ಡಿ ಎಂ ನದಾಫ್ ಓದಿದ ‘ಉಪ್ಪು ನೀರಿನ ಸೆಲೆ’

ಡಿ ಎಂ ನದಾಫ್

ಕೃತಿ: ಉಪ್ಪು ನೀರಿನ ಸೆಲೆ (ಹೈಕುಗಳು)
ಲೇಖಕರು: ಡಾ. ಸಮೀರ್ ಹಾದಿಮನಿ
ಪ್ರಕಾಶನ: ಶಾಫಿಯಾ ಪ್ರಕಾಶನ, ಆಲಮೇಲ
ಪುಟ:87
ಬೆಲೆ:100/-

ಹೈಕು ಬರೆಯುವ ಹಲವಾರು ಕವಿಗಳನ್ನು – ಲೇಖಕರನ್ನು ನೋಡಿ, ಮಾತಾಡಿ, ಚರ್ಚಿಸಿ ಅದರ ಅರ್ಥವನ್ನು ತಿಳಿಯಲು ನಾನು ಪ್ರಯತ್ನಿಸಿದ್ದೇನೆ. ಡಾ. ಸಮೀರ್ ಹಾದಿಮನಿ ಅವರ ʻಉಪ್ಪು ನೀರಿನ ಸೆಲೆʼ ಹೈಕುಸಂಕಲನಕ್ಕೆ ಡಾ. ಚನ್ನಪ್ಪ ಕಟ್ಟಿಯವರು ಬರೆದ ಮುನ್ನುಡಿಯ ಈ ಸಾಲುಗಳನ್ನು ಓದಿದಾಗ ನನಗೆ ಅಚ್ಚರಿಯಾಯಿತು.

ಈ ಲೇಖನದಲ್ಲಿ ಅವರು ಹೈಕು ಲೇಖಕರ ಕಷ್ಟವನ್ನು ತುಂಬಾ ಹೃದಯಸ್ಪರ್ಶಿಯಾಗಿ ಬರೆಯುತ್ತಾರೆ. “ಮೃಷ್ಟಾನ್ನವನ್ನು ಎದುರಿಗೆ ಇಟ್ಟುಕೊಂಡು ಉಪವಾಸ ವ್ರತವನ್ನು ಪಾಲಿಸಲು ಒಪ್ಪಿಕೊಂಡ ಶ್ರದ್ಧಾಳು ಅವನಾಗಿರುತ್ತಾನೆ. ವಿಶಾಲ ಬಯಲನ್ನು ತೊರೆದು ಗವಿ ಪ್ರವೇಶ ಮಾಡಿ ತಪಸ್ಸಿಗೆ ಕುಳಿತುಕೊಳ್ಳುವ ತಾಪಸಿಯ ಹಾಗೆ ಹೈಕು ಬರಹಗಾರನ ಸ್ಥಿತಿಯಾಗಿರುತ್ತದೆ” ಎನ್ನುತ್ತಾರೆ ಮುನ್ನುಡಿಕಾರರು.

ಈ ವ್ಯಾಖ್ಯೆಯಲ್ಲಿ ಹೈಕು ಪ್ರಕಾರದ ಬರವಣಿಗೆ ಗದ್ಯ – ಪದ್ಯದಷ್ಟು ಸುಲಭವಲ್ಲ. ಅದಕ್ಕಾಗಿ ಸಿಲೆಬಲ್ಗಳ ಛಂದಸ್ಸು ಅವಶ್ಯಕ. ಆದರೆ ಕೆಲವೊಮ್ಮೆ ಈ ನಿಯಮವೇ ವಿಷಯ ವಿಸ್ತಾರ ಮತ್ತು ಪ್ರಾಸ ಜೋಡಣೆಗೆ ಮಿತಿಯೊಡ್ಡುತ್ತದೆ. ಒಂದೇ ಒಂದು ಸಿಲೆಬಲ್ ಹೆಚ್ಚು ಕಡಿಮೆಯಾದರೂ ಅದು ಹೈಕು ಆಗದು. ಈ ಕಾರಣಕ್ಕಾಗಿಯೇ ಸಿಲೆಬಲ್‌ಗಳ ನಿಯಮದಂತೆ ಬರೆಯುವ ಉಪವಾಸ ವೃತ ಪಾಲಿಸುವ ಯತಿಯಾಗಬೇಕಾಗುತ್ತದೆ, ಇಲ್ಲಿನ ಕವಿ. ಈ ನಿಯಮದ ಒಡಗೂಡಿ ಬರೆಯುವಾಗ ನಮ್ಮ ಆಲೋಚನಾ ಲಹರಿಯಂತೆ ಪದ ವಾಕ್ಯಗಳ ಜೋಡಣೆ ಆಗದಿರುವ ಸಾಧ್ಯತೆ ಇದೆ. ಈ ನಿಯಮಾನುಸಾರ ಬರೆದು ಗೆಲ್ಲುವವನೇ ಯಶಸ್ವಿ ಹೈಕು ಕವಿಯಲ್ಲವೇ? ಇಲ್ಲಿ ಬರುವ ಮೂರು ಸಾಲುಗಳು ಒಂದರ ಕೆಳಗೆ ಒಂದರಂತೆ ಐದು – ಏಳು – ಐದು ಸಿಲೆಬಲ್‌  ಹೊಂದಿರಬೇಕು. ಈ ನಿಯಮಿತಿಯನ್ನೇ ಡಾ. ಚನ್ನಪ್ಪ ಕಟ್ಟಿಯವರು, “ಹೈಕು ಕಾವ್ಯ ಪ್ರಕಾರವನ್ನು ಪ್ರೀತಿಸುವುದೆಂದರೆ ಷರತ್ತುಗಳ ಸುಂದರ ಶೃಂಖಲೆಯನ್ನು ಸ್ವಯಂಪ್ರೇರಣೆಯಿಂದ ಧರಿಸಿಕೊಳ್ಳಲು ಒಪ್ಪಿಕೊಂಡಂತೆಯೇ” ಎನ್ನುತ್ತಾರೆ.

ಈ ಸಂಕಲನದ ಸ್ವಾಗತಾರ್ಹ ಅಂಶವೆಂದರೆ ಕವನ, ಹನಿಗವನ, ಗಜಲ್, ಸುನೀತಗೀತ ಮುಂತಾದ ಕಾವ್ಯ ಪ್ರಕಾರಗಳಷ್ಟೇ ಹೈಕು ಮೂಲಕವೂ ಕಾವ್ಯದ ಎಲ್ಲಾ ಸಾಧ್ಯತೆಗಳನ್ನು ಸಾಧಿಸಬಹುದು ಎಂಬುದನ್ನು ಎತ್ತಿ ತೋರಿಸಿದ್ದು. ಜಪಾನ್ ದೇಶದಲ್ಲಿ ಬೌದ್ಧ ಹಾಗೂ ಝೆನ್ ಧರ್ಮದ ಅನುಯಾಯಿಗಳು ಈ ಕಾವ್ಯ ಪ್ರಕಾರವನ್ನು ಬಳಸಿ, ಬೆಳೆಸಿ ಉಳಿಸಿದರು. ಅದಕ್ಕೆ ಸಮಸಮನಾಗಿ ಕನ್ನಡದಲ್ಲೂ ಹೈಕು ಪ್ರಕಾರ ಬೆಳೆಯಬಲ್ಲದು ಎಂಬುದಕ್ಕೆ ಈ ಸಂಕಲನದ ಮೊದಲ ಹೈಕುವನ್ನೇ ನೋಡಬಹುದು.

ಧರ್ಮಕ್ಕಂಟಿದೆ

ರಕ್ತದಮಲು ಸ್ವಾರ್ಥ

ಪಾಲಕರಿಂದ    

ಹೀಗೆಯೇ ಇಲ್ಲಿ ಕವಿಯ ಸ್ವಾನುಭವಗಳು ಕೂಡ ಹೈಕುಗಳಾಗಿ ರೂಪುಗೊಂಡಿವೆ.

   ಹೂವಿನಾಸೆಗೆ

                      ಮುಳ್ಳು ಚುಚ್ಚಿಸಿಕೊಂಡ

                      ನೋವ ಮರೆತೆ

ಶಾಂತಿ ಬಯಸಿ

                       ಹಾರಿದ ಪಾರಿವಾಳ

                      ಪ್ರಾಣ ಬಿಟ್ಟಿತು

ದಣಿದ ದೋಣಿ 

                       ದಡ ಸೇರಲು ಕಾದು

                       ಮುಳುಗಿ ಹೋತು

ನಾನು ತಬಲ

                      ಆಕೆ ವೀಣೆ, ಬದುಕು

                      ಸಂಗೀತಮಯ

ಈ ಹೈಕುಗಳಲ್ಲಿ ಜೀವನದ ಸ್ವಾನುಭವವಿದೆ.

ಶಾಂತಿ ಬಯಸಿ… ಹೈಕುವಿನಲ್ಲಿ ಇಂದಿನ ಸಾಮಾಜಿಕ ವಾಸ್ತವದ ಕ್ರೌರ್ಯದ ಅಭಿವ್ಯಕ್ತಿ ತುಂಬ ಮಾರ್ಮಿಕವಾಗಿ ವ್ಯಕ್ತಗೊಂಡಿದೆ. ಸಾಮಾಜಿಕ ಪ್ರಕ್ಷುಬ್ಧತೆಯನ್ನು ಕೊನೆಗಾಣಿಸಲು ಬಯಸಿದ ಪಾರಿವಾಳ ಶಾಂತಿಗಾಗಿ ತನ್ನ ಪ್ರಾಣಬಿಟ್ಟಿದ್ದು ದುರಂತ; ಎಂಬ ಸಂದೇಶ ನೀಡುವ ಈ ಅಕ್ಷರ ಮಂತ್ರದ ಮೇಲಿರುವ ಭಗವಾನ್ ಬುದ್ಧರ ವಿಶ್ರಾಂತಿ ಭಂಗಿಯಲ್ಲಿರುವ ಚಿತ್ರ ಸಾಂಕೇತಿಕವಾಗುತ್ತದೆ. 

ಇಷ್ಟೇ ಸಾಂಕೇತಿಕವಾದ ಇನ್ನೊಂದು ಹೈಕು-

ಶೋಕತಪ್ತರ

                        ಉಪ್ಪು ನೀರಿನ ಸೆಲೆ

                       ಸ್ಮಶಾನ ಭೂಮಿ

ಇಲ್ಲಿ ಮೇಲ್ನೋಟಕ್ಕೆ ಸ್ಮಶಾನ ಭೂಮಿ ಎಲ್ಲರ ದುಃಖದ ಸ್ಥಳ ಎಂಬರ್ಥ ಕಾಣಬಹುದು. ಆದರೆ ಶೋಕದಲ್ಲಿದ್ದವರ ಕಣ್ಣೀರೇ ಉಪ್ಪು ನೀರು ಆಗಿದೆ. ಇಂಥ ಹಲವಾರು ಹೈಕುಗಳು ಓದಿದ ತಕ್ಷಣ ಕಪ್ಪು ಮೋಡದೊಳಗಿನ ಮಿಂಚಿನಂತೆ ಹೊಳೆದು ಓದುಗ ಗರಬಡಿದವನಂತೆ ನಿಬ್ಬೆರಗಾಗುತ್ತಾನೆ. ಬದುಕಿನ ತಿಳುವಳಿಕೆ ನಮ್ಮ ಊಟ – ಬಟ್ಟೆಗಳಿಗಿಂತ ಮಿಗಿಲಾದದ್ದು ಎಂಬ ಸಂದೇಶವನ್ನು ಕೊಡುವ ಈ ಹೈಕು ಎಷ್ಟೊಂದು ಅರ್ಥಪೂರ್ಣವಾಗಿದೆ.

ದೇಹ ಮುಚ್ಚಲು

                      ಅರಿವೆ ಅಷ್ಟೇ ಅಲ್ಲ

                     ಅರಿವೂ ಬೇಕು.

ಸೌಹಾರ್ದ ಬದುಕಿನ ಸಂದೇಶ ಸಾರುವುದು ಕೂಡ ಸಾಹಿತ್ಯ ನಿರ್ಮಾಣದ ಪರಮೋದ್ದೇಶವೆಂದು ಅನೇಕ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಅಂತಹ ಉದ್ದೇಶವನ್ನು ಸಾಧಿಸಲು ಎಳೆಸುವ ಹೈಕುಗಳು ಈ ಕೃತಿಯಲ್ಲಿ ಹೇರಳವಾಗಿ ಕಾಣುತ್ತೇವೆ.

. ಅಜಾನ್ ಜೊತೆ

                 ಸುಪ್ರಭಾತವೂ ಸೇರಿ

                 ಅನುಸಂಧಾನ 

ಮತೀಯ ಭಾವ

               ಕೆರಳಿಸುವ ಪಂಥ

               ಚಿರಾಯು ಅಲ್ಲ

ಶಾಂತಿ ಸೌಹಾರ್ದ

                 ಸೇತುಬಂಧ ಸಧ್ಯದ

                ಅವಶ್ಯಕತೆ

ಶಬ್ದ ಚಮತ್ಕಾರದ ಮೂಲಕ ಕಾವ್ಯವನ್ನು ಹೇಗೆ ಪಳಗಿಸಬಹುದು ಎಂಬುದಕ್ಕೆ ಈ ಹೈಕುವನ್ನು ನೋಡಬಹುದು.

ಕಾಡಿಗೆ ಅಂದ

           ನೋಡಿ ಸೋತೆ ಅಟ್ಟಿದೆ

          ನನ್ನ ಕಾಡಿಗೆ.

ಕಾಡಿಗೆ ಪದದ ಶ್ಲೇಷಾರ್ಥದ ಬಳಕೆ ಮಿಂಚು ಹೊಡೆದಂತೆ ಸೆಳೆಯುವ ಮೂಲಕ ಈ ಹೈಕು ಗಮನ ಸೆಳೆಯುತ್ತದೆ. 

“ರವಿ ಕಾಣದ್ದನ್ನು ಕವಿ ಕಂಡ” ಎಂಬ ಮಾತಿಗೆ ಇಲ್ಲಿನ ಹೈಕು ಒಂದು ಉದಾಹರಣೆ ಆಗಿದೆ.

ಲೇಖನಿ ಸ್ತಬ್ಧ 

                 ಕೀಲಿಮಣೆ ಸದ್ದು

                 ಗಣಕ ಯುಗ

ಕವಿಯ ಸಂವೇದನೆಗೆ ಅದರಲ್ಲೂ ಶ್ರವಣ ಸಂವೇದನೆಗೆ ಸಾಟಿ ಇಲ್ಲ. ನೀರವವಾದ ಕೋಣೆಯೊಂದರಲ್ಲಿನ ಕೀಲಿಮಮಣೆಯ ಟಕಟಕವನ್ನು ಎಲ್ಲರೂ ಕೇಳಿದವರೇ.

ಆದರೆ ಅದನ್ನು ಅಕ್ಷರ, ಅದರಲ್ಲೂ ನಿರ್ದಿಷ್ಟ ಛಂದಸ್ಸಿನ ಲಯಗಾರಿಕೆಯಲ್ಲಿ ಕವಿತೆ ಹೈಕುವಿನಲ್ಲಿ ಹಿಡಿದಿಡುವದು ಅಪರೂಪ. ಅಂತಹ ಅಪರೂಪದ ಶಬ್ದಗಳನ್ನು ಕವಿ ಇಲ್ಲಿ ಹಿಡಿದಿಟ್ಟಿದ್ದಾರೆ. 

ಒಂದೊಮ್ಮೆ ಗಜಲ್ ಎಂದರೆ ಪ್ರೇಮಗೀತೆ; ಹೈಕು ಎಂದರೆ ಬೌದ್ಧ ಮತ್ತು ಝೆನ್ ಧರ್ಮದ ಧರ್ಮೋಪದೇಶದ ರಚನೆಗಳು, ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿದ್ದವು. ಆದರೆ ಕನ್ನಡ ಸಾಹಿತ್ಯ ಚಳುವಳಿಗಳ ಪ್ರವಾಹ ತಮ್ಮ ಸ್ವರೂಪ ಕಳೆದು ಕೊಂಡ ನಂತರದ ದಿನಗಳಲ್ಲಿ ಗಝಲ್, ತಾಂಕಾ, ಹೈಕು ಸೇರಿದಂತೆ ಪಾರಿಭಾಷಿಕ ಛಂದಸ್ಸಿನ ರಚನೆಗಳು ಕನ್ನಡದಲ್ಲಿ ಹೊಸ ಗಾಳಿ ಬೀಸುತ್ತಿವೆ.

ಅದಕ್ಕೆ ಅನುಗುಣವಾಗಿ ಕನ್ನಡದ ಬಹುತೇಕ ಉದೀಯಮಾನ ಕವಿಗಳು, ಹಿರಿಯ ಕವಿಗಳು ಕೂಡ ಈ ಛಂದಸ್ಸನ್ನು ಬಳಸಿ ಸ್ಥಳೀಯತೆಯನ್ನು ಎತ್ತಿ ತೋರುವ ವಸ್ತುಗಳನ್ನು ಈ ಹೈಕುಗಳಲ್ಲಿ ಕಸಿಗೊಳಿಸುತ್ತಿದ್ದಾರೆ ಅನಿಸುತ್ತದೆ.

ಈ ಉದ್ದೇಶದಿಂದ ಡಾ. ಸಮೀರ್ ಹಾದಿಮನಿ ಅವರ ಹೈಕುಗಳಲ್ಲಿ ವಿಷಯ ವೈವಿಧ್ಯ ಎದ್ದುಕಾಣುತ್ತದೆ. ಇಲ್ಲಿ ಸೃಷ್ಟಿಯ ಸೊಬಗು, ಮಧುಶಾಲೆ ಮುಂತಾದ ವಿಷಯಗಳನ್ನು ಒಳಗೊಂಡ ರಚನೆಗಳು ಓದುಗರ ಗಮನ ಸೆಳೆಯುತ್ತವೆ. ಪ್ರಮಾಣ 

ಬದ್ಧತೆಯ ಛಂದಸ್ಸಿನ ಹೈಕು ರಚನೆ ಕಲೆ ಹಾದೀಮನಿ ಅವರಿಗೆ ಒಲಿದಿದೆ ಎಂದು ಹೇಳಬಹುದು.

ಇಂಥ ಸುಮಾರು ಎರಡು ನೂರು ಹೈಕುಗಳನ್ನು ಒಳಗೊಂಡ ಈ ಸಂಕಲನ ಸಾಹಿತ್ಯರಂಗದಲ್ಲಿ ತನ್ನ ವಿಶಿಷ್ಟತೆಯನ್ನು ಉದ್ಭೋಧಿಸಬಲ್ಲ ಶುದ್ಧ ಸಾಹಿತ್ಯ ಕೃತಿಯಾಗಿದೆ.

ಡಾ. ಸಮೀರ್ ಹಾದಿಮನಿಯವರು ಇಂಥ ಇನ್ನೂ ಹಲವಾರು ಕೃತಿಗಳನ್ನು ಕನ್ನಡಿಗರಿಗೆ ನೀಡಲು ಸಮರ್ಥರಾಗಿದ್ದಾರೆ.

‍ಲೇಖಕರು admin j

June 28, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: