ಗ್ರಾಮೀಣ ಸೊಗಡಿನ ‘ಒಳ್ಳೆಯ ದೆವ್ವ’

ತಮ್ಮಣ್ಣ ಬೀಗಾರ
ಕತ್ತಲು ತುಂಬಿದ ಕಾಳರಾತ್ರಿಯಲ್ಲಿ ಕಾಡಿನ ದಾರಿಯಲ್ಲಿ ನಾವು ಯಕ್ಷಗಾನ ನೋಡುವುದಕ್ಕಾಗಿ ನಡೆಯುತ್ತಿದ್ದೆವು. ಅಂತಹ ರಾತ್ರಿಯಲ್ಲಿ ನಡೆಯುತ್ತಿದ್ದಾಗ ಆಗ ಊರ ತುಂಬೆಲ್ಲ ಮಾತಾಡಿಕೊಳ್ಳುತ್ತಿದ್ದ ದೆವ್ವದ ನೆನಪು ತಾನೇ ತಾನಾಗಿ ಬರುವುದೂ ಇತ್ತು. ಆಗ ಕಾಡಿನ ದಾರಿಯು ಒಂದು ರೀತಿಯ ಭಯದ ದಾರಿಯಾಗಿ ನಮ್ಮನ್ನು ಕಾಡಿದ್ದೂ ಇದೆ. ಯಕ್ಷಗಾನದಲ್ಲಿ ಬರುವ ಶೂರ್ಪನಖಿ, ಘಟೋದ್ಗಜ ಮುಂತಾದ ಭೀಕರ ಪಾತ್ರಗಳು ಬೆಳಕಿನ ಹಿಲಾಲಿನೊಂದಿಗೆ ಕಾಡನ್ನು ಪ್ರವೇಶಿಸಿ ಕುಣಿದಂತೆ… ಹಿಲಾಲಿನ ಬೆಳಕಿನಲ್ಲಿ ಮರದ ಎಲೆಗಳೆಲ್ಲ ಹೊಳೆಯುತ್ತಿರುವಾಗ ಗುಡುಗು ಸಿಡಿಲು ಆರ್ಭಟಿಸಿದಂತೆ ಆಗಿ ರಕ್ಕಸ ಪಾತ್ರಗಳ ಕಿರುಚುವಿಕೆಯಲ್ಲಿ ಕಾಡನ್ನು ತುಂಬಿಕೊಂಡಂತೆ ಎಲ್ಲ ಅನಿಸುವುದೂ ಇತ್ತು. ಆದರೂ ಇದು ಬಹಳ ಹೊತ್ತು ಇರದೆ ಮತ್ತೆ ನಾನು ವಾಸ್ತವಕ್ಕೆ ಮರಳಿ ಅಣ್ಣನೊಂದಿಗೋ ಅಬ್ಬೆಯಂದಿಗೋ ಯಕ್ಷಗಾನದ ಚಂಡೆ ಮೃದಂಗದ ಸದ್ದಿನೆಡೆಗೆ ಹೆಜ್ಜೆ ಹಾಕುತ್ತಿದ್ದೆ…
ಕತ್ತಲ ರಾತ್ರಿಯಲ್ಲಿ ಬಿಳಿ ಉಡುಗೆ ಉಟ್ಟು ಸಾಗುವ ದೆವ್ವ… ದೂರದಲ್ಲಿ ಎಲ್ಲೋ ಬೆಳಕು ಮಾತ್ರ ಚಲಿಸುತ್ತಿರುವಂತೆ ಕಾಣುವುದು, ರಾತ್ರಿಯ ದಾರಿಯಲ್ಲಿ ದಿಢೀರನೆ ಪ್ರತ್ಯಕ್ಷವಾಗುವ ಹಿಂದು ಮುಂದು ಕಾಲಿರುವ ಅಜ್ಜ ಅಜ್ಜಿ, ಒಮ್ಮೆಲೇ ಮೈಮೇಲೆ ಬಂದು ಕುಣಿಯುವ ಭಾವುಕ ಭಕ್ತ, ಪೂಜಾರಿಗಳು, ಮಕ್ಕಳ ಮೇಲೆ ಬಂದು ಕುಳಿತು ಏನೇನೋ ಹಲಬುವಂತೆ ಮಾಡುವ ದೆವ್ವಗಳು ಎಂದೆಲ್ಲಾ ಸಮಾಜದಲ್ಲಿ ಆಡಿಕೊಳ್ಳುತ್ತಿದ್ದ ಜನರೊಂದಿಗೆ ಬೆಳೆದದ್ದೆಲ್ಲ ಬಸು ಬೇವಿನಗಿಡದ ಅವರ ‘ಒಳ್ಳೆಯ ದೆವ್ವ’ ಕಾದಂಬರಿ ಬಿಚ್ಚಿಕೊಂಡಾಗ ನೆನಪಾಗುತ್ತದೆ.
ಡಾ. ಬಸು ಬೇವಿನಗಿಡದ ಅವರು ಗ್ರಾಮೀಣ ಪ್ರದೇಶದಲ್ಲಿ ತನ್ನ ಬಾಲ್ಯವನ್ನು ಕಳೆದು ಬಂದವರು. ಅವರ ಬಾಲ್ಯದ ನೆನಪಿನಲ್ಲಿ ಹಳ್ಳಿಯ ಸೌಂದರ್ಯ, ಅಲ್ಲಿಯ ಸಾಂಪ್ರದಾಯಿಕತೆ, ನಂಬಿಕೆಗಳು, ಮಕ್ಕಳ ಆಟ ಮತ್ತು ವಿನೋದ, ಊರ ಜನರ ಬದುಕು ಬವಣೆಗಳೆಲ್ಲ ಹೆಪ್ಪುಗಟ್ಟಿಕೊಂಡೇ ಇದೆ ಎಂದು ನನಗೆ ಅನಿಸುತ್ತದೆ.

ಅವರ ಮೊದಲ ಕಾದಂಬರಿ ‘ನಾಳೆಯ ಸೂರ್ಯ, ನಂತರದ ಕಾದಂಬರಿ ‘ಓಡಿಹೋದ ಹುಡುಗ’, ಈಗಿನ ಕಾದಂಬರಿ ‘ಒಳ್ಳೆಯ ದೆವ್ವ’ ಎಲ್ಲ ಗ್ರಾಮೀಣ ಬದುಕಿನ ಬಹು ಸುಂದರ ಚಿತ್ರವನ್ನು ನಮ್ಮ ಮುಂದೆ ಇಡುತ್ತವೆ. ಬಸು ಚಿತ್ರಿಸುವ ಗ್ರಾಮೀಣ ಪರಿಸರ ನಮ್ಮ ಕಣ್ಣ ಮುಂದೇ ಬಂದು ನಿಲ್ಲುತ್ತದೆ. ಅದು ಎಲ್ಲೂ ಉತ್ಪ್ರೇಕ್ಷೆ ಅಂತಾಗಲಿ, ಅಸಹಜತೆ ಅಂತಾಗಲಿ ನಮಗೆ ಅನಿಸುವುದೇ ಇಲ್ಲ. ಅವರ ಚಿತ್ರಕ ಶಕ್ತಿ ಅಪಾರವಾದದ್ದು. ಪ್ರಸ್ತುತ ಒಳ್ಳೆಯ ದೆವ್ವ ಕಾದಂಬರಿ ಕೂಡಾ ಅಂತಹುದೇ ಚಿತ್ರಣದೊಂದಿಗೆ ಓದುಗರನ್ನು ಸೆಳೆಯುತ್ತದೆ ಮತ್ತು ಯಶಸ್ಸಿನೊಂದಿಗೆ ಬಸು ಅವರನ್ನು ಮುನ್ನಡೆಸುತ್ತದೆ.
ಒಳ್ಳೆಯ ದೆವ್ವ ಕಾದಂಬರಿಯು ಮಂಜುನಾಥ ಎನ್ನುವ ಹುಡುಗನಿಗೆ ದೆವ್ವ ಹಿಡಿದಿದೆ ಎನ್ನುವ ಸಂಗತಿಯ ಮೂಲಕ ತೆರೆದುಕೊಳ್ಳುತ್ತದೆ. ಮಂಜುನಾಥ, ಅವನ ತಾಯಿಯಾದ ನೀಲವ್ವ, ಗೆಳೆಯರಾದ ಪವನ ಮತ್ತು ಆಕಾಶ, ಪಲ್ಲವಿ, ಚಿಕ್ಕಪ್ಪ ಕಾಕಾ, ದೆವ್ವ ಬಿಡಿಸುವ ಗಾಳಪ್ಪಮಹಾರಾಜ, ಪ್ರಗತಿಪರ ಚಿಂತನೆಯ ಭಗವತಿ ಸರ್ ಮುಂತಾದ ಪಾತ್ರಗಳೆಲ್ಲ ಕಾದಂಬರಿಯ ಉದ್ದಕ್ಕೂ ಇವೆ. ಇಂತಹ ಪಾತ್ರಗಳ ಸುತ್ತಲಿನ ಸಂಗತಿಗಳ ವಿಸೃತವಾದ ಹಾಗೂ ಸೂಕ್ಷ್ಮವಾದ ಚಿತ್ರಗಳನ್ನು ನೀಡುವ ಮೂಲಕವೇ ಕಾದಂಬರಿಯನ್ನು ಕಟ್ಟಿಕೊಟ್ಟಿದ್ದಾರೆ ಬಸು ಅವರು.
ಮಂಜುನಾಥನಿಗೆ ದೆವ್ವ ಹಿಡಿದಿದೆ ಎಂದಾಗ ಹಳ್ಳಿಯ ಉದ್ದಕ್ಕೂ ಸುದ್ದಿಯಾಗುವ ರೀತಿ, ಅನೇಕ ಜನರು ಅವರದೇ ರೀತಿಯಲ್ಲಿ ತರ್ಕಿಸಿ ಅಭಿಪ್ರಾಯ ಹಂಚುವುದೆಲ್ಲ ಗ್ರಾಮೀಣ ಬದುಕಿನ ವಾಸ್ತವ ಚಿತ್ರಗಳನ್ನು ನಮ್ಮ ಕಣ್ಣಮುಂದೆ ತರುತ್ತವೆ. ಇಲ್ಲಿ ಪರಂಪರಾಗತವಾಗಿ ಬಂದಿರುವ ನಂಬಿಕೆಗಳು ವಿಚಿತ್ರ ರೂಪ ಪಡೆದು ದೆವ್ವಗಳಾಗಿ ಬೆಳೆಯುವುದನ್ನೆಲ್ಲ ಮಕ್ಕಳದೇ ಕಣ್ಣೋಟದಲ್ಲಿ ಚಿತ್ರಿಸಿದ್ದಾರೆ ಲೇಖಕರು. ಭಗವತಿ ಸರ್ ಮೂಲಕ ಬಸು ಅವರು ಹೇಳಿರುವ ಮಾತು” ನನಗ ಏನ್ ಅನಿಸ್ತದ ಅಂದ್ರ… ಮೊದಲು ನಮಗೆ ಹಿಡಿದಿರೋ ಭೂತ ಬಿಡಿಸಬೇಕು. ಅಂತಹ ದೆವ್ವಗಳನ್ನು ಹುಟ್ಟು ಹಾಕಿದವರು ಬೇರೆ ಯಾರು ಅಲ್ಲ, ನಾವೇ, ಮನುಷ್ಯರೇ!” ಎನ್ನುವುದು ನಿಜಕ್ಕೂ ಸತ್ಯ.
ಕಾದಂಬರಿಯಲ್ಲಿ ಬರುವ ಗಾಳಪ್ಪನಂತಹ ಮಂತ್ರವಾದಿಗಳು ನಡೆಸುವ ಆಟ ಮತ್ತು ಅವರಿಂದ ಆಗುವ ಕಾಟವನ್ನೆಲ್ಲ ಈ ಕಾದಂಬರಿ ಒಂದು ವೈಜ್ಞಾನಿಕ ಚಿಂತನೆಯ ಮೂಲಕ ಅನಾವರಣಗೊಳಿಸುವುದಲ್ಲದೇ… ಇಂತಹ ಆಟ ಆಡುವವರಿಗೂ ತಮ್ಮ ಮೌಢ್ಯದ ಅರಿವು ಇಲ್ಲದೇ ಹೋಗಿರುವ ಸತ್ಯವನ್ನು ಹೇಳುತ್ತದೆ.
ಮಕ್ಕಳು ಏನೇ ಇದ್ದರೂ… ಅದನ್ನು ಸಂಶೋಧಕ ದೃಷ್ಟಿಯಿಂದ ನೋಡುತ್ತಾರೆ. ಏನೇನೋ ಅನಿಷ್ಟಗಳನ್ನೆಲ್ಲ ಯೋಚಿಸಿ ತಮ್ಮ ಮೇಲೆ ಒತ್ತಡ ಎಳೆದುಕೊಳ್ಳುವುದಿಲ್ಲ, ಧೈರ್ಯದಿಂದ ಮುಂದುವರಿಯುತ್ತಾರೆ ಎಂಬುದನ್ನು ಪವನ ಆಕಾಶ ಪಲ್ಲವಿ ಮುಂತಾದ ಬಾಲಕರ ಮೂಲಕ ಕಾದಂಬರಿಯಲ್ಲಿ ಚೆನ್ನಾಗಿ ನಿರೂಪಿಸಲಾಗಿದೆ.
ಹೆಸರಿಗಾಗಿ ಹಂಬಲಿಸುತ್ತ ಸರಿಯಾಗಿ ವಿಚಾರ ಮಾಡದೇ ಮುಂದುವರಿಯುವ ಶಾಲಾ ಮುಖ್ಯಾಧ್ಯಾಪಕರಾಂತಹ ಪಾತ್ರ, ವೈಜ್ಞಾನಿಕ ಚಿಂತನೆಯೊಂದಿಗೆ ಸಮಾಜದ ಒಳಿತಿನ ಆಲೋಚನೆಯಲ್ಲಿ ತೊಡಗಿಕೊಳ್ಳುವ ಭಗವತಿ ಸರ್ ಅಂತಹ ಪಾತ್ರ… ಮುಖ್ಯವಾಗಿ ಮಕ್ಕಳು ಅವರದೇ ಆದ ರೀತಿಯಲ್ಲಿ ಸಮಸ್ಯೆಗೆ ಪರಿಹಾರ ಹುಡುಕಲು ತೊಡಗಿಕೊಳ್ಳುವುದೆಲ್ಲ… ಕಾದಂಬರಿ ಓದುವ ಮಕ್ಕಳಿಗೆ ತಾನೇ ತಾನಾಗಿ ಒಳಿತಿನ ದಾರಿಗೆ ಬೆಳಕು ಬೀಳುವಂತೆ ಮೂಡಿದೆ ಎಂದು ನನಗೆ ಅನಿಸುತ್ತದೆ.

ಬಸವಂತಪ್ಪನಿಗೆ ಬೆಚ್ಚಪ್ಪ ಎಂದು ಹೆಸರಿಡುವುದು, ಅದಕ್ಕೆ ನೀಡುವ ಕಾರಣಗಳು, ತೆಂಗಿನ ಮರ ಎಂದು ಒಬ್ಬ ಶಿಕ್ಷಕರಿಗೆ ಹೇಳುವುದು, ತುಂಬಾ ದಪ್ಪ ಇದ್ದ ಶಕುಂತಲಾ ಟೀಚರಿಗೆ ಟ್ವೆಂಟಿ ಎಲ್ ಸಿ ಎಂದು ಹೇಳುತ್ತಿದ್ದುದೆಲ್ಲ ಮಕ್ಕಳ ತುಂಟಾಟದೊಂದಿಗೆ ಓದುಗರಿಗೆ ವಿನೋದವನ್ನುಂಟು ಮಾಡುತ್ತದೆ.
ಮಂತ್ರವಾದಿ ಗಾಳಪ್ಪನ ಕುರಿತ ವರ್ಣನೆ, ನೀಲವ್ವನ ದೃಷ್ಟಿ ನಿವಾರಿಸುವ ರೀತಿಯಂತಹ ಸಂಗತಿಗಳೆಲ್ಲ ಕಣ್ಣ ಮುಂದೆ ಬರುತ್ತವೆ. ಇಂತಹ ಚಿತ್ರಗಳು ಕಾದಂಬರಿಯ ಉದ್ದಕ್ಕೂ ಇದ್ದು ಕಾದಂಬರಿಯ ಸೊಗಸನ್ನು ಮತ್ತಷ್ಟು ಹೆಚ್ಚಿಸಿವೆ.
ಒಟ್ಟಿನಲ್ಲಿ ಗ್ರಾಮೀಣ ಪರಿಸರದ ಘಟನೆಯೊಂದನ್ನು ಆಯ್ದುಕೊಂಡು ಅದರ ಸುತ್ತಲಿನ ಸಂಗತಿಗಳನ್ನು ಕಟು ವಾಸ್ತವದಂತೆ ನಮ್ಮ ಮುಂದೆ ಇಡುತ್ತಾ… ಮಕ್ಕಳ ವಿನೋದ, ಖುಷಿ ಹಾಗೂ ದೊಡ್ಡವರಿಂದಾಗಿ ಅವರು ಹೊಂದುವ ಸಂಕಷ್ಟಗಳು ಹಾಗೂ ಅದಕ್ಕೆ ಸಮಾಜ ಸ್ಪಂದಿಸುವ ರೀತಿಯನ್ನು ಬಲು ಸೊಗಸಾಗಿ ಕಾದಂಬರಿಯ ಮೂಲಕ ಇಡುವುದಲ್ಲದೇ… ದಿಢೀರನೆ ಬರುವ ಕಷ್ಟಗಳನ್ನು ಹೀಗೆಲ್ಲಾ ವೈಜ್ಞಾನಿಕ ಭಾವದಿಂದ ಹಾಗೂ ಎಲ್ಲರೂ ಒಂದಾಗಿ ಪ್ರೀತಿಯಿಂದ ನಿವಾರಿಸಿಕೊಳ್ಳಬಹುದೆಂಬುದನ್ನು ಅತ್ಯಂತ ಪರಿಣಾಮಕಾರಿಯಾಗಿ ಹೇಳಿದ್ದಾರೆ. ಇಂತಹ ಕಾದಂಬರಿಯ ಓದು ಮಕ್ಕಳಿಗೆ ಖುಷಿಯ ಓದಾಗುವುದಲ್ಲದೇ ಅವರ ಭಾವ ವಿಸ್ತಾರವಾಗಲು ತುಂಬಾ ಸಹಕಾರಿಯಾಗಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ಪಡೆದ ಬಸು ಬೇವಿನಗಿಡದ ಅವರ ‘ಓಡಿ ಹೋದ ಹುಡುಗ’ ಕಾದಂಬರಿ ಕನ್ನಡ ನಾಡಿನ ಉದ್ದಕ್ಕೂ ಮಕ್ಕಳು ಮತ್ತು ಓದುಗರೆಲ್ಲರು ಖುಷಿಯ ಗುಂಗಿನಲ್ಲಿ ಇರುವಾಗಲೇ ಈಗ ಮತ್ತೊಂದು ಒಳ್ಳೆಯ ಕಾದಂಬರಿ ನೀಡಿರುವುದು ಮತ್ತಷ್ಟು ಸಂತಸ ಹೆಚ್ಚಿಸಿದೆ. ಅವರಿಂದ ಮಕ್ಕಳ ಸಾಹಿತ್ಯಕ್ಕೆ ಇನ್ನಷ್ಟು ಹೊಸತು ಬರಲಿ ಹಾಗೂ ಅವರಿಗೆ ಯಶ ಮತ್ತು ಓದುಗರಿಗೆ ಖುಷಿ ತರುತ್ತಿರಲೆಂದು ಆಶಿಸುತ್ತಾ ಒಳ್ಳೆಯ ಕಾದಂಬರಿಗಾಗಿ ಬಸು ಅವರನ್ನು ಅಭಿನಂದಿಸುತ್ತೇನೆ.
0 ಪ್ರತಿಕ್ರಿಯೆಗಳು