ತಕರಾರು ತೆಗೆಯುತ್ತಾರೆ ಶ್ರೀಕೃಷ್ಣಯ್ಯ ಅನಂತಪುರ

ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ಅವಧಿಯ ನಂಬಿಕೆ.

ಹಾಗಾಗಿ ಆರಂಭವಾಗಿದ್ದು ‘ಕವಿತೆ ಬಂಚ್’ ಎನ್ನುವ ಪ್ರಯೋಗ

ಆ ಕವಿ ‘ಪೊಯೆಟ್ ಆಫ್ ದಿ ವೀಕ್’ ಕೂಡಾ..

ಅವರು ಬರೆದ ಕವಿತೆಗಳಿಗೆ ಒಂದು ಕನ್ನಡಿ ಹಿಡಿಯಬೇಕೆಂಬ ಕಾರಣಕ್ಕೆ ಪ್ರತೀ ವಾರ ಒಬ್ಬೊಬ್ಬರು ಕಾವ್ಯಪ್ರೇಮಿಯ ಮೊರೆ ಹೋಗಿದ್ದೇವೆ.

ಶಿವಕುಮಾರ್ ಮಾವಲಿ

ಅವರು ಕವಿತೆಯನ್ನು ಓದಿ ಅದರ ಸ್ಪರ್ಶಕ್ಕೆ ಮನಸೋತ ಬಗೆಯನ್ನು ಬಿಚ್ಚಿಡುತ್ತಾರೆ.

ಕಳೆದ ವಾರ ಹಾಗೆ  ‘ಪೊಯೆಟ್ ಆ ದಿ ವೀಕ್’ ಆದವರು ಶ್ರೀಕೃಷ್ಣಯ್ಯ ಅನಂತಪುರ

ಅವರ ಕವಿತೆಗೆ ಕಥೆಗಾರ, ವಿಮರ್ಶಕ, ಅವಧಿಯ ಅಂಕಣಕಾರ ಶಿವಕುಮಾರ ಮಾವಲಿ  ಅವರು ಪ್ರತಿಕ್ರಿಯಿಸಿದ ರೀತಿಯನ್ನು ನೋಡಿ..

ತಕರಾರು ತೆಗೆಯುವ ಕವಿತೆಗಳು

ಕವಿಯಾದವನು ಜಗಳ ಮಾಡುತ್ತಾನೆ. ತಕರಾರು ತೆಗೆಯುತ್ತಾನೆ. ಯಾವಾಗ ಕವಿ ತನ್ನೊಡನೆಯೇ ಜಗಳವಾಡಿಕೊಳ್ಳುತ್ತಾನೋ ಆಗ ಕಾವ್ಯ ಹರಿತವಾಗಿಯೂ, ಆಪ್ತವಾಗಿಯೂ ಮೂಡಿಬರುತ್ತದೆ.
ಶ್ರೀಕೃಷ್ಣಯ್ಯ ಅನಂತಪುರ ಅವರ ಈ ಕವಿತೆಗಳಲ್ಲಿ ಇಂಥದ್ದೊಂದು ಜಗಳ ಮತ್ತು ತಕರಾರು ಇದೆ.

ಆ ತಕರಾರನ್ನು ಸ್ವತಃ ಕವಿಯೇ ತೆಗೆಯಬಹುದು ಅಥವಾ ಕವಿಯ ಮೇಲೇ ತೆಗೆಯಬಹುದು. ಅವರ ‘ಮಗಳು ಮತ್ತು ಮಲ್ಲಿಗೆ ಬಳ್ಳಿ’ ಕವಿತೆಯಲ್ಲಿ ಅಪ್ಪ ಬೆಳೆದೆ ಮಲ್ಲಿಗೆ ಬಳ್ಳಿಗೆ ಚಪ್ಪರ ಹಾಕಲು ಹೊರಟಿರುವುದಕ್ಕೆ ಮಗಳು ತಕರಾರು ತೆಗೆಯುತ್ತಾಳೆ.

‘ ಸ್ವಾತಂತ್ರ್ಯದ ಮೇಲೆ ಸವಾರಿ ಎಷ್ಟು ಸರಿ ? ‘ ಎಂಬ ಮಗಳ ಪ್ರಶ್ನೆ ಎಷ್ಟು ಉಚಿತವಾದುದಲ್ಲವೆ ? ಪ್ರಾಯಶಃ ಜಗತ್ತಿನ ಎಲ್ಲಾ ಮಕ್ಕಳು ತಮ್ಮ ತಂದೆಗೋ,ತಾಯಿಗೋ ಈ ಪ್ರಶ್ನೆ ಕೇಳಲು ಒಂದಿಲ್ಲೊಂದು ಹಂತದಲ್ಲಿ ಇಚ್ಛಿಸಿರುತ್ತಾರೆ ಎಂದೆನ್ನಿಸುತ್ತದೆ. ಅದಕ್ಕೆ ಅಪ್ಪ, ಇದೊಂದು ಮಾರ್ಗದರ್ಶನವಷ್ಟೆ ಮಗಳೆ ಸ್ವಾತಂತ್ರ್ಯ ಹರಣವಲ್ಲ ಎಂಬ ಭರವಸೆ ಕೊಡುತ್ತಾನೆ. ಎರಡು ತಲೆಮಾರುಗಳ ಲೋಕಗ್ರಹಿಕೆ ಮತ್ತು ಮೌಲ್ಯಗಳ ನಡುವಿನ ಭಿನ್ನತೆಯನ್ನಿಲ್ಲಿ ಕಾಣಬಹುದು.

ಚಿತ್ರಕ್ಕೊಂದು ಚೌಕಟ್ಟು, ಮನೆಗೆ ಪಗಾರ, ಬೆಳೆಗೆ ಬೇಲಿ ಮತ್ತು ಬಳ್ಳಿಗೆ ಚಪ್ಪರ ಹಾಕುವುದು ತಪ್ಪೆಂದು ಈಗನ್ನಿಸುತ್ತಿದೆಯೆ ಹೇಳು ಎಂದು ಮಗಳು ಮುಗುಳ್ನಗುತ್ತಾಳೆ. ಅಪ್ಪನ ವ್ಯಾಖ್ಯಾನ ಆಕೆ ಒಪ್ಪಿಕೊಂಡಳೋ ಅಥವಾ ‘ You can’t teach an old dog ,the new trick ‘ ಎಂದುಕೊಂಡು ನಕ್ಕಳೋ !

ಕೀಚಕ ನರಕ ಎಂಬ ಕವಿತೆಯು ಸಮಾಜದಲ್ಲಿ ಇನ್ನೂ ಉಳಿದಿರುವ ಕೀಚಕ ನರಕರ ಸಂತತಿಯ ಬಗ್ಗೆ ಕಳವಳ ವ್ಯಕ್ತ ಪಡಿಸುತ್ತದೆ. ಅವರಿಬ್ಬರನ್ನು ಭೀಮ ,ಭಾಮರು ಕೊಂದಿರಬಹುದು. ಆದರೆ, ಆಧುನಿಕ ಕೀಚಕ ,ನರಕಾಸುರರಿಂದ ನರಳುತ್ತಿರುವವರ ಸಂಖ್ಯೆಯೂ ದೊಡ್ಡದಿದೆ ಎನ್ನುವ ಕವಿ ಇವರು ಮಠ, ಮಂದಿರ, ವಿದ್ಯಾಲಯ, ಚಿಕಿತ್ಸಾಲಯ, ನ್ಯಾಯಾಲಯ, ವಿದ್ಯಾರ್ಥಿನಿಲಯ, ಅನಾಥಾಲಯ ಹೀಗೆ‌‌ ಎಲ್ಲೆಲ್ಲೂ ತುಂಬಿಕೊಂಡು ವಿಕೃತಿಯನ್ನು ಮೆರೆಯುತ್ತಿದ್ದಾರೆ ಎಂದು ನಿರ್ಭಿಡೆಯಿಂದ ಹೇಳುತ್ತಾರೆ. ಕವಿಗಳಲ್ಲೂ ಕೀಚಕ ನರಕಾಸುರರಿದ್ದಾರೆ ಎಂಬ ಸತ್ಯವನ್ನು ಅವರಂತೂ ಒಪ್ಪಿಕೊಳ್ಳುತ್ತಾರೆ. ಇತರರಿಗೆ ಅದು ಹೇಗೆ ಸಹ್ಯವಾಗುತ್ತದೆಂಬುದು ಬೇರೆ ಮಾತು. ದೇವರಂತೆಯೇ ಕೀಚಕ ನರಕಾಸುರರೂ ಸರ್ವಾಂತರ್ಯಾಮಿಗಳೆಂಬುದು ಕವಿಯ ಅಭಿಪ್ರಾಯ. ದೈವವೂ, ದುಷ್ಟತನವೂ ಒಟ್ಟೊಟ್ಟಿಗೆ ಇದೆ ಎಂಬುದು ನಿರ್ವಿವಾದದ ಸಂಗತಿ ಹೌದಲ್ಲವೆ ?

ತನ್ನ ಸುತ್ತಲ ಕ್ರೌರ್ಯ ಮತ್ತು ಹಿಂಸೆಯ ಕರಿನೆರಳು ಕಂಡ ಕವಿಯನ್ನು ಇದು ತುಂಬಾ ಬಾಧಿಸಿದಂತೆ ಕಾಣುತ್ತದೆ. ಹಾಗಾಗಿಯೇ ಬೆಳಕಿನ ಬೀಜ ಬಿತ್ತಿದರೂ ಅದಿಲ್ಲಿ ಅಂಕುರವಾಗಿಲ್ಲ ಎಂಬ ಕಳವಳ ತೋರುತ್ತಾರೆ. ನಾವು ಬಿತ್ತಿದ ಬೀಜ ಬಂಜೆಯೋ ಅಥವಾ ಕ್ಷೇತ್ರವೇ ಬಂಜೆಯೋ ಹಾಗಾಗಿಯೇ ಬೆಳಕ ಬೀಜ ಮೊಳಕೆಯೊಡೆಯುತ್ತಿಲ್ಲ ಎಂಬ ನಿರಾಶಾದಾಯಕ ಕವಿ ಕಗ್ಗತ್ತಲ ಕಾಡಲ್ಲಿ ನಿರಂತರ ಹಪಹಪಿಸಿ ಬೆಳಕಿಗಾಗಿ ಹುಡುಕುತ್ತಿದ್ದಾರೆ.

ಬೆಸ್ತನೊಬ್ಬ ಬಂಗಾರದ ಮೀನಿಗಾಗಿ ಗಾಳ ಹಾಕಿ ಕೂತ ಕವಿತೆ ತುಂಬಾ ಮಾರ್ಮಿಕವಾಗಿದೆ. ನೀರಲ್ಲಿ ಸಾಕಷ್ಟು ಮೀನುಗಳಿದ್ದರೂ ಜನ ಮಾತಾಡಿಕೊಂಡ ಯಾರ ಬಲೆಗೂ ಬೀಳದ ಬಂಗಾರದ ಮೀನೊಂದು ನೀರಲ್ಲಿದೆ ಎಂಬ ಕತೆಯನ್ನು ನಂಬಿ ಹಿಡಿದರೆ ಅದನ್ನೇ ಹಿಡಿದು ತೀರುತ್ತೇನೆ ಎಂಬಂತೆ ಕಾದು ಕುಳಿತಿರುವ ಬೆಸ್ತ ಆಧುನಿಕ ಮಾನವನ ಪ್ರತಿಬಿಂಬದಂತೆ ಕಾಣುತ್ತಾನೆ. ನಾವೆಲ್ಲರೂ ಯಾರೋ ಆಸೆ ಹುಟ್ಟಿಸಿದ ಇಂಥ ಬಂಗಾರದ ಮೀನಿಗಾಗಿ ಕಾಯುತ್ತಲೇ ಇದ್ದೇವೆ ಎಂಬುದು ಸತ್ಯ. ಬಂಗಾರದ ಮೀನಿನ ಬೇಟೆಯಲ್ಲಿ ವ್ಯಸ್ತವಾಗಿರುವ ನಮಗೆ ಸುತ್ತಲೂ ಇರುವ ಅಸಂಖ್ಯ ಮೀನುಗಳ ಬಗ್ಗೆ ದಿವ್ಯ ನಿರ್ಲಕ್ಷ್ಯವಂತೂ ಇದ್ದೇ ಇದೆ.

ಘಟನೆಗಳ ಮೂಲಕ ವಾಸ್ತವವನ್ನು ಕಾವ್ಯಾತ್ಮಕವಾಗಿ ಹೇಳುವುದು ಕಾವ್ಯದ ಪ್ರಮುಖ ಶಕ್ತಿ. ಹಾಗೆಯೇ ಇಲ್ಲಿ ಕವಿ ಯಾರೋ ಮನೆಯ ಬಾಗಿಲ ಬಡಿದಾಗ ಅದನ್ನು ತೆರೆಯಬೇಕೇ ಬೇಡವೇ ಎಂಬ ಗೊಂದಲಕ್ಕೊಳಗಾಗಿದ್ದಾರೆ. ವೃದ್ಧನೊಬ್ಬ ಹೀಗೆ ಮುಸ್ಸಂಜೆಯಲಿ ಅನಾಯಾಸವಾಗಿ ಮನೆಯ ಬಾಗಿಲ ತೆರೆದಿಡುವಂತ ಕಾಲ ಇದಲ್ಲ ಎಂಬ ಕಟು ವಾಸ್ತವವನ್ನು ನರನಪಿಸುವ ಕವಿ ಪಕ್ಕದ ಮನೆಯಲ್ಲಿ ಇತ್ತೀಚಿಗಷ್ಟೆ ನಡೆದ ಕಹಿ ಘಟನೆಯನ್ನು ನಮಗೆ ನೆನಪಿಸುತ್ತಾರೆ. ಯಾರೇ ಕರೆದರೂ ಬಾಗಿಲು ತೆರೆಯಬೇಡಿ ಎಂದು ಮಕ್ಕಳು ಹೇಳಿದ್ದನ್ನು ಕವಿ ಮರೆತಿಲ್ಲ. ಬಾಗಿಲ ಬಳಿ ಬಂದವರಾರು ಎಂಬುದನ್ನು ಕವಿ ಪೂರ್ವ ಮಿರ್ಧಾರಿತ ಯೋಚನೆಯಲ್ಲಿ ಗ್ರಹಿಸಿಬಿಟ್ಟಿರಬೇಕು. ಬಾಗಿಲು ತೆರೆದು ನೋಡುವ ಮನಸ್ಸು ಕವಿಗೆ ಯಾವಾಗ ಬರಬಹುದು ಎಂಬ ಕುತೂಹಲ ನನ್ನಲ್ಲಿದೆ‌.

ದೀಪವಿಲ್ಲದ ಮನೆಯ ತಾಪ ಅನುಭವಿಸಿದವರಿಗಷ್ಟೆ ಗೊತ್ತು ಎನ್ನುವ ಕವಿ ಬೆಳಕಿನ ಬೀಜ ಅಂಕುರವಾಗಿಲ್ಲ ಎನ್ನುವಂತೆಯೇ ದೀಪ ಹಚ್ಚಲು ಸಾಧ್ಯವಾಗದ ಸ್ಥಿತಿಯ ಬಗ್ಗೆ ಆತಂಕಿತರಾಗಿದ್ದಾರೆ. ಹೊಸ ಬತ್ತಿ ಹೊಸೆಯಲು ಹೊರಟವರನ್ನು ಬಡಿದು ದಮನಗೊಳಿಸುತ್ತಿರುವುದರ ಬಗ್ಗೆ ಕವಿಗೆ ಆಕ್ಷೇಪವಿದೆ. ಒಟ್ಟಿನಲ್ಲಿ ಕಗ್ಗತ್ತಲ ಕಾಲದಲ್ಲಿ ಬೆಳಕಿನ ಬೀಜ ಹಾಕಿ , ದೀಪ ಬೆಳಗಿಸಲು ಕವಿ ಕಾತರದಿಂದಿದ್ದಾರೆ. ಇಂಥ ಕವಿತೆಗಳ ಹುಟ್ಟು ಕವಿಯೊಬ್ಬನು ತನ್ನ ಸುತ್ತಲಿನ ಸ್ಥಿತಿ ಮತ್ತು ಗತಿಗಳಿಗೆ ಕಣ್ಣು – ಕಿವಿಯಾದಾಗ ಸಾಧ್ಯವಾಗುತ್ತದೆ. ಕವಿಯ ತಕರಾರುಗಳೆಲ್ಲ ಸಕಾರಣವಾದವು ಎಂದೆನ್ನಿಸುತ್ತದೆ.

‍ಲೇಖಕರು avadhi

June 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: