ಡಾ ಬಿ ಎ ವಿವೇಕ ರೈ ಸಂತಾಪ- ಈಗ ನನ್ನಲ್ಲಿ ಉಳಿದಿರುವುದು ಕಣ್ಣೀರು ಮಾತ್ರ..

ಡಾ ಬಿ ಎ ವಿವೇಕ ರೈ

ಕಳೆದ ಸುಮಾರು ನಲುವತ್ತು ದಿನಗಳಿಂದ ಪ್ರತೀದಿನ ಕಾತರದಿಂದ ಆಶಾಭಾವನೆಯಿಂದ ಕಾಯುತ್ತಿದ್ದ ಹಾರೈಕೆಯ ಬೆಳಕು ನಿನ್ನೆ ನಂದಿಹೋಯಿತು, ಗೆಳೆಯ ಶ್ರೀನಿವಾಸ ಕಪ್ಪಣ್ಣ ಮೇ ೫ ರಿಂದ ನಿರಂತರ ನನಗೆ ಖಾಸಗಿಯಾಗಿ ಎಲ್ಲ ಸೂಕ್ಷ್ಮ ಬೆಳವಣಿಗೆಗಳನ್ನು ತಿಳಿಸುತ್ತಿದ್ದರು . ಅದು ನನ್ನ ಪಾಲಿನ ದಿನದಿನದ ನನ್ನೊಳಗೆಯೇ ತುಡಿಯುತ್ತಿದ್ದ ಕನಸು ಆಗಿತ್ತು . ಪ್ರತಿದಿನ ರಾತ್ರಿ ನನ್ನ ಹೆಂಡತಿ ಕೇಳುತ್ತಿದ್ದ ಪ್ರಶ್ನೆ ‘ಸಿದ್ದಲಿಂಗಯ್ಯನವರು ಇವತ್ತು ಹೇಗಿದ್ದಾರೆ?’ ಅವಳಿಗೆ ಭರವಸೆಯ ಉತ್ತರ ಕೊಡುವ ಮೂಲಕ ನನಗೆ ನಾನೇ ಸಮಾಧಾನಪಟ್ಟುಕೊಳ್ಳುತ್ತಿದ್ದೆ . ಆದರೆ ನಿನ್ನೆ ಸಂಜೆ ಸುಮಾರು ಮೂರೂವರೆಯ ವೇಳೆಗೆ ಕೊನೆಯ ಆಘಾತದ ಸುದ್ದಿ ಬಡಿಯಿತು.

ಆಧುನಿಕ ಕನ್ನಡ ಸಾಹಿತ್ಯದಲ್ಲಿ ‘ಕವಿಗಳು’ ಎಂಬುದನ್ನು ಅಂಕಿತನಾಮವಾಗಿ ಪಡೆದು ಎಲ್ಲರ ಪ್ರೀತಿಗೆ ಪಾತ್ರರಾದವರು ಸಿದ್ದಲಿಂಗಯ್ಯ. ಅವರ ಬದುಕು ಮತ್ತು ಬರಹಗಳು ಇತ್ಯಾದಿ ಎಲ್ಲ ವಿವರಗಳು ಬಹಳ ಮಂದಿಗೆ ಗೊತ್ತಿವೆ; ಇವತ್ತಿನ ಮಾಧ್ಯಮಗಳಲ್ಲಿ ವೈವಿಧ್ಯಮಯ ವಿವರಗಳು ಇವೆ. ವೈಯಕ್ತಿಕವಾಗಿ ಸುಮಾರು ನಲುವತ್ತೈದು ವರ್ಷಗಳ ಪರಿಚಯ ಮತ್ತು ಮೂವತ್ತೈದು ವರ್ಷಗಳ ಆಪ್ತ ಸ್ನೇಹದ ಸಂಬಂಧದ ಸಿದ್ದಲಿಂಗಯ್ಯ ನನ್ನ ಬದುಕಿನಲ್ಲಿ ಗಾಢ ಪ್ರಭಾವ ಬೀರಿದವರು.

ಕನ್ನಡ ನವ್ಯ ಸಾಹಿತ್ಯದ ಔನ್ನತ್ಯದ ಕಾಲದಲ್ಲಿ ೧೯೭೦ ರಲ್ಲಿ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕನಾದ ನನಗೆ ಇನ್ನೂ ವಿದ್ಯಾರ್ಥಿಯಾಗಿ ಇದ್ದ ಸಿದ್ದಲಿಂಗಯ್ಯನವರ ‘ಹೊಲೆಮಾದಿಗರ ಹಾಡು’ವಿನ ಕವನಗಳನ್ನು ಮೊದಲು ಓದಿದಾಗ (೧೯೭೫) ಕಾವ್ಯ ಹೀಗೂ ಇರಬಹುದೇ ಎನ್ನುವ ಶಾಕ್ ಆಯಿತು. ‘ದಲಿತ ಸಾಹಿತ್ಯ’ ಎನ್ನುವ ಪದವನ್ನು ಎಂಎ ತರಗತಿಗಳಲ್ಲಿ ಮೊದಲ ಬಾರಿ ನಾನು ಬಳಸಿದಾಗ ಅದನ್ನು ಹೇಗೆ ವಿವರಿಸುವುದು ಎಂದು ನನಗೆ ಗೊತ್ತಿರಲಿಲ್ಲ.

ಆಗ ‘ಶೂದ್ರ’ ‘ಸಂಕ್ರಮಣ’ ‘ಪ್ರಜಾವಾಣಿ’ ಪತ್ರಿಕೆಗಳಲ್ಲಿ ಚರ್ಚೆ ಆಗುತ್ತಿದ್ದ ದಲಿತ ಸಾಹಿತ್ಯದ ವಿಷಯಗಳನ್ನು ಒಟ್ಟುಮಾಡಿ ಅರ್ಥೈಸಲು ಪ್ರಯತ್ನಿಸುತ್ತಿದ್ದೆ. ಮತ್ತೆ ೧೯೭೯ರಲ್ಲಿ ಸಿದ್ದಲಿಂಗಯ್ಯನವರ ‘ಸಾವಿರಾರು ನದಿಗಳು’ ಕವನ ಸಂಕಲನ ಪ್ರಕಟವಾದ ಮೇಲೆ ದಲಿತ ಸಾಹಿತ್ಯದ ರೂಪುರೇಷೆ ಹೆಚ್ಚು ಸ್ಪಷ್ಟವಾಯಿತು. ಆ ವೇಳೆಗೆ ಪ್ರಕಟವಾದ ದೇವನೂರು ಮಹಾದೇವ ಅವರ ‘ದ್ಯಾವನೂರು’ ಕಥಾಸಂಕಲನ ಮತ್ತು ‘ಒಡಲಾಳ’ ಕಾದಂಬರಿಗಳು ದಲಿತ ಕಥನ ಸಾಹಿತ್ಯದ ಹೊಸ ಮಾದರಿಯನ್ನು ಅನಾವರಣ ಮಾಡಿದವು. ಇವುಗಳ ಓದಿನಿಂದ ನವ್ಯ ಸಾಹಿತ್ಯದ ಗುಂಗಿನಿಂದ ಅಧ್ಯಾಪಕನಾಗಿ ಹೊರಬರಲು ನನಗೆ ಸಾಧ್ಯವಾಯಿತು.

೧೯೭೬ : ನಾನು ಮಂಗಳಗಂಗೋತ್ರಿಯ ಸ್ನಾತಕೋತ್ತರ ಕೇಂದ್ರದಲ್ಲಿ ಅಧ್ಯಾಪಕನಾಗಿ ಇದ್ದ ಕಾಲದಲ್ಲಿ ಬೆಂಗಳೂರಿನ ಗೆಳೆಯರ ಆಹ್ವಾನದಂತೆ ಬೆಂಗಳೂರಿನ ಹೊರವಲಯದಲ್ಲಿ ನಡೆದ ‘ಜಾನಪದ ಮತ್ತು ಸಾಮಾಜಿಕ ಬದಲಾವಣೆ’ ಎಂಬ ಕಮ್ಮಟದಲ್ಲಿ ಭಾಗವಹಿಸಿದೆ. ಅದರಲ್ಲಿ ಕವಿ ಸಿದ್ದಲಿಂಗಯ್ಯ, ಡಿ ಆರ್ ನಾಗರಾಜ್ ಸಹಿತ ಅನೇಕ ಸಮಾಜವಾದಿ ಚಿಂತಕರು ಪಾಲುಗೊಂಡಿದ್ದರು. ಒಂದು ದಿನ ಲಂಕೇಶ್ ಬಂದು ಸಂವಾದ ನಡೆಸಿದರು. ಸಿದ್ದಲಿಂಗಯ್ಯನವರ ಮೊದಲ ಕವನ ಸಂಕಲನ ಹಿಂದಿನ ವರ್ಷ ಪ್ರಕಟವಾಗಿತ್ತು. ಅವರ ಜೊತೆಗೆ ಮೊದಲು ಸಂಪರ್ಕ ಬಂದದ್ದು ಆ ಕಮ್ಮಟದಲ್ಲಿ. ಬಹಳ ವಿನಯದಿಂದ ಮತ್ತು ಆಸಕ್ತಿಯಿಂದ ಅವರು ಅನೇಕ ವಿಷಯಗಳ ಬಗ್ಗೆ ನನ್ನಲ್ಲಿ ಮಾತಾಡಿದರು.

ಸಿದ್ದಲಿಂಗಯ್ಯನವರ ಜೊತೆಗೆ ನಿಕಟ ಸಂಪರ್ಕ ಆರಂಭವಾದದ್ದು ನಾವಿಬ್ಬರೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಒಟ್ಟಿಗೆ ಇದ್ದಾಗ. ಪ್ರೊ. ಕೆ ಎಸ್ ನಿಸಾರ್ ಅಹಮ್ಮದ್ ಅವರು ಅಧ್ಯಕ್ಷರಾಗಿ ಇದ್ದ ೧೯೮೪-೮೭ರ ಅವಧಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಇತಿಹಾಸದಲ್ಲಿ ಸುವರ್ಣಯುಗ. ಆಗಿನ ಸಮಿತಿಯಲ್ಲಿ ಸದಸ್ಯರಾಗಿ ಇದ್ದ ೨೫ ಮಂದಿಯಲ್ಲಿ ಈಗ ಬದುಕಿ ಉಳಿದವರು ಐದು ಮಂದಿ ಮಾತ್ರ. ಆಗ ಸದಸ್ಯರಾಗಿದ್ದ ಕೆಲವರ ಹೆಸರುಗಳು : ಚದುರಂಗ, ಯು ಆರ್ ಅನಂತಮೂರ್ತಿ, ಕೋ ಚನ್ನಬಸಪ್ಪ, ಕಯ್ಯಾರ ಕಿಞ್ಞಣ್ಣ ರೈ, ಸಿ ಕೆ ನಾಗರಾಜ ರಾವ್, ಟಿ ಸುನಂದಮ್ಮ , ಗೀತಾ ಕುಲಕರ್ಣಿ, ಯಶವಂತ ಚಿತ್ತಾಲ, ಶಾಂತಿನಾಥ ದೇಸಾಯಿ, ಬೆಸಗರಹಳ್ಳಿ ರಾಮಣ್ಣ, ಶ್ರೀಕೃಷ್ಣ ಆಲನಹಳ್ಳಿ, ರಾವ್ ಬಹಾದ್ದೂರ್, ಟಿ ಕೆ ರಾಮರಾವ್, ಎಚ್ ಜೆ ಲಕ್ಕಪ್ಪ ಗೌಡ, ಬಿ ಟಿ ಲಲಿತಾ ನಾಯಕ್. ಇಂತಹ ಸಾಹಿತ್ಯ ದಿಗ್ಗಜರ ನಡುವೆ ಸಿದ್ದಲಿಂಗಯ್ಯ ಮತ್ತು ನಾನು ಅಕಾಡೆಮಿಯ ಸದಸ್ಯರಾಗಿದ್ದ ಕಾರಣ ನಮ್ಮ ಒಡನಾಟ ನಿಕಟವಾಯಿತು. ಸ್ಥಾಯಿ ಸಮಿತಿ ಸಭೆಗಳಲ್ಲಿಯೂ ಕೆಲವೊಮ್ಮೆ ನಾವು ಒಟ್ಟುಸೇರಿ ಸಮಾಲೋಚಿಸುತ್ತಿದ್ದೆವು. ಚೆನ್ನಾಗಿ ಯೋಚಿಸಿ ಸಾವಧಾನವಾಗಿ ಸ್ಪಷ್ಟವಾಗಿ ವಿಷಯ ಮಂಡಿಸುವ ಅವರ ವಿಶಿಷ್ಟ ಕ್ರಮದಿಂದ ನಾನು ಪ್ರಭಾವಿತನಾದೆ. ಇದು ನಮ್ಮ ನಡುವಿನ ಆತ್ಮೀಯತೆಯನ್ನು ಗಟ್ಟಿಗೊಳಿಸಿತು.

ನಾನು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕ ಮತ್ತು ಮುಖ್ಯಸ್ಥನಾಗಿ ಇದ್ದ ಅವಧಿಯಲ್ಲಿ ೧೯೮೭ರಲ್ಲಿ ನಮ್ಮ ವಿಭಾಗದಲ್ಲಿ ಒಂದು ರೀಡರ್ ಹುದ್ದೆಗೆ ಆಯ್ಕೆಗೆ ಅರ್ಜಿ ಆಹ್ವಾನಿಸಲಾಯಿತು. ಆ ಹುದ್ದೆ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಸಿದ್ಧಲಿಂಗಯ್ಯನವರು ನಮ್ಮ ವಿಭಾಗಕ್ಕೆ ರೀಡರ್ ಆಗಿ ಬರಬೇಕು ಎನ್ನುವುದು ನನ್ನ ಬಯಕೆಯಾಗಿತ್ತು. ಆಗ ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇದ್ದ ಐದು ಸಾಮಾನ್ಯ ವಿವಿಗಳಲ್ಲಿ ಸ್ನಾತಕೋತ್ತರ ವಿಭಾಗಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರು ಬೆಂಗಳೂರು ವಿವಿಯಲ್ಲಿನ ಸಿದ್ದಲಿಂಗಯ್ಯ ಒಬ್ಬರೇ ಇದ್ದವರು.

ಸಿದ್ದಲಿಂಗಯ್ಯನವರು ನನ್ನ ಕೋರಿಕೆಯಂತೆ ಮಂಗಳೂರು ವಿವಿಯ ಕನ್ನಡ ರೀಡರ್ ಹುದ್ದೆಗೆ ಅರ್ಜಿ ಸಲ್ಲಿಸಿದರು. ಆಯ್ಕೆಯ ಸಂದರ್ಶನದ ಹಿಂದಿನ ದಿನ ನಾನು ಸಿದ್ಧಲಿಂಗಯ್ಯನವರಿಗೆ ಫೋನ್ ಮಾಡಿ ವಿಚಾರಿಸಿದೆ : ‘ಎಷ್ಟು ಹೊತ್ತಿಗೆ ಮಂಗಳೂರಿಗೆ ಬರುತ್ತಿದ್ದೀರಿ?’ ಎಂದು ಕೇಳಿದೆ. ಸಿದ್ದಲಿಂಗಯ್ಯ ಬಹಳ ವಿನೀತರಾಗಿ ಹೇಳಿದರು: ‘ಇಲ್ಲ ಸಾರ್, ನಾನು ಬರುವುದಿಲ್ಲ. ನಾನು ಬೆಂಗಳೂರು ವಿವಿಯಲ್ಲೇ ಇರುತ್ತೇನೆ. ನಿಮ್ಮ ವಿಶ್ವಾಸಕ್ಕೆ ಧನ್ಯವಾದಗಳು.’ ಅವರು ಬರಲಿಲ್ಲ. ಆ ಹುದ್ದೆಗೆ ಆಗ ಮಂಗಳೂರು ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಇದ್ದ ಡಾ.ಅರವಿಂದ ಮಾಲಗತ್ತಿ ಅರ್ಹತೆಗೆ ಅನುಸಾರವಾಗಿ ಆಯ್ಕೆಯಾದರು. ಸಿದ್ದಲಿಂಗಯ್ಯ ಅವರ ಅಂದಿನ ನಿರ್ಧಾರವು ಸರಿ ಎಂದು ಆಮೇಲೆ ನನಗೆ ಅನ್ನಿಸಿತು. ಅವರ ಸಾಹಿತ್ಯ ರಚನೆ, ಸಂಘಟನೆಯ ಕೆಲಸಗಳು, ಸ್ನೇಹಿತರ ಬಳಗ ಎಲ್ಲ ದೃಷ್ಟಿಯಿಂದಲೂ ಬೆಂಗಳೂರು ವಿವಿ ಅವರಿಗೆ ಒಳ್ಳೆಯ ಅವಕಾಶಗಳನ್ನು ಕಲ್ಪಿಸಿತು.

ಸಿದ್ದಲಿಂಗಯ್ಯನವರು ಬೆಂಗಳೂರು ವಿವಿಯಲ್ಲಿ ಡಾ. ಜಿ ಎಸ್ ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ ‘ಗ್ರಾಮದೇವತೆಗಳು’ ವಿಷಯದ ಬಗ್ಗೆ ಪಿಎಚ್ ಡಿ ಪದವಿಗಾಗಿ ಸಂಶೋಧನೆ ನಡೆಸುತ್ತಿದ್ದರು. ಸಾಹಿತ್ಯ ಅಕಾಡೆಮಿಯಲ್ಲಿ ನನ್ನ ಪರಿಚಯವಾದ ಬಳಿಕ ಆ ವಿಷಯದ ಬಗ್ಗೆ ನನ್ನಲ್ಲಿ ಸಮಾಲೋಚನೆ ನಡೆಸುತ್ತಿದ್ದರು. ನಾನು ಕೆಲವು ವಿಷಯಗಳನ್ನು ಮತ್ತು ಪುಸ್ತಕಗಳನ್ನು ಸೂಚಿಸುತ್ತಿದ್ದೆ. ಮುಂದೆ ಅವರು ತಮ್ಮ ಸಂಶೋಧನಾ ನಿಬಂಧವನ್ನು ವಿವಿಗೆ ಸಲ್ಲಿಸಿದರು. ಅದು ಮೌಲ್ಯಮಾಪನಕ್ಕೆ ನನಗೇ ಬಂದಿತು.

ನಾನು ವರದಿ ಕಳುಹಿಸಿದ ಬಳಿಕ ಅವರ ಮೌಖಿಕ ಪರೀಕ್ಷೆಗೆ ನನಗೆ ಕರೆ ಬಂದಿತು. ಅವರ ಮಾರ್ಗದರ್ಶಕರಾದ ಡಾ. ಜಿ ಎಸ್ ಶಿವರುದ್ರಪ್ಪನವರ ಸಮ್ಮುಖದಲ್ಲಿ ಸಿದ್ದಲಿಂಗಯ್ಯನವರ ಪಿಎಚ್ ಡಿ ಪ್ರಬಂಧದ ಬಗ್ಗೆ ಕೆಲವು ಸಲಹೆಗಳನ್ನು ಕೊಟ್ಟೆ. ಸಿದ್ದಲಿಂಗಯ್ಯನವರು ಅವನ್ನು ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಂಡು ಪರಿಷ್ಕರಿಸಿ ಮುಂದೆ ಪ್ರಕಟಿಸಿದ್ದಾರೆ. ಅವರ ಓದುವ ಹವ್ಯಾಸ ಅಪಾರವಾಗಿತ್ತು. ಬೆಂಗಳೂರು ವಿವಿಯ ಆವರಣದಲ್ಲಿದ್ದ ಅವರ ವಸತಿಗೃಹಕ್ಕೆ ಸಾಕಷ್ಟು ಬಾರಿ ಹೋಗಿ ಅವರ ಆತಿಥ್ಯವನ್ನು ಸ್ವೀಕರಿಸಿದ್ದೇನೆ. ವೈವಿಧ್ಯಮಯ ಪುಸ್ತಕಗಳ ಭಂಡಾರವನ್ನು ಅವರ ಮನೆಯಲ್ಲಿ ನೋಡಿದ್ದೇನೆ. ಅನೇಕ ಬಾರಿ ನಮ್ಮ ಖಾಸಗಿ ಮಾತುಕತೆಯಲ್ಲಿ ಅವರ ಅಪಾರ ಓದಿನ ಅನಾವರಣ ಆಗುತ್ತಿತ್ತು.

ಸಿದ್ದಲಿಂಗಯ್ಯ ಅವರ ಜೊತೆಗಿನ ಸ್ನೇಹದ ಇನ್ನೊಂದು ಪ್ರಸಂಗ – ಅವರು ವಿಧಾನ ಪರಿಷತ್ತಿನ ಸದಸ್ಯರಾಗಿ ಇದ್ದ ಸಂದರ್ಭ. ವಿಶ್ವವಿದ್ಯಾಲಯ, ಅಕಾಡೆಮಿ ಹಾಗೂ ಇತರ ಅಧಿಕೃತ ಕೆಲಸಗಳಿಗೆ ಆಗಾಗ ಬೆಂಗಳೂರಿಗೆ ನಾನು ಬರುತ್ತಿದ್ದ ಸಂದರ್ಭಗಳಲ್ಲಿ ಬೆಂಗಳೂರಲ್ಲಿ ಭೇಟಿ ಆಗಲು ಸಿಗುತ್ತಿದ್ದ ಸಿದ್ದಲಿಂಗಯ್ಯನವರು ಒಂದು ದಿನ ನನ್ನಲ್ಲಿ ಹೇಳಿದರು : ‘ನೀವು ಬೆಂಗಳೂರಲ್ಲಿ ಹೋಟೆಲ್ ನಲ್ಲಿ ಉಳಕೊಳ್ಳಬೇಕಾಗಿಲ್ಲ. ವಿಧಾನ ಪರಿಷತ್ತಿನ ಸದಸ್ಯನಾಗಿ ಶಾಸಕರ ಭವನದಲ್ಲಿ ನನ್ನ ಕೊಠಡಿ ಇದೆ. ಅದರ ಬೀಗದ ಕೈಯನ್ನು ನಿಮ್ಮಲ್ಲಿ ಕೊಡುತ್ತೇನೆ. ನೀವು ಮಂಗಳೂರಿಂದ ಬಂದಾಗ ನೇರವಾಗಿ ನನ್ನ ಕೊಠಡಿಗೆ ಹೋಗಿ ವಿಶ್ರಾಂತಿ ತೆಗೆದುಕೊಂಡು ನಿಮ್ಮ ಕೆಲಸ ಮುಗಿಸಿಕೊಂಡು ಹೋಗಬಹುದು.’ ಹಾಗೆ ಅವರು ಕೊಟ್ಟ ಕೀ ಯನ್ನು ಬಳಸಿಕೊಂಡು ಶಾಸಕರ ಭವನದ ಅವರ ಕೊಠಡಿಯಲ್ಲಿ ಬೆಳಗ್ಗೆ ಹೋಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೆ.

ಸುಮಾರು ಒಂಬತ್ತು ಗಂಟೆಯ ಬಳಿಕ ಸಿದ್ದಲಿಂಗಯ್ಯನವರು ಅಲ್ಲಿಗೆ ಬರುವಾಗ ಅವರನ್ನು ಕಾಣಲು, ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಜನರು ಬಂದು ಕಾಯುತ್ತಿದ್ದರು. ಎಲ್ಲರೂ ಬಡವರು, ದಲಿತರು, ಕಷ್ಟದಲ್ಲಿ ಇದ್ದ ಜನಸಾಮಾನ್ಯರು ಮಾತ್ರ ಅಲ್ಲಿಗೆ ಬರುತ್ತಿದ್ದರು. ಸಿದ್ದಲಿಂಗಯ್ಯನವರು ಮೊದಲು ಅವರಿಗೆ ಚಹಾ ತಿಂಡಿ ತರಿಸಿಕೊಟ್ಟು ಅವರ ಅಹವಾಲು ಕೇಳಿಕೊಂಡು, ತಮ್ಮ ಟೈಪಿಸ್ಟ್ ಗೆ ಹೇಳಿ, ಅರ್ಜಿ ಸಿದ್ಧಪಡಿಸಿ, ಆ ಜನರನ್ನು ಕರೆದುಕೊಂಡು ವಿಧಾನಸೌಧದ ಕಚೇರಿಗಳಿಗೆ ಹೋಗುತ್ತಿದ್ದರು. ಮತ್ತೆ ಮಧ್ಯಾಹ್ನ ಬಂದು ತಮ್ಮ ಖರ್ಚಿನಲ್ಲಿ ಆ ಎಲ್ಲರಿಗೆ ಕ್ಯಾಂಟೀನ್ ನಿಂದ ಊಟ ತರಿಸಿ ಕೊಡುತ್ತಿದ್ದರು. ಮತ್ತೆ ಬಿಡುವು ಆದಾಗ ನನ್ನಲ್ಲಿ ಆ ಬಡಜನರ ಕಷ್ಟಗಳನ್ನೂ ಅಧಿಕಾರಶಾಹಿಯಿಂದ ಆಗುವ ತೊಂದರೆಗಳನ್ನೂ ವಿವರಿಸುತ್ತಿದ್ದರು.

ಸರಕಾರದ ಅಧಿಕಾರಿಗಳ ಜೊತೆಗೆ ಸೌಜನ್ಯದಿಂದ ಮಾತನಾಡಿ ಅವರಿಗೆ ಮನವರಿಕೆ ಮಾಡಿಕೊಟ್ಟು ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸುವ ಸಿದ್ದಲಿಂಗಯ್ಯನವರ ಬದುಕಿನ ಕ್ರಮವನ್ನು ನಾನು ಸಾಕಷ್ಟು ಬಾರಿ ಕಣ್ಣಾರೆ ಕಂಡಿದ್ದೇನೆ. ಆರು ವರ್ಷಗಳ ಕಾಲ ನನ್ನ ಬಳಿ ಇದ್ದ ಸಿದ್ದಲಿಂಗಯ್ಯನವರ ಶಾಸಕರ ಕೊಠಡಿಯ ಬೀಗದ ಕೈ ನನ್ನ ಪಾಲಿಗೆ ಸಾಹಿತ್ಯದ ಆಚೆಗಿನ ಸಿದ್ದಲಿಂಗಯ್ಯನವರ ಸಾಮಾಜಿಕ ಕಾಳಜಿಯ ವ್ಯಕ್ತಿತ್ವವನ್ನು ಅನಾವರಣಮಾಡುವ ಕೀ ಆಗಿ ಮುಖ್ಯವಾಗಿದೆ.

ಸಿದ್ದಲಿಂಗಯ್ಯನವರು ಎರಡು ಅವಧಿಗೆ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯ ಆಗಿದ್ದರು (೧೯೮೮ ರಿಂದ ೧೯೯೪ ಮತ್ತು ೧೯೯೫ ರಿಂದ ೨೦೦೧ ). ಅವರು ತಮ್ಮ ಅವಧಿಯಲ್ಲಿ ಸದನದಲ್ಲಿ ಎತ್ತಿದ ಪ್ರಶ್ನೆಗಳು, ಭಾಗವಹಿಸಿದ ಚರ್ಚೆಗಳು, ಅನುಷ್ಠಾನಕ್ಕೆ ತಂದ ಸುಧಾರಣೆಗಳು ಇವನ್ನು ತಿಳಿದುಕೊಳ್ಳಲು ಎರಡು ಸಂಪುಟಗಳಲ್ಲಿ ಪ್ರಕಟವಾಗಿರುವ ‘ಸದನದಲ್ಲಿ ಸಿದ್ದಲಿಂಗಯ್ಯ’ ಸಂಪುಟಗಳನ್ನು ಸಮಗ್ರವಾಗಿ ಓದಬೇಕು. ಯಾವ ನಾಮಕರಣ ಸದಸ್ಯರೂ ಇಷ್ಟು ಪ್ರಮಾಣದಲ್ಲಿ ಸದನದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟಮಾಡಿದ ನಿದರ್ಶನ ನನ್ನ ತಿಳುವಳಿಕೆಯಲ್ಲಿ ಇಲ್ಲ.

ಕೇವಲ ಒಂದೇ ಒಂದು ಉದಾಹರಣೆ ಕೊಡುವುದಾದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರಗ ಸಮುದಾಯದಲ್ಲಿ ಇದ್ದ ಅಮಾನವೀಯ ಅಜಲು ಪದ್ಧತಿಯ ರದ್ಧತಿಗೆ ಸದನದಲ್ಲಿ ಹೋರಾಡಿದವರು ಸಿದ್ದಲಿಂಗಯ್ಯ. ಅವರು ಸದನದಲ್ಲಿ ಅರಣ್ಯ ಕಾಯಿದೆಯ ತಿದ್ದುಪಡಿ ಬಗ್ಗೆ ಪ್ರಶ್ನೆ ಕೇಳಿದ ಸಂದರ್ಭದ ಒಂದು ಸ್ವಾರಸ್ಯದ ಘಟನೆಯನ್ನು ಖಾಸಗಿ ಮಾತುಕತೆಯಲ್ಲಿ ನನ್ನಲ್ಲಿ ಹೇಳಿದ್ದರು. ಆ ಕಾಲದಲ್ಲಿ ಪ್ರಚಲಿತವಾಗಿದ್ದ ಅರಣ್ಯ ಕಾನೂನಿನಿಂದ ಅರಣ್ಯವಾಸಿಗಳಿಗೆ ಆಗುವ ಸಮಸ್ಯೆಯ ಬಗ್ಗೆ ಅರಣ್ಯ ಸಚಿವರಿಗೆ ಉತ್ತರಿಸಲು ಸಿದ್ದಲಿಂಗಯ್ಯ ಒಂದು ಪ್ರಶ್ನೆ ಕಳುಹಿಸಿದ್ದರಂತೆ.

ಸದನ ನಡೆಯುತ್ತಿರುವಾಗ ಆ ಕಾಲದ ಅರಣ್ಯ ಸಚಿವರು ತಮ್ಮ ಯಾವುದೋ ಕೆಲಸಕ್ಕೆ ಹೊರಗೆ ಹೋಗಬೇಕಾಗಿ ಬಂದಾಗ ಸದನದ ಸದಸ್ಯರಾದ ಸಿದ್ದಲಿಂಗಯ್ಯನವರಿಗೆ ಸನ್ನೆ ಮಾಡಿದರಂತೆ. ಅದಕ್ಕೆ ಪ್ರತಿಯಾಗಿ ಸಿದ್ದಲಿಂಗಯ್ಯನವರು ಒಂದು ಕೈಯಲ್ಲಿ ಅಗಲಿಸಿ ಎತ್ತಿಹಿಡಿದು ಸಚಿವರಿಗೆ ತೋರಿಸಿದರಂತೆ. ಈ ಸನ್ನೆಯನ್ನು ತನಗೆ ಒಪ್ಪಿಗೆ ಎಂದು ಭಾವಿಸಿದ ಅರಣ್ಯ ಸಚಿವರು ಸದನದಿಂದ ನಿರಾಳವಾಗಿ ಹೊರಗೆ ಹೋದರಂತೆ. ಸಿದ್ದಲಿಂಗಯ್ಯನವರ ಸೂಚಿತ ಪ್ರಶ್ನೆಯನ್ನು ಸಭಾಪತಿಗಳು ಎತ್ತಿಕೊಂಡಾಗ ಅರಣ್ಯ ಸಚಿವರು ಸದನದಲ್ಲಿ ಇರಲಿಲ್ಲ. ಆಗ ಸಿದ್ದಲಿಂಗಯ್ಯನವರು ಸಭಾಪತಿಗಳಲ್ಲಿ ಹೇಳಿದರಂತೆ : ‘ಅರಣ್ಯಸಚಿವರೇ ಇಲ್ಲದೆ ನನ್ನ ಪ್ರಶ್ನೆ ಅರಣ್ಯರೋದನವಾಯಿತು’ ಎಂದು. ಈ ಹೇಳಿಕೆ ಮರುದಿನ ಪತ್ರಿಕೆಗಳಲ್ಲಿ ದೊಡ ಸುದ್ದಿಯಾಗಿ ಪ್ರಕಟವಾಯಿತು.

ಮುಖ್ಯಮಂತ್ರಿಗಳು ಅರಣ್ಯ ಸಚಿವರನ್ನು ತರಾಟೆಗೆ ತೆಗೆದುಕೊಂಡರಂತೆ. ಅರಣ್ಯ ಸಚಿವರು ಸಿದ್ಧಲಿಂಗಯ್ಯನವರಲ್ಲಿ ಬಂದು ತಮ್ಮ ಅಳಲು ತೋಡಿಕೊಂಡರಂತೆ : ‘ನಾನು ಸದನದಿಂದ ಹೊರಹೋಗುವಾಗ ನೀವು ಕೈಸನ್ನೆ ಮಾಡಿ ಒಪ್ಪಿಗೆ ಕೊಟ್ಟದ್ದಲ್ಲವೇ ?’ ಅದಕ್ಕೆ ಸಿದ್ದಲಿಂಗಯ್ಯನವರ ಉತ್ತರ : ‘ನಾನು ಕೈ ಎತ್ತಿ ಅಡ್ಡ ಹಿಡಿದದ್ದು ಹೋಗಬೇಡಿ ಎಂದು.’ ಈ ಪ್ರಸಂಗವನ್ನು ನಾನು ಬೆಂಗಳೂರಲ್ಲಿ ಒಮ್ಮೆ ಸಿದ್ದಲಿಂಗಯ್ಯನವರಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದಾಗ ಪ್ರಸ್ತಾವಿಸಿದ್ದೆ. ಆ ಸಭೆಯ ಅಧ್ಯಕ್ಷತೆ ವಹಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರ ಸಹಿತ ಎಲ್ಲರೂ ಜೋರಾಗಿ ನಕ್ಕಿದ್ದರು.

ಸಿದ್ದಲಿಂಗಯ್ಯ ಮತ್ತು ನಾನು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಸಾಕಷ್ಟು ಬಾರಿ ಭೇಟಿ ಆಗಿದ್ದೇವೆ. ಬೆಂಗಳೂರು ವಿವಿಯ ಕನ್ನಡ ಅಧ್ಯಯನ ಕೇಂದ್ರ ಮತ್ತು ಮಂಗಳೂರು ವಿವಿ ಕನ್ನಡ ವಿಭಾಗ: ಇವು ಎರಡು ನಮ್ಮ ಅನನ್ಯತೆಯ ಮತ್ತು ಬೆಸುಗೆಯ ಶಕ್ತಿಕೇಂದ್ರಗಳು. ಅಂಬೇಡ್ಕರ್ ಕೃತಿಗಳ ಕನ್ನಡ ಅನುವಾದದ ಮೈಸೂರು ಕಮ್ಮಟದ ಸಂದರ್ಭದಲ್ಲಿ ಖಾಸಗಿ ಮಾತುಕತೆಯಲ್ಲಿ ಸಿದ್ದಲಿಂಗಯ್ಯ ಅವರಿಂದ ಅಂಬೇಡ್ಕರ್ ಬಗ್ಗೆ ಅನೇಕ ವಿಷಯ ತಿಳಿದುಕೊಂಡೆ.

೨೦೦೧ರಲ್ಲಿ ಮಂಗಳೂರಿನ ಸಂದೇಶ ಪ್ರತಿಷ್ಠಾನವು ಕೊಡಮಾಡುವ ಸಾಹಿತ್ಯ ಪ್ರಶಸ್ತಿಯನ್ನು ಒಪ್ಪಿಕೊಳ್ಳಲು ನಾನು ಮಾಡಿದ ವಿನಂತಿಯನ್ನು ಸಿದ್ದಲಿಂಗಯ್ಯನವರು ಒಪ್ಪಿಕೊಂಡು ಮಂಗಳೂರಿಗೆ ಬಂದು ಬಹಳ ಪ್ರೀತಿಯ ಮಾತುಗಳನ್ನು ಆಡಿದರು. ನಾನು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಆಗಿದ್ದಾಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಿದ್ದಲಿಂಗಯ್ಯನವರು ೨೦೦೭ರಲ್ಲಿ ಬಂದು ಭಾಷಾಯೋಜನೆಗಳಿಗೆ ಪ್ರಾಯೋಜಕತ್ವವನ್ನು ಕೊಟ್ಟರು.

೨೦೦೯ರ ಅಕ್ಟೊಬರದಲ್ಲಿ ಗೆಳೆಯ ಜಿ ಎನ್ ಮೋಹನ್ ಅವರ ಆಸಕ್ತಿಯಿಂದ ‘ಮೇ ಫ್ಲವರ್ ಮೀಡಿಯ ಹೌಸ್’, ‘ಪ್ರಗತಿ ಗ್ರಾಫಿಕ್ಸ್’ ಮತ್ತು ‘ನಾಕು ತಂತಿ ಪ್ರಕಾಶನ’ದ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನನ್ನ ಮೂರು ಪುಸ್ತಕಗಳ ಬಿಡುಗಡೆ (ಹಿಂದಣ ಹೆಜ್ಜೆ, ಇರುಳ ಕಣ್ಣು, ರಂಗದೊಳಗಣ ಬಹಿರಂಗ) ಮತ್ತು ನನ್ನ ಜರ್ಮನ್ ಅತಿಥಿ ಪ್ರಾಧ್ಯಾಪಕತನದ ಪ್ರಯಾಣ ಪೂರ್ವದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಅದರಲ್ಲಿ ಸಿದ್ದಲಿಂಗಯ್ಯನವರು ಅತಿಥಿಯಾಗಿ ಭಾಗವಹಿಸಿ ನನ್ನ ಬಗ್ಗೆ ಅಭಿಮಾನದ ಪ್ರೀತಿಯ ಮಾತುಗಳನ್ನು ಆಡಿದರು.

ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗದಲ್ಲಿ ಅತಿಥಿ ಪ್ರಾಧ್ಯಾಪಕನಾಗಿ ನಾನು ೨೦೦೯ ರಿಂದ ಜರ್ಮನ್ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಪಾಠಮಾಡಿದೆ.

ಆಗಿನ ಒಂದು ತಂಡದವರಿಗೆ ಕನ್ನಡ ಕಾವ್ಯಗಳ ಬಗ್ಗೆ ಹೇಳುವಾಗ ಸಿದ್ದಲಿಂಗಯ್ಯನವರ ‘ಸಾವಿರಾರು ನದಿಗಳು’ ಕವನವನ್ನು ವಿವರಿಸಿದೆ.. ಮೂಲ ಪದ್ಯವನ್ನು ಕನ್ನಡದಲ್ಲಿ ಓದಿ ಅದರ ಇಂಗ್ಲಿಷ್ ಅನುವಾದವನ್ನು ಕೊಟ್ಟು ವಿವೇಚಿಸಿದೆ. ಜರ್ಮನ್ ವಿದ್ಯಾರ್ಥಿಗಳಿಗೆ ಆ ಕವನ ಬಹಳ ಇಷ್ಟವಾಯಿತು. ದಲಿತ ಸಾಹಿತ್ಯದ ಸ್ವರೂಪವನ್ನು ಆ ಕವನವು ರೂಪಕವಾಗಿ ಹೇಳುವ ಬಗೆಯನ್ನು ಆ ವಿದ್ಯಾರ್ಥಿಗಳೇ ಮೆಚ್ಚಿಕೊಂಡರು . ಸಿದ್ದಲಿಂಗಯ್ಯನವರ ಕೆಲವು ಕವನಗಳನ್ನು ಜರ್ಮನ್ ಭಾಷೆಗೆ ಅನುವಾದ ಮಾಡುವ ಇಚ್ಛೆಯನ್ನು ಅವರಲ್ಲಿ ಪ್ರಕಟಿಸಿದ್ದೆ. ಅವರು ಅದಕ್ಕೆ ಬಹಳ ಸಂತೋಷ ಪಟ್ಟಿದ್ದರು. ಆ ಬಯಕೆ ಹಾಗೆಯೆ ಉಳಿದಿದೆ.

ಯಾವುದೇ ಹುದ್ದೆಯಲ್ಲಿ ಇದ್ದರೂ ಸಿದ್ದಲಿಂಗಯ್ಯನವರು ಅದನ್ನು ಜನಪರವಾಗಿ ಪಾರದರ್ಶಕವಾಗಿ ಎಲ್ಲರನ್ನೂ ಒಳಗೊಳ್ಳುವಂತೆ ಮಾಡಿ ತಾರತಮ್ಯವಿಲ್ಲದೆ ನಿರ್ವಹಿಸಿರುವುದಕ್ಕೆ ನಮ್ಮ ಕಣ್ಣಮುಂದೆಯೇ ಸಾಕಷ್ಟು ನಿದರ್ಶನಗಳಿವೆ. ಸಿದ್ಧಾಂತದ ತಿರುಳನ್ನು ಗಟ್ಟಿಯಾಗಿ ಇಟ್ಟುಕೊಂಡು, ಉದಾರತೆಯಿಂದ ಮತ್ತು ಪ್ರೀತಿಯಿಂದ ಸಾಮುದಾಯಿಕವಾಗಿ ಹೇಗೆ ಕೆಲಸ ಮಾಡಬಹುದು ಎನ್ನುವುದರ ‘ಸಿದ್ದಲಿಂಗಯ್ಯ ಮಾದರಿ’ಯನ್ನು ಅವರು ಹಾಕಿಕೊಟ್ಟಿದ್ದಾರೆ. ಅದು ಸೈದ್ಧಾಂತಿಕವಾಗಿ ಮತ್ತು ಪ್ರಾಯೋಗಿಕವಾಗಿ ಕರ್ನಾಟಕದಲ್ಲಿ ಪರಿಣಾಮಕಾರಿಯಾಗಿದೆ. ಕರ್ನಾಟಕದ ಯಾವುದೇ ಮೂಲೆಗೆ ಹೋದರೂ ತರುಣ ಪೀಳಿಗೆಯವರು ಬಹಳ ಮಂದಿ ನನ್ನನ್ನು ಸಿದ್ದಲಿಂಗಯ್ಯನವರ ಆಪ್ತರು ಎಂದು ಗುರುತಿಸುವುದು ನನಗೆ ಅಭಿಮಾನದ ಸಂಗತಿ.

ಸುಮಾರು ಎರಡು ತಿಂಗಳ ಹಿಂದೆ ಮಾರ್ಚ್ ೨೮ರಂದು ನಾನು ಬೆಂಗಳೂರಿನಲ್ಲಿ ಇದ್ದೆ. ಆದಿನ ಬೆಳಗ್ಗೆ ಸುಬ್ರಾಯ ಚೊಕ್ಕಾಡಿ ಅವರ ಅನುಭವ ಕಥನ ಪುಸ್ತಕವನ್ನು ಬಿಡುಗಡೆ ಮಾಡಿದ ಬಳಿಕ ನಾ ದಾಮೋದರ ಶೆಟ್ಟಿ ಮತ್ತು ಆರ್ ನರಸಿಂಹಮೂರ್ತಿ ಅವರ ಜೊತೆಗೆ ಮಧ್ಯಾಹ್ನ ಊಟಕ್ಕೆ ಹೋಟೆಲ್ ಚಾಲುಕ್ಯಕ್ಕೆ ಬಂದೆ. ಅಲ್ಲಿ ಊಟ ಮಾಡುತ್ತಿರುವಾಗ ಅಲ್ಲಿಗೆ ಅಕಸ್ಮಾತ್ ಸಿದ್ದಲಿಂಗಯ್ಯನವರು ಬಂದರು. ನಮ್ಮನ್ನು ಕಂಡು ನಮ್ಮಲ್ಲಿಗೆ ಬಂದರು. ನಾವಿಬ್ಬರೂ ಸ್ವಲ್ಪ ಹೊತ್ತು ಯೋಗಕ್ಷೇಮ ಮಾತಾಡಿಕೊಂಡೆವು. ‘ಕೊರೋನ ಸೋಂಕು ಅಪಾಯ ಇದೆ. ಸ್ವಲ್ಪ ಜಾಗ್ರತೆ ಮಾಡಿ’ ಎಂದು ನಾನು ಸಿದ್ದಲಿಂಗಯ್ಯನವರಿಗೆ ಹೇಳಿದೆ . ಅವರು ನನಗೂ’ ಆರೋಗ್ಯ ನೋಡಿಕೊಳ್ಳಿರಿ’ ಎಂದು ಹೇಳಿದರು. ಅದೇ ನಮ್ಮ ಕೊನೆಯ ಭೇಟಿ ಆಗುತ್ತದೆ ಎಂದು ನಾವು ಇಬ್ಬರೂ ಕನಸಿನಲ್ಲೂ ಎಣಿಸಿದವರಲ್ಲ .

ಸಿದ್ದಲಿಂಗಯ್ಯನವರು ತಮ್ಮ ವೈನೋದಿಕ ಸಾಂಸ್ಕೃತಿಕ ಚಿಂತನೆಗಳ ಬರಹಗಳ ಸಂಕಲನ ‘ಅವತಾರಗಳು’ ಪುಸ್ತಕದ ೨೦೦೯ರ ಆವೃತ್ತಿಯನ್ನು ನನಗೆ ಅರ್ಪಣೆ ಮಾಡಿದ್ದಾರೆ. ನನ್ನಲ್ಲಿ ಮುಂಚಿತವಾಗಿ ಕೇಳಿರಲಿಲ್ಲ.. ಅದರ ಪ್ರತಿ ಬಂದ ಬಳಿಕವೇ ನನಗೆ ಗೊತ್ತಾದದ್ದು. ‘ನನ್ನ ಮಾತು’ವಿನಲ್ಲಿ ಅವರು ಬರೆದ ಮಾತು : ‘ವಿದ್ವತ್ತು, ಸಾಮಾಜಿಕ ಕಳಕಳಿಯ ಸಂಗಮವಾಗಿರುವ ಡಾ. ವಿವೇಕ ರೈ ಅವರಿಂದ ನಾನು ಕಲಿತದ್ದು ಬಹಳ. ಈ ಅರ್ಪಣೆ ಅವರಿಗೆ ಕೃತಜ್ಞತೆ ತೋರಲು ಒಂದು ಅವಕಾಶವೆಂದು ಭಾವಿಸಿದ್ದೇನೆ.’

ನಾನು ಸಿದ್ದಲಿಂಗಯ್ಯನವರಿಗೆ ಏನನ್ನು ತಾನೇ ಅರ್ಪಣೆ ಮಾಡಲು ಸಾಧ್ಯ? ಈಗ ನನ್ನಲ್ಲಿ ಉಳಿದಿರುವುದು ಕಣ್ಣೀರು ಮಾತ್ರ.

‍ಲೇಖಕರು Avadhi

June 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಕುಂ. ವೀರಭದ್ರಪ್ಪ

    ಡಾ ವಿವೇಕ ರೈ ಅವರು ನಿರ್ಗಮಿತ ನಮ್ಮೆಲ್ಲರ ಪ್ರೀತಿಯ ಕವಿ ಸಿದ್ಧಲಿಂಗಯ್ಯ ಕುರಿತು ಬರೆದ ಕಿರು ಬರೆಹ ಕಣ್ಣುಗಳನ್ನು ಒದ್ದೆ ಮಾಡಿತು. ಆ ನನ್ನ ಅನುಗಾಲದ ಆತ್ಮೀಯ ಮಿತ್ರರ ಬಗ್ಗೆ ಡಿಟೇಲಾಗಿ ಅಂತಃಕರಣದಿಂದ ಬರೆದಿರುವರು. ಓರ್ವ ವಿಶ್ರಾಂತ ಕುಲಪತಿಗಳು ಹೇಗೆ ಅವಿಶ್ರಾಂತರಾಗಿ ಸಮಕಾಲೀನ ಆಗುಹೋಗುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದು ತೀರಾ ವಿರಳ. ಇವರು ಕೆಲವು ದಿವಸಗಳ ಹಿಂದೆ ಹಿರಿಯರಿದ್ದ ಪ್ರೊ ಐ ಎಂ ಸವದತ್ತಿ ಅವರ ಬಗ್ಗೆ ಇದೇ ರೀತಿ ಅಂತಃಕರಣ ಕಲಕಿದ್ದರು. ಎಲ್ಲರನ್ನು ಪ್ರೀತಿಸುತ್ತಿದ್ದವರನ್ನು ಎಲ್ಲರು ಹೇಗೆ ಪ್ರೀತಿಸುವರು ಅನ್ನುವುದಕ್ಕೆ ಎಂಭತ್ತರ ದಶಕದ ಆದಿಯಲ್ಲಿ ನಮ್ಮೆಲ್ಲರನ್ನು ಕವಿಗಳನ್ನಾಗಿಸಿದ ಸಿದ್ಧಲಿಂಗಯ್ಯ ಸಾಕ್ಷಿ.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಕುಂ. ವೀರಭದ್ರಪ್ಪCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: