ಜ್ಯೂಸೇ ಇಲ್ಲ ಬರೇ ಗ್ಯಾಸು!

ಡೇಟಾ ಮೈನಿಂಗ್ ವಿವಾದ ಕಂತು – 3

ಒಂದು ಶಿಕ್ಷೆ ಆಗಬೇಕಿದ್ದರೆ, ಒಂದು ಅಪರಾಧ ಆಗಬೇಕು, ಆಗಿರುವುದು ಅಪರಾಧ ಎಂದು ಸಾಬೀತಾಗಬೇಕು, ಅದನ್ನು ವ್ಯಾಖ್ಯಾನ ಮಾಡುವ ಒಂದು ಕಾನೂನು ಬೇಕು. ಇದ್ಯಾವುದೂ ಇಲ್ಲದೆ ಬರೇ “ ಹಗರಣ” “ ಹಗರಣ” ಎಂದು ಗದ್ದಲ ಎಬ್ಬಿಸಿದರೆ, ಅದು ಬರೀ ಗ್ಯಾಸೇ ಹೊರತು ಜ್ಯೂಸಲ್ಲ. ಇದು ಭಾರತಕ್ಕೂ ಸತ್ಯ, ಅಮೆರಿಕಕ್ಕೂ ಸತ್ಯ.

ಕೇಂಬ್ರಿಜ್ ಅನಾಲಿಟಿಕಾದ ಮೇಲಿರುವ ಆಪಾದನೆ, ಅದು ಫೇಸ್ ಬುಕ್ಕಿನ ಸದಸ್ಯರಾಗಿದ್ದ ಐದು ಕೋಟಿ ಅಮೆರಿಕನ್ನರ ದತ್ತಾಂಶಗಳನ್ನು ಸಂಗ್ರಹಿಸಿ, ಅದನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಪರವಾಗಿ ಬಳಸಿಕೊಂಡಿದೆ ಎಂಬುದು.

ಇದರಲ್ಲಿ ಕೂದಲು ಸೀಳುವ ಸರ್ಜರಿ ನಡೆಯದೇ ಇದ್ದರೆ ಯಾವುದೂ ಅಪರಾಧ ಅಲ್ಲ. ಯಾಕೆಂದು ವಿವರಿಸುತ್ತೇನೆ ಕೇಳಿ.

1. ಅಲೆಕ್ಸಾಂಡರ್ ಕೋಗನ್ ಎಂಬ ಕೇಂಬ್ರಿಜ್ ವಿವಿಯ ಸಂಶೋಧಕರೊಬ್ಬರು  ಒಂದು ಫೇಸ್ ಬುಕ್ App ತಯಾರಿಸುತ್ತಾರೆ. ಅದೊಂದು “This is my digital life” ಎಂಬ ಪ್ರಶ್ನಾವಳಿ (ಕ್ವಿಝ್) App – ಇದು ಅಪರಾಧ ಅಲ್ಲ.

2. ಆ ಕ್ವಿಝ್ ಫೇಸ್ ಬುಕ್ಕಿನಲ್ಲಿ  ಪ್ರಕಟಗೊಂಡಾಗ 2,70,000 ಅಮೆರಿಕನ್ನರು ಅದರಲ್ಲಿ ಪಾಲ್ಗೊಳ್ಳುತ್ತಾರೆ. ಹಾಗೆ ಪಾಲ್ಗೊಂಡಾಗ, ಒದಗಿಸಿದ ಮಾಹಿತಿಗಳು ಕೋಗನ್ ಗೆ ಸಿಗುತ್ತವೆ, ಜೊತೆಗೆ ಆ ಮಾಹಿತಿ ಒದಗಿಸಿದವರ ವಿವರಗಳೂ ಸಿಗುತ್ತವೆ – ಇದೂ ಅಪರಾಧ ಅಲ್ಲ.

3. ಕುತೂಹಲಕರ ಸಂಗತಿ ಎಂದರೆ, ಫೇಸ್ ಬುಕ್ಕಿನಲ್ಲಿರುವ ಒಂದು ಸಣ್ಣ ಬಗ್ ನ ಕಾರಣದಿಂದಾಗಿ ಈ  2.7ಲಕ್ಷ ಜನರ ಫ್ರೆಂಡ್ ಲಿಸ್ಟಿನಲ್ಲಿರುವ ಎಲ್ಲ ಫ್ರೆಂಡ್ ಗಳ ಮಾಹಿತಿಯೂ (ಸುಮಾರು ಐದು ಕೋಟಿ ಜನರದು) ಕೋಗನ್ ಗೆ ಮತ್ತು ಆ ಮೂಲಕ ಕೇಂಬ್ರಿಜ್ ಅನಾಲಿಟಿಕಾ ಗೆ ಸಿಗುತ್ತದೆ – ಇದೂ ಅಪರಾಧ ಅಲ್ಲ. ಏಕೆಂದರೆ, ಫೇಸ್ ಬುಕ್ ತನ್ನ ಕಾನೂನು ಶರತ್ತುಗಳಲ್ಲಿ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದನ್ನು ನಿನ್ನೆಯ ಕಂತಿನಲ್ಲಿ ದಾಖಲಿಸಿದ್ದೇನೆ.

4. ಈ ಎಲ್ಲ ಮಾಹಿತಿಗಳನ್ನು ಬಳಸಿಕೊಂಡ ಕೇಂಬ್ರಿಜ್ ಅನಾಲಿಟಿಕಾದ ಡೇಟಾ ಮೈನರ್ ಗಳು ಒಂದಿಷ್ಟು ತೀರ್ಮಾನಗಳನ್ನು ಮೈನ್ ಮಾಡಿ ಹೊರತೆಗೆಯುತ್ತಾರೆ – ಇದೂ ಅಪರಾಧ ಅಲ್ಲ.

5. ಈ ತೀರ್ಮಾನಗಳ ಆಧಾರದಲ್ಲಿ ಅಧ್ಯಕ್ಷೀಯ ಅಭ್ಯರ್ಥಿ ಟ್ರಂಪ್ ಅವರ ಪ್ರಚಾರ ತಂಡವು ಎದುರಾಳಿಯ ವಿರುದ್ಧ ಮಾನಸಿಕ ಯುದ್ಧ ಹಾಗೂ ಮತದಾರರ ಮೇಲೆ ಪ್ರಭಾವ ಬೀರುವ ತಂತ್ರಗಳನ್ನು ರೂಪಿಸುತ್ತದೆ ಮತ್ತು ಬಳಕೆಗೆ ತಂದು ಚುನಾವಣೆ ಗೆಲ್ಲುತ್ತದೆ – ಇದೂ ಅಪರಾಧ ಅಲ್ಲ!

ಹಾಗಿದ್ದರೆ ಯಾರ ಯಾವ ತಪ್ಪಿಗೆ ಗದ್ದಲ ನಡೆದಿದೆ?

ಹೆಚ್ಚಿನಂಶ, ಈ ಎಲ್ಲ ವಿಚಾರಗಳು ಮಾಧ್ಯಮಗಳಲ್ಲಿ ಹೊರಬಂದ ರಭಸಕ್ಕೆ ಶೇರು ಪೇಟೆಯಲ್ಲಿ ಫೇಸ್ ಬುಕ್ ಶೇರು ರಕ್ತಪಾತ ಮಾಡಿತು ಎಂಬ ಕಾರಣಕ್ಕೆ, ಸ್ವತಃ ಮಾರ್ಕ್ ಝುಕರ್ಬರ್ಗ್ ಎದುರು ಬಂದು ಎಲ್ಲಿ ತಪ್ಪಾಗಿದೆ ನೋಡುತ್ತೇವೆ, ತಪ್ಪಿದ್ದರೆ ಸರಿಪಡಿಸುತ್ತೇವೆ ಎಂದು ಹೇಳಬೇಕಾಯಿತು. ಹೆಚ್ಚಿನಂಶ ಈ ಪ್ರಕರಣ (ಬೇರೇನೂ ತಿರುವುಗಳಿಲ್ಲದಿದ್ದಲ್ಲಿ) ಇಲ್ಲಿಂದ ಮುಂದೆ ಎಲ್ಲಿಗೂ ತಲುಪದು.

ಭಾರತದ್ದೇನು ಕ್ಯಾತೆ?

ಫೇಸ್ ಬುಕ್ ಮತ್ತು ಕೇಂಬ್ರಿಜ್ ಅನಾಲಿಟಿಕಾಕ್ಕೆ ಸಂಬಂಧಿಸಿ ಭಾರತದಲ್ಲಿ ಎದ್ದಿರುವ ಕ್ಯಾತೆ ಗಮನವನ್ನು ಬೇರೆಡೆಗೆ ಎಳೆಯುವ ಹುನ್ನಾರವಲ್ಲದೇ ಬೇರೇನೂ ಅಲ್ಲ. ಯಾಕೆಂದರೆ, ಕೇಂಬ್ರಿಜ್ ಅನಾಲಿಟಿಕಾ ಇಲ್ಲಿ ದತ್ತಾಂಶಗಳನ್ನು ಕದ್ದ ಬಗ್ಗೆ ಯಾವುದೇ ಆಪಾದನೆ ಇಲ್ಲ. ಕೋಗನ್ ಅವರ ಆ ಕ್ವಿಝ್ ಭಾರತಕ್ಕೆ ಸಂಬಂಧಿಸಿದ್ದೂ ಅಲ್ಲ.

 

ಫೇಸ್ ಬುಕ್ಕಂತೂ ಇಲ್ಲಿ ಚಿತ್ರದಲ್ಲಿಯೇ ಇಲ್ಲ. ಅವರನ್ನು ಯಾಕೆ ಮೊನ್ನೆ ಐಟಿ ಸಚಿವರು ಕಣಕ್ಕೆಳೆದರೋ ಅವರೇ ಹೇಳಬೇಕು. ಒಂದು ವೇಳೆ ಫೇಸ್ ಬುಕ್ ಚಿತ್ರದಲ್ಲಿದ್ದರೂ ಅದು ದೇಶದ ನ್ಯಾಯಾಂಗದ ವ್ಯಾಪ್ತಿಗೆ ಹಾಲೀ ಇರುವ ಕಾನೂನುಗಳನ್ವಯ ಬರುವಂತೆ ಕಾಣುವುದಿಲ್ಲ.

ಇನ್ನು ಬಿಜೆಪಿ ಮತ್ತು ಕಾಂಗ್ರೆಸ್ ಗಳೆರಡೂ ಕೇಂಬ್ರಿಜ್ ಅನಾಲಿಟಿಕಾ ಸೇವೆಯನ್ನು (ಅಥವಾ ಅಂತಹ ಬೇರೆ ಕಂಪನಿಗಳ ಸೇವೆಯನ್ನು) ಬಳಸಿಕೊಂಡಿವೆ. ಅವರು ಅನಾಲಿಟಿಕಾದ ಸೇವೆ ಪಡೆಯಲು ದತ್ತಾಂಶಗಳನ್ನು ಎಲ್ಲಿಂದ ಒದಗಿಸಿದರೆಂಬ ಬಗ್ಗೆ ಅವರೇ ಹೇಳಬೇಕು. ಈವತ್ತು ಗದ್ದಲ ಮಾಡುತ್ತಿರುವ ನಮೋ App, ಸರ್ಕಾರದ ಅಧಿಕ್ರತ ಪ್ರಚಾರ ಪೋರ್ಟಲ್ ಗಳು, ಪಕ್ಷಗಳ ಮಿಸ್ ಕಾಲ್ ಸದಸ್ಯತ್ವದ ಆಂದೋಲನಗಳು ಹಿನ್ನೆಲೆಯಲ್ಲಿ ಏನೇನು ಮಾಹಿತಿ ಸಂಗ್ರಹಿಸಿವೆ ಎಂಬುದನ್ನು ಸರ್ಕಾರವೇ ಹೇಳಬೇಕು. ಕೇವಲ ಈ ಮಾಹಿತಿಗಳ ಆಧಾರದಲ್ಲೇ ಡೇಟಾ ಮೈನರ್ ಗಳು ರಾಜಕೀಯ ತಂತ್ರಗಾರಿಕೆಗೆ ಅಗತ್ಯವಿರುವ ಹತ್ಯಾರುಗಳನ್ನು ಸಿದ್ಧಪಡಿಸಿಕೊಡುವುದು ಸಾಧ್ಯವಿದೆ.

ಇನ್ನು ಕೇಂದ್ರ ಮತ್ತು ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಗೌಪ್ಯತೆಯಾಗಲೀ, ನಿಯಮಗಳಾಗಲೀ ಇಲ್ಲದ ಮಾಹಿತಿಗಳು ದಂಢಿಯಾಗಿ ಸಿಗುತ್ತವೆ.  ಮತದಾರರ ಪಟ್ಟಿ, ಕಳೆದ ಐದಾರು ಚುನಾವಣೆಗಳಲ್ಲಿ ಬಿದ್ದ ಮತಗಳ ಪ್ರಮಾಣ, ಮತದಾನದ ಶೇಕಡಾವಾರು, ಜಾತಿವಾರು ಅಂಕಿ-ಸಂಖ್ಯೆಗಳು… ಹೀಗೆ ಅಸಂಖ್ಯ ದತ್ತಾಂಶಗಳು ಭಾರತದಲ್ಲಿ ಹಾದಿಬೀದಿಯಲ್ಲಿ ಉಚಿತವಾಗಿ ಲಭ್ಯವಿವೆ.

ಸಹಜವಾಗಿಯೇ ಡೇಟಾ ಮೈನಿಂಗ್ ಪರಿಣತರು ತಮ್ಮ ಕ್ಲೈಂಟ್ ಗಳಿಗೆ ಸಲಹೆ ನೀಡುವಾಗ ಈ ಎಲ್ಲ ಸ್ರೋತಗಳಿಂದಲೂ ದತ್ತಾಂಶ ಪಡೆದಿರುತ್ತಾರೆ. ಇದು ಸದ್ಯಕ್ಕೆ ಭಾರತದಲ್ಲಿ ಕಾನೂನುಬದ್ಧ ವ್ಯವಹಾರವೇ ಆಗಿದ್ದು, ಅದನ್ನು “ಹಗರಣ” ಎಂದು ಹೇಗೆ ಕರೆಯುವುದು ಎಂಬುದನ್ನು “ಹಗರಣ” ಎಂದವರೇ ವ್ಯಾಖ್ಯಾನಿಸಬೇಕಾಗುತ್ತದೆ!

ಹಾಗಾಗಿ ಈ ಇಡಿಯ ಗದ್ದಲ ಬೇರಾವುದೋ ಕೆಲವು ಸಂಗತಿಗಳನ್ನು ದೊಡ್ಡದಾಗದಂತೆ ಮುಚ್ಚಿಹಾಕಲು ಬಳಸಲಾಗುತ್ತಿರುವ ಕೌದಿ ಎಂಬುದು ನಿಚ್ಚಳ!

ಹೆಚ್ಚಿನ ಓದಿಗಾಗಿ: https://www.vox.com/policy-and-politics/2018/3/23/17151916/facebook-cambridge-analytica-trump-diagram

‍ಲೇಖಕರು Avadhi GK

March 28, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

 1. rajaram tallur

  Good series. Got an opportunity to learn something!. Another aspect about data analytics is the hype around it’s impact. It works fairly well when it is used for predictive analytics in machines. When it comes to human beings it has miles to go and may never really catch-up. To predict human behavior we need to know human beings really well. Such people who really know human beings will then need to provide the rules that the analytics engines use for their prediction capabilities. The effectiveness of predictions improves over time.

  However one look at the daily news around the planet in the last 100 years from every conceivable media will provide us with enough evidence of how well human beings understand each other, let alone those who claim to be experts in understanding humanity.

  So the effectiveness of data analytics is a question one needs to question.

  One way of swaying public attention towards its claimed effectiveness is the timing of the claims…

  Thanks to you for this thought provoking series!

  And yes this is GAS at it’s best.

  -Rajendra Ramesh Bendre

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: