ತಾಯಂದಿರ ತೋಟಗಳಲ್ಲಿ…

ಎಂ ಆರ್ ಕಮಲ

ಇಪ್ಪತ್ತು ವರ್ಷಗಳ ಹಿಂದೆ ಆಫ್ರಿಕನ್-ಅಮೇರಿಕನ್ ಹೆಣ್ಣುಮಕ್ಕಳ ಆತ್ಮಕಥೆಗಳನ್ನು ಅನುವಾದ ಮಾಡಬೇಕೆಂದು ಪುಸ್ತಕಗಳನ್ನು ಹುಡುಕುತ್ತಿದ್ದಾಗ, ಹೆಚ್ಚಿನ ವಿಚಾರಗಳನ್ನು ತಿಳಿಯಬೇಕೆಂಬ ಅಭಿಲಾಷೆಯಿಂದ ಅಮೇರಿಕಾದ ವಿಶ್ವವಿದ್ಯಾನಿಲಯವೊಂದರ ಕಪ್ಪು ಮಹಿಳಾ ಅಧ್ಯಯನ ಕೇಂದ್ರಕ್ಕೆ ಪತ್ರ ಬರೆದಿದ್ದೆ. ತಕ್ಷಣವೇ ಅವರು ಅನುವಾದ ಮಾಡಬಹುದಾದ ಪುಸ್ತಕಗಳ ಪಟ್ಟಿಯೊಂದನ್ನು ಕೊಟ್ಟಿದ್ದಲ್ಲದೆ ಸಾವಿರಾರು ರೂಪಾಯಿಗಳ ಮೌಲ್ಯದ ಪುಸ್ತಕಗಳನ್ನು ಅನುವಾದಿಸಲು ಉಚಿತವಾಗಿ ಕಳಿಸಿದ್ದರು. ತಮ್ಮ ದನಿ ಎಲ್ಲ ಕಡೆ ಕೇಳಬೇಕೆಂಬುದೇ ಅವರ ಉದ್ದೇಶವಾಗಿತ್ತು. ಆ ಪಟ್ಟಿಯಲ್ಲಿ ಆಲೀಸ್ ವಾಕರ್ ಅವರಇನ್ ಸರ್ಚ್ ಆಫ್ ಮದರ್ಸ್ ಗಾರ್ಡನ್; ಕೂಡ ಇತ್ತು ಎಂಬ ನೆನಪು.

ಆದರೆ ಕಳಿಸಿಕೊಟ್ಟ ಪುಸ್ತಕಗಳನ್ನೆಲ್ಲ ಅನುವಾದ ಮಾಡಲಾಗಲಿಲ್ಲ. ಉದ್ಯೋಗ, ಸಂಸಾರ, ಮಕ್ಕಳು ಇತ್ಯಾದಿಗಳಲ್ಲಿ ಕಳೆದುಹೋಗಿ ಅತ್ತ ಕಣ್ಣು ಹರಿಸಲಿಲ್ಲ. ನಿವೃತ್ತಳಾದ ಮೇಲೆ ಮತ್ತೆ ಆಲೀಸ್ ವಾಕರ್ ಅವರ ಪುಸ್ತಕವನ್ನು ಕೈಗೆತ್ತಿಕೊಂಡೆ. ತಾಯಂದಿರ ತೋಟಗಳನ್ನು ಅರಸುತ್ತ' ಎಂಬ ಅಧ್ಯಾಯವನ್ನು ಓದುವಾಗ ಅಲೀಸ್ನಮ್ಮದೇ ಜೀವನವನ್ನು ಬರೆಯುತ್ತಿದ್ದಾರೆ ಅನ್ನಿಸಿತು. ಎಷ್ಟೋ ಪ್ರಸಂಗಗಳಲ್ಲಿ ಸಾಮ್ಯತೆ ಕಂಡಿತು.ನನ್ನ ತಾಯಿ ಹುಟ್ಟಿದ ಸಂದರ್ಭದಲ್ಲಿ ಅತ್ಯಂತ ಪ್ರತಿಭಾವಂತಳಾಗಿದ್ದ ನನ್ನ ಅಜ್ಜಿಗೆ ಬಾಣಂತಿ ಸನ್ನಿಯಾಗಿ ಸರಿಯಾಗಿ ಚಿಕಿತ್ಸೆ ಮಾಡಿಸದೇ,ಮೌಢ್ಯಕ್ಕೆ ಮೊರೆಹೋಗಿ ಸಾಯುವವರೆಗೂ ಮಾನಸಿಕ ಅಸ್ವಸ್ಥಳಾಗಿಯೇ ಉಳಿದಿದ್ದಳು. ಅಮ್ಮ ಈ ವಿಷಯವನ್ನು ಬಹಳ ನೋವಿನಿಂದ ಹೇಳುತ್ತಿದ್ದಳು. ಕಾರಣಗಳು ಬೇರೆಯಾದರೂ ಅಂತಹದೇ ಪ್ರಸಂಗವೊಂದು ಈ ಪುಸ್ತಕದಲ್ಲಿ ಬರುತ್ತದೆ.

ಹಾಗೆ ನೋಡಿದರೆ ನನ್ನ ತಾಯಿಯದು ಚಿತ್ರ ಕಲಾವಿದರ ಮನೆತನ. ಅವಳ ಸೋದರ ಮಾವ ಟಿ.ಜಿ. ಕೃಷ್ಣಮೂರ್ತಿಯವರು ಕಲಾವಿದರಾಗಿದ್ದು, ಪಠ್ಯ ಪುಸ್ತಕಗಳಿಗೆ ವಿಶೇಷವಾಗಿ ಚಿತ್ರಗಳನ್ನು ಬರೆಯುತ್ತಿದ್ದರು. ಅಮ್ಮ ಕೂಡ ಅದ್ಭುತ ಕಸೂತಿ ಕಲಾವಿದೆ ಯಾಗಿದ್ದಳೆನ್ನುವುದಕ್ಕೆ ನಾಲ್ಕೈದು ಸಾಕ್ಷಿಗಳನ್ನು ಉಳಿಸಿಹೋಗಿದ್ದಾಳೆ. ಆದರೆ ಈ ಹೆಣ್ಣುಮಕ್ಕಳೆಲ್ಲ ತಮ್ಮ ಸೃಜನ ಶಕ್ತಿಯನ್ನು ಅಡಗಿಸಿಕೊಂಡು ಹೇಸರಗತ್ತೆಗಳಂತೆ; ದುಡಿದು ಈ ಬದುಕಿನಿಂದ ತೆರಳಿದರು, ಕೆಲವರು ಹುಚ್ಚರಾದರು. ಪ್ರತಿಭೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಅವರಿಗೆ ಅವಕಾಶವೇ ದೊರೆಯಲಿಲ್ಲ. ನಾನು ಎಂಟು ವರ್ಷದವಳಾಗಿದ್ದಾಗ ಮತ್ತೊಬ್ಬ ಅಜ್ಜಿ (ತಂದೆಯ ತಾಯಿ) ತೀರಿಕೊಂಡರು. ಕಣ್ಣು ಕಳೆದುಕೊಂಡು ಹತ್ತಾರು ವರ್ಷಗಳ ಕಾಲ ಹಾಸಿಗೆಯಲ್ಲಿ ಮಲಗಿದ್ದ ಅಜ್ಜಿ ಸುಶ್ರಾವ್ಯವಾಗಿ ಹಾಡುತ್ತಿದ್ದುದನ್ನು ಕೇಳಿದ ನೆನಪಿದೆ. ನನ್ನ ತಾಯಿಯಂತೂ ಹನ್ನೊಂದು ಮಕ್ಕಳನ್ನು ಹೆತ್ತು, ಶ್ರಮಕ್ಕೆ ಜೀವನವನ್ನು ತೆತ್ತುಕೊಂಡು, ತನ್ನೊಳಗಿನ ಹಾಡು, ಹಸೆ,ಕಸೂತಿಯನ್ನು ಮರೆಯುತ್ತ ಹೋದಳು. ಮುತ್ತಜ್ಜಿ, ಅಜ್ಜಿ, ಅಮ್ಮಂದಿರು ಬಿತ್ತಿದ ಬೀಜ ಈಗ ನಮ್ಮೆದೆಯಲ್ಲಿ ಹೇಗೋ ಚಿಗುರಿ, ಒಂದಿಷ್ಟು ಹಸಿರು,ಹೂವು ಕಾಣುತ್ತಿದೆ.

ನನ್ನ ‘ಕಸೂತಿಯಾದ ನೆನಪು’ ಪುಸ್ತಕದಲ್ಲಿ ಇಂತಹ ಅನೇಕ ವಿಷಯಗಳನ್ನು ದಾಖಲಿಸಿದ್ದೇನೆ. ನಾನು ಹೀಗೆ ಅಜ್ಜಿ ಮುತ್ತಜ್ಜಿಯರ ಬದುಕನ್ನು ಹುಡುಕಿಕೊಂಡು ನನ್ನನ್ನು ಕಂಡುಕೊಳ್ಳುತ್ತಿದ್ದ ಸಮಯದಲ್ಲೇ ಆಲೀಸ್ ವಾಕರ್ ಅವರ ಪುಸ್ತಕವನ್ನು ಓದಿದ್ದು ಕಾಕತಾಳೀಯವೇ ಸರಿ!

ನಾನು ಬರೆಯುವ ಅಥವಾ ನಾವೆಲ್ಲಾ ಬರೆಯುವ ಕತೆಗಳು ನನ್ನ, ನಮ್ಮ ಅವ್ವನ ಕತೆಗಳೇ; ಎಂಬ ಅಲೀಸ್ ವಾಕರ್ ಮಾತು ಅವಳೇ ಹೇಳುವಂತೆ ನನಗೂ ಅರ್ಥವಾಗಿದ್ದು ಕೊಂಚ ತಡವಾಗಿಯೇ. ಇದರ ಜೊತೆಗೆ ಇವು ಜಗತ್ತಿನಎಲ್ಲ ಹೆಣ್ಣುಮಕ್ಕಳ ಕತೆಗಳು ಎನಿಸಿದ್ದರಿಂದಲೇ ಈ ಪುಸ್ತಕವನ್ನು ಅನುವಾದಿಸಬೇಕೆನ್ನಿಸಿತು. ಈ ಪುಸ್ತಕಕ್ಕೆ ಇನ್ನೂ ಹಲವಾರು ಆಯಾಮಗಳಿದ್ದರೂ, ವೈವಿಧ್ಯಮಯ ವಿಷಯಗಳಿದ್ದರೂ ಅದು ಪ್ರಧಾನವಾಗಿ ಬದುಕನ್ನು ಹಸನಾಗಿಸಲು ಹೆಣ್ಣುಮಕ್ಕಳು ನಡೆಸಿದ ಹೋರಾಟದ ಕತೆಗಳನ್ನೇ ಹೇಳುತ್ತದೆ. ಹೆಚ್ಚುಕಮ್ಮಿ ಐನೂರು ಪುಟಗಳಿರುವ ಪುಸ್ತಕದ ಕೆಲವು ಭಾಗಗಳನ್ನು ಮಾತ್ರ ಅನುವಾದಿಸಿದ್ದೇನೆ. ಮುಂದೆಂದಾದರೂ ಉಳಿದದ್ದನ್ನು ಅನುವಾದಿಸಬಹುದೇನೋ!

ಯಾರೂ ಗುರುತಿಸದ, ಗಮನಿಸದ ಕಾಲದಲ್ಲಿ ತಮ್ಮೆಲ್ಲ ಮಿತಿಗಳಲ್ಲಿಯೂ ಸೃಜನಶೀಲತೆಯನ್ನು ಹೇಗೋ ಕಾಪಿಟ್ಟುಕೊಂಡು ದಾಟಿಸಲು ಯತ್ನಿಸಿದ ಮುತ್ತಜ್ಜಿ, ಅಜ್ಜಿ, ಅಮ್ಮಂದಿರಿಗೆ ಈ ಅನುವಾದವನ್ನು ಅರ್ಪಿಸಿದ್ದೇನೆ. ಅವರ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿಯಲು ನೆರವಾದ ಅಣ್ಣ ಡಾ. ಎಂ. ಆರ್. ವಿಜಯಶಂಕರ ಮತ್ತು ತಮ್ಮ ರಾಮನ್ ಸುಬ್ಬರಾವ್ ಅವರಿಗೆ ಕೃತಜ್ಞತೆಗಳು.

ಮುಖ ಪುಟ ಕಲೆ ಮತ್ತು ಒಳಪುಟ ಒಪ್ಪ ಮಾಡಿದ ಎಂ.ಆರ್. ಗುರುಪ್ರಸಾದ್ ಅವರಿಗೆ, ಈ ಪುಸ್ತಕವನ್ನು ಪ್ರಕಟಿಸಲು ಒತ್ತಾಸೆಯಾದ ಕಿರಿಯ ಮಿತ್ರ ಡಾ. ಎಚ್. ಎಸ್. ಸತ್ಯನಾರಾಯಣ ಅವರಿಗೆ, ಅನುವಾದವು ತೊಡಕೆನಿಸಿದಾಗೆಲ್ಲ ನೆರವು ನೀಡಿದ ಮಗ ಆಕರ್ಷ ಮತ್ತು ಭಾವಚಿತ್ರವನ್ನು ತೆಗೆದುಕೊಟ್ಟ ಮಗಳು ಸ್ಪರ್ಶ ಅವರಿಗೆ, ಕಥನ ಪ್ರಕಾಶನದ ಮಿತ್ರರಾದ ಚಂದ್ರಶೇಖರ ಆಲೂರು ಮತ್ತು ಕೇಶವ ಮಳಗಿಯವರಿಗೆ ತುಂಬು ಮನಸ್ಸಿನ ಕೃತಜ್ಞತೆಗಳು.

‍ಲೇಖಕರು Admin

October 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: