ಡಾ ಕೆ ಎಸ್ ಚೈತ್ರಾ ಅಂಕಣ – ಬುದ್ಧ, ಬುದ್ದುವಿನ ಬಂಧ !

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.

ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.

ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!

19

ಮಲೆನಾಡಿನ ಶಿವಮೊಗ್ಗೆಯಲ್ಲಿ ಅಪ್ಪ-ಅಮ್ಮ-ತಂಗಿಯರು ಮತ್ತು ಗೆಳತಿಯರು ಎಂಬ ಪುಟ್ಟ ಪ್ರಪಂಚದಲ್ಲಿ ಬೆಳೆದಿದ್ದ ನನಗೆ ಮಣಿಪಾಲಕ್ಕೆ ಹೋದದ್ದು ಬಾವಿಯಿಂದ ಸಾಗರಕ್ಕೆ ಮೀನನ್ನು ಹಾಕಿದಂತಿತ್ತು. ನನ್ನ ಮಟ್ಟಿಗೆ ಅದು ಮಿನಿ ವಿಶ್ವ! ಭೌಗೋಳಿಕವಾಗಿ ಭಿನ್ನ ಎಂಬುದರ ಜತೆಗೆ ಜನ, ಭಾಷೆ, ರೀತಿ-ನೀತಿ, ಕಲಿಕೆ ಎಲ್ಲವೂ ಹೊಸತು. ಮಣಿಪಾಲಕ್ಕೆ ಹೋಗುತ್ತೇನೆ ಎಂದಾಗಲೇ ಹೆದರಿಸಿದವರು ಸಾಕಷ್ಟು ಜನ. ಅದರೊಂದಿಗೆ ಹಾಸ್ಟೆಲ್ ನಲ್ಲಿ ಇರುವುದು ಎಂದ ಕೂಡಲೇ ಹೌಹಾರಿದ್ದರು. ಕೆಲವರು ‘ಅಲ್ಲಿಗೆ ಡೆಂಟಲ್ ಮಾಡಲು ಹೋಗಿ ಮೆಂಟಲ್ ಆಗುತ್ತಾರೆ!’ ಎಂದು ಪ್ರಾಸಬದ್ಧವಾಗಿಯೂ ಅಂಜಿಕೆ ಹುಟ್ಟಿಸಿದ್ದರು. ಹೊರಗೆ ಧೈರ್ಯಸ್ಥೆಯಂತೆ ಪೋಸ್ ಕೊಟ್ಟರೂ ನನಗೆ ಒಳಗೊಳಗೇ ಪುಕಪುಕ.  ಇಲ್ಲಿ ಬೆಳಿಗ್ಗೆ ಓದಲು ಅಪ್ಪ ಎಬ್ಬಿಸಿದರೆ, ಅಮ್ಮ ಸ್ನಾನಕ್ಕೆ ಟವೆಲ್ ಸಿದ್ಧ ಮಾಡಿಡುತ್ತಿದ್ದರು. ಜಡೆ ಹಾಕಲು ಬರಲ್ಲ, ಇಸ್ತ್ರಿ ಮಾಡಲು ಭಯ ಹೀಗೆ ಬರದೇ ಇರುವುದರ ಪಟ್ಟಿ ಸಾಕಷ್ಟು ದೊಡ್ಡದಿತ್ತು. ಇದೆಲ್ಲಾ ಸರಿ ; ಅದರ ಜತೆ ಮತ್ತೊಂದು ದೊಡ್ಡ ತಲೆನೋವು; ಬಸ್ಸಿನ ಪ್ರಯಾಣ.

ವಾಂತಿ ಬಸ್

ಬಸ್ ಪ್ರಯಾಣ ಎಂದರೆ ಮೊದಲಿನಿಂದಲೂ ನನಗಾಗದು. ಅದರಲ್ಲೂ ಆಗುಂಬೆಯ ಸರ್ಪದಂಥ ಅಂಕು-ಡೊಂಕಿನ ರಸ್ತೆಯಲ್ಲಿ ಕೇಳಬೇಕೆ? ಹೊಟ್ಟೆಯಲ್ಲಿದ್ದುದು ಹೊರಗೆ ಬರುವಂತೆ ವಾಕರಿಕೆ. ಗಾಳಿಗೆ ಮುಖ ಒಡ್ಡಿದರೆ ಸ್ವಲ್ಪ ಹಾಯೆನಿಸುತ್ತದೆ ಎಂದು ಕಿಟಿಕಿಯತ್ತ ಮುಖ ಮಾಡಿದರೆ ಅಷ್ಟೇ! ಹೇರ್ ಪಿನ್ ತಿರುವುಗಳು, ಆಗಲೋ ಈಗಲೋ ಮೈಮೇಲೆ ಬೀಳುವಂತಿರುವ ಮರಗಳು, ವಾಲಿದರೆ ಬೀಳುತ್ತೆವೇನೋ ಅನ್ನಿಸುವಷ್ಟು ಸನಿಹದ ಪ್ರಪಾತ..ಹೆದರಿಕೆಗೆ ವಾಕರಿಕೆ ಅಲ್ಲ ವಾಂತಿ ಬರುವುದು ಗ್ಯಾರಂಟಿ. ಹಾಗಾಗಿಯೇ ಇಂಥ ಮಿನಿ ಬಸ್ಸಿಗೆ ವಾಂತಿ ಬಸ್ ಎಂಬ ಹೆಸರೂ ಇತ್ತು! ಆದರೂ ಇದ್ಯಾವುದನ್ನೂ ಲೆಕ್ಕಿಸದೇ ಕರ್ಣಕಠೋರವಾದ ಹಾಡಿಗೆ ತಲೆ-ಮೈದೂಗಿಸುತ್ತಾ ಸ್ಟೇರಿಂಗ್ ತಿರುಗಿಸುವ ಡ್ರೈವರ್ ಏಕಕಾಲಕ್ಕೆ ಅಧೈರ್ಯ-ಧೈರ್ಯ ಎರಡನ್ನೂ ಮೂಡಿಸುತ್ತಿದ್ದದ್ದು ಸುಳ್ಳಲ್ಲ! ಈ ಘಾಟಿ ಹತ್ತಿ ಇಳಿಯುವಷ್ಟರಲ್ಲಿ ಕಿವಿಯಲೆಲ್ಲಾ ಒಂಥರಾ ಸದ್ದು. ಅದರೊಂದಿಗೆ ಮಣಿಪಾಲ ಬಂದೊಡನೆ ಇನ್ನಷ್ಟು ಹೆದರಿಕೆ. ಇದಿಷ್ಟೇ ಸಾಲದು ಎಂಬಂತೆ ನಾನು ಕಾಲೇಜು ಸೇರಿದ್ದು ಮಳೆಗಾಲದಲ್ಲಿ..ಹಾಗಾಗಿ ಧೋ ಎಂದು ಸುರಿವ ಮಳೆಯ ಶ್ರುತಿ! ಕಾಲೇಜು ಸೇರಿಸಿ, ಹಾಸ್ಟೆಲ್ಲಿನಲ್ಲಿ ಗೆಳತಿಯೊಡನೆ ಬಿಟ್ಟು ಅಪ್ಪ-ಅಮ್ಮ ಮರಳಿ ಹೊರಟರು. ಶುರುವಾಯ್ತು ನನ್ನ ಬದುಕಿನ ಹೊಸ ಅಧ್ಯಾಯ.

ಹುಡುಗರ ಪಟಾಲಂನಲ್ಲಿ !

ಹಾಸ್ಟೆಲ್ಲಿನಲ್ಲಿ ಗೆಳತಿಯರು ಇದ್ದರು, ತೊಂದರೆ ಇರಲಿಲ್ಲ. ಆದರೆ ಲ್ಯಾಬ್, ಪ್ರಾಕ್ಟಿಕಲ್ ಕ್ಲಾಸಿನಲ್ಲಿ ಅಕ್ಷರದ ಪ್ರಕಾರ ಹತ್ತು-ಹದಿನೈದು ವಿದ್ಯಾರ್ಥಿಗಳ  ಒಂದೊಂದು ಗುಂಪು. ನನ್ನ ಗುಂಪಿನಲ್ಲಿ ಹುಡುಗರೇ ಹೆಚ್ಚು. ಪುಟ್ಟ, ಆಧುನಿಕತೆಗೆ ತೆರೆದುಕೊಳ್ಳದ ಊರಿನಲ್ಲಿ ಬೆಳೆದ ನನಗೆ ಹುಡುಗರು ಎಂದರೆ ನಡುಕ. ಹುಡುಗರು  ಎಂದು ಹೆದರಿದರೂ ಪಾಠ ಕಲಿಯುತ್ತಾ, ಕೆಲಸ ಮಾಡುತ್ತಾ ಎಲ್ಲರ ಪರಿಚಯವಾಯಿತು. ಹುಡುಗರೂ ಮನುಷ್ಯರೇ ಎಂದು ಅರಿವಾಯಿತು. ಮೊದಮೊದಲು ಹುಡುಗರು ನಾನಿದ್ದಾಗ ಬಹಳ ಎಚ್ಚರದಿಂದ, ಘನಗಂಭೀರರಾಗಿ ವರ್ತಿಸುತ್ತಿದ್ದರು. ಆದರೆ ನಾಟಕ ದಿನವೂ ಸಾಧ್ಯವೇ? ನಿಧಾನವಾಗಿ ಸಹಜಸ್ವಭಾವ ಬೆಳಕಿಗೆ ಬರಲಾರಂಭಿಸಿತು. ತಮಾಷೆ, ಕೀಟಲೆ, ಜಗಳ, ಬೈಗುಳ ಎಲ್ಲವೂ ಶುರುವಾಯಿತು. ನನ್ನಿಂದ ಇನ್ನೊಂದು ದೊಡ್ಡ  ಲಾಭವೂ ಇತ್ತು. ಅಚ್ಚುಕಟ್ಟಾಗಿ ಕ್ಲಾಸಿನಲ್ಲಿ ಕುಳಿತು ಪುಟಗಟ್ಟಲೇ ನೋಟ್ಸು ಬರೆಯುತ್ತಿದ್ದ ಕುಡುಮಿ ನಾನಾಗಿದ್ದೆ. ಹೀಗಾಗಿ ಕ್ಲಾಸಿಗೆ ಚಕ್ಕರ್ ಹೊಡೆದು ಆಮೇಲೆ ಪುಸಲಾಯಿಸಿ ನನ್ನ ನೋಟ್ಸ್ ಜೆರಾಕ್ಸ್ ಮಾಡಿಕೊಳ್ಳುತ್ತಿದ್ದರು. ವರ್ಷವಿಡೀ ಮಜಾ ಮಾಡಿ ಪರೀಕ್ಷೆಗೆ ಹದಿನೈದು ದಿನಗಳಿರುವಾಗ ಹಗಲು ರಾತ್ರಿ ಓದಿ (ಊಟ-ತಿಂಡಿ, ಸ್ನಾನ, ಶೇವ್, ನಿದ್ದೆ ಎಲ್ಲವನ್ನೂ ಬಿಟ್ಟು) ಒಳ್ಳೆಯ ಅಂಕ ಗಳಿಸಿ ಪಾಸಾಗುತ್ತಿದ್ದರು! ಇದರೊಂದಿಗೆ ಹಾಸ್ಟೆಲ್ಲಿನಲ್ಲಿದ್ದ ಅವರಿಷ್ಟದ ಹುಡುಗಿಯರ ಬಗ್ಗೆ ಒಂದಿಷ್ಟು ಇನ್ಫಾರ್ಮೇಶನ್ ಕೊಡುವವಳೂ ನಾನಾಗಿದ್ದೆ. ಹೀಗೆ ನಾನೂ ಹುಡುಗರ ಗುಂಪಿನ ಸಕ್ರಿಯ ಮೆಂಬರ್ ! ಅವರ ಲವ್ ಸ್ಟೋರಿ, ಕ್ರಷ್, ಹಾರ್ಟ್ ಬ್ರೇಕ್, ಬಿಯರ್ ಛಾಲೆಂಜ್ , ಫೈಟು ಎಲ್ಲವೂ ನನಗೆ ಗೊತ್ತಿತ್ತು.ಆರಂಭದಲ್ಲಿ ವಿಚಿತ್ರ ಅನ್ನಿಸಿದರೂ ಕ್ರಮೇಣ ಎದುರಾಎದುರು ಎಲ್ಲವನ್ನೂ ಹೇಳಿ ಮರುಕ್ಷಣಕ್ಕೆ ಅದೆಲ್ಲವನ್ನೂ ಮರೆವ ಪ್ರಾಯೋಗಿಕ ಸ್ವಭಾವದ  ಹುಡುಗರು ಮೆಚ್ಚಿಗೆಯಾದರು! ಹಾಸ್ಟೆಲ್ಲಿನ ಹುಡುಗಿಯರ ನಡುವಿನ ಗಾಸಿಪ್, ಶಿಸ್ತು, ನಾಜೂಕುತನ, ಸೂಕ್ಷ್ಮ ಸ್ವಭಾವ ಅದರಿಂದ ಇದು ಭಿನ್ನ ಪ್ರಪಂಚ! ಅಂತೂ ನನ್ನಿಂದ ಸಾಕಷ್ಟು ಬೈಸಿಕೊಂಡು, ನನಗೂ ಒಂದಿಷ್ಟು ಬೈದು, ಕಲಿತು ಕಲಿಯುತ್ತಾ  ಆತ್ಮೀಯರಾದೆವು. ಹುಡುಗರು ‘ ಚೈತ್ರಾಳನ್ನು, ನಮ್ಮ ಚೈ ಆಗಿ ರೆಡಿ ಮಾಡಿದೆವು ’ ಎಂದು ಖುಷಿ ಪಟ್ಟರೆ ನಾನು ‘ ಈ ತರ್ಲೆಗಳನ್ನು ಜೆಂಟಲ್ಮೆನ್ ಮಾಡಿದ್ದೇ ನಾನು’ ಎಂದು ಹೆಮ್ಮೆ ಪಟ್ಟೆ!

ರಾಖಿ ಬ್ರದರ್

ಆದರೆ ನನ್ನ ಮುಂದಿದ್ದ ಸಹಪಾಠಿ ಚೂಂಗ್ ಫೆಯಾಂಗ್ ಮಾತ್ರ ಇವರೆಲ್ಲರಿಗಿಂತ ಬೇರೆಯೇ ರೀತಿ! ಎಲ್ಲರಿಂದ ದೂರವಾಗಿ, ಗಂಭೀರವಾಗಿ ಧ್ಯಾನದಲ್ಲಿರುವಂತೆ ಕುಳಿತ ಫೆಯಾಂಗ್‌ಗೆ ಸಹಪಾಠಿಗಳು ಇಟ್ಟ ಅಡ್ಡ ಹೆಸರು `ಬುದ್ಧ’. ಹರಟೆ, ತಮಾಷೆ, ಪೋಲಿ ಜೋಕ್ಸ್, ಹುಡುಗಿಯರ ವಿವರ ಉಹೂಂ ಯಾವುದೂ ಬೇಡ!  ಮಲೇಷ್ಯಾದ ಮೂಲೆಯಿಂದ ಬಂದ ಆತ, ಮಲೆನಾಡಿನ ಮುಗ್ಧೆ ನಾನು. ನಮ್ಮಿಬ್ಬರಿಗೂ ರೂಪದಲ್ಲಷ್ಟೇ ಅಲ್ಲ, ಸ್ವಭಾವದಲ್ಲೂ ಅಜಗಜಾಂತರ ವ್ಯತ್ಯಾಸ. ಮಾತೇ ಬೇಡದ ಅಂತರ್ಮುಖಿ ಆತನಾದರೆ, ಮಾತಿಲ್ಲದೇ ಇರಲು ಸಾಧ್ಯವಿಲ್ಲದ ನಾನು! ನನಗೆ ಇವನನ್ನು ಕಂಡರೆ ಎಲ್ಲಿಲ್ಲದ ಕುತೂಹಲ. ಕೆದಕಿ ಕೆದಕಿ ಮಾತನಾಡಿಸಿ, ಪೀಡಿಸಿದಾಗ ಯಾಕೋ ಏನೋ , ನನಗೆ ಮಾತ್ರ ಬೈಯ್ಯುತ್ತಿರಲಿಲ್ಲ. (ಕಡೆಗೆ ಕೇಳಿದಾಗ ಎರಡು ಜಡೆ ಹಾಕಿದ, ಹೈಸ್ಕೂಲ್ ಹುಡುಗಿಯಂತೆ ಕಾಣುವ ನಿನ್ನಂಥ ಬುದ್ದುಗೆ  ಗದರಬೇಕು ಎನಿಸಲಿಲ್ಲ. ಅದೂ ಅಲ್ಲದೇ ಒಂದೊಮ್ಮೆ ಬೈದಿದ್ದರೂ ಹಠ ಬಿಡದವಳು ನೀನು ಎಂದು ನಕ್ಕಿದ್ದ). ನಿಧಾನವಾಗಿ ನಮ್ಮ ನಡುವೆ ಗೆಳೆತನ ಬೆಳೆದಿತ್ತು. ಅದೇನೂ ರಕ್ತ ಸಂಬಂಧವಲ್ಲ. ಜಾತಿ, ಧರ್ಮ, ದೇಶ, ಭಾಷೆ ಮೀರಿದ ಸುಂದರ ಬಂಧ. 

ರಾಖಿ ಹಬ್ಬದ ದಿನ ನನ್ನ ಜತೆಯ ಹುಡುಗರು ‘ರಾಖಿ ಬೇಡ’ ಎಂದು ಚಕ್ಕರ್ ಹಾಕುತ್ತಿದ್ದರು. ಕಾಲೇಜಿಗೆ ಬಂದರೂ ಕಟ್ಟಿಸಿಕೊಳ್ಳುತ್ತಿರಲಿಲ್ಲ. ತಾನಾಗಿ ಬಹಳ ಆಸಕ್ತಿಯಿಂದ ರಾಖಿ ಬಗ್ಗೆ ಕೇಳಿ, ನನ್ನಿಂದ ರಾಖಿ ಕಟ್ಟಿಸಿಕೊಂಡವನು ಈ ಫೆಯಾಂಗ್!  ನನಗಿಂತ ಬರೋಬ್ಬರಿ ಮೂರು ವರ್ಷ ದೊಡ್ಡವನಾದ, ಸ್ವಂತ ಅಕ್ಕ-ತಂಗಿಯರಿಲ್ಲದ ಅವನಿಗೂ, ಅಣ್ಣ ತಮ್ಮರಿಲ್ಲದ ನನಗೂ ರಾಖಿಯ ಮೂಲಕ ಅಕ್ಕರೆಯ ಅನುಬಂಧ. ನನಗೆ ಭಿನ್ನ ಸಂಸ್ಕೃತಿ ಅರಿಯುವ ಕುತೂಹಲವಾದರೆ ಆತನಿಗೆ ಇಲ್ಲಿಯದ್ದನ್ನು ಕಲಿತು ಹೊಂದಿಕೊಳ್ಳುವ ಅನಿವಾರ್ಯತೆ. ಆ ಪ್ರಕ್ರಿಯೆಯಲ್ಲಿ ನೆರವಾಗುತ್ತಾ, ಬಂಧು-ಬಾಂಧವರನ್ನು ಬಿಟ್ಟು ಏಕಾಂಗಿಯಾಗಿದ್ದ ಅವನ ನೋವಿಗೆ ಕಿವಿಯಾದವಳು ನಾನು. ಅದರೊಂದಿಗೆ ಸಾಹಿತ್ಯ-ಸಿನಿಮಾ- ರಾಜಕೀಯ-ಓದಿನಲ್ಲಿದ್ದ ಸಮಾನ ಆಸಕ್ತಿ, ಸ್ನೇಹಕ್ಕೆ ಕಾರಣ. 

ನಾನಂತೂ ಆತನನ್ನು ಕೇಳದ ಪ್ರಶ್ನೆಯಿಲ್ಲ. ಚೀನಿ ಮೂಲದವನಾದ್ದರಿಂದ ‘ಜಿರಲೆ, ಹಲ್ಲಿ ಎಲ್ಲಾ ತಿನ್ನುತ್ತೀರಾ? ನಿಮ್ಮಲ್ಲಿ ಎಲ್ಲರೂ ಒಂದೇ ರೀತಿ ಇರುವಾಗ ಗುರುತಿಸುವುದು ಹೇಗೆ? ನಿಮ್ಮ ಅಜ್ಜಿಯೂ ಸ್ಕರ್ಟ್ ಹಾಕ್ತಾರಾ? ತಲೆಕೂದಲು ಅಷ್ಟು ನುಣುಪಾಗಿ ಹೊಳೆಯಲು ಯಾವ ಎಣ್ಣೆ ಹಾಕುತ್ತೀರಾ?’ ಹೀಗೆ ಮನಸ್ಸಿಗೆ ಬಂದದ್ದೆಲ್ಲಾ ಕೇಳಿದ್ದೇ ಕೇಳಿದ್ದು. ನಗುತ್ತಲೇ ಉತ್ತರಿಸಿದರೂ ಕೆಲವೊಮ್ಮೆ ಹಾಗೆ ಕೇಳಬಾರದು ಎಂದೂ ಎಚ್ಚರಿಸುತ್ತಿದ್ದ. ಸ್ವಭಾವತಃ ಮೌನಿ, ಮೆಲುಮಾತಿನ ಆತ ಒಮ್ಮೆ ನಾನು ಟೀಯನ್ನು ಕಪ್ ನಿಂದ ಸಾಸರ್ ಗೆ ಹಾಕಿ ಸೊರ್ ಎಂದು ಸಶಬ್ದವಾಗಿ ಕುಡಿದಿದ್ದನ್ನು ಕಂಡು-ಕೇಳಿ ದಂಗಾಗಿ ಕುಳಿತಿದ್ದ ! ಆತನಿಗಾದ ಶಾಕ್ ಕೂಡಲೇ ಗ್ರಹಿಸಿದ ನಾನು, ನಿಮ್ಮ ಮನೆಗೆ ಬಂದಾಗ ಹೀಗೆ ಟೀ ಕುಡಿಯುತ್ತೇನೆ ಎಂದು ಆಗಾಗ್ಗೆ  ಬ್ಲಾಕ್ ಮೇಲ್ ಮಾಡಿದ್ದೂ ಇದೆ. ನಮ್ಮ ಜನ ಜೀವನ-ಸಂಸ್ಕೃತಿ ವಿವರಿಸುವಾಗ ಆಸಕ್ತಿಯಿಂದ ಎಲ್ಲವನ್ನೂ ಕೇಳಿ ಗ್ರಹಿಸುತ್ತಿದ್ದ ಆತ ದೇವರ ವಿಷಯ ಬಂದಾಗಲೆಲ್ಲಾ  ನಿರ್ಲಿಪ್ತ. ಏಕೆಂದರೆ ಯಾವ ದೇವರನ್ನೂ ನಂಬದ ಆತ, ನಾಸ್ತಿಕ!  ತೀರಾ ಆಸ್ತಿಕಳಲ್ಲದಿದ್ದರೂ ನಮಗಿಂತ ಮೇಲಿನ ಅದೃಶ್ಯ ಶಕ್ತಿಯಲ್ಲಿ ನಂಬಿಕೆ ಹೊಂದಿದ ನನಗೂ ಆತನಿಗೂ ಆಗಾಗ್ಗೆ ಚರ್ಚೆ ವಿವಾದ ಇದ್ದದ್ದೇ!

 ಕಾಲಿಗೆ ಪೆಟ್ಟು

ದಂತ ವೈದ್ಯಕೀಯದ ಕಡೆಯ ವರ್ಷ. ಪರೀಕ್ಷೆಯ ಕಾವು ಜೋರಾಗಿ ನಾಲ್ಕು ದಿನವಿದೆ ಎನ್ನುವಾಗ ಬೆಳಿಗ್ಗೆ ಸ್ನಾನಕ್ಕೆ ಬಿಸಿ ನೀರನ್ನು ಹೊತ್ತು ಓಡುತ್ತಿದ್ದೆ.  ಭಾರವಾದ ಬಕೆಟ್ ನನ್ನ ಕಾಲ ಮೇಲೆ ಬಿದ್ದು ಲಿಗಮೆಂಟ್ ಟೇರ್ ಆಗಿತ್ತು.. ಓದಲೆಂದು ಅದನ್ನು ನಿರ್ಲಕ್ಷಿಸಿದ ಪರಿಣಾಮ ಪೂರಿಯಂತೆ ಉಬ್ಬಿದ ಪಾದ, ಹೆಜ್ಜೆಯಿಡಲಾಗದಷ್ಟು ನೋವು. ಕ್ಲಿನಿಕ್ ಗೆ ಕುಂಟುತ್ತಲೇ ಹೋಗಿದ್ದೆ. ನಿಂತು ಕೆಲಸ ಮಾಡುವಾಗ ನೋವಿಗೆ ಕಣ್ಣಲ್ಲಿ  ನೀರು ಬರುವಂತಾಗುತ್ತಿತ್ತು. ಈ ನೋವಿನ ಜತೆ ಪರೀಕ್ಷೆಗೆ ಓದಲಾಗದ ಬಗ್ಗೆ ಹೆದರುತ್ತಾ ಕುಳಿತಿದ್ದ ನನ್ನ ಜತೆ ಇದ್ದವನು  ಫೆಯಾಂಗ್. ಏನೂ ಹೇಳದೇ ಮೌನವಾಗಿ ತನ್ನ ಕೆಲಸ ಮಾಡುತ್ತಿದ್ದ ಆತನ ಸಣ್ಣ ಕಣ್ಣುಗಳಲ್ಲಿ ಏನಿತ್ತೋ, ತಿಳಿಯುವ  ಸ್ಥಿತಿಯಲ್ಲಿ ನಾನಿರಲಿಲ್ಲ.

ಆದರೆ ಮರುದಿನ ಹಾಸ್ಟೆಲ್‌ಗೆ ವಾಚ್‌ಮನ್ ತಂದುಕೊಟ್ಟದ್ದು ಪುಟ್ಟ ಪೊಟ್ಟಣ. ಅದರಲ್ಲಿದ್ದದ್ದು ಕುಂಕುಮ. ಜತೆಗೊಂದು ಚಿಕ್ಕ ಚೀಟಿ. ಕೊರೆದಂತಿದ್ದ ಸಣ್ಣ ಅಕ್ಷರದ ಚಿರಪರಿಚಿತ ಕೈ ಬರಹ, ಫೆಯಾಂಗ್‌ನದ್ದು. ‘ಈವರೆಗೆ ದೇವರನ್ನು ನಂಬಿಲ್ಲ. ಯಾವ ದೇವಸ್ಥಾನಕ್ಕೂ ಹೋಗಿಲ್ಲ. ಆದರೆ ಸದಾ ನಗುತ್ತಾ-ನಗಿಸುತ್ತಿದ್ದ ನಿನ್ನ ಕಣ್ಣೀರು ಕಂಡು ತುಂಬಾ ದುಃಖವಾಯಿತು. ಏನೂ ಮಾಡಲಾಗದ ಅಸಹಾಯಕತೆ. ಹಾಗಾಗಿ ನೀನೇ ಹೇಳುವ ಮೇಲಿನ ಶಕ್ತಿಗೆ ಮೊರೆ ಹೋಗಿದ್ದೇನೆ. ಬುದ್ಧ, ಕೃಷ್ಣ ಯಾರಾದರೂ ಆಗಲಿ, ಮನಸ್ಸಿಟ್ಟು ಬೇಡಿದ್ದೇನೆ, ವಾಚ್ಮನ್ ದೇವಸ್ಥಾನದಿಂದ ತಂದು ಕೊಟ್ಟ ಕುಂಕುಮ ನಿನಗಾಗಿ!  ನೀನು ನಂಬಿದ ದೇವರು ಕೈ ಹಿಡಿದು ನಡೆಸುತ್ತಾನೆ. ನೋವು ಕಡಿಮೆಯಾಗಿ, ಪರೀಕ್ಷೆಯಲ್ಲಿ ಚೆನ್ನಾಗಿ ಮಾಡುತ್ತೀಯಾ ಎಂದು ಆಶಿಸುತ್ತಾ, ನಿನ್ನ ಅಣ್ಣ ‘

ಕಾಲಿನ ನೋವು, ಊತ ಹಾಗೇ ಇತ್ತು. ಆದರೆ ಪತ್ರ ಓದಿ ಕಣ್ಣಲ್ಲಿ ನೀರಾಡಿದ್ದು ಅದರಿಂದಲ್ಲ. ದೇವರನ್ನು ಮೀರಿದ ಮಾನವ ಸಂಬಂಧದ  ಅಸ್ತಿತ್ವದ ಬಗ್ಗೆ!  ನಿಧಾನವಾಗಿ ಕಾಲು ಸರಿಯಾಯಿತು, ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳು ಬಂದವು. ಕಾಲವೂ ಸರಿಯಿತು. ವೃತ್ತಿಪರರಾಗಿ, ಸಂಸಾರಸ್ಥರಾಗಿ ನಾವಿಂದು ಬೇರೆ ದೇಶಗಳಲ್ಲಿದ್ದರೂ ನನ್ನ ಮಕ್ಕಳಿಗೆ `ಮಲೇಶ್ಯನ್ ಮಾವ ‘ ಎಂದರೆ ಖುಷಿ. ಏಕೆಂದರೆ ಕಟ್ಟಿದ ರಾಖಿ ಬರೀ ದಾರವಾದರೂ ಮನಸ್ಸಿನದ್ದು ಮಾತ್ರ ಬಿಗಿ ಬಂಧ, ಅಪರೂಪದ ಅನುಬಂಧ !  

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 31, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: