ಜೋಗಿ ಅಂಕಣ- ದುಡಿಮೆ, ಅಹಂಕಾರ, ಅಧಿಕಾರ ಮತ್ತು ಟೈಮ್!

‘ಅವಧಿ’ ಓದುಗರಿಗಂತೂ ಜೋಗಿ ಅಪರಿಚಿತರಲ್ಲವೇ ಅಲ್ಲ. ಅವಧಿಯಲ್ಲಿ ಅಂಕಣ ಬರೆದು, ಆಗೀಗ ಹೊಸ ಲೇಖನಗಳನ್ನೂ ಕೊಡುಗೆಯಾಗಿ ಕೊಟ್ಟಿದ್ದಾರೆ. ಇದಲ್ಲದೆ ‘ಅವಧಿ’ಯ ವಿಡಿಯೋ ಸಾಹಸದಲ್ಲಿ ಭಾಗಿಯಾಗಿದ್ದಾರೆ. ‘ಜೋಗಿ ಸರ್ಕಲ್’ ಜನ ಮನ ಸೆಳೆದಿತ್ತು.

ಜೋಗಿ ಬಗ್ಗೆ ಸವಿವರ ಬೇಕಾದರೆ  ಈ ವಿಡಿಯೋ ನೋಡಿ

ಈಗ ಜೋಗಿ ‘ಅವಧಿ’ಯ ಮೇಲಿನ ಅಭಿಮಾನದಿಂದ ಪ್ರತೀ ಭಾನುವಾರ ಹೊಸ ತಲೆಮಾರಿನವರ ಬರಹವನ್ನೇ ಗಮನದಲ್ಲಿಟ್ಟುಕೊಂಡು ‘ನವ ಪಲ್ಲವ’ ಬರೆಯಲಿದ್ದಾರೆ.

ಹಳೆಯ ಪುಸ್ತಕಗಳು ಹೊಸತಾಗುವ ಪರಿಗೆ ಅಚ್ಚರಿಗೊಂಡಿದ್ದೇನೆ

ಬೆಂಗಳೂರಿಗೆ ಬಂದ ಆರಂಭದ ದಿನಗಳಲ್ಲಿ ನಾನು ಕನ್ನಡ ಸೀರಿಯಲ್ಲುಗಳಿಗೆ ಕತೆ, ಚಿತ್ರಕತೆ, ಸಂಭಾಷಣೆ ಬರೆಯುತ್ತಿದ್ದೆ. ಆಗಿನ್ನೂ ಕಂಪ್ಯೂಟರ್ ಇರಲಿಲ್ಲ. ಈಗಿನಂತೆ ಒಂದು ಮಾತಿನ ನಂತರ ರಿಯಾಕ್ಷ್ಯನ್ ಹಾಕುವ, ಬಿಲ್ಡಪ್ ಕೊಡುವ ಚಿತ್ರಣವೂ ಇರಲಿಲ್ಲ. ಮಾತನಾಡುವವನೇ ಮಹಾಶೂರ ಎಂಬಂತೆ ಇಡೀ ಎಪಿಸೋಡು ಡೈಲಾಗಿನ ಮೇಲೆಯೇ ನಿಂತಿರುತ್ತಿತ್ತು. ಹೀಗಾಗಿ ಒಂದು ಎಪಿಸೋಡಿಗೆ ಸುಮಾರು 40 ಪುಟ ಬರೆಯಬೇಕಾಗುತ್ತಿತ್ತು. ನಾನು ಎರಡೋ ಮೂರೋ ಸೀರಿಯಲ್ಲು ಬರೆಯುತ್ತಿದ್ದುದರಿಂದ ದಿನಕ್ಕೆ ಐವತ್ತರಿಂದ ಅರವತ್ತು ಪುಟ ಬರೆಯಲೇಬೇಕಿತ್ತು.

ಇದು ಸುಲಭದ ಕೆಲಸ ಆಗಿರಲಿಲ್ಲ. ಆಯಾ ಪಾತ್ರಗಳ ಮನಸ್ಥಿತಿಗೆ ಹೋಗಿ, ಸಂಭಾಷಣೆ ಬರೆದು, ಕಳಿಸುವ ಹೊತ್ತಿಗೆ ಹೈರಾಣಾಗುತ್ತಿದ್ದೆ. ಬೆಳಗ್ಗೆ 4 ಗಂಟೆಗೆ ಎದ್ದು ಒಂದು ಎಪಿಸೋಡು ಬರೆದು ಮುಗಿಸುವ ಹೊತ್ತಿಗೆ ಎಂಟು ಗಂಟೆಯಾಗುತ್ತಿತ್ತು. ಬೆರಳುಗಳು ಮಡಿಚಲಿಕ್ಕೆ ಆಗದಷ್ಟು ನೋಯುತ್ತಿದ್ದವು. ಆ ನಂತರ ಮತ್ತೊಂದು ಎಪಿಸೋಡು, ರಾತ್ರಿ ಆಫೀಸಿನಿಂದ ಬಂದು ಹನ್ನೆರಡು ಗಂಟೆಯ ತನಕ ಮತ್ತೆ ಬರಹ. ಹೀಗೆ ನಾನು ಕಷ್ಟಪಡುತ್ತಿರುವುದರ ಬಗ್ಗೆ ಹೆಮ್ಮೆಯೂ ಇತ್ತು. ಒದ್ದಾಟವೂ ಇತ್ತು.

ಒಮ್ಮೆ ನಾನು ವೈಯನ್ಕೆಯವರ ಹತ್ತಿರ ಹೋದಾಗ ತೀರಾ ಸುಸ್ತಾಗಿದ್ದೆ. ಅವರು ಏನಾಗಿದೆ ನಿನಗೆ ಎಂದು ವಿಚಾರಿಸಿದರು. ನಾನು ಪಡುತ್ತಿರುವ ಕಷ್ಟದ ಕುರಿತು ಹೇಳಿದೆ. ದಿನಕ್ಕೆ ಐವತ್ತು ಅರವತ್ತು ಪುಟ ಬರೆಯುತ್ತಿದ್ದೇನೆ, ಇದರ ಮಧ್ಯೆ ಆಫೀಸಿಗೂ ಬರುತ್ತಿದ್ದೇನೆ, ಬೇರೆ ಕೆಲಸಗಳೂ ಇರುತ್ತವೆ. ದಿನಕ್ಕೆ ಇಪ್ಪತ್ತು ಗಂಟೆ ದುಡಿಯುತ್ತಿದ್ದೇನೆ ಅಂತೆಲ್ಲ ಕೊಚ್ಚಿಕೊಂಡೆ. ನನ್ನ ಮಾತು ಕೇಳಿಸಿಕೊಂಡ ನಂತರ ಅವರು ಒಂದೇ ಮಾತು ಹೇಳಿದರು:

‘ನೀನು ಯಾಕೆ ಇಷ್ಟೊಂದು ಕೆಲಸ ಮಾಡ್ತಿದ್ದೀಯ? ದುಡ್ಡಿಗೆ, ಕೀರ್ತಿಗೆ, ಚಟಕ್ಕೆ? ಅಥವಾ ಮತ್ತೇನೋ ಕಾರಣಕ್ಕೆ. ನೀನೇನೂ ಸಮಾಜ ಸೇವೆ ಮಾಡುತ್ತಿಲ್ಲವಲ್ಲ? ನಾಳೆ ನೀನು ಸೀರಿಯಲ್ಲಿಗೆ ಸಂಭಾಷಣೆ ಬರೆಯೋದಿಲ್ಲ ಅಂದರೆ ಜಗತ್ತಿನಲ್ಲಿ ಏನೂ ಬದಲಾಗೋದಿಲ್ಲ. ಎಲ್ಲವೂ ಇದ್ದಂತೆಯೇ ಇರುತ್ತದೆ. ನಿನ್ನ ಬದಲು ಮತ್ತೊಬ್ಬ ಬರೆಯುತ್ತಾನೆ. ನೀನು ನಿನಗೋಸ್ಕರ ಕೆಲಸ ಮಾಡುತ್ತಿದ್ದಿ ಅನ್ನುವುದನ್ನು ಮರೆಯಬೇಡ. ನಾವು ನಮಗೋಸ್ಕರ, ಹಣ ಸಂಪಾದನೆಗೋಸ್ಕರ, ನಮ್ಮ ಖಜಾನೆ ತುಂಬಿಸಲಿಕ್ಕೋಸ್ಕರ, ನಮಗೆ ಅನಿವಾರ್ಯ ಎಂಬ ಕಾರಣಕ್ಕೆ, ನಮ್ಮ ಅಹಂಕಾರವನ್ನು ತೃಪ್ತಿ ಪಡಿಸುವುದಕ್ಕೆ, ನಾನೊಬ್ಬ ಅತ್ಯುತ್ತಮ ಕೆಲಸಗಾರ ಅನ್ನಿಸಿಕೊಳ್ಳಲಿಕ್ಕೆ ಕೆಲಸ ಮಾಡುತ್ತಿರುತ್ತೇವೆ. ಅದನ್ನೇ ದೊಡ್ಡ ಸಾಧನೆ ಎಂದು ಹೇಳಿಕೊಂಡು ಓಡಾಡಬಾರದು. ಬೇಕಿದ್ದರೆ ಮಾಡು, ಬೇಡದಿದ್ದರೆ ಬಿಡು. ಅದನ್ನು ಬಿಟ್ಟು ಬೇರೆಯವರ ಮೇಲೆ ನಿನ್ನ ಕೆಲಸದ ಒತ್ತಡ ಹಾಕಬೇಡ. ನೀನು ಇಡೀ ಜಗತ್ತನ್ನು ತಲೆಯ ಮೇಲೆ ಹೊತ್ತುಕೊಂಡವನಂತೆ ಆಡಬೇಡ. ನೀನಿಲ್ಲದೇ ಹೋದರೂ ಜಗತ್ತು ನಡೆಯುತ್ತದೆ, ಸೀರಿಯಲ್ಲು, ಪತ್ರಿಕೆ, ನಿನ್ನ ಮನೆ ಎಲ್ಲವೂ ನಡೆಯುತ್ತಿರುತ್ತದೆ. ನೀನು ಈ ಅನಂತವಾದ ಸೌರವ್ಯೂಹದಲ್ಲಿ ಲೆಕ್ಕಕ್ಕೇ ಸಿಗದ ಒಂದು ಅಣು ಮಾತ್ರ’.

ಮತ್ತೊಂದು ಸಂದರ್ಭದಲ್ಲಿ ನನಗೆ ಕಿಡ್ನಿಸ್ಟೋನ್ ಆಗಿತ್ತು. ಅದೇ ಹೊತ್ತಲ್ಲಿ ದೀಪಾವಳಿ ವಿಶೇಷಾಂಕ ಮಾಡುತ್ತಿದ್ದೆವು.

ಈ ಸಂಚಿಕೆ ಮಾಡಲಿಕ್ಕೆಂದು ನಾನು ಪಕ್ಕೆ ಹಿಡಿದುಕೊಂಡು, ಮಾತ್ರೆ ತೆಗೆದುಕೊಂಡು ಆಫೀಸಿಗೆ ಬರುತ್ತಿದ್ದೆ. ನೋವಿನಿಂದಲೇ ಕೆಲಸ ಮಾಡುತ್ತಿದ್ದೆ. ಎರಡು ದಿನಗಳ ನಂತರ ವೈಯನ್ಕೆಗೆ ಇದು ಗೊತ್ತಾಯಿತು. ಅವರು ನನ್ನ ಕರೆದು ‘ಏನು ಸಮಸ್ಯೆ ನಿನ್ನದು?’ ಅಂತ ಕೇಳಿದರು. ನಾನು ಏನೂ ಹೇಳಲಿಲ್ಲ. ವೈ ಎನ್ ಕೆ ಹೇಳಿದರು: ನಿನಗೆ ಹುಷಾರಿಲ್ಲದೇ ಹೋದರೆ ಮನೇಲಿರಬೇಕು. ದೀಪಾವಳಿ ವಿಶೇಷಾಂಕ ನೀನಿಲ್ಲದೇ ಇದ್ದರೂ ಸಿದ್ಧವಾಗುತ್ತದೆ. ಮತ್ತೊಬ್ಬರು ಮಾಡುತ್ತಾರೆ’

‘ನಮಗೆಲ್ಲ ಎಷ್ಟು ಅಹಂಕಾರ ಇರುತ್ತದೆಂದರೆ, ನಾವೇ ಸರ್ವಶ್ರೇಷ್ಠ, ನಾವಿಲ್ಲದೇ ಹೋದರೆ ಆಫೀಸು ನಡೆಯುವುದಿಲ್ಲ, ನಾವು ಕೆಲಸ ಮಾಡದೇ ಹೋದರೆ ವಿಶೇಷಾಂಕ ಚೆನ್ನಾಗಿ ಬರುವುದಿಲ್ಲ. ಹೀಗಾಗಿ ಕಾಯಿಲೆ ಇದ್ದರೂ ಎದ್ದೂ ಬಿದ್ದೂ ಕೆಲಸ ಮಾಡುತ್ತಿರುತ್ತೇವೆ. ನಮ್ಮಷ್ಟು ಯಾರೂ ಕಷ್ಟಪಡುವುದಿಲ್ಲ. ನಮ್ಮಷ್ಟು ಕಾಳಜಿ, ಕಳಕಳಿ, ಕರ್ತವ್ಯಪ್ರಜ್ಞೆ, ಶ್ರದ್ಧೆ, ನಿಷ್ಠೆ, ಎಲ್ಲವನ್ನೂ ನಿಭಾಯಿಸುವ ಶಕ್ತಿ ಮತ್ಯಾರಿಗೂ ಇಲ್ಲ ಅಂದುಕೊಳ್ಳುತ್ತೇವೆ. ನಾವು ತುಂಬ ಅನಿವಾರ್ಯ, indispensable, ಅಂತಲೇ ಭಾವಿಸುತ್ತೇವೆ. ಆದರೆ ಒಮ್ಮೆ ಸ್ಮಶಾನಕ್ಕೆ ಹೋಗಿ ನೋಡು. The graveyards are full of indispensable men. ನಾನಿಲ್ಲದೇ ಹೋದರೆ ಜಗತ್ತು ನಡೆಯುವುದಿಲ್ಲ ಅಂತ ಭಾವಿಸಿದ ಜನರಿಂದಲೇ ತುಂಬಿಹೋಗಿದೆ ಸ್ಮಶಾನ’.

ಈ ಮಾತುಗಳನ್ನು, ಘಟನೆಗಳನ್ನು ನೆನಪಿಸಿದ್ದು ಹೆರಾಲ್ಡ್ ಇವಾನ್ಸ್. 1965ರಲ್ಲಿ ದಿ ಸಂಡೇ ಟೈಮ್ಸ್ ಸಂಪಾದಕನಾಗಿದ್ದ ಹೆರಾಲ್ಡ್ ಇವಾನ್ಸ್ ತನ್ನ ದಿಟ್ಟ ಬರಹಗಳಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದ. ಗರ್ಭಿಣಿಯರಿಗೆ ಬೆಳಗ್ಗೆ ಹೊಟ್ಟೆ ತೊಳೆಸಿದಂತೆ ಆಗುವುದಕ್ಕೆ ನೀಡಲಾಗುತ್ತಿದ್ದ ಔಷಧಿಯಿಂದ ಅಂಗ ಊನವುಳ್ಳ ಮಕ್ಕಳು ಹುಟ್ಟುತ್ತಾರೆಂದು ಬರೆದು ಜನಪ್ರಿಯ ಔಷಧಿ ಸಂಸ್ಥೆಯನ್ನೇ ಎದುರು ಹಾಕಿಕೊಂಡ ಇವಾನ್ಸ್, ತೊಂದರೆಯಾದವರಿಗೆ ಪರಿಹಾರ ಕೊಡಿಸುವಲ್ಲಿ ಸಫಲನಾಗುತ್ತಾನೆ. ಔಷಧಿ ಕಂಪೆನಿ ಸರ್ವನಾಶ ಆಗುತ್ತದೆ.

1981ರಲ್ಲಿ ಪತ್ರಿಕೆಯನ್ನು ರೂಪರ್ಟ್ ಮುರ್ಡೋಕ್ ಕೊಂಡುಕೊಳ್ಳುತ್ತಾನೆ. ಬಂಡವಾಳಶಾಹಿ ಮುರ್ಡೋಕ್ ಪಾಲಿಗೆ ಇವಾನ್ಸ್ ಅಡ್ಡಿಯಂತೆ ಕಾಣುತ್ತಾನೆ. ಇವಾನ್ಸ್ ತೊಲಗಬೇಕೆಂದು ಆತನನ್ನು ದಿ ಟೈಮ್ಸ್ ಸಂಪಾದಕನನ್ನಾಗಿ ಮಾಡುತ್ತಾನೆ. ಅದೇ ಹೊತ್ತಿಗೆ ಸುಮಾರು 50 ಮಂದಿ ಪತ್ರಕರ್ತರು ರೂಪರ್ಟ್ ಮುರ್ಡೋಕ್ ಮಾಲಿಕತ್ವದಲ್ಲಿ ಕೆಲಸ ಮಾಡುವುದಿಲ್ಲ ಎಂದು ರಾಜೀನಾಮೆ ಕೊಡುತ್ತಾರೆ. ಮೂಲತಃ ಅವರ ಪ್ರತಿಭಟನೆ ಇವಾನ್ಸ್ ವಿರುದ್ಧವೂ ಆಗಿರುತ್ತದೆ.

ಮುರ್ಡೋಕ್ ತನ್ನ ಕಡೆಯ ಪತ್ರಕರ್ತರನ್ನು ತಂದು ಇವಾನ್ಸ್ ಮೇಲೆ ಒತ್ತಡ ಹೇರುತ್ತಾನೆ. 1982ರಲ್ಲಿ ಆ ಪತ್ರಕರ್ತರೆಲ್ಲ ಒಂದಾಗಿ ಇವಾನ್ಸ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಾರೆ. ಆತನ ನಿಲುವು ಪತ್ರಿಕೆಯ ಸಂಪಾದಕೀಯ ಗುಣಮಟ್ಟ ಕುಸಿಯುವುದಕ್ಕೆ ಕಾರಣವಾಗಿದೆ ಎಂದು ಆರೋಪಿಸುತ್ತಾರೆ. ಆ ಹೊತ್ತಲ್ಲಿ ಪತ್ರಿಕೆ ಮಾರ್ಗರೆಟ್ ಥ್ಯಾಚರ್ ನಡೆಯನ್ನು ಸತತವಾಗಿ ಖಂಡಿಸುತ್ತಿರುತ್ತದೆ.

1982ರ ಮಾರ್ಚ್ ತಿಂಗಳಲ್ಲಿ ಇವಾನ್ಸ್ ರಾಜೀನಾಮೆ ನೀಡಿ ಹೊರಗೆ ಬರುತ್ತಾನೆ. 1984ರಲ್ಲಿ ಆತ ಗುಡ್ ಟೈಮ್ಸ್, ಬ್ಯಾಡ್ ಟೈಮ್ಸ್ ಎಂಬ ಪುಸ್ತಕ ಬರೆಯುತ್ತಾನೆ. ಆ ಆತ್ಮವಿಮರ್ಶಾತ್ಮಕ ಕೃತಿಯಲ್ಲಿ ಆತ ಪತ್ರಕರ್ತನ ಏಳುಬೀಳು, ಮಾಲೀಕರ ರೀತಿ ನೀತಿ, ಪತ್ರಕರ್ತನ ಬದ್ಧತೆಗಳನ್ನೆಲ್ಲ ಯಾವ ಹಿಂಜರಿಕೆಯೂ ಇಲ್ಲದೇ ಬರೆದಿದ್ದಾನೆ.

ನಾನಿಲ್ಲದೇ ಹೋದರೆ ದಿ ಸಂಡೇ ಟೈಮ್ಸ್ ನಡೆಯುವುದಿಲ್ಲ ಅಂದುಕೊಂಡಿದ್ದೆ. ಅದು ಸುಳ್ಳು ಅಂತ ಗೊತ್ತಾಯಿತು. ಮುರ್ಡೋಕ್‌ನಂಥವರು ಇರುವ ತನಕ ಎಲ್ಲವೂ ನಡೆಯುತ್ತಿರುತ್ತದೆ. ಅವರ ಲಾಭ ಪತ್ರಿಕೆಯಿಂದ ಬರುತ್ತಿರುವುದಿಲ್ಲ. ಅದರ ಮೂಲ ಬೇರೆಯೇ ಇರುತ್ತದೆ ಅಂತ ಇವಾನ್ಸ್ ಬರೆದುಕೊಂಡ. ಅವನ ನಂತರ ಬಂದ ಚಾರ್ಲ್ಸ್ ಡಗ್ಲಾಸ್ ಹೋಮ್ ಸದಾ ಮಾರ್ಗರೆಟ್ ಥ್ಯಾಚರ್ ಪರ ಇರುತ್ತಾನೆ. ಪತ್ರಿಕೆಯ ಪ್ರಸಾರ ದುಪ್ಪಟ್ಟು, ಅಂದರೆ ಐದು ಲಕ್ಷ ಆಗುವಂತೆ ನೋಡಿಕೊಳ್ಳುತ್ತಾನೆ.

ಈ ವಾರ ಹೊಸ ಪುಸ್ತಕಗಳ ಜೊತೆ, ಹೆರಾಲ್ಡ್ ಇವಾನ್ಸ್ ಬರೆದ ಗುಡ್ ಟೈಮ್ಸ್ ಬ್ಯಾಡ್ ಟೈಮ್ಸ್ ಓದಿದೆ. ಈ ಹೊತ್ತಲ್ಲಿ ಈ ಕೃತಿಗೆ ಹೊಸ ಅರ್ಥ ಪ್ರಾಪ್ತವಾಗಿದ್ದು ಕಂಡು ಅಚ್ಚರಿಯಾಯಿತು. ಮೊನ್ನೆ ಸಂವಾದವೊಂದರಲ್ಲಿ ಮಾತಾಡುತ್ತಾ ಪಿ. ಸಾಯಿನಾಥ್ ಬರೆದ ‘ಬರ ಅಂದರೆ ಎಲ್ಲರಿಗೂ ಇಷ್ಟ’ ಪುಸ್ತಕವನ್ನು ಈಗ ‘ಕೊರೋನಾ ಅಂದರೆ ಎಲ್ಲರಿಗೂ ಇಷ್ಟ’ ಅಂತ ಓದಿಕೊಂಡರೂ ಅನೇಕ ಹೊಳಹುಗಳು ಸಿಗುತ್ತವೆ ಅಂದಿದ್ದರು ಜಿ ಎನ್ ಮೋಹನ್.

ಹಳೆಯ ಪುಸ್ತಕಗಳು ಹೊಸತಾಗುವ ಪರಿಗೆ ಅಚ್ಚರಿಗೊಂಡಿದ್ದೇನೆ.

‍ಲೇಖಕರು Avadhi

June 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: