ಡಾ. ಎಂ ಜಿ ಹೆಗಡೆ ಸಂದರ್ಶನ- ಅನ್ಯವ ಕಂಡು ಹಿಗ್ಗಬೇಕು

ಶ್ರೀಪಾದ್‌ ಭಟ್‌

ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಕುಮಟಾದ ಡಾ. ಎ. ವಿ. ಬಾಳಿಗಾ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿರುವ ಡಾ. ಎಂ. ಜಿ. ಹೆಗಡೆ ವಿಮರ್ಶಕ, ಪುಸ್ತಕಗಳ ಸಂಪಾದಕ ಮತ್ತು ತಾಳಮದ್ದಲೆಯ ಅರ್ಥಧಾರಿ. ನಾಲ್ಕು ನಾಟಕಗಳನ್ನು ಬರೆದಿದ್ದಾರೆ. ‘ಗೌರೀಶ್ ಕಾಯ್ಕಿಣಿ’,  ‘And Where Shall I Roost’ ಅವರ ಪ್ರಕಟಿತ ಪುಸ್ತಕಗಳಾಗಿವೆ. ಅವರು ಕೆಲಕಾಲ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಭಾಷಾ ನಿಕಾಯದ ನಿರ್ದೇಶಕರಾಗಿಯೂ ಹಾಗೂ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದಾರೆ.

ಅವರು ಸಂಪಾದಿಸಿದ ಮುಖ್ಯ ಪುಸ್ತಕಗಳು ‘ಸಹಯಾನ’, ‘ಕಟಾಂಜನ’, ‘ಅಮೃತಬಿಂದು’, ‘ಗೌರೀಶರ ಅತ್ಯುತ್ತಮ ಬರಹಗಳು’, ‘ಸಮುದಾಯದ ಗಾಂಧಿ’.

ಅವಧಿಗಾಗಿ ಅವರು ನೀಡಿದ ಸಂದರ್ಶನ ಇಲ್ಲಿದೆ.

ಅನ್ಯವ ಕಂಡು ಹಿಗ್ಗಬೇಕು

ಈ ಜಗತ್ತಿನ ಕುರಿತು ಕೇಳಿಕೊಳ್ಳುವ ಪ್ರಶ್ನೆಗಳಿಗೂ ಸಾಹಿತ್ಯ ಕಲೆಗಳ ಕುರಿತೂ ಕೇಳಿಕೊಳ್ಳುವ ಪ್ರಶ್ನೆಗಳಿಗೂ ಅಂತರವೇನು?

ಕಲೆ, ಸಾಹಿತ್ಯವೆಲ್ಲ ಜೀವನದಲ್ಲಿ ಎಷ್ಟೇ ಆಳವಾಗಿ ಬೇರೂರಿದರೂ ಕಡೆಗೂ ಅವು ಕಲೆ ಸಾಹಿತ್ಯಗಳೇ ಅಲ್ವೆ? ಸಾಹಿತ್ಯ ಒಂದು ನಿರ್ಮಾಣ, ಉದ್ದೇಶಪೂರ್ವಕ ನಿರ್ಮಾಣ. ಅದಕ್ಕೆ ಅದರದೇ ಆದ ಗ್ರಾಮರ್ ಇದೆ, ಸ್ವ–ರೂಪ ಇದೆ, ನಿಯೋಗ ಇದೆ. ಆಯಾ ಕಲೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡಷ್ಟೂ ಅದರ ವ್ಯಾಕರಣದ ಅರಿವಾಗ್ತದೆ. ನಾವು ಅವುಗಳಿಂದ ಪಡೆದುಕೊಳ್ಳಬಹುದಾಗಿದ್ದು ಹೆಚ್ಚಾಗ್ತದೆ. ಜಗತ್ತಿನ ಕುರಿತು ಕೇಳಿಕೊಳ್ಳುವ ಪ್ರಶ್ನೆಗಳಿಗೂ ಅಲ್ಲಿ ಉತ್ತರ ಸಿಗಬಹುದು. ಈ ರಗಳೆ ಬಿಟ್ಟು ಇದನ್ನೇ ಕುರಿತ ರಾಮಾನುಜನ್‍ರ ಒಂದು ಪದ್ಯ ಇದೆ ನೋಡಿ. ಜನರಲ್ ಆಗಿ ಮಾತನಾಡೋಕಿಂತ ಈ ಪದ್ಯ ಇಟ್ಕೊಂಡು ಯೋಚ್ನೆ ಮಾಡೋದು ಒಳ್ಳೇದು, ಆ ಪದ್ಯ ಹೀಗಿದೆ.

ಕಲೆ ಮತ್ತು ಜೀವನ ಸೌಂದರ್ಯ

ಮಧುರೆಯ ಧೂಳು ಬೀದಿಯಲ್ಲಿ
ಕುಷ್ಠ ಈ ಗಂಡಸಿನ ಮುಖ ಮುರಿದಿದೆ
ಮುಖಕ್ಕೆ ಮೂಗಿಲ್ಲ,
ಹಸ್ತಕ್ಕೆ ಬೆರಳಿಲ್ಲ,
ಕಾಲಿಗೆ ಹಿಮ್ಮಡಿ
ಇಲ್ಲ
ಕಣ್ಣಸುತ್ತ ಆ ಕಿಸುರು ಪಾಯಸ
ಕೈ ಸೊಳ್ಳೆ,
ಹುಣ್ಣು ನವಿಲುಬಣ್ಣದ ನೊಣಗಳಿಗೆ
ನಾಗಮುರಿ ಹೂವು,
ಪಕ್ಕದಲಿ ಹೆಂಡತಿ ಕತ್ತಿನಲಿ ಹೊಸ
ತಾಳಿ.
ಅವನ ಹಿಂದೆ ಶತಶತಮಾನದ ಗುಡಿ-
ಬಾಗಿಲ ಅಪ್ಸರೆ.
ಮುರಿದ ಮೂಗಿನ
ಕೆಳಗೆ ಶಿಲ್ಪಶಾಸ್ತ್ರದ ಮೂವತ್ತೆರಡನೆ ಸೂತ್ರ
ಹೇಳಿದ ಮಂದಹಾಸ,
ಕಾಲ ಖಿಲ್ಜಿಯ ಮೊಮ್ಮಗ
ಮುರಿದ ತೊಡೆಯಲ್ಲೂ ತ್ರಿಭಂಗ.
ತೊಡೆ ನಡುವಿನ ಬಿಲ್ಲೆ
ಮೇಲೆ ತಮಿಳು ಪೋಕರಿಗಳ
ಸಂಸ್ಕೃತ.
ನಾನು ಇವೆರಡನ್ನೂ ನೆನಸಿಕೊಂಡು
ಜೀವನ ಮತ್ತು ಕಲೆಯ ಬಗ್ಗೆ ಅಮೆರಿಕದಲ್ಲಿ
ಭಾಷಣ ಮಾಡಿದೆ.
ಎಲ್ಲರೂ ಬಹಳ ಮೆಚ್ಚಿಕೊಂಡರು.

ಎ. ಕೆ. ರಾಮಾನುಜನ್

ಸಂಸ್ಕಂತಿ ವಿಮರ್ಶೆಯ ಹೆಸರಿನಲ್ಲಿ ನಡೀತಿರೋ ಸಾಹಿತ್ಯ ಕೃತಿವಿಮರ್ಶೆಯಲ್ಲಿ ಕೃತಿಯೇ ನಾಪತ್ತೆ ಅನ್ನೋ ಅಪವಾದಗಳಿವೆಯಲ್ವಾ? ಕೃತಿ ಆಧರಿಸಿದ ಚರ್ಚೆ ಇಲ್ಲವೆನ್ನುವಷ್ಟು ಕಡಿಮೆ ಆಗಿದೆಯಾ?

ಕೃತಿ ಆಧರಿಸಿದ ಚರ್ಚೆ ಇಲ್ಲವೆನ್ನುವಷ್ಟು ಕಡಿಮೆ ಆಗ್ತಿದೆ ಅಂತ ಈಗ ಯಾಕೆ ಅನಿಸ್ತಿದೆ ಅಂದ್ರೆ, ಸಾಹಿತ್ಯ ವಿಮರ್ಶೆ ಅಂದ್ರೆ ಕೃತಿ ವಿಮರ್ಶೆ, ಅದರ ಭಾಷಿಕ ರೂಪದ ವಿಮರ್ಶೆ ಅಂದುಕೊಂಡಿದ್ದ ಕಾಲಘಟ್ಟವನ್ನು ನಾವು ನಮ್ಮ ಎಳವೆಯಲ್ಲೋ, ಯೌವನದಲ್ಲೋ ಕಂಡಿದ್ದರಿಂದ. ಸಾಹಿತ್ಯ ಕೃತಿಯ ಬಗ್ಗೆ ಮಾತನಾಡುವಾಗ ಕೃತಿಗೆ ಹೊರಗಿನ ಸಂಗತಿಗಳನ್ನು ತರಬಾರ್ದು ಅನ್ನೋದನ್ನ ಒಂದು ವ್ರತದಷ್ಟು ನಿಷ್ಠೆಯಿಂದ ಪಾಲಿಸಿದ್ದ ಕಾಲಘಟ್ಟ ಅದಾಗಿತ್ತು.

ಹಾಗೆ ತರೋದು ದೋಷ ಅಂತ ಪರಿಗಣಿತ ಆಗ್ತಿತ್ತು. ನಾವೀಗ ಆ ಕಾಲಘಟ್ಟ ದಾಟಿಬಂದಿದ್ದೇವೆ. ಆ ಕಾಲಘಟ್ಟಕ್ಕಿಂತ ಹಿಂದೂ ಅದಿರ್ಲಿಲ್ಲ, ಈಗ್ಲೂ ಅಷ್ಟಾಗಿ ಕಾಣ್ತಿಲ್ಲ. ಅಂದ್ರೆ ವಿಮರ್ಶೆಯ ಸ್ವರೂಪ, ಅದರ ವಿಧಾನ, ಆದ್ಯತೆಗಳು ಎಲ್ಲವೂ ಕಾಲದಿಂದ ಕಾಲಕ್ಕೆ ಬದಲಾಗ್ತದೆ.

ಇನ್ನೊಂದು ಸಂಗತಿ ಎಂದರೆ, ವಿಮರ್ಶೆ ಕೃತಿಕೇಂದ್ರಿತ ಆಗಿದ್ದಾಗ ಸಾಹಿತ್ಯ ಅಂದ್ರೆ ಅದೊಂದು ಭಾಷಿಕ ರಚನೆ ಅಂದುಕೊಳ್ತದೆ ಹಾಗೂ ಆ ರಚನೆಯನ್ನು ವಿಶ್ಲೇಷಿಸುತ್ತದೆ. ಅದು ಸಮಾಜ ಕೇಂದ್ರಿತ ಆದಾಗ, ಸಾಹಿತ್ಯ ಅಂದ್ರೆ ಒಂದಲ್ಲ ಒಂದು ರೀತಿ ತನ್ನ ಕಾಲದ ಪ್ರಭಾವಿ ವೈಚಾರಿಕತೆ, ಅಧಿಕಾರ ಸಂಬಂಧಗಳಿಂದ ಪ್ರಭಾವಿತ ಆಗಿರ್ತದೆ ಅಂದ್ಕೊಳ್ತದೆ ಹಾಗೂ ಅವನ್ನೆಲ್ಲ ವಿಶ್ಲೇಷಣೆಗೆ ಒಳಪಡಿಸ್ತದೆ.

ಹೇಗೆ ಒಳ್ಳೆಯ ಕೃತಿ ಕೇಂದ್ರಿತ ವಿಮರ್ಶೆ ಭಾಷಿಕ ಆಯಾಮದ ಹೊರಗೂ ಹೋಗಿ ಯೋಚಿಸ್ತದೋ ಅದೇ ರೀತಿ ಒಳ್ಳೆಯ ಸಮಾಜ ಕೇಂದ್ರಿತ ವಿಮರ್ಶೆ ಸಾಹಿತ್ಯದ ಭಾಷಿಕ ಆಯಾಮದ ಬಗ್ಗೂ ಗಮನ ಕೊಡ್ತದೆ. ಕೃತಿಯನ್ನು ನೆಪಕ್ಕೆ ಮಾತ್ರವೇ ಆವಾಹಿಸುವ ಗೊಂದಲದ ಬರಹಗಳನಷ್ಟೇ ಗಮನದಲ್ಲಿಟ್ಟುಕೊಂಡು ಅದನ್ನೇ ‘ನಾಮ್ರ್ಸ್’ ಅಂತ ತಿಳಿಯುವದು ಬೇಡ.

ಸಾಹಿತ್ಯದ ಕಲ್ಪನೆಯೇ ಬದಲಾಗದೇ ಸ್ತ್ರೀವಾದಿ ವಿಮರ್ಶೆ, ವಸಾಹತೋತ್ತರ ವಿಮರ್ಶೆಯಂತಹ ಪರಿಪ್ರೇಕ್ಷ್ಯಗಳೇ ಬರ್ತಿರ್ಲಿಲ್ಲ ಅಲ್ವಾ? ಮತ್ತೆ ಸಂಸ್ಕಂತಿ ಅಧ್ಯಯನ ಅಂತ್ಲೇ ಅಂತರಶಿಸ್ತೀಯ ಅಧ್ಯಯನ ಕ್ಷೇತ್ರ ಇದೆ. ಹಿಂದೂ ಇತ್ತು ಬೇರೆ ಹೆಸರಿನಲ್ಲಿ, ಬೇರೆ ಅಜೆಂಡಾ ಇಟ್ಕೊಂಡು. ಅದು ಸಾಹಿತ್ಯವೂ ಸೇರಿದಂತೆ ಎಲ್ಲ ಬಗೆಯ ಸಾಂಕೇತಿಕ ರಚನೆ ‘ಸಿಂಬಾಲಿಕ್ ಕನ್‍ಸ್ಟ್ರಕ್ಷನ್ಸ್’ ಗಳನ್ನ ವಿಶ್ಲೇಶಿಸುತ್ತದೆ.

‘ಹೇಳಿ ನೀವ್ಯಾರ ಕಡೆ’ ಅನ್ನುವ ಒತ್ತಾಯ ಸಾಹಿತಿಗಳ ಮೇಲೆ ಹೆಚ್ಚುತ್ತಿದೆಯಾ?

ಸಾಹಿತಿಗಳನ್ನು ಅಂತ ಅಲ್ಲ ಯಾರನ್ನೂ ಹಾಗೆ ಕೇಳೋದು ತಪ್ಪು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವದು, ‘ಅನ್ಯಕ್ಕೆ ಹಿಗ್ಗುವುದು ಸಭ್ಯ ಸಮಾಜದ ಅಡಿಗಲ್ಲು. ಸಾಹಿತಿಗಳನ್ನು ಎಂದು ನೀವು ಹೇಳಿದಾಗ ಅನಂತಮೂರ್ತಿಯವರ ಕವನದ ಸಾಲು ನೆನಪಿಗೆ ಬಂತು

ಇಗೋ ತಿಪ್ಪೆಹೊತ್ತ ಇವಳು ತ್ರಿಪುರ ಸುಂದರಿ,
ಕಜ್ಜಿ ಕೆರೆದುಕೊಳ್ಳುತ್ತ ಬಿಸಿಲು ಕಾಯಿಸುವ ಇವನು
ರೈಭ್ಯ ಋಷಿ
ಮುದಿ ವ್ಯಾಸರಲ್ಲೂ ನೋಡುವ ವ್ಯಾಮೋಹ
ಅದೇ ಮುಗ್ಧಬಾಲಕನಲ್ಲಿ ವೈರಾಗ್ಯ
– ಇವೆಲ್ಲ ಹಠಬಿಟ್ಟು ಸುಮ್ಮನೆ ಕಂಡಾಗ

ಉತ್ತಮ ಸಾಹಿತ್ಯದ ಗುಣ ಏನು? ಸಾಹಿತ್ಯ ನಮ್ಮನ್ನು ಈ ಜಗತ್ತಿನಿಂದ ದಾಟಿಸುವಂತಿರಬೇಕೋ ಅಥವಾ ಇಲ್ಲಿಯೇ ಆಳವಾಗಿ ಇರಿಸುವಂತಿರಬೇಕೋ?

ಮೊದಲಾಗಿ ಸಾಹಿತ್ಯ ಅನ್ನೋದು ಅಸ್ತಿರ ಆಗಿರೋ ಕಲ್ಪನೆ. ಒಂದು ದೇಶ ಕಾಲದಲ್ಲಿ ಸಾಹಿತ್ಯ ಆಗಿದ್ದು ಇನ್ನೊಂದು ದೇಶ ಕಾಲದಲ್ಲಿ ಆಗಿರಬೇಕಾಗಿಲ್ಲ. ಆಮೇಲೆ ಯಾವುದು ಉತ್ತಮ ಅನ್ನೋದು ಇದಕ್ಕಿಂತ ಹೆಚ್ಚು ಅನಿಶ್ಚಿತವಾದದ್ದು. ಸಾಹಿತ್ಯ ಕುರಿತು ಒಂದೊಂದು ಕಾಲದಲ್ಲಿ ಒಂದೊಂದು ಅಪೇಕ್ಷ ನಿರೀಕ್ಷೆ ಇರ್ತದೆ, ಶ್ರೇಷ್ಠತೆಯ ಕಲ್ಪನೆಯೂ ಇರ್ತದೆ. ಇರೋದು ತಪ್ಪಲ್ಲ. ಆದ್ರೆ ಅದು ಆಗ್ರಹ ಆದ್ರೆ ಕಷ್ಟ. ಅದು ಹಿಂಸೆ.

ಸಾಹಿತ್ಯದಲ್ಲಿ ಇದೋ ಅದೋ ಅನ್ನುವದು ಒಂದು ಆಭಾಸ ಅಷ್ಟೆ. ವಿರೋಧ ಅಲ್ಲ. ಆಳವಾಗಿ ಬೇರೂರಿರದೇ ದಾಟೋಕಾಗೋದಿಲ್ಲ, ದಾಟದೇ ಆಳಕ್ಕಿಳಿಯೋಕಾಗೋದಿಲ್ಲ. ಯಾರಿಗೆ ಅಂತ ಕೇಳಿದ್ರೆ ಕವಿ, ಓದುಗ ಇಬ್ರಿಗೂ. ಒಬ್ಬ ಪದ ಅರ್ಪಿಸ್ತಾನೆ, ಇನ್ನೊಬ್ಬ ಪದಾರ್ಥ ದೊರಕಿಸಿಕೊಳ್ತಾನೆ. ಅದೊಂದು ಸಹಯೋಗದ ಚಟುವಟಿಕೆ. ಸ-ಹೃದಯದ ವ್ಯಾಪಾರ ಅದು. ಸಹ-ಅನುಭೂತಿ ಅದು.

ಓದುವದು ಅಂದರೆ? ಆದರ್ಶ ಓದುಗನ ಕುರಿತು. . .

ನಮ್ಮ ‘ಲಗೇಜು’ ಎಲ್ಲ ಬದಿಗಿಟ್ಟು ವಿರಾಮದಲ್ಲಿ ಆರಾಮವಾಗಿ ಕೂತು ಓದ್ಬೇಕು ಅಂದ್ರೆ ಹುಬ್ಬೇರಿಸಬೇಕಾಗಿಲ್ಲ. ಒಲೆಮೇಲೆ ಹಾಲು ಕಾಯಿಸಲಿಕ್ಕಿಟ್ಟು ಸಿನೆಮಾ ನೋಡೋಕಾಗ್ತದಾ? ಕಾವ್ಯಪ್ರೇಮಿ ಅನ್ನೋ ಪ್ರಯೋಗ ಇದೆ ನೋಡಿ. ಪ್ರೀತಿಯಿಂದ ಓದುವವನು, ಓದಿ ಹಿಗ್ಗುವವನು ಆದರ್ಶ ಓದುಗ. ‘ಹಿಗ್ಗಬೇಕು’.

‍ಲೇಖಕರು Avadhi

October 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

2 ಪ್ರತಿಕ್ರಿಯೆಗಳು

 1. ಸುಬ್ರಾಯ ಮತ್ತೀಹಳ್ಳಿ.

  ಸರಳ ಸಮಗ್ರ ಮತ್ತು ಸಂಕ್ಷಿಪ್ತ. ಸಂದರ್ಶನ ಆಕರ್ಷಕವಾಗಿದೆ. ಆದರೆ ಅಭಿಪ್ರಾಯಗಳಿಗೆ ಇನ್ನಷ್ಟು ವಿವರ ಬೇಕೆಂದೆನಿಸಿತು.

  ಪ್ರತಿಕ್ರಿಯೆ
 2. Ahalya Ballal

  ಎಮ್ ಜಿ ಹೆಗಡೆಯವರ ಸಂದರ್ಶನ ಓದಿ ಖುಶಿ ಆಯ್ತು. ಒಂದೊಂದು ಮಾತೂ ಹೌದುಹೌದೆನ್ನುವಂತಿದೆ.
  ನನ್ನ ದೂರು ಒಂದೇ: ಇಷ್ಟು ಸಂಕ್ಷಿಪ್ತವಾಗಿ ಏಕಿದೆ?
  ಇನ್ನೊಮ್ಮೆ ಅವರನ್ನು ಸುದೀರ್ಘವಾಗಿ ಸಂದರ್ಶನ ಮಾಡಿ, ಸರ್. ಪ್ಲೀಸ್

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: