
ಮೂಲ: ಸುಸಾನ್ ಗ್ಲಾಸ್ಪೆಲ್
ಕನ್ನಡಕ್ಕೆ: ಜೆ ವಿ ಕಾರ್ಲೊ
ಸುಸಾನ್ ಗ್ಲಾಸ್ಪೆಲ್ (Susan Glaspell, 1876-1948) ಅಮೆರಿಕಾದ ಪುಲಿಟ್ಝರ್ ಪ್ರಶಸ್ತಿ ವಿಜೇತೆ ಪತ್ರಕರ್ತೆ, ಸಾಹಿತಿ ಮತ್ತು ನಟಿಯಾಗಿ ಹೆಸರು ಮಾಡಿದವರು. ಹದಿನೈದು ನಾಟಕಗಳು, ಐವತ್ತಕ್ಕಿಂತ ಹೆಚ್ಚು ಸಣ್ಣ ಕತೆಗಳು, ಒಂಭತ್ತು ನಾಟಕಗಳು ಅವರ ಸಾಹಿತ್ಯ ಕೃಷಿ. ಅವರ ಹೆಚ್ಚಿನ ಬರಹಗಳು ಲಿಂಗ ತಾರತಮ್ಯದ ವಸ್ತುವನ್ನೊಳಗೊಂಡಿವೆ.
A Jury of Her Peers, ಸುಸಾನ್ ಪತ್ರಕರ್ತೆಯಾಗಿ, ಜಾನ್ ಹೊಸ್ಯಾಕ್ ಎಂಬುವವನ ಕೊಲೆಯನ್ನಾಧರಿಸಿ ವರದಿ ಮಾಡಿದ ಒಂದು ಘಟನೆಯನ್ನಾದರಿಸಿ ಹೆಣೆದ ಕತೆ. ‘ಹೆಣ್ಮಕ್ಕಳಿಗೆ ಏನು ಗೊತ್ತಾಗುತ್ತೆ?’ ಎಂಬ ಗಂಡಸರ ತಾತ್ಸಾರದ ನಡುವೆ, ತಮ್ಮ ಸ್ತ್ರೀ ಸಹಜ ತರ್ಕದಿಂದ ಇಬ್ಬರು ಗೃಹಿಣಿಯರು ಒಂದು ಕೊಲೆಯ ವಿಶ್ಲೇಷಣೆ ನಡಿಸಿ ಬಿಡಿಸುವ ಕತೆ ‘ಖಾಲಿ ಪಂಜರ’
ಭಾಗ 2
ಇಷ್ಟು ಹೇಳಿ ಮಿಸ್ಟರ್ ಹೇಲ್ ಕೊಂಚ ಹೊತ್ತು ಸುಮ್ಮನಾಗಿ, ಮಿಸೆಸ್ ರೈಟ್ ಈಗಲೂ ಅಡುಗೆ ಮನೆಯಲ್ಲಿ
ಕುಳಿತುಕೊಂಡಿದ್ದಾಳೆ ಎನ್ನುವಂತೆ ಆ ತೂಗು ಕುರ್ಚಿಯನ್ನೇ ಬಿಟ್ಟ ಕಂಗಳಿಂದ ನೋಡತೊಡಗಿದ. ಯಾರೂ ಮಾತನಾಡಲಿಲ್ಲ.
ಎಲ್ಲರೂ, ನಿನ್ನೆ ಬೆಳಿಗ್ಗೆ ಮಿಸೆಸ್ ರೈಟ್ ಕುಳಿತು ಕೊಂಡಿದ್ದ ಆ ಕುರ್ಚಿಯನ್ನೇ ತದೇಕ ಚಿತ್ತದಿಂದ ನೋಡತೊಡಗಿದರು.
“ನಂತರ ನೀವು ಏನು ಮಾಡಿದಿರಿ?” ಕೋಣೆಯಲ್ಲಿ ಹೆಪ್ಪುಗಟ್ಟಿದ್ದ ಮೌನವನ್ನು ಮುರಿಯುತ್ತಾ ವಕೀಲ ಕೇಳಿದ.
“ನಾನು ಹೊರಗೆ ಓಡಿ ಹೋಗಿ ಹ್ಯಾರಿಯನ್ನು ಕರೆದುಕೊಂಡು ಬಂದೆ. ನನಗೆ ಅವನ ಸಹಾಯ ಬೇಕಾಗಬಹುದೆಂದು ಅನಿಸಿತ್ತು. ನಾವಿಬ್ಬರು ಮಹಡಿ ಹತ್ತಿದೆವು..” ಇಷ್ಟು ಹೇಳಿ ಅವನು ಮೆಲ್ಲಗೆ ಉಸುರಿದ: “ಜಾನ್, ಅಲ್ಲಿ ಮಂಚದ ಮೇಲೆ ಬಿದ್ದುಕೊಂಡಿದ್ದ!…”
“ನೀವು ಮಹಡಿಯ ಮೇಲೆಯೇ ಇದನ್ನು ವಿವರಿಸಿದ್ದರೆ ಚೆನ್ನಾಗಿತ್ತು..” ವಕೀಲ ಹೇಳಿದ. “ಇರಲಿ, ಆಮೇಲೆ ನೋಡುವ. ನೀವು ಮುಂದುವರೆಸಿ.”
“ಜಾನನ ಕುತ್ತಿಗೆಯಿಂದ ಆ ಹಗ್ಗವನ್ನು ಬಿಡಿಸಬೇಕೆಂದು ನನಗೆ ಮೊದಲು ಅನಿಸಿತು. ಅವನು ಹೇಗೆ ಕಾಣಿಸುತ್ತಿದ್ದ ಅಂದರೆ…”
ಎನ್ನುತ್ತಾ ಹೇಲ್ ಮುಖ ಹುಳಿ ಹುಳಿ ಮಾಡಿಕೊಂಡ.
“ಹ್ಯಾರಿಯೇ ಅವನ ಬಳಿಗೆ ಮೊದಲು ಹೋಗಿದ್ದು. ‘ಜಾನ್ ಸತ್ತು ಹೋಗಿದ್ದಾನೆ ಡ್ಯಾಡಿ. ನಾವು ಇಲ್ಲಿ ಏನನ್ನೂ ಮುಟ್ಟುವುದು ಬೇಡ. ನಡಿ, ಕೆಳಗೆ ಹೋಗೋಣ.’ ಎಂದ. ನಾವು ಕೆಳಗೆ ಇಳಿದು ಬಂದೆವು.
ಮಿಸೆಸ್ ರೈಟ್ ಹಾಗೇ ಕುಳಿತಿದ್ದಳು.
“ಈ ಬಗ್ಗೆ ಯಾರಿಗಾದರೂ ತಿಳಿಸಿದ್ದೀರಾ?” ನಾನು ಅವಳನ್ನು ಕೇಳಿದೆ.
“ಇಲ್ಲ!” ಆಕೆ ಅಸಡ್ಡೆಯಿಂದ ಉತ್ತರಿಸಿದಳು.
“ಇದೆಲ್ಲಾ ಹೇಗಾಯ್ತು ಮಿಸೆಸ್ ರೈಟ್” ಎಂದು ಹ್ಯಾರಿ ಪ್ರಶ್ನಿಸಿದ. ಅವನ ಧ್ವನಿ ಕೊಂಚ ಅಧಿಕಾರಯುತವಾಗಿತ್ತು ಅಂತ ಕಾಣಿಸುತ್ತದೆ. ಒಂದು ಗಳಿಗೆ ಏಪ್ರನ್ ತಿರುವುದನ್ನು ಬಿಟ್ಟು ಮಿಸೆಸ್ ರೈಟ್ ನಮ್ಮನ್ನೇ ನೋಡುತ್ತಾ, “ನನಗೆ ಗೊತ್ತಿಲ್ಲ!” ಎಂದಳು.

“ಗೊತ್ತಿಲ್ಲ?!.. ನೀವು ಒಂದೇ ಹಾಸಿಗೆಯ ಮೇಲೆ ಮಲಗಿದ್ದೀರಿ ತಾನೆ?”
“ಹೌದು. ಆದರೆ ನಾನು ಅವನ ಬಲಗಡೆಗೆ ಮಲಗಿದ್ದೆ. ಯಾರೋ ಅವನ ಕುತ್ತಿಗೆಗೆ ಹಗ್ಗ ಬಿಗಿದು ಸಾಯಿಸಿದ್ದಾರೆ.”
“ಆದರೂ ನಿಮಗೆ ಎಚ್ಚರವಾಗಿಲ್ಲ?” ಹ್ಯಾರಿಯೇ ಮಿಸೆಸ್ ರೈಟಳಿಗೆ ಪ್ರಶ್ನೆ ಕೇಳುತ್ತಿದ್ದ.
“ಇಲ್ಲ. ನನಗೆ ಎಚ್ಚರವಾಗಿಲ್ಲ.!” ಆಕೆ ಹೇಳಿದಳು.
ಇದು ಹೇಗೆ ಸಾಧ್ಯವೆಂದು ನಾವಿಬ್ಬರೂ ಆಶ್ಚರ್ಯಪಟ್ಟಿದ್ದೆವು.
“ನನಗೆ ಒಮ್ಮೆ ನಿದ್ರೆ ಬಂದರೆ ಬೇಗನೆ ಎಚ್ಚರವಾಗುವುದಿಲ್ಲ.”
“ಹ್ಯಾರಿ ಆಕೆಯನ್ನು ಮತ್ತೂ ಪ್ರಶ್ನಿಸುವವನಿದ್ದ. ನಾನು, ಇದು ನಮ್ಮ ಕೆಲಸವಲ್ಲ, ಆಕೆಗೆ ಏನಾದರೂ ಹೇಳುವುದಿದ್ದರೆ ಪೋಲಿಸರಿಗೇ ಹೇಳುತ್ತಾಳೆ ಬಿಡು ಎಂದು ನಾನು ಅವನನ್ನು ಸುಮ್ಮನಾಗಿಸಿದೆ. ಹ್ಯಾರಿ ಅಲ್ಲಿಂದ ಫೋನ್ ಹುಡುಕುತ್ತಾ ಹೊರಟುಹೋದ.”
“ನೀವು ಪೋಲಿಸರಿಗೆ ದೂರು ಕೊಡಲು ಹೊರಟಾಗ ಮಿಸೆಸ್ ರೈಟಳ ಪ್ರತಿಕ್ರಿಯೆ ಹೇಗಿತ್ತು?” ವಕೀಲ ಕೇಳಿದ.
“ಆಕೆ ತೂಗು ಕುರ್ಚಿಯಿಂದ ಎದ್ದು ಬಂದು.. ಆ ಸಣ್ಣ ಸ್ಟೂಲಿನ ಮೇಲೆ ಕುಳಿತುಕೊಂಡಳು. ಕತ್ತು ಬಗ್ಗಿಸಿ ನೆಲವನ್ನೇ
ನೋಡುತ್ತಿದ್ದಳು” ಸ್ಟೂಲಿನ ಕಡೆಗೆ ಬೆರಳು ತೊರುತ್ತಾ ಹೇಲ್ ಹೇಳಿದ. “ನನಗೆ ಏನಾದರೂ ಮಾತನಾಡಬೇಕೆನಿಸಿತು.
‘ನಾನು ಜಾನ್‌ನನ್ನು ನೋಡಲು ಬಂದಿದ್ದೆ. ಮನೆಗೆ ಟೆಲಿಫೋನ್ ಹಾಕಿಸಿಕೊಳ್ಳುವ ವಿಚಾರವೇನಾದರೂ ಇದೆಯೇ ಎಂದು ಕೇಳೋಣವೆಂದು ಬಂದಿದ್ದೆ.’ ಎಂದೆ. ಇದನ್ನು ಕೇಳಿ ಆಕೆ ವಿಚಿತ್ರವಾಗಿ ನಕ್ಕಳು. ಹಾಗೆಯೇ, ಒಮ್ಮೆಲೆ ನಗುವನ್ನು ನಿಲ್ಲಿಸಿ ನನ್ನನ್ನೇ ದಿಟ್ಟಿಸಿ ನೋಡತೊಡಗಿದಳು. ಅವಳ ಮುಖದಲ್ಲಿ ಗಾಬರಿ ಕಾಣಿಸುತ್ತಿತ್ತು…” ಎನ್ನುತ್ತಾ ಅವನು ಸುಮ್ಮನಾದ. ಮತ್ತೆ ಮುಂದುವರೆಸಿ, “ನನಗೆ ಗೊತ್ತಿಲ್ಲ. ಹಾಗಂತ ಏನು ಖಚಿತವಾಗಿ ಹೇಳಲಾರೆ.” ಅಷ್ಟರಲ್ಲಿ ಅಲ್ಲಿಗೆ ಹ್ಯಾರಿಯೂ ಬಂದ. ಅವನೊಟ್ಟಿಗೆಯೇ ಎಂಬಂತೆ ಡಾಕ್ಟರ್ ಲಾಯ್ಡ್ ಕೂಡ ಹಾಜರಾದರು. ಕೊನೆಯದಾಗಿ ಹೇಲ್ ಹೇಳಿದ: “ನಿಮಗೆ ಗೊತ್ತಿಲ್ಲದಿದ್ದದ್ದು ಇಷ್ಟೇ ವಕೀಲ ಸಾಹೆಬ್ರೆ.” ಇಷ್ಟು ಹೇಳಿ ಅವನು ಬದಿಗೆ ಸರಿದ. ವಕೀಲರು ಮಹಡಿ ಹತ್ತುವ ಮೆಟ್ಟಿಲ ಬಳಿ ಹೋದರು.
“ಮೊದಲು ನಾವು ಮಹಡಿಯ ಮೇಲೆ ಹೋಗುವ. ನಂತರ ಕೊಟ್ಟಿಗೆಗೆ, ಆಮೇಲೆ ಸ್ಟೋರ್ ರೂಮಿಗೆ.” ವಕೀಲ ಹೇಳಿದ. ಅವನು ಅಲ್ಲಿಂದಲೇ ಅಡುಗೆಯ ಮನೆಯ ಸುತ್ತ ದೃಷ್ಟಿ ಹರಿಸಿದ.
“ಆಫೀಸರ್, ಇಲ್ಲಿ ಬೇರೆ ಯಾವುದೇ ಸಾಕ್ಷಿ, ಸುಳಿವು ಇಲ್ಲವೆನ್ನುತ್ತೀರಾ?”
ಪೋಲಿಸ್ ಆಫಿಸರ್ ಅಬ್ಯಾಸ ಬಲದಿಂದ ಮತ್ತೊಮ್ಮೆ ಕಣ್ಣಾಡಿಸಿದರು.
“ದಿನನಿತ್ಯದ ಪಾತ್ರೆ ಪಗಡಿಗಳನ್ನು ಬಿಟ್ಟರೆ ಇಲ್ಲಿ ಬೇರೀನ್ನೇನೂ ಕಾಣಿಸುತ್ತಿಲ್ಲ”
ವಕೀಲರ ದೃಷ್ಟಿ ಅಡುಗೆ ಕೋಣೆಯಲ್ಲಿದ್ದ, ತುಸು ವಿಚಿತ್ರವಾಗಿ ಕಾಣಿಸುತ್ತಿದ್ದ ಕಪಾಟಿನ ಮೇಲೆ ಹೋಯಿತು. ಕಪಾಟಿನ ಮೇಲ್ಭಾಗ ಗೋಡೆಯನ್ನು ಕೊರೆದು ಮಾಡಲಾಗಿತ್ತಾದರೆ, ಕೆಳಭಾಗ ಮರದಿಂದ ಮಾಡಲಾಗಿತ್ತು. ವಕೀಲನ ಕುತೂಹಲ ಕೆರಳಿತ್ತು. ಅವನು ಕಪಾಟಿನ ಬಳಿ ಬಂದ. ಸ್ಟೂಲಿನ ಮೇಲೆ ಹತ್ತಿ ಕಪಾಟಿನ ಮೇಲ್ಭಾಗದ ಮುಚ್ಚಳವನ್ನು ತೆರೆದು ಒಳಗೆ ಇಣುಕಿದ. ಅವನು ಕೈ ಹಿಂದಕ್ಕೆ ತೆಗೆದಾಗ ಅದು ಗೋಂದು ಅಂಟಿದಂತೆ ಅಂಟಂಟಾಗಿತ್ತು.
“ಥತ್ತ್..” ಅವನು ಸಿಟ್ಟಿಂದ ಉದ್ಗರಿಸಿದ.
ಅಷ್ಟರಲ್ಲಿ ಬಾಗಿಲ ಬಳಿ ನಿಂತಿದ್ದ ಹೆಣ್ಣುಮಕ್ಕಳಿಬ್ಬರೂ ಹತ್ತಿರ ಬಂದರು. ಪೋಲಿಸ್ ಆಫೀಸರನ ಹೆಂಡತಿ ಮಾರ್ತಾಳ ಕಡೆಗೆ ತಿರುಗಿ, “ಜಾಮ್ ಮಾಡಲು ಇಟ್ಟಿದ್ದ ಹಣ್ಣುಗಳೆಂದು ತೋರುತ್ತದೆ! ನಿನ್ನೆ ರಾತ್ರಿಯ ಚಳಿಗೆ ಮಿಸೆಸ್ ರೈಟ್ ತನ್ನ ಜಾಮಿನ ಬಗ್ಗೆ ಚಿಂತಿತಳಾಗಿದ್ದಳು. ‘ಒಲೆಯ ಬೆಂಕಿ ಆರುತ್ತಲೇ ಅಡುಗೆ ಕೋಣೆಯಲ್ಲಿ ಚಳಿ ಜಾಸ್ತಿಯಾಗಿ ನನ್ನ ಜಾಮ್ ಜಾಡಿಗಳು ಹೊಡೆದುಹೋಗುತ್ತವೆ!’ ಎನ್ನುತ್ತಿದ್ದಳು.
ಪೋಲಿಸ್ ಆಫೀಸರ್ ಪೀಟರ‍್ಸ್ ಜೋರಾಗಿ ನಕ್ಕ.
“ಈ ಹೆಂಗಸರೂ ಆಗಬಹುದು! ಗಂಡನ ಕೊಲೆಯ ಅನುಮಾನದ ಮೇಲೆ ಹೆಂಡತಿಯನ್ನು ಬಂಧಿಸಿದಾಗಲೂ ಆಕೆಗೆ ತನ್ನ ಜಾಮ್ ಜಾಡಿಗಳದ್ದೇ ಚಿಂತೆ!!’
ಯುವ ವಕೀಲನಿಗೆ ನಗಬೇಕೆಂದು ಅನಿಸಲಿಲ್ಲ. ಅವನು ಗಂಭೀರನಾದ.
“ನಮ್ಮ ತನಿಖೆ ಮುಗಿಯುವ ಹೊತ್ತಿಗೆ ಮಿಸೆಸ್ ರೈಟಳಿಗೆ ಚಿಂತಿಸಲು ಜಾಮ್ ಜಾಡಿಗಳಿಗಿಂತ ಗಂಭೀರವಾದ ವಿಷಯಗಳೂ ಇರುತ್ತವೆ ಎಂದು ಅರ್ಥವಾಗುತ್ತದೆ.” ವಕೀಲ ವ್ಯಂಗ್ಯದಿಂದ ಹೇಳಿದ.
“ಹ್ಹ. ಹ್ಹ, ಹ್ಹಾ..! ಈ ಹೆಂಗಸರಿಗೆ ಇಂತ ಚಿಲ್ಲರೆ ಸಂಗತಿಗಳದ್ದೇ ಚಿಂತೆ!” ಮಿಸ್ಟರ್ ಹೇಲ್ ಹೇಳಿದ.
ವಕೀಲ ಸಿಂಕಿನ ಬಳಿಗೆ ಹೋಗಿ ಕೈ ತೊಳೆದುಕೊಂಡ. ಅಲ್ಲೇ ನೇತಾಡುತ್ತಿದ್ದ ಒಂದು ಟವೆಲನ್ನು ಎಳೆದು ಸ್ವಚ್ಛವಾಗಿರುವ ಬದಿಯಲ್ಲಿ ಕೈ ಒರೆಸಿಕೊಂಡ. “ಸ್ವಚ್ಛತೆಯ ವಿಚಾರದಲ್ಲಿ ಮಿಸೆಸ್ ರೈಟ್ ಕೊಂಚ ಹಿಂದೆಯೇ ಎಂದು ಕಾಣುತ್ತದೆ.. ಏನಂತಿರಾ ಮಹಿಳೆಯರೇ?..” ಕೊಳಕಾದ ಅಡುಗೆ ಮನೆಯ ಟವಲ್ಲು ಮತ್ತು ಸಿಂಕಿನೊಳಗೆ ರಾಶಿ ಬಿದ್ದಿದ್ದ ಪ್ಲೇಟು, ಪಾತ್ರೆಗಳನ್ನು ತೊರಿಸುತ್ತಾ ಕೇಳಿದ ವಕೀಲ.

“ಒಬ್ಬ ರೈತ ಮಹಿಳೆಯ ಕೆಲಸ ನೀವು ತಿಳಿದಿರುವಷ್ಟು ಸರಳವಾಗಿಲ್ಲ.” ಮಿಸೆಸ್ ಹೇಲ್ ಗಂಭೀರವಾಗಿ ವಕೀಲನಿಗೆ ಉತ್ತರಿಸಿದಳು.
“ನಿಮ್ಮ ಮಾತು ಒಪ್ಪುತ್ತೇನೆ. ಆದರೂ ಇಷ್ಟೊಂದು ಕೊಳಕಾದ ಅಡುಗೆ ಮನೆಯ ಟವಲನ್ನು ನಾನು ಬೇರಾವ ರೈತನ ಮನೆಯಲ್ಲೂ ಕಂಡಿಲ್ಲ!” ಅವನು ಆ ಟವಲನ್ನು ಬಿಡಿಸಿ ಎಲ್ಲರಿಗೂ ಕಾಣಿಸುವಂತೆ ಎತ್ತಿ ಹಿಡಿದ. ಅವನ ತುಟಿಗಳ ಮೇಲೆ ವ್ಯಂಗ್ಯದ ನಗು ಅರಳಿತ್ತು.
“ಈ ಟವಲುಗಳು ಬೇಗ ಕೊಳೆಯಾಗುತ್ತವೆ. ಅಲ್ಲದೆ, ರೈತರ ಕೈಗಳು ನಿಮ್ಮಷ್ಟು ನಾಜೂಕು, ಸ್ವಚ್ಛವಾಗಿರುವುದಿಲ್ಲ.”
“ವ್ಹಾಹ್! ನೀವು ಹೆಂಗಸರು ಎಷ್ಟಾದರೂ ಒಬ್ಬರನ್ನೊಬ್ಬರು ಎಲ್ಲಿ ಬಿಟ್ಟು ಕೊಡುತ್ತೀರಾ?” ವಕೀಲ ನಗೆಯಾಡಿದ. ಅವನು ಮಾರ್ತಾಳ ಸನಿಹಕ್ಕೆ ಬಂದು ಅವಳನ್ನೊಮ್ಮೆ ದಿಟ್ಟಿಸಿ ನೋಡಿ, “ನೀವು ಮತ್ತು ಮಿಸೆಸ್ ರೈಟ್ ನೆರೆಹೊರೆಯವರು.
ಹಾಗೆಯೇ ಸ್ನೇಹಿತೆಯರೂ ಆಗಿರಬಹುದಲ್ಲವೇ?” ಎಂದ.
ಮಾರ್ತಾ ಹೇಲ್ ‘ಇಲ್ಲ’ವೆನ್ನುವಂತೆ ತಲೆಯಲ್ಲಾಡಿಸಿದಳು.
“ಇತ್ತೀಚೆಗೆ ನಾನು ಅವಳನ್ನು ನೋಡೇ ಇಲ್ಲ. ಈ ಮನೆಗೆ ಕಾಲಿಡದೆ ವರ್ಷಗಳೇ ಆದವೇನೋ?”
“ಹೌದೇನು?.. ಏಕೆ? ಏನಾದರೂ ವೈಮನಸು?”
“ಹಾಗೇನಿಲ್ಲ ಮಿಸ್ಟರ್ ಹೆಂಡರ್ಸನ್. ಅವಳನ್ನು ನಾನು ತುಂಬಾ ಇಷ್ಟಪಡುತ್ತಿದ್ದೆ. ನಿಮಗೆ ರೈತರ ಬಾಳು ಅರ್ಥವಾಗುವುದಿಲ್ಲ.
ಅದರ ಮೇಲೆ…” ಮಾರ್ತಾ ಅಡುಗೆ ಮನೆಯ ಸುತ್ತ ಒಮ್ಮೆ ಕಣ್ಣಾಡಿಸಿ ಅಷ್ಟಕ್ಕೇ ಸುಮ್ಮನಾದಳು.
“ಮುಂದುವರೆಸಿ ಮಿಸೆಸ್ ಹೇಲ್..” ವಕೀಲ ಆಕೆಯನ್ನು ಉತ್ತೇಜಿಸಿದ.
“ಯಾಕೋ ನನಗೆ ಈ ಮನೆ, ಇಲ್ಲಿಯ ವಾತಾವರಣ ಯಾವತ್ತೂ ಉಲ್ಲಾಸದಾಯಕ ಅಂತ ಅನಿಸಿರಲೇ ಇಲ್ಲ!” ಆಕೆ, ವಕೀಲನಿಗೆ ಉತ್ತರಿಸುವುದಕ್ಕಿಂತ ಹೆಚ್ಚಾಗಿ ತನಗೇ ಸಮಜಾಯಿಷಿ ಕೊಡುವಂತಿತ್ತು.
“ನನಗೂ ಹಾಗೇ ಅನಿಸಿತು. ಈ ಮನೆಯೊಳಗೆ ಒಂಥರಾ ಹತಾಶ ವಾತಾವರಣ ತುಂಬಿಕೊಂಡಿದೆ.” ವಕೀಲನೆಂದ. ಅದಕ್ಕೇ ನಾನು ಹೇಳಿದ್ದು ಈ ಹೆಂಗಸಿಗೆ ಮನೆ ಸಂಭಾಳಿಸುವ ಜಾಣ್ಮೆ ಕಿಂಚಿತ್ತೂ ಇಲ್ಲ!”
“ಹಾಗೆ ನೋಡಿದರೆ ಮಿಸ್ಟರ್ ರೈಟನಿಗೆ ಇತ್ತು ಅಂತಲೂ ನನಗನಿಸುತ್ತಿಲ್ಲ.”
“ಅವರ ಸಂಬಂಧ ಹಳಸಿತ್ತು ಅಂತಲಾ?” ವಕೀಲ ತಕ್ಷಣ ಕೇಳಿದ.
“ನನ್ನ ಅಭಿಪ್ರಾಯ ಅದಲ್ಲ.” ಮಿಸೆಸ್ ಹೇಲ್ ಖಚಿತವಾಗಿ ಹೇಳಿದಳು. “ಜಾನ್ ರೈಟ್‌ನಂತವನಿರುವ ಯಾವುದೇ ಜಾಗವೂ ಉಲ್ಲಾಸದಾಯಕವಾಗಿರಲು ಸಾಧ್ಯವಿರಲಿಲ್ಲ!”
“ಈ ಬಗ್ಗೆ ನಾನು ನಿಮ್ಮ ಬಳಿ ಆಮೇಲೆ ಮಾತನಾಡುತ್ತೇನೆ ಮಿಸೆಸ್ ಹೇಲ್. ನನಗೆ ಮೊದಲು ಮಹಡಿಯ ಮೇಲೆ
ನೋಡಬೇಕು.”
ಅವನು ಮಹಡಿಗೆ ಹತ್ತುವ ಬಾಗಿಲನ್ನು ಎಳೆದು ಮೆಟ್ಟಿಲುಗಳನ್ನು ಹತ್ತತೊಡಗಿದ. ಅವನ ಹಿಂದೆ ಗಂಡಸರೂ ಹತ್ತಿದರು. ಪೋಲಿಸ್ ಆಫೀಸರ್ ಪೀಟರ‍್ಸ್ ಕೇಳಿದ: “ಮಿಸೆಸ್ ರೈಟಳಿಗೆ ಕೆಲವು ಉಡುಗೆಗಳು ಮತ್ತಿತರ ಅವಶ್ಯಕ ವಸ್ತುಗಳನ್ನು ಕೊಂಡೊಯ್ಯಲು ನನ್ನ ಮಡದಿ ಕೇಳುತ್ತಿದ್ದಾಳೆ. ನಿನ್ನೆ ನಮಗೆ ಪುರುಸೊತ್ತು ಇರಲಿಲ್ಲ. ಗಡಿಬಿಡಿಯಲ್ಲಿ ಮಿಸೆಸ್ ರೈಟಳನ್ನು ಕರೆದುಕೊಂಡು ಹೋದಿವಿ, ನಿಮ್ಮ ಅಕ್ಷೇಪಣೆ ಇಲ್ಲ ತಾನೇ ವಕೀಲ ಸಾಹೇಬರೆ?”
ಅಡುಗೆ ಕೋಣೆಯಲ್ಲಿ ನಿಂತಿದ್ದ ಆ ಇಬ್ಬರು ಮಹಿಳೆಯರ ಮೇಲೆ ವಕೀಲರು ಕಣ್ಣು ಹಾಯಿಸಿದರು. ಅವನ ದೃಷ್ಟಿ ಮಿಸೆಸ್ಪೀ ಟರ‍್ಸ್ ಮೇಲಿಂದ ಘಟ್ಟಿ ಮುಟ್ಟಾದ ರೈತ ಮಹಿಳೆ ಮಾರ್ತಾಳ ಮೇಲೆ ಹರಿಯಿತು.
“ಮಿಸೆಸ್ ಪೀಟರ‍್ಸ್ ಅಲ್ವಾ, ಇರಲಿ, ಇರಲಿ. ನಮ್ಮವರೇ ಅಲ್ಲವೇ?… ಹಾಗೆಯೇ ಸುತ್ತಮುತ್ತ ಮುತ್ತ ಒಂದು ಕಣ್ಣಿಟ್ಟಿರಿ ಮಿಸೆಸ್ ಪೀಟರ‍್ಸ್. ಕೆಲವು ವಿಚಾರಗಳಲ್ಲಿ ಹೆಂಗಸರು ನಮಗಿಂತ ಚುರುಕಾಗಿರುತ್ತಾರೆ. ಉಪಯೋಗವಾಗುವಂತ ಯಾವುದೇ ಸಾಕ್ಷಿ, ಇತ್ಯಾದಿ…” ಪಕ್ಕಾ ರಾಜಕಾರಣಿಯ ನಗೆ ಸೂಸಿದ ವಕೀಲ ಹೆಂಡರ್ಸನ್.
“ಅಂತದೇನಾದ್ದು ಸಿಕ್ಕಿದರೂ ಈ ಹೆಂಗಸರಿಗೆ ಗೊತ್ತಾಗಬೇಕಲ್ಲ?!” ಎರಡೂ ಕೈಗಳನ್ನು ಉಜ್ಜುತ್ತಾ ನಗೆಯಾಡಿದ ಮಿ.ಹೇಲ್ಅ ವರನ್ನು ಹಿಂಬಾಲಿಸಿದ…
| ಮುಂದುವರೆಯುತ್ತದೆ |
0 ಪ್ರತಿಕ್ರಿಯೆಗಳು