ತಿಮ್ಮಜ್ಜನ ಕೋವಿ…

ತಮ್ಮಣ್ಣ ಬೀಗಾರ

ಗದ್ದೆ ಕಾಯಲು ಮಾಳಕ್ಕೆ ಹೋಗುವ ಸಮಯ. ರಾತ್ರಿ ಕಾಡು ಹಂದಿಗಳು ಗದ್ದೆಗೆ ಇಳಿದವೆಂದರೆ… ಗದ್ದೆಯನ್ನೆಲ್ಲ ತುಳಿದು ಹಾಕುತ್ತವೆ. ಅಲ್ಲಲ್ಲಿ ಭತ್ತದ ಹುಲ್ಲನ್ನು ತಿರುಚಿದಂತೆ ಮಾಡಿ ಭತ್ತದ ತೆನೆಯನ್ನು ಒಟ್ಟಾಗಿಸಿ ಜಗಿದು ಹೋಗುವುದು ಅವುಗಳ ಪದ್ಧತಿ. ತೆನೆಗಳಲ್ಲಿ ಇನ್ನೂ ಗಟ್ಟಿ ಭತ್ತ ಆಗದೇ ಇದ್ದಾಗ ಭತ್ತದೊಳಗಿನ ಸಿಹಿಯಾದ ಹಾಲಿನಂತಹ ಬಿಳಿಯ ದ್ರವ ಅದಕ್ಕೆ ಹೆಚ್ಚು ರುಚಿಯಾಗಿರುವುದರಿಂದ ಎಳೆತೆನೆ ಇರುವಾಗಲೇ ಗದ್ದೆಗಳಿಗೆ ಹಾಜರ್.

ಈ ರೀತಿ ಹಂದಿಗಳು ಬರುವುದನ್ನು ತಡೆಯಲು ಗದ್ದೆಗಳಲ್ಲಿ ಮಾಳ ಕಟ್ಟಿ ಅದರಲ್ಲಿ ಗದ್ದೆ ಕಾಯುವುದಕ್ಕೆ ಮಲಗುತ್ತಾರೆ. ತಣ್ಣನೆಯ ಚಳಿಗಾಳಿ ಬೀಸುತ್ತಿತ್ತು. ಚಳಿಗಾಲ. ಟ್ರಾಕ್ ಟ್ರಾಕ್ ಎನ್ನು ಕಪ್ಪೆಗಳ ಸಣ್ಣ ಧ್ವನಿ ಹಾಗೂ ಯಾವುದೋ ಹಕ್ಕಿ ದೂರದಲ್ಲಿ ಕೂಗುವುದು ಬಿಟ್ಟರೆ ಎಲ್ಲ ನಿಶ್ಯಬ್ದ. ಹೀಗೆ ನಿಶ್ಯಬ್ದವಿರುವುದರಿಂದಲೇ ಹಂದಿಗಳು ಗದ್ದೆಗಳಿಗೆ ಇಳಿದು ಭತ್ತ ತಿನ್ನಲು ತೊಡಗಿದಾಗ ನಮಗೆ ಪಚಕ್ ಪಚಕ್ ಎಂದು ಅವು ಗದ್ದೆಯ ನೀರಿನಲ್ಲಿ ಓಡಾಡುವ ಸದ್ದು ಕೇಳುತ್ತಿತ್ತು.

ಆಗ ನಾವು ಎದ್ದು ಹಚ್ಚೋ ಹಚ್ಚೋ, ಹುಯ್ಯೋ ಹುಯ್ಯೋ ಎಂದೆಲ್ಲ ಕೂಗುವುದು, ಬಿದಿರಿನ ಕುಟ್ಟಂಡೆ ಇದ್ದರೆ ಅದನ್ನು ಬಡಿಯುವುದು ಅಥವಾ ತಗಡಿನ ಡಬ್ಬ ಬಡಿಯುವುದು ಎಲ್ಲ ಮಾಡುತ್ತಿದ್ದೆವು. ಇದರಿಂದ ಗದ್ದೆಗೆ ಇಳಿದಿದ್ದ ಹಂದಿಗಳು ನಮ್ಮ ಗದ್ದಲ ಕೇಳಿ ಗುಡ್ಡ ಹತ್ತಿ ಕಾಡಿಗೆ ಓಡುತ್ತಿದ್ದವು, ಇಲ್ಲವೇ ತಮ್ಮ ಹಸಿವನ್ನು ತೀರಿಸಿಕೊಳ್ಳಲು ಇನ್ನೊಬ್ಬರ ಗದ್ದಯಕಡೆಗೆ ಹೆಜ್ಜೆ ಹಾಕುತ್ತಿದ್ದವು.

ಚಳಿ ಇರುವುದರಿಂದ ನಾನು ಅಣ್ಣ ಬೆಚ್ಚಗೆ ಕಂಬಳಿ ಹೊದೆದು ಮಾಳದಲ್ಲಿ ಮುದುಡಿ ಮಲಗಿದ್ದೆವು. ಸುಮಾರು ರಾತ್ರಿ ಎರಡುಗಂಟೆ ಆಗಿರಬಹುದು. ಓಮ್ಮೆಗೇ ಢಮಾರ್ ಎನ್ನುವ ದೊಡ್ಡ ಧ್ವನಿ ಕೇಳಿ ನಮಗೆ ಎಚ್ಚರವಾಯಿತು. ಹೌದು, ಸಮೀಪದಲ್ಲೇ ಯಾರೋ ಕೋವಿಯಿಂದ ಗುಂಡು ಹಾರಿಸಿದಂತೆ ಕೇಳಿತು. ಆಕಡೆ ತಿಮ್ಮಜ್ಜನ ಗದ್ದೆ ಇದೆ. ಅಲ್ಲಿಯೇ ಯಾರೋ ಗುಂಡು ಹಾರಿಸಿದ್ದಾರೆ ಎಂದೆನಿಸಿ ಹಂದಿಯನ್ನೇನಾದರೂ ಕೊಂದರೇ ಎಂದೆಲ್ಲಾ ಯೋಚನೆ ಬಂತು. ಆದರೆ ರಾತ್ರಿ ಮಾಳ ಇಳಿದು ನೋಡಲು ಹೋಗುವ ಧೈರ್ಯ ನಮಗೆ ಇಲ್ಲ. ಸ್ವಲ್ಪ ಹೊತ್ತಿನಲ್ಲಿಯೇ ಮತ್ತೆ ನಿದ್ದೆ ಹೋದೆವು.

ಬೆಳಗಾದಾಗ ಮನೆಯಿಂದ ‘ಕೂ…ಕುಹೂ… ಮಕ್ಕಳೇ ಬನ್ನಿ’ ಎಂದು ಅಬ್ಬೆ ಕರೆದದ್ದು ಕೇಳಿ ಗಡಬಿಡಿಯಿಂದ ಎದ್ದರೆ ದಿನಕ್ಕಿಂತಲೂ ಹೆಚ್ಚು ಹೊತ್ತಾಗಿದ್ದು ಗೊತ್ತಾಯಿತು. ಮಾಳದಿಂದ ಇಳಿದು ಚಳಿಯಲ್ಲಿ ನಡುಗುತ್ತ ದಾರಿಯಲ್ಲಿ ನೀರಹನಿಯ ಭಾರದಿಂದಾಗಿ ಬಗ್ಗಿಬಂದ ತೆನೆಗಳನ್ನು ಮೈಗೆ ತಾಗಿಸಿಕೊಳ್ಳುತ್ತ ಮತ್ತಷ್ಟು ಚಳಿಯ ಅನುಭವದೊಂದಿಗೆ ಮನೆಗೆ ನಡೆದೆವು. ರಾತ್ರಿ ದೊಡ್ಡ ಸದ್ದಾದದ್ದನ್ನು ಅಬ್ಬೆಯೂ ಕೇಳಿದ್ದಳು. ನಾವು ತಿಂಡಿ ತಿನ್ನಲು ಕುಳಿತಾಗ ಆಚೆ ಮನೆಯ ವೆಂಕಟು ‘ತಿಮ್ಮಜ್ಜ ಹಂದಿ ಹೊಡೆದಿದ್ದಾನಂತೆ… ತಿಮ್ಮಜ್ಜನ ಮನೆಯ ಗದ್ದೆಯಲ್ಲಿ ಇದೆಯಂತೆ’ ಎಂದು ಹೇಳುತ್ತ ನಮ್ಮ ಮನೆಯ ಅಂಗಳದಿಂದಲೇ ಓಡಿ ಹೋದಾಗ ತಿಂಡಿ ತಿನ್ನುತ್ತಿದ್ದ ನಮಗೂ ತಿಂಡಿ ತಿನ್ನಲು ಆಗಲಿಲ್ಲ. ಹಂದಿಯನ್ನು ನೋಡುವ ಗಡಬಿಡಿಯಲ್ಲಿ ಬಾಳೆಯಲ್ಲಿದ್ದ ದೋಸೆಯನ್ನು ಗಬಗಬನೆ ಮುಗಿಸಿ ಅರ್ಧಕ್ಕಲೇ ಎದ್ದು ಓಡಿದೆವು.

ಅಷ್ಟರಲ್ಲಿಯೇ ಸುಮಾರು ಇಪ್ಪತ್ತೈದು ಜನ ತಿಮ್ಮಜ್ಜನ ಗದ್ದೆಯಲ್ಲಿ ಸೇರಿದ್ದರು. ಹೌದು ಒಂದು ದೊಡ್ಡ ಹಂದಿ ಅಡ್ಡಬಿದ್ದಿತ್ತು. ಅದರ ಕೋರೆಹಲ್ಲುಗಳು ಬಾಯಿಂದ ಹೊರಚಾಚಿದ್ದವು. ಇದು ಒಂಟಿ ಹಂದಿ. (ಗುಂಪಿಲ್ಲಿರದೇ ಒಂಟಿಯಾಗಿರುವ ಹಂದಿ) ಎಷ್ಟು ದಪ್ಪಾಗಿ ಬೆಳೆದಿದೆ ನೋಡಿ ಎಂದು ಹಿರಿಯರು ಮಾತಾಡುತ್ತಿದ್ದರೆ… ತಿಮ್ಮಜ್ಜ ಇದನ್ನು ಹೇಗೆ ಹೊಡೆದ ಎನ್ನುವುದೇ ನಮಗೆ ಪ್ರಶ್ನೆಯಾಗಿತ್ತು. ತಿಮ್ಮಜ್ಜ ಮುದುಕ. ರಾತ್ರಿ ಕತ್ತಲಲ್ಲಿ ಹಂದಿಯ ಬೆನ್ನಟ್ಟಿ ಹೊಡೆಯುವದು ಸುಲಭವಲ್ಲ ಅನಿಸಿ ಅವನ ಮೇಲೆ ತುಂಬಾ ಅಭಿಮಾನ ಉಂಟಾಯಿತು. ಆದರೆ ತಿಮ್ಮಜ್ಜ ಅದನ್ನ ಬೆನ್ನಟ್ಟಿ ಹೊಡೆದಿರಲಿಲ್ಲ… ತನ್ನ ಬುದ್ಧವಂತಿಕೆಯ ಉಪಾಯದಿಂದ ಹೊಡೆದಿದ್ದ.

ಹಂದಿ ಬರಬಹುದಾದ ದಾರಿಗೆ ಸುಮಾರು ಹಂದಿಯಷ್ಟೇ ಎತ್ತರಕ್ಕೆ ಕೋವಿಯನ್ನು ಗೂಟಹೊಡೆದು ಅಡ್ಡಲಾಗಿ ಕಟ್ಟಿದ್ದ. ಕೋವಿಯನ್ನು ಸಿಡಿಸಲು ಎಳೆಯುವ ಮೊಳೆಯನ್ನು ಎಳೆದು ದಾರದಿಂದ ಕಟ್ಟಿದ್ದ. ಹಂದಿ ಬಂದು ಈ ದಾರ ಎಳೆಯಲ್ಪಟ್ಟಾಗ ಮೋಳೆಯಿಂದ ದಾರ ತಪ್ಪಿ ಮೊಳೆ ಒತ್ತಲ್ಪಟ್ಟು ಕೋವಿ ಸಿಡಿಯುತ್ತದೆ. ತಕ್ಷಣ ದಾರದ ನೇರದಲ್ಲಿ ಗುಂಡು ಹಾರಲ್ಪಟ್ಟು ಹಂದಿಗೆ ತಾಗುತ್ತದೆ ಮತ್ತು ಹಂದಿ ಸಾಯುತ್ತದೆ. ಈ ರೀತಿ ಉಪಾಯದಿಂದಲೇ ತಿಮ್ಮಜ್ಜ ಹಂದಿ ಕೊಂದಿದ್ದು ಎಂದು ಅಪ್ಪಯ್ಯ ನಮಗೆ ಹೇಳಿದ್ದ. ಹಂದಿ ಕೊಂದು ತಿಮ್ಮಜ್ಜನ ಗದ್ದೆ ಹಂದಿಯಿಂದ ಉಳಿಯಿತಾದರೂ ಹಂದಿ ನೋಡಲು ಬಂದ ಜನರ ಕಾಲ್ತುಳಿತಕ್ಕೆ ಕೆಲವಷ್ಟು ಹಾಳಾಯಿತು.

ಈ ಘಟನೆಯ ನಂತರ ತಿಮ್ಮಜ್ಜನ ಕೋವಿಯ ಕಡೆಗೆ ನಮ್ಮ ಗಮನ ಹೆಚ್ಚಾಯಿತು. ತಿಮ್ಮಜ್ಜ ಹೆಗಲಮೇಲೆ ಕೋವಿ ಹೊತ್ತು ತಿರುಗುವುದನ್ನು ನಾವು ದೂರದಿಂದ ನೋಡಿದ್ದೆವಾದರೂ ಹತ್ತಿರದಿಂದ ನೋಡಿಲ್ಲ. ಅವನ ಮನೆಯಲ್ಲಿ ನಾಲ್ಕೈದು ನಾಯಿಗಳನ್ನು ಸಾಕಿದ್ದ. ಅವನ ಮನೆಯ ಹತ್ತಿರ ನಾವು ಹೋದರೆ ಬೇಟೆಗೆ ಒಂದು ಪ್ರಾಣಿ ಸಿಕ್ಕಿತು ಎನ್ನುವ ಹಾಗೆ ಬೊಗಳುತ್ತ ಮುತ್ತಿಗೆ ಹಾಕುತ್ತಿದ್ದುದು ನಮಗೆ ಭಯದ ಸಂಗತಿಯಾಗಿತ್ತು.

ತಿಮ್ಮಜ್ಜ ಕೋಳಿಗಳನ್ನೂ ಸಾಕಿದ್ದ. ಕೆಂಪು ಹಳದಿ ಬಣ್ಣದ ಚಂದದ ಹುಂಜಗಳು ಕೊಕ್ಕೊಕ್ಕೋಂ ಎಂದು ಕೂಗುವಾಗ ಅವುಗಳ ಹತ್ತಿರ ಹೋಗಿ ಮುಟ್ಟಬೇಕು ಎನ್ನುವಷ್ಟು ಆಸೆಯಾಗುತ್ತಿತ್ತು. ಆದರೆ ಕೋಳಿಗಳ ಹತ್ತಿರ ಹೋದರೆ ಅವು ಕೊಕ್ ಕೊಕ್ ಎನ್ನಲು ತೊಡಗಿದರೆ ಮನೆಯ ಅಂಗಳದಲ್ಲಿ ಮಲಗಿದ್ದ ನಾಯಿಗಳು ಕೋಳಿಗಳಿಗೆ ಅಪಾಯವಾಗಿ ರಕ್ಷಣೆಗೆ ತಮ್ಮನ್ನು ಕರೆಯುತ್ತಿವೆ ಎನ್ನುವ ಹಾಗೆ ಓಡಿ ಬಂದು ನಮ್ಮನ್ನು ಹೆದರಿಸುತ್ತಿದ್ದವು.

ಗದ್ದೆ ತೆನೆ ಹಣ್ಣಾಗುವ ಸಮಯದಲ್ಲಿ ಸಾವಿರಾರು ಗಿಳಿಗಳು ಬಂದು ಗದ್ದೆಯನ್ನು ಮುತ್ತುತ್ತಿದ್ದವು. ಒಂದೊಂದು ಗಿಳಿ ಒಂದೊಂದು ತೆನೆ ಕಚ್ಚಿಕೊಂಡು ಹತ್ತಿರದ ಹಸಿರುಮರಗಳಲ್ಲಿ ಕೂತು ಅದೃಶ್ಯವಾಗಿಬಿಡುತ್ತಿದ್ದವು. ಹಸಿರು ಗಿಳಿಗಳು ಹಸಿರು ಮರದಲ್ಲಿ ಕುಳಿತಾಗ ಕಾಣುವುದಾದರೂ ಹೇಗೆ? ಗಿಳಿಗಳಿಗೆ ಅವುಗಳ ಹಸಿರು ಬಣ್ಣವೇ ರಕ್ಷಣೆ ಎಂದು ನಮ್ಮ ಸರ್ ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಿಗೆ ಬರುತ್ತದೆ.

ಈ ಗಿಳಿಗಳು ತೆನೆ ತಿಂದು ಹಾಳುಮಡುತ್ತವೆ ಎಂದು ಓಡಿಸಲು ನಾವು ಎಷ್ಟು ಗದ್ದಲ ಎಬ್ಬಿಸಿದರೂ ಪ್ರಯೋಜನ ಆಗುತ್ತಿರಲಿಲ್ಲ. ಆದರೆ ತಿಮ್ಮಜ್ಜ ತನ್ನ ಕೋವಿಯಿಂದ ಆಗಾಗ ಹುಸಿ ಪೆಟ್ಟು ಹಾರಿಸುತ್ತಿದ್ದ. (ಹುಸಿ ಪೆಟ್ಟು ಅಂದರೆ ಕೋವಿಗೆ ಗುಂಡುಗಳನ್ನು ಹಾಕದೆ ಬರೆ ಸದ್ದಿಗಾಗಿ ಕೋವಿ ಪೆಟ್ಟು ಸಿಡಿಸುವುದು.) ಇದರ ಸದ್ದನ್ನು ಕೇಳಿದ ಗಿಳಿಗಳು ತಾವು ಕುಳಿತಿದ್ದ ಮರ ಬಿಟ್ಟು ಕೀಂ ಕೀಂ ಎನ್ನುತ್ತ ಅರೆಕ್ಷಣದಲ್ಲಿ ಹಾರಿಹೋದವು ನಂತರ ದಿನಗಟ್ಟಲೆ ಗದ್ದೆಬಯಲಿಗೆ ಸುಳಿಯುತ್ತಿರಲಿಲ್ಲ!

ತಿಮ್ಮಜ್ಜ ದೀಪಾವಳಿ, ಗಣೇಶನ ಹಬ್ಬಗಳಲ್ಲಿ ಪಟಾಕಿ ಸಿಡಿಸದೇ ಒಂದೆರಡುಸಾರಿ ಕೋವಿಯಿಂದ ಹುಸಿಪೆಟ್ಟು ಸಿಡಿಸಿ ಮುಗಿಸುತ್ತಿದ್ದ. ಮಂಗಗಳ ಉಪಟಳವಿರಲಿ, ತೋಟಕ್ಕೆ ಕಾಡೆಮ್ಮೆ ಬರಲಿ… ಬರಿದೆ ಕಾಗೆಗಳು ಮನೆಯ ಹತ್ತಿರ ಕೂಗಿ ಗದ್ದಲ ಎಬ್ಬಿಸಲಿ ತಿಮ್ಮಜ್ಜ ಕೋವಿ ಹಿಡಿದು ಸಿಡಿಸುತ್ತಿದ್ದ.
ತಿಮ್ಮಜ್ಜನ ಮನೆಯಲ್ಲಿ ಬೆಳಗಾದ ಕೂಡಲೆ ಹೆಚ್ಚಾಗಿ ಅವಲಕ್ಕಿಗಾಗಿ ಭತ್ತ ಹುರಿದು ಕಲ್ಲಿನಲ್ಲಿ ಹಾಕಿ ಕಬ್ಬಿಣದ ಹಾರೆಯಿಂದ ಕುಟ್ಟಿ ಅವಲಕ್ಕಿ ತಯಾರಿಸುತ್ತಿದ್ದರು.

ಈ ರೀತಿ ತಯಾರಿಸಿದ ಅವಲಕ್ಕಿಯೇ ಅವರ ಹೆಚ್ಚಿನ ದಿನದ ಉಪಹಾರವಾಗಿತ್ತು ಎಂದು ತಿಮ್ಮಜ್ಜನ ಮೊಮ್ಮಗನೇ ಹೇಳಿದ್ದ. ನನಗಂತೂ ಅವನ ಮನೆಯ ಕಡೆಯಿಂದ ಬರುವ ಅವಲಕ್ಕಿ ಕುಟ್ಟುವ ಸದ್ದೂ ತಿಮ್ಮಜ್ಜನ ಕೋವಿಯ ಸದ್ದನ್ನೇ ನೆನಪಿಸುತ್ತಿತ್ತು. ತಿಮ್ಮಜ್ಜ ನಾವು ಸಣ್ಣವರಿರುವಾಗಲೇ ತೀರಿ ಹೋಗಿದ್ದಾನೆ. ತಿಮ್ಮಜ್ಜನ ನೆನಪು ಅವನ ಕೋವಿಯೊಂದಿಗೆ ಸೇರಿಕೊಂಡು ನನ್ನ ಮನಸ್ಸಿನಲ್ಲಿ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ.

‍ಲೇಖಕರು Admin

January 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: