ಆಶಾಜಗದೀಶ್
ಗಾಯಕನ ಕೈಲಿರುವ ಟ್ರಂಪೆಟ್
ಹಿಂದಿನ ದಿನವಷ್ಟೇ ಜಗಳವಾಡಿ
ತೌರಿಗೆ ಹೊರಟುಹೋಗುವಾಗ ಹೆಂಡತಿಯ
ಕಡುಗಪ್ಪು ಮಿಡಿನಾಗರದ ಸುತ್ತಲೂ
ವಿರಮಿಸಿದ ಕೇದಗೆಯಂತೆ
ಇಳಿಬಿದ್ದಿದ್ದ ಜಡೆ ಮತ್ತು ಮಲ್ಲಿಗೆ ದಂಡೆ
ಮರೆಯಾಗುವ ಮುನ್ನ ತಿರುವಿನಲ್ಲಿ
ಕೆಣಕಿ ಹೋದದ್ದರ
ಅಪಶೃತಿ ಹೊರಡಿಸುತ್ತಿದೆ
ಪಬ್ಬಿನ ಗ್ರಾಫ್ಟೆಡ್ ಲೈಟು
ಅದೇ ಸೊಗಡಿನ ಜನರೇಶನ್ನು
ಸಪೂರ ತೊಡೆಗಳು
ವ್ಯಾಕ್ಸ್ ಮಾಡಿದ ಮೀನಖಂಡಗಳು
ತೆರೆದು ತೋರಿಸುವ
ಒನ್ ಪೀಸ್ ಮಿನಿಗಳು
ನೊರೆ ಹೊಮ್ಮಿಸುವ ವೈನ್ ಶಾಂಪೇನ್
ಬಿಯರ್ ಗಳು
ಮೆಲ್ಲಗೆ ಸಿಪ್ ಬೈ ಸಿಪ್ ಹೀರುವ
ಲಿಪ್ಸ್ಟಿಕ್ ಲೇಪಿಸಿಕೊಂಡ ತುಟಿಗಳು
ಹರಿದ ಜೀನ್ಸು ತೊಟ್ಟು
ವೆಸ್ಟ್ರನ್ ಎನಿಸಿಕೊಳ್ಳಲು ಹೆಣಗುತ್ತಿದ್ದ
ಸೆಲೆತ ತೊಡೆ ಸಂದಿಯ ದುಂಬಿಗಳು
ಜ್ಯಾಜ್ ನ ತಾರಕದಲ್ಲಿ ಸ್ವರ
ವಿನ್ಯಾಸ ಮಾಡುತ್ತಾ ನೋವ ತುಂಬಿ
ಅಲ್ಲೇ ಒಂದಷ್ಟು ಹೊತ್ತು ವಿರಮಿಸಿ
ನಿಧಾನ ಮಂದ್ರಕ್ಕಿಳಿದು ಸಾ ಮುಟ್ಟಿದಾಗ
ತೊಡೆಗಳ ಮೇಲೆ ಆಡುತ್ತಿದ್ದ
ಗಡಸು ಕೈಗಳಿಗೆ ಅಸಹನೆ
ಏನೊಂದೂ ಪ್ರತಿಕ್ರಿಯೆ ಇಲ್ಲದೆ
ಮುಂದುವರಿದ ಜ್ಯಾಜ಼್….
ಸುತ್ತುವರಿದ ಶ್ರೋತೃ ಪಾದಗಳ
ಖಟಖಟಿಕೆ…
ಅವನ ಕಣ್ಣಿಗೆ ಸಹಜ ಬೆಳಕಿನ
ಬಣ್ಣ ಆಗಿಬರುತ್ತಿಲ್ಲ
ಬಣ್ಣ ಕಳೆದುಕೊಂಡ ಚಿಟ್ಟೆಗಳಿಗೆ
ಬಣ್ಣ ಬಳಿಯುವ ಕೆಲಸ ಅವನದು
ಅವನ ಇನ್ನೊಂದು ಮುಖಕ್ಕೆ
ಈ ಬದಿಯ ಚರಿತ್ರೆಯ ಹಂಗಿಲ್ಲ
ದೊಗಲೆ ಶರ್ಟಿಗೆ ಗೊತ್ತು ಅವನ
ನಡುವಿನಳತೆ
ರೂಮ್ ನಂಬರ್ ನೆನಪಿಡುವುದು
ಶೀಲಟ್ಟ ಶೀಶೆಗಳ ಕಸದಬುಟ್ಟಿಗೆ
ಹಾಕುವುದು
ವೀರ್ಯ ತುಂಬಿದ ರಗ್ಗನ್ನು ಶುಚಿ
ಗೊಳಿಸಿ ಮರುದಿನಕ್ಕೆ ಅಣಿಗೊಳಿಸುವುದು
ಇಷ್ಟಕ್ಕೇ ಅವನ ಹೊಟ್ಟೆ ತುಂಬುತ್ತದೆ
ಹಾಡುವುದು ಉಪಕರ್ಮ
ಲಿಕ್ಕರ್ ನೊಂದಿಗೆ ಬೆರೆಸಿದ ಜ್ಯಾಜ಼್
ನ ರೆಸಿಪಿ ಅವನ ಸ್ವಂತದ್ದು
ಅವನೇ ಕರ್ತೃ ಮತ್ತದು
ಅವನ ತುರ್ತು
ಇದೇ ವಾಸನೆ ಹೊತ್ತು ಮರಳುವ
ಅವನ ಹೆಂಡತಿಗೆ
ಇದೆಂದರೆ ಅಲರ್ಜಿ
ಹಾಗಾಗಿ ಅವಳು ಅವನನ್ನು
ತೊರೆದಿದ್ದಾಳೆ
0 ಪ್ರತಿಕ್ರಿಯೆಗಳು