ಡಾ. ಜಿ ರಾಮಕೃಷ್ಣ ಅವರು ಓದಿದ ‘ವರ್ತಮಾನ ಭಾರತ’

ಡಾ. ಜಿ ರಾಮಕೃಷ್ಣ

**

ಖ್ಯಾತ ಸಾಹಿತಿ ಡಾ. ಪುರುಷೋತ್ತಮ ಬಿಳಿಮಲೆಯವರ ಹೊಸ ಕೃತಿ ʼವರ್ತಮಾನ ಭಾರತʼ ಬಿಡುಗಡೆಯಾಗಿದೆ.

ಚಿರಂತ್ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಗೆ ಹೆಸರಾಂತ ಸಾಹಿತಿ ಡಾ. ಜಿ ರಾಮಕೃಷ್ಣ ಅವರು ಬರೆದ ಮುನ್ನುಡಿಯ ಆಯ್ದ ಭಾಗ ಇಲ್ಲಿದೆ.

**

ಕಾವ್ಯ – ಧರ್ಮ – ರಾಜಕೀಯ ಮೀಮಾಂಸೆಯ ಮೇರು ಮಾದರಿ

ಎಲ್ಲ ಸಮಕಾಲೀನ ಸನ್ನಿವೇಶ ಮತ್ತು ಬೆಳೆವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾ ಮತ್ತು ವ್ಯಾಖ್ಯಾನಿಸುತ್ತಾ ಇಡೀ ಸಮಾಜಕ್ಕೆ ಮಾರ್ಗದರ್ಶಕ ಸೂತ್ರಗಳನ್ನು ರೂಪಿಸುವುದರಲ್ಲಿ ಮಾತ್ರವೇ ಅಲ್ಲದೆ ಅವನ್ನು ಮೂರ್ತವಾಗಿ ಅಳವಡಿಸುವ ಕೆಲಸದ ಜವಾಬ್ದಾರಿಯನ್ನು ಹೊತ್ತು ನಿಜಕ್ಕೂ ಒಬ್ಬ ನೈಜ ಸಾಂಸ್ಕೃತಿಕ – ಸಾಮಾಜಿಕ ಕಾರ್ಯಕರ್ತರಾಗಿರುವವರು ಪ್ರೊ|| ಪುರುಷೋತ್ತಮ ಬಿಳಿಮಲೆ ಅವರು. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಅನನ್ಯ ಅಭಿವೃದ್ಧಿಗೆ ಕಾರಣಕರ್ತೃಗಳಾಗಿದ್ದುದಲ್ಲದೆ ಬೇರೆ ಹಲವು ಶೈಕ್ಷಣಿಕ ರಂಗಗಳಲ್ಲಿ ಅವರು ಅಪಾರ ಅನುಭವ ಮತ್ತು ಕೀರ್ತಿ ಪಡೆದಿದ್ದಾರೆ. ಅಪಾರ ವಿದ್ವತ್ತು ಮತ್ತು ಕ್ರಿಯಾಶೀಲತೆಯುಳ್ಳ ಅವರು ಸಹಜವಾಗಿಯೇ ಅಂದಂದಿನ ವಿದ್ಯಮಾನಗಳನ್ನು ವೈಚಾರಿಕ ನೆಲೆಯಲ್ಲಿ ವಿಶ್ಲೇಷಿಸಿ, ಸರಿ ತಪ್ಪುಗಳನ್ನು ಒಪ್ಪವಾಗಿ ಸಮುದಾಯದ ಮುಂದೆ ಇರಿಸುತ್ತಾ ಬಂದಿದ್ದಾರೆ.

ಯಾವ ವಿದ್ಯಮಾನವನ್ನು ನಿಷ್ಕೃಷ್ಟವಾಗಿ ಹೇಗೆ ಪರಾಮರ್ಶೆ ಮಾಡಿಕೊಳ್ಳಬೇಕೆಂಬ ತಿಳಿವು ಅವರ ಮಾತು, ಬರಹ ಮತ್ತು ಕ್ರಿಯೆಗಳಿಂದ
ವ್ಯಕ್ತವಾಗುತ್ತದೆ. ಯಾವುದೇ ವಿಷಯವೂ ಅವರ ದೃಷ್ಟಿಪಥದ ಹೊರಗೆ ಉಳಿಯುವಂಥದಲ್ಲ; ವಿಶೇಷವಾಗಿ ನಮ್ಮ ರಾಜ್ಯದ ಶಿಕ್ಷಣ, ಸಾಮಾಜಿಕ ನಡತೆ ಮತ್ತು ಚಿಂತನಾ ವಿಧಾನಗಳನ್ನು ಸಮಗ್ರವಾಗಿ ತೆರೆದಿಡುವ ಸಾಮರ್ಥ್ಯ ಅವರಲ್ಲಿದೆ. ಅದಕ್ಕೊಂದು ನೇರ ದೃಷ್ಟಾಂತವೆಂಬಂತೆ ಪ್ರಸ್ತುತ ಪ್ರಬಂಧ ಸಂಕಲನವೊಂದನ್ನು ನಮ್ಮ ಮುಂದಿರಿಸಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಸೂಕ್ತವಾದ ಹಾಗೂ ಜನಪರವಾದ ಪರಿಪ್ರೇಕ್ಷ್ಯ ಹೇಗಿರಬೇಕು ಮತ್ತು ಅದನ್ನು ಸಾಧಿಸಲು ಕ್ರಮಗಳೇನಾಗಿರಬೇಕು ಎಂಬುದನ್ನು ವಿಶಾಲ ತಳಹದಿಯ ಮೇಲೆ ವಿಶದವಾಗಿ ಚರ್ಚಿಸಿ ಒಂದು ನೀಲಿನಕ್ಷೆಯನ್ನು
ಮುಂದಿಡುವುದರಲ್ಲಿ ಪ್ರೊ|| ಬಿಳಿಮಲೆ ಅವರು ನಿಷ್ಣಾತರು, ಸಮರ್ಥರು ಮತ್ತು ಪರಿಣತರು.

ಒಟ್ಟು ಅವರ ೨೧ ಪ್ರಬಂಧಗಳನ್ನು ಆಯ್ದು ಅವರೀಗ ತಮ್ಮೊಂದು ಸಂಕಲನವನ್ನು ಹೊರತಂದಿದ್ದಾರೆ. ಸಮಕಾಲೀನ ಸಂದರ್ಭಕ್ಕೆ ಭೈಷಜ್ಯರೂಪದಲ್ಲಿ ದೊರಕುವ ಹೊಳಹುಗಳಿಗೆ ಇಲ್ಲಿಯ ಪ್ರತಿಯೊಂದು ಪ್ರಬಂಧವೂ ಒಂದು ಖನಿಯೇ ಆಗಿದೆ. ಆ ಕಾರಣದಿಂದಲೇ ಈ ಗ್ರಂಥವು ಅವರ ಒಂದು ಮಹತ್ತರ ಕೊಡುಗೆಯಾಗಿದೆ. ಇಲ್ಲಿಯ ಕಣ್ನೆಲೆಯನ್ನು ಎಷ್ಟು ಸಾರ್ಥಕವಾಗಿ ನಮ್ಮದಾಗಿಸಿಕೊಳ್ಳುತ್ತೇವೆಂಬುದನ್ನು ನಮ್ಮ ನಮ್ಮ ಚಿಂತನಾ ಪ್ರಖರತೆ ಮತ್ತು ನಿಷ್ಠೆ ನಿರ್ಧರಿಸಬಲ್ಲವು. ಇಪ್ಪತ್ತೊಂದು ಲೇಖನಗಳಿರುವ ಈ ಸಂಕಲನದಲ್ಲಿ ಪ್ರತ್ಯೇಕ ವಿಷಯಗಳನ್ನು ಕುರಿತ ಗಾಢ ಮತ್ತು ನಿಷ್ಕೃಷ್ಟ ಚಿಂತನೆಗಳಿವೆ. ವಿಷಯಗಳ ವ್ಯಾಪ್ತಿಯು ಪ್ರೊ|| ಬಿಳಿಮಲೆಯವರ ಸರ್ವಾಂಗೀಣ ಆಸಕ್ತಿ ಮತ್ತು ಪ್ರೌಢಿಮೆಗಳ ಸೂಚಕವಾಗಿದೆ ಕೂಡ.

ಇಡೀ ದೇಶಕ್ಕೆ ಪರಿಚಯವಿರುವ ಧೀರೋದಾತ್ತ ರೈತ ಚಳುವಳಿಯಿಂದ ಹಿಡಿದು ಒಂದು ಕೀರ್ತಿಶಾಲಿ ವಿಶ್ವವಿದ್ಯಾನಿಲಯವನ್ನು ಹಾಳುಗೆಡಹುವ ಕ್ರೂರ ಹುನ್ನಾರವನ್ನು ಬಯಲುಮಾಡುವುದನ್ನೊಳಗೊಂಡು ಪ್ರಜಾಪ್ರಭುತ್ವದ ನೆಲೆಗಳು, ಹುಚ್ಚೆದ್ದ ಸಮರಶೀಲತೆ, ಭಾಷಾನೀತಿ, ಕಾವ್ಯಧರ್ಮ, ರಾಷ್ಟ್ರೀಯತೆಯ ಮಜಲುಗಳು, ಮೌಖಿಕ ಇತಿಹಾಸ, ಸಾಹಿತ್ಯ ವಿಮರ್ಶೆ, ಮಾಧ್ಯಮಗಳ ಹೀನಾಯ ಮೌನ, ಮುಂತಾದ ವಿಷಯಗಳು ಇಲ್ಲಿ
ಅಡಕಗೊಂಡಿವೆ. ನಮ್ಮ ಪ್ರಸಕ್ತ ಚಿಂತನೆಗಳ ಆಯಾಮಗಳನ್ನು ಗುರುತಿಸಿ ಪ್ರತಿಯೊಂದು ಸಂದರ್ಭದಲ್ಲೂ ಸಾಧಕ – ಬಾಧಕಗಳನ್ನು ಗುರುತಿಸುವುದು ಅವರ ವೈಶಿಷ್ಟ್ಯ. ಯಾವುದಕ್ಕೂ ಅಂಕಿ – ಅಂಶಗಳ ಆಧಾರವಿಲ್ಲದೆ ಚರ್ಚೆಯನ್ನು ಬೆಳೆಸದಿರುವುದು ಪ್ರೊಫೆಸರ್ ಬಿಳಿಮಲೆಯವರ ವಿದ್ವತ್ತಿನ ಶಿಸ್ತು. ನಮ್ಮ ಪ್ರಸಕ್ತ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವ ಪದ್ಧತಿಯು ಧರಿಸಿರುವ ಹಾಗೂ ಧರಿಸಬಹುದಾದ ಲಕ್ಷಣಗಳನ್ನು ವಿಮರ್ಶೆ ಮಾಡುವಾಗ ಸಹ ಅವರು ಅಂಕಿ – ಅಂಶಗಳನ್ನು ಗಮನಿಸದೆ ವಾದವನ್ನು ಮಂಡಿಸುವುದಿಲ್ಲ. ಉದಾಹರಣೆಗೆ, ಶ್ರೀಲಂಕಾದ ರಾಜಕೀಯ ಸಂದಿಗ್ಧತೆಯನ್ನು ಕುರಿತ ಲೇಖನವನ್ನು ವಿಚಕ್ಷಣೆಯಿಂದ ಗಮನಿಸಬಹುದು. ಪೂರ್ಣಪ್ರಮಾಣದ ಮಾಹಿತಿ ಇಲ್ಲದೆ ವಿಶ್ಲೇಷಣೆ ನೀಡುವುದು ನೈಜ ವಿದ್ವತ್ತಿನ ಲಕ್ಷಣವಲ್ಲ. ನಿಷ್ಕೃಷ್ಟತೆಯು ವಿದ್ವತ್ತಿನ ಮೂಲ ಲಕ್ಷಣವೆಂದು ಮಹಾಭಾರತದ ಯಕ್ಷಪ್ರಶ್ನೆಯ ಭಾಗದಲ್ಲಿ ಪ್ರಸ್ತಾಪವಿದೆ: ಕಿಂ ಪಾಂಡಿತ್ಯಂ, ಪರಿಚ್ಛೇದಃ || ಈ ಶಿಸ್ತನ್ನು ಪ್ರೊ|| ಬಿಳಿಮಲೆಯವರ ಲೇಖನಗಳಲ್ಲಿ ಮತ್ತು ಚರ್ಚೆಯಲ್ಲಿ ಕಾಣುತ್ತೇವೆ. ಗ್ರಂಥದ ಮಹತ್ವಕ್ಕೆ ಇದು ಮೂಲ ಕಾರಣ, ಪ್ರಧಾನ ಹೂರಣ.

ಭಾಷೆಗಳ ಅಳಿವು – ಉಳಿವು, ಅವನ್ನು ಗಟ್ಟಿಗೊಳಿಸಬೇಕಾದ ಅವಶ್ಯಕತೆ ಮತ್ತು ಅದಕ್ಕಿರುವ ಮಾರ್ಗಗಳು, ಹಾಗೂ ಆ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಪ್ರೊ|| ಬಿಳಿಮಲೆಯವರಿಗೆ ಬಹಳ ಆಸಕ್ತಿಯ ವಿಷಯ. ಆ ಬಗ್ಗೆ ಅವರ ವ್ಯವಸಾಯವು ವಿಶಾಲವಾಗಿದೆ, ವಿಪುಲವಾಗಿದೆ. ಅನೇಕ ಸಂದರ್ಭಗಳಲ್ಲಿ ಇದು ಅನುರಣಿತಗೊಂಡಿದೆ; ಅದಕ್ಕೆ ಕಾರಣ ಅವರ ಆಸಕ್ತಿ ಮತ್ತು ಆತಂಕ. ಇಂತಹ ಮೂಲಭೂತ ಸಂಗತಿಯ ಬಗ್ಗೆ ನಿರ್ಲಕ್ಷ್ಯವು ಸರ್ವಥಾ ಸಾಧುವಲ್ಲವೆಂಬುದನ್ನು ಲೇಖಕರು ಸುಸಂಗತವಾಗಿ ಪ್ರತಿಪಾದಿಸಿದ್ದಾರೆ. ಅಂತೆಯೇ, ತಮ್ಮದೇ ವಿಶ್ವವಿದ್ಯಾನಿಲಯವಾದ ಜೆ ಎನ್ ಯು ಹೇಗೆ ಶಿಥಿಲಗೊಳ್ಳುತ್ತಿದೆ, ಅದರ ಹಿಂದಿನ ಕಾಣದ ಕೈಗಳು ಯಾವುವು, ಅದರ ಮೌಲಿಕತೆಯನ್ನು ದುರಾಡಳಿತಗಾರರು ಹೇಗೆ ನಾಶ ಮಾಡುತ್ತಿದ್ದಾರೆ, ಎಂಬುದನ್ನು ಮನನೊಂದು ದಾಖಲಿಸಿದ್ದಾರೆ. ಯಾವ ಉಪಯುಕ್ತ ಸಂಸ್ಥೆಯನ್ನೂ ಬಾಳಲು
ಬಿಡದಿರುವುದು ಇಂದಿನ ಸಂಪ್ರದಾಯವಾಗಿಬಿಟ್ಟಿದೆ. ಆ ನೆಲೆಯಲ್ಲಿಯೇ ದೇಶದುದ್ದಗಲಕ್ಕೂ ಹಿಂದಿ ಭಾಷೆಯ ಹೇರಿಕೆ ಮತ್ತು ರಾಜ್ಯಗಳ ಭಾಷೆಗಳ ಬಗ್ಗೆ ಔದಾಸೀನ್ಯ ಕಂಡುಬರುತ್ತಿರುವುದು. ಸಂವಿಧಾನದತ್ತವಾದ ಪ್ರಜಾಪ್ರಭುತ್ವಕ್ಕೆ ಕುತ್ತುಂಟಾಗುತ್ತಿರುವುದೂ ಇಂತಹ ಸಂಕುಚಿತ ದೃಷ್ಟಿಯಿಂದಲೇ. ಇಂದಿನ ಅಪಾಯಕಾರಿ ಬೆಳೆವಣಿಗೆಗಳು ಒಂದೇ ಎರಡೇ!

ಮಾನ್ಯ ಪ್ರೊಫೆಸರ್ ಬಿಳಿಮಲೆಯವರು ಅಂತಹ ಹತ್ತಾರು ದೃಷ್ಟಾಂತಗಳನ್ನು ಓದುಗರ ಮುಂದಿರಿಸಿದ್ದಾರೆ. ಆಘಾತಕಾರಿ ಅಂಶವೆಂದರೆ ನಮ್ಮ ಪರಂಪರೆಯ ಉದಾತ್ತ ತತ್ತ್ವಗಳಿಗೆ ಕುತ್ತುಂಟಾಗಿರುವುದು. ಉದಾಹರಣೆಗೆ, ಮತಧರ್ಮಗಳ ಸಾಮರಸ್ಯ, ಪುರಾಣೇತಿಹಾಸಗಳ ಬಗೆಗಿನ ನಿರ್ದಿಷ್ಟ ನಿಲುವು, ಭಕ್ತಿ ಸಂಪ್ರದಾಯದ ಜನಪರ ಕಾಳಜಿ, ಮುಂತಾದುವನ್ನು ಹೆಸರಿಸಬಹುದು. ಪ್ರಸ್ತುತ ಸಂಕಲನದಲ್ಲಿ ಇಂಥವೆಲ್ಲಾ ಚರ್ಚೆಗೆ ಒಳಪಟ್ಟಿವೆ, ವೈಚಾರಿಕವಾಗಿ ಗ್ರಹಿಸಲ್ಪಟ್ಟಿವೆ. ತಥಾಕಥಿತ ಹಿಂದುತ್ವದ ಅಮಲಿನಿಂದಾಗಿ ದೀರ್ಘಕಾಲಿಕ ಸಂಪತ್ತಾದ ಆದಿವಾಸಿ ಸಂಸ್ಕೃತಿ ಮತ್ತು ಸಾಹಿತ್ಯ ಲುಪ್ತವಾಗುವ ಸಂಭವ ಸಹ ದೇಶವನ್ನು ಕಾಡುತ್ತಿದೆ. ಆ ಬಗ್ಗೆ ಶ್ರೀ ಬಿಳಿಮಲೆ ಅವರು ಸ್ಪಷ್ಟವಾಗಿ ಹಿಂದುತ್ವ ಮತ್ತು ಆದಿವಾಸಿ
ಸಂಸ್ಕೃತಿ ಬೇರೆಬೇರೆ ಧ್ರುವಗಳಿಗೆ ಸೇರುತ್ತವೆಂಬುದನ್ನು ಸಾರವತ್ತಾಗಿ ನಿರೂಪಿಸಿದ್ದಾರೆ.

ಆಶ್ವಾಸನೆಯು ಸಾಕಾರವಾಗಿ ರೂಪುತಾಳಲು ಬೇಕಾಗುವ ಚಿಂತನೆ ಮತ್ತು ಕ್ರಿಯಾಶೀಲತೆಗೆ ದಾರಿದೀಪವಾಗಿ ಆತ್ಮೀಯರಾದ ಶ್ರೀ. ಪುರುಷೋತ್ತಮ ಬಿಳಿಮಲೆಯವರು ಈ ಸಂಕಲನವನ್ನು ನಮ್ಮ ಮುಂದಿಟ್ಟಿದ್ದಾರೆ. ಅದರ ಸಮದರ್ಶಿತ್ವ ಅನುಷ್ಠಾನದಿಂದ ಸಮಾನತೆ, ಪ್ರಗತಿ ಮತ್ತು ಪ್ರಜಾಪ್ರಭುತ್ವದ ದೃಢೀಕರಣದತ್ತ ಅಳುಕದೆ ಹೆಜ್ಜೆ ಹಾಕೋಣ. ಅದೇ ಮಾನ್ಯ ಬಿಳಿಮಲೆ ಅವರಿಗೆ ನಾವು ತೋರಬಹುದಾದ ಗೌರವ, ಸಾದರಪಡಿಸಬಹುದಾದ ಅಭಿನಂದನೆ.

‍ಲೇಖಕರು Admin MM

March 20, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: