ತಮ್ಮಣ್ಣ ಬೀಗಾರ ಓದಿದ ʼದಿ ರೇಲ್ವೆ ಚಿಲ್ಡ್ರನ್ʼ

ತಮ್ಮಣ್ಣ ಬೀಗಾರ

ಬಾಲ್ಯವು ಏನೆಲ್ಲಾ ಸಂಭ್ರಮದಿಂದ ಕೂಡಿದ್ದು ಎನ್ನುವುದು ಮಕ್ಕಳ ಚೈತನ್ಯ ಹಾಗೂ ಅವರ ಮುಗ್ಧತೆಯಲ್ಲಿ ಪುಷ್ಠೀಕರಿಸುತ್ತದೆ. ಕಷ್ಟಗಳು ಜೀವನದ ಉದ್ದಕ್ಕೂ ಬರುತ್ತಲೇ ಹೋಗುತ್ತವೆ. ಆ ಕಷ್ಟಗಳನ್ನೆಲ್ಲಾ ತಿರಿವಿಹಾಕುತ್ತ ಅವುಗಳ ಮೇಲೆ ಓಡಾಡಿ ಏನೇನೋ ಮಾಡುವ ಹಾಗೂ ಖುಷಿ ಅನುಭವಿಸುವ, ದುಃಖವನ್ನು ದಿನವೆಲ್ಲಾ ತಲೆಯಮೇಲೆ ಹೊತ್ತು ವೈಭವೀಕರಿಸದೇ ಇರುವ… ಹಾಗೂ ಸುತ್ತಲಿನ ಜನರಿಗೆ ಖುಷಿ ಹಂಚುತ್ತಾ ಒಂದಿಷ್ಟೆಲ್ಲಾ ಸಾಹಸಕ್ಕೆ ಇಳಿಯುವ ಘಟನೆಗಳೆಲ್ಲಾ ತಾನೇ ತಾನಾಗಿ ನಡೆಯುವುದು ಎನ್ನುವ ಹಾಗೆ ನಡೆಸಿಕೊಂಡು ಹೋಗುವುದೆಲ್ಲ ಮಕ್ಕಳಿಗೆ ಸಾಧ್ಯ. ಹಾಗಾಗಿಯೇ ಹಿರಿಯರಲ್ಲಿ ಅಡಗಿರೋ ಮಗುತನವನ್ನು ಕಾಪಿಟ್ಟುಕೊಳ್ಳ ಬೇಕು ಎಂದು ಬಲ್ಲವರು ಹೇಳುವ ಮೂಲಕ ಜೀವನದ ಉತ್ಸಾಹಿ ಹಾಗೂ ಸಮಚಿತ್ತದ ಮಾರ್ಗವೊಂದನ್ನು ತೆರೆಯುವ ಬೆಳಕನ್ನು ತೋರಿಸಿದ್ದಾರೆ ಎಂದು ನನಗೆ ಅನ್ನಿಸುತ್ತದೆ.

ರೈಲಿನ ಬಗ್ಗೆ ನನ್ನಂಥವರ ಬಾಲ್ಯದಲ್ಲಿ ತಿಳಿದಿದ್ದು ಬಹಳ ಕಡಿಮೆ. ಆದರೆ ಪ್ರಾಥಮಿಕ ಶಾಲೆಗೆ ಹೋದಾಗ ಅಲ್ಲಿ ನಮ್ಮ ಜಿಲ್ಲೆಯ ನಕಾಶೆಯನ್ನು ತೋರಿಸುತ್ತ ದಾಂಡೇಲಿ ಹತ್ತಿರ ಮಾತ್ರ ನಮ್ಮ ಜಿಲ್ಲೆಯಲ್ಲಿ ರೈಲು ಮಾರ್ಗವಿದೆ ಎಂದು ಹೇಳಿದ್ದರು. ಆದರೂ ನಾವೆಲ್ಲ ಒಬ್ಬರ ಹಿಂದೆ ಒಬ್ಬರು ನಿಂತು ಎರಡೂ ಕೈಯಿಂದ ಮುಂದಿನವರ ಹೆಗಲನ್ನು ಹಿಡಿದುಕೊಂಡು ರೈಲು ಬೋಗಿಯ ಹಾಗೆ ಜೋಡಿಸಿಕೊಂಡು ರೈಲು ಆಟ ಆಡಿದ್ದೆವು.

ಮಲೆನಾಡಿನಲ್ಲಿ ಕಾಣುವ ಚೊರಟೆಯಂತಹ ಹುಳವನ್ನು ರೈಲು ಎನ್ನುವುದು, ಇರುವೆ ಓಳಿಗಳನ್ನೆಲ್ಲ ರೈಲಿಗೆ ಹೋಲಿಸಿ ಆನಂದಪಡುವುದೆಲ್ಲ ನಮ್ಮ ಬಾಲ್ಯದಲ್ಲಿ ರೈಲಿನೊಂದಿಗಿನ ಸಂಬಂಧಗಳಾಗಿದ್ದವು. ಆದರೆ ಇಲ್ಲಿ ‘ದಿ ರೇಲ್ವೆ ಚಿಲ್ಡ್ರನ್’ ಎಡಿತ್ ನೆಸ್ಬಿಟ್ ಅವರು ಇಂಗ್ಲೀಷಿನಲ್ಲಿ ಬರೆದ ಮಕ್ಕಳ ಕಾದಂಬರಿಯ ಕನ್ನಡ ಅನುವಾದ ಓದಿದ ಮೇಲೆ… ಕಾದಂಬರಿಯಲ್ಲಿ ಬರುವ ಮಕ್ಕಳು ರೈಲಿನ ಸಾಮೀಪ್ಯದಿಂದಾಗಿ ರೈಲಿನೊಂದಿಗೆ ಹೇಗೆಲ್ಲಾ ತಾದಾತ್ಮ್ಯ ಹೊಂದಿದ್ದರು… ಅವರ ಬಾಲ್ಯದ ದಿನಗಳು ರೈಲಿನೊಂದಿಗೆ ಹೇಗೆ ಹರಡಿತ್ತು ಎನ್ನುವ ಕಥೆ ನಮಗೆ ತಿಳಿಯುತ್ತ ರೈಲು ಹಾಗೂ ಸುತ್ತಲಿನ ಪರಿಸರದೊಂದಿಗೆ ನಾವು ಅನುಸಂಧಾನ ನಡೆಸುವಂತೆ ಮಾಡುತ್ತದೆ.

ಈ ಕಾದಂಬರಿಯನ್ನು ಬಳ್ಳಾರಿಯ ಬರಹಗಾರ ವೈದ್ಯರಾದ ಅರವಿಂದ ಪಟೇಲರು ಕನ್ನಡಕ್ಕೆ ತಂದಿದ್ದಾರೆ. ಮೊದಲಿಗೆ ಹೇಳಿದಂತೆ ನನ್ನ ಬಾಲ್ಯ ರೈಲಿನೊಂದಿಗೆ ಅಷ್ಟೇನೂ ಸಂಬಂಧ ಹೊಂದಿಲ್ಲದೇ ಇದ್ದರೂ ಈ ಕಾದಂಬರಿ ಓದುತ್ತ ಇಲ್ಲಿನ ಮಕ್ಕಳು ನಮ್ಮನ್ನೆಲ್ಲಾ ಅವರಿದ್ದ ಪುಟ್ಟ ಹಳ್ಳಿಯ ರೈಲು ನಿಲ್ದಾಣಕ್ಕೆ, ಅಲ್ಲಿಯ ಸ್ಟೇಶನ್ ಮಾಷ್ಟರ ಮುಂದೆ, ಪೋರ್ಟರನ ಟೀ ಕಪ್ಪಿಗೆ, ಸುರಂಗದ ಒಳಕ್ಕೆ, ಡಾಕ್ಟರ ಬೆಟ್ಟಿಗೆ, ಅಜ್ಜನ ಟಾಟಾ ಮಾಡುವ ಕೈಗೆ, ನಾವಿಕರ ಪ್ರೀತಿಗೆ, ಹುಟ್ಟು ಹಬ್ಬಗಳಿಗೆಲ್ಲಾ ಭೆಟ್ಟಿ ಮಾಡಿಸುತ್ತ… ಅಮ್ಮನ ಪ್ರೀತಿಯ ಅಡಿಯಲ್ಲಿ ನಮ್ಮನ್ನು ಸುತ್ತಾಡಿಸುತ್ತದೆ. ಹೀಗಾಗಿ ನಾವೆಲ್ಲ ಅಲ್ಲಿಯ ಪಾತ್ರಗಳಾಗುತ್ತ ಕಥೆಯಲ್ಲಿ ಸೇರಿಹೋಗಿಬಿಡುತ್ತೇವೆ.

ಎಲ್ಲ ಸಂತಸವಾಗಿರುವ ಸಂಸಾರಕ್ಕೆ ಅನಿರೀಕ್ಷಿತ ಆಪತ್ತು ಬರುವ ಮೂಲಕ ಕಥೆ ತೆರೆದುಕೊಳ್ಳುತ್ತದೆ. ಸಂಸಾರ ಪಟ್ಟಣ ಬಿಟ್ಟು ಹಳ್ಳಿಯೊಂದಕ್ಕೆ ಹೋಗಿ ಬದುಕಬೇಕಾಗುತ್ತದೆ. ಅಲ್ಲಿ ಮನೆಯ ಸಮೀಪವೇ ಇರುವ ರೈಲ್ವೇ ಸ್ಟೇಶನ್, ಅಲ್ಲಿ ಬರುವ ರೈಲುಗಲು ಅದರ ಸುತ್ತಲಿನ ಪ್ರಪಂಚದೊಂದಿಗೆ ಒಂದಾಗುವ ಮಕ್ಕಳೊಂದಿಗೆ ಕಾದಂಬರಿ ಬೆಳೆದಿದೆ. ಮಕ್ಕಳು ಕಾದಂಬರಿಯ ಉದ್ದಕ್ಕೂ ಮಡುವ ಸಾಹಸಗಳಿವೆ.

ಅಮ್ಮನಿಗೆ ಆರಾಮ ಇಲ್ಲದೇ ಇದ್ದಾಗ ಅವರು ಔಷಧಿಗಾಗಿ ಮಾಡುವ ಪ್ರಯತ್ನ, ಮನೆಯ ಬಳಕೆಗಾಗಿ ಕಲ್ಲಿದ್ದಲು ಸಂಗ್ರಹ, ರೈಲು ಅಪಘಾತ ತಪ್ಪಿಸುವುದು, ರಷ್ಯನ್ ಒಬ್ಬನನ್ನು ಸ್ಟೇಶನ್ನಿನಿಂದ ಕರೆತಂದು ಉಪಚರಿಸುವುದು, ನಾವಿಕರ ಪುಟ್ಟ ಮಗುವಿನ ರಕ್ಷಣೆ, ಬಾಲಕನನ್ನು ಸುರಂಗದಿಂದ ಪಾರು ಮಾಡುವುದು ಹೀಗೆ ಒಂದರ ನಂತರ ಒಂದರಂತೆ ಸಹಜವಾದ ಸಾಹಸಗಳ ವಿವರವಿದೆ. ಇದ್ಯಾವುದೂ ಬೇಕಂತಲೇ ತಂದಿಟ್ಟ ಕಥೆ ಎಂದು ಅನಿಸದು. ಅದು ಸ್ವಾಭಾವಿಕವಾಗಿ ತಾನೇ ತಾನಗಿ ಹರಡುವ ಪರಿಮಳದಂತೆ ವಿಸ್ತರಿಸಿಕೊಂಡಿದೆ. ಮಕ್ಕಳಾದ ಬಾಬ್ಬಿ, ಪೀಟರ್, ಪಿಲ್ಲಿಸ್ ಅವರ ತಂದೆ ಹಿಂದಿರುಗಿ ಬರುವುದರೊಂದಿಗೆ ಕಾದಂಬರಿ ಮುಗಿಯುತ್ತದೆ.

ಬಾಬ್ಬಿ(ರಾಬರ್ಟಾ) ಹಿರಿಯ ಹುಡುಗಿಯಾಗಿ ಕಾದಂಬರಿಯ ಉದ್ದಕ್ಕೂ ತನ್ನ ಕಾರ್ಯ ನಿರ್ವಹಿಸಿದ ರೀತಿ, ಪೀಟರ ಹುಡುಗನಾಗಿ ಅವನ ಧೈರ್ಯ ಮತ್ತು ಸಾಹಸ ಪವೃತ್ತಿ, ಪಿಲ್ಲಿಸ ಪುಟ್ಟ ಬಾಲಕಿಯಾಗಿ ಅವಳ ಮುಗ್ಧತೆ ಎಲ್ಲ ತುಂಬಾ ಇಷ್ಟವಾಗುತ್ತದೆ. ಇಲ್ಲಿಯ ಮಕ್ಕಳ ತಾಯಿಯ ಪಾತ್ರ ಮಕ್ಕಳನ್ನು ಹೇಗೆ ಅವರ ಸ್ವಚ್ಛಂದತೆಗೆ ತೆರೆಯಲು ಬಿಡುತ್ತಾ… ಅವರಲ್ಲಿ ಒಳ್ಳೆಯದನ್ನು ಹೇಗೆಲ್ಲಾ ತಾನೇ ತಾನಾಗಿ ವೃದ್ಧಿಸುವಂತೆ ಮಾಡಬಹುದು ಎಂಬುದನ್ನು ಹೇಳುತ್ತದೆ.

ರೈಲ್ವೆಯ ಕಿಟಕಿಯ ಮೂಲಕ ಕೈ ಆಡಿಸುತ್ತಲೇ ಮಕ್ಕಳಿಗೆ ಆಪ್ತವಾಗಿಬಿಡುವ ಅಜ್ಜನ ಪಾತ್ರ ಇದೆ. ಅಜ್ಜ ಮಕ್ಕಳ ಒಳ್ಳೆಯ ಪ್ರಯತ್ನಗಳಿಗೆ ಪರೋಕ್ಷವಾಗಿ ಮೆಟ್ಟಿಲಾಗಿ ಸಹಕರಿಸುತ್ತ… ತಂದೆ ಇಲ್ಲದ ಸಂದರ್ಭದಲ್ಲಿ ಕಾಣದಂತೆ ಧೈರ್ಯ ತುಂಬುವುದೆಲ್ಲ ಇದೆ. ಹಳ್ಳಿಯ ಬದುಕಿನ ಚಿತ್ರಣ ಕಾದಂಬರಿಯಲ್ಲಿ ಕಾಣಿಸಿಕೊಂಡಿದೆ. ರೈತರು, ಡಾಕ್ಟರ್, ಪೋರ್ಟರ್, ಸ್ಟೇಶನ್ ಮಾಸ್ತರ, ನಾವಿಕರು ಮುಂತಾದವರ ಸಹಜ ಪ್ರೀತಿ ಹಳ್ಳಿಯಲ್ಲಿರುವ ನೈಸರ್ಗಿಕವಾದ ಆಪ್ತತೆಯನ್ನು ಸಮರ್ಥಿಸುತ್ತದೆ.

ಪೀಟರ ಕಲ್ಲಿದ್ದಲು ರಾಶಿಯ ಮೇಲಿಂದ ಕಲ್ಲಿದ್ದಲು ಕಿತ್ತುಕೊಳ್ಳುತ್ತ… ತಾನು ಗಣಿಯಿಂದ ಕಲ್ಲಿದ್ದಲು ಸಂಗ್ರಹಿಸಿದ್ದೇನೆ ಅನ್ನುವುದು, ಕದ್ದಿಲ್ಲ ಎಂದು ಪ್ರತಿಪಾದಿಉಸುವುದು ಇದೆ. ಇನ್ನೊಂದು ಕಡೆ ಕುದುರೆ ಸವಾರ ‘ದಾರಿಯಿಂದ ಆಚೆ ಸರಿ’ ಎಂದು ಹೇಳಿದಾಗ ದಾರಿಯ ಕುರಿತು ಕುದುರೆ ಸವಾರನಿಗಿರುವಷ್ಟೇ ಅಧಿಕಾರ ತನಗೂ ಇದೆ ಅಂದುಕೊಳ್ಳುವುದೆಲ್ಲ ಮೆಚ್ಚಿಗೆ ಆಗುತ್ತದೆ.

ಅಮ್ಮ ‘ನಾವೀಗ ಬಡವರಾದೆವು’ ಎಂದು ಮೇಲಿಂದ ಮೇಲೆ ಹೇಳುತ್ತಿರುತ್ತಾರೆ. ಅದರ ಕುರಿತು ಮಕ್ಕಳು ‘ಹಿರಿಯರೆಲ್ಲ ಹೀಗೆ ಹೇಳುತ್ತಲೇ ಇರುತ್ತಾರೆ, ಮಕ್ಕಳಾದ ನಮಗೆ ಅದೆಲ್ಲಾ ಚಿಂತೆ ಮಾಡುವಂಥದ್ದಲ್ಲ… ಊಟ ಬಟ್ಟೆಗೆ ತೊಂದರೆ ಆಗದಿದ್ದರಾಯಿತು” ಎಂದುಕೊಳ್ಳುತ್ತಾರೆ. ಇಂಥಹ ಮಾತುಗಳಿಂದ ಹಿರಿಯರು ಮಕ್ಕಳ ಮೂಲಕ ಎಷ್ಟೋ ಅರಿವನ್ನು ಹೊಂದುವುದು ಇದೆ ಎಂಬುದನ್ನೂ ತೋರಿಸುತ್ತದೆ.

ಕುತೂಹಲ ಉಳಿಸಿಕೊಂಡೇ ಸಾಗುವ ಕಾದಂಬರಿ ಮಕ್ಕಳ ಮೂಲಕವೇ ಹೆಚ್ಚಾಗಿ ಸುತ್ತಲಿನ ಜಗತ್ತನ್ನು ನೋಡುವ ಕಥೆ ಮಕ್ಕಳಿಗೆ ಮತ್ತು ಹಿರಿಯರಿಗೆ ಆಪ್ತವಾಗುತ್ತದೆ. ‘ಇಂಗ್ಲೆಂಡಿನ ಮಕ್ಕಳ ವರ್ತನೆ, ಜಗಳ ಆಲೋಚನೆ ಪ್ರೀತಿಗಳನ್ನು ಕಾಣುವಾಗ, ನಮ್ಮ ಕುಟುಂಬಗಳಲ್ಲೂ ಹೀಗೇ ಅಲ್ಲವೇ ಎಂಬ ಆಪ್ತ ಭಾವ ಬರುತ್ತದೆ. ದೇಶ ಭಾಷೆ ಸಂಸ್ಕೃತಿ ಬೇರೆ, ಆದರೆ ಮಾನವ ಸ್ವಭಾವಗಳು ಬಹುತೇಕ ಒಂದೇ ತರಹ’ ಎಂದು ಪುಸ್ತಕದ ಮುನ್ನುಡಿಯಲ್ಲಿ ರಹಮತ್ ತರೀಕೆರೆ ಹೇಳಿರುವ ಮಾತು ಸತ್ಯ.

ಪ್ರತಿಭಾನ್ವಿತ ಕಲಾವಿದ ಹಾದಿಮನಿಯವರು ಮುಖ ಪುಟ ಹಾಗೂ ಒಳ ಚಿತ್ರಗಳನ್ನು ಆಕರ್ಷಕ ಹಾಗೂ ಕಥೆಗೆ ಪೂರಕವಾಗಿ ಚಿತ್ರಿಸಿದ್ದಾರೆ. ಆನಂದ ಪಾಟೀಲರು ಬೆನ್ನುಡಿಯಲ್ಲಿ ‘ಇದು ಮಕ್ಕಳ ವಾಸ್ತವಕ್ಕೆ ತೆರೆದುಕೊಂಡು ಇಂಗ್ಲೀಷಿನಲ್ಲಿ ಹೊಸ ಹೆಜ್ಜೆಗಳಿಗೆ ಕಾರಣವಾದ ಕೃತಿಯಾಗಿದೆ. ಈಗ ಕನ್ನಡದಲ್ಲಿಯೂ ಅದರ ಚಲನೆಯನ್ನು ಹಿಗ್ಗಿಸುತ್ತದೆ’ ಎಂದು ಹೇಳಿರುವ ಮಾತನ್ನು ಅನುಮೋದಿಸುತ್ತೇನೆ.

ಡಾ. ಅರವಿಂದ ಪಟೇಲರು ಬಳ್ಳಾರಿಯ ಉತ್ಸಾಹಿ ಬರಹಗಾರ ವೈದ್ಯರು. ರೈತರಾಗಿ, ಸಾಹಿತಿಗಳಾಗಿ ಸಮಾಜದ ಆರೋಗ್ಯಕರ ಸೇವೆಯಲ್ಲಿ ತೊಡಗಿಕೊಳ್ಳುತ್ತ ಸಮಾಜ ಪ್ರೀತಿ ಗಳಿಸಿದವರು. ಅವರು ಇಂಗ್ಲೀಷ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡದ ಮಕ್ಕಳ ಖುಷಿ ಹಿಗ್ಗಿಸಿದ್ದಾರೆ. ಕಾದಂಬರಿಯನ್ನು ಅತಿ ಉತ್ತಮವಾಗಿ ಮುದ್ರಿಸಿ ಪ್ರಕಟಿಸಿದವರು ಅಭಿನವ ಪ್ರಕಾಶನದವರು. ಡಾ. ಅರವಿಂದರಿಗೆ, ಅಭಿನವದ ರವಿಕುಮಾರ ಅವರಿಗೆ ಅಭಿನಂದಿಸುತ್ತ ಪುಸ್ತಕ ಕನ್ನಡದ ಮಕ್ಕಳ ಕೈ ತಲುಪಿ ಅವರ ಸಂತಸ ಹೆಚ್ಚಲಿ ಎಂದು ಆಶಿಸುತ್ತೇನೆ.

‍ಲೇಖಕರು Admin

September 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: