ಟಿ.ಪಿ. ಕೈಲಾಸಂ ಶೈಲಿಯಲ್ಲಿ ‘ಮಂಕಿಗೆ ಮಾರಲ್ಸ್ ಇಲ್ಲ’

ಟಿ.ಪಿ.ಕೈಲಾಸಂರವವರ ಶೈಲಿಯಲ್ಲಿ
ಅಣಕು ಬರಹ ರಚನೆ : ಎಂ. ಎಸ್. ನರಸಿಂಹ ಮೂರ್ತಿ

ಒನ್ಸ್ ದೇರ್ ವಾಸ್ ಎ ರಿವರ್ ಗೋದಾವರಿ! ಒನ್ಸ್ ಅಂತ ಟೆನ್ಸ್ ಆಗಬೇಡಿ, ಈಗಲೂ ರಿವರ್ ಇದೆ. ಒಂದು ಕಾಲಕ್ಕೆ ಪನ್ನೀರು ಥರ ಇದ್ದ ವಾಟರು ಈಗ ಹಿನ್ನೀರು ಆಗಿದೆ. ಗಾಡ್ ಮೇಡ್ ಸ್ವೀಟ್ ರಿವರ್ ಅಂಡ್ ಮ್ಯಾನ್ ಮೇಡ್ ಇಟ್ ಸವರ್!

ಗೋದಾವರಿ ರಿವರ್ ದಡದಲ್ಲಿ ಒಂದು ಬಡಾ ಬ್ಯಾನಿಯನ್ ಟ್ರೀ, ನಮ್ಮ ಅಜ್ಜನ ಕಾಲದ್ದು, ಅಜ್ಜ ಏನ್ಬಂತು, ಅವರಜ್ಜನಿಗಿಂತ ಓಲ್ಡು. ಕತ್ತೆತ್ತಿ ನೋಡಿದರೆ ಕತ್ತು ಉಳುಕೋಷ್ಟು ಮರದ ಹೈಟು! ಆ ಬಿಗ್ ಬ್ಯಾನಿಯನ್ ಟ್ರೀ ನಲ್ಲಿ ಫ್ಲಾಕ್ ಆಫ್ ಬರ್ಡ್ಸ್ಉ ! ಕುಕೂ, ಕ್ರೋ, ಡವ್ವು… ಪ್ಯಾರೆಟ್ಟು… ಒಟ್ಟಾರೆ ಹೇಳೋದಾದ್ರೆ ಸೀನಿಯರ್ ಸಿಟಿಜನ್ ಥರ ವಾಕ್ ಮಾಡೋ ಪೆಂಗ್ವಿನ್ ಪಕ್ಷಿ ಬಿಟ್ಟು ಉಳಿದೆಲ್ಲಾ ಬರ್ಡ್ಸ್ ಆ ಮರದಲ್ಲಿ ಹ್ಯಾಪಿಯಾಗಿ ಲೈಫ್ ಲೀಡ್ ಮಾಡ್ತಾ ಇದ್ದವು. ದೊಡ್ಡ ಪಕ್ಷಿಗಳು ಡಾನ್‌ನಲ್ಲಿ ಸಿಂಗ್ ಮಾಡ್ತಾ ಹೊರಟರೆ ಡಸ್ಕ್ ಆಗೋ ಮುಂಚೆ ಗೂಡು ಸರ‍್ತಿದ್ದವು.

ಟ್ರೆಸ್‌ಪಾರ‍್ಸ್ನ ಬೆದರಿಸೋಕೆ ಗೂಗೂ-ಗೂಬೇನೂ ಆ ಬ್ಯಾನಿಯನ್ ಟ್ರೀನಲ್ಲಿ ಗೂಬೆ ಕಣ್ ಬಿಟ್ಕೊಂಡು ದ್ರಾಬೆಯಾಗಿ ಕೂತರ‍್ತಿತ್ತು. ಅಗಲ ರೆಕ್ಕೆಯ ಈಗಲ್ಲು ಇಲ್ಲೀಗಲ್ ಆಗಿ ಆಗಾಗ ಬರ‍್ತಿತ್ತು.

ಲಾಗಾಯ್ತಿನಿಂದ ಇದ್ದ ಈ ವೃಕ್ಷಾನಂದಕ್ಕೆ ಬ್ರೇಕ್ ಬೀಳೋ ಥರ ಒಮ್ಮೆ ಮಳೆ ಬಂತು. ಆಕಾಶದಲ್ಲಿ ಕಪ್ಪು ಕ್ಲೌಡ್‌ಗಳು ಒಂದಕ್ಕೊಂದು ಗುಮಕಿ, ಮುಂದೆ ಲೈಟು ಹಿಂದೆ ಸೌಂಡು ಬಿಟ್ಟು, ಥಂಡರ್, ವಂಡರ್ ತೋರಿಸಿ ಧೋ ಅಂತ ಮಳೆ ಸುರೀತು. ‘ಇಳಿದು ಬಾ ತಾಯಿ ಇಳಿದು ಬಾ’ ಅಂತ ಯಾವ ಭಗೀರಥಾನೂ ರಿಕ್ವೆಸ್ಟ್ ಮಾಡಿರಲಿಲ್ಲ. ಆದರೆ ಅದು ಕಾರ್ತಿಕಮಾಸ ! ಕಾರ್ತಿಕದಲ್ಲಿ ಎಲ್ಲು ಕೂತ್ರೂ ವಾರ‍್ರೇ ! ಆಕಾಶಕ್ಕೆ ತೂತು ಹೊಡೆದಂತೆ ಹೆವಿ ಡೌನ್ ಪೋರು ! ಮೊನ್ನೆ ಮಲಪ್ರಭಾ, ಘಟಪ್ರಭಾ ರಿವರ್ ಫ್ಲಡ್ ಆದಾಗ ಅನೇಕ ಪ್ರಾಣಿಗಳು ಡೆಡ್ ಆಗಿದ್ದವು. ಮಂಕೀಸು ಬಾಲ ಮುದರ‍್ಕೊಂಡು ನಡುಗಡ್ಡೆಗೆ ಹಾರಿ ಜೀವ ಉಳಿಸ್ಕೊಂಡು ಬ್ರೆಡ್ಡು ಬಟರ್ ಇಲ್ದೆ, ಪಾರ್ಟಿಫೀಲಿಂಗ್ಸ್ ಮರೆತು ನಾವೆಲ್ಲ ಒಂದೇ ಅಂತ ಜಪಿಸ್ತಿತ್ತಲ್ಲ, ಆ ಟೈಪ್ ರೈನು !

ನಮ್ಮ ಕಥಾ ಪ್ರಸಂಗದಲ್ಲಿ ಮಳೆಗೆ ನೆನೆದ ಕೋತಿಗಳು ಟ್ರೀ ಬುಡಕ್ಕೆ ಈಜಿ ಬಂದು,ಶಿವಶಿವಾ…. ಕೋಲ್ಡುವಾ ನೆಗಡಿವಾ’… ಅಂತ ಗಡಗಡ ನಡುಗ್ತಾ ಮರ ಹತ್ತೋಕೆ ಟ್ರೆöÊ ಮಾಡಿದವು.

ಹೋದೆಯಾ ಡೆವಿಲ್ ಅಂದ್ರೆ ಬಂದೆ ಮರದ ಮೇಲಕ್ಕೆ ಅನ್ನೋ ಡೇಂಜರಸ್ ಪೊಸಿಷನ್ನು ಅಲ್ಲಿದ್ದ ಪುಟ್ಟ ಪಕ್ಷಿಗಳಿಗೆ ! ಮರದ ಗೂಡಲ್ಲಿದ್ದ ಹಕ್ಕಿ ಬೇಬೀಸ್‌ಗೆ ಭಯ ಆಗಿ ಅವೆಲ್ಲ ಒಗ್ಗಟ್ಟಾದವು. ತೊಂದರೆ ಬಂದಾಗ ಜಾತಿ, ಕುಲ ಮರೆತು ‘ಆಲ್ ಇಸ್ ಫೇರ್ ಇನ್ ಸ್ಟ್ರೈಕ್ ಅಂಡ್ ಪ್ರೊಟೆಸ್ಟ್’ ಅಂತ ಒಗ್ಗಟ್ಟಾಗೋ ಕೆಟ್ ಬುದ್ಧಿ ಮನುಷ್ಯರಲ್ಲಿ ಮಾತ್ರ ಅಲ್ಲ, ಪ್ರಾಣಿ ಪಶು ಪಕ್ಷಿಗಳಲ್ಲೂ ಇದೆ ಅನ್ನೋಕೆ ಇದು ಒಂದು ಎಕ್ಸಾಂಪಲ್ಲು!

ಮೈ ಫ್ರೆಂಡ್ಸ್, ಅಪ್ಪ-ಅಮ್ಮ ಹಕ್ಕಿಗಳು ಫುಡ್ ತರೋಕೆ ಗೂಡಿಂದ ಹಾರಿ ಹೋಗಿದ್ವು. ಪೇರೆಂಟ್ಸ್ ಇಲ್ಲದೆ ಪುಟಾಣಿ ಮರಿಗಳು ‘ಕೀ ಕೀ’ ಅಂತ ಭಯದಲ್ಲಿ ಬಡ್ಕೋತಿದ್ದ ಸಮಯ. ಇಂಥ ಹೆಲ್ಪ್ಲೆಸ್ ಸಿಚುಯೇಷನ್‌ನಲ್ಲಿ ಗೂಂಡಾ ಮಂಕೀಸು ಮರದ ಪೊಟರೆಗಳಲ್ಲಿ ಬೆಚ್ಚಗೆ ಇರೋಕೆ ಪ್ಲಾನ್ ಮಾಡಿದವು. ಗೂಡುಗಳಿಗೆ ದಾಳಿ ಇಟ್ಟು ಎಗ್ ನ ಈಟ್ ಮಾಡಿ, ನೆಸ್ಟ್ ಕಿತ್ತು ಗಬ್ಬೆಬ್ಬಿಸೋದು ಬ್ಯಾಡ್ ಐಡಿಯಾ. ಬ್ಯಾಡ್ ಏನು ಬಂತು, ವರ‍್ಸ್ ಗಿಂತ ವರ‍್ಸ್ ಐಡಿಯಾ. ಕಾಂಪ್ರೊಮೈಸ್‌ಗೆ ಪ್ಲಾನ್ ಮಾಡಿದ ಪುಟ್ಟ ಪಕ್ಷಿಗಳು ಕೆಟ್ಟ ಕೋತಿಗಳಿಗೆ ಮನವಿ ಮಾಡ್ತು.

“ಎಲೈ ಪಿಂಡ ಕಪಿಗಳೇ, ಸ್ಸಾರಿ, ಪಿಂಡ ಅಲ್ಲ, ಪುಂಡ ಕಪಿಗಳೇ, ನೀವೂ ಸ್ಟ್ರಾಂಗು. ನಿಮ್ಮ ಕೈಕಾಲೂ ಸ್ಟ್ರಾಂಗು. ಲುಕ್ಸು ಟ್ರಿಕ್ಸ್ನಲ್ಲಿ ಮನುಷ್ಯನ್ನ ಬಿಟ್ರೆ ನೆಕ್ಸ್ಟ್ ನೀವೇ ! ನಿಮ್ಮಲ್ಲೇ ಕೆಲವು ಮಂಕೀಸ್ ಪ್ರಮೋಷನ್ ಪಡೆದು, ಸ್ಟೇಟಸ್ ಹೆಚ್ಚಿಸಿಕೊಂಡು ಎಲೆಕ್ಷನ್‌ಗೆ ನಿಂತು ಕೆಲವು ಕಡೆ ಲೀಡರ್‌ಗಳಾಗಿ ಸರ್ಕಾರಿ ಸುಖ ಅನುಭವಿಸ್ತಾ ಇವೆ. ವೈ ಡೋಂಟ್ ಯು ಟ್ರೈ ? ಶಕ್ತಿಶಾಲಿಗಳು ಟ್ರೀನಲ್ಲಿ ಹೌಸ್ ಮಾಡಿದರೆ ಮಾನ ಇರೊಲ್ಲ. ಬೊಂಬಾಟಾಗಿ ಮನೆಗಳು ಕಟ್ಕೊಂಡು ಮರ್ಯಾದೆಯಾಗಿ ಇರಿ” ಅಂತು.

ಕೋತಿಗಳಿಗೆ ಈ ಮಾತು ಹೌದೆನ್ನಿಸಿತು. ಮೌನಂ ಸಮ್ಮತಿ ಸಿಂಬಲ್ ! ಬರ್ಡ್ಸ್ ತಮ್ಮ ಉಪದೇಶ ಕಂಟಿನ್ಯೂ ಮಾಡ್ತು.

“ಮಂಕಿ ಆಗಿ ಹುಟ್ಟಿದ ಮೇಲೆ ಮಿಕ್ಕವರಿಲ್ಲದಾಗ ನೀವೇ ರಾಜ, ನಿಮ್ಮ ಟೈಲೇ ಚೇಲಾ ! ನಿಮ್ಮ ಕೈಕಾಲೇ ಇನ್ಫೆಂಟ್ರಿ ಕೇವಲ್ರೀ ! ಫ್ರೀ ಹೌಸಸ್ ಕಟ್ಟಿ ಕೊಡೋ ಸ್ಕೀಮ್ ಸರ್ಕಾರದಲ್ಲಿದೆ. ಇದರಿಂದ ಮನೆ ಕಟ್ಟೋವರಿಗೂ ಲಾಭ. ಮನೆಗೆ ಬಿಟ್ಟವರಿಗೂ ಲಾಭ. ಅಧಿಕಾರದಲ್ಲಿ ಮೇಲೆ ನಿಮ್ಮವರೇ ಇರೋದರಿಂದ ನೀವು ಅಪ್ಲ್ಯ್ ಮಾಡಿದರೆ ಮನೆ ಈಸಿ ಆಗಿ ಸಿಗುತ್ತೆ, ಆಗ ಜಗತ್ತು ನೆಮ್ಮದಿಯಾಗಿರುತ್ತೆ” ಅಂತ ಗೋಗರೆದವು.

ಕೆಲವು ಸಾವಿರ ವರ್ಷಗಳ ನಂತರ ಆ ಮಂಕೀಸು ರಿವರ್ ಸೈಡ್ ಮರಗಳಿಗೆ ಕೊಡಲಿ ಹಾಕಿ ಇದ್ದ ಬದ್ದ ಗ್ರೀನರಿ ಎಲ್ಲ ಹಾಳುಗೆಡವಿ ಸೈಟುಗಳು ಮಾಡಿ, ಮನೆ ಕಟ್ಕೊಂಡು, ಗೇಟೆಡ್ ಕಮ್ಯೂನಿಟಿ ಮಾಡ್ಕೊಂಡು ಮಜವಾಗಿದ್ದವು. ಮರಗಳು ಕಮ್ಮಿ ಆಗಿ, ಪಕ್ಷಿಗಳಿಗೆ ನೆಲೆ ಇಲ್ದೆ, ಅಂತರ್‌ಪಿಶಾಚಿಗಳ ಥರ ಸಿಟಿಗಳಲ್ಲಿ ಹಾರಾಡ್ತಾ, ಹೈ ಟೆನ್ಶನ್ ವೈರ್‌ಗಳಿಗೆ ಸಿಕ್ಕಿ ಹರೋಹರ ಅನ್ನೋ ಸ್ಥಿತಿಗೆ ಬಂದವು.

ನೀತಿ :
ಸ್ವಾರ್ಥಿಗಳಿಗೆ ಸೋನ್‌ಪಪ್ಪಡಿ
ಕೊಟ್ರೆ ನಮ್ಮ ತಲೆ ಮೇಲೆ
ಬೀಳುತ್ತೆ ಚಪ್ಪಡಿ!

‍ಲೇಖಕರು avadhi

October 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: