ಜೋಧಪುರದಲ್ಲಿ ಕಂಡ ಶೀಶ್‌ಮಹಲ್‌, ಗಣಿಯಲ್ಲಿ ಕಂಡ ಹೆಣ್ಣುಮಕ್ಕಳು…

ನಯನ

ಅದು ಕೋವಿಡ್‌ ಎರಡನೇ ಲಾಕ್‌ಡೌನ್‌ ಸಮಯ. ಕೆಲವು ಕಂಪನಿಗಳು ಮಾತ್ರ ತೆರೆದಿದ್ದವು. ನಾವು ಮೆಕ್ಯಾನಿಕಲ್‌ ಎಂಜಿನಿಯರ್‌ಗಳು. ನಮಗೆ work from home ಅನ್ನೋ ಕಾನ್ಸೆಪ್ಟ್‌ ವರ್ಕ್‌ ಆಗಲ್ಲ. ಮನೆಯಲ್ಲೇ ಕೂತು ನಮ್ಮ ಮೆಶೀನ್ನುಗಳ ಸರ್ವೀಸ್‌ ಮಾಡಲು ಆಗುವುದಿಲ್ಲ. ಇನ್ನು ಆ ಮಟ್ಟದ ಯಾವ ಸಂಶೋಧನೆಯೂ ಆಗಿಲ್ಲದಿರುವುದೊಂದು ಪುಣ್ಯ. ಅದೇ ಪುಣ್ಯದ ಭಾಗ್ಯ ನಮ್ಮನ್ನು ಊರೂರು ಸುತ್ತಿಸುತ್ತಿದೆ.

ಜೋಧಪುರದಲ್ಲಿನ ಹೊಸ ಫೆಲ್ಡ್ಸ್ಪಾರ್ ಗಣಿಗಳಲ್ಲಿ ನಮ್ಮ ಮೆಶೀನ್ನುಗಳು ಕೆಲಸ ಮಾಡುತ್ತವೆ. ಅಲ್ಲೇನಾದರೂ ತೊಂದರೆ ಆದಾಗ ಅಲ್ಲಿಗೆ ಹೋಗಿ ನೋಡಬರಬೇಕು. ಆ ಊರಿಗೆ ಬೆಂಗಳೂರಿನಿಂದ ನೇರವಾಗಿ ಹೋಗೋಕೆ ಒಂದೇ ವಿಮಾನ. ಅದು ಬೆಳಿಗ್ಗೆ ೧೧ಕ್ಕೆ. ದಿನವೆಲ್ಲ ಪ್ರಯಾಣದಲ್ಲೇ ವ್ಯರ್ಥವಾಗುತ್ತದೆ ಅಂತ ನಮ್ಮ ಬಾಸಿನ ಪೇಚಾಟ. ಸರಿ ರಾತ್ರಿ ಜೈಪುರದ ಕೊನೆಯ ವಿಮಾನ ಹತ್ತಿ ಅಲ್ಲಿಗೆ ಹೋಗಿ ಅಲ್ಲಿಂದ ಇನ್ನೊಂದು ರೈಲು ಹತ್ತಿ ಬೆಳಗಿನ ಜಾವ ಜೋಧಪುರ ತಲುಪಿದೆ. ಅದು ನವಂಬರ್‌ ತಿಂಗಳು. ಉತ್ತರ ಭಾರತದಲ್ಲಿ ಚ…ಚ…ಚ..ಚಳಿಗಾಲ. ಜೋಧಪುರ ಮರಳುಗಾಡು ಅಲ್ಲೇನು ಚಳಿ ಆಗಲ್ಲ ಅಂತ ಉಡಾಫೆಯಿಂದ ಮಾಮೂಲಿ ಬಟ್ಟೆಗಳನ್ನಷ್ಟೇ ತುಂಬಿಕೊಂಡು ಹೋಗಿದ್ದೆ. ಹೋಗುವ ಮುಂಚೆ ಗೂಗಲ್‌ಕ್ಕನ ಹತ್ರ ಆದ್ರೂ ಕೇಳಬೇಕಿತ್ತು. ಕೇಳಲಿಲ್ಲ ಯಾಕಂದರೆ ಎಲ್ಲವನ್ನೂ ತಿಳಿದುಕೊಂಡು ಹೋದರೆ ಹೊಸ ಜಾಗದಲ್ಲಿನ ಹೊಸತರ ಹುಡುಕಾಟದ ಖುಷಿ, ಸರ್ಪ್ರೈಸ್‌ಗಳು ಮಿಸ್‌ ಆಗುತ್ತೆ ಅಂತ. ಅದು ಆಗಾಗ ಹೀಗೆ ಸಮಸ್ಯೆಗೆ ಒಡ್ಡುತ್ತೆ.

ರಾತ್ರಿಯೇ ಚಳಿಯ ಸೂಚನೆ ಸಿಕ್ಕಿತು. ರಾತ್ರಿ ಅಲ್ವಾ ಚಳಿ ಆಗುತ್ತಪ್ಪ ಏನ್ಮಾಡೋದು ಅಂತ ಅವುಡುಗಚ್ಚಿ ಸಹಿಸಿಕೊಂಡೆ. ಜೋಧಪುರದಲ್ಲಿ ಇಳಿದರೆ ಮೂಳೆಗಳನ್ನು ಕೊರೆಯುವಷ್ಟು ಚಳಿ! ಮರಳುಗಾಡಿನಲ್ಲಿ ಅಷ್ಟು ಚಳಿಯಿರುತ್ತೆ ಅಂತ ಆವತ್ತೇ ಗೊತ್ತಾಗಿದ್ದು. ಹೋಟೆಲ್‌ ಮುಟ್ಟಿದರೆ ಸಾಕಪ್ಪ ಅನ್ನಿಸಿತು.

೭.೩೦ಕ್ಕೆ ನಮ್ಮ ಸಂಗಡಿಗರನ್ನು ಹೊತ್ತ ಟಾಟಾ ಸುಮೊ ನಮ್ಮ ಕೆಲಸದ ಜಾಗಕ್ಕೆ ಕರೆದುಕೊಂಡು ಹೋಗಲು ಬಂತು. ಗಾಡಿ ಹತ್ತಿದ ತಕ್ಷಣ ನಾನು ಕೇಳಿದ ಮೊದಲ ಪ್ರಶ್ನೆ “ಜಾಕೆಟ್‌ ತೊಗೊಬೇಕು. ಅಂಗಡಿ ಎಲ್ಲಿದೆ?” ನನ್ನ ಪ್ರಶ್ನೆ, ನನ್ನ ಅವಸ್ಥೆ ನೋಡಿ ಎಲ್ಲರೂ ನಕ್ಕರು. “ಏನು ಊರ್ರೀ ನಿಮ್ದು” ಅಂತ ನಾನಂದಿದ್ದಕ್ಕೆ “ಎಷ್ಟು ಬುದ್ಧಿವಂತರು ನೀವು ಚಳಿಗಾಲದಲ್ಲಿ ಕೈಬೀಸ್ಕೊಂಡು ಬಂದಿದಿರಲ್ಲ” ಅಂತ ಅವರಂದರು.

ನಮ್ಮ ಕೆಲಸದ site ಇದ್ದಿದ್ದು ಜೋಧಪುರದಿಂದ ೩೦೦ ಕಿ.ಮೀ ದೂರದಲ್ಲಿ (ಅಜ್ಮೇರ್‌ ಪಕ್ಕದ ಯಾವುದೋ ಹಳ್ಳಿಯ ಹೊರವಲಯದಲ್ಲಿ). ನಮ್ಮ ಡ್ರೈವರ್‌ ತನ್ನ ಹಳೆಯ ಗಾಡಿಯ ಜೀವಹಿಂಡುವಂತೆ ಓಡಿಸುತ್ತಿದ್ದ. ಮರಳುಗಾಡು ಜೋಧಪುರದಲ್ಲಿ ಏನಪ್ಪ ಇದೆ ಅಂದುಕೊಂಡೆ ನೋಡುತ್ತಿದ್ದೆ. ಬಿಸಿಲು ಜಾಸ್ತಿಯೇ ಇತ್ತು.

ಸುತ್ತ ಹೊಲಗಳು ಸರಸೋನ್‌ ಕ ಸಮಯ್‌ ಸಾರುತ್ತಿತ್ತು. ಹಳದಿ ಬಣ್ಣದ ಹೂಗಳು ಕಣ್ಣಿಗೆ ಹಬ್ಬವುಂಟು ಮಾಡುತ್ತಿತ್ತು. ಕುರಿ, ಮೇಕೆಗಳು ಇಲ್ಲಿ ಹೆಚ್ಚಾಗಿ ಕಂಡುಬಂದವು. ಇವೆಲ್ಲಕ್ಕಿಂತ ಹೆಚ್ಚು ಸೆಳೆದದ್ದು ಅಲ್ಲಿನವರು ಹಾಕಿಕೊಂಡಿದ್ದ ಒಡವೆಗಳು.

ಊರು ಕೊನೆಯಲ್ಲೊಬ್ಬರು ಹಿರಿಯರು ಕುರಿಗಳ ಹಿಂಡಿನೊಂದಿಗೆ ನಡೆದುಹೋಗುತ್ತಿದ್ದರು. ದಾರಿ ಕೇಳಲು ಗಾಡಿ ನಿಲ್ಲಿಸಿದಾಗ ಅವರ ಕಿವಿಯೊಡವೆ ನೋಡಿ ವಾಹ್!‌ ಅನ್ನಿಸಿತು. ಅದನ್ನು ಅವರ ಭಾಷೆಯಲ್ಲಿ ʼಗೋಕ್ರುʼ ಅಂತ ಕರೀತಾರಂತೆ. ಅವರ ಬಣ್ಣದ ಪಗಡಿ, ಅವರ ನಿಲುವಿಗೆ ಆ ಓಲೆಗಳು ಬಹಳ ಚಂದ ಕಾಣುತ್ತಿತ್ತು. “ಒಂದು ಫೋಟೊ ತೆಗೆದುಕೊಳ್ಳಲೇ?” ಎಂದು ಕೇಳಿದ್ದಕ್ಕೆ ಅವರು ನಾಚಿ ನೀರಾದರು.

ಮುಂದೆ ಸಾಗುತ್ತಾ ಸಾಗುತ್ತಾ ರಸ್ತೆ ಎಲ್ಲಿಗೆ ಹೋಗುತ್ತದೆ ಎಂದು ತಿಳಿಯದಾಯಿತು. ನಾವು ಹೋಗುತ್ತಿರುವ ಜಾಗದಲ್ಲಿದ್ದ ಯಾರಿಗೋ ಫೋನ್ ಮಾಡಿ ಕೇಳಿದಾಗ ಅವರು ದಾರಿ ಹೇಳಿದ ರೀತಿ ಕೇಳಿ ಆಶ್ಚರ್ಯ. ʼಸೀದಾ ಬನ್ನಿ ಈಚಲ ಮರ ಸಿಗುತ್ತದೆ. ಅಲ್ಲಿ ಎಡಕ್ಕೆ ತಿರುಗಿ ಮತ್ತೆ ಸೀದಾ ಬರುವಾಗ ಒಂದು ದೊಡ್ಡ ಜಾಮೂನಿನ ಮರ ಸಿಗುತ್ತದೆ. ಅಲ್ಲಿ ಬಲಕ್ಕೆ ತಿರುಗಿ ಮತ್ತೆ ಮುಂದು ಒಂದು ಬಂದು ನೋಡಿದರೆ ಒಳಗಿರುವ ನದಿ ಕಾಣುತ್ತದೆ. ಅದನ್ನು ದಾಟಿ ಸೀದ ಬಂದರೆ ಮೆಷಿನ್ ಇರುವ ಜಾಗʼ ಎಂದು ಹೇಳಿದರು. ಸಿಟಿಯಲ್ಲಿರುವ ನಮಗೆ ಎಷ್ಟನೇ ಕ್ರಾಸು ಎಷ್ಟನೆಯ ಮಹಡಿ ಇದೇ ತಲೆಯಲ್ಲಿ ಇರುತ್ತದೆ. ಮತ್ತೊಮ್ಮೆ ಯೋಚಿಸಿದೆ ಏನಾದರೂ ನಮಗೆ ಜಾಮೂನಿನ ಮರ ಹೇಗಿದೆ ಎಂದು ಗೊತ್ತಿಲ್ಲದಿದ್ದರೆ ಆ ಜಾಗಕ್ಕೆ ಹೋಗುವುದು ಹೇಗಪ್ಪಾ ಅಂತ!

ಕೊನೆಗೂ ಹೋಗಿ ತಲುಪಿದೆವು. ಫೈಂಡ್ ಸ್ಪಾರ್ ಒಂದು ಅನನ್ಯ ಅದಿರು. ಇದನ್ನು ತೆಗೆಯಲು ದೊಡ್ಡ ಬಂಡೆ ಕಲ್ಲುಗಳ ಮಧ್ಯೆ ಅಗೆದು ಆಳಕ್ಕೆ ಅಳಿಯಬೇಕು. ಹೇಗೆ ಅಗೆಯುತ್ತಾರೆಂದರೆ ದೊಡ್ಡ ಬಂಡೆಯನ್ನು ಸೀಳಿ ಸಿಡಿಸಿ ಅದರ ಮಧ್ಯಭಾಗವನ್ನು ಕೊರೆದು ಒಂದು ಪುಟ್ಟ ಬಾವಿಯಂತೆ ಮಾಡುತ್ತಾರೆ. ಕ್ರೈಂನ ಸಹಾಯದಿಂದ ಅದರೊಳಗೆ ಒಂದು ಮಿಶೀನ್ ಇಳಿಸುತ್ತಾರೆ. ಇದು ಪುಟ್ಟ ಮಿಶೀನ್ ಈ ಮಿಶೀನ್ ಅಲ್ಲಿನ ಪುಟ ಪುಟ ಫ್ರೆಂಡ್ಸ್ ಬಾರ್ ಅನ್ನು ಅಗೆದು ಒಂದು ಬಕೆಟಿನಲ್ಲಿ ತುಂಬಿ ಮೇಲಕ್ಕೆ ಕಳಿಸುತ್ತದೆ. ಸಿಡಿಸಿದ ಚೂರುಗಳು ದಪ್ಪಗಿರುತ್ತದೆ.

ಅದನ್ನು ಆರಿಸಿ ಗಾತ್ರದ ಮೇಲೆ ವಿಂಗಡಿಸಿ ಆಮೇಲೆ ಮಾರುವುದಕ್ಕೆ ಕಳಿಸುತ್ತಾರೆ. ಈ ಆರಿಸುವ ಕೆಲಸವಿದೆಯಲ್ಲ ಅದು ಬಹಳ ಕಷ್ಟ. ಚೂಪಾದಕಲ್ಲುಗಳನ್ನು ಕೈಯಲ್ಲಿ ಆಯಬೇಕು. ದಿನಗೂಲಿ ಎಂದು ಅಲ್ಲಿ ಬರುವ ಹೆಣ್ಣು ಮಕ್ಕಳನ್ನು ನೋಡಿದೆ ಎಲ್ಲರೂ ಚಿಕ್ಕವಯಸ್ಸಿನವರು ಸುಮ್ಮನೆ ಹಾಗೆ ಮಾತಾಡಿಸಿದೆ, ನನಗೊಂದು shock ಕಾದಿತ್ತು.

ಎಲ್ಲರೂ ಸುಮಾರು 13- 16 ವರ್ಷದ ಹುಡುಗಿಯರು ಅವರೆಲ್ಲರಿಗೂ ಮದುವೆಯಾಗಿತ್ತು. ಕೆಲಸಕ್ಕೆ ಏಕೆ ಬರುತ್ತೀರಮ್ಮ ಎಂದು ಕೇಳಿದರೆ ತಮ್ಮ ಗಂಡಂದಿರನ್ನು, ತಮ್ಮಂದಿರನ್ನು ಓದಿಸಲು ಎಂದರು. ನನಗೆ ಭಯವಾಯಿತು. ದಿನಪೂರ್ತಿ ಬಿಸಿಲಲ್ಲಿ ಕಲ್ಲುಗಳನ್ನು ಆರಿಸಬೇಕು. ಅದಕ್ಕೆ ಸಿಗುವ ಸಂಬಳ 150 ರೂಪಾಯಿ. ಸ್ವಲ್ಪ ರಿಸ್ಕ್ ತಗೊಂಡು ಆ ಬಾವಿಯೊಳಗೆ ಅವರನ್ನು ಇಳಿಸಿ ಕೆಲಸ ಮಾಡಿಸುತ್ತಾರೆ. ಅದು ಮಾಡಿದರೆ ರೂ.50 extra. ಈ ಬಾವಿಯೊಳಗೆ ಇಳಿಯುವ ಸಮಯ ಹಾಗೂ ಹೊರಬರುವುದು ನೋಡಿದರೆ ಗೊತ್ತಾಗುತ್ತದೆ. ಯಾವುದೋ ಒಂದು ತುಗಾಡುವ ಬಕೆಟ್ ಅನ್ನು ಸಿಕ್ಕಿಸಿ, ಆ ಬಕೆಟಿನ ಒಳಗೆ ಜನರನ್ನು ತುಂಬಿಸಿ ಬಾವಿಯೊಳಗೆ ಇಳಿಸುತ್ತಾರೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಜೀವವೇ ಹೋಗುತ್ತದೆ ಅದಕ್ಕೆ ಇರುವ ಬೆಲೆ ರೂ.50

ಈ feldspar ಬಹಳ ಜಾಗದಲ್ಲಿ ಉಪಯೋಗವಾಗುತ್ತದೆ ಅಂತೆ. ಇದನ್ನು ಕಪ್ಪು ಚಿನ್ನವೆಂದು ಕರೆಯುತ್ತಾರೆ ಇದಕ್ಕಿರುವ ಬೆಲೆ ಅಷ್ಟು ಹೆಚ್ಚು.

ಈ ಹುಡುಗಿಯರಿಗೆಲ್ಲ 6- 8ನೇ ವಯಸ್ಸಿನಲ್ಲೇ ಮದುವೆಯಾಗಿದ್ದಂತೆ. ಮದುವೆಯ ನಂತರವೂ ಇವರು ಇವರ ಅಮ್ಮಂದಿರ ಮನೆಯಲ್ಲಿ ಇರುತ್ತಾರೆ. ಇವರ ಗಂಡಂದಿರು ಹೇಗಿರುತ್ತಾರೆ ಎಂಬುದು ಇವರಿಗೆ ನೆನಪಿನಲ್ಲಿ ಇಲ್ಲ. ಈ ಕಾಲದಲ್ಲಿಯೂ ಅದು ಫೋನ್, ಇಂಟರ್ನೆಟ್ ಎಲ್ಲ ಇರುವ ಕಾಲದಲ್ಲಿಯೂ ಪರಿಸ್ಥಿತಿ ಹೀಗೆ ಇರೋದು ಸಾಧ್ಯವೇ? ನೀವು ಯಾಕೆ ಅವರನ್ನು ಒಮ್ಮೆ ಫೋನ್ ಮಾಡಿ ವಿಚಾರಿಸಬಾರದು ಎಂದರೆ ಎಲ್ಲರೂ ನಕ್ಕು ಹೇಳುತ್ತಾರೆ, ನಮ್ಮ ಮನೆಯವರೇ ನಮ್ಮನ್ನು ಹೊರ ಹಾಕುತ್ತಾರೆ. ವಾಡಿಕೆಯ ಪ್ರಕಾರ ಇವರು ಮದುವೆಯಾದ ನಂತರ ತಮ್ಮ ಮನೆಯಲ್ಲಿಯೇ ಇರಬೇಕು. ತಮ್ಮ ಮನೆಯಲ್ಲಿರುವ ಗಂಡು ಮಗುವನ್ನು ಅಂದರೆ ಇವರ ತಮ್ಮಂದಿರನ್ನು ಓದಿಸಬೇಕು. ನಂತರ ಅವರು ಸ್ವಲ್ಪ ದುಡಿಯುವ ಹಾಗಾದರೆ ದುಡಿದು ದುಡ್ಡನ್ನು ಅವರ ಗಂಡಂದಿರ ಓದಿಗೆ ಕಳಿಸಬೇಕು. ಅದೇ ನೀವು ಯಾಕೆ ಓದುವುದಿಲ್ಲ ಎಂದು ಕೇಳಿದರೆ, ಓದಿ ನಾವು ಮಾಡಬೇಕಾದದ್ದು ಏನು ಎನ್ನುತ್ತಾರೆ?

ಅವರ ಗಂಡಂದಿರ ಓದು ಮುಗಿದ ಮೇಲೆ ಅವರ ಗಂಡಂದಿರಿಗೆ 22 -25 ವಯಸ್ಸಾದ ಮೇಲೆ ಅವರೇ ಬಂದು ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗುತ್ತಾರಂತೆ. ಅಕಸ್ಮಾತ್ ಅವರು ಬಂದು ಕರೆಯದಿದ್ದರೆ ಇವರ ಜೀವನ ಅಲ್ಲಿಗೆ ಮುಗಿಯಿತು. ಇದೆಲ್ಲವೂ ಇವತ್ತಿಗೂ ನಡೆಯುತ್ತಿದೆ

ನನ್ನ ಪ್ರಶ್ನೆ ಎಲ್ಲ ಮುಗಿದ ಮೇಲೆ ಅವರು ನನ್ನನ್ನು ವಿಚಾರಿಸಿದರು. ನನ್ನ ಕೆಲಸ, ಓಡಾಟ ಎಲ್ಲ ಕೇಳಿ ಅವರಿಗೆ ಆಶ್ಚರ್ಯ. ನಿಮ್ಮ ಮನೆಯಲ್ಲಿ ಹೇಗೆ ಇದಕ್ಕೆಲ್ಲ ಒಪ್ಪುತ್ತಾರೆ? ಹೇಗೆ ನಿಮಗಿನ್ನು ಮದುವೆಯಾಗಿಲ್ಲ? ಹೇಗೆ ಇಷ್ಟೊಂದು ಫ್ರೀ ಆಗಿ ಓಡಾಡುತ್ತೀರಾ? ಏನೇನು ಅವರದೇ ಪ್ರಶ್ನೆ. ಎಲ್ಲ ಮುಗಿಸಿದ ನಂತರ ಕೆಲಸವು ಮುಗಿಯಿತು. ಊಟಕ್ಕೆ ಹೋಗುವಾಗ ಪ್ರೀತಿಯಿಂದ ಕರೆದು ತಮ್ಮ ಬುತ್ತಿಯನ್ನೇ ನನಗೂ ಕೊಟ್ಟರು. ಅವರೊಂದಿಗೆ ಊಟ ಮುಗಿಸಿ ಮತ್ತೆ ಕೆಲಸಕ್ಕೆ ವಾಪಸ್ ಹೊರಟೆ. ಕೆಲಸ ಮುಗಿಯುವಷ್ಟರಲ್ಲಿ ರಾತ್ರಿ ಆಗಿತ್ತು. ದಣಿವು ಜೋರಾಗಿಯೇ ಇತ್ತು. ರಸ್ತೆಯಲ್ಲಿ ಹೋಗುವಾಗ ಬಹಳ ಹಸಿದಿದ್ದ ನನಗೆ ಸಿಕ್ಕಿದ್ದು ಕಚೋರಿ. ಈ ಪದಾರ್ಥವನ್ನು ನಾನು ಎಂದು ಇಷ್ಟಪಟ್ಟಿರಲಿಲ್ಲ. ಜೋಧಪುರದ ಯಾವುದೋ ಒಂದು ಹಳ್ಳಿಯ ಸಂತೆಯಲ್ಲಿ ನಿಂತಿದ್ದೆ. ಎರಡು ತರಹದ ಕಚೋರಿ ಇದೆ ಈರುಳ್ಳಿಯದೊಂದು, ಹೆಸರುಕಾಳಿನದೊಂದು ಯಾವುದು ಬೇಕು ಎಂದರು. ಕಚೋರಿ ಒಳಗಡೆ ಖಾಲಿ ಇರುತ್ತದೆ, ಬರೀ ಮೇಲ್ಮೈನಲ್ಲಿ ಈರುಳ್ಳಿಯ ರುಚಿ ಹಾಗೂ ಹೆಸರುಕಾಳಿನ ರುಚಿ ಸಿಗಬಹುದೇ ಎಂದು ಸಂಶಯದಲ್ಲೇ ಬಾಯಿಗೆರಿಸಿದೆ. ಆಹಾ,!!!! ರುಚಿಗೆ ನಾಲಿಗೆ ಖುಷಿಯಾಗಿ ಹೋಯಿತು. ಅವತ್ತಿಂದ ನಾನು ಕಚೋರಿ ಫ್ಯಾನ್

ಚಳಿ ಎಷ್ಟಿತ್ತೆಂದರೆ ಕೈತೊಳೆಯಲು ಧೈರ್ಯವಿರಲಿಲ್ಲ. ಅಯ್ಯೋ ತಣ್ಣೀರು ಮುಟ್ಟಬೇಕಲ್ಲ!! ಹೇಗೋ ಹೋಟೆಲ್ ರೂಮ್ ಸೇರಿದೆವು ಮಾರನೆಯ ದಿವಸ ನನಗೆ ಫ್ಲೈಟ್ ಇತ್ತು. ಏನು ನೋಡಲಿಲ್ಲವಲ್ಲ ಎಂದು ಬೇಜಾರಿನಲ್ಲೇ ಯೋಚಿಸುತ್ತಾ ಹೋಟೆಲ್‌ನ ನೈಟ್ ಸೆಕ್ಯೂರಿಟಿ ಗಾರ್ಡನ್ನು ಮಾತಾಡಿಸುತ್ತಿದ್ದೆ. ಅವರು “ಅಯ್ಯೋ, ನಮ್ಮ ಊರು ಬಹಳ ಅದ್ಭುತ. ನೀವು ನೋಡಬೇಕಾದದ್ದು ಬಹಳ ಇದೆ. ಅದ್ಭುತವಾದ ಒಂದು ಪ್ಯಾಲೇಸ್ ಇದೆ ಹೇಗಾದರೂ ಮಾಡಿ ಸಮಯ ಮಾಡಿಕೊಂಡು ಅದನ್ನು ಒಮ್ಮೆ ನೋಡಿ ಹೋಗಿ” ಎಂದರು. ಮೆಹರಾನ್ಗಡ್ ಪ್ಯಾಲೇಸ್‌ನ ಹೆಸರು. ಮಾರನೇ ದಿನ 12ಕ್ಕೆ ನನ್ನ ಫ್ಲೈಟ್. ಬೆಳಗ್ಗೆ ಆರಕ್ಕೆ ಹೊರಟು ಆಟೋ ಒಂದನ್ನು ಹಿಡಿದು ಪ್ಯಾಲೇಸ್ ಮುಟ್ಟಿದೆ. ಆರುವರೆಗೆ ನನಗೋಸ್ಕರ ಯಾರು ಪ್ಯಾಲೇಸ್ ತೆಗೆದಾರು?

ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳು ಕೆಲಸಕ್ಕೆ ಬಂದವರು ನನ್ನ ಬ್ಯಾಗು ನೋಡಿ “ಪ್ಯಾಲೇಸಿನಲ್ಲಿ ಉಳಿದುಕೊಳ್ಳಲು ರೂಂಗಳ ವ್ಯವಸ್ಥೆ ಇಲ್ಲ, ಬರಿ ನೋಡಲು ಮಾತ್ರ” ಎಂದರು. ಜೋರಾಗಿ ನಕ್ಕು, “ಇಲ್ಲಪ್ಪ, ನಾನು ಬರಿ ಪ್ಯಾಲೇಸ್ ನೋಡಲು ಬಂದವಳು ಮಧ್ಯಾಹ್ನ ಫ್ಲೈಟ್. ಸಮಯ ಬಹಳ ಕಡಿಮೆ ಹಾಗಾಗಿ ಲಗೇಜ್ ಸಮೇತ ಬಂದಿದ್ದೇನೆ” ಎಂದೆ. “ಅಯ್ಯೋ ಇಲ್ಲವಲ್ಲ ಪ್ಯಾಲೇಸ್ ಒಂಭತ್ತಕ್ಕೆ ತೆಗೆಯುವುದು” ಎಂದರು. ನಾನು ಬೆಂಗಳೂರಿಂದ ಬಂದಿದ್ದೇನೆ ಬಹಳ ದೂರದಿಂದ ಬಂದಿದ್ದೇನೆ ದಯಮಾಡಿ ನೋಡಲು ಒಂದು ಅವಕಾಶ ಕೊಡಿ ಎಂದು ಕಾಡಿಬೇಡಿ, ಅವರ ಊರನ್ನು ಹೊಗಳಿಕೊಂಡಾಡಿ ಅಂತೆಲ್ಲ ಪುಸಲಾಯಿಸಿದೆ. ಅವರಿಗೆ ತಮ್ಮ ಕೆಲಸ ಕಳೆದುಕೊಳ್ಳುತ್ತೇವೆ ಎಂಬ ಭಯ. ಅದಕ್ಕೆ ಅವೆಲ್ಲ ಆಗುವುದೇ ಇಲ್ಲವೆಂದು, ನಾನು ನೋಡಿಯೇ ತೀರಬೇಕೆಂದು. ಕೊನೆಗೂ ಒಪ್ಪಿಕೊಂಡು ಟಿಕೆಟ್ ಒಂದನ್ನು ಹರಿದರು. ಲಿಫ್ಟ್ ಎಲ್ಲಾ ಈಗಲೇ ಶುರುವಾಗುವುದಿಲ್ಲ ಸ್ವಲ್ಪ ಹತ್ತಿಕೊಂಡೆ ಹೋಗಬೇಕು ಎಂದರು. ನನಗಿದ್ದ ಜೋಶ್‌ಗೆ ಹತ್ತಿಕೊಂಡೇನು, ಉರುಳಿ ಹೋಗಲು ತಯಾರಿದ್ದೆ. ಅಮೋಘವಾದ ಪ್ಯಾಲೇಸ್!

ದೊಡ್ಡ ಕಂಬಗಳ ದ್ವಾರಗಳು. ಮನಸೂರೆಗೊಳ್ಳುವಂತಹ ಬಣ್ಣದ ಕಲ್ಲುಗಳು, ಗೋಡೆಗಳ ಮೇಲೆಲ್ಲ ಚಿತ್ರಗಳು. ಎಷ್ಟೆಲ್ಲ ಮಳೆ, ಬಿಸಿಲು, ಗಾಳಿಯನ್ನು ತಡೆದುಕೊಂಡು ಇಂದಿಗೂ ತಮ್ಮ ಸೌಂದರ್ಯವನ್ನು ಉಳಿಸಿಕೊಂಡಿವೆ. ಛಾವಣಿಯ ಮೇಲೆಲ್ಲ ಸಣ್ಣಚಿತ್ತಾರಗಳು. ಕತ್ತಿಗಳು ಮತ್ತಿತರ ಆಯುಧಗಳನ್ನು ಪ್ರತ್ಯೇಕ ಕೋಣೆಯಲ್ಲಿ ಇಟ್ಟಿದ್ದರು. ರಜಪೂತರ ಜೀವನ ಶೈಲಿಯನ್ನು ತೋರಿಸುವಂತಹ ಅವರ ಬಟ್ಟೆಗಳು, ಆಭರಣಗಳನ್ನು ಅರಮನೆಯ ಮತ್ತೊಂದು ಭಾಗದಲ್ಲಿ ಸಂಗ್ರಹಿಸಲಾಗಿದೆ.

ಅರಮನೆಯಲ್ಲಿ ʼಶೀಶ್‌ ಮಹಲ್ʼ ಎಂದು ಒಂದು ರೂಮ್. ನೋಡಿದರೆ ಗೋಡೆಯ ಮೇಲೆಲ್ಲಾ ಪುಟ್ಟ ಪುಟ್ಟ ಕನ್ನಡಿಗಳನ್ನು ಅಂಟಿಸಿದ್ದರು. ಇನ್ನು ಸ್ವಲ್ಪ ಹತ್ತಿರ ಹೋಗಿ ನೋಡಿದರೆ ತಟ್ಟನೆ ಹೊಳೆಯಿತು ಇದು feldspar ಎಂದು. ಈ ಹೆಣ್ಣು ಮಕ್ಕಳ ಫ್ರಾಕುಗಳ ಮೇಲೆ, ಲಂಗಗಳ ಮೇಲೆ ಪುಟ್ಟ ಪುಟ್ಟ ಕನ್ನಡಿಗಳು ಇರುತ್ತವೆ ನೋಡಿ, ಅದು ತುಂಬಾ ತೆಳುವಾಗಿರುತ್ತದೆ ಮುರಿದರೂ ಸುಲಭವಾಗಿ ಮುರಿಯುವುದಿಲ್ಲ ಅದೇ feldspar. ಆ ರೂಮಿನೊಳಗೆ ಗೋಡೆಯ ಮೇಲೆ ಎಲ್ಲವೂ ಅಂತಹದ್ದೇ ಕನ್ನಡಿಗಳು. ಸುಂದರ ಆಕಾರಗಳ ಕನ್ನಡಿಗಳು. ಸೂರ್ಯಾಸ್ತದ ಯಾವುದೋ ಒಂದು ಸಮಯದಲ್ಲಿ ಸೂರ್ಯನ ಕಿರಣಗಳು ಈ ಗೋಡೆಗಳ ಮೇಲೆ ಬಿದ್ದಾಗ ಕನ್ನಡಿಯು ಆ ಕಿರಣಗಳನ್ನೆಲ್ಲ ರಿಫ್ಲೆಕ್ಟ್ ಮಾಡುತ್ತದಂತೆ. ಆ ಪ್ರತಿಫಲಿತ ಬೆಳಕು ಇಡೀ ಅರಮನೆಗೆ ಬೆಳಕನ್ನು ಚೆಲ್ಲುತ್ತದೆಯಂತೆ. ಊಹಿಸಿಕೊಂಡರೆನೇ ರೋಮಾಂಚನವಾಗುತ್ತಿತ್ತು. ಇದು ಚಳಿಗಾಲ. ಸೂರ್ಯಸ್ತವಾಗುವ ತನಕ ಇರುವಷ್ಟು ಸಮಯವಿರಲಿಲ್ಲ ಎಲ್ಲವನ್ನು ಕಣ್ಣಿನಲ್ಲಿ ಸೆರೆ ಹಿಡಿದು ಮನದಲ್ಲೇ ತುಂಬಿಕೊಂಡು, ಮುಂದಕ್ಕೆ ಸಾಗಿದೆ.

ಅರಮನೆಯ ತುತ್ತ ತುದಿಯಲ್ಲಿ ನಿಂತು ಊರನ್ನು ನೋಡಿದರೆ ಎಲ್ಲವೂ ನೀಲಿ ನೀಲಿ. ಪುಟ್ಟ ಮನೆಗಳೆಲ್ಲವೂ ನೀಲಿ, ಆಕಾಶವು ನೀಲಿ. ಬ್ಲೂ ಸಿಟಿ ಎಂದು ಅದಕ್ಕೆ ಕರೆಯಬಹುದೋ ಏನೋ!!

ಅರಮನೆಯ ಹೊರಗೆ ಬರುವ ಹೊತ್ತಿಗೆ 10:30 ಆಗಿ ಹೋಗಿತ್ತು. ಬ್ಯಾಗುಗಳನ್ನೆಲ್ಲ ಹೊತ್ತುಕೊಂಡು ಓಡುತ್ತಿದ್ದೆ. ಇಂಪಾದ ಹಾಡೊಂದು ಕೇಳಿಸಿತು. ಎಲ್ಲಿ? ಎಲ್ಲಿ? ಎಂದು ಸ್ವಲ್ಪ ಹಾಗೆ ಹೀಗೆ ತಿರುಗಿ ನೋಡಿದರೆ ವ್ಯಕ್ತಿಯೊಬ್ಬ ಅರಮನೆಯ ಮುಂದೆ ಬಟ್ಟೆ ಹಾಸಿ, ತನ್ನ ವಾದ್ಯವನ್ನು ಬಹಳ ಸುಂದರವಾಗಿ ಇಂಪಾಗಿ ನುಡಿಸುತ್ತಿದ್ದ. ಎ. ಆರ್. ರೆಹಮಾನರ ಹಾಡು. ಅನುಭವಿಸಲು ಸಮಯವಿಲ್ಲ ಆದರೂ ಬಹಳ ಖುಷಿಯಾಯಿತು 5 ನಿಮಿಷ ಅಲ್ಲೇ ನಿಂತು ತಲೆಯಾಡಿಸಿ ನಂತರ ಆಟೋ ಹತ್ತಿದೆ. ಫ್ಲೈಟ್‌ ಹತ್ತಿ ಗಣಿಯಲ್ಲಿ ಸಿಕ್ಕ ಹೆಣ್ಣುಮಕ್ಕಳು, ಅರಮನೆಯ ಶೀಶ್‌ ಮಹಲ್‌ನ ನೆನಪು ಮನದಲ್ಲಿ ಹೊತ್ತು ಬೆಂಗಳೂರಿಗೆ ವಾಪಸ್ಸಾದೆ.

‍ಲೇಖಕರು Admin

November 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: