ತಮ್ಮಣ್ಣ ಬೀಗಾರ ಓದಿದ ‘ಹೊಸ ಹಕ್ಕಿ’

ತಮ್ಮಣ್ಣ ಬೀಗಾರ

ಕನ್ನಡದ ಮಕ್ಕಳ ಸಾಹಿತ್ಯದ ಕಥಾಲೋಕದಲ್ಲಿ ಮತ್ತೂರು ಸುಬ್ಬಣ್ಣ ಪರಿಚಿತ ಹೆಸರು. ಕನ್ನಡದ ಮಕ್ಕಳ ಸಾಹಿತ್ಯ ಬಹುಪಾಲು ಪದ್ಯಗಳಿಂದಲೇ ತುಂಬಿ ಹೋಗಿರುವಾಗ ಸುಬ್ಬಣ್ಣ ಎಡಬಿಡದೆ ಕಥೆಗಳನ್ನು ಬರೆಯುತ್ತ ಕಥೆಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೆ ಎನ್ನಬಹುದು. ಆಗಲೇ ಹೇಳಿದ ಹಾಗೆ ಸುಬ್ಬಣ್ಣ ಅವರು ಕನ್ನಡ ನಾಡಿನಾದ್ಯಂತ ಪರಿಚಿತರು.

ನಾವು ಮಕ್ಕಳಾಗಿದ್ದನ್ನು ನೆನಪು ಮಾಡಿಕೊಂಡರೆ ಮಕ್ಕಳು ಕಥೆಯನ್ನು ಎಷ್ಟು ಇಷ್ಟಪಡುತ್ತಾರೆ ಎಂಬುದು ತಾನೇ ತಾನಾಗಿ ತಿಳಿಯುತ್ತದೆ. ಮಕ್ಕಳ ಸಾಹಿತ್ಯ ಮಕ್ಕಳ ಮನಸ್ಸಿನ ಸಮಾರಾಧನೆಯಾಗಬೇಕೆಂಬ ಮಾತಿದೆ. ಅಂತಹ ಸಮಾರಾಧನೆ ನೀಡುವಲ್ಲಿ ಕಥೆಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಕನ್ನಡದ ಕಥಾಲೋಕ ಜಾನಪದ ಕಥೆಗಳು, ಪುರಾಣ ಕಥೆಗಳು, ನೀತಿ ಕಥೆಗಳು ಮುಂತಾದವುಗಳಿ೦ದ ತುಂಬಿ ಹೋಗಿತ್ತು. ಆದರೆ ಇತ್ತೀಚೆಗೆ ಕನ್ನಡದ ಮಕ್ಕಳ ಸಾಹಿತ್ಯದಲ್ಲಿ ಹೊಸತನ ಕಾಣಿಸಿಕೊಂಡಿದೆ.

ಮಕ್ಕಳಿಗಾಗಿ ಬರೆಯುವುದೆಂದರೆ ಅವರಿಗೆ ಬೋಧನೆ ಮಾಡಲು ಹೋಗುವುದಲ್ಲ ಅದನ್ನೊಂದು ಮನೋಭಾವವಾಗಿಸಿಕೊಂಡು ಸೃಜನಶೀಲವಾಗಿ ಕಲಾತ್ಮಕವಾಗಿ ಅವರ ಮುಂದಿಡಬೇಕೆ೦ಬ ಅರಿವು ಉಂಟಾಗುತ್ತಿದೆ. ಹಾಗಾಗಿಯೇ ಇತ್ತೀಚಿನ ಮಕ್ಕಳ ಸಾಹಿತ್ಯದಲ್ಲಿ ಮಕ್ಕಳಲೋಕದವೇ ಆದ ಮಕ್ಕಳೂ ಅದರಲ್ಲಿ ಪಾತ್ರಗಳಾಗಿ ಅನುಭವಿಸುವ ವಾಸ್ತವ ಕಥೆಗಳು ಹೆಚ್ಚಾಗಿ ಬರುತ್ತಿವೆ. ಇಂತಹ ಹೊಸಕಾಲದ ಕಥೆಗಳನ್ನು ನಾವು, ಸಂಧ್ಯಾ ಬಳಗದ ಸದಸ್ಯರು ಮಕ್ಕಳ ಮುಂದೆ ಒಯ್ದು ಅವರ ಪ್ರತಿಕ್ರಿಯೆಗಳನ್ನು ಗಮನಿಸಿದ್ದಾಗಿದೆ. ಮಕ್ಕಳು ಬಹು ಪ್ರೀತಿಯಿಂದ ಓದುವುದು ಹಾಗೂ ತಮ್ಮ ಸುತ್ತಲಿನ ಸಂಗತಿಗಳೊಡನೆ ಸಮನ್ವಯಗೊಳಿಸಿ ಮಾತಾಡುವುದು ಎಲ್ಲಾ ಖುಷಿ ನೀಡಿದೆ.

ಮತ್ತೂರು ಸುಬ್ಬಣ್ಣ ಕಥಾ ಲೇಖಕರಷ್ಟೇ ಅಲ್ಲ. ಅವರು ರೇಡಿಯೋ ನಾಟಕ ಕಲಾವಿದರೂ ಹೌದು. ಅವರು ಅಭಿನಯಗಳ ಮೂಲಕ ಮಕ್ಕಳಿಗೆ ಕಥೆಯನ್ನು ಸೊಗಸಾಗಿ ಹೇಳುತ್ತಾರೆ. ಸುಬ್ಬಣ್ಣ ಅಭಿನಯದ ಮೂಲಕ ಮಕ್ಕಳಿಗೆ ಕಥೆ ಹೇಳತೊಡಗಿದರೆ ಮಕ್ಕಳು ಪೂರ್ತಿಯಾಗಿ ಅದರಲ್ಲಿ ತನ್ಮಯರಾಗುತ್ತಾರೆ. ಸುಬ್ಬಣ್ಣನವರ ‘ಅಂಶು ಮತ್ತು ರೋಬೋ’ ಎನ್ನುವ ವೈಜ್ಞಾನಿಕ ಸಂಗತಿಗಳ ಮಕ್ಕಳ ಕಾದಂಬರಿ ೧೯೮೬ ರಷ್ಟು ಹಿಂದೆಯೇ ಪತ್ರಿಕೆಯಲ್ಲಿ ಪ್ರಕಟವಾಗಿ ಗಮನ ಸೆಳೆದಿದೆ. ಸುಬ್ಬಣ್ಣ ನಾಟಕಗಳನ್ನೂ ಬರೆದು ಸೈ ಅನಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿರುವ ಸುಬ್ಬಣ್ಣ ಬೆಂಗಳೂರಿನಲ್ಲಿ ವಾಸಿಸುತ್ತ ಒಂದಿಷ್ಟು ಪೇಟೆಯ ಪರಿಸರದ ಕಥೆಗಳನ್ನೇ ಹೆಚ್ಚಾಗಿ ಬರೆಯುತ್ತಿದ್ದಾರೆ.

ಇವರ ‘ಮುತ್ತಳ್ಳಿಗೆ ಸೇತುವೆ ಬಂದಿತು’ ಎನ್ನುವ ಕಥೆ ಹಳ್ಳಿಯದಾಗಿದ್ದು ಅಭಿವೃದ್ದಿಯು ಹಳ್ಳಿಯ ಸಾಂಪ್ರದಾಯಿಕ ವೃತ್ತಿ ಬದುಕನ್ನು ಹೇಗೆ ಅತಂತ್ರ ಗೊಳಿಸುತ್ತದೆ ಎಂಬುದನ್ನು ಮಕ್ಕಳ ಕಣ್ಣಿನಿಂದ ನೋಡುತ್ತ ಓದುಗರನ್ನು ಆರ್ದೃಗೊಳಿಸುತ್ತದೆ. ಈ ಕಥೆಗೆ ಸಂಧ್ಯಾ ಬಳಗ ಕೊಡುವ ಮೇವುಂಡಿ ಮಲ್ಲಾರಿ ಕಥಾ ಪ್ರಶಸ್ತಿ ಕೂಡಾ ಬಂದಿದೆ. ಸುಬ್ಬಣ್ಣ ಅವರು ಶಾಲಾ ಪ್ರಾಂಶುಪಾಲಾಗಿದ್ದವರು. ಅವರು ತಮ್ಮ ವಿದ್ಯಾರ್ಥಿಗಳನ್ನು ಅದಮ್ಯವಾಗಿ ಪ್ರೀತಿಸುತ್ತಾರೆ. ವಿದ್ಯಾರ್ಥಿಗಳಲ್ಲಿರುವ ಒಳ್ಳೆಯತನವನ್ನು ಸೂಕ್ಷ್ಮವಾಗಿ ಗ್ರಹಿಸುತ್ತ ತಮ್ಮ ಸುತ್ತಲೂ ನಡೆಯುವ ಪುಟ್ಟ ಪುಟ್ಟ ಘಟನೆಗಳನ್ನೇ ಆಯ್ದು ಕಥೆಯನ್ನಾಗಿಸಲು ಪ್ರಯತ್ನಿಸುತ್ತಾರೆ. ಪ್ರಸ್ತುತ ಈ ಪುಸ್ತಕದ ಎಲ್ಲ ಕಥೆಗಳೂ ಶಾಲಾ ಪರಿಸರದಲ್ಲೇ ಅರಳಿರುವುದನ್ನು ಕಾಣಬಹುದು.

ಶಾಲೆಯಲ್ಲಿ ವನಮಹೋತ್ಸವ ಆಚರಿಸಲು ಶಾಲಾ ಮುಂದಿನ ಮರಕ್ಕೆ ಮೊಳೆ ಹೊಡೆದು ಉದ್ಘಾಟನಾ ಫಲಕ ತೂಗುಹಾಕುವ ಕೆಲಸ ನಡೆದಿರುತ್ತದೆ. ಆಗ ಕಿರಣ ಎನ್ನುವ ಬಾಲಕ ಮರಕ್ಕೆ ಮೊಳೆ ಹೊಡೆಯಬೇಡಿ ಎಂದು ಕೇಳಿಕೊಳ್ಳುತ್ತಾನೆ. ಆದರೆ ಅವನ ಮರದ ಕುರಿತಾದ ಕಾಳಜಿಯನ್ನು ಹೀಯಾಳಿಸಿ ಮಾತಾಡುತ್ತಾರೆ. ನಂತರ ಬಂದ ಗಣ್ಯ ಅತಿಥಿಗಳ ಮೇಲೆ ಫಲಕ ಬಿದ್ದು ಅವರ ಕೈಗೆ ಗಾಯವಾಗುತ್ತದೆ. ಅವರನ್ನು ಉಪಚರಿಸುತ್ತಾರೆ. ನಂತರ ವನಮಹೋತ್ಸವದ ಕುರಿತು ಭಾಷಣ ಮಾಡುವ ಬಾಲಕ ನಮಗೆ ಗಾಯವಾದರೆ ನೋವಾಗುವ ಹಾಗೇ ಗಿಡಗಳಿಗೂ ನೋವಾಗುತ್ತದೆ ಎಂದು ಭಾಷಣದಲ್ಲಿ ಹೇಳುತ್ತಾನೆ. ಇದು ಅತಿಥಿಗಳ ಗಮನ ಸೆಳೆಯುತ್ತದೆ. ಹೀಗೆ ಸುಬ್ಬಣ್ಣ ಪುಟ್ಟ ಘಟನೆಯನ್ನು ಕಥೆಯಂತೆ ಹೇಳುತ್ತಾರೆ. ಇಲ್ಲಿ ಮರಗಳಿಗಾಗುವ ನೋವನ್ನು ಮನುಷ್ಯರಿಗಾಗುವ ನೋವಿನ ಮೂಲಕವೇ ತಾನಾಗಿ ತಿಳಿಯುವಂತೆ ಪ್ರಯತ್ನಿಸಿದ್ದಾರೆ.

ಟ್ರಕ್ಕಿಂಗ್ ಹೋದಾಗ ಎರಡು ದಾರಿಗಳಿದ್ದು ಅದರಲ್ಲಿ ಒಬ್ಬ ಹುಡುಗ ಕಷ್ಟದ ದಾರಿಯನ್ನೇ ಆಯ್ದುಕೊಂಡು ಸಾಹಸ ಮಾಡಿ ಸಾಹಸಕ್ಕೆ ಪ್ರೇರೇಪಿಸುವುದಿದ್ದರೆ ಇನ್ನೊಂದು ಕಥೆಯಲ್ಲಿ ಪ್ರತಿಭಾವಂತನಲ್ಲ ಎಂದು ಶಿಕ್ಷಕರು ತಿಳಿದಿದ್ದ ಹುಡುಗ ರಾಮಿ ವೈಜ್ಞಾನಿಕ ಉಪಕರಣ ತಯಾರಿಸಿ ಎಲ್ಲರನ್ನೂ ಬೆರಗುಗೊಳಿಸುವುದು ಇದೆ. ಸುಬ್ಬಣ್ಣ ಅವರು ಹೆಚ್ಚಾಗಿ ಬಡತನದಿಂದ ಬಂದ ಮಕ್ಕಳನ್ನು, ಪ್ರತಿಭಾವಂತರಲ್ಲ ಎಂದು ತಿರಸ್ಕಾರಕ್ಕೆ ಒಳಗಾದ ಮಕ್ಕಳನ್ನು, ವಿಕಲ ಚೇತನರನ್ನೂ ತಮ್ಮ ಕಥೆಯ ಮುಖ್ಯ ಪಾತ್ರವಾಗಿಸಿಕೊಂಡು ಅವರಿಂದ ಚಮತ್ಕಾರಿಕ ಸಾಧನೆ ಮಾಡಿಸುತ್ತಾರೆ. ತನ್ಮೂಲಕ ಎಲ್ಲ ಮಕ್ಕಳೂ ಒಳಿತನ್ನು ಮಾಡಲು ಪ್ರೇರಣೆ ನೀಡಲು ಪ್ರಯತ್ನಿಸುತ್ತಾರೆ.

‘ಸರ್, ಸಲೀಂ ಬಂದ’ ಕಥೆಯಲ್ಲಿ ಸ್ವಾತಂತ್ರ್ಯೋತ್ಸವದ ದಿನ ಶಾಲೆಯಲ್ಲಿ ಸಲೀಂ ಎಂಬ ಹುಡುಗ ವಿಶೇಷ ಭಾಷಣ ಮಾಡಬೇಕಿತ್ತು. ಆದರೆ ಶಾಲೆಗೆ ಬರುವಾಗ ಅಜ್ಜಿಯ ಪುಟ್ಟ ಕರುವೊಂದು ಮನೆಯಿಂದ ತಪ್ಪಿಸಿಕೊಂಡು ಕಾಣೆಯಾಗಿರುತ್ತದೆ. ಇದನ್ನು ತಿಳಿದ ಸಲೀಂ ಕರುವನ್ನು ಹುಡುಕಲು ಮುಂದಾಗುತ್ತಾನೆ. ತನ್ನ ಭಾಷಣವನ್ನು ಮರೆತು ಪ್ರಾಣಿ ಪ್ರೀತಿಯಲ್ಲಿ ತಲ್ಲೀನನಾಗಿ ಹುಡುಕುತ್ತಾನೆ. ಪುಟ್ಟ ಕರು ಸಿಕ್ಕು ಅದಕ್ಕೆ ನಡೆಯುವ ಶಕ್ತಿ ಇಲ್ಲದೇ ಇದ್ದಾಗ ಅದನ್ನು ಎತ್ತಿಕೊಂಡೇ ಶಾಲೆಗೆ ಬರುವುದು ಇದೆ. ಇಲ್ಲಿ ಸಲೀಂ ಅಜ್ಜಿಯ ಕಷ್ಟಕ್ಕೆ ಸ್ಪಂದಿಸುವುದು, ಪ್ರಾಣಿ ಪ್ರೀತಿ ತುಂಬಿಕೊಳ್ಳುವುದು ನಂತರ ಶಾಲೆಯಲ್ಲಿ ಭಾಷಣ ಮಾಡಿ ಸೈ ಎನಿಸಿಕೊಳ್ಳುವುದೆಲ್ಲ ಮಕ್ಕಳ ಎಲ್ಲ ರೀತಿಯ ವಿಕಾಸಕ್ಕೆ ಪ್ರಚೋದಿಸುವುದರ ಜೊತೆಗೆ ಕಥೆಯೂ ಆಪ್ತವಾಗುತ್ತದೆ.

‘ಚಿನ್ನಾರಿ ಚೀತು’ ಕಥೆ ಉಳಿದ ಕಥೆಗಳಿಗಿಂತ ಭಿನ್ನವಾಗಿದೆ. ಇಲ್ಲಿ ಚಿರತೆಯ ಸಂಸಾರವೊ೦ದು ಅದಿರುವ ಕಾಡು ಪ್ರದೇಶದಲ್ಲಿ ಮನುಷ್ಯರ ಮನೆಗಳು ನಿರ್ಮಾಣ ಆದದ್ದರಿಂದ ತನ್ನ ವಾಸಸ್ಥಳ ಕಳೆದುಕೊಳ್ಳುತ್ತದೆ. ನಂತರ ಸುರಕ್ಷತೆ ಹುಡುಕುತ್ತಾ ಚಿರತೆಯ ಮರಿಯೊಂದು ಶಾಲೆಗೆ ಬರುವುದು, ಇದರಿಂದಾಗಿ ಶಾಲೆಗೆ ರಜೆ ದೊರೆಯುವುದು ಎಲ್ಲ ಇದೆ. ಇಲ್ಲಿ ಸುಬ್ಬಣ್ಣ ಅವರು ಚಿರತೆಯ ಮರಿಯೇ ಶಾಲಾ ಬಾಲಕಿ ಪುಟ್ಟಿಗೆ ಪತ್ರ ಬರೆದಹಾಗೆ ಬರೆದು ತನ್ನ ಕಷ್ಟವನ್ನೆಲ್ಲ ಹೇಳಿಕೊಳ್ಳುವಂತೆ ನಿರೂಪಿಸಿದ್ದಾರೆ. ಇದು ಪ್ರಕೃತಿಯ ಮೇಲಿನ ಮಾನವನ ಹಸ್ತಕ್ಷೇಪದಿಂದ ವನ್ಯ ಪ್ರಾಣಿಗಳಿಗಾಗುವ ತೊಂದರೆಯನ್ನು ಪರಿಣಾಮಕಾರಿಯಾಗಿ ಹೇಳುತ್ತದೆ. ಅದೇ ರೀತಿ ಇನ್ನೊಂದು ಕಥೆಯಲ್ಲಿ ಎರೆಹುಳವೊಂದು ಗಿಡ ಬೆಳೆಸುವಲ್ಲಿ ತನ್ನ ಮಹತ್ವ ತಿಳಿಸುವುದು ಬಂದಿದೆ.

ಬಿಜು ಎನ್ನುವ ಬಡ ಹುಡುಗನಿಗೆ ಶರ್ಟ ಹರಿದಿರುತ್ತದೆ. ಷೂ ಹಾಳಾಗಿರುತ್ತದೆ. ಅದಕ್ಕಾಗಿ ಅವನಿಗೆ ದೈಹಿಕ ಶಿಕ್ಷಕರು ಹಾಗೂ ಮುಖ್ಯ ಗುರುಗಳು ಬೈಯ್ಯುತ್ತಾರೆ. ಇಂತಹ ಹುಡುಗನ ಸಹಾಯಕ್ಕೆ ಅವನ ಸ್ನೇಹಿತ ರಾಜು ಮುಂದಾಗುತ್ತಾನೆ. ತನಗೆ ಬಂದ ಬಹುಮಾನದ ಹಣದಲ್ಲಿ ಅವನಿಗೆ ಶರ್ಟ್ ಷೂ ಎಲ್ಲ ಕೊಡಿಸುತ್ತಾನೆ. ಮಕ್ಕಳಲ್ಲಿ ಎಷ್ಟೊಂದು ಆತ್ಮೀಯತೆ ಇರುತ್ತದೆ ಎಂದು ಹೇಳುವ ಈ ಕಥೆ ಸಹಜವಾಗಿ ಬಂದಿದೆ. ಹೌದು ಮಕ್ಕಳ ಲೋಕವೇ ಹಾಗೆ. ಅವರು ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ, ಮೆಚ್ಚುತ್ತಾರೆ, ಒಂದಾಗಿ ಸಾಗುತ್ತಾರೆ. ಅವರ ಒಳಿತಿನ ನಡೆ ಮುಂದುವರಿಯುವ ಪರಿಸರ ನಿರ್ಮಾಣವಷ್ಟೇ ನಮ್ಮ ಕೆಲಸ.

ಸುಬ್ಬಣ್ಣ ಅವರ ಕಥೆಗಳು ಆಗಲೇ ಹೇಳಿದಂತೆ ಶಾಲಾ ಪರಿಸರದಲ್ಲಿ ಹುಟ್ಟಿಕೊಂಡವು ಆಗಿರುತ್ತವೆ. ಅವರು ಹೆಚ್ಚಾಗಿ ಪತ್ರಿಕೆಗೆ ಬರೆಯುವುದರಿಂದ ಕಥೆ ಪದಗಳ ಮಿತಿಯಲ್ಲಿ ಬರೆಯುವುದು ರೂಢಿಯಾದಂತೆನಿಸುತ್ತದೆ. ಹಾಗಾಗಿ ಅವು ಬೇಗನೇ ಮುಗಿದು ಹೋಗುತ್ತವೆ. ಆದರೆ ಪುಟ್ಟ ಪುಟ್ಟ ಪ್ರಸಂಗಗಳಲ್ಲೇ ಅವರು ಮಾನವೀಯ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಬಿತ್ತುವುದರಿಂದ ಕಥೆಗಳು ಯಶ ಪಡೆದಿವೆ.

‍ಲೇಖಕರು Admin

July 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: