ಕನ್ನಡದಲ್ಲಿ ಕೃತಿಯನ್ನು ನೋಡುವ ದೃಷ್ಠಿಕೋನಗಳು ಬೇರೆ ಬೇರೆ ನೆಲೆಯನ್ನು ಪಡೆಯುತ್ತಿವೆ. ಅನೇಕ ಸಿದ್ಧಾಂತಗಳ ಮೂಲಕ ಕೃತಿಯನ್ನು ಅರ್ಥೈಸುವ ಕ್ರಮಗಳೇ ಮುಂಚೂಣಿಯಲ್ಲಿವೆ. ಡಾ. ಹಳೆಮನೆ ರಾಜಶೇಖರ ಯಾವ ಸಿದ್ಧಾಂತಗಳ ಗೋಜಿಗೆ ಹೋಗದೆ ಕೃತಿಗಳನ್ನು ಪರಿಶೀಲಿಸಿದ್ದಾರೆ. ಅವರಿಗೆ ಕೃತಿಯೊಳಗಿನ ಜಗತ್ತೇ ಮುಖ್ಯವಾದುದು. ಆ ಜಗತ್ತು ಒಂದು ನೈತಿಕತೆಯನ್ನು ಸೃಷ್ಠಿಸುತ್ತದೆ ಎಂದು ಬಲವಾಗಿ ನಂಬುತ್ತಾರೆ. ಕೃತಿಯ ಒಳಗಿನ ಮತ್ತು ಹೊರಗಿನ ವಾಸ್ತವವನ್ನು ಮುಖಾಮುಖಿಯಾಗಿಸುತ್ತಾರೆ. ಕೃತಿ ಕಟ್ಟುವ ವಾಸ್ತವವೇ ಅವರಿಗೆ ಮುಖ್ಯವಾದುದು. ಅದು ಆಗುವ ವಾಸ್ತವವನ್ನು ಬಲವಾಗಿಸುತ್ತದೆ ಎಂಬ ಆಶಯ ಅವರದು. ಇಲ್ಲಿರುವ ಕೃತಿ ವಿಮರ್ಶೆ ಈ ಆಯಾಮದಲ್ಲಿವೆ.
ಧರ್ಮ ಪ್ರಭುತ್ವಗಳ ಬಗ್ಗೆ ಕೆಲವು ಲೇಖನಗಳಿವೆ. ಅವು ಜನರೊಂದಿಗೆ ಸಂಯೋಗಗೊಂಡು ಬೆಳೆಯಬೇಕೆಂದು ಬಯಸುತ್ತಾರೆ. ಇಲ್ಲಿವರಿಗೆ ಅವು ಸೃಷ್ಟಿಸಿದ ಹಿಂಸಾತ್ಮಕ ಚಾರಿತ್ರಿಕ ಸಂದರ್ಭಗಳನ್ನು ಗುರುತಿಸುತ್ತಾರೆ. ಪ್ರಜಾಪ್ರಭುತ್ವ ಮೌಲ್ಯಗಳು ಇವುಗಳ ಅಗ್ನಿಕುಂಡದಲ್ಲಿ ಆಹುತಿಯಾಗಬಾರದೆಂದೆ ಇವರ ಮುಖ್ಯ ಕಾಳಜಿ.
ಸಂಸ್ಕೃತಿ ಕುರಿತ ಲೇಖನಗಳು ಜನರ ಮನೋಭಾವದ ಹಿನ್ನಲೆಯಲ್ಲಿ ಇವೆ. ಸಂಸ್ಕೃತಿ ಚಿಂತನೆ ಕೆಲವೇ ನೆಲೆಗಳನ್ನು ನಂಬಿ ಬೆಳೆದಿದೆ. ಆದ್ದರಿಂದ ಅದು ಸಂಪೂರ್ಣ ಜನಸಮುದಾಯಗಳನ್ನು ಒಳಗೊಳ್ಳಬೇಕೆಂದು ಒತ್ತಾಯಿಸುತ್ತಾರೆ.
ಬಾವುಕ ಮುಗ್ಧ ಮನಸ್ಸಿನ ಹಳೆಮನೆ ತಮ್ಮ ವಿಮರ್ಶೆಯಲ್ಲಿ ಖಚಿತವಾಗಿದ್ದಾರೆ. ಅತಿಯಾದ ಹರಿಭಾಷೆಗಳ ವ್ಯಾಮೋಹಿಯಾಗದೆ ಸರಳ ಶೈಲಿಯ ಭಾಷೆಯನ್ನು ರೂಢಿಸಿಕೊಂಡಿದ್ದಾರೆ. ಮೂಲತಃ ಕಥೆಗಾರರಾಗಿರುವ ಅವರಿಗೆ ವಿಮರ್ಶೆಯು ಕೂಡ ಒಂದು ಕಥೆಯೆ. ಹೀಗಾಗಿ ಇಲ್ಲಿಯ ಬರವಣಿಗೆಗಳು ಜನಮುಖಿಯಾಗಿ ಚಲಿಸುತ್ತವೆ. ವಿಮರ್ಶೆ ಅತಿಯಾದ ಹರಿಭಾಷೆಯಿಂದ ಭಾರವಾಗದೆ ಕೃತಿಯನ್ನು ಸಂಸ್ಖೃತಿಯೊಳಗೆ ಮನಗಾಣಿಸುವ ಮಾದರಿಯೊಂದನ್ನು ಕನ್ನಡದಲ್ಲಿ ಕಂಡುಕೊಳ್ಳಬೇಕಿದೆ. ರಾಜಶೇಖರ ಅವರ ವಿಮರ್ಶೆ ಇಂಥ ಒಂದು ಪ್ರಯತ್ನ ಮಾಡಿದೆ. ಸಹೃದಯರು ಈ ಕೃತಿಯನ್ನು ಸ್ವೀಕರಿಸಿ ಸಂವಾದಿಸುತ್ತಾರೆಂದು ಆಶಿಸುತ್ತೇನೆ. ಇದರಿಂದ ರಾಜಶೇಖರ ಅವರ ಬರವಣಿಗೆ ಮತ್ತಷ್ಟು ಗಟ್ಟಿಗೊಳ್ಳಲೆಂದು ಹಾರೈಸುತ್ತೇನೆ.
ಡಾ. ಬಿ. ಪಿ. ಸಂಪತ್ ಕುಮಾರ
ಮುಖ್ಯಸ್ಥರು, ಕನ್ನಡ ವಿಭಾಗ,
ಎಸ್ ಡಿ ಎಮ್. ಕಾಲೇಜು, ಉಜಿರೆ.
0 ಪ್ರತಿಕ್ರಿಯೆಗಳು