ಟೇಕನ್‌ ಫಾರ್‌ ಗ್ರಾಂಟೆಡ್‌…!?

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

ಈಗ್ಗೆ  ಕೆಲವೇ ವರ್ಷಗಳ ಹಿಂದೆ ನಮ್ಮ ಸಂಬಂಧಿಕರ ಮನೆಯವರೆಲ್ಲಾ ಒಂದು ದಿನ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ʼನೋಡಿ ಸ್ವಾಮಿ ನಾವಿರೋದು ಹೀಗೆʼ ಸಿನೆಮಾ ನೋಡುತ್ತಿದ್ದರಂತೆ.  ಅದು ೧೯೮೩ರಲ್ಲಿ ನಿರ್ಮಾಣವಾಗಿದ್ದ ಸಿನೆಮಾ. ಹಿರಿಯರೆಲ್ಲಾ ಎಂದಿನಂತೆ ಸೋಫಾ ಚೇರ್‌ಗಳಲ್ಲಿ ಕುಳಿತಿದ್ದು, ಮೊಮ್ಮಕ್ಕಳು ಅವರವರಿಗೆ ಹೊಂದುವಂತೆ ಅಜ್ಜಿತಾತಗಳ ತೊಡೆಯಲ್ಲೋ, ಅಮ್ಮ ಅಪ್ಪನ ಮಗ್ಗುಲಲ್ಲೋ, ಟೀವಿಯೆದುರು ಉದ್ದಾನೆ ಬೋರಲು ಮಲಗಿಕೊಂಡು ಮೊಣಕೈಯೂರಿಕೊಂಡು ಮುಖವಿಟ್ಟುಕೊಂಡು ನೋಡುತ್ತಿದ್ದರು.

ಸಿನೆಮಾದ ಒಂದು ದೃಶ್ಯ ನಾಯಕ-ನಾಯಕಿ ಒಬ್ಬರ ಮೇಲೆ ಒಬ್ಬರು ಮುನಿಸಿಕೊಂಡಿರುತ್ತಾರೆ. ಮುನಿಸಿಗೆ ಕಾರಣ – ಒಂದು ಸಂಜೆ ಇಬ್ಬರೂ ಕಾಮತ್‌ ಹೋಟೆಲ್‌ ಎದುರು ಭೇಟಿಯಾಗಲು ನಿಶ್ಚಯಿಸಿರುತ್ತಾರೆ. ಕಾಮೆಡಿ ಆಫ್‌ ಎರರ್ಸ್‌ನ ಕಥಾಹಂದರದಂತೆ ಅವರಿಬ್ಬರ ಭೇಟಿಯಾಗುವುದಿಲ್ಲ. ಇಬ್ಬರೂ ಬೇರೆ ಬೇರೆ ರಸ್ತೆಗಳಲ್ಲಿದ್ದ ಕಾಮತ್‌ ಹೋಟೆಲ್‌ಗಳ ಎದುರು ಕಾದೂ ಕಾದೂ ಬೇಸರಿಸಿಕೊಂಡು ಹಿಂದಿರುಗಿರುತ್ತಾರೆ. ಆಮೇಲೆ ಅದನ್ನೇ ದೊಡ್ಡದು ಮಾಡಿಕೊಂಡು ಸಿಟ್ಟು, ಸೆಡವು… ಕತೆ ಮುಂದುವರಿಯುತ್ತದೆ.

ಸಿನೆಮಾ ನೋಡುತ್ತಿದ್ದ ದೊಡ್ಡವರೆಲ್ಲಾ ಆ ದೃಶ್ಯದ ಚೌಕಟ್ಟನ್ನು ಆಸ್ವಾದಿಸುತ್ತಿದ್ದರೆ, ಆಗಿನ್ನೂ ಕೇಜೀ ತರಗತಿಗೆ ಪ್ರವೇಶಿಸಿದ್ದ ಮೊಮ್ಮಗಳೊಬ್ಬಳು ಇಡೀ ದೃಶ್ಯವನ್ನು ಡಿಸ್‌ಮಿಸ್‌ ಮಾಡುವಂತೆ, ‘… ಅವ್ರಿಗೆ ಬುದ್ಧಿ ಇಲ್ವಾ… ಒಂದು ಫೋನ್‌ ಮಾಡಿದ್ರೆ ಆಗ್ತಿತ್ತುʼ ಎನ್ನುತ್ತಾಳೆ ಮುದ್ದು ಮುದ್ದಾಗಿ.

ಅವಳ ಮಾತಿಗೆ ಒಂದು ಕ್ಷಣ ದೊಡ್ಡವರಿಗೆಲ್ಲಾ ಅಯೋಮಯವಾಯಿತಂತೆ… ಆಮೇಲೆ ಕೆಲವರು ಫಕ್ಕನೆ ನಕ್ಕು ಆ ಮಗುವಿನ ತಲೆ ಸವರಿ, ‘ಓಯ್‌! ಆಗ ಮೊಬೈಲ್‌ ಫೋನ್‌ ಇರ್ಲಿ, ಲ್ಯಾಂಡ್‌ಲೈನ್‌ ಕೂಡಾ ಎಲ್ಲ ಕಡೆ ಇರಲಿಲ್ಲ ಗೊತ್ತಾ?ʼ ಅಂತ ಹೇಳಿ ನಗು ಮುಂದುವರಿಸಿದರಂತೆ. ತನಗನ್ನಿಸಿದ್ದನ್ನು ಹೇಳಿದ ೨೧ನೇ ಶತಮಾನದಲ್ಲಿ ಹುಟ್ಟಿರುವ ಮಗುವಿಗೆ ಈಗ ಗೊಂದಲ…

ಮೊಬೈಲ್‌ ಫೋನ್‌ ಇರ್ಲಿಲ್ವಾ? 

ಪ್ರಾಯಶಃ ನಮಗೆಲ್ಲರಿಗೂ ಒಂದಲ್ಲಾ ಒಂದು ಸಂದರ್ಭದಲ್ಲಿ, ಒಂದು ಸಮಯದಲ್ಲಿ ʼ…ಅದು ಇರ್ಲಿಲ್ವಾ?ʼ ಹಂಗಂದ್ರೆ … ಎನ್ನುವ ಕ್ಷಣಗಳು ಎದುರಾಗಿರಬಹುದು. ಅದೂ ಬಾಲ್ಯದಲ್ಲಿ.

೧೯೬೫ರಲ್ಲಿ ಹುಟ್ಟಿರುವ ನನಗೆ ಬಾಲ್ಯದ ದಿನಗಳಲ್ಲಿ ನಮ್ಮೂರು ನೆಲಮಂಗಲಕ್ಕೆ ಹೋದಾಗಲೆಲ್ಲಾ ಒಂದು ಪ್ರಶ್ನೆ ಎದುರಾಗುತ್ತಿತ್ತು. ಅಲ್ಲಿ ಇದ್ದದ್ದು ಕೆಲವೇ ಕೆಲವು ಸಿಹಿನೀರಿನ ಬಾವಿಗಳು. ಅವುಗಳಲ್ಲಿ ಒಂದು ದೊಡ್ಡ ಸಿಹಿನೀರ ಬಾವಿ, ಮರಳೋಣಿ ಬಾವಿ. ಹೆಚ್ಚೂ ಕಡಿಮೆ ಊರ ಹೊರಗೆ ಬಸ್‌ಸ್ಟಾಂಡಿನ ಪಕ್ಕದಲ್ಲಿ (ಈಗ ಅದು ಊರ ಮಧ್ಯದಲ್ಲಿ ಮುಳುಗಿದೆ!). ಸಿಹಿ ನೀರು ಬೇಕೆಂದರೆ ಅಲ್ಲಿಗೇ ಹೋಗಿ ನೀರು ಸೇದಿ ತುಂಬಿದ ಬಿಂದಿಗೆಗಳನ್ನು ತಲೆಯ ಮೇಲೆ ಕಂಕುಳಲ್ಲಿ, ಕೈಯಲ್ಲಿ  ಹೊತ್ತು ತರಬೇಕು. ಬೇರೆ ಮಾರ್ಗವಿಲ್ಲ. ನಮ್ಮಜ್ಜಿಯ ನೇತೃತ್ವದಲ್ಲಿ ಹೋಗಿ ಆಗಾಗ್ಗೆ ನೀರು ತರುವುದು ಮನೆಮಂದಿಗೆ ವಾಡಿಕೆಯಾಗಿತ್ತು. ಊರಿಗೆ ಹೋದಾಗ ಅಂತಹ ಸಂದರ್ಭಗಳಲ್ಲಿ ನಾವೂ ಅವರೊಡನೆ ಹೆಜ್ಜೆಹಾಕುತ್ತಿದ್ದೆವು.

ಬೆಂಗಳೂರಿನ ರಾಜಾಜಿನಗರದಲ್ಲಿ ಅಪ್ಪಅಮ್ಮ ಅಕ್ಕಂದಿರೊಂದಿಗೆ ಇದ್ದ ೬-೭ ವರ್ಷದವ ನನಗೆ ಎದುರಾಗುತ್ತಿದ್ದ ಪ್ರಶ್ನೆ, ನೆಲಮಂಗಲದಲ್ಲಿ ಇವರ ಮನೆಗಳಲ್ಲಿ ಕೊಳಾಯಿ ತಿರುಗಿಸಿದರೆ ನೀರು ಯಾಕೆ ಬರಲ್ಲ… ಆಗ ನನ್ನ ಸೋದರ ಮಾವ ಮುಸುಮುಸು ನಗುತ್ತಾ ಹೇಳ್ತಿದ್ದುದು, ‘ಕೊಳಾಯಿ ತಿರುಗಿಸಕ್ಕೆ ನಮ್ಮನೇಲಿ ಕೊಳಾಯಿಯೇ ಇಲ್ಲ…ʼ ಮನೆಯವರೆಲ್ಲಾ ನನ್ನ ನೋಡಿ ಗಮಾರ ಎನ್ನುವಂತೆ ನಗುತ್ತಿದ್ದರೆ, ನಾನೇನು ಕೇಳಬಾರದ್ದು ಕೇಳಿದೆ ಎನ್ನುವಂತೆ ನನಗಾಗುತ್ತಿತ್ತು.

ಆಮೇಲೆ ನೆಲಮಂಗಲದಲ್ಲಿ ಬೀದಿ ಬೀದಿಗೆ ಕೊಳಾಯಿಗಳು ಬಂದವು. ಅದು ಯಾವಾಗ ಬಂತೋ ನನಗೆ ಗೊತ್ತಿಲ್ಲ. ಮನೆಮನೆಗೆ ಬಂದದ್ದೋ?… ಊಹ್ಞೂ! ಅದೂ ನೆನಪಿಲ್ಲ. (ಬೆಂಗಳೂರಿನಲ್ಲಿ  ನಾವು ಓಡಾಡುತ್ತಿದ್ದ ಬಹಳ ಕಡೆ ಅಲ್ಲಲ್ಲಿ ಬೀದಿ ನಲ್ಲಿಗಳು ಇದ್ದವು. ಅವೇನು ವಿಶೇಷವಾಗಿರಲಿಲ್ಲ. ಕೊಳಾಯಿಯಲ್ಲಿ ನೀರು ಹೇಗೆ ಬರುತ್ತೆ ಅನ್ನುವ ಪ್ರಶ್ನೆ ಖಂಡಿತಾ ನನಗೆ ಬಂದಿರಲಿಲ್ಲ. ಕೊಳಾಯಿ ತಿರುಗಿಸಿದರೆ ನೀರು ಬರುತ್ತೆ ಅಷ್ಟೆ!) ನೆಲಮಂಗಲದ ಮನೆ ಮಂದಿಯೆಲ್ಲಾ ವಾರದಲ್ಲಿ ಒಂದೋ ಎರಡೋ ದಿನ ಯಾವುದೋ ಒಂದು ಹೊತ್ತಿನಲ್ಲಿ ಇದ್ದಕ್ಕಿದ್ದ ಹಾಗೆ ಚುರುಕಾಗುತ್ತಿದ್ದರು.

ಹೆಚ್ಚೂ ಕಡಿಮೆ ಎಲ್ಲರೂ ಧಡಧಡ ಎಂದು ರಸ್ತೆಗೂ ಮನೆಗೂ ಓಡಾಡಿ ದೊಡ್ಡ ದೊಡ್ಡ ಕೊಳದಪ್ಪಲೆಗಳಲ್ಲಿ ಕುಡಿಯುವ ನೀರನ್ನು ತುಂಬುತ್ತಿದ್ದರು. ನೀರು ಇನ್ನೂ ಬರುತ್ತಿದ್ದರೆ ಸ್ನಾನದ ಹಂಡೆ, ತೊಟ್ಟಿಗೂ ನೀರು ತುಂಬುತ್ತಿತ್ತು. ಎಲ್ಲ ದಿನಗಳೂ ಹೀಗಲ್ಲ. ಒಮ್ಮೊಮ್ಮೆ ನೀರು ಬರುತ್ತಲೆ ಇರಲಿಲ್ಲ. ಬಿಂದಿಗೆ, ಕೊಳದಪ್ಪಲೆ, ಪಾತ್ರೆಗಳನ್ನೆಲ್ಲಾ ಖಾಲಿ ಮಾಡಿಕೊಂಡು ಕಾಯುವವರೆಲ್ಲಾ ಹೈರಾಣು. ಆಗ ಅಕ್ಕಪಕ್ಕದ ಮನೆಯವರೆಲ್ಲಾ ನೀರು ಬಿಡುವವನು ಯಾಕೆ ಹೀಗೆ ಮಾಡಿದ ಎಂದು ಪ್ರಶ್ನಿಸಿಕೊಳ್ಳುತ್ತಿದ್ದರೆ, ಕೆಲವರು ಸಣ್ಣಗೆ ಬೈಯುತ್ತಿದ್ದರು.

ಒಂದಷ್ಟು ಜನ ಬಿಂದಿಗೆ ಹಿಡಿದು ಮರಳೋಣಿ ಬಾವಿಗೆ ಮೆರವಣಿಗೆ ಹೊರಡುತ್ತಿದ್ದರು.

ನನಗಾಗ ಒಂದು ಪ್ರಶ್ನೆ… ಈ ನೀರು ಬಿಡುವುದು ಎಂದರೇನು? ಸಾಮಾನ್ಯವಾಗಿ ಚುರುಕು ಬುದ್ಧಿಯವ ಎನಿಸಿಕೊಂಡಿದ್ದ ನಾನು ಊರಿನ ಮನೆಯ ಮಂದಿ, ಮಕ್ಕಳೆದುರು ಕೇಳಿ ಬೆಪ್ಪನಾಗಿದ್ದೆ.  ಊರಿನ ಮಕ್ಕಳಿಗೆಲ್ಲಾ ನೀರು ಬಿಡುವ ಲೈನ್‌ಮನ್‌ ಗೊತ್ತಿದ್ದ. ಅವನ ಹೆಸರು, ಅವನು ತರುವ ಉದ್ದನೆ ಕಂಬಿ, ಅವನು ಊರಿನ ಬೀದಿಗಳಲ್ಲೆಲ್ಲಾ ಚಕಚಕನೆ ಓಡಾಡಿ, ಬೇರೆ ಬೇರೆ ರಸ್ತೆಗಳಿಗೆ ನೀರು ಬಿಡುವುದು, ನಿಲ್ಲಿಸುವುದು ಗೊತ್ತಿತ್ತು. ಇದೆಲ್ಲಾ ನನಗೆ ನಿಧಾನವಾಗಿ ತಿಳಿಯಿತು…!

ಇಷ್ಟು ಹೇಳಿದ ಮೇಲೆ ಇನ್ನೊಂದು ಹೇಳಲೇಬೇಕು.

ʼನೀರು ಯಾಕೆ ಬರಲಿಲ್ಲ… ಯಾಕೆ ಅವನು ನೀರು ಬಿಡಲಿಲ್ಲ?ʼ ಎನ್ನುವ ಜನರ ಪ್ರಶ್ನೆ ಅವರಿವರಿಂದ ಹೊರಟು, ಬೀದಿ ಬೀದಿಗಳಿಂದ ಸಾಗಿ ಎತ್ತಲೋ ಹೋಗಿ, ಅಲ್ಲಿಂದ ಮತ್ತೆ ಉತ್ತರ ಬರುತ್ತಿತ್ತು. ʼಕರೆಂಟ್‌ ಇರಲಿಲ್ಲ…ʼ ಅಂದ್ರೆ?! ನನಗರ್ಥಾನೇ ಆಗ್ತಿರಲಿಲ್ಲ. ಇದರ ಜೊತೆ ಒಂದೊಂದು ಸರ್ತಿ ಇಡೀ ದಿನ ಊರಲ್ಲಿ ಕರೆಂಟ್‌ ಇರ್ತಿರಲಿಲ್ಲ (ಇದು ಗೊತ್ತಿತ್ತು. ನಮ್ಮ ಬೆಂಗಳೂರು ಮನೆಯಲ್ಲೂ ಕೆಲವೊಂದು ಸರ್ತಿ ಇಡೀ ದಿನ ಕರೆಂಟ್‌ ಇರ್ತಿರಲಿಲ್ಲ). ಆಗ ಊರಿನ ಮನೆಯವರು ತಾವೇ ಮಾತಾಡಿಕೊಳ್ತಿದ್ದರು. ʼಓ! ಈಗ ಕರೆಂಟ್‌ ಇಲ್ಲ. ನಾಳೆ ನೀರು ಬರಲ್ಲʼ. ನನ್ನ ಪ್ರಶ್ನೆ, ಈ ಕರೆಂಟ್‌ಗೂ ನೀರಿಗೂ ಏನು ಸಂಬಂಧ? ಈ ಪ್ರಶ್ನೆ ಕೇಳಿದ್ದೆನೋ, ಮತ್ತೊಮ್ಮೆ ಪೆದ್ದನ ಕಳೆ ಏರಿಸಿಕೊಂಡಿದ್ದೆನೋ ತಿಳಿಯದು. ಆದರೆ ನಾಳೆ ನೀರಿಲ್ಲ ಅಂತ ಮಾತು ಬಂದರೆ ಊರಿನ ಮಕ್ಕಳೆಲ್ಲರೂ  ʼಓ! ಹಾಗಾʼ ಅಂತ ಅದನ್ನ ಸಾಮಾನ್ಯವಾಗಿ ತೆಗೆದುಕೊಳ್ಳುತ್ತಿದ್ದರು. ನನಗೋ ಅದು ಬಿಡಿಸಲಾಗದ ಪ್ರಶ್ನೆಯಾಗಿತ್ತು.

ಹೀಗೆ ಹಿಂದಿನದನ್ನು ನೆನಪಿಸಿಕೊಂಡು ಬರೆಯುತ್ತಿದ್ದಾಗ ಈ ಕರೆಂಟು ಕೂಡಾ ಹಾಗೇ ಅಲ್ಲವೆ ಅಂತ ಅನ್ನಿಸಿತು. ಗುಂಡಿ ಒತ್ತಿದೊಡನೆ ಟಕ್‌ ಅಂತ ಬಲ್ಬ್‌ ಹತ್ತಿಕೊಂಡು ಬೆಳಕು ಕೊಡುತ್ತಿದ್ದುದು ನಮಗೆ ಸಾಮಾನ್ಯವೇ ಆಗಿತ್ತು. ಅದು ಹೇಗೆ ಬಂತು ಅಂತ ಪ್ರಶ್ನಿಸಿಕೊಂಡೇ ಇರಲಿಲ್ಲ!

ಮರಳೋಡಿ ಸೀನೀರಿನ ಬಾವಿಯ ಜೊತೆಗೆ ಇನ್ನೊಂದು ವಿಚಾರ ಜನಜನಿತವಾಗಿತ್ತು. ನೆಲಮಂಗಲದ ಬಸ್‌ಸ್ಟಾಂಡಿನಿಂದ ಸೊಂಡೇಕೊಪ್ಪ ರಸ್ತೆಯಲ್ಲಿದ್ದ ದಟ್ಟವಾದ ಆಲದ ಮರಗಳ ಸಾಲು. ಆ ಮರದ ನೆರಳಿನಲ್ಲಿ ನಾವು ಮಕ್ಕಳೆಲ್ಲಾ ನಡೆದುಕೊಂಡು ಎರಡು ಕಿಲೋಮೀಟರ್‌ ದೂರದ ಬಯಲು ಗಣೇಶನ ದೇವಸ್ಥಾನಕ್ಕೆ ಭೇಟಿ ಕೊಟ್ಟು ಬರುತ್ತಿದ್ದೆವು. ಆ ಮರಗಳನ್ನು ಬೆಳೆಸಿದವರಾರು ಎಂದು ಆಗ ಕೇಳಿದ್ದೆನೋ ಇಲ್ಲವೋ (ಅದು ಇದೆ ಅಷ್ಟೆ!). ಊರಿನವರಿಗೆಲ್ಲ ತಿಳಿದಿತ್ತೋ ಇಲ್ಲವೋ ಗೊತ್ತಿಲ್ಲ.

ಇತ್ತೀಚೆಗೆ ನನ್ನ ಸೋದರ ಮಾವನ ಒಡನೆ ಮಾತನಾಡಿದಾಗ ತಿಳಿದದ್ದು ಊರಿನಲ್ಲಿನ ಆಗಿನ ಹಿರಿಯರಾಗಿದ್ದ ಸಿದ್ರಾಮಶೆಟ್ಟರ ಪ್ರೇರೇಪಣೆಯಂತೆ ಒಂದಷ್ಟು ಜನ ಉದ್ದಕ್ಕೂ ನೂರಾರು ಆಲದ ಮರದ ಕೊಂಬೆಗಳನ್ನು ನೆಟ್ಟರಂತೆ. ಇವರು ನೆಡುತ್ತಾ ಹೋದರೆ ಇನ್ನಾರೋ ರಾತ್ರಿಗಳಲ್ಲಿ ಅವನ್ನು ಕಿತ್ತುಕೊಂಡು ಹೋಗುವುದು ಆಗುತ್ತಿತ್ತು. ಜೊತೆಗೆ ಚಿಗುರಿದ ಕೊಂಬೆಗಳಿಗೆ ನೀರು ಬೇಕಿತ್ತು. ಆ ಸಸಿಗಳಿಗೆ ಭದ್ರತೆ ಕೊಡಲು ಒಂದಷ್ಟು ಜನ ಓಡಾಡಿದರಂತೆ. ಆದರೆ ನೀರು… ಕುಟುಂಬ ನಿರ್ವಹಣೆಗೆ ಕಷ್ಟ ಪಡುತ್ತಿದ್ದ ಅಚ್ಚಮ್ಮ ಎಂಬ ಮಹಿಳೆ ಆ ಜವಾಬ್ದಾರಿ ತೆಗೆದುಕೊಂಡರಂತೆ.

ಬಸ್‌ಸ್ಟಾಂಡ್‌ ಹತ್ತಿರದ ಒಂದು ಕುಂಟೆಯಿಂದ, ಅಲ್ಲಿಂದ ಇಲ್ಲಿಂದ ನೀರು ಹೊತ್ತು ಪ್ರತಿ ಗಿಡಕ್ಕೂ ಹಾಕಿ ಆಕೆ ಬೆಳೆಸಿದರಂತೆ. ಆಗಿನ ಕಾಲಕ್ಕೆ ಒಂದು ಗಿಡಕ್ಕೆ ನೀರು ಹಾಕಲು ೫೦ ಪೈಸೆ ಮಜೂರಿ ಪಡೆದರಂತೆ. ಎಷ್ಟು ಕಷ್ಟವಾಗಿರಬಹುದೋ ಗೊತ್ತಿಲ್ಲ. ಆದರೆ ನಮಗೆ ಆಗ ನೆರಳಿತ್ತು… ಅದು ಇತ್ತು ಅಷ್ಟೆ! ಈಗ ಆ ರಸ್ತೆಯ ನೆರಳು ನೆನಪಷ್ಟೆ… ಮರಗಳಿತ್ತು… ಈಗ ಅಷ್ಟೊಂದು ಮರಗಳಿಲ್ಲ. ರಸ್ತೆ ಅಗಲ ಮಾಡಿದಾಗ ಸಾಕಷ್ಟು ಮರಗಳು ನೆಲಕ್ಕುರುಳಿದವು.  

ನಾನು ಪ್ರಾಥಮಿಕ ಶಾಲೆಗೆ ಬಂದ ದಿನಗಳಲ್ಲಿ ನಮ್ಮ ಮನೆಯಲ್ಲಿ ರೇಡಿಯೋ ಬಂದಿತ್ತು. ಅಷ್ಟು ಹೊತ್ತಿಗೆ ಸುತ್ತಮುತ್ತಲ ಮನೆಗಳಲ್ಲೂ ರೇಡಿಯೋ ಇತ್ತು. ರಾತ್ರಿ ಊಟವಾದ ಮೇಲೆ ಎಲ್ಲರೂ ರೇಡಿಯೋನಲ್ಲಿ ಬರುತ್ತಿದ್ದ ಸಂಗೀತ, ನಾಟಕ ಕೇಳುತ್ತಿದ್ದೆವು. ಎಷ್ಟೋಬಾರಿ ರಾತ್ರಿ ೯.೩೦ಕ್ಕೆ ಶುರುವಾಗುತ್ತಿದ್ದ ಹಾಡು ನಾಟಕ ಕೇಳುತ್ತಾ ಹಾಗೆ ನಿದ್ದೆಗೆ ಜಾರುತ್ತಿದ್ದೆವು. ಆಗ ಇದು ಹೇಗೆ ಶಬ್ದ ಹೊರಡಿಸುತ್ತದೆ ಎನ್ನವುದಕ್ಕಿಂತ, ಬಹುತೇಕ ಮಕ್ಕಳಿಗೆ ಇರಬಹುದಾದ ಪ್ರಶ್ನೆ ರೇಡಿಯೋದ ಒಳಗಿನಿಂದ ಮಾತನಾಡುವವರು, ಹಾಡು ಹೇಳುವವರು, ನಾಟಕ ಮಾಡುವವರು ರೇಡಿಯೋ ಒಳಗೆ ಎಲ್ಲಿ ಕುಳಿತಿರುತ್ತಾರೆ ಎಂಬುದು. ನನಗೂ ಇತ್ತು… ಆದರೆ ಸದ್ಯ ಸ್ಕ್ರೂಡ್ರೈವರ್‌ ಸುತ್ತಿಗೆ ನನ್ನ ಕೈಗೆ ಸಿಗುವಂತೆ ಇಡುತ್ತಿರಲಿಲ್ಲ. ಅಷ್ಟು ಹೊತ್ತಿಗೆ ಒಂದಷ್ಟು ಆಟದ ಸಾಮಾನುಗಳ ಒಳಗೇನಿದೆಯೆಂದು ಅಪ್ಪ ಚಿಕ್ಕಪ್ಪ ಮಾಡಿದ್ದ  ಆಪರೇಷನ್‌ ನೋಡಿ ನಾನೂ ಕೈಹಾಕಿದ್ದೆ. ಆದರೆ ʼರೇಡಿಯೋಪ್ರೇಶನ್‌ʼ ಆಗಲಿಲ್ಲ. (ಆ ಹಳೆಯ ರೇಡಿಯೋ ಈಗಲೂ ತನ್ನ ಮೂಲ ಸ್ವರೂಪದಲ್ಲಿ ನಮ್ಮಲ್ಲಿದೆ. ಕೆಲಸ ಮಾಡಲ್ಲ ಅಷ್ಟೆ). 

ಮುಂದೊಂದು ದಿನ ಪ್ರಾಥಮಿಕ ಶಾಲೆಯಿಂದ ʼಮಕ್ಕಳ ಕಾರ್ಯಕ್ರಮʼಕ್ಕೆ ಕೆ.ಎಸ್‌.ನಿರ್ಮಲಾದೇವಿಯವರ ಹಿಂದೆ ಸಾಲಾಗಿ ಹೋಗಿ ಬೆಗಳೂರು ಆಕಾಶವಾಣಿ ಸ್ಟುಡಿಯೋ ಒಳಗೆ ಕುಳಿತು ನಾಟಕ, ಹಾಡು ರೆಕಾರ್ಡಿಂಗ್‌ ಮಾಡಿದಾಗ ಅಲ್ಪಸ್ವಲ್ಪ ಗೊತ್ತಾಗಿತ್ತು. ಆಗ ದೀಪಾವಳಿಯ ಹಿನ್ನೆಲೆಯಲ್ಲಿ ಪ್ರಸಾರವಾಗಿದ್ದ ಒಂದು ನಾಟಕದಲ್ಲಿ ನಾನು ಶುಕ್ರಾಚಾರ್ಯರ ಪಾತ್ರ ಮಾಡಿದ್ದೆ. ವಾಮನನಿಗೆ ಮೂರು ಪಾದಗಳಷ್ಟು ಭೂಮಿ ದಾನ ಮಾಡಲು ಬಲಿ ಚಕ್ರವರ್ತಿ ಮುಂದಾದಾಗ ಅದನ್ನು ನಿಲ್ಲಿಸಲು ಶುಕ್ರಾಚಾರ್ಯರು ನಿಶ್ಚಯಿಸುತ್ತಾರೆ.

ದಾನ ಕೊಡುವ ಪ್ರಕ್ರಿಯೆ ಮುಗಿಸಲು ನೀರು ಹಾಕುವುದನ್ನು ತಡೆಯಲು ಶುಕ್ರಾಚಾರ್ಯರು ಕಮಂಡಲದ ಕೊಳವೆಯಲ್ಲಿ ಸೂಕ್ಷ್ಮರೂಪದಲ್ಲಿ ಅಡ್ಡ ಬಂದು ನೀರು ಹೊರಬೀಳದಂತೆ ಕುಳಿತರಂತೆ. ಆಗ ವಾಮನ ಏನೋ ಕಸ ಕಟ್ಟಿದೆ ಎನ್ನುತ್ತಾ ದರ್ಬೆಯಿಂದ ಕೊಳವೆಯೊಳಗೆ ಚುಚ್ಚಿದನೆಂದೂ, ಆಗ ಶುಕ್ರಾಚಾರ್ಯರ ನೋವಿನ ಉದ್ಗಾರವಾದ, ‘…ಅಯ್ಯೋ ನನ್ನ ಕಣ್ಣೂ,..ʼ ಎನ್ನುವ ಮಾತನ್ನೂ ನಾನು ಹೇಳಬೇಕಿತ್ತು. ರೆಕಾರ್ಡ್‌ ಮಾಡುವಾಗ ಅದನ್ನು ನನ್ನಿಂದ ಒಂದೆರೆಡು ಮೂರು ಸಲ ಸರಿಯಾಗಿ ಬೇಕು, ಇನ್ನೂ ಸರಿಯಾಗಿ, ನೋವು ಕೇಳಿಸಬೇಕು ಅಂತೆಲ್ಲಾ ಹೇಳಿ ಮತ್ತೆ ಮತ್ತೆ ಹೇಳಿಸಿದ್ದರು. ಪ್ರಸಾರವಾದ ನಾಟಕದಲ್ಲಿ ಆ ನನ್ನ ಮಾತನ್ನ ಕೇಳಿದ್ದ ನನ್ನಜ್ಜಿ (ಅಪ್ಪನ ಅಮ್ಮ) ಆಗಾಗ್ಗೆ ‘ಎಷ್ಟು ಚೆನ್ನಾಗಿ ಹೇಳಿದ್ಯೋ… ನಿನ್ನ ಕಣ್ಣೇ ಹೋಗ್ಬಿಡ್ತೇನೋ ಅಂತ ಅಂದುಕೊಂಡಿದ್ದೆʼ ಅಂತ ಹೇಳಿ ಸಂತೋಷಪಡ್ತಿದ್ದರು.

ಎಪ್ಪತ್ತರ ದಶಕದ ಕೊನೆಯ ಹೊತ್ತಿನಲ್ಲಿ ನೆಲಮಂಗಲದವರೆಗೆ ಜೋಡಿ ರಸ್ತೆ ನಿರ್ಮಾಣವಾಯಿತು. (ಅದನ್ನ ರಾಷ್ಟ್ರೀಯ ಹೆದ್ದಾರಿ ಎನ್ನುತ್ತಿದ್ದರೂ) ಅಲ್ಲಿಯವರೆಗೂ ಇದ್ದದ್ದು  ಹೆಚ್ಚು ಅಗಲವಿಲ್ಲದ ರಸ್ತೆ. ಅದಕ್ಕೆ ಸಿಂಗಲ್‌ ರಸ್ತೆ ಅಂತ ಅನ್ನುತ್ತಿದ್ದರು. ಆಗಾಗ್ಗೆ ಎದುರುಬದುರು ವಾಹನಗಳು ಬಸ್ಸು, ಲಾರಿ, ಒಮ್ಮೊಮ್ಮೆ ಕಾರುಗಳು ಢಿಕ್ಕಿಯಾಗುವುದು ಜನರು ಸಾಯುವುದು, ಗಾಯಗೊಳ್ಳುವುದು ಬಹಳ ಸಾಮಾನ್ಯವಾಗಿತ್ತು. ಆದರೆ ಅದರಿಂದ ನಾವುಗಳು ಊರು ಸುತ್ತುವುದೇನೂ ಕಡಿಮೆಯಿರಲಿಲ್ಲ.

ನಮ್ಮ ಮನೆಯಲ್ಲಿ ಆಗ ಪದ್ಧತಿಯೇ ಆಗಿಹೋಗಿದ್ದಂತೆ, ಎರಡು ಮೂರು ದಿನ ರಜೆ ಒಟ್ಟಿಗೆ ಬಂದರೆ  ಸಾಕು, ಪ್ರತಿ ದಿನ ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯಲ್ಲಿ ಕೆಲಸಕ್ಕೆ ಬಂದು ಹೋಗುತ್ತಿದ್ದ ನಮ್ಮ ಸೋದರ ಮಾವನವರೊಂದಿಗೆ ನಾನು ನೆಲಮಂಗಲಕ್ಕೆ ಓಡುವುದು ಬಹಳ ಸಾಮಾನ್ಯವಾಗಿತ್ತು. ಆಗ ನನಗಿದ್ದ ಪ್ರಶ್ನೆ (ನಗಬೇಡಿ) ಈ ಊರುಗಳು ಅಂತ ಯಾಕೆ ಅಷ್ಟು ದೂರ ದೂರ ಇರಬೇಕು? ಎಲ್ಲ ಜನ ಒಂದೇ ಕಡೆ ಇರಬಾರದೇಕೆ? ಆದರೆ ಎಲ್ಲಾ ಜನ ಒಂದೇ ಕಡೆ ಇದ್ರೆ ರಸ್ತೆಗಳೇ ಇರುತ್ತಿರಲಿಲ್ಲವಲ್ಲ ಎಂಬ ಚಿಂತೆಯೂ ಆಗ್ತಿತ್ತು.  

ಆರನೇ ಕ್ಲಾಸ್‌ನಲ್ಲಿದ್ದಾಗ ಒಮ್ಮೆ ಯಾವುದೋ ಕಾರಣಕ್ಕೆ ಅಪ್ಪ ಅಮ್ಮ ನನ್ನೊಬ್ಬನನ್ನೇ ನೆಲಮಂಗಲಕ್ಕೆ ಕಳುಹಿಸಿದ್ದರು. ನಾನೂ ಒಬ್ಬನೇ ಬಸ್‌ನಲ್ಲಿ ಹೋದೆ. ಅಪ್ಪ ಕೊಟ್ಟಿದ್ದ ಪತ್ರ ತಾತನಿಗೆ ಕೊಟ್ಟೆ, ಅಲ್ಲಿ ಊಟ ಮಾಡಿದ ಮೇಲೆ ಅವರು ಕೊಟ್ಟ ಕಾಗದ ತೆಗೆದುಕೊಂಡು ಸಂಜೆ ಹೊತ್ತಿಗೆ ಹಿಂದಕ್ಕೆ ಬಂದೆ. ಆದರೆ ಆಮೇಲಿನದು ಮುಖ್ಯ. ನನ್ನೊಬ್ಬನನ್ನೇ ಯಾಕೆ ಹಾಗೆ ಬಸ್ಸಿನಲ್ಲಿ ಊರಿಗೆ ಕಳುಹಿಸಬೇಕಿತ್ತು, ಏನಾದ್ರೂ ಹೆಚ್ಚೂ ಕಡಿಮೆ ಆಗಿದ್ರೆ ಯಾರನ್ನ ಕೇಳಬೇಕಿತ್ತು ಎಂದು ಚಿಕ್ಕಪ್ಪಂದಿರು, ತಾತ (ಅಪ್ಪನ ಅಪ್ಪ), ಅಜ್ಜಿ, ಇನ್ನೂ ಕೆಲವರು ಪ್ರಶ್ನೆ ಮಾಡಿದ್ದರಂತೆ. ಯಾಕೆ ಹಾಗೆ ಬಿಸಿಬಿಸಿ ಮಾತಾಗಿತ್ತು ಅನ್ನೋದು ನನಗೆ ಗೊತ್ತೇ ಆಗಲಿಲ್ಲ.  ಇದು ಏನೇ ಇರಲಿ ರಸ್ತೆಗಳೆಂಬ ಅದ್ಭುತ ನನಗೆ ಈಗಲೂ ಒಂದು ಅಚ್ಚರಿಯ ವಿಚಾರ. ನನ್ನ ಫ್ಯಾಸಿನೇಷನ್‌ಗಳಲ್ಲಿ ರಸ್ತೆಯೂ ಒಂದು! ಆಗೆಲ್ಲಾ ಬೆಂಗಳೂರಿನಿಂದ ನೆಲಮಂಗಲದ ತನಕ ಇದ್ದ ರಸ್ತೆಯ ಎರಡೂ ಕಡೆ ದೊಡ್ಡ ದೊಡ್ಡ ಹುಣಸೇ ಮರಗಳು, ಆಲ, ಅತ್ತಿ, ಅರಳಿ, ಹೊಂಗೆ, ಹಿಪ್ಪೆ, ಹೀಗೆ ಇನ್ನೂ ಯಾವುದಾವುದೋ ಮರಗಳು ಇದ್ದವು.

೭೦ರ ದಶಕದಲ್ಲಿ ತಿಂಗಳಿಗೊ ಎರಡು ತಿಂಗಳಿಗೋ ಒಮ್ಮೆ ನವರಂಗ್‌ ಥಿಯೇಟರ್‌ನಲ್ಲಿ ನಾವು ಸಿನೆಮಾ ನೋಡುವುದು ಸಾಮಾನ್ಯವಾಗಿತ್ತು. ಅದೂ ಹೆಚ್ಚಾಗಿ  ರಾಜ್‌ಕುಮಾರ್‌ ಸಿನೆಮಾಗಳು! ಅಲ್ಲಿ ಸಿನೆಮಾ ಹೇಗೆ ಬಿಡ್ತಾರೆ  ಅಥವಾ ಸಿನೆಮಾ ಹೇಗೆ ಮಾಡ್ತಾರೆ ಅನ್ನೋದು ನನಗೆ ಗೊತ್ತಿರಲಿಲ್ಲ.  

ವರ್ಷಕ್ಕೊಮ್ಮೆ ನಮ್ಮ ಅಜ್ಜಿಯ ತವರು ಮನೆಗೆ, ಅಜ್ಜಿಯ ತಾಯಿಯ ವೈದೀಕಕ್ಕೆ ಹೋಗುವುದು ಸಂಪ್ರದಾಯವೇ ಆಗಿತ್ತು. ಬೆಂಗಳೂರಿನ ಜಯನಗರದಲ್ಲಿದ್ದ ಮುತ್ತಾತನ ಮನೆಗೆ ಹೋಗುತ್ತಿದ್ದುದು ವೈದೀಕಕ್ಕಿಂತಲೂ ಹೆಚ್ಚಾಗಿ, ಸಾಮಾನ್ಯವಾಗಿ ಆ ಸಂಜೆಗಳಲ್ಲಿ ಡಾ.ಜಿ. ರಾಮಕೃಷ್ಣ ತಾತ ಏನಾದರೊಂದು ವಿಶೇಷ ಹೇಳುತ್ತಿದ್ದುದು ಅಥವಾ ತೋರಿಸುತ್ತಿದ್ದುದು. ಅದರಲ್ಲೂ ಅವರು ಹಲವು ಬಾರಿ ತೋರಿಸುತ್ತಿದ್ದ ಫಿಲ್ಮ್‌ಶೋ ಮತ್ತು ಸ್ಲೈಡ್‌ ಶೋ. ಅವರ ದೇಶ ವಿದೇಶಗಳ ಸುತ್ತಾಟ ಅಥವಾ ಯಾವುದಾದರೂ ಪರಿಸರವನ್ನೋ ಪ್ರಾಣಿಗಳನ್ನೋ ಪ್ರದೇಶಗಳನ್ನೋ ಕುರಿತು ಚಿಕ್ಕ ಚಿಕ್ಕ ಸಿನೆಮಾಗಳನ್ನು ತೋರಿಸಿ ಮಾತನಾಡುತ್ತಿದ್ದರು. ಆಗ ಆ ಸ್ಲೈಡ್‌ ಮತ್ತು ಸಿನೆಮಾ ಪ್ರೊಜೆಕ್ಟರ್‌ ಅದೆಂತಹ ಅಚ್ಚರಿಯ ವಸ್ತುಗಳು.

ರಾಮಕೃಷ್ಣ ತಾತ ಒಬ್ಬ ಮೆಜಿಷಿಯನ್‌! ಅವರು ಅವುಗಳನ್ನು ಎಷ್ಟು ಚೆನ್ನಾಗಿ ನಿರ್ವಹಿಸುತ್ತಿದ್ದರು. ನಮ್ಮ ಸ್ಕೂಲ್‌ನಲ್ಲೂ ಫಿಲ್ಮ್‌ ಶೋ ಮಾಡ್ತಿದ್ದರು. ಹತ್ತು ಹನ್ನೆರಡು ವರ್ಷದೊಳಗಿನ ಮಗುವಾಗಿದ್ದಾಗ ಆಗಿದ್ದ ಈ ಅನುಭವ  ನನಗೆ ಈಗಲೂ ಒಂದು ಅಚ್ಚಳಿಯದ ನೆನಪಾಗಿ ಉಳಿದಿದೆ. ಇದರ ಜೊತೆ ನಮ್ಮಜ್ಜಿ ನಮ್ಮನ್ನು ಕಂಕುಳಲ್ಲಿ ಇರುಕಿಕೊಂಡು ಕರೆದುಕೊಂಡು ಹೋಗಿ ಟೆಂಟ್‌ನಲ್ಲಿ ಸಿನೆಮಾ ತೋರಿಸಿದ್ದು ಕೂಡಾ ನೆನಪಿದೆ. ಒಂದು ಎರಡನೇ ಕ್ಲಾಸಿಗೆ ಬಂದಿದ್ದ ನಮ್ಮನ್ನ ಅಜ್ಜಿ ಯಾಕೆ ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಿದ್ದಳು ಅನ್ನೋದು ಆಗ ಗೊತ್ತೇ ಇರಲಿಲ್ಲ!

ಅಜ್ಜಿಯ ನೆನಪು ಬಂದಾಗಲೆಲ್ಲಾ ಅಜ್ಜಿ ಮಾಡುತ್ತಿದ್ದ ರುಚಿರುಚಿಯಾದ ಅಡುಗೆಯ ಜೊತೆ ಒಂದು ವಿಚಾರ ಹೇಳಲೇಬೇಕು.  ಪ್ಲಾಸ್ಟಿಕ್‌ ಚೀಲ ಅಥವಾ ಕವರ್‌ಗಳು. ಯಾರಾದರೂ ಪ್ಲಾಸ್ಟಿಕ್‌ ಕವರ್‌ಗಳನ್ನ ಬಿಸಾಕಿದರೆ ಚೆನ್ನಾಗಿ ಬೈದು ಬಿಡುತ್ತಿದ್ದರು. ಅವರಿಗೆ ಅದು ಒಂದು ಅದ್ಭುತ. ಸೋರುವುದಿಲ್ಲ, ಮುದ್ದೆಯಾಗುವುದಿಲ್ಲ, ಸುಲಭವಾಗಿ ಹರಿಯುವುದಿಲ್ಲ, ಕೊಳೆಯಾದರೆ ತೊಳೀಬಹುದು, ಮತ್ತೆ ಮತ್ತೆ ಬಳಸಬಹುದು… ಓಹೋ! ಅಲ್ಲಿ ಇಲ್ಲಿ ಸಿಗುವ ಮತ್ತು ಮನೆಗೆ ಜವಳಿ ತಂದಾಗಲೆಲ್ಲಾ ಕೊಡುತ್ತಿದ್ದ ಚಿಕ್ಕ ದೊಡ್ಡ ಕವರ್‌ಗಳನ್ನೆಲ್ಲಾ ಅಚ್ಚುಕಟ್ಟಾಗಿ ಓರಣ ಮಾಡಿ ಮಂಚದ ಹಾಸಿಗೆಯ ಕೆಳಗೆ ಹಾಸಿರುತ್ತಿದ್ದರು. ತಾವು ಮಾಡುವ ಬೇರೆ ಬೇರೆ ಪುಡಿಗಳು, ಚಕ್ಕುಲಿ, ಕೋಡುಬಳೆ, ಕಡುಬು, ಒಬ್ಬಟ್ಟು, ಗೊಜ್ಜುಗಳಿಗೆಲ್ಲಾ ಈ ಕವರ್‌ಗಳು ಅದ್ಭುತವಾದ ಪಾರ್ಸೆಲ್‌ಗಳು.

ಒಬ್ಬಟ್ಟು ಮಾಡಲು ಬಾಳೆ ಎಲೆಯಿಂದ ಪ್ಲಾಸ್ಟಿಕ್‌ ಕವರ್‌ಗೆ ಅಜ್ಜಿ ಬದಲಾಗಿದ್ದರು! ನಮಗೆ ಪ್ಲಾಸ್ಟಿಕ್‌ ಬಗ್ಗೆ ಆಗ್ಗೆ ಅಷ್ಟೇನೂ ಅಚ್ಚರಿ ಅನಿಸುತ್ತಿರಲಿಲ್ಲ. ಆದರೆ ಅಜ್ಜಿ ನಿಜವಾಗಿಯೂ ಅವುಗಳ ಬಗ್ಗೆ ಬಹಳ ಪ್ರೀತಿ ಮತ್ತು ಗೌರವ ಹೊಂದಿದ್ದರು. ಅದು ಅವರಿಗೆ ಟೇಕನ್‌ ಫಾರ್‌ ಗ್ರಾಂಟೆಡ್‌ ಆಗಿರಲಿಲ್ಲ. ಅದನ್ನು ಅವರು ಬಾಯಿಬಿಟ್ಟು ಹೇಳುತ್ತಿದ್ದರು, ʼಈ ಚೀಲ ಕಂಡುಹಿಡಿದವರು ಯಾರೋ ಪುಣ್ಯಾತ್ಮರು ತಣ್ಣಗಿರಲಪ್ಪʼ. ನಾವೂ ಹಾಗೆ ಅಂದುಕೊಂಡಿದ್ದೆವು. ಪಾಪ ಅವರಿಗೆ ಗೊತ್ತಿರಲಿಲ್ಲವೇನೋ ಈ ಕವರ್‌ಗಳು ಮುಂದೊಂದು ದಿನ ಪ್ರಾಣ ತೆಗೆಯುತ್ತದೆ ಎಂದು. 

ಈಗ ಎಲ್ಲಿ ನೋಡಿದರೂ  ಮೊಬೈಲ್‌, ಇಂಟರ್‌ನೆಟ್‌, ಫೋನಿಸಿ ಕರೆದರೆ ಮನೆಯ ಎದುರು ಬಂದು ನಿಲ್ಲುವ ಆಟೋ, ಟ್ಯಾಕ್ಸಿ, ಕೇಳಿದ ತಿನಿಸು ತಂದುಕೊಡುವ ಸ್ವಿಗ್ಗಿ, ಜೊಮಾಟೋ ಇವೆ. ಅಜ್ಜಿ ಅತ್ತೆ ಅಮ್ಮ ಚಿಕ್ಕಮ್ಮ ಅಕ್ಕ ಮಾಡಿದ ತಿಂಡಿ ಆಗಲಿ, ಗೆಳೆಯ ಗೆಳತಿಯರು ಕಳಿಸುವ ನೋಟ್ಸ್‌ ಇರುವ ಪುಸ್ತಕವನ್ನಾಗಲಿ, ಎಲ್ಲಿಯೋ ಯಾರೋ ಕೊಂಡ ವಸ್ತುಗಳನ್ನು ಎಲ್ಲಿಂದ ಎಲ್ಲಿಗೆ ಬೇಕಾದರೂ ತಂದು ಕೊಡುವ ಡನ್ಝೋ, ಕೊರಿಯರ್‌ ಆಗ ಇರಲಿಲ್ಲ ಅಂದ್ರೆ ಈಗಿನ ಮಕ್ಕಳು ʻಹೌದಾ…!ʼ ಅನ್ನೋದು ಸಹಜ. ಅವರಿಗೆ ʼಇವೆಲ್ಲಾ ಇದೆ ಅಷ್ಟೆ…!ʼ  ಇವು ನಗರಗಳಲ್ಲಿ  ಅಷ್ಟೆ.  ಆದರೆ ನಮ್ಮದೇ ಹಳ್ಳಿಗಳಲ್ಲಿ ಇವೆಲ್ಲಾ ಇಲ್ಲ, ಇದ್ದರೂ ಸರಿಯಾಗಿಲ್ಲ ಅಂದ್ರೆ ನಂಬಲು ಆಗುವುದೇ ಇಲ್ಲ. 

ಎಷ್ಟೋ ವಿಚಾರಗಳು ಹೀಗೆ ಟೇಕನ್‌ ಫಾರ್‌ ಗ್ರಾಂಟೆಡ್‌ ಆಗಿರುತ್ತವೆ. ಅದು ಹಾಗೆ… ಎಂದುಕೊಂಡಿರುವುದು ಇರಬಹುದು ಅಥವಾ ತಿಳಿದುಕೊಳ್ಳಬೇಕು, ಪ್ರಶ್ನಿಸಬೇಕು ಎನ್ನುವ ಅಂಶ ಮನದಲ್ಲಿ ಮೂಡದೇನೇ ಇರಬಹುದು… ಅಥವಾ… 

ನಮ್ಮ ಅಪ್ಪ ತಮ್ಮ ಬಾಲ್ಯದಲ್ಲಿ ನಡೆದುದು ಎಂದು ಒಮ್ಮೆ ಹೇಳಿದ್ದ ಸಂಗತಿ ನೆನಪಾಗುತ್ತದೆ, ಹೊಲ ಗದ್ದೆಯ ಹತ್ತಿರಕ್ಕೆ ಅವರು ಹೋಗುತ್ತಿದ್ದಾಗ ಅಲ್ಲಿ ಕಳೆ ಕೀಳುತ್ತಲೋ ನೀರು ಹಾಯಿಸುತ್ತಲೋ ಇದ್ದ ಜನ ಇವರನ್ನು ಹಾಸ್ಯ ಮಾಡುವಂತೆ, ʻರಾಗಿ ಯಾವ ಮರದಾಗೆ ಬಿಡ್ತೈತೆ ಗೊತ್ತೇನ್‌ ಸೋಮಿ…ʼ ಎಂದು ನಗುತ್ತಿದ್ದರಂತೆ. ಇಂತಹವು ಈಗಲೂ ಬೇರೆ ಬೇರೆ ರೂಪದಲ್ಲಿ ಪ್ರಶ್ನೆಗಳಾಗಿ ಸುತ್ತುತ್ತಲೇ ಇವೆ. 

೭೦ರ ದಶಕದಲ್ಲಿ ನಗರದ ಮಕ್ಕಳನ್ನು ಹಾಲು ಹೇಗೆ ಸಿಗುತ್ತೆ ಎಂದರೆ, ಬಾಟಲಿಯಲ್ಲಿ ಬರುತ್ತೆ ಎನ್ನುತ್ತಿದ್ದರಂತೆ… ಈಗಿನ ಮಕ್ಕಳು ಕವರ್‌ನಲ್ಲಿ ಎನ್ನಬಹುದು. ಹಾಗೆಯೇ ರಾಗಿ ಭತ್ತ ಸಿಗುವುದು ಅಂಗಡಿಯಲ್ಲಿ, ಸೂಪರ್‌ ಮಾರ್ಕೆಟ್‌ನಲ್ಲಿ ಅನ್ನಬಹುದು. 

ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ, ಋಷಿ ವ್ಯಾಲಿ ಶಾಲೆಗೆ ಹೊಂದಿಕೊಂಡು ʼರಿವರ್‌ʼ ಹೆಸರಿನಲ್ಲಿ ಗ್ರಾಮೀಣ ಮಕ್ಕಳಿಗಾಗಿ ಶಾಲೆಗಳನ್ನು ನಡೆಸುವ ರಮಾ ರಾವ್‌ ಮತ್ತು ಪದ್ಮನಾಭ ರಾವ್‌ ಅವರನ್ನು ೨೦೦೨-೦೩ರಲ್ಲಿ ಹಲವು ಬಾರಿ ಭೇಟಿಯಾಗಿದ್ದೆ. ಮೊದಮೊದಲ ಭೇಟಿಗಳ ಉದ್ದೇಶ ಅವರ ಶಾಲೆಗಳು ನಡೆಯುವ ರೀತಿ ಮತ್ತು ಅಲ್ಲಿ ಕಲಿಸುವ ವಿಚಾರ ಮತ್ತು ವಿಧಾನವನ್ನು ತಿಳಿಯುವುದಾಗಿತ್ತು.

ನಂತರದಲ್ಲಿ ಈ ದಂಪತಿಯನ್ನು’ಅಶೋಕಾ ಇನ್ನೋವೇಟರ್ಸ್‌ ಫಾರ್‌ ದ ಪಬ್ಲಿಕ್‌ʼನ ಫೆಲೋಶಿಪ್‌ಗೆ ಒಡ್ಡುವ ಇರಾದೆಯಾಗಿತ್ತು. (ಅವರಿಗೆ ಫೆಲೋಶಿಪ್‌ ಪರೀಕ್ಷೆಗಳು ಮತ್ತು ಸಂದರ್ಶನಗಳಲ್ಲಿ ಪಾಲ್ಗೊಳ್ಳುವ ಉದ್ದೇಶ ಸಂಪೂರ್ಣವಾಗಿರಲಿಲ್ಲ. ನಾನೇ ಮುಂದಾಗಿ ಏಕಾಗಬಾರದು ಜೊತೆಗೂಡಿ ಪ್ರಸ್ತಾವನೆ ಬರೆಯೋಣ ಎಂದೆಲ್ಲಾ ಪುಸಲಾಯಿಸಿದ ಮೇಲೆ ಒಪ್ಪಿದರು. ಅಂತಾರಾಷ್ಟ್ರೀಯ ಮಟ್ಟದ ಸಂದರ್ಶಕರ ಪ್ಯಾನೆಲ್‌ನಲ್ಲಿ ವಿಚಾರ ಮಂಡಿಸಿದರು. ಅವರಿಗೆ ೨೦೦೩ರಲ್ಲಿ ಪ್ರತಿಷ್ಠಿತ ಫೆಲೋಷಿಪ್‌ ಸಿಕ್ಕಿತು). ಈ ದಂಪತಿ ಆವಿಷ್ಕಾರ ಮಾಡಿದ್ದ ʼಲ್ಯಾಡರ್‌ / ನಿಚ್ಚಣಿಕೆ ಅಥವಾ ಏಣಿ ಕಲಿಕೆಯ ವಿಧಾನʼ ನಮ್ಮ ದೇಶದ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ʼಕಲಿ ನಲಿʼ ರೂಪದಲ್ಲಿ ಅಳವಡಿಕೆಯಾಗಿದೆ. 

ಮದನಪಲ್ಲಿಯ ರಿವರ್‌ ಶಾಲೆಗಳು ‘ಹಲವು ತರಗತಿಗಳ ಹಲವು ಮಟ್ಟಗಳ ವಿದ್ಯಾರ್ಥಿಗಳಿರುವ ಏಕ ಶಿಕ್ಷಕ ಶಾಲೆಗಳುʼ.  ಅಲ್ಲಿ ನನ್ನನ್ನು ಆಕರ್ಷಿಸಿದ ಅತ್ಯಂತ ಮುಖ್ಯ ವಿಚಾರ, ಶಾಲೆಗೆ ಬರುವ ಮಕ್ಕಳು ಏನು ಬೇಕಾದರೂ ಪ್ರಶ್ನೆಗಳನ್ನು ಕೇಳಬಹುದು. ಪ್ರಶ್ನೆ ಎಷ್ಟೇ ಹಗುರವಾಗಿರಬಹುದು ಅಥವಾ ಗಹನವಾಗಿರಬಹುದು. ಆ ಬಗ್ಗೆ ಆತಂಕ ಪಡಬೇಕಾಗಿಲ್ಲ. ಶಿಕ್ಷಕರಿಗೆ ಎಲ್ಲ ಉತ್ತರಗಳು ಗೊತ್ತಿರುತ್ತವೆ ಎಂದೇನಿಲ್ಲ. ಅಲ್ಲಿನ ವೈಶಿಷ್ಟ್ಯ ಊರ ಜನರೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಶಿಕ್ಷಕರಾಗುವಂತೆ ಬೆಳೆಸುವುದು.

ಕುಂಬಾರರು, ಕಮ್ಮಾರರು, ಬಡಗಿಗಳು, ರೈತರು, ಹಾಡುವವರು, ಆಡುವವರು, ಅಂಗಡಿಯವರು, ಗೃಹಣಿಯರು, ಅಲ್ಪಸ್ವಲ್ಪ ಕಲಿತವರು ಎಲ್ಲರೂ ಆಗಾಗ್ಗೆ ಶಾಲೆಗಳಿಗೆ ಬಂದು ಮಾತನಾಡುವುದು, ಪ್ರಾತ್ಯಕ್ಷಿಕೆ ಮಾಡುವುದು ಇವೆಲ್ಲಾ ಶಾಲೆಯ ಕಾರ್ಯಕ್ರಮದ ಪಟ್ಟಿಯಲ್ಲಿ ಹಾಸುಹೊಕ್ಕಾಗಿರುವುದು; ಜೊತೆಗೆ ಮಕ್ಕಳು ಕೇಳಿದ ಪ್ರಶ್ನೆಗಳನ್ನೆಲ್ಲಾ ಬರೆದಿಟ್ಟುಕೊಂಡು ಅವುಗಳಿಗೆ ಉತ್ತರಗಳು ಸಿಕ್ಕಿವೆಯೋ ಇಲ್ಲವೋ ಎಂದು ಪರಿಶೀಲಿಸುತ್ತಿರುವುದು. ಉತ್ತರಗಳು ಇನ್ನೂ ಸಿಕ್ಕಿಲ್ಲದಿದ್ದರೆ ಅದಕ್ಕೆಂದೇ ಮುಖ್ಯಶಾಲೆಯಿಂದ ಉತ್ತರ ಹೇಳಬಲ್ಲವರನ್ನು ಕರೆಯಿಸುವುದು. ಇದು ಮಕ್ಕಳ ಅದೆಷ್ಟೋ ಪ್ರಶ್ನೆಗಳಿಗೆ, ಅಚ್ಚರಿಗಳಿಗೆ ಉತ್ತರ ಕಂಡುಕೊಳ್ಳಲು ಸಹಾಯವಾಗುತ್ತಿತ್ತು. ಇಂತಹದೊಂದು ಎಲ್ಲ ಕಡೆ ಇದ್ದಿದ್ದರೆ ಎಂದು ನನಗೆ ಆಗ ಅನ್ನಿಸುತ್ತಿತ್ತು.   

ಏನಾದರೂ ಹುಡುಕಿ ಓದಿ ತಿಳಿಯಬೇಕು ಅಂದರೆ  ನಮ್ಮ ಬಾಲ್ಯದಲ್ಲಿ ಅವುಗಳನ್ನು ದಪ್ಪ ದಪ್ಪ ವಿಶ್ವಕೋಶಗಳಲ್ಲಿ ಹುಡುಕುತ್ತಿದ್ದೆವು ಅಥವಾ ಯಾರೊಡನೆಯಾದರೂ ಮಾತನಾಡಬೇಕಿತ್ತು. ೧೯೭೨ರಲ್ಲಿ ನಿರಂಜನರ ಸಂಪಾದಕತ್ವದಲ್ಲಿ ಕರ್ನಾಟಕ ಸಹಕಾರೀ ಪ್ರಕಾಶನ ಮಂದಿರದವರು ಏಳು ಸಂಪುಟಗಳ ʻಜ್ಞಾನ  ಗಂಗೋತ್ರಿ-ಕಿರಿಯರ ವಿಶ್ವಕೋಶʼಗಳನ್ನು ಪ್ರಕಟಿಸಿದ್ದರು. ಆಗ ಅವನ್ನು ಕೊಳ್ಳಲು ಸಾಲ ಕೊಡುತ್ತಿದ್ದರಂತೆ. ನಮಗೆ ಅದೆಲ್ಲಾ ಗೊತ್ತಿರಲಿಲ್ಲ. ನೆಲಮಂಗಲದ ನಮ್ಮ ಸೋದರ ಮಾವನವರ ಮನೆಯಲ್ಲಿ ವಿಶ್ವಕೋಶದ ಎಲ್ಲ ಸಂಪುಟಗಳಿದ್ದವು.

ಪ್ರಾಯಶಃ ಐದಾರನೇ ತರಗತಿ ದಾಟುವ ಹೊತ್ತಿಗೆ ಊರಿಗೆ ಹೋದಾಗಲೆಲ್ಲಾ ನನಗೆ ಕನ್ನಡದಲ್ಲಿದ್ದ ವಿಶ್ವಕೋಶಗಳು ದೊಡ್ಡ ಆಕರ್ಷಣೆಯಾಗಿತ್ತು. ಆಗ ನಮಗೆ ಆ ಪುಸ್ತಕಗಳನ್ನು ಕೊಳ್ಳಲು ಆಗಿರಲಿಲ್ಲವೇನೋ. ೯೦ರ ದಶಕದಲ್ಲಿ ನಾನು ಮಕ್ಕಳ ಹಕ್ಕುಗಳ ಕೆಲಸ ಆರಂಭಿಸಿದ ಮೇಲೆ, ಗ್ರಾಮೀಣ ಪ್ರದೇಶಗಳ ಶಾಲೆಗಳಿಗೆ ಹೋದಾಗ, ಅಲ್ಲಿನ ಗ್ರಂಥಾಲಯಗಳನ್ನು ನೋಡಲು ಅಪೇಕ್ಷಿಸುತ್ತಿದ್ದೆ. ಎಷ್ಟೋ ಬಾರಿ ಶಾಲಾ ಗ್ರಂಥಾಲಯ ಒಂದು ಪೆಟ್ಟಿಗೆಯಲ್ಲಿ ತಣ್ಣಗೆ ಕುಳಿತಿರುತ್ತಿದ್ದವು. ಕೆಲವು ಪುಸ್ತಕಗಳು ಸರಬರಾಜುದಾರರು ಕಳಿಸಿದ ಪೊಟ್ಟಣದಲ್ಲೇ ಇರುತ್ತಿದ್ದವು. ಈ ಏಳು ಸಂಪುಟಗಳ ವಿಶ್ವಕೋಶಗಳನ್ನು ನಾನು ಸಾಕಷ್ಟು ಶಾಲೆಗಳಲ್ಲಿ ಪ್ಯಾಕಿಂಗ್‌ ಒಳಗೇ ಸುರಕ್ಷಿತವಾಗಿರುವುದನ್ನು ನೋಡಿದ್ದೇನೆ. ಅವನ್ನು ಬಿಡಿಸಿ ಮಕ್ಕಳೆದುರು ಇಡಲು ಪ್ರೇರೇಪಿಸಿದ್ದೇನೆ. ಪುಸ್ತಕಗಳನ್ನು ಕೊಟ್ಟ ಹಾಗೆ ಇಟ್ಟುಕೊಂಡು ಮುಂದಿನ ಶಿಕ್ಷಕರಿಗೆ ದಾಟಿಸಿಬಿಡಲು ಒಬ್ಬೊಬ್ಬರಿಗೆ ಒಂದೊಂದು ಕಾರಣ! 

ಕಿರಿಯರ ವಿಶ್ವಕೋಶದ ಆಕರ್ಷಣೆ ಹಾಗೇ ಉಳಿಸಿಕೊಂಡಿದ್ದೆ. ನನ್ನ ಸಮಾಜಕಾರ್ಯ ಶಿಕ್ಷಣದ ಪ್ರಾಧ್ಯಾಪಕರಾಗಿದ್ದ ಪ್ರೊ.ಎಚ್.ಎಂ. ಮರುಳಸಿದ್ದಯ್ಯನವರಿಗೆ ನನ್ನ ಈ ಆಸಕ್ತಿ ತಿಳಿದಿತ್ತು. ಅವರು ೧೯೯೮ರಲ್ಲಿ ತಮ್ಮ ಹಳೆಯ ಪುಸ್ತಕಗಳನ್ನು ಮಾರುವ ಒಬ್ಬ ಸ್ನೇಹಿತರಲ್ಲಿದ್ದ ಎಲ್ಲ ಏಳೂ ಸಂಚಿಕೆಗಳನ್ನು ಕೊಡಿಸಿದರು. ಅವನ್ನು ಹಲವು ಬಾರಿ ಬಳಸಿದ್ದೇನೆ. 

ನಮ್ಮ ಮನೆಯಲ್ಲಿ ಅಪ್ಪ ತರುತ್ತಿದ್ದ ಪುಸ್ತಕಗಳು, ಆಗಾಗ್ಗೆ ಮಲ್ಲೇಶ್ವರಂನಲ್ಲಿರುವ ಗಾಂಧಿ ಭವನದಲ್ಲಿ ಜಿ.ಪಿ.ರಾಜರತ್ನಂ ಅವರೊಡನೆ ಕತೆ ಮತ್ತು ಹರಟೆಯಲ್ಲಿ, ಅಪ್ಪ ಮತ್ತು ಚಿಕ್ಕಪ್ಪರೊಂದಿಗೆ, ಮುಖ್ಯ ನಮ್ಮ ಸೋದರ ಮಾವಂದಿರೊಡನೆ ಮಾತುಕತೆಯಲ್ಲಿ ಏನೇನೋ ವಿಚಾರಗಳು ಗೊತ್ತಾಗುತ್ತಿತ್ತು. ಪ್ರೌಢಶಾಲೆಗೆ ಬರುವ ಹೊತ್ತಿಗೆ ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯಕ್ಕೆ ಹೋಗುತ್ತಿದ್ದಾಗ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತ್ತು… ಜೊತೆಗೆ ಹೊಸ ಪ್ರಶ್ನೆಗಳೂ ಕೂಡಾ!

ನಾನು ಮಾಧ್ಯಮಿಕ ಶಾಲೆಗೆ ಬರುವ ಹೊತ್ತಿಗೆ, ಬೆಂಗಳೂರಿನ ಗುಟ್ಟಹಳ್ಳಿಯ ಸ್ವಿಮ್ಮಿಂಗ್‌ ಪೂಲ್‌ ಬಡಾವಣೆಯಲ್ಲಿ ನಮ್ಮ ಪಕ್ಕದ ಮನೆಯಲ್ಲಿದ್ದ ‘ರವಿʼ ಮಾವನ ಹತ್ತಿರ ಎಲ್ಲ ಪ್ರಶ್ನೆಗಳಿಗೂ ಉತ್ತರವಿರುತ್ತಿತ್ತು. ಅವರನ್ನ ನನ್ನ ಮನಸ್ಸಿಗೆ ಬರುವ ಏನೇ ವಿಚಾರ ಅಥವಾ ಪ್ರಶ್ನೆಗಳನ್ನು ಕೇಳಬಹುದಿತ್ತು. ನನಗೆ ಯಾವುದಾದರೂ ವಿಚಾರ ಏನದು ಹೇಗದು ಎಂಬ ಅಚ್ಚರಿಗಳು ಬಂದರೆ, ರವಿ ಮಾವ ಇದ್ದಾರಲ್ಲ, ಏನು ಬೇಕಾದರೂ ಕೇಳಬಹುದು. ರವಿ ಮಾವ ನನ್ನನ್ನ ಕೆಲವು ಭಾನುವಾರಗಳಂದು ಬೆಂಗಳೂರು ಸುತ್ತಲು ಕರೆದೊಯ್ಯುತ್ತಿದ್ದರು. ಹಾಗೆ ನಡೆದುಕೊಂಡೇ ಹೋಗಿ ಕೆಂಪೇಗೌಡರು ಕಟ್ಟಿಸಿದ್ದು ಎನ್ನುವ ಎಲ್ಲ ಕಾವಲು ಗೋಪುರಗಳನ್ನು ನೋಡಿಸಿದ್ದರು. ಈಗ ಅಂತಹ ಮಾವಗಳು, ಚಿಕ್ಕಪ್ಪಗಳು ಪ್ರಶ್ನೆಗಳನ್ನ ಕೇಳಲಿಕ್ಕೆ, ಉತ್ತರ ಕೊಡಲಿಕ್ಕೆ ವ್ಯವಧಾನ ಇಟ್ಟುಕೊಂಡಿದ್ದಾರಾ ಎಂದು ಪ್ರ‍ಶ್ನಿಸಬೇಕಿದೆ. 

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ಪರಿಚ್ಛೇದ ೧೭ ಎಲ್ಲ ಪೋಷಕರಿಗೆ ಸರ್ಕಾರಕ್ಕೆ ಒಂದು ನಿರ್ದೇಶನ ಕೊಡುತ್ತದೆ. ‘ಮಕ್ಕಳಿಗೆ ಮಾಹಿತಿ ಪಡೆಯುವ ಹಕ್ಕಿದೆ. ಮಾಹಿತಿಯ ವಿಚಾರ ಅದು ಸಣ್ಣದಿರಲಿ ದೊಡ್ಡದಿರಲಿ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸುವುದು, ತಿಳಿಸುವುದು ಮತ್ತು ಆ ಮೂಲಕ ವಿಚಾರಗಳನ್ನು ತಿಳಿಯುವ ಅವರ ಕುತೂಹಲವನ್ನು ಬೆಳೆಸುವುದು ಎಲ್ಲ ದೊಡ್ಡವರ ಕರ್ತವ್ಯʼ. 

ಹಾಗೆಯೇ ಮಕ್ಕಳನ್ನು ಹಲವು ಬಾರಿ ನಾವು ಮಾತನಾಡಿ, ಪ್ರಶ್ನಿಸಿ, ವಿಶ್ಲೇಷಿಸಿ ಎಂದೆಲ್ಲಾ ಬಲವಂತ ಮಾಡುತ್ತೇವೆ. ನಮಗೆ ಅವರು ಭಾಗವಹಿಸಬೇಕು ಎನ್ನುವ ಧಾವಂತ. ಆದರೆ ಮಾಹಿತಿ ಇಲ್ಲದೆ, ಪ್ರಶ್ನಿಸುವ ಅವಕಾಶವೇ ಗೊತ್ತಿಲ್ಲದೆ ಇದ್ದರೆ ಮಕ್ಕಳು ಹೇಗೆ ಭಾಗವಹಿಸುತ್ತಾರೆ, ಮಾತನಾಡುತ್ತಾರೆ? ಮಕ್ಕಳಿಗೆ ಮಾತನಾಡುವ ಅಭಿಪ್ರಾಯ ವ್ಯಕ್ತಪಡಿಸುವ, ಪ್ರಶ್ನೆ ಮಾಡುವ ಹಕ್ಕು ಇದೆ ಎಂದು ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ ೧೨ ಮತ್ತು ೧೩ ಹೇಳುತ್ತದೆ. ಇದು ಮನೆ, ಶಾಲೆ, ಗ್ರಂಥಾಲಯಗಳು, ಸಂಸ್ಥೆಗಳು, ಜಾಹೀರಾತುದಾರರು, ಪ್ರಕಾಶಕರು, ಸರ್ಕಾರ, ಮಾ‍ಧ್ಯಮ ಎಲ್ಲರಿಗೂ ಅನ್ವಯಿಸುತ್ತದೆ. 

ಪ್ರಶ್ನೆಯನ್ನು ಕೇಳಿಸಿಕೊಳ್ಳುವ ಮತ್ತು ಅದಕ್ಕೆ ನಮ್ಮ ಬಳಿ ಉತ್ತರ ಇಲ್ಲದಿದ್ದರೆ, ಅದನ್ನ ತಿಳಿದುಕೊಂಡು ಮತ್ತೆ ಬಂದು ಹೇಳುವ ವ್ಯವಧಾನ ದೊಡ್ಡವರೆಲ್ಲರೂ ಉಳಿಸಿಕೊಳ್ಳಬೇಕಿದೆ. ಪ್ರಶ್ನೆ ಕೇಳುವುದನ್ನೇ ಸುಟ್ಟು ಹಾಕಿಬಿಟ್ಟರೆ, ಮಾಹಿತಿ ಕೊಡುವ ಸಾಧನಗಳನ್ನು ಬಚ್ಚಿಟ್ಟುಕೊಂಡುಬಿಟ್ಟರೆ ನಾಳೆ ಮಕ್ಕಳು ದೊಡ್ಡವರಾದಾಗ ಮತ ಚಲಾವಣೆಯೂ ಸೇರಿದಂತೆ ದೊಡ್ಡ ದೊಡ್ಡ ನಿರ್ಧಾರಗಳನ್ನು ಮಾಡುವಾಗ ಸೋಲುವುದು ಖಂಡಿತಾ.

ನಮ್ಮ ಮಗಳು ಸ್ಕೂಲಿಗೆ ಹೋಗಿ ಟೀಚರ್ ಎಂಬ ಅದ್ಭುತ ಕಾಣುವುದಕ್ಕೆ ಮೊದಲು, ಗೂಗಲಮ್ಮನನ್ನು ಕಂಡುಕೊಳ್ಳುವ ವಯಸ್ಸಿಗೆ ಬರುವುದಕ್ಕೆ ಮೊದಲು ಒಮ್ಮೆ ಒಂದು ಅಚ್ಚರಿ ವ್ಯಕ್ತಪಡಿಸಿದ್ದಳು. ‘ಅಪ್ಪ! ನಿಂಗೆ, ತಾತಂಗೆ, ಅಮ್ಮಂಗೆ, ಅಜ್ಜಿಗೆ ಹೆಂಗಪ್ಪಾ ಎಲ್ಲಾ ಗೊತ್ತಿರುತ್ತೆ?ʼ 

ಏನುತ್ತರ ಕೊಡುವುದು… ಹೇಳಿದ್ದೆ, ‘ಎಲ್ಲಾ ಗೊತ್ತಿರತ್ತೆ ಅಂತಲ್ಲಮ್ಮ,  ನಮಗೆ ವಯಸ್ಸಾಗಿದೆʼ ಅಂದಿದ್ದೆ.ಅವಳು ಯಾಕೋ ಮರು ಪ್ರಶ್ನೆ ಹಾಕಿರಲಿಲ್ಲ – ‘ಈ ವಯಸ್ಸಿಗೂ, ತಾನು ಕೇಳುವ ಪ್ರಶ್ನೆಗಳೆಲ್ಲ ಅವರ ಹತ್ತಿರ ಏನಾದರೊಂದು ಉತ್ತರ ಇರೋದಕ್ಕೂ ಏನು ಸಂಬಂಧ?’ ಅಂತ !!

‍ಲೇಖಕರು Avadhi

May 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: