ಡಾ ಕೆ ಎಸ್ ಚೈತ್ರಾ ಅಂಕಣ – ಪ್ಲೀಸ್ ಬಿಟ್ಟುಬಿಡಿ…

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.

ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.

ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!

20

ಆತ  ಮುಳ್ಳು ಕಲ್ಲು ಲೆಕ್ಕಿಸದೇ ಓಡುತ್ತಿದ್ದ. ಮುಖದಿಂದ ಧಾರಾಕಾರವಾಗಿ ಸುರಿವ ಬೆವರು, ಹರಿದ ಉಡುಪು, ತೋಳಿನಿಂದ ಸುರಿವ ರಕ್ತ.. ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚುತ್ತಿತ್ತು. ಕಡೆಗೂ ಆತ ಓಡಿ, ಹಾರಿ, ಪೊದೆಯ ಹಿಂದೆ ಅಡಗಿ ತನ್ನ ಗನ್ ಸರಿಯಾಗಿ ಗುರಿಯಿಟ್ಟು ಹೊಡೆದೇ ಬಿಟ್ಟ. ಗಡಿ ದಾಟಲು ಪ್ರಯತ್ನಿಸುತ್ತಿದ್ದ ಶತ್ರು ಅಲ್ಲೇ ಕುಸಿದು ಬಿದ್ದ.ಅಪಾರ ನೋವಿದ್ದರೂ ಮೇಲೆ ಹಾರಿದ ರಾಷ್ಟ್ರಧ್ವಜ ಕಂಡು ನೆಟ್ಟಗೆ ನಿಂತು ಸಲ್ಯೂಟ್ ಹೊಡೆದ  ಈತನ ಮುಖದಲ್ಲಿ ಹೆಮ್ಮೆ, ಅದಕ್ಕೆ ಸರಿಯಾಗಿ ದೇಶಭಕ್ತಿ ಗೀತೆಯ ಸಂಗೀತ. ಸಿನಿಮಾ ಮುಗಿದಿತ್ತು. ಆದರೆ ನನ್ನ ಮನಸ್ಸಿನಲ್ಲಿ ಅದೇ ಗುಂಗು.

ಸಣ್ಣವಳಿರುವಾಗ ಸಮವಸ್ತ್ರ ಧರಿಸಿ ದೇಶ ಕಾಯುವ ಸೈನಿಕಳಾಗಬೇಕು ಎಂಬ ಪುಟ್ಟ ಕನಸು ಇದ್ದಿದ್ದು ನಿಜ. ಕಾರಣ ಅಪ್ಪನಿಗೆ ಸೈನಿಕರ ಮೇಲಿದ್ದ ಅಭಿಮಾನ. ಮನೋವೈದ್ಯರಾಗಿರುವ ಅಪ್ಪನಿಗೆ  ವೈದ್ಯರಾಗಿ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಎಂಬ ಇಚ್ಛೆ ಇತ್ತು. ಅದಕ್ಕೆ ಸರಿಯಾಗಿ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಮೌಖಿಕ ಪರೀಕ್ಷೆಗೆ ಕರೆ ಬಂದಿತ್ತು. ಅಪ್ಪ ಅದಕ್ಕಾಗಿ ಹೇಗೋ ದುಡ್ಡು ಹೊಂದಿಸಿ ಉತ್ತಮವಾದ ಬಟ್ಟೆಯನ್ನೂ ಹೊಲಿಸಿ ಸಿದ್ಧರಾಗಿದ್ದರಂತೆ. ಆದರೆ ಕೌಟುಂಬಿಕ ಕಾರಣಗಳಿಂದ ಪರೀಕ್ಷೆಗೆ ಹಾಜರಾಗಲಿಲ್ಲ.ನಂತರ ಪ್ರತಿಷ್ಠಿತ ನಿಮ್ಹಾನ್ಸ್ ನಲ್ಲಿ ಮನೋವೈದ್ಯಕೀಯ ಓದಿ, ಶಿವಮೊಗ್ಗೆಯಂಥ ಪುಟ್ಟ ಊರಿಗೆ ಬಂದು ಮೂವತ್ತು ವರ್ಷಗಳ ಕಾಲ ಸುತ್ತಮುತ್ತಲ ಹಳ್ಳಿಗಳಲ್ಲಿ ಉಚಿತ ಶಿಬಿರ ಮಾಡಿ ಮನೋರೋಗಗಳ ಬಗ್ಗೆ ಅರಿವು ಮೂಡಿಸಿದವರು ಅಪ್ಪ. ಸುಮಾರು ಐದು ದಶಕಗಳ ಸಾರ್ಥಕ ವೃತ್ತಿ ಜೀವನದ ಬಗ್ಗೆ ಸಂಪೂರ್ಣ ತೃಪ್ತಿ ಇದೆ. ಆದರೂ ಆಗಾಗ್ಗೆ ತಪ್ಪಿದ ಆ ಅವಕಾಶದ ಬಗ್ಗೆ ನೆನೆಯುವುದುಂಟು. ಮಾತ್ರವಲ್ಲ ಅಪ್ಪನ ಆಸ್ಪತ್ರೆಯಲ್ಲಿ ಭಾರತೀಯ ಸೇನೆಯಲ್ಲಿರುವವರಿಗೆ ಉಚಿತ ಚಿಕಿತ್ಸೆ ನೀಡುವುದನ್ನು ಮೊದಲಿನಿಂದಲೂ ಪಾಲಿಸಿಕೊಂಡು ಬಂದಿದ್ದಾರೆ.

  ಸಿನಿಮಾ ಪ್ರಭಾವ

ಅಪ್ಪನ ಮಾತು, ಅಭಿಮಾನ ಕೇಳಿ-ನೋಡಿ ನನಗೂ ಹಾಗೆನಿಸುತ್ತಿತ್ತು. ಆದರೆ ಹೈಸ್ಕೂಲಿನಲ್ಲಿ ಸೈನಿಕರ ಕುರಿತಾದ ಸಾಕ್ಷ್ಯಚಿತ್ರ ನೋಡಿದ್ದೇ ಹೆದರಿಕೆಯಾಯಿತು. ಅದೆಷ್ಟು ಕಠಿಣ ತರಬೇತಿ, ಶಿಸ್ತು. ನಾನೆಂದುಕೊಂಡಂತೆ ಬರೀ ಯೂನಿಫಾರ್ಮ್ ಧರಿಸಿ ಧ್ವಜಕ್ಕೆ ಸಲ್ಯೂಟ್ ಹೊಡೆಯುವುದಲ್ಲ! ಪ್ರಾಣವನ್ನೇ ಒತ್ತೆ ಇಟ್ಟು ದೇಶ ಕಾಯುವ ಕೆಲಸ.ದೈಹಿಕ, ಮಾನಸಿಕ ಕ್ಷಮತೆ ಜತೆ ಸಮರ್ಪಣಾ ಭಾವದಿಂದ ಮಾಡಬೆಕಾದ ಕೆಲಸವದು. ಸೈನಿಕರ ಬಗ್ಗೆ ಅಭಿಮಾನ- ಗೌರವ ಹೆಚ್ಚಿತು, ಆದರೆ ವೃತ್ತಿಯ ಆಯ್ಕೆ ಬದಲಾಯಿತು! ನನ್ನ ಕತೆ ಹೀಗಾದರೆ ಪುಟ್ಟ ತಂಗಿ ಶುಭ್ರತಾ ಸಣ್ಣವಳಿರುವಾಗ ಏನಾಗುತ್ತೀಯಾ ಎಂದರೆ ಕೂಡಲೇ ಸೈನಿಕ ಎನ್ನುತ್ತಿದ್ದಳು.1990 ರಲ್ಲಿ ಮುತ್ತಿನ ಹಾರ (ವಿಷ್ಣುವರ್ಧನ್, ಸುಹಾಸಿನಿ ಅಭಿನಯದ , ರಾಷ್ಟ್ರಪ್ರಶಸ್ತಿ ಪುರಸ್ಕೃತ ಈ ಸಿನಿಮಾ ಸೈನಿಕನ ವೈಯಕ್ತಿಕ ಮತ್ತು ವೃತ್ತಿ ಬದುಕಿನ ನೈಜ ಚಿತ್ರಣವನ್ನು ಯಥಾವತ್ತಾಗಿ ನಿರೂಪಿಸುತ್ತದೆ.) ಬಂದಾಗ ಆಕೆ ಬಹುಶಃ ಎರಡನೇ ಕ್ಲಾಸಿನಲ್ಲಿದ್ದಳು. ಬಹಳ ಖುಷಿಯಿಂದ ನಮ್ಮೆಲ್ಲರ ಜತೆ ಸಿನಿಮಾಕ್ಕೆ ಬಂದಿದ್ದಳು. ಬಿಟ್ಟ ಕಣ್ಣು ಮಿಟುಕಿಸದೇ ಪೂರ್ತಿ ಸಿನಿಮಾ ನೋಡಿದ್ದಳು. ಮನೆಗೆ ಬರುವಾಗ ಕಣ್ಣು ಕೆಂಪಾಗಿತ್ತು. ಮನೆಯೊಳಗೆ ಕಾಲಿಟ್ಟಿದ್ದೇ “ ನಾನು ಸೈನಿಕ ಆಗಲ್ಲ. ಪಾಪ ಅಚ್ಚಪ್ಪ..” ಎಂದು ಜೋರಾಗಿ ಘೋಷಿಸಿದ್ದಳು!

ಮಣಿಪಾಲದಲ್ಲಿ ಕಲಿಯುವಾಗ ಎಲ್ಲೋ ಒಮ್ಮೊಮ್ಮೆ ಸೇನೆಯಲ್ಲಿದ್ದವರು ಕ್ಲೀನಿಂಗ್, ಸಾಮಾನ್ಯ ಚೆಕ್ ಅಪ್ ಗೆ ಬರುತ್ತಿದ್ದರು. ಹಾಗೆ ಮಾತನಾಡುತ್ತಾ ತಮಗೆ ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯ ಇದೆ ಎಂಬುದಾಗಿಯೂ ತಿಳಿಸಿದ್ದರು. ಆದರೆ ಅಲ್ಲಿ ಉತ್ತಮ ಚಿಕಿತ್ಸೆ ಸಿಕ್ಕರೂ ಕಾಯಬೇಕಾಗುತ್ತದೆ. ಅದೂ ತವರೂರಿಗೆ ಹತ್ತಿರವಿಲ್ಲ; ಹಾಗಾಗಿ ಇಲ್ಲಿಗೆ ಬಂದೆವು ಎಂಬ ಉತ್ತರ ಸಿಗುತ್ತಿತ್ತು. ಹೀಗೆ ಬರುವವರಲ್ಲಿ ಉತ್ತರ ಭಾರತೀಯರೇ ಹೆಚ್ಚು.ಅವರ  ಆಕರ್ಷಕ ವ್ಯಕ್ತಿತ್ವ, ನಡೆ-ನುಡಿಯಲ್ಲಿ ಶಿಸ್ತು, ದೇಶ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡ ತ್ಯಾಗ ಮನೋಭಾವ, ಧೈರ್ಯ ಹೀಗೆ ಎಲ್ಲವೂ ಗೌರವ-ಮೆಚ್ಚುಗೆಯನ್ನು ಮೂಡಿಸುವುದರ ಎಂಥ ನೋವನ್ನೂ ತಡೆಯಬಲ್ಲ ಧೀರರು ಎಂದು ಬಹಳ ಅಭಿಮಾನವೂ ಇತ್ತು. ಆದರೆ ರೋಗಿಯಾಗಿ ಬಂದ  ಜಸ್ವಂತ್  ಸಿಂಗ್ ಅವರೊಡನೆ ಹೊಸತೊಂದು ಅನುಭವ.

 ದೊಡ್ಡ ಮನುಷ್ಯ!

ಅದೊಂದು ಮಧ್ಯಾಹ್ನ , ಇನ್ನೇನು ಊಟಕ್ಕೆ ಹೊರಡುವ ಹೊತ್ತು; ನನ್ನ ಸಹಾಯಕಿ ಪಾರ್ವತಿ ‘ಮೇಡಂ, ಯಾರೋ ದೊಡ್ಡ ಮನುಷ್ಯ ಬಂದಿದಾರೆ’ ಎಂದು ನುಡಿದಳು. ನಮಸ್ತೆ ಎನ್ನುತ್ತಲೇ ಒಳಗೆ ಕಾಲಿಟ್ಟವರು  ನಿಜಕ್ಕೂ ದೊಡ್ಡವರೇ! ಆರೂವರೆ ಅಡಿ ಎತ್ತರ, ಕಟ್ಟುಮಸ್ತಾದ ಆಳ್ತನ, ಪೊದೆಮೀಸೆ, ನೀಟಾಗಿ ಇಸ್ತ್ರಿ ಮಾಡಿದ ಶರ್ಟ್ ಮತ್ತು ಅದಕ್ಕೆ ಹೊಂದಿಕೆಯಾಗುವ ಮುಂಡಾಸು ಇದೆಲ್ಲದಕ್ಕೂ ಸರಿಯಾದ ದಪ್ಪ ದೊಡ್ಡ ಧ್ವನಿ! ಅವರು ಜಸ್ವಂತ್ ಸಿಂಗ್ ; ಆರ್ಮಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದರು. ಪೋಸ್ಟಿಂಗ್ ಗಡಿಪ್ರದೇಶದಲ್ಲಿ ಇದ್ದರೂ ಮಡದಿ-ಮಕ್ಕಳು ಬೆಂಗಳೂರಿನಲ್ಲಿ ವಿದ್ಯಾಭ್ಯಾಸದ ಸಲುವಾಗಿ ನೆಲೆಸಿದ್ದರು. ಹಲ್ಲು ನೋವಿದ್ದ ಕಾರಣ  ನನ್ನ ಬಳಿ ಬಂದಿದ್ದರು. ಸ್ವಭಾವತಃ ತುಂಬಾ ಶಿಸ್ತಿನ ಮನುಷ್ಯ. ಜತೆಗೆ ವೃತ್ತಿಯೂ ಹಾಗೆಯೇ ಇದ್ದುದ್ದರಿಂದ ಎಲ್ಲರಲ್ಲೂ ಅದನ್ನೇ ನಿರೀಕ್ಷಿಸುತ್ತಿದ್ದರು. ಅಷ್ಟರಲ್ಲಾಗಲೇ ಪಾರ್ವತಿಗೆ ಮೇಜಿನ ಮೇಲಿಟ್ಟ ಪೇಪರ್ ಹರಡಿದ್ದಾರೆ, ಚಪ್ಪಲಿ ಸರಿಯಾಗಿ ಜೋಡಿಸಿಟ್ಟಿಲ್ಲ ಎಂದೆಲ್ಲಾ ಆಕ್ಷೇಪ ವ್ಯಕ್ತಪಡಿಸಿದ್ದರು.. ಊಟದ ಸಮಯ, ಅದರ ಮೇಲೆ ಇವರ ದೊಡ್ಡ ದನಿಯ ಈ ಗದರಿಕೆಗೆ ಆಕೆಯ ಮುಖ ದಪ್ಪಗಾಗಿತ್ತು. ಆದರೂ ಹಲ್ಲು ಪರೀಕ್ಷೆಗಾಗಿ ಒಳಗೆ ಕುರ್ಚಿಯ ಮೇಲೆ ಕುಳ್ಳಿರಿಸಿದಳು.

 ಧೀರೆ ಧೀರೆಸೆ…. 

ನಾನು ಒಳಗೆ ಹೋಗಿ ಬಾಯಿ ಪರೀಕ್ಷೆ ಮಾಡಲು ಮುಂದಾಗಿದ್ದೇ ತಡ ‘ ಶ್ ಶ್ ಧೀರೆ ಧೀರೆಸೆ, ಡಾಕ್ಟರ್ ಧೀರೆಸೆ ’  ಎಂಬ ಸಣ್ಣ ದನಿ. ಒಂದು ಕ್ಷಣ ನನಗೆ ಶೂರೆ ಧೀರೆ ಎಂದು ಹೊಗಳುತ್ತಿರಬಹುದೇ ಅನ್ನಿಸಿತು, ಆದರೆ ಹಿಂದಿ ಬರುವುದರಿಂದ ಅರ್ಥವಾಯಿತು. ಕಡೆಗೆ ಬಾಯಿ ತೆರೆದರೂ ‘ ಹು ಹು ಹು ’  ಎಂದು ಸಣ್ಣಗೆ ಹೆದರಿ ಅಳುವ ಸದ್ದು. ಹಾಗಂತ ನಾನು ಮಾಡಿದ್ದೇನೂ ಇಲ್ಲ, ಬಾಯಿಕನ್ನಡಿ ಹಿಡಿದು ಚೆಕ್ ಮಾಡಿದ್ದಷ್ಟೇ.ಕಡೆಯ ಹಲ್ಲಿನ ಬೇರಿನ ಎರಡು  ಭಾಗವಷ್ಟೇ ಉಳಿದು ಸೋಂಕಾಗಿದ್ದು ನೋವಿಗೆ ಕಾರಣ.ಸರಿ ಮಾತ್ರೆ ಬರೆದು ಅದನ್ನು ತೆಗೆಯುವುದೇ ಪರಿಹಾರ ಎಂದು ಸೂಚಿಸಿದಾಗ ‘ ನಿಕಾಲ್ನಾ ಹೈ ಕ್ಯಾ?’(ತೆಗೆಯಬೇಕಾ?) ಎಂದು ಶಾಕ್ ಹೊಡೆದ ಮುಖ ಮಾಡಿದರು. ‘ ಸಣ್ಣ ತುಂಡುಗಳು; ಹೆಚ್ಚಿಗೆ ಸಮಯ ಬೇಡ,ನೋವೂ ಆಗುವುದಿಲ್ಲ; ಆದರೆ ಎರಡು ಇಂಜೆಕ್ಷನ್ ಕೊಡಬೇಕಾಗುತ್ತೆ’ ಎಂದದ್ದೆ ಮತ್ತೆ ಅಳು ಮುಖ! ಬಾಯಿ ಪರೀಕ್ಷೆ ಮಾಡಿದ್ದು ಐದು ನಿಮಿಷ, ವಿವರಣೆಗೆ ಅರ್ಧಗಂಟೆ, ಅವರ ಚೇತರಿಕೆಗೆ ಮತ್ತೆ ಹತ್ತು ನಿಮಿಷ ಹೀಗೆ ಮುಕ್ಕಾಲು ಗಂಟೆ ಈ  ದೊಡ್ಡ ಮನುಷ್ಯರಿಗೆ ನೀಡಬೇಕಾಗಿ ಬಂತು.

ಇಜ್ಜತ್ ಕಾ ಸವಾಲ್!

ಎರಡು ದಿನಗಳ ನಂತರ ಸೂಚಿಸಿದ ಸಮಯಕ್ಕೆ ಐದು ನಿಮಿಷ ಮುಂಚೆಯೇ ನಮ್ಮ ಸಿಂಗ್ ಹಾಜರ್! ಅವರ ಸಹಾಯಕ ಚಿಕ್ಕ ಬ್ರೀಫ್ ಕೇಸ್ ಹಿಡಿದು  ಒಳ ಬಂದು ಸಾಬ್ ಬಂದಿದ್ದಾರೆ ಎಂದು ಭಯಭಕ್ತಿಯಿಂದ ಅರುಹಿದ. ಜತೆಗೇ ತಮ್ಮ ಸಾಬ್ ಎಂಥ ಧೈರ್ಯವಂತರು, ಹೇಗೆ ಶತ್ರುಗಳು ಹೆದರುತ್ತಾರೆ , ಎಷ್ಟು ಶಿಸ್ತು ಎಂಬ ವರ್ಣನೆಯೂ ಪಾರ್ವತಿಗೆ ಪುಕ್ಕಟೆಯಾಗಿ ಸಿಕ್ಕಿತು. ಸರಿ ಸಿಂಗ್ ಬಂದರು; ಮೆಟ್ಟಿಲನ್ನು ಢಬ್ ಢಬ್ ಎಂದು ಹತ್ತಿಬಂದ ವ್ಯಕ್ತಿ  ಬೆಕ್ಕಿನ ಮರಿಯಂತೆ ಮುದುರಿ ಕುರ್ಚಿಯಲ್ಲಿ ಕುಳಿತರು. ನಾನು ಬಾಯಿ ತೆರೆಸಿ ಇಂಜೆಕ್ಷನ್ ಕೊಡಲು ಸಿದ್ಧಳಾದೆ. ಬಾಯಿಯ ಹತ್ತಿರ ಕೈ ಹೋಗಿದ್ದೇ ತಡ ‘ ಪ್ಲೀಸ್ ನನ್ನನ್ನು ಬಿಟ್ಟುಬಿಡಿ..ಏನೂ ಮಾಡಬೇಡಿ. ಬಹುತ್ ಡರ್  ಲಗ್ತಾ ಹೈ’  ಎಂಬ ಅಳು ಸಿಂಗ್ ರಿಂದ! ನನಗೆ ಒಂದೆಡೆ ಕನಿಕರ, ಮತ್ತೊಂದೆಡೆ ಹೆದರಿಕೆ. ನೋವಿನ ಭಯ ಎಷ್ಟು ತೀವ್ರವಾಗಿರುತ್ತದೆ ಎನ್ನುವುದರ ಜತೆ ಈ ಅಳು ಕೇಳಿ ಹೊರಗಿರುವ ಇತರರು ಏನು ಭಾವಿಸುತ್ತಾರೋ ಎನ್ನಿಸಿತ್ತು. ಎಷ್ಟೇ ಸಮಾಧಾನ ಹೇಳಿದರೂ ಮತ್ತೆ ಇದೇ ಮರುಕಳಿಸಿದಾಗ ಹಾಗಾದ್ರೆ ಬೇಡ ಬಿಡಿ, ಇನ್ನೊಮ್ಮೆ ನೋಡೋಣ ಎಂದರೆ ಅದಕ್ಕೂ ಈ ಮನುಷ್ಯ ಸಿದ್ಧರಿಲ್ಲ. ‘ ಹಲ್ಲು ನೋವಿನಿಂದ ಜೀವ ಹೋಗುವ ಹಾಗೆ ಆಗುತ್ತದೆ. ನಮ್ಮ ಆಸ್ಪತ್ರೆಗೆ ಹೋಗಬಹುದು ..ಆದರೆ ಅಲ್ಲಿ ಈ ಥರ ಅತ್ತರೆ ನನ್ನ ಇಜ್ಜತ್ ಕಾ ಸವಾಲ್ ಹೈ! ಅದಕ್ಕೆ ಇಲ್ಲಿಗೆ ಬಂದಿದ್ದು. ಇವತ್ತು ಹೇಗೋ ಧೈರ್ಯಮಾಡಿದ್ದೇನೆ, ತೆಗೆಸಲೇಬೇಕು. ಆದರೂ ಎದೆ ನಡುಗುತ್ತದೆ. ಮಾಫ್ ಕರೋ..ಮಗರ್ ಆಜ್ ಹೀ ನಿಕಾಲ್ ದೋ’ ಎಂಬ ರಾಗ.

 ವೀರ ಸಿಪಾಯಿ

ನನಗೆ ಒಂದೆಡೆ ಈ ಸಿಂಗ್, ಇನ್ನೊಂದೆಡೆ ಕಾಯುತ್ತಿರುವ  ಇತರ ರೋಗಿಗಳು. ಮಾಡುವಂತೆಯೂ ಇಲ್ಲ, ಬಿಡುವಂತೆಯೂ ಇಲ್ಲ. ಕಡೆಗೆ ಯೋಚಿಸಿ ‘ನೀವು ನಿಮ್ಮ ಶತ್ರುಗಳನ್ನು ಎದುರಿಸುವಾಗ ಹೇಗೆ ಧೈರ್ಯ ತಂದುಕೊಳ್ಳುತ್ತೀರಿ?ಅದರ ಮುಂದೆ ಇದೇನು ಮಹಾ? ಅದರ ಹಾಗೇ ಇದು ಎಂದು ಭಾವಿಸಿ’ ಎಂಬ ಸಲಹೆ ನೀಡಿದೆ. ಅದನ್ನು ಕೇಳಿ ಸ್ವಲ್ಪ ಸಮಾಧಾನವಾಯಿತೇನೋ! ನಮಗೆ ಯಾವಾಗಲೂ ದೇಶಭಕ್ತಿಗೀತೆ ಹೊಸ ಹುರುಪನ್ನು ತಂದುಕೊಡುತ್ತದೆ. ಅದನ್ನು ಕೇಳಬಹುದಾ ಎಂದರು. ನಿಜಕ್ಕೂ ಹೇಳಬೇಕೆಂದರೆ ಹಾಡು ಕೇಳುವ ಸಮಯ ಅದಾಗಿರಲಿಲ್ಲ. ಆದರೂ ಹೂಂ ಎಂದೆ. ಕೂಡಲೇ ಮೊಬೈಲ್ ನಿಂದ ಹಾಡು ಹಾಕಿದರು ‘ ನನ್ಹಾ ಮುನ್ನಾ ರಾಹಿ ಹೂಂ, ದೇಶ್ ಕಾ ಸಿಪಾಹಿ ಹೂಂ, ಬೋಲೋ ಮೇರೆ ಸಂಗ್ ಜೈ ಹಿಂದ್ ಜೈಹಿಂದ್ ’. ಪಕ್ಕದಲ್ಲಿದ್ದ ಪಾರ್ವತಿ ಈ ಹಾಡಿಗೆ ಧ್ವಜ ಹಿಡ್ಕೊಂಡು ಡಾನ್ಸ್ ಮಾಡಿದ್ರೆ ಇನ್ನೂ ಹೆಚ್ಚು ಧೈರ್ಯ ಬರ್ತದೆ ; ಅದೊಂದೇ ಬಾಕಿ ಎಂದು ಗೊಣಗಿದರೂ ನನ್ನ ಗಂಭೀರ ಮುಖ ನೋಡಿ ಸುಮ್ಮನಾದಳು.ಅಂತೂ ಹಾಡು ಕೇಳಿ ಮರಳಿ ಯತ್ನ. ಈಸಲವಂತೂ ಕಣ್ಣು ಮುಚ್ಚಿ ಕುಳಿತವರು ಇಂಜೆಕ್ಷನ್ ಬಾಯಿಗೆ ಒಯ್ಯುತ್ತಿದ್ದಂತೆ ದೊಡ್ಡದಾಗಿ ಕಣ್ಣು ಬಿಟ್ಟು, ದೀರ್ಘವಾಗಿ ಉಸಿರೆಳೆದು, ನನಗೆ  ಸಹಕರಿಸುತ್ತಿದ್ದ  ಪಾರ್ವತಿಯ ಕೈ ದೂಡಿಬಿಟ್ಟರು. ಪಾರ್ವತಿ ‘ ನೀವು ಎನಿಮಿ ಥರಾ ಅಂತ ಹೇಳಿದ್ದನ್ನು ಈ ಯಪ್ಪ ತಪ್ಪರ್ಥ ಮಾಡಿಕೊಂಡು ನನ್ನನ್ನು ಎನಿಮಿ ಅಂದುಕೊಂಡು ಬಿಟ್ಟಿದೆ. ಗನ್ ಇದ್ದಿದ್ದರೆ ಇಷ್ಟು ಹೊತ್ತಿಗೆ ನಾನು ಢಮಾರ್! ಸರಿಯಾಗಿ ಹೇಳಿ ಮೇಡಂ” ಎಂದು ನನಗೇ ಬೈದಳು. ನನಗೂ ಸರಿ ಎನಿಸಿ ‘ ನಾವಲ್ಲ ನಿಮ್ಮ ಎನಿಮಿ! ನಿಮ್ಮ ಬಾಯಿಯಲ್ಲಿರುವ ಮುರಿದ ಹಲ್ಲಿನ ತುಂಡು ನಿಮ್ಮ ದೇಹಕ್ಕೆ ಎನಿಮಿ. ಅದನ್ನು ಎದುರಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ ಅನ್ನುವ ಭಾವ ತಂದುಕೊಳ್ಳಿ’ ಎಂದೆಲ್ಲಾ ಮತ್ತೆ ವಿವರಣೆ ನೀಡಬೇಕಾಯಿತು.ಅಂತೂ ಸತತ ಪ್ರಯತ್ನದ ನಂತರ ಎರಡು ಪುಟ್ಟ ಪುಟಾಣಿ ಬೇರಿನ ಚೂರು ಹೊರತೆರೆದಾಗ ನಮಗೆಲ್ಲಾ ದಿಗ್ವಿಜಯ ಸಾಧಿಸಿದ ಸಂತೋಷ! ಬಾಯಲ್ಲಿ ಹತ್ತಿಯಿಟ್ಟರೂ ದೊಡ್ಡ ನಗು ಹೊತ್ತು ಮನೆಗೆ ಹೊರಟರು ಸಿಂಗ್.

ವಾರದ ನಂತರ ಬಂದ ಸಿಂಗ್ ಅವರ ಗಾಯ ಸಂಪೂರ್ಣ ಮಾಯ್ದಿತ್ತು, ನೋವು ಮಾಯವಾಗಿತ್ತು.ಸಣ್ಣವರಿದ್ದಾಗ ಹಳ್ಳಿಯಲ್ಲಿ ಯಾರ ಬಳಿಯೋ ಹಲ್ಲು ತೆಗೆಸಿ ಬಹಳ ನೋವಾಗಿದ್ದುದು ಅವರ ಈ ಹೆದರಿಕೆಗೆ ಕಾರಣ ಎಂದು ಬಾಲ್ಯದ ಕಹಿ ನೆನಪನ್ನು ವಿವರಿಸಿದರು. ಹೊರಡುವಾಗ ’ ಅಬ್ ಸಬ್ ಠೀಕ್ ಹೈ ಜೀ; ಥಾಂಕ್ಯು ‘ ಎನ್ನುತ್ತಾ ಕೈ ಕುಲುಕಿದ ಸಿಂಗ್ ನನ್ನ ವೃತ್ತಿ ಬದುಕಿನಲ್ಲಿ ಸದಾ ನೆನಪಿನಲ್ಲಿ ಉಳಿಯುವ ವ್ಯಕ್ತಿ!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

August 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: