ಡಾ ಕೆ ಎಸ್ ಚೈತ್ರಾ ಅಂಕಣ – ‘ಪಾಟಿ’ ಕಲಿಸಿದ ಪಾಠ !

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.

ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.

ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!

26

ವಿದ್ಯಾರ್ಥಿಗಳಾಗಿದ್ದಾಗ ಸ್ನೇಹಿತರಾದವರು ಹಲವರು, ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದಾಗ ಇನ್ನಷ್ಟು, ಅಮೆರಿಕೆಯಲ್ಲಿದ್ದಾಗ ಮತ್ತಷ್ಟು, ನನ್ನದೇ ಕ್ಲಿನಿಕ್ ಆರಂಭಿಸಿ ಬೆಂಗಳೂರಿನಲ್ಲಿ ನೆಲೆ ನಿಂತ ಮೇಲೆ ಪರಿಚಯವಾದವರು ಹೀಗೆ ನನ್ನ ಸ್ನೇಹಿತರ ಬಳಗ ದೊಡ್ಡದೇ! ಕಲೆ, ಸಾಹಿತ್ಯ, ವೈದ್ಯಕೀಯ, ಮಾಧ್ಯಮ ಹೀಗೆ ವಿವಿಧ ರಂಗಗಳ ಸ್ನೇಹಿತರು ನನಗಿರುವುದರಿಂದ ಸಂಖ್ಯೆಯ ಜತೆ ವೈವಿಧ್ಯವೂ ಸೇರಿದೆ. ವೃತ್ತಿಯ ಒತ್ತಡದ ನಡುವೆಯೂ ನಾವು ಆಗಾಗ್ಗೆ ಸುಮ್ಮನೇ ಹರಟಲು ಸೇರುವುದಿದೆ. ಡೆಂಟಿಸ್ಟ್ರಿ ಬಿಟ್ಟು ಬೇರೆ ಮಾತನಾಡಬೇಕು ಎಂದುಕೊಂಡರೂ ಕಡೆಗೆ ಮಾತು ತಿರುಗುವುದು ಅದರತ್ತಲೇ! ಹಾಗೊಂದು ದಿನ ಊಟಕ್ಕೆಂದು ಐದಾರು ಜನ ವೃತ್ತಿಬಾಂಧವರು ಹೋಟೆಲಿನಲ್ಲಿ ಸೇರಿದ್ದೆವು. ಊಟ ಆರ್ಡರ್ ಮಾಡಿ ಮಾತುಕತೆ ನಡೆದಿತ್ತು.

 ಅಷ್ಟರಲ್ಲಿ ಯಾರೋ ಕೈ ತೊಳೆಯಲು ಬಂದರು. ನಮ್ಮ ಟೇಬಲ್ ಕಡೆ ಕಣ್ಣು ಹಾಯಿಸಿದವರೇ ಮುಖ ಅರಳಿಸಿ ‘ಏನು ಡಾಕ್ಟ್ರೇ, ಚೆನ್ನಾಗಿದ್ದೀರಾ? ಅಪರೂಪಕ್ಕೆ ಫ್ರೀ ಆಗಿ ಬಂದಿದ್ದೀರಾ’ ಎಂದು ಮಾತನಾಡಿಸಿದರು. ಅಂದ ಹಾಗೆ ಅವರು ನನ್ನನ್ನೇ ಉದ್ದೇಶಿಸಿ ಮಾತನಾಡಿದ್ದು! ನಮ್ಮ ಬಡಾವಣೆಯಲ್ಲಿಯೇ ಇರುವ ವ್ಯಕ್ತಿ, ನನ್ನ ಪೇಶೆಂಟ್ ಕೂಡ.  ಸರಿ ಮಾತನಾಡಿಸಿದೆ; ಲೋಕಾಭಿರಾಮವಾಗಿ ʼಹೇಗಿದ್ದಾರೆ ಮನೆಯವರುʼ ಎಂದೆ .ಕೂಡಲೇ ʼಒಂದ್ನಿಮಿಷʼ ಎಂದು ಹೆಂಡತಿ, ಮಗ-ಸೊಸೆ, ಮೊಮ್ಮಗು ಎಲ್ಲರನ್ನೂ ದೂರದ ಟೇಬಲ್ಲಿಂದ  ಕರೆಸಿ ನಮ್ಮ ಮುಂದೆ ನಿಲ್ಲಿಸಿ ಪರಿಚಯಿಸಿದರು. ನನ್ನನ್ನು ಟಿವಿ ಯಲ್ಲಿ ಬರುವವರು, ಹಲ್ಲಿನ ಡಾಕ್ಟ್ರು, ಮನೆ   ಮುಂದೆ  ಬೆಳಿಗ್ಗೆ ಓಡಾಡ್ತಾರೆ (ವಾಕಿಂಗ್‌ಗೆ) ಎಂದೆಲ್ಲಾ ಪರಿಚಯ ಮಾಡಿಸಿದ್ದಾಯ್ತು. ಅಷ್ಟರಲ್ಲಿ ಬೇರೆ ಊರಿಂದ ಬಂದ ಅವರ ಮಗ ಸ್ವಲ್ಪ ಸಂಕೋಚದಿಂದಲೇ ಮೇಡಂ ನನ್ನ ಮಗನಿಗೆ ಸ್ವಲ್ಪ ಹಲ್ಲು ತೋರಿಸಬೇಕಿತ್ತು, ನಾಳೆ ಸಿಗುತ್ತೀರಾ ಎಂದು ಪ್ರಶ್ನಿಸಿದರು. ನಾನು ಏನನ್ನೂ ಹೇಳುವ ಮೊದಲೇ ನನಗೆ ಪರಿಚಿತ ಈ ವ್ಯಕ್ತಿ ‘ತಡಿಯೋ, ನಮ್ಮ ಡಾಕ್ಟ್ರು ಇಲ್ಲೇ ಒಂದ್ನಿಮಿಷ ನೋಡ್ತಾರೆ ಪರವಾಗಿಲ್ಲ’ ಎಂದು ಸುಮಾರು ಐದಾರು ವರ್ಷದ ಮಗುವನ್ನು ಎಳೆದು ಕರೆದು ನನ್ನ ಮುಂದೆ ನಿಲ್ಲಿಸಿ ‘ಬಾಯಿ ತೆಗಿಯಪ್ಪ ಚಿನ್ನು, ಆಂಟಿ ಹಲ್ಲು ನೋಡ್ತಾರೆ’ ಎಂದು ತಾವೇ ಆದೇಶ ನೀಡಿದರು. ಮಗುವಿನ ಜತೆ ನನಗೂ ಗಾಬರಿಯಾಗಿತ್ತು. ಆದರೂ ಸಾವರಿಸಿಕೊಂಡು ‘ಸರ್ , ಇಲ್ಲೆಲ್ಲಾ ಸರಿಯಾಗಿ ನೋಡೋಕೆ ಆಗಲ್ಲ. ಚೇರ್, ಲೈಟ್ ಇರಬೇಕು ’ ಎಂದೆ. ʼಹೌದಾʼ ಎಂದು ಕ್ಷಣ ಕಾಲ ಸುಮ್ಮನಿದ್ದು ಪಕ್ಕದ ಟೇಬಲ್‌ನಿಂದ ಚೇರ್ ಎಳೆದು ಮಗು ಕೂರಿಸಿ ತಮ್ಮ ಮೊಬೈಲ್‌ನಲ್ಲಿ ಟಾರ್ಚ್ ಹಾಕಿ ʼಈಗ ಸರಿ ಆಯ್ತು.ಹಂಗೇ ಒಂಚೂರು ನೋಡಿಬಿಡಿʼ ಎನ್ನಬೇಕೆ? ಇದೆಲ್ಲಾ ನಡೆದದ್ದು ಮಗನ ಬೇಡಪ್ಪಾ ಎಂಬ ನಿಲ್ಲಿಸುವ ಪ್ರಯತ್ನದ ನಡುವೆಯೇ1 ಅಷ್ಟರಲ್ಲಿ ಪುಣ್ಯಕ್ಕೆ ಆ ಮಗು ʼನಂಗೆ ಐಸ್‌ ಕ್ರೀಂ ಬೇಕುʼ ಎಂದು ಕಿರಿಚಿ ಅಮ್ಮನ ಹತ್ತಿರ ಓಡಿಹೋಯ್ತು. ಈ ವ್ಯಕ್ತಿ ʼಛೇ, ಇಲ್ಲೇ ಮುಗಿಸಬಹುದಿತ್ತುʼ ಎಂದು ಪೇಚಾಡುತ್ತಲೇ ನನಗೆ ʼನಮಸ್ತೆʼ ಹೇಳಿ ಹೊರಟರು. ನಾನು ಉಸಿರು ಬಿಟ್ಟೆ. ಪಕ್ಕದಲ್ಲಿದ್ದ ನನ್ನ ಸ್ನೇಹಿತರೇನೂ ತಪ್ಪು ತಿಳಿಯಲಿಲ್ಲ; ಏಕೆಂದರೆ ಇಂಥ ಅನುಭವಗಳು ಸಾಮಾನ್ಯವೇ!

ಆರೋಗ್ಯದ ವಿಷಯದಲ್ಲಿ ಜನರಿಗೆ ಹೆದರಿಕೆ ಸಾಮಾನ್ಯ. ಹೀಗಾಗಿ ತಮಗೆ ಪರಿಚಿತರು ಎಂದಾಗ ಸ್ವಲ್ಪ ಧೈರ್ಯ- ನಂಬಿಕೆ ಹೆಚ್ಚು. ಆದರೆ ಕೆಲವೊಮ್ಮೆ ಈ ಪರಿಚಿತ ಭಾವನೆ, ಸಲಿಗೆ, ಅಪಾರ ನಿರೀಕ್ಷೆ, ಚಿಕಿತ್ಸೆಗೂ ತೊಂದರೆ ಉಂಟುಮಾಡುವ ಸಾಧ್ಯತೆಯೂ ಇದೆ. ಹೋಟೆಲಿನಲ್ಲಿ ನಡೆದದ್ದಕ್ಕೆ ನಗುತ್ತಲೇ ಈ ರೀತಿಯ ಘಟನೆಗಳ ಬಗ್ಗೆ ಚರ್ಚೆ ನಡೆಯಿತು. ಜತೆಯಲ್ಲಿದ್ದ ತಮಿಳುನಾಡಿನ ಪ್ರಾಸ್ತೋಡಾಂಟಿಸ್ಟ್ ಶಿವ ‘ಅಯ್ಯೋ, ಎನ್ ಪಾಟಿ ಪೆರಿಯ ಪ್ರಾಬ್ಲೆಮ್ಸ್ ಕೊಟ್ಟುಟ್ಟಾರ್ . ಅವಳ್ ಎನ್ ನೈಟ್ಮೇರ್ ಆನಲ್; ಎಪ್ಪಡಿ? ನಾನ್ ಸೊಲ್ಕಿರಿನ್’ (ಅಯ್ಯೋ, ನನ್ನ ಅಜ್ಜಿ ಸಿಕ್ಕಾಪಟ್ಟೆ ತೊಂದರೆ ಕೊಟ್ಟಿದ್ದಾಳೆ. ನನಗೆ ದುಃಸ್ವಪ್ನ ಆಗಿದ್ದಳು. ಹೇಗೆ ಅಂತ ಹೇಳುತ್ತೇನೆ) ಎಂದಾಗ ನಮಗೆಲ್ಲಾ ಆಶ್ಚರ್ಯ. ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿರುವ ಅವರು ಅನೇಕ ಡೆಂಚರ್, ಬ್ರಿಡ್ಜ್, ಕ್ರೌನ್  ಮಾಡಿರುವ ಅನುಭವಿ. ಒಳ್ಳೆಯ ಹ್ಯಾಂಡ್ ವರ್ಕ್‌ಗಾಗಿ ಹೆಸರು ಮಾಡಿದವರು. ಇವರಿಗೆ ಸ್ವಂತ, ಪ್ರೀತಿಯ ಅಜ್ಜಿಯೇ ದುಃಸ್ವಪ್ನವಾಗಿದ್ದಾದ್ರೂ ಹೇಗೆ ಎಂಬ ಕುತೂಹಲ ಹುಟ್ಟಿತು. ಊಟದ ಜತೆ ಅವರ ಕತೆಯೂ ಶುರುವಾಯಿತು.

ಶಿವ ಹೇಳಿದ್ದು…

ನಮ್ಮ ಪಾಟಿಗೆ ಮೊಮ್ಮಗನಾದ ನನ್ನನ್ನು ಕಂಡ್ರೆ  ಎಲ್ಲಿಲ್ಲದ ಪ್ರೀತಿ . ನನಗೆ ಹತ್ತು ವರ್ಷ ಆಗುವ ತನಕ ಚೆನ್ನೈನಲ್ಲೇ ಇದೇ ಪಾಟಿ-ತಾತಾ ಜತೆಗಿದ್ದು ಆಮೇಲೆ ಬೆಂಗಳೂರಿಗೆ ಶಿಫ್ಟ್ ಆಗಿದ್ದು. ಅಮ್ಮನನ್ನ ಓದಿಸಬೇಕು ಅಂತ ತುಂಬಾ ಆಸೆ ಇತ್ತು ಪಾಟಿಗೆ, ಏನೇನೋ ಕಾರಣದಿಂದ ಆಗಲಿಲ್ಲ. ನನಗೆ ಮಾತ್ರ ಎಷ್ಟು ಬೇಕಾದ್ರೂ ಓದು ಅಂತ ಫುಲ್ ಎನಕರೇಜ್ ಮಾಡಿದ್ದು ಇದೇ ಪಾಟಿ. ಡೆಂಟಿಸ್ಟ್ರಿ ಸೇರಿದಾಗಲೇ ಹೇಳಿದ್ದರು ʼಇನ್ನು ಬೇಕಾದರೆ ನಮ್ ಶಿವ ನನ್ನ ಎಲ್ಲಾ ಹಲ್ಲು ರಿಪೇರಿ ಮಾಡ್ತಾನೆʼ ಅಂತ. ಆದರೆ ಅವರಿಗಿದ್ದದ್ದು ಕೆಲವೇ ಹಲ್ಲು. ಅವುಗಳನ್ನೇ ನಾನು ಕ್ಲೀನ್ ಮಾಡಿ, ಫಿಲ್ಲಿಂಗ್ ಮಾಡಿ ಒಂದಿಷ್ಟು ಸರಿಯಾಗಿಟ್ಟಿದ್ದೆ. ಕೆಲವು ವರ್ಷ ಪರವಾಗಿರಲಿಲ್ಲ. ಆಮೇಲೆ ಆಗಾಗ್ಗೆ ಫೋನ್ ಮಾಡಿದಾಗಲೆಲ್ಲಾ ಹಲ್ಲು ನೋವು ಅಂತಾ ಒದ್ದಾಡೋರು. ಪರೀಕ್ಷಿಸಿದಾಗ ಮುರಿದ ಹುಳುಕಾದ ಹಲ್ಲುಗಳೇ ಇದ್ದದ್ದು. ಎಲ್ಲವನ್ನೂ ತೆಗೆಸಿ ಡೆಂಚರ್ ಮಾಡಿಸೋದು ಒಳ್ಳೆಯದು ಅಂದೆ. ʼನನ್ನ ಮೊಮ್ಮಗ ನೀನೇ ಇರಬೇಕಾದರೆ ಬೇರೆಯವರು ಯಾಕೆ? ಒಳ್ಳೆ ಡೆಂಚರ್  ಮಾಡಿಬಿಡುʼ ಎಂದರು ಸಂಭ್ರಮದಿಂದ. ನೂರಾರು ಡೆಂಚರ್ ಮಾಡಿದ ಅನುಭವ ಇತ್ತಲ್ಲ; ಅದೇನು ಕಷ್ಟ ಎಂದುಕೊಂಡು ಹೂಂ ಎಂದೆ.  ಅದಕ್ಕೆ ಸರಿಯಾಗಿ ಮಾವ ಚೆನ್ನೈ ಬಿಟ್ಟು ಬೆಂಗಳೂರಿನಲ್ಲಿ ನಮ್ಮ ಮನೆ ಹತ್ತಿರವೇ ಸೆಟಲ್ ಆದರು. ಸರಿ ಪಾಟಿಗೆ ಡೆಂಚರ್ ಮಾಡುವ ಜವಾಬ್ದಾರಿ ನನ್ನದಾಯಿತು.

 ಕಿರಿಕಿರಿ ಶುರು!

ಡೆಂಚರ್ ತಯಾರಿಸುವಾಗ ರೋಗಿಗಳಿಗೆ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ಮೊದಲೇ ತಿಳಿಸುವುದು ತುಂಬಾ ಮುಖ್ಯ. ಏಕೆಂದರೆ ಡೆಂಚರ್ ರೆಡಿ ಆಗುತ್ತೆ, ಟೈಟ್ ಆಗಿ ಕೂರುತ್ತೆ, ಆರಾಮಾಗಿ ತಿಂದು-ಮಾತನಾಡಿಕೊಂಡು ಇರಬಹುದು ಎನ್ನುವಷ್ಟು ಸುಲಭವಲ್ಲ! ಬಾಯಿ ಜೊತೆ ಮನಸ್ಸೂ ಈ ಡೆಂಚರ್ ಜೊತೆ ಅಡ್ಜಸ್ಟ್ ಆಗಬೇಕು. ಸರಿ ಪಾಟಿಗೆ ಇದನ್ನೆಲ್ಲಾ ಹೇಳಲು ಹೋದರೆ ‘ಎನಕ್ಕು ತೆರಿಯಂ’  ಎಂದುಬಿಟ್ಟರು. ಸರಿ ಮೊದಲ ಹಂತದ ವಸಡು-ದವಡೆಯ  ಅಳತೆ ತೆಗೆಯುವಾಗಲೇ ‘ಸ್ವಲ್ಪ ಬಾಯಿ ಹೆಚ್ಚು ಎಳೆದ ಹಾಗಾಯಿತು. ನೀನು ನಾಜೂಕಾಗಿ ಮಾಡಬೇಕು’ ಎಂದು ಪಾಟಿ ಎಲ್ಲರೆದುರು ಹೇಳಿದ್ದಾಯ್ತು. ಎರಡನೇ ಹಂತದಲ್ಲಿ (ಡೆಂಚರ್‌ನ ಅಂಚನ್ನು ಕರಾರುವಾಕ್ಕಾಗಿ ದಾಖಲಿಸುವ ಬಾರ್ಡರ್ ಮೌಲ್ಡಿಂಗ್ ಹಂತ. ಇದನ್ನು ನಿಖರವಾಗಿ ಮಾಡಿದಷ್ಟು ಸೆಟ್ ಬಿಗಿಯಾಗಿ ಕೂರುತ್ತದೆ. ಸಾಕಷ್ಟು ಸಮಯ ಮತ್ತು ಸಹನೆಯಿಂದ ಮಾಡಬೇಕಾದ ಕೆಲಸ). ಈ ಪಾಟಿ, ಐದೈದು ನಿಮಿಷಕ್ಕೆ ಆಯ್ತಾ ಎನ್ನುವುದು, ಬಾಯೆಲ್ಲಾ ನೋಯುತ್ತಿದೆ, ಸರಿಯಾಗಿ ಬರುತ್ತಾ  ಎಂದು ಕಿರಿಕಿರಿ ಮಾಡಿದರು. ಅದಕ್ಕೇನೋ ಸುಮ್ಮನಿದ್ದೆ. ಕಡೆಗೆ ಕೂದಲು ಉದುರಿದ್ದ ಜ್ಯೂನಿಯರ್ ತೋರಿಸಿ ಪೆರಿಯ ಡಾಕ್ಟರ್ ಕೇಳಿ ಬೇಗ ಮಾಡು ಎಂದಾಗ ಮಾತ್ರ ನಿಜಕ್ಕೂ ಸಿಟ್ಟೇ ಬಂದಿತ್ತು. ಇಡೀ ಡಿಪಾರ್ಟ್ ಮೆಂಟ್‌ನಲ್ಲಿ ಇದ್ದವರಿಗೆಲ್ಲಾ ‘ಇವನನ್ನು ನಾನೇ ಬೆಳೆಸಿದ್ದು, ಸಣ್ಣಲ್ಲಿದ್ದಾಗ ಸಿಕ್ಕಾಪಟ್ಟೆ ಗಲಾಟೆ, ಎಷ್ಟೋ ವರ್ಷ ಇವನಿಗೆ ಹಲ್ಲು ಬಂದೇ ಇರಲಿಲ್ಲ’ ಅಂತ ಬೇಡದ ಕಥೆಗಳನ್ನು ಹೇಳೋದು ಎಲ್ಲಾ ಮಾಡಿದ್ರು. ಅಷ್ಟಕ್ಕೆ ಮುಗಿಯಲಿಲ್ಲ ಈ ಪಾಟಿ ಕತೆ. ಅಳತೆ ಎಲ್ಲಾ ತೆಗೆದು ಹಲ್ಲಿನ ಸೆಟ್ ಆರಿಸುವಾಗ ಬಣ್ಣ, ಶೇಪ್ ಎಲ್ಲಾ ತೋರಿಸಿ ಟೀತ್ ಸೆಟ್ಟಿಂಗ್ ಮಾಡುವಾಗ ‘ಶರಿ, ನಲ್ಲ ಇರುಕು’ ಅಂತ ತಲೆ ಅಲ್ಲಾಡಿಸಿದವರು ಟ್ರಯಲ್ ಗೆ ಕರೆದಾಗ ಪೂರ್ತಿ ರಿವರ್ಸ್ ಹಾಕಿದರು. (ಮೇಣದಲ್ಲಿ ಹಲ್ಲುಗಳನ್ನು ಇಟ್ಟು, ವ್ಯಕ್ತಿಯ ಬಾಯಲ್ಲಿ ಇಟ್ಟು ತಿನ್ನಲು-ಮಾತನಾಡಲು, ಆಕಾರ- ಬಣ್ಣ, ಹೊಂದಿಕೊಳ್ಳುವ ರೀತಿ, ಇವೆಲ್ಲವನ್ನೂ ಪರಿಶೀಲಿಸುವುದನ್ನು ಟ್ರಯಲ್ ಎನ್ನಲಾಗುತ್ತದೆ. ಈ ಹಂತದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಸರಿಪಡಿಸಬಹುದು. ಟ್ರಯಲ್‌ಗೆ ಸಾಮಾನ್ಯವಾಗಿ ಯಾರಾದರೂ ಕುಟುಂಬದ ಸದಸ್ಯರು/ಹತ್ತಿರದವರನ್ನು ಕರೆತಂದರೆ ಅವರ ಅಭಿಪ್ರಾಯವನ್ನೂ ಪರಿಗಣಿಸಬಹುದು).

ಶರಿ ಮಾಡು!

ಟ್ರಯಲ್‌ಗೆ ಪಾಟಿ ತಾತ / ಮಾವ/ ಅಮ್ಮನನ್ನು ಕರೆತರಬಹುದು ಎಂದು ನನ್ನ ನಿರೀಕ್ಷೆಯಾಗಿತ್ತು. ನೋಡಿದರೆ ಪಾಟಿ ತನ್ನ ನಾಲ್ಕು ವಾಕಿಂಗ್ ಫ್ರೆಂಡ್ಸ್ ಕರೆತಂದಿದ್ದರು. ಅವರೋ ಸೀರೆ ಆರಿಸುವ ಹಾಗೆ ಒಬ್ಬೊಬ್ಬರದ್ದು ಒಂದೊಂದು ಅಭಿಪ್ರಾಯ. ಬಣ್ಣ ಇನ್ನಷ್ಟು ಬೆಳ್ಳಗೆ ಇರಬೇಕಿತ್ತು, ಮುಂದಿನ ಹಲ್ಲು ಅಗಲವಾಯ್ತು, ಕಡಿಮೆ ಹಲ್ಲು ಸಾಕು.. ಹೀಗೆ ಮುಗಿಯದ ಪಟ್ಟಿ. ಒಬ್ಬರಂತೂ ಪಾಟಿಗೆ ಒಂದಾದರೂ ಬಂಗಾರದ ಹಲ್ಲೇ ಹಾಕಬಹುದಿತ್ತು ಎನ್ನುವ ಸಲಹೆಯನ್ನೂ ನೀಡಿದರು! ಈ ಪಾಟಿ ‘ಅಪ್ಪಡಿಯಾ, ಆಮಾ’ ಅಂತ ಕಿವಿ ತುಂಬಾ ಕೇಳಿ, ಬಾಯಿ ಅಗಲಿಸಿ ನನಗೆ ಇದೆಲ್ಲಾ ಶರಿ ಮಾಡು ಎನ್ನುವುದೇ! ಸಾಧಾರಣವಾಗಿ ಹತ್ತು ನಿಮಿಷದಲ್ಲಿ ಮುಗಿಯುವ ಟ್ರಯಲ್ ಅರ್ಧಗಂಟೆಯಾದರೂ ಮುಗಿಯಲಿಲ್ಲ. ಅಂತೂ ಟ್ರಯಲ್ ಮುಗಿಸುವಷ್ಟರಲ್ಲಿ ಸುಸ್ತಾಗಿದ್ದು ನಾನು. ಕಡೆಗೂ ಡೆಂಚರ್ ಸಿದ್ಧವಾಗಿ ಬಂತು. ಎಲ್ಲರಿಗೆ ಕೊಟ್ಟ ಹಾಗೆ ಪಾಟಿಗೂ ಸೂಚನೆ ಕೊಟ್ಟು ಮನೆಗೆ ಕಳಿಸಿದ್ದಾಯ್ತು.  ಮರುದಿನ ಬೆಳ್ಳಂಬೆಳಿಗ್ಗೆ ಮಲಗಿರುವಾಗಲೇ ಕಣ್ಣೆದುರಿಗೆ ಪಾಟಿ ಪ್ರತ್ಯಕ್ಷ. ಡೆಂಚರ್ ಅನ್ನು ಆಯುಧದಂತೆ ಹಿಡಿದು ಅಲ್ಲಿ ನೋವು ಇಲ್ಲಿ ನೋವು ಎಂಬ ದೂರಿನೊಡನೆ! ಅದೆಲ್ಲಾ ಇದ್ದದ್ದೇ ಎಂದೊಡನೆ ಏನಾದರೂ ಆಗಲಿ ಒಮ್ಮೆ ನೋಡಿಬಿಡು ಎಂದು ಅಮ್ಮನ ಒತ್ತಾಯ. ಪರೀಕ್ಷಿಸಿದರೆ ಅದೇ ಮಾಮೂಲು ಒಂದೆರಡು ಕಡೆ ಕೆಂಪಾಗಿತ್ತು. ಇದೆಲ್ಲಾ ಸಹಜವೇ ಎಂದರೂ ಕೇಳುವಂತಿಲ್ಲ. ಖರ್ಚೆಲ್ಲಾ ನಾನು ಹಾಕಿ, ಫ್ರೀ ಆಗಿ  ಮಾಡಿ ಕೊಟ್ಟಿದ್ದಕ್ಕಾಗಿ ಇದು ಚೀಪ್ ಕ್ವಾಲಿಟಿಯದ್ದಾ ಎಂಬ ಅನುಮಾನ ಬೇರೆ! ಇದು ಒಂದು ಸಲವಲ್ಲ, ವಾರವಿಡೀ ಬೆಳಿಗ್ಗೆ -ಸಂಜೆ ಮುಂದುವರಿಯಿತು.ಬೆಳಿಗ್ಗೆ ಎದ್ದೊಡನೆ, ಸಂಜೆ ಮನೆಗೆ ಬಂದೊಡನೆ ಬೇಡವೆಂದರೂ ಪಾಟಿಯ (ಬಾಯಿ) ದರ್ಶನ, ಸಹಸ್ರನಾಮ ಸಿಗುತ್ತಿತ್ತು. 

ಹನಿ ಹನಿ ಲೆಕ್ಕ

ಈ ರಗಳೆಯಿಂದ ನನಗಂತೂ ಮನೆಗೆ ಬರುವುದೇ ಬೇಡ ಎನ್ನಿಸುವಷ್ಟು ಸಿಟ್ಟು ಬರುತ್ತಿತ್ತು. ಸಹನೆ ಕಳೆದುಕೊಂಡು ಅಮ್ಮನ ಹತ್ತಿರ ಈ ಪಾಟಿಗೆ ಡೆಂಟಲ್ ಅಲ್ಲ ಮೆಂಟಲ್ ಪ್ರಾಬ್ಲಮ್ ಆಗಿದೆ ಎಂದುಬಿಟ್ಟೆ . ಅಷ್ಟೇ ಅಮ್ಮ, ಪಾಟಿ ಇಬ್ಬರೂ ಸೇರಿ ನನ್ನನ್ನು ಬೆಳೆಸಲು ತಾವು ಪಟ್ಟ ಕಷ್ಟದ ಜತೆ ಸುರಿಸಿದ ರಕ್ತ-ಬೆವರು-ಕಣ್ಣೀರಿನ ಪ್ರತಿ ಹನಿಯನ್ನೂ ಲೆಕ್ಕ ಮಾಡಿ ಹೇಳಿಬಿಟ್ಟರು. ಪಾಟಿ, ನನ್ನ ಜಾತಕ ನೋಡಿ ಯಾರೋ ಅಜ್ಜಿಗೆ ಒಳ್ಳೆಯದಲ್ಲ ಎಂದಿದ್ದು ಈಗ ನಿಜವಾಯಿತು ಎಂದು ಆ ಜ್ಯೋತಿಷಿಯನ್ನು ಹೊಗಳಿದರು. ಅಂದಕಾಲತ್ತಿಲ್ ಕತೆ ಎಲ್ಲಾ ಹೊರತಂದು  ನಾನು ಬೇಶರತ್ತಾಗಿ ಕ್ಷಮೆಯಾಚಿಸಲೇಬೇಕಾಯಿತು. ಅದೇ ಕಡೆ; ಅಂದಿನಿಂದ ನಮ್ಮ ಪರಿಚಿತರು ಯಾರಾದರೂ ಬಂದರೆ ನಾನು ಕೇಸ್ ನೋಡುವುದಿಲ್ಲ ಎಂದರು. ನನಗೋ ಪಾಟಿಗೆ ಕಡೆಗಾದರೂ ಡೆಂಚರ್  ಸರಿಯಾಯಿತೇ ಎಂಬ ಕುತೂಹಲ.  ಶಿವ ನಗುತ್ತಾ ‘ಸರಿಯಾಯ್ತು. ಅದಕ್ಕೆ ಕಾರಣ ನಮ್ಮ ತಾತ; ಎಷ್ಟೆಂದರೂ ಅನುಭವಸ್ಥರು. ಅವರ ಮಾತಿನ ಪ್ರಕಾರ ಸೀನಿಯರ್ ಡಾಕ್ಟರ್ ಅಂತ ಗೆಳೆಯನ ಬಳಿ ಪಾಟಿ ಕಳಿಸಿದೆ. ಆತನಿಗೆ ಮೊದಲೇ ಯಾವುದೇ ರಿಯಾಯಿತಿ ತೋರಿಸಬೇಡ ಎಂದು ಹೇಳಿದ್ದೆ. ಆಶ್ಚರ್ಯ ಎಂದರೆ ಆತ ಹೇಳಿದಷ್ಟು ದುಡ್ಡು ಕೊಟ್ಟು ಕಮಕ್ ಕಿಮಕ್ ಎನ್ನದೇ ಡೆಂಚರ್ ಹಾಕಿಸಿಕೊಂಡರು ಪಾಟಿ. ಸೆಟ್ಟಿಂಗ್, ಲ್ಯಾಬ್ ಕೆಲಸ ಎಲ್ಲಾ ನಾನೇ ಮಾಡಿದ್ದು ಅಂತ ಪಾಟಿಗೆ ಗೊತ್ತಿರಲಿಲ್ಲ ಅಷ್ಟೇ! ಹಿತ್ತಲ ಗಿಡ ಮದ್ದಲ್ಲ ಎನ್ನುವ ಹಾಗೆ ಕೆಲವೊಮ್ಮೆ ನಮ್ಮವರಿಗೆ ನಮ್ಮ ಮಹತ್ವ ಗೊತ್ತೇ ಇರುವುದಿಲ್ಲ. ಅವರ ಸಲಿಗೆ- ಅತಿಯಾದ ನಿರೀಕ್ಷೆ ಜತೆ ನಮ್ಮ ದಾಕ್ಷಿಣ್ಯ ಎಲ್ಲವೂ  ಸೇರಿಬಿಡುತ್ತೆ. ಹಾಗಾಗಿ ಪ್ರೊಫೆಶನಲ್ ಮತ್ತು ಪರ್ಸನಲ್ ಲೈಫ್ ಬೇರೆಯಾಗಿಟ್ಟರೇ ಒಳ್ಳೆಯದು’ ಎಂದಾಗ ಎಲ್ಲರಿಗೂ ಹೌದೆನಿಸಿತ್ತು. ಅಂತೂ ಪಾಟಿಯ ಕತೆಯೊಂದಿಗೆ ಆ ದಿನದ ಊಟ ಮುಗಿದಿತ್ತು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: