ಡೇವಿಡ್ ವ್ಯಾಗೊನೆರ್ ಅವರ ಎರಡು ಕವನ

ಮೂಲ ಇಂಗ್ಲೀಷ್: ಡೇವಿಡ್ ವ್ಯಾಗೊನೆರ್

ಕನ್ನಡಕ್ಕೆ: ಪ್ರತಿಭಾ ನಂದಕುಮಾರ್

ನನಗೆ ವ್ಯಾಲೇಸ್ ಸ್ಟಿವೆನ್ಸ್ (1879-1955) ನ ಕಾವ್ಯ ಪರಿಚಯ ಮಾಡಿಕೊಟ್ಟಿದ್ದು ಎ ಕೆ ರಾಮಾನುಜನ್.  ಡೇವಿಡ್ ವ್ಯಾಗೊನೆರ್ (1926-2021) ಕವನ ನನ್ನನ್ನು ಆಕರ್ಷಿಸಿದ್ದು ಅವರ Wallace Stevens On His Way To Work ಎನ್ನುವ ಕವನದಿಂದ.  ಡೇವಿಡ್ ವ್ಯಾಗೊನೆರ್ ಅವರ ಎರಡು ಕವನ ನಿಮ್ಮ ಓದಿಗೆ. ಭಾಷಾಂತರ ತೃಪ್ತಿಯಾಗಿಲ್ಲ, ಮತ್ತಷ್ಟು ತಿದ್ದಬೇಕಿದೆ. ಅದೊಂದು ನಿರಂತರ ಕಾಯಕ.

ಬಾಗಿಲಲ್ಲಿ

**

ಎಲ್ಲಾ ನಟನಟಿಯರೂ ಹುಡುಕುತ್ತಾರೆ ಆ ನಿರ್ಣಾಯಕ ಘಳಿಗೆಗಳನ್ನು

ಆ ಪಾತ್ರದ ಒಂದು ಕ್ರಿಯೆ ಅವನೇ ಅಥವಾ ಅವಳೇ ಆಗಿರುವಂತೆ

ನಾಟಕದ ಪಠ್ಯದಲ್ಲಿ ಹೇಳಿರಬಹುದು ಅವನು ಬಾಗಿಲಿನ ಬಳಿಗೆ ಹೋಗಿ

ನಿರ್ಗಮಿಸುತ್ತಾನೆ ಅಥವಾ ಅವಳು ರಂಗದ ಎಡ ಬಾಗಿಲಿಂದ ನಿರ್ಗಮಿಸುತ್ತಾಳೆ.

ಆದರೆ ನೀವು ನೋಡುತ್ತೀರಿ, ನಿಮ್ಮ ಬೆರಳುಗಳು ಬಾಗಿಲಿನ ಗುಬುಟು ಸ್ಪರ್ಶಿಸಿ

ಅದನ್ನು ಆವರಿಸಿ, ತಾವೇ ತಾವಾಗಿ ಎನ್ನುವಂತೆ ತಿರುಗಿಸುವುದನ್ನು

ಅಗಳಿ ಜಾರುತ್ತದೆ, ಬಾಗಿಲು ಕೀಲುಗಳ ಮೇಲೆ ತೂಗುತ್ತದೆ

ಇನ್ನೇನು ನೀವು ಹೊಸಿಲು ದಾಟಿ ಹೆಜ್ಜೆ ಇಡಲಿದ್ದೀರಿ

ಆಚೆಗಿನ ಬೇರೆ ಬೆಳಕಿನೆಡೆಗೆ

ಪ್ರೇಕ್ಷಕರ ಪಾಲಿಗೆ ನೀವು ಸುಮ್ಮನೇ ದೃಶ್ಯದಿಂದ

ಕಾಣೆಯಾಗುತ್ತಿರಬಹುದು, ಆದರೆ ಆ ಕೆಲವೇ ಕ್ಷಣಗಳಲ್ಲಿ

ನೀವು ಸ್ಪರ್ಶಿಸಬಯಸುವ ಕೊಟ್ಟ ಕೊನೆಯ ವಸ್ತುವಂತೆ

ಕೈ ಚಾಚಬಹುದು ಬಾಗಿಲಿನ ಗುಬುಟಕ್ಕೆ ಅಥವಾ ಹಿಡಿಯಬಹುದು

ನಿಮ್ಮ ತಂದೆಯ ಬೆಚ್ಚಗಿನ ಚಾಚಿದ ಕೈಯಂತೆ

ಒಮ್ಮೆ ಕ್ಷಮಿಸಲು ನಂತರ ತಮ್ಮ ಪಾಡಿಗಿದ್ದಂತೆ

ಅಥವಾ ನೀವು ಕ್ಷಣಕಾಲ ಅಲ್ಲಿ ತಡೆಯಬಹುದು,

ವಾಕ್-ಇನ್ ಕಾಲಯಂತ್ರದ ಕಪಾಟಿನ ಬಾಗಿಲಲ್ಲಿ ನಿಂತಂತೆ

ಅಲ್ಲಿ ನಿಂತು ದಿಟ್ಟಿಸಿ ಇಡೀ ಮುಚ್ಚುವ ಪರಿಕಲ್ಪನೆಯನ್ನು, ರಾತ್ರೋರಾತ್ರಿ

ಜಾಲವನ್ನು ಕದಡಿಬಿಟ್ಟಿದ್ದನ್ನು ಕಂಡು ತಬ್ಬಿಬ್ಬಾದ ಇಲಿಯಂತೆ 

ಸ್ತಬ್ಧ ನಿಂತು ಕಂಪಿಸುತ್ತ ಹಿಂದಿರುಗಲು ಅಥವಾ

ಎಡಕ್ಕೆ ಅಥವಾ ಬಲಕ್ಕೆ ತಿರುಗಲು ಅಸಮರ್ಥರಾಗಿ

ಅಥವಾ ನೀವದನ್ನು ಮೆಲ್ಲನೆ ಕಳ್ಳತನದಲ್ಲಿ ಸದ್ದಿಲ್ಲದ ವಿವೇಚನೆಯಲ್ಲಿ

ಇಂಚಿಂಚೇ ತೆರೆಯುತ್ತಾ, ತಿರುಗಚ್ಚಿನ ತಿರುಗುಬಲದ ಅಲ್ಪ ಭಾಗ

ಪರೀಕ್ಷಿಸುತ್ತಾ, ನೇರ ಸಂದಿಯೊಳಗೆ ತುದಿಗಾಲಲ್ಲಿ ತೂರಿಕೊಂಡು ಹೋಗಿ

ನಿಶ್ಯಬ್ಧವಾಗಿ ಮತ್ತೆ ಚಿಲಕ ಒತ್ತಿ ಕೂರಿಸಿ ಅದರ ಚೌಕಟ್ಟಿನೊಳಗೆ 

ಅಥವಾ ನಿಮ್ಮ ಭುಜ ಬಳಸಬಹುದು

ಅಥವಾ ನಿಮ್ಮ ಶೂನ ಗಟ್ಟಿಯಾದ ಹಿಮ್ಮಡಿ ಸಹಿತ

ಒಂದು ಕಾಲಿನಿಂದ ಒದ್ದು ತೆರೆಯಬಹುದು

ಅಥವಾ ಎಲ್ಲಾ ಅಡೆತಡೆಗಳು ತಮ್ಮಿಂತಾವೇ ತೆರೆದುಕೊಳ್ಳುವುದು

ಸಹಜವೆನ್ನುವಂತೆ ನೀವು ಬಾಗಿಲನ್ನು ಸಮೀಪಿಸಬಹುದು

ನಿಮ್ಮ ಮುನ್ನಡೆಗೆ ಈ ಅನಧಿಕೃತ ಅಡಚಣೆಯನ್ನು

ಪಕ್ಕಕ್ಕೆ ಬಲವಾಗಿ ತಳ್ಳಿ ನೀವು

ಬಾಗಿಲನ್ನು ಅಷ್ಟಗಲ ತೆರೆದು ಇತರರು

ಅವರಿಗೆ ಬೇಕಾದಂತೆ ಮಾಡಲು ಬಿಟ್ಟು

ಅಥವಾ ನೀವು ಆರಾಮಾಗಿ ನಿಂತು

ಈ ಬಾಗಿಲು ಅಥವಾ ಯಾವುದೇ ಬಾಗಿಲಿನ ಮೂಲಕ

ಪಾರದರ್ಶಕವಾಗಿ ನೋಡಬಹುದು, ನಿಮ್ಮ

ಭೌತಿಕ ದೇಹವನ್ನು ಆಚೆ ಬದಿಗೆ ಕೊಂಡೊಯ್ಯುವ

ಅಗತ್ಯವೇ ಇಲ್ಲವೆನ್ನುವ ಧಾಟಿಯಲ್ಲಿ

ಅಥವಾ ನೀವು ಬಾಗಿಲ ಗುಬುಟವನ್ನು ತಿರುಗಿಸಬಹುದು

ಅದಕ್ಕಿಂತ ದೊಡ್ಡ ಆನಂದ ಬೇರಿಲ್ಲ ಎನ್ನುವಂತೆ

ನೀವು ಹೋಗುವಲ್ಲಿ ಸಂತೋಷದ ನಿರೀಕ್ಷೆ ತುಂಬಿರುವಂತೆ ನಿಮ್ಮ ದೇಹ ಭಂಗಿ

ದಿಗ್ಭ್ರಮೆಗೊಳಗಾದ ಯಾತ್ರಿಕ ದ್ವಾರದಲ್ಲಿ ನಿಂತಂತೆ ಒಂದು ಕ್ಷಣ ಸ್ಥಬ್ಧವಾಗಿ

ಆದರೂ ನೀವು ಬೆಳಕಿನ ಪರದೆಯ ಪ್ರತಿಯಾಗಿ

ಅಥವಾ ನಿಸರ್ಗದ ಬಣ್ಣ ಬಳಿದ,

ಎಲೆಗಳನ್ನು ಗೀಚಿದ, ಹೂವೆನ್ನಿಸುವ

ಒಂದು ಅಸ್ಪಷ್ಟ ತೋಟದ ಚಿತ್ರ ಮೂಡಿದ 

ಒಂದು ಅಸ್ಥಿರ ಹಲಗೆಯ ಮೇಲೆ ಹೆಜ್ಜೆ

ಇಡುತ್ತಿದ್ದೀರೆಂದು ನಿಮಗೆ ಗೊತ್ತಿದೆ.

-2-

ವ್ಯಾಲೇಸ್ ಸ್ಟಿವನ್ ಕೆಲಸಕ್ಕೆ ಹೊರಟರು

**

ಅವರು ಬೇಗ ಹೊರಟು ನಿಧಾನವಾಗಿ ನಡೆಯುತ್ತಿದ್ದರು

ಶಾಲೆಗೆ ಹೋಗುವಾಗ ಪುಸ್ತಕಗಳನ್ನು ಸರಿದೂಗಿಸುವಂತೆ

ಮತ್ತೊಮ್ಮೆ ತಡವಾಗುವ ಆತಂಕದಲ್ಲಿ

ಸಂಖ್ಯೆಗಳ ಭಾರದಲ್ಲಿ, ಫ್ಯಾಷನ್ ಅಲ್ಲದ ಶೂಗಳ

ಉರುಟು ಮೊನೆ ಅವರ ಬೊಜ್ಜಿನ ವಾಟದಲ್ಲಿ ಮರೆಯಾಗಿ

ಅವರು ಬೇರೆ ಮುಂಜಾನೆಗಳಲ್ಲಿ ಹರ್ಷೋದ್ಗಾರಗಳು ಮತ್ತು

ವದಂತಿಗಳ ಜನ್ಮಸ್ಥಾನವಾದ ತಮ್ಮ ನೆಚ್ಚಿನ ಭದ್ರ ಪಾರ್ಕ್ ಬೆಂಚಿನ ಬಳಿ

ತುಸು ತಡೆದು ಅದಕ್ಕೆ ಬೆನ್ನಾಗಿ, ತಮ್ಮ ಮಂಡಿಗಳು ಮತ್ತು ಬೆಂಚಿನ

ಗಟ್ಟಿಮರದ ಅಂಚಿನ ನಡುವಿನ ದೂರ ಲೆಕ್ಕಹಾಕಿ

ಈ ಅರಿವಿನ ಹಗಲಿನಲ್ಲಿ ಆ ರಾತ್ರಿಯ ಪುಂಡರು ಯಾರೂ

(ಅವರ ಗೂಬೆ ಕಣ್ಣಿನ ಚಂದ್ರ ಬೆಳಕು ಹರಿದಾಗ ಮುಚ್ಚಿ)

ಆಕ್ರಮಿಸಿರದ ಬೆಂಚನ್ನು ಹಿಂದಿಂದ ದೊಪ್ಪನೇ ಕೂರುತ್ತಾರೆ.

ತಮ್ಮ ಕೋಟಿನ ಜೇಬಿನಿಂದ ಒಂದು ಪೋಸ್ಟ್ ಕಾರ್ಡ್ ಹೊರತೆಗೆದು

ತಮ್ಮ ಬೆರಳುಗಳಲ್ಲಿ ಹಿಡಿದ ಫೌಂಟೇನ್ ಪೆನ್ನಿನ ತುದಿಯಿಂದ

ಅದನ್ನು ಮತ್ತೆ ಮತ್ತೆ ಸ್ಪರ್ಶಿಸುತ್ತಾ ಅದುವರೆಗೆ

ಹಿಂದೆಂದೂ ಉಚ್ಚರಿಸದ ರೂನ್‌ಗಳು, ಆಬ್ಲಿಗಾಟೋಗಳು 

ಮತ್ತು ಖಾಸಗಿ ಪ್ರದರ್ಶನಗಳ ಸ್ಪಷ್ಟ ನಿಗೂಢ ಯುಗಳಗಳು

ಹುಚ್ಚಾಟಗಳ ಮುರಿದ ತುದಿಗಳಿಂದ

ಅಮೀಬಾ ಗೊಂದಲದ ಅವ್ಯವಸ್ಥೆಯೊಂದಿಗೆ

ಆತು ಕೂತು, ಅತಿರೇಕಗಳಿಂದ ತುಂಬಿಸುತ್ತಾರೆ. 

ಆಮೇಲೆ ಅವರು, ಭಾನುವಾರ ಬೆಳಿಗ್ಗೆ ಮಂಚಬಿಟ್ಟೇಳುವ

ನಿರ್ಣಯದಷ್ಟೇ ಕರುಣಾಜನಕ ಪ್ರಯತ್ನಪಟ್ಟು ಬೆಂಚಿನಿಂದ ಏಳುತ್ತಾರೆ

ಮತ್ತು ಎಚ್ಚರಿಕೆಯಿಂದ ಮೇಲೆ ಮತ್ತು ಪಾದಗಳ ನಡುವೆ ಕಾಲ್ಪನಿಕ ಅಕ್ಷದಲ್ಲಿ

ತಮ್ಮ ಗುರುತ್ವಾಕರ್ಷಣೆಯ ಕೇಂದ್ರವನ್ನು ಕಂಡುಕೊಂಡು

ಒಳ್ಳೆಯ ಸುದ್ದಿಯನ್ನು ಹೊತ್ತುಕೊಂಡು, ಮಾರ್ಗ ಮತ್ತು ಕಾಲುದಾರಿಯಲ್ಲಿ,

ಭೂಮಿಯ ವ್ಯವಹಾರಗಳ ಜೊತೆ ಮರುಹೊಂದಾಣಿಕೆ ಮಾಡಿಕೊಳ್ಳಲು ಮುಂದುವರಿಯುತ್ತಾರೆ.

***

‍ಲೇಖಕರು avadhi

July 29, 2024

ನಿಮಗೆ ಇವೂ ಇಷ್ಟವಾಗಬಹುದು…

ಆಪ್ತ ನಗುವೊಂದು ಅಪರಿಚಿತವಾದಾಗ

ಆಪ್ತ ನಗುವೊಂದು ಅಪರಿಚಿತವಾದಾಗ

ಅನಿತಾ ಪಿ. ತಾಕೊಡೆ ** ಅದುರುವ ರೆಪ್ಪೆಯೊಳಗಿನ ಕಣ್ಣ ಬಿಂಬದಲಿಕಂಡೂ ಕಾಣದಂತಿರುವ ನಿನ್ನೆಗಳು ಕೂಡಿಕೊಂಡುಇರುಳ ಮರೆಯಲಿರುವ ಛಾಯೆಗೆ ಬಣ್ಣ...

0 Comments

Submit a Comment

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This