ಡಾ ರಾಜ್ ಸಿಕ್ಕರು..

ಅದು ಹೀಗಾಯ್ತು..

ಗೊರೂರು ರಾಮಸ್ವಾಮಿ ಐಯ್ಯಂಗಾರ್ ರು ತೀರಿಕೊಂಡಿದ್ದರು. ರಾತ್ರಿಯಾಗಿತ್ತು. ‘ಪ್ರಜಾವಾಣಿ’ಯಿಂದ ಅದನ್ನು ವರದಿ ಮಾಡಲು ಹೋಗಿ ಇನ್ನೇನು ಮತ್ತೆ ಕಾರು ಏರುವವನಿದ್ದೆ. ನನ್ನ ಪತ್ರಕರ್ತ ಮೂಗಿಗೆ ಇಲ್ಲಿ ಎಲ್ಲವೂ, ಏನೋ ಸರಿ ಇಲ್ಲ ಅನಿಸಿತು. ಒಂದಷ್ಟು ಸರಬರ, ಕ್ಷಣಗಳಲ್ಲಿ ಹೆಚ್ಚಾದ ಪೊಲೀಸ್ ಸಿಬ್ಬಂದಿ. ಅವರ ನಡುವೆ ಪಿಸುಮಾತುಗಳು.

ಗೊರೂರರ ವರದಿ ಫೈಲ್ ಮಾಡಲು ಡೆಡ್ ಲೈನ್ ತೀರಾ ಹತ್ತಿರದಲ್ಲಿತ್ತು. ಅದರ ನಡುವೆಯೂ ನಾನು ರಿಸ್ಕ್ ತೆಗೆದುಕೊಳ್ಳಲು ರೆಡಿ ಆದೆ. ಏನಿದೆ ಎಂದು ಗೊತ್ತಿಲ್ಲದಿದ್ದರೂ ‘waiting for godot’ ಥರಾ ಕಾಯುತ್ತ ನಿಂತೆ. ನನ್ನ ಸುದ್ದಿ ನಾಸಿಕ ಕೈಕೊಟ್ಟಿರಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ಸದ್ದಿಲ್ಲದಂತೆ ಹತ್ತಾರು ಕಾರು ಬಂದವು. ಅದರಲ್ಲಿ ಡಾ ರಾಜಕುಮಾರ್!

ಸಾಹಿತಿಗಳ ಸಂಗದಲ್ಲಿ ಇದ್ದವರು ಡಾ ರಾಜ್. ಹಾಗಾಗಿ ಅವರು ಅಂತಿಮ ದರ್ಶನಕ್ಕೆ ಬರುವುದರಲ್ಲಿ ತುಂಬಾ ವಿಶೇಷವೇನಿರಲಿಲ್ಲ. ಆದರೆ ಆ ದಿನ, ಹಾಗೆ, ಆ ಹೊತ್ತಲ್ಲಿ ದರ್ಶನಕ್ಕೆ ಬಂದದ್ದರಲ್ಲಿ ವಿಶೇಷವಿತ್ತು.

ಏಕೆಂದರೆ ‘ಡಾ ರಾಜ್ ರನ್ನು ನಮ್ಮ ಮುಂದೆ ಕರೆತಂದು ತೋರಿಸಿ’ ಎಂದು ಜನ ಬೀದಿಗಿಳಿದಿದ್ದರು. ಕೆಂಪೇಗೌಡ ರಸ್ತೆಯಲ್ಲಿ ಕಲ್ಲು ತೂರಾಟ ನಡೆದುಹೋಗಿತ್ತು. ಬಸ್ ಓಡಾಡದಂತೆ ಮಾಡಿದ್ದರು. ರಾಜ್ ಮನೆ ಮುಂದೆ ಅಂತೂ ಘೋಷಣೆ ಕೂಗುತ್ತಿದ್ದ ಜನಸ್ತೋಮ.

ಡಾ ರಾಜ್ ಅವರಿಗೂ ಮಕ್ಕಳಿಗೂ ಜಗಳವಾಗಿದೆಯಂತೆ. ನೊಂದ ಅಣ್ಣಾವ್ರು ಮನೆ ಬಿಟ್ಟು ಹೋಗಿಬಿಟ್ಟಿದ್ದಾರೆ. ಎಲ್ಲಿದ್ದಾರೆ ಎನ್ನುವುದೇ ಗೊತ್ತಿಲ್ಲ ಎನ್ನುವ ಸುದ್ದಿ ಬಾಯಿಂದ ಬಾಯಿಗೆ ಹರಡಿ ಎರಡು ದಿನಗಳ ಕಾಲ ಬೆಂಗಳೂರು ಬಾಣಲೆಯ ಮೇಲೆ ಕೂತಂತಿತ್ತು. ಡಾ ರಾಜ್ ಬದುಕಿಲ್ಲ ಎನ್ನುವ ಆತಂಕವೇ ಎಲ್ಲರದ್ದೂ.

ಆ ನಡುವೆಯೇ ಇದು ಜರುಗಿದ್ದು. ಎರಡು ದಿನಗಳ ಕಾಲ ರಾಜ್ ಏನಾಗಿದ್ದಾರೆ ಎನ್ನುವುದೇ ಗೊತ್ತಿಲ್ಲದಿರುವಾಗ ಡಾ ರಾಜ್ ಗೊರೂರರ ಮನೆಗೆ ನೇರವಾಗಿ ಬಂದರು. ಅವರಿಗೆ ನಮಸ್ಕರಿಸಿದರು. ನಾನು ನೇರ ರಾಜ್ ಕುಮಾರ್ ಅವರ ಬಳಿಗೆ ಹೋದೆ. ಪಕ್ಕದ ರೂಮಿಗೆ ಬನ್ನಿ ಮಾತಾಡಬೇಕು ಎಂದೆ. ಅವರು ಬಂದರು. ನೇರಾ ನೇರ ಯಾವ ಪೀಠಿಕೆಯೂ ಇಲ್ಲದೆ ‘ಎಲ್ಲಿಗೆ ಹೋಗಿದ್ರಿ?’ ಎಂಬ ಪ್ರಶ್ನೆ ಇಟ್ಟೆ. ಡಾ ರಾಜ್ ಮಾತನಾಡುತ್ತಾ ಹೋದರು. ನನಗೂ ಪ್ರಶ್ನೆ ಬೇಕಾದಷ್ಟಿತ್ತು. ಯಾಕೆ ಎಂದು ಗೊತ್ತಿಲ್ಲ. ಡಾ ರಾಜ್ ಕೂಡಾ ನನ್ನೊಡನೆ ಬೇಕಾದಷ್ಟು ಮಾತನಾಡಲು ರೆಡಿ ಇದ್ದರು. ಆದರೆ ಪತ್ರಿಕೆಯ ಡೆಡ್ ಲೈನ್ ರೆಡಿ ಇರಲಿಲ್ಲ.

ಹಾಗಾಗಿ ಹತ್ತು ನಿಮಿಷ ಮಾತನಾಡಿದವನೇ ಅಣ್ಣಾವ್ರ ಕೈಕುಲುಕಿ ‘ಸರ್ ನೀವು ಇನ್ನೂ ಇರಬೇಕು’ ಎಂದು ಹೇಳಿ ಕಚೇರಿಗೆ ಹೊರಟೆ. ಇದ್ದ ಹತ್ತು ನಿಮಿಷದಲ್ಲಿ ಬರೆದುಕೊಟ್ಟ ಡಾ ರಾಜ್ ಜೊತೆಗಿನ ಮಾತು ಮಾರನೆಯ ದಿನ ‘ಪ್ರಜಾವಾಣಿ’ಯ ಮೊದಲ ಪುಟದಲ್ಲಿ ಹೀಗೆ ಕಾಣಿಸಿಕೊಂಡಿತು.

ಕೆರಳಿದ್ದ ಬೆಂಗಳೂರು ಮತ್ತೆ ಉಸಿರುಬಿಟ್ಟು ಎಂದಿನಂತೆ ಹೆಜ್ಜೆ ಹಾಕತೊಡಗಿತು.

ಇವತ್ತು ಡಾ ರಾಜ್ ಜನ್ಮದಿನ. ಇದೆಲ್ಲಾ ನೆನಪಾಯ್ತು

‍ಲೇಖಕರು avadhi

April 13, 2019

ನಿಮಗೆ ಇವೂ ಇಷ್ಟವಾಗಬಹುದು…

ನಾಳೆ ಬನ್ನಿ..

ನಾಳೆ ಬನ್ನಿ..

ನಲ್ಮೆ. ನಾಳೆ ಭಾನುವಾರ ಬೆಳಿಗ್ಗೆ 10.30 ಕ್ಕೆ ""ವಿಶ್ವದಾಖಲೆ" ನಿರ್ಮಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ನಮ್ಮ "ಬಿಂಬ—ಆ...

1 Comment

  1. Sangeeta Kalmane

    ಓದಿ ಮೈ ರೋಮಾಂಚನವಾಯಿತು ಸರ್

    Reply

Submit a Comment

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This