ತಂಗಾಳಿ ಸೂಸುಮುಂದ ಮೆಂತ್ಯ ಕಡಬು ಸವಿಯುವ ಸುಖ

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ .

ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ  ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ.

ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು ಕೈ ತೊಳೆದುಕೊಳ್ಳುತ್ತಿದ್ದೇವೇನೋ..!

ಆಕೆಗೆ ಒಳಗಣ್ಣಿದೆ. ಒಂದು ಆಹಾರ ಹೇಗೆ ಒಂದು ಸಂಸ್ಕೃತಿಯ ಭಾಗವಾಗಿ ಬರುತ್ತದೆ ಎನ್ನುವುದರ ಬಗ್ಗೆ ಹಾಗೂ ಹೇಗೆ ಆಹಾರ ಒಂದು ಸಂಸ್ಕೃತಿಯನ್ನು ರೂಪಿಸುತ್ತದೆ ಎನ್ನುವುರ  ಬಗ್ಗೆಯೂ…

ಹಾಗಾಗಿಯೇ ಇದು ರಸದೂಟವೂ ಹೌದು ಸಮಾಜ ಶಾಸ್ತ್ರದ ಪಾಠವೂ ಹೌದು.

ಕಬಡ ಮಾಡು… ಇಂಡಿಯಮ್ಮ… ಯೆಲ್ಲೊ ಕಬಡ ಮಾಡು.. ಅಂತ ಬೆನ್ನಹತ್ತಿದ್ರ, ಹಳದಿಬಣ್ಣದ ಕಡಬು ತಾಟಿನಾಗ ಹರಡೂತನಾ ಸಮಾಧಾನ ಇರತಿರಲಿಲ್ಲ. ಹಳದಿಬಣ್ಣದ ಕಡುಬಿನ ಮ್ಯಾಲೆ, ತಿಳಿ ಹಳದಿಬಣ್ಣದ ಹೆರ್ತಿದ್ದ ತುಪ್ಪ ಅಗಲ ಹರಡೂದು. ಅದರೊಳಗ ಹಸಿರು ಕೊತ್ತಂಬರಿ ಸೊಪ್ಪು ತೇಲ್ತಿತ್ತು. ಈ ತುಪ್ಪದ ಮ್ಯಾಲೆ ನಮ್ಮಜ್ಜ ನಿಂಬಿಹಣ್ಣು ಹಿಂಡೋರು. 

ಆಹಹಾ… ಬಳ್ಳೊಳ್ಳಿ ,ಖಾರ, ತುಪ್ಪದ ಮಂದ, ನಿಂಬೆಹಣ್ಣಿನ ಹುಳಿ… ಎಲ್ಲ ಒಟ್ಟೊಟ್ಟಿಗೆ ನಮ್ಮ ರುಚಿಮೊಗ್ಗುಗಳ ಮೇಲೆ ಬ್ಯಾಲೆ ನರ್ತನ ಮಾಡ್ಕೊಂತ ಗಂಟಲಿಗಿಳೀತಾವ. ಏನಿದು ಅಂತ ಹಣೀಗೆ ಗಂಟಿಡಬ್ಯಾಡ್ರಿ. ಇದು ಕಡಬು. ಬ್ಯಾಳಿ ಕಡಬು ಅಂತ ಕರೀತಾರ. ಇದಕ್ಕ ಮೆಂತ್ಯ ಹಾಕಿದ್ರ ಮೆಂತ್ಯ ಕಡುಬು ಅಂತಲೂ ಕರೀತಾರ. ಆದರ ಆಕಾರ, ಗಾತ್ರ, ಸ್ವರೂಪ ಬ್ಯಾರೆ ಬ್ಯಾರೆ.

ಚಪಾತಿ ಹಿಟ್ಟು ನಾದಿದ ಮ್ಯಾಲೆ ಉದ್ದಾನುದ್ದ ಹಾವು ಮಾಡ್ತಿದ್ವಿ ಅಲ್ಲಾ.. ಆಟಾ ಆಡಾಕ, ಹಂಗೆ ಹಾವಿನ್ಹಂಗ ಹೊಸಿಯೂದು. ಆಮೇಲೆ ಅವನ್ನ ತೋರು ಬೆರಳು ಮತ್ತು ಹೆಬ್ಬೆರಳಿನ ನಡುವೆ ಸಣ್ಣ ಉಂಡಿ ಮಾಡಿ, ಅದನ್ನ ಚಪೂಟ ಆಗುಹಂಗ ಒತ್ತಿ, ಒಂದು ಮರದೊಳಗ ಹಾಕೂದು.

ಈ ಕ್ರಿಯೆಗೆ ಕಡಬು ಕಡಿಯೂದು ಅಂತಾರ.  ಆ ಮರಕ್ಕ ಮೊದಲೇ ಒಂದೀಟು ಎಣ್ಣಿ ಸವರಿರ್ತಾರ. ಹಿಂಗ ಕಡಬು ಕಡದು ಅದಕ್ಕ ಹಾಕಿದ್ರ ಮ್ಯಾಲೊಂದಿಷ್ಟು ಹಿಟ್ಟು ಉದುರಸ್ತಾರ. ಒಂದಕ್ಕ ಒಂದು ಅಂಟ್ಕೊಬಾರದು ಅಂತ. ಹಿಂಗ ಒಂದು ಮರದ ತುಂಬಾ ಇವು ಸಣ್ಣ ಸಣ್ಣ ಗೋಲಿಹಂಗ ಕಾಣ್ತಿರ್ತಾವ. ಒಟ್ಗೆ ಹಾಕಿದಾಗ ಸಣ್ಣದೊಂದು ಗುಡ್ಡ ಕಂಡಂಗ ಕಾಣ್ತದ.

ಆಮೇಲೆ ಕುಕ್ಕರ್‌ನಾಗ ಒಗ್ಗರಣಿಗೆ ಇಡಬೇಕು. ಹೆಚ್ಚಿದ ಉಳ್ಳಾಗಡ್ಡಿ, ಟೊಮೊಟೊ, ಬಳ್ಳೊಳ್ಳಿ ಘಂ ಅನ್ನೂಹಂಗ ಬಾಡಸ್ಕೊಬೇಕು. ಅದರೊಳಗ ಅರ್ಧದಷ್ಟು ಮೆಂತ್ಯ ಕಟ್ಟನ್ನು ಸೋಸಿ,  ಸಣ್ಣಗೆ ಹೆಚ್ಚಿದ್ದನ್ನು ಒಗ್ಗರಣಿಗೆ ಹಾಕಬೇಕು. ಅದರ ಮ್ಯಾಲೆ ಕಡುಬಿನ ಗುಡ್ಡೆಯನ್ನು ನಿಧಾನಕ್ಕೆ ಸುರೀಬೇಕು. ಒಂದು ಅಳತಿಗೆ ಎರಡರಷ್ಟು ನೀರು ಹಾಕಿ, ಮ್ಯಾಲೆ ಒಂದು ಸೌಟು ತುಪ್ಪ ಬಿಟ್ಟು ಎರಡು ಸೀಟಿ ಊದಿಸಬೇಕು. 

ಮನೀತುಂಬಾ ಘಮ್‌ ಅಂತ ವಾಸನಿ ಹರಡ್ತದ. ಅವಾಗ ಸಾವಕಾಶಗೆ ಕುಕ್ಕರ್‌ ಮುಚ್ಚಳ ತಗದು, ಇನ್ನೊಮ್ಮೆ ಸಾಸಿವಿ, ಜೀರಿಗಿ, ಕರಿಬೇವು, ಇಂಗಿನ ಒಗ್ಗರಣಿ ಕೊಡಬೇಕು. ಮತ್ತಮ್ಯಾಲೆ ಒಂದಿಷ್ಟು ಮೆಂತ್ಯ ಸೊಪ್ಪು ಹಾಕಿದ್ರ ಬಿಸಿಬಿಸಿ ಮೆಂತ್ಯ ಕಡಬು ರೆಡಿ ಆಗ್ತದ. ಆದ್ರ ನಾನು, ನಮ್ಮಜ್ಜಿಗೆ ಕೇಳ್ತಿದ್ದಿದ್ದು ಈ ಮೆಂತ್ಯ ಕಡಬು ಅಲ್ಲ.

ಇದು ಏನಿದ್ರು ಅಪ್ಪನ ಅವ್ವನ ಕಡೆದು. ರಾಯಚೂರು, ಮಾನ್ವಿ, ಮಸ್ಕಿ, ಸಿಂಧನೂರು ಕಡೆ ಭಾಳ. ವಿಜಯಪುರದಾಗ ಬ್ಯಾಳಿ ಕಡಬು. ಅವರು ಇಷ್ಟೆಲ್ಲ ತ್ರಾಸ ತೊಗೊಳೂದಿಲ್ಲ. ನೇರ ಚಪಾತಿ ಒತ್ತೂದು, ಕಡಚಗಿ, (ಮೊಗಚುವ ಸೌಟು) ಅದರಲೆ ಉದ್ದುದ್ದ ಅಡ್ಡಡ್ಡ ಕೊರಿಯೂದು.

ವಜ್ರದಾಕಾರಾದ ಬಿಲ್ಲೆಗಳನ್ನು ಕುದಿಯುವ ನೀರಿಗೆ ಹಾಕ್ಕೊಂತ ಹೋಗೂದು. ನಮ್ಮವ್ವ ಮಾಡೂ ಮುಂದ ನಾನು ಹಿಂಗ ಕೊರಿಯಾಕ, ಕೊರದಿದ್ದನ್ನು ಎತ್ತಿ, ನೀರಿಗೆ ಹಾಕಾಕ ನಿಂದರ್ತಿದ್ದೆ. ಈಗ ನನ್ಮಕ್ಕಳೂ ನನ್ಹಂಗ ಜೊತಿಗೆ ನಿಲ್ತಾವ. 

ಆ ಕುದಿಯುವ ನೀರಾಗ ಒಂದೀಟು ಕಡ್ಲಿಬ್ಯಾಳಿ ಹಾಕಿರ್ತಾರ. ಅವೂ ಕುದೀತಿರ್ತಾವ. ನಮ್ಮನ್ಯಾಗ ಕಡಲಿಬ್ಯಾಳಿ ವರ್ಜ್ಯ. ಹಂಗಾಗಿ ನಾ ಅಂಕ್ರೂ ಕುದಿಸಿದ, ತೊಗರಿಬ್ಯಾಳಿನೇ ಹಾಕ್ತೀನಿ. ಅದಿನ್ನಾ ನುಣ್ಣಗ ಆಗಿರ್ತದ. ಹಿಂಗ ಕುದಿಯುವ ನೀರಾಗ ಒಂದಿಡೀ ಬಳ್ಳೊಳ್ಳಿಯನ್ನು ಜಜ್ಜಿ ಒಗದ್ರ ಆಯ್ತಪಾ.. ನಿಮ್ಮ ಗಂಟಲಿನ ಕೊಸಕೊಸ, ಚಳಿಗಾಲದ ನೆಗಡಿ, ಒಣಕೆಮ್ಮು ಎಲ್ಲದಕ್ಕೂ ಔಷಧ ರೆಡಿ ಆಗ್ತಿರ್ತದ ಅಂತಲೇ ಅರ್ಥ.

ಇವು ಹಿಂಗ ಕುದಿಯೂಮುಂದ ತಳ ಹತ್ತದ್ಹಂಗ ಆಗಾಗ ಒಂಚೂರು ನೀರು ಹಾಕ್ಕೊಂತಿರಬೇಕು. ಕೈ ಆಡಸ್ತಿರಬೇಕು. ಮತ್ತ ತಳಕ್ಕೊಂಚೂರು ಎಣ್ಣೀನು ಬಿಟ್ಟಿರಬೇಕು. ಚಪಾತಿ ಲಟ್ಸೂಮುಂದ ಎಣ್ಣಿ ಹಚ್ಚಿನೆ ಲಟ್ಟಿಸಿದ್ರ ಇವು ಒಂದಕ್ಕೊಂದು ಅಂಟ್ಕೊಳ್ಳೂದಿಲ್ಲ.

ಬ್ಯಾಳಿ ಕುದಿಯೂಮುಂದ ಅರಿಶಿನ ಹಾಕಿದ್ರ ಚೊಲೊ ಬಣ್ಣ ಬಂದಿರ್ತದ. ಹಿಂಗ ಕುದಿಯೂ ಎಸರಿಗೆ ಈ ಬಿಲ್ಲೆಗಳನ್ನ ಹಾಕ್ಕೊಂತ ಬರಬೇಕು. ಯಾವಾಗ ಬಿಲ್ಲೆಗಳು ಒಂಚೂರು ಮೈತುಂಬಕೊಂಡಂಗ ಕಾಣ್ತಾವ, ಹಿಟ್ಟಿನ ಹೊರಮೈ ಕಾಣದ್ಹಂಗ ಮಾಗೇದ ಅಂತನಿಸ್ತದ.. ಆಗ ಹರಳುಪ್ಪು ಹಾಕಬೇಕು. ಮ್ಯಾಲೆ ತುಪ್ಪ ಬೇಕಾದ್ರ ತುಪ್ಪ, ಎಣ್ಣಿ ಬೇಕಾದ್ರ ಎಣ್ಣಿ ಒಗ್ಗರಣಿ ಕೊಡಬಹುದು.

ಈ ಒಗ್ಗರಣಿಯೊಳಗ ಕೆಂಪುಮೆಣಸಿನ ಕಾಯಿ, ಮಜ್ಜಿಗಿ ಮೆಣಸಿನಕಾಯಿ, ಮೆಂತ್ಯ ಮೆಣಸಿನಕಾಯಿ ಹಿಂಗ ಯಾವುದರೆ ಹಾಕ್ರಿಪಾ.. ನಿಮ್ಮ ನಿಮ್ಮ ಹದಕ್ಕ ಬಿಟ್ಟಿದ್ದು. ಕರಿಬೇವು, ಮೆಣಸಿನಕಾಯಿ ಗರಿಗರಿಯಾದಾಗ, ಒಲಿ ಆರಿಸಿ, ಸಾಸಿವಿ ಸಿಡಿಸಬೇಕು. ಜೀರಗಿ ಹಾಕಬೇಕು. ಇಂಗು ಹಾಕಬೇಕು. ಇದರ ಘಮನೆ.. ಘಮ. ಹಿಂಗ ದೇಸಿ ಪಾಸ್ತಾದಂಥ ಕಡಬು ರೆಡಿ ಆಗ್ತದ. 

ಮನ್ಯಾಗ ಭಾಳ ಮಂದಿ ಇದ್ದಾಗ ಎಲ್ಲಾರಿಗೂ ಒಂದೊಂದು ಬಟ್ಟಲದಾಗ ನಾದಿದ ಹಿಟ್ಟು ಕೊಟ್ಟು, ಒಂದು ಪೇಪರ್ ಮುಂದಿಡ್ತಾರ. ಯಾರು ಸತ್ರು, ಹುಟ್ಟಿದ್ರು, ಮದಿವಿಯಾದ್ರು, ಮದಿವಿಯಾಗದೇ ಇರೋರು, ಕನ್ಯಾ, ವರ, ಹಿಂಗ ಎಲ್ಲಾ ಸುದ್ದಿಗಳನ್ನೂ ಕೇಳ್ಕೊಂತ, ಹೆಣ್ಮಕ್ಕಳ ಹತ್ರ ಚೂಟಸ್ಕೊಂತ ಕಡಬು ಪೇಪರಿಗೆ ಉದುರಿ ಬೀಳ್ತಾವ. ಮೆಂತ್ಯ ಕಡಬು ಉಣ್ಣುವಷ್ಟೇ ಸಂಭ್ರಮ ಎಲ್ಲಾರೂ ಕೂಡಿ ಮಾಡೂದ್ರೊಳಗ ಇರ್ತದ. 

ನಾವು ಇತ್ತಾಗ ರಾಯಚೂರಿನ ಮೆಂತ್ಯ, ವಿಜಯಪುರದ ಈ  ಬಿಲ್ಲೆಗಳಿಗೆ ಹಾಕಿ, ಶ್ರಮ ಕಡಿಮಿ ಮಾಡ್ಕೊಂಡು, ರುಚಿ ಹೆಚ್ಗಿ ಮಾಡ್ಕೊಂಡು ಮೆಂತ್ಯ ಕಡಬು ತಿಂತೇವಿ.

ಇದೇ ಒಗ್ಗರಣಿಯೊಳಗ ಒಂಚೂರು ಮೆಂತ್ಯ ಸೊಪ್ಪನ್ನು ಬಾಡಿಸಿಬಿಡ್ತೀವಿ. ಹಿಂಗ ಕೊರೆಯಿಸಿಕೊಂಡು, ಕುದ್ದು, ಒಗ್ಗರಣಿ ಅಲಂಕಾರ ಮಾಡ್ಕೊಂಡು ಬರುವ ಕಡಬು, ತಟ್ಟೆಗೆ ಹಾಕಿದಾಗ, ಸೂಪಿರುವ ಪಾಸ್ತಾದಂತೆ ಕಂಡರೂ ಅಚ್ಚರಿ ಪಡಬೇಕಿಲ್ಲ. ಹದವಾಗಿ ಬೆಂದಿರುವುದರಿಂದ, ಗೋದಿ ಅರಗದು ಅಂತ್ಹೇಳುವವರೂ ಇದನ್ನು ಆಸ್ವಾದಿಸಬಹುದು.

ಇಲ್ಲಿ, ಹಬ್ಬ ಹರಿದಿನಗಳ ಮೊದಲು, ಸಮಾರಂಭಗಳ ಹಿಂದಿನ ದಿನ ನೆಂಟರಿಷ್ಟರೆಲ್ಲ ಮನೆದುಂಬಿದಾಗ ಎಲ್ಲರಿಗೂ ಚಪಾತಿ ಮಾಡುವ ಬದಲು ಇದೊಂದು ಕಡಬು ಕುದಿಸುವುದು ಸರಳ ಆಗಿರ್ತದ. ಚಪಾತಿ ಮಾಡಿದ್ರ, ಅದಕ್ಕ ಪಲ್ಯೆ ಆಗಬೇಕು. ಕಾಳು, ಸೊಪ್ಪು, ಒಣ ಪಲ್ಯೆ, ಎಸರಿನ ಪಲ್ಯೆ ಇಷ್ಟೆಲ್ಲ ಖಾದ್ಯಗಳನ್ನು ಕುದಿಸುವ ಬದಲು, ಒಂದು ಕಡಬು ಬೇಯಿಸ್ತಾರ. 

ಎಲ್ಲರೂ ಮನತುಂಬಿ ಉಣ್ಣುವ  ಕಡಬು ಮಾಡಿದ್ರ ಯಾರಿಗೂ ಬೇಸರವಿಲ್ಲ. ನಂಗ ಬದನಿಕಾಯಿ ಬ್ಯಾಡ, ನಾ ಟೊಮೆಟೊ ತಿನ್ನೂದಿಲ್ಲ, ನನಗ ಕಾಳಾದ್ರ ಗ್ಯಾಸ್‌ ಆಗ್ತದ.. ಹಿಂಗ ಎಲ್ಲರ ಬೇಕುಬೇಡಗಳನ್ನು ಗಮನಿಸಿ, ಅಡಗಿ ಮಾಡಾಕ ಆಗೂದಿಲ್ಲ. ಅದಕ್ಕ ದೊಡ್ಡ ಪಾತ್ರಿ ತುಂಬಾ ಕಡಬು ಮಾಡಿ, ಬಡಸಾಕ ನಿಲ್ತಾರ. 

ಬಿಸಿಬಿಸಿ ಕಡಬು ಹಾಕಿ, ಅದರ ಮ್ಯಾಲೆ ತುಪ್ಪದ ಮಿಳ್ಳಿಲೇ ತುಪ್ಪಾ ಸುರಕೊಂತ ಹೋಗ್ತಾರ. ಒಂದು ತಾಟಿನಾಗ ಸೌತಿಕಾಯಿ, ತಪ್ಪಲು ಉಳ್ಳಾಗಡ್ಡಿ, ಮೂಲಂಗಿ, ಮೆಂತ್ಯೆ ಸೊಪ್ಪು ಸಣ್ಣಗೆ ಹೆಚ್ಚಗೊಂಡು ಪ್ರತಿಯೊಬ್ಬರ ತಟ್ಟೆಯ ಬದಿಗೂ ಒಂದು ಗುಡ್ಡೆ ಹಾಕಿದ್ರ ಮತ್ತ ಅದಕ್ಕಿಂತ ಹೆಚ್ಗಿ ಏನೂ ಬೇಡ..ಬಳ್ಳೊಳ್ಳಿ ಖಾರ ಸಾಕಾಗದವರು, ಹಿಂಗ ತುಪ್ಪ ಅಥವಾ ಬೆಣ್ಣಿ ಹಾಕಸ್ಕೊಂಡು, ಅದರ ಮ್ಯಾಲೆ ಮಸಾಲಿ ಖಾರ ಹಾಕ್ಕೊಂತಾರ.

ಆ ಹಳದಿ ಬಣ್ಣದ ಕಡುಬಿಗೆ ಇಂಥ ಕಡುಕೆಂಪು ಬಣ್ಣದ ಮಸಾಲಿ ಖಾರ ಹಾಕ್ಕೊಂಡು, ಸುರಕೊಂಡು ಉಣ್ಣಾಕತ್ರ, ಹಣೆಯ ಮೇಲೆ ಬೆವರಹನಿ. ಊಟದ ಪರಮಸುಖ ಅನುಭವಿಸುವಂತೆ ಕಾಣ್ತಿರ್ತದ. 

ಕಡಬು ತಿಂದ ಮ್ಯಾಲೆ ಮೊಸರನ್ನ, ಇಲ್ಲ ಮಜ್ಜಿಗಿ ಅನ್ನ.. ಉಣ್ಣಲೇಬೇಕು. ಇಲ್ಲಾಂದ್ರ ಮಜ್ಜಿಗಿ ಕುಡೀಲೇಬೇಕು. ರಾತ್ರಿ ಉಂಡ್ರ, ಮಧ್ಯಾಹ್ನ ಉಂಡ್ರ ಆಗಾಗ ನೀರಡಸ್ತಾನೆ ಇರ್ತದ. ಹಿಂಗ ನೀರಡಕಿ ಆಗಬಾರದು ಅಂದ್ರ ಒಂದೀಟರೆ ಮೊಸರನ್ನ ಹೊಟ್ಟಿಗಿಳೀಬೇಕು.

ನೂರಾ ಎಂಟು ಅಡುಗೆ ಮಾಡುವ ಬದಲು ಒಂದು ಕಡಬು ಇನ್ನೊಂದು ಮೊಸರನ್ನ, ಎರಡು ಮಾಡಿಟ್ರ, ಎಲ್ಲಾರೂ ಒಟ್ಗೆ ‍ಪಂಕ್ತಿಯೂಟಕ್ಕ ಕೂರಬಹುದು. ಪಡಸಾಲಿಯೊಳಗ ದೊಡ್ಡ ಪಾತ್ರಿ ಬಂತಂದ್ರ ಎಲ್ಲಾರೂ ಒಮ್ಮೆ ಊಟಕ್ಕ ಕೂರುವ ಸುಖ ಕೊಡುವ ಈ ಹಳದಿಗಡುಬು ಈಗಲೂ ನೇಪಥ್ಯಕ್ಕ ಸರೀದೆ ಇದೇ ಕಾರಣ.

‍ಲೇಖಕರು ಅನಾಮಿಕಾ

October 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ರುಚಿಯ ಬಗ್ಗೆ ಅಷ್ಟು ಕನ್ವಿನ್ಸ್ ಆಗ್ತಿಲ್ಲ. ಅಥೆಂಟಿಕ್ ಆಗಿ ಮಾಡಿದವರ ಕೈಯಿಂದ ತಿಂದು ನೋಡಬೇಕು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: