಗೆ ಬೆಂಗಳೂರ್ನಾಗೆ ಹುಷಾರು..’ ಎಂದು ಹೇಳಿ ನಮ್ಮಮ್ಮ, ನಮ್ಮಪ್ಪ, ನಮ್ಮ ದೊಡ್ಡಪ್ಪನ ಮುಂದೆ ನಾಚುವಂತೆ ಮೋಡಿದ್ದಳು.

2017 ರಲ್ಲಿ ನನ್ನ ಮಗ ಸಿರಿವೆನ್ನೆಲ ಮಸ್ಸೂರಿಯ Lal Bahadur Shastri National Academy of Administration ನಲ್ಲಿ ತರಬೇತಿಯಲ್ಲಿದ್ದಾಗ ತರಬೇತಿಯ ಎಲ್ಲಾ ವಿಭಾಗಗಳಲ್ಲೂ ಮೊದಲ ಸ್ಥಾನ ಗಳಿಸಿದ್ದನಲ್ಲದೆ Cashless Economy ಎಂಬ ಪ್ರಬಂಧದಲ್ಲಿ ಮೊದಲ ಸ್ಥಾನ ಪಡೆದಿದ್ದ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅವನಿಗೆ ಬಹುಮಾನ ಕೊಡುತ್ತಾ ಹಿನ್ನೆಲೆ ವಿಚಾರಿಸಿಕೊಂಡಿದ್ದರಂತೆ. ಇವನು ಹೇಳುತ್ತಾ ನಮ್ಮಪ್ಪ ಸ್ಟೂಡೆಂಟ್ ಆಫ್ ಎಕನಾಮಿಕ್ಸ್ ಎಂದು ಹೇಳಿದ್ದನಂತೆ. ‘ಬಿಡಣ್ಣ ಜೇಬಲ್ಲಿ ದುಡ್ಡು ಇಲ್ದ್ ಮ್ಯಾಕೆ ಅದ್ಯಾತ್ರ್ ಎಕಾನಮಿ’ ಎಂದಿದ್ದೆ. ನಾನು ಎಕನಾಮಿಕ್ಸ್ ಓದಿದ್ದರೂ ಎಕನಾಮಿಕ್ಸ್ ನಿಭಾಯಿಸೋದು ಇದುವರೆಗೂ ಸರಿಯಾಗಿ ಕಲಿತಿಲ್ಲ.

ಆದ್ದರಿಂದಲೇ ಕೆಲವು ಸ್ನೇಹಿತರು ‘ಅದ್ಯಾವ್ ಶಾಟುದ್ ಮೇಲಿನ ಎಕನಾಮಿಕ್ಸ್ ಓದಿದ್ದೀಯಲೇ, ಸರಿಯಾಗಿ ಒಂದು ಲೆಕ್ಕ ಬರಲ್ಲ ಬುಕ್ಕ ಬರಲ್ಲ. ಅಷ್ಟಿಲ್ದೆ ಪೇಪರ್ ಶುರು ಮಾಡಿ ಎಲ್ಡ್ ಲಕ್ಷ ಕಳ್ಕಂಡ, ತಿಕಮುಚ್ಕಂಡ್ ಇರಲಾರ್ದೆ ತಿರ್ಗ ಬೇಸಾಯಕ್ಕೆ ಬೇರೆ ಇಳ್ದು ಸಾಲ ಬೇರೆ ಏರ್ಕಂಡಿದ್ದೀಯ. ಮೊದ್ಲು ತೋಟ ಮಾರಿ ನೆಮ್ಮದಿಯಾಗಿರೋದು ಕಲ್ತುಕೊ’ ಎಂದು ಛೇಡಿಸುತ್ತಾರೆ. ನಿಜವಾಗಿಯೂ ನಾನು ಲೆಕ್ಕಾಚಾರದಲ್ಲಿ ತುಂಬಾ ವೀಕು. ಮುಂದೆ ಮುಂದೆ ಆರ್ಥಿಕ ಪರಿಸ್ಥಿತಿ ವಿಸ್ತಾರಗೊಂಡಂತೆ ಎಂಥೆಂಥ ಮಾಪನಗಳು ಸೃಷ್ಟಿಯಾಗುತ್ತವೋ..!

‍ಲೇಖಕರು Avadhi

June 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: