ಡಾ ಜಿ ಎನ್ ಉಪಾಧ್ಯ ಓದಿದ ‘ಮುಂಬೈ ಬಯೋಸ್ಕೋಪ್’

ಮುಂಬೈ ಬಯೋಸ್ಕೋಪ್ ಗಮನ ಸೆಳೆಯುವ ಕಾದಂಬರಿ


ಡಾ.ಜಿ.ಎನ್. ಉಪಾಧ್ಯ

**
ಕೃತಿ:- ಮುಂಬಯಿ ಬಯೋಸ್ಕೋಪ್
ಕೃತಿಕಾರರು:- ಡಾ.ರಮಾ ಉಡುಪ
ಪ್ರಕಾಶಕರು:- ಜೆಎನ್‌ಸಿ ಪಬ್ಲಿಷರ್ಸ್, ಬೆಂಗಳೂರು
ಬೆಲೆ:-ರೂ ೪೦೦
ಪುಟ:- ೩೨೦
ಸಂಪರ್ಕ:- ೮೯೭೧೨೨೭೮೭೬

ಕನ್ನಡ ವಾಙ್ಮಯಕ್ಕೆ ಮುಂಬೈ ಮಹತ್ವದ ದೇಣಿಗೆಯನ್ನು ನೀಡಿದೆ. ಸಾಹಿತ್ಯವಲಯವಾಗಿ ಮುಂಬೈ ಹೆಸರು ಮಾಡಿದೆ. ಕನ್ನಡ ಸಾಹಿತ್ಯವಾಹಿನಿಗೆ ಹೊಸ ನೀರು ಹಾಯಿಸಿದ ಕೀರ್ತಿಗೂ ಮುಂಬೈ ಲೇಖಕರು ಭಾಜನರಾಗಿದ್ದಾರೆ. ಇಂದಿಗೂ ಮುಂಬೈಯಲ್ಲಿ ನೂರಾರು ಮಂದಿ ಲೇಖಕರು ಕನ್ನಡ ಸಾಹಿತ್ಯ ಪರಿಚಾರಿಕೆಯಲ್ಲಿ ನಿರತರಾಗಿರುವುದು ಉಲ್ಲೇಖನೀಯ ಅಂಶ. ಮೂಲತ: ಉಡುಪಿಯವರಾದ ಡಾ.ರಮಾ ಉಡುಪ ಅವರು ಮುಂಬೈಯಲ್ಲಿ ಅರಳಿದ ಪ್ರತಿಭೆ. ಶಿಕ್ಷಕರಾಗಿ ಬಹುಕಾಲ ಕೆಲಸ ಮಾಡಿದ ಅವರು ತಮ್ಮ ನಿವೃತ್ತಿಯ ಬಳಿಕ ಮುಂಬೈ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು ಒಳ್ಳೆಯ ಓದುಗರು.

‘ಕಾರಂತರ ಕಾದಂಬರಿಗಳಲ್ಲಿ ಸಂಬಂಧದ ಪ್ರಕ್ರಿಯೆ’ ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿ ಮುಂಬೈ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿರುವ ಡಾ.ರಮಾ ಉಡುಪ ಅವರು ಬರೆದಿರುವ ಲೇಖನಗಳು, ಕಥೆಗಳು ನಾಡಿನ ಬೇರೆ ಬೇರೆ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ‘ಸಾಹಿತ್ಯ ವಿಜ್ಞಾನ ಸಮನ್ವಯಕ ಡಾ.ನಿಂಜೂರು’ ಅವರ ಪ್ರಕಟಿತ ಕೃತಿ. ಅವರು ನಮ್ಮ ವಿಭಾಗದ ಹೆಮ್ಮೆಯ ಹಿರಿಯ ವಿದ್ಯಾರ್ಥಿ. ಇದೀಗ ಡಾ.ರಮಾ ಉಡುಪ ಅವರ ಚೊಚ್ಚಲ ಕಾದಂಬರಿ ‘ಮುಂಬಯಿ ಬಯೋಸ್ಕೋಪ್’ ಬೆಳಕು ಕಾಣುತ್ತಿರುವುದು ಸಂತೋಷದ ಸಂಗತಿ.

ಜಾಗತಿಕ ಸಾಹಿತ್ಯ ಪ್ರಕಾರಗಳಲ್ಲಿ ಕಾದಂಬರಿಗೆ ವಿಶಿಷ್ಟವಾದ ಸ್ಥಾನಮಾನವಿದೆ. ಜನಪ್ರಿಯ ಮಾಧ್ಯಮದ ಖ್ಯಾತಿಯನ್ನು ಅದು ಇಂದಿಗೂ ಉಳಿಸಿಕೊಂಡು ಬಂದಿದೆ. ಕನ್ನಡ ಕಾದಂಬರಿ ಕ್ಷೇತ್ರಕ್ಕೂ ಈ ಮಾತು ಅನ್ವಯಿಸುತ್ತದೆ. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಕಾರಂತರ ಮರಳಿ ಮಣ್ಣಿಗೆ, ಕಟ್ಟೀಮನಿ ಅವರ ದುರ್ಗಾಸ್ತಮಾನ, ತೇಜಸ್ವಿ ಅವರ ಕರ್ವಾಲೋ, ಭೈರಪ್ಪ ಅವರ ಪರ್ವ, ಚದುರಂಗ ಅವರ ವೈಶಾಖ, ಮಾಸ್ತಿ ಅವರ ಚಿಕವೀರ ರಾಜೇಂದ್ರ, ಗೋಕಾಕರ ಸಮರಸವೇ ಜೀವನ, ತರಾಸು ಅವರ ಹಂಸಗೀತೆ, ಅನಕೃ ಅವರ ಸಂಧ್ಯಾರಾಗ, ದೇವುಡು ಅವರ ಮಹಾಕ್ಷತ್ರಿಯ, ತ್ರಿವೇಣಿ ಅವರ ಶರಪಂಜರ, ನಿರಂಜನರ ಚಿರಸ್ಮರಣೆ, ದೇವನೂರು ಅವರ ಕುಸುಮಬಾಲೆ, ಹನೂರು ಅವರ ಅಜ್ಞಾತನೊಬ್ಬನ ಆತ್ಮವೃತ್ತಾಂತ, ಗೋಪಾಲ ಕೃಷ್ಣ ಪೈ ಅವರ ಸ್ವಪ್ನ ಸಾರಸ್ವತ, ಗಜಾನನ ಶರ್ಮ ಅವರ ಚೆನ್ನಭೈರಾದೇವಿ ಮೊದಲಾದ ಕಾದಂಬರಿಗಳು ಜಾಗತಿಕ ಮಟ್ಟದಲ್ಲಿ ನಿಲ್ಲಬಲ್ಲ ಕಲಾಕೃತಿಗಳು ಎಂಬುದು ಅಭಿಮಾನದ ಸಂಗತಿ.

ಮುಂಬೈಯಲ್ಲಿ ನೆಲೆಸಿ ಕಾದಂಬರಿಗಳನ್ನು ರಚಿಸಿ ಸೈ ಎನಿಸಿಕೊಂಡ ಯಶವಂತ ಚಿತ್ತಾಲರ ಶಿಕಾರಿ, ವ್ಯಾಸರಾಯ ಬಲ್ಲಾಳರ ಬಂಡಾಯ, ವ್ಯಾಸರಾವ್ ನಿಂಜೂರು ಅವರ ಚಾಮುಂಡೇಶ್ವರಿ ಭವನ, ಮಿತ್ರಾ ವೆಂಕಟ್ರಾಜ್ ಅವರ ಪಾಚಿಕಟ್ಟಿದ ಪಾಗಾರ ಮೊದಲಾದ ಕೃತಿಗಳು ಸಾಕಷ್ಟು ಜನಪ್ರಿಯವಾಗಿರುವುದು ಗಮನೀಯ ಸಂಗತಿ. ಮುಂಬೈ ಕನ್ನಡ ಲೇಖಕರ ೮೦ಕ್ಕೂ ಹೆಚ್ಚು ವೈವಿಧ್ಯಮಯವಾದ ಕಾದಂಬರಿಗಳು ಪ್ರಕಟಗೊಂಡಿರುವುದು ಅವಲೋಕನೀಯವಾಗಿದೆ. ಈ ಸಾಲಿಗೆ ಇದೀಗ ರಮಾ ಉಡುಪ ಅವರ ‘ಮುಂಬೈ ಬಯೋಸ್ಕೋಪ್’ ಸೇರ್ಪಡೆಯಾಗುತ್ತಿದೆ.

‘ಕಾದಂಬರಿ ಮಧ್ಯಮವರ್ಗದ ಜಗತ್ತಿನ ಮಹಾಕಾವ್ಯ’ ಎಂಬ ಮಾತು ನಿಜವೇ ಆಗಿದೆ. ಜೀವನದ ಎಲ್ಲ ಮುಖಗಳನ್ನು ಪರೀಕ್ಷಿಸಲು ನಿರೂಪಿಸಲು ಪ್ರಶಸ್ತವಾದ ಸಾಹಿತ್ಯ ಪ್ರಕಾರ ಕಾದಂಬರಿ ಎಂಬುದರಲ್ಲಿ ಎರಡು ಮಾತಿಲ್ಲ. “ಸಾಹಿತ್ಯ ಮನುಷ್ಯನನ್ನೂ, ಅವನ ಮೂಲಕ ಬದುಕನ್ನು ಭಾಷೆಯಲ್ಲಿ ಅರಿಯುವ ಅನನ್ಯ ಮಾಧ್ಯಮವಾಗಿದೆ. ಸಾಹಿತ್ಯದ ಕೇಂದ್ರಬಿಂದು ಮನುಷ್ಯನಾಗಿದ್ದು ಅವನ ಬದುಕಿನ ಪಲ್ಲಟಗಳೇ ಸಾಹಿತ್ಯಕ್ಕೆ ಮೂಲದ್ರವ್ಯ” ಎಂಬುದಾಗಿ ಮುಂಬೈನ ಹಿರಿಯ ಸಾಹಿತಿ, ಖ್ಯಾತ ಕಾದಂಬರಿಕಾರ ಯಶವಂತ ಚಿತ್ತಾಲ ಅವರು ಹೇಳಿರುವ ಮಾತಿನಲ್ಲಿ ತಥ್ಯವಿದೆ.

ಪ್ರಸ್ತುತ ರಮಾ ಉಡುಪ ವಿರಚಿತ ‘ಮುಂಬೈ ಬಯೋಸ್ಕೋಪ್’ ಕಾದಂಬರಿ ಮಾಯಾನಗರಿ ಮುಂಬೈನ ಜೀವನ ಶೈಲಿಯ ಮೇಲೆ ಬೆಳಕು ಬೀರುತ್ತದೆ. ಮುಂಬೈನ ಚಾಳ್, ಹೌಸಿಂಗ್ ಸೊಸೈಟಿಗಳಲ್ಲಿನ ಜೀವನ ದರ್ಶನವನ್ನು ಈ ಕೃತಿ ಯಶಸ್ವಿಯಾಗಿ ಮಾಡಿಕೊಡುತ್ತದೆ. ನಗರದ ಬದುಕಿನ ನಾಲ್ಕೈದು ದಶಕಗಳ ಜೀವನಾನುಭವವನ್ನು ಸುಸಂಬದ್ಧವಾಗಿ ನೈಜವಾಗಿ ಚಿತ್ರಿಸಿರುವುದು ಈ ಕೃತಿಯ ಅತಿಶಯತೆ. ಇದೊಂದು ನೇರ ಸರಳ ವಾಸ್ತವಿಕತೆಯನ್ನು ಢಾಳಾಗಿ ಬಿಂಬಿಸುವ ಕೃತಿ. ನಗರಕ್ಕೆ ಎಲ್ಲೆಲ್ಲಿಂದಲೋ ವಲಸೆ ಬಂದ ಜನ ಬದುಕುಕಟ್ಟಿಕೊಂಡು ಸಹಜೀವನ, ಸಮತೋಲನ, ಸಹ ಅಸ್ತಿತ್ವ, ಸಾಮರಸ್ಯದಿಂದ ಬಾಳಿ ಸಾರ್ಥಕತೆಯನ್ನು ಮೆರೆಯುವುದನ್ನು ಹೇಳುವುದೇ ಈ ಕಾದಂಬರಿಯ ಪರಮ ಉದ್ದೇಶ.

ಮನುಷ್ಯ ಸ್ವಭಾವದ ವೈಚಿತ್ರ್ಯ, ನಗರ ಜೀವನದಲ್ಲಾದ ಪಲ್ಲಟಗಳು, ಬದಲಾಗುತ್ತಿರುವ ಮಧ್ಯಮ ವರ್ಗದ ಸಂಸಾರ ಚಿತ್ರಗಳು. ಮಾನವೀಯತೆ, ಭೂತದಯೆ, ವಿವೇಕದ ದಾರಿಗಳು ತೆರೆದುಕೊಳ್ಳುತ್ತಿರುವುದು, ಇತ್ತಿತ್ತಲಾಗಿ ಕುಟುಂಬಗಳಲ್ಲಿ ಸಡಿಲಾಗುತ್ತಿರುವ ಸಂಬಂಧ, ಒಳ್ಳೆಯ ಶಿಕ್ಷಣದಿಂದ ಆರಾಮದಾಯಕವಾಗುತ್ತಿರುವ ಜೀವನಕ್ರಮ, ವರ್ತಮಾನದ ಅರಾಜಕತೆ ಹೀಗೆ ಮುಂಬೈ ನಗರದ ತಮ್ಮ ಬದುಕಿನ ವಿಸ್ತಾರವಾದ ಅನುಭವಕ್ಕೆ ಲೇಖಕರು ಕಾದಂಬರಿಯ ರೂಪವನ್ನು ಕೊಟ್ಟಿದ್ದಾರೆ.

ಈ ಕಾದಂಬರಿಯಲ್ಲಿ ಯಾವುದೇ ದೊಡ್ಡ ಸಮಸ್ಯೆಯಿಲ್ಲ, ತೀರ್ಮಾನವಿಲ್ಲ. ಸುಸಂಸ್ಕೃತ ಜೀವನದ ಪ್ರಭೆಯನ್ನು ಇಲ್ಲಿ ಎತ್ತಿಹಿಡಿಯಲಾಗಿದೆ. ನಗರಗಳೆಂದರೆ ಕಾಂಕ್ರೀಟ್ ಕಾಡು, ನರಕಕೂಪ, ಅಭಾವಲೋಕ, ಶೋಷಣೆ ಅನ್ಯಾಯಗಳೆಲ್ಲ ನಗರದಲ್ಲಿ ನಿರಂತರ, ಮನುಷ್ಯ ಇಲ್ಲಿ ಮನುಷ್ಯನನ್ನೇ ಶಿಕಾರಿ ಮಾಡುತ್ತಾನೆ ಎಂಬೆಲ್ಲ ಅಪಪ್ರಥೆಗಳನ್ನು ನಿವಾರಿಸಿಕೊಂಡ ಕೃತಿ ಇದಾಗಿದೆ. ಇದು ಪಲಾಯನವಾದವಲ್ಲ. ಮುಂಬೈ ನಗರದ ಸಹಜೀವನದ ಸಹಬಾಳ್ವೆಯ ಚಿತ್ರಣ ಇಲ್ಲಿ ಸೊಗಸಾಗಿ ಪಡಿಮೂಡಿದೆ. ನಗರ ಜೀವನದ ಹಲವು ಮುಖಗಳೂ ಸಮಸ್ಯೆಗಳೂ ಪ್ರಸಕ್ತ ಕಾದಂಬರಿಯಲ್ಲಿ ಪ್ರತಿಬಿಂಬಿತವಾಗಿದೆ.

ನಗರದ ಮಧ್ಯಮ ವರ್ಗದ ಜೀವನ ಶೈಲಿ, ವಸತಿ ಸಮಸ್ಯೆ, ಇಲ್ಲಿನ ಬದುಕಿನ ಗದ್ದಲಗೊಂದಲ, ಆರ್ಥಿಕ ಆಯಾಮ, ಅನಿಶ್ಚತತೆ ಇದಾವುದಕ್ಕೂ ತಲೆಕೆಡಿಸಿಕೊಳ್ಳದೆ ದುಡಿಮೆಯಲ್ಲಿ ತೊಡಗಿಸಿಕೊಳ್ಳುವಿಕೆ, ಕುಟುಂಬದ ಉನ್ನತಿಗೆ ಮಹಿಳೆಯರು ಪಡುವ ಪರಿಶ್ರಮ, ಒಂದೇ ಸೂರಿನಡಿ ಸಹಕಾರ ತತ್ವದಲ್ಲಿ ಬಾಳ್ವೆ ನಡೆಸುವ ಪರಿ ಈ ಕಾದಂಬರಿಯಲ್ಲಿ ಸವಿವರವಾಗಿ ಚಿತ್ರಣಗೊಂಡಿದೆ.

ಲೇಖಕರು ತಮ್ಮ ಸುತ್ತಲಿನ ಜೀವನವನ್ನು ತಾವು ಕಂಡಂತೆ ಕಂಡರಿಸಿದ್ದಾರೆ. ಸಮಕಾಲೀನ ನಗರ ಜೀವನದ ನಡೆ ಇಲ್ಲಿ ಅನಾವರಣಗೊಂಡಿದೆ. ಪರಿಮಳ ಯಾ ಪಮ್ಮಿ ಈ ಕೃತಿಯ ನಾಯಕಿ. ಆಕೆಯ ಜೀವನ ದರ್ಶನ ಈ ಕೃತಿಯಲ್ಲಿ ಮೈ ಪಡೆದಿದೆ. ಕಾದಂಬರಿಯ ತಂತ್ರ, ಶೈಲಿ, ಬಂಧ, ಬಿಗಿತನದ ಬಗೆಗೆ ಲೇಖಕರು ತಲೆಕೆಡಿಸಿಕೊಂಡಿಲ್ಲ. ಇದು ರಮಾ ಉಡುಪ ಅವರ ಮೊದಲ ಪ್ರಯತ್ನ. ಮುಂಬೈ ನಿಜವಾಗಿಯೂ ಒಂದು ಕಾಸ್ಮೋಪಾಲಿಟನ್ ನಗರ. ಇಲ್ಲಿನ ಜನರ ಅದಮ್ಯ ಜೀವನೋತ್ಸಾಹ, ಕಾಯಕ ನಿಷ್ಠೆ, ಹೋಟೇಲ್ ಉದ್ಯಮ, ಕನ್ನಡಿಗರ ಶ್ರಮ ಸಂಸಂಸ್ಕೃತಿ ಇವೆಲ್ಲ ಈ ಕಾದಂಬರಿಯಲ್ಲಿ ಚೆನ್ನಾಗಿ ಚಿತ್ರಣಗೊಂಡಿದೆ.

ಇದೊಂದು ಕುಟುಂಬ ಪ್ರಧಾನ ಕಥನದಂತೆ ಕಂಡು ಬಂದರೂ ಅಲ್ಲಿಯ ಬೇರುಗಳು ಸಡಿಲವಾಗುತ್ತಿರುವುದು, ಮಾನವೀಯ ಸಂಬಂಧಗಳ ಸ್ವರೂಪದಲ್ಲಿ ಆದ ಸ್ಥಿತ್ಯಂತರಗಳನ್ನು ಇಲ್ಲಿ ಸೂಕ್ಷ್ಗವಾಗಿ ಗಮನಿಸಬಹುದಾಗಿದೆ. ಇಂದು ವಲಸೆ ಅನಿವಾರ್ಯ, ಸಹಜ. ಹೊಸ ಪರಿಸರದ ಸವಾಲುಗಳನ್ನು ಮನುಷ್ಯ ಎದುರಿಸಿ ಜಟಿಲವಾಗುತ್ತಿರುವ ಬದುಕನ್ನು ಸಹ್ಯವಾಗಿಸಿಕೊಳ್ಳಬೇಕೆಂಬ ಆಶಯ ಈ ಕಾದಂಬರಿಯಲ್ಲಿ ವ್ಯಕ್ತವಾಗಿದೆ. ಇದೊಂದು ಗಮನಾರ್ಹ ಪ್ರಯತ್ನ. ಈ ಕೃತಿಗಾಗಿ ಡಾ.ರಮಾ ಉಡುಪ ಅವರಿಗೆ ಹಾರ್ದಿಕ ಅಭಿನಂದನೆಗಳು.

‍ಲೇಖಕರು avadhi

February 12, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: