ಜೆ ವಿ ಕಾರ್ಲೊ ಕಥೆ – ಪಕ್ಷಿ ಪಂಜರದೊಳಗಿಲ್ಲ ಭಾಗ- 3..

ಮೂಲ: ಸುಸಾನ್ ಗ್ಲಾಸ್ಪೆಲ್
ಕನ್ನಡಕ್ಕೆ: ಜೆ ವಿ ಕಾರ್ಲೊ

ಸುಸಾನ್ ಗ್ಲಾಸ್ಪೆಲ್ (Susan Glaspell, 1876-1948) ಅಮೆರಿಕಾದ ಪುಲಿಟ್ಝರ್ ಪ್ರಶಸ್ತಿ ವಿಜೇತೆ ಪತ್ರಕರ್ತೆ, ಸಾಹಿತಿ ಮತ್ತು ನಟಿಯಾಗಿ ಹೆಸರು ಮಾಡಿದವರು. ಹದಿನೈದು ನಾಟಕಗಳು, ಐವತ್ತಕ್ಕಿಂತ ಹೆಚ್ಚು ಸಣ್ಣ ಕತೆಗಳು, ಒಂಭತ್ತು ನಾಟಕಗಳು ಅವರ ಸಾಹಿತ್ಯ ಕೃಷಿ. ಅವರ ಹೆಚ್ಚಿನ ಬರಹಗಳು ಲಿಂಗ ತಾರತಮ್ಯದ ವಸ್ತುವನ್ನೊಳಗೊಂಡಿವೆ.

A Jury of Her Peers, ಸುಸಾನ್ ಪತ್ರಕರ್ತೆಯಾಗಿ, ಜಾನ್ ಹೊಸ್ಯಾಕ್ ಎಂಬುವವನ ಕೊಲೆಯನ್ನಾಧರಿಸಿ ವರದಿ ಮಾಡಿದ ಒಂದು ಘಟನೆಯನ್ನಾದರಿಸಿ ಹೆಣೆದ ಕತೆ. ‘ಹೆಣ್ಮಕ್ಕಳಿಗೆ ಏನು ಗೊತ್ತಾಗುತ್ತೆ?’ ಎಂಬ ಗಂಡಸರ ತಾತ್ಸಾರದ ನಡುವೆ, ತಮ್ಮ ಸ್ತ್ರೀ ಸಹಜ ತರ್ಕದಿಂದ ಇಬ್ಬರು ಗೃಹಿಣಿಯರು ಒಂದು ಕೊಲೆಯ ವಿಶ್ಲೇಷಣೆ ನಡಿಸಿ ಬಿಡಿಸುವ ಕತೆ ‘ಖಾಲಿ ಪಂಜರ’

ಭಾಗ 3

ಇಬ್ಬರೂ ಹೆಣ್ಣು ಮಕ್ಕಳು ಮೆಟ್ಟಿಲುಗಳ ಮೇಲೆ, ನಂತರ ಮಹಡಿಯ ಮೇಲೆ ಗಂಡಸರ ಹೆಜ್ಜೆ ಸಪ್ಪುಳ ಕೇಳಿಸುತ್ತಾ ಸ್ವಲ್ಪ ಹೊತ್ತು ಸುಮ್ಮನಾದರು. ನಂತರ, ಮಾರ್ತಾ, ಯಾವುದೋ ವಿಘ್ನ ನಿವಾರಣೆಯಾದಂತೆ ಸಿಂಕಿನೊಳಗಿದ್ದ ಮುಸುರೆ ಪಾತ್ರೆಗಳನ್ನು ತೊಳೆದು ಕ್ರಮವಾಗಿ ಜೋಡಿಸಿಟ್ಟಳು. “ಯಾರ್ಯಾ ರೋ ಹೊರಗಿನ ಗಂಡಸರು ನನ್ನ ಅಡುಗೆ ಕೋಣೆಗೆ ಬಂದು ಹಾಗೆ, ಹೀಗೆ ಹೇಳುವುದು ನನಗೆ ಖಂಡಿತವಾಗಿಯೂ ಹಿಡಿಸುವುದಿಲ್ಲ!” ಅವಡುಗಚ್ಚಿ ಭುಸುಗುಟ್ಟಿದಳು ಮಾರ್ತಾ.
“ನನಗೂ ಅಷ್ಟೇ!” ಮಿಸೆಸ್ ಪೀಟರ್ಸ್ ಹೇಳಿದಳು. “ಆ ವಕೀಲ ಅಧಿಕ ಪ್ರಸಂಗಿ.”
“ಅವರ ಕರ್ತವ್ಯಗಳ ಬಗ್ಗೆ ದೊಡ್ಡ ದೊಡ್ಡ ಮಾತನ್ನಾಡುತ್ತಾರೆ! ಇಲ್ಲಿ ಉರಿ ಹಾಕಲು ಬಂದಿದ್ದ ಆಫೀಸರನ ಸಹಾಯಕ ಪಾತ್ರೆಗಳನ್ನು ಯಾಕೆ ಮುಟ್ಟಿರಬಾರದು? ಪಾಪ ಮಿನ್ನಿ. ಇಷ್ಟು ಬೇಗ ಅವಳನ್ನು ಸ್ಟೇಶನಿಗೆ ಕರೆದೊಯ್ಯುತ್ತಾರೆಂದು ಅವಳಿಗೇನಾದರೂ ಗೊತ್ತಿತ್ತೆ? ಗಂಡ ಸತ್ತ ಅಘಾತದಿಂದ ಪಾಪ ಹಾಗೇ ದಿಕ್ಕು ತೋಚದೆ ಸುಮ್ಮನೇ ಕುಳಿತುಕೊಂಡಿದ್ದಾಳೆ.” ಎನ್ನುತ್ತಾ ಮಾರ್ತಾ ಮತ್ತೊಮ್ಮೆ ಅಡುಗೆ ಮನೆಯ ಸುತ್ತ ದೃಷ್ಟಿ ಹರಿಸಿದಳು. ಅದು ಅಸ್ತವ್ಯಸ್ತವಾಗಿ ಕಾಣುತ್ತಿದ್ದುದರಲ್ಲಿ ಸಂಶಯವಿರಲಿಲ್ಲ. ಶೆಲ್ಫಿನ ಮೇಲೆ ಸಕ್ಕರೆಯ ಭರಣಿ ತೆರೆದಂತೇ ಇತ್ತು. ಮಾರ್ತಾ ಅಲ್ಲಿಗೆ ಹೋದಳು. “ಬಹುಶಃ ಮಿನ್ನಿ ಜಾಮಿಗೆ ಸಕ್ಕರೆ ಬೆರೆಸುವ ಕಾಯಕದಲ್ಲಿ ತೊಡಗಿದ್ದಳು..” ಆಕೆ ತನ್ನಷ್ಟಕ್ಕೆ ಎಂಬಂತೆ ಹೇಳಿದಳು.
ಅವಳಿಗೆ ತನ್ನ ಅಡುಗೆ ಮನೆಯಲ್ಲಿ ಅರ್ಧ ವಂದರಿಯಾಡಿದ್ದ ಗೋಧಿ ಹಿಟ್ಟಿನ ನೆನಪಾಯಿತು. ಅವಳನ್ನು ಕೆಲಸದ ಮಧ್ಯೆಯೇ ಕರೆದುಕೊಂಡು ಬಂದಿದ್ದರು. ಮಿನ್ನಿಗೆ ಅದೆಂತಾ ಕೆಲಸ ಬಿದ್ದಿರಬಹುದು? ಕೈ ಹಿಡಿದ ಕೆಲಸವನ್ನು ಅರ್ಧಕ್ಕೇ ಬಿಟ್ಟು ಹೋಗುವ ಕೆಲಸವೇನಿರಬಹುದು? ಮಾರ್ತಾಳಿಗೆ ಆರ್ಧಂಬರ್ಧ ಮಾಡುವ ಕೆಲಸಗಳು ಹಿಡಿಸುತ್ತಿರಲಿಲ್ಲ.

“ಅವಳ ಹಣ್ಣುಗಳು ಏನಾದವೋ?” ಮಿಸೆಸ್ ಪೀಟರ್ಸ್ ಗೆ ಉದ್ದೇಶಿಸಿ ಹೇಳಿದಂತೆ, ಮಾರ್ತಾ, ವಕೀಲ ಹತ್ತಿದ್ದ ಸ್ಟೂಲನ್ನು ಹತ್ತುತ್ತಾ ಹೇಳಿದಳು. ಅವಳು ಕಪಾಟಿನೊಳಗೆ ಪರೀಕ್ಷಿಸಿದಳು. “ಚೆರ್ರಿ ಹಣ್ಣುಗಳಂತೆ ಕಾಣಿಸುತ್ತಿವೆ.” ಎಂದು ಒಂದು ಗಾಜಿನ ಜಾಡಿಯನ್ನು ಕೆಳಗೆ ತಂದು ಸಿಂಕಿನಲ್ಲಿ ಅದರ ಹೊರಭಾಗವನ್ನು ತೊಳೆದಳು. “ಇಷ್ಟೊಂದು ಕಷ್ಟಪಟ್ಟು ಮಾಡಿದ ಕೆಲಸ… ಗೊತ್ತಾದರೆ ಮಿನ್ನಿಗೆ ಎಷ್ಟೊಂದು ಬೇಜಾರಾಗಬೇಡ? ಕಳೆದ ಬೇಸಿಗೆಯಲ್ಲಿ ನಾನೂ ಚೆರ್ರಿ ಜಾಮ್ ಮಾಡಿದ್ದೆ…”

ಅವಳು ಜಾಡಿಯನ್ನು ಮೇಜಿನ ಮೇಲೆ ತಂದಿಟ್ಟು ಒಂದು ದೀರ್ಘ ಶ್ವಾಸ ಹೊರಚೆಲ್ಲಿದಳು. ತೂಗು ಕುರ್ಚಿಯ ಮೇಲೆ ಕುಳಿತು ಕೊಳ್ಳಲು ಹೊರಟವಳು ಅದೇಕೋ ಹಿಂದೆ ಸರಿದು ಅದರ ಮೇಲೆ ಕುಳಿತುಕೊಂಡು ಏಪ್ರನಿನ ಅಂಚನ್ನು ನೀವುತ್ತಿದ್ದ ಮಿನ್ನಿಯ ಚಿತ್ರ ಅವಳ ಮನೋಪಟಲದ ಮೇಲೆ ಮೂಡಿಸಿಕೊಳ್ಳಲು ಪ್ರಯತ್ನಿಸಿದಳು. ಪೋಲಿಸ್ ಆಫೀಸರನ ಹೆಂಡತಿ ಮಿಸೆಸ್ ಪೀಟರ್ಸ್ ಅವಳನ್ನು ವಾಸ್ತವಕ್ಕೆ ಕರೆತಂದಳು. “ನನಗೆ ಮಿನ್ನಿ ಹೇಳಿರುವ ಕೆಲವು ವಸ್ತುಗಳನ್ನು ಹುಡುಕಿ ತೆಗೆದುಕೊಂಡು ಹೋಗಬೇಕಾಗಿದೆ. ನನಗೆ ಸಹಾಯ ಮಾಡುತ್ತೀರಾ ಮಿಸೆಸ್ ಹೇಲ್?” ಅಡುಗೆ ಕೋಣೆಯ ಪಕ್ಕದಲ್ಲೆ ಇದ್ದ ಒಂದು ರೂಮಿನ ಬಾಗಿಲನ್ನು ತೆರೆಯುತ್ತಾ ಅವಳು ಕೇಳಿದಳು. ಆ ಕೊಠಡಿಯೊಳಗೆ ಹೋಗಿದ್ದಂತೆ ಅವರು ಅಷ್ಟೇ ಬೇಗ ಹೊರಗೆ ಬಂದರು. ಆ ಕತ್ತಲ¯ ಥಂಡಿ ರೂಮಿನಲ್ಲಿ ಹೆಚ್ಚು ಹೊತ್ತು ಇರಲಿಕ್ಕೆ ಅವರಿಗಾಗಲಿಲ್ಲ.

“ಓ ಮೈ ಗಾಡ್!” ಎನ್ನುತ್ತಾ ಎತ್ತಿಕೊಂಡು ಬಂದಿದ್ದ ಕೆಲವು ವಸ್ತುಗಳನ್ನು ಮೇಜಿನ ಮೇಲೆ ಎಸೆದು ಮಿಸೆಸ್ ಪೀಟರ್ಸ್ ಒಲೆಯ ಕಡೆಗೆ ಹೆಜ್ಜೆ ಹಾಕಿದಳು. ಮಿಸೆಸ್ ರೈಟಳಿಗೆ ನಗರದ ಸ್ಟೇಶನ್ ಲಾಕಪ್ಪಿನಲ್ಲಿ ಇರಿಸಲಾಗಿತ್ತು. ಆಕೆ, ಮನೆಯಿಂದ ಕೆಲವು ಅಗತ್ಯ ವಸ್ತುಗಳನ್ನು ತಂದು ಕೊಡಲು ಮಿಸೆಸ್ ಪೀಟರ್ಸಳನ್ನು ಕೇಳಿಕೊಂಡಿದ್ದಳು. ಅವನ್ನು ಮಾರ್ತಾ ಪರೀಕ್ಷಿಸತೊಡಗಿದಳು. “ಹೇ.., ಇದೇನಪ್ಪಾ?” ಒಂದು ಸ್ಕರ್ಟನ್ನು ಮೇಲೆ ಎತ್ತಿ ಹಿಡಿದು ಮಾರ್ತಾ ಉದ್ಗರಿಸಿದಳು. ಆ ಸ್ಕರ್ಟು ಬಹಳ ವಸಂತಗಳನ್ನು ಕಂಡಿರುವಂತೆ ತೋರುತ್ತಿತ್ತು, ಬಣ್ಣ ಮಾಸಿತ್ತು, ಒಗೆದು, ಒಗೆದು ನೂಲಿನ ಎಳೆಗಳು ಬಲೆಯಂತೆ ಎದ್ದು ತುಂಬಾ ಧಾರುಣ ಸ್ಥಿತಿಯಲ್ಲಿತ್ತು. ಬಹುಶಃ ಈ ಕಾರಣಕ್ಕಾಗಿಯೇ ಮಿನ್ನಿ ಹೊರಗೆಲ್ಲಿಯೂ ಕಾಣಿಸುತ್ತಿರಲಿಲ್ಲ. ಒಂದು ಹೆಣ್ಣಿಗೆ ಕೇವಲ ಮಾನ ಮುಚ್ಚಿ ಕೊಳ್ಳುವಷ್ಟು ಬಟ್ಟೆ ಇದ್ದರಷ್ಟೇ ಸಾಕೇ? ಆಕೆಗೊಂದು ಸ್ವಂತ ವ್ಯಕ್ತಿತ್ವ, ಗೌರವ ಅನ್ನೋದು ಇಲ್ಲವೇನು? ಭಿಕಾರಿಯ ಸ್ಥಿತಿಯಲ್ಲಿ ಯಾವ ಗೌರವಾಸ್ತ ಹೆಣ್ಣು ಮಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾಳೆ? ಮದುವೆಯ ಮುನ್ನ ಮಿನ್ನಿ ಫಾಸ್ಟರ್ ಬಣ್ಣ ಬಣ್ಣದ ಉಡುಗೆಗಳನ್ನು ತೊಟ್ಟು ಎಲ್ಲಾ ಹುಡುಗಿಯರಂತೆ ಊರಿನಲ್ಲಿ ಮಿಂಚುತ್ತಿದ್ದಳು. ಚರ್ಚ್ ಗಾಯನವೃಂದದಲ್ಲೂ ಭಾಗವಹಿಸಿ ಹಾಡುತ್ತಿದ್ದಳು. ಇದು..ಇದು ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು.

ಮಾರ್ತಾ, ಮಿನ್ನಿಯ ಒಂದೊಂದೇ ಬಟ್ಟೆಗಳನ್ನು ನಾಜೂಕಾಗಿ ಜೋಡಿಸಿಟ್ಟು ಮಿಸೆಸ್ ಪೀಟರ್ಸಳ ಕಡೆಗೆ ನೋಡಿದಳು. ಆಕೆಯ ಮುಖದ ಮೇಲಿನ ಭಾವನೆ ಮಾರ್ತಾಳಿಗೆ ಖಂಡಿತವಾಗಿಯೂ ಹಿಡಿಸಲಿಲ್ಲ.
“ಇಷ್ಟೇ ಸಾಕಾ?” ಅವಳು ಮಿಸೆಸ್ ಪೀಟರ್ಸಳನ್ನು ಕೇಳಿದಳು.
“ಇಲ್ಲ. ಅವಳೊಂದು ಏಪ್ರನನ್ನೂ ತರಲು ಹೇಳಿದ್ದಾಳೆ! ವಿಚಿತ್ರ ಅನಿಸೋದಿಲ್ವಾ?” ಮಿಸೆಸ್ ಪೀಟರ್ಸ್ ನಗಲು ಪ್ರಯತ್ನಿಸುತ್ತಾ ಕೇಳಿದಳು. “ಜೈಲಿನಲ್ಲಿ ಏಪ್ರನಿನ ಅಗತ್ಯವಾದರೂ ಏನು? ನನಗನಿಸುತ್ತೆ ಅವಳಿಗೆ ಏಪ್ರನ್ ತೊಟ್ಟೂ ತೊಟ್ಟೂ ಅಬ್ಯಾಸವಾಗಿ ಹೋಗಿದೆ. ಆಕೆ ಒಂದು ಶಾಲೂ ತರಲು ಹೇಳಿದ್ದಳು. ಮಹಡಿಯ ಬಾಗಿಲ ಮೇಲೆ ನೇತುಹಾಕಿದ್ದೇನೆ ಎಂದಿದ್ದಳು.”
ಮಾರ್ತಾ, ಮಹಡಿಯ ಬಾಗಿಲ ಹಿಂದೆ ನೇತಾಕ್ಕಿದ್ದ ಬೂದು ಬಣ್ಣದ ಶಾಲನ್ನು ತಂದು ಅದನ್ನೇ ಗಮನಿಸತೊಡಗಿದಳು.
ಏನೋ ಯೋಚಿಸುತ್ತಾ ಮಾರ್ತಾ, ಮಿಸೆಸ್ ಪೀಟರ್ಸಳ ಬಳಿಗೆ ಹೋಗಿ, “ಮಿಸೆಸ್ ಪೀಟರ್ಸ್?” ಎಂದಳು.
ಮಿಸೆಸ್ ಪೀಟರ್ಸ್ ಕತ್ತೆತ್ತಿ ಅವಳನ್ನು ಪ್ರಶ್ನಾರ್ಥಕವಾಗಿ ನೋಡಿದಳು.
“ಮಿನ್ನಿ ಗಂಡನನ್ನು ಕೊಲೆ ಮಾಡಿದ್ದಾಳೆಂದು ನೀವು ಭಾವಿಸುತ್ತಿರಾ?”
ಮಿಸೆಸ್ ಪೀಟರ್ಸಳ ಮುಖದ ಮೇಲೆ ಆತಂಕದ ಛಾಯೆ ಮೂಡಿ ಮರೆಯಾಯಿತು.
“ಆ ಬಗ್ಗೆ ಏನೂ ಹೇಳಲು ನನಗೆ ತೋಚುತ್ತಿಲ್ಲ.” ಆಕೆ ಎಂದಳು.
“ಏಪ್ರನ್ ತರಲು ಹೇಳುವುದು, ಜಾಮ್ ಏನಾಯ್ತೋ ಅಂತ ಚಿಂತೆ ಮಾಡುವುದು ನೋಡಿದರೆ ನನಗೆ ಧೃಡವಾಗಿ ಮಿನ್ನಿ ಈ ಕೆಲಸ ಮಾಡಿರಬಹುದೆಂದು ಅನ್ನಿಸೋದಿಲ್ಲ.” ಮಾರ್ತಾ ಆತ್ಮವಿಶ್ವಾಸದಿಂದ ಹೇಳಿದಳು.
“ಪೀಟರ್ ಏನಂತಿದ್ದಾರೆ ಗೊತ್ತಾ?…” ಮಹಡಿಯ ಮೇಲಿಂದ ಹೆಜ್ಜೆಗಳ ಸಪ್ಪುಳ ಕೇಳತೊಡಗಿತು. ಮಿಸೆಸ್ ಪೀಟರ್ಸ್ ಕೆಲಹೊತ್ತು ಸುಮ್ಮನಿದ್ದು ಮೆದುವಾಗಿ ಹೇಳಿದಳು: “ಪಕ್ಕದಲ್ಲೇ ಮಲಗಿದ್ದ ಗಂಡನ ಕತ್ತಿಗೆ ಹಗ್ಗ ಬಿಗಿದು ಸಾಯಿಸಿದರೂ ಎಚ್ಚರವಾಗದ ಹೆಂಡತಿಗೆ ವಿಚಾರಣೆಯ ವೇಳೆ ವಕೀಲ ಹೆಂಡರ್ಸನ್ ಹರಿದು ಚಿಂದಿ ಮಾಡುತ್ತಾನೆ… ಅವಳ ಕತೆ ಮುಗಿದಂತೆಯೇ ಅಂತ”
“ಮಾರ್ತಾ ಯೋಚಿಸತೊಡಗಿದಳು. ನಂತರ, “ಕುತ್ತಿಗೆಗೆ ಹಗ್ಗ ಬಿಗಿದು ಸಾಯಿಸುವಾಗ ಜಾನ್ ರೈಟನಿಗೂ ಗೊತ್ತಾಗಲಿಲ್ಲವೆಂದರೆ, ಅದೂ ಆಶ್ಚರ್ಯವಲ್ಲವೇ!!?”
“ಯಾರಿಗೊತ್ತು?” ಮಿಸೆಸ್ ಪೀಟರ್ಸ್ ಎರಡೂ ಭುಜಗಳನ್ನು ಕುಣಿಸುತ್ತಾ ಹೇಳಿದಳು.
“ನಮ್ಮನೆಯವರೂ ಹಾಗೇ ಅನ್ನುತ್ತಿದ್ದರು. ಮನೆಯೊಳಗೆ ಕೋವಿ ಇದ್ದೂ ಹಗ್ಗ ಬಳಸಿರುವುದು ಯಾಕೋ ಅಸಹಜವೆನಿಸುತ್ತದೆ.” ಮಾರ್ತಾ ಎಂದಳು.

ಗಂಡಸರು ಮಹಡಿಯ ಮೇಲಿಂದ ಇನ್ನೂ ಕೆಳಗಿಳಿದಿರಲಿಲ್ಲ. ವಕೀಲ ಹೆಂಡರ್ಸನ್ ಜೋರಾಗಿ ಮಾತನಾಡುತ್ತಿರುವುದು ಕೆಳಗೆ ಕೇಳಿಸಿತು: “ನಮಗೀಗ ಬೇಕಾಗಿರುವುದು ಒಂದು ಪ್ರಬಲವಾದ ಕಾರಣ. ಸಿಟ್ಟು, ದ್ವೇಷ, ಹಗೆ.. ಆ ಥರದ ಕಾರಣ..”
“ಇಲ್ಲಿ ನನಗೆ ಸಿಟ್ಟಿನ ಯಾವುದೇ ಕುರುಹುಗಳು ಕಾಣಿಸುತ್ತಿಲ್ಲ…” ಇಷ್ಟು ಹೇಳಿ, ಏನೋ ತಡೆ ಉಂಟಾದಂತೆ ಮಾರ್ತಾ ತನ್ನ ಮಾತುಗಳನ್ನು ಅರ್ಧಕ್ಕೆ ಮೊಟಕುಗೊಳಿಸಿದಳು. ಅವಳ ದೃಷ್ಟಿ ಮೇಜಿನ ಮೇಲೆ ಬಿದ್ದುಕೊಂಡಿದ ಒರೆಸುಬಟ್ಟೆಯ ಮೇಲೆ ಹರಿಯಿತು. ಅವಳು ಮುಂದಕ್ಕೆ ಹೋಗಿ ಅದನ್ನು ಎತ್ತಿಕೊಂಡಳು. ಒರೆಸುಬಟ್ಟೆ ಒಂದು ಬದಿಯಲ್ಲಿ ಸ್ವಚ್ಛವಾಗಿದ್ದರೆ ಮತ್ತೊಂದು ಅಂಚಿನಲ್ಲಿ ಅಂಟಂಟಾಗಿತ್ತು. ಅವಳ ದೃಷ್ಟಿ ಹಾಗೇ ಸಕ್ಕರೆ ಡಬರಿಯ ಮೇಲೆ ಮತ್ತು ಅದರ ಪಕ್ಕದಲ್ಲಿದ್ದ ಅರ್ಧ ತುಂಬಿದ ಚೀಲದ ಮೇಲೆ ಹರಿಯಿತು. ಕೆಲಸ ಶುರು ಮಾಡಿ ಅದನ್ನು ಅರ್ಧಕ್ಕೆ ನಿಲ್ಲಿಸಿದ ಹಾಗೆ ಕಾಣಿಸುತ್ತಿತ್ತು.

“ಮಹಡಿಯ ಮೇಲೆ ಈ ಗಂಡಸರು ಏನೆಲ್ಲಾ ತಮಾಶೆ ಮಾಡಿ ನಕ್ಕರೋ ಯಾರಿಗೊತ್ತು? ಅವಳನ್ನು ಲಾಕಪ್ಪಿನಲ್ಲಿಟ್ಟು ನಾವಿಲ್ಲಿ ಅವಳ ಮನೆ ಶೋಧಿಸುತ್ತಿರುವುದು ನನಗೆ ಯಾಕೋ ಅವಳ ಮನೆಗೆ ಕದ್ದು ನುಗ್ಗಿರುವಂತೆ ಅನಿಸುತ್ತದೆ.” ಮಾರ್ತಾ ಹೇಳಿದಳು.
“ನಾವು ಕಾನೂನು ವಿರುದ್ಧವಾಗಿ ಏನೂ ಮಾಡುತ್ತಿಲ್ಲವಲ್ಲ ಮಿಸೆಸ್ ಹೇಲ್?” ಪೋಲಿಸ್ ಆಫೀಸರನ ಹೆಂಡತಿ ಹೇಳಿದಳು.
“ಅದೂ ನಿಜ.” ಮಾರ್ತಾ ಚುಟುಕಾಗಿ ಉತ್ತರಿಸಿ, ಒಲೆಯ ಕಡೆಗೆ ತಿರುಗಿದಳು. ಉರಿ ಕಡಿಮೆಯಾಗಿತ್ತು. ಮತ್ತಷ್ಟು ಸೌದೆಗಳನ್ನು ಇಟ್ಟು ಪುನಃ ಬೆಂಕಿ ಹೆಚ್ಚಿಸಿದಳು.

“ಕಾನೂನು ಕಾನೂನೇ.. ಕಿತ್ತೋಗಿರೋ ಈ ಒಲೆನೂ ಒಲೆಯೇ! ಪುಣ್ಯಾತ್ಗಿತ್ತಿ ಈ ದರಿದ್ರ ಒಲೆಯ ಮೇಲೆ ಅದೇಗೆ ಅಡುಗೆ ಮಾಡುತ್ತಿದ್ದಳೋ ಪಾಪ! ಹಾಗೆಯೇ ಬ್ರೆಡ್ಡು ಬೇಯಿಸುವ ಒಲೆಯನ್ನು ತೆರೆದು ನೊಡುತ್ತಾ ಮೈ ಕೊಡವಿಕೊಂಡಳು. ಈ ಒಲೆ, ಈ ಬ್ರೆಡ್ಡೊಲೆ ಯಾವ ಕಾಲದಲ್ಲಿ ಕಟ್ಟಿದ್ದೋ! ಈ ವರೆಗೂ ಇವನ್ನು ದುರಸ್ತಿ ಮಾಡಿಸಿದಂತೆ ಕಾಣಿಸುತ್ತಿಲ್ಲ. ಇದರಲ್ಲೇ ವರ್ಷಾನುಗಟ್ಟಳೆಯಿಂದ ಅಡುಗೆ ಮಾಡುವ ಒಬ್ಬ ಹೆಣ್ಣಿನ ಮನಸ್ಥಿತಿ ಹೇಗಾಗಿರಬೇಡ? ಅವಳೂ ಪಾಪ ಎಷ್ಟಂತಾ ಸಹಿಸಿಕೊಂಡಾಳು?” ಪಾಪ, ಮಿನ್ನಿ ಎಷ್ಟೊಂದು ಸಹಿಸಿಕೊಂಡಿರಬಹುದು. ಇಷ್ಟು ವರ್ಷಗಳಿಂದ ಅವಳನ್ನು ಬೇಟಿಯಾಗದಿದ್ದಕ್ಕೆ ಮಾರ್ತಾ ಪರಿತಪಿಸತೊಡಗಿದಳು.

“ಖಂಡಿತವಾಗಿಯೂ ಹೌದು!” ಮಿಸೆಸ್ ಪೀಟರ್ಸಳ ಧ್ವನಿ ಕೇಳಿ ಮಾರ್ತಾಳಿಗೆ ಆಶ್ಚರ್ಯವಾಯಿತು. “ಯಾರಿಗೂ ಜೀವನದಲ್ಲಿ ಜಿಗುಪ್ಸೆ ಉಂಟಾಗುವುದು ಸಹಜ.” ಆಕೆಯೂ ಒಲೆ, ಬ್ರೆಡ್ಡೊಲೆ, ಮತ್ತು ಒಡೆದ ಬಿಂದಿಗೆಯಲ್ಲಿ ತುಂಬಿಟ್ಟಿದ್ದ ನೀರನ್ನು ಗಮನಿಸುತ್ತಾ ಹೇಳಿದಳು. ಇಬ್ಬರು ಮಹಿಳೆಯರೂ ಕೆಲವು ಗಳಿಗೆ ಏನೂ ಮಾತನಾಡದೆ ಸುಮ್ಮನಾದರು. ಮಹಡಿಯ ಮೇಲೆ ಗಂಡಸರೆಲ್ಲಾ ಸೇರಿ, ಸಂಸಾರ ಶುರು ಮಾಡಿದಂದಿನಿಂದ ಹೊಗೆ ತುಂಬಿಕೊಳ್ಳುವ ಈ ಅಡುಗೆ ಕೋಣೆಯಲ್ಲಿ ಮೂರೊತ್ತೂ ಅಡುಗೆ ಬೇಯಿಸುತ್ತಾ ಜೀವ ಸವೆಸಿದ ಒಬ್ಬ ನತದೃಷ್ಟ ಹೆಣ್ಣು ಮಗಳನ್ನು ಗಲ್ಲಿಗೇರಿಸಲು ಬೇಕಾದ ಸಾಕ್ಷಿ, ಪುರಾವೆಗಳನ್ನು ಹುಡುಕುವುದರಲ್ಲಿ ತಲ್ಲೀನರಾಗಿದ್ದರು.

“ನೀವು ನಿಮ್ಮ ಕೋಟು ಕಳಚಿಡುವುದು ಒಳ್ಳೇದು ಮಿಸೆಸ್ ಪೀಟರ್ಸ್. ಒಲೆ ಚೆನ್ನಾಗಿ ಉರಿಯುತ್ತಿದೆ. ಸೆಕೆ ಶುರುವಾಯಿತು.”
ಅಡುಗೆ ಮನೆಯ ಬಾಗಿಲಿನ ಹಿಂಭಾಗಕ್ಕಿದ್ದ ಮೊಳೆಗೆ ಪೀಟರ್ಸ್ ತನ್ನ ಕೋಟನ್ನು ಕಳಚಿ ಸಿಕ್ಕಿಸಿದಳು. “ವ್ಹಾಹ್!..” ಆಕೆ ಉದ್ಗರಿಸಿದಳು. ಬಾಗಿಲ ಪಕ್ಕದಲ್ಲೇ ಒಂದು ಹೊಲಿಗೆ ಸಾಮಾನುಗಳನ್ನು ತುಂಬಿಟ್ಟಿದ್ದ ಕೈ ಬುಟ್ಟಿ ಇತ್ತು. ಅದನ್ನು ಎತ್ತಿ ಹಿಡಿಯುತ್ತಾ, “ಮಿಸೆಸ್ ರೈಟ್ಗೆ ಕೌದಿ ಹೊಲೆಯುವ ಕಲೆಯೂ ಗೊತ್ತಿರುವಂತಿದೆ!” ಅವಳ ದನಿಯಲ್ಲಿ ಪ್ರಶಂಸೆ ತುಂಬಿತ್ತು. ಕೈ ಬುಟ್ಟಿ ವಿವಿಧ ಬಣ್ಣಗಳ ಬಟ್ಟೆಯ ತುಣುಕುಗಳಿಂದ ತುಂಬಿ ಹೋಗಿತ್ತು.

ಅವುಗಳಲ್ಲಿ ಕೆಲವನ್ನು ಮಾರ್ತಾ ಹೆಕ್ಕಿ ಮೇಜಿನ ಮೇಲೆ ಜೋಡಿಸಿದಳು. “ಎಷ್ಟೊಂದು ಸುಂದರವಾದ ವಿನ್ಯಾಸ ಅಲ್ವೇ?”
ಅವರು ಬಟ್ಟೆ ತುಂಡುಗಳ ಸೌಂದರ್ಯವನ್ನು ಮೈಮರೆತು ನೋಡುವುದರಲ್ಲಿ ಎಷ್ಟೊಂದು ಮೈ ಮರೆತಿದ್ದರೆಂದರೆ ಮೇಲಿಂದ ಗಂಡಸರು ಇಳಿದು ಬಂದದ್ದು ಅವರ ಗಮನಕ್ಕೆ ಬರಲಿಲ್ಲ. ಅವರು ಮೆಟ್ಟಿಲ ಬಳಿಯ ಬಾಗಿಲನ್ನ ದೂಡಿ ಬರುವುದಕ್ಕೂ ಮಾರ್ತಾ ಕೇಳುವುದಕ್ಕೂ ಸರಿಯಾಯಿತು.
“ಮಿಸೆಸ್ ರೈಟ್ ಕೌದಿ ಹೊಲೆಯುತ್ತಿದ್ದರೋ ಹೆಣೆಯುತ್ತಿದ್ದರೋ ಮಿಸೆಸ್ ಪೀಟರ್ಸ್?”
ಅಷ್ಟರಲ್ಲಿ ಮಹಡಿ ಇಳಿದು ಬಂದಿದ್ದ ಗಂಡಸರಲ್ಲಿ, ಪೋಲಿಸ್ ಆಫೀಸರ್ ನಾಟಕೀಯವಾಗಿ ಕೈಗಳನ್ನು ಚೆಲ್ಲುತ್ತಾ, “ವ್ಹಾಹ್, ಇವರಿಬ್ಬರೂ ಮಿಸೆಸ್ ರೈಟ್ ಕೌದಿ ಹೊಲೆಯುತ್ತಿದ್ದರೋ ಇಲ್ಲ ಹೆಣೆಯುತ್ತಿದ್ದರೋ ಅನ್ನುವ ಚರ್ಚೆಯಲ್ಲಿ ತೊಡಗಿಕೊಂಡಿದ್ದಾರೆ! ಇಂತ ಗಂಭೀರ ಪರಿಸ್ಥಿಯಲ್ಲೂ ಈ ಹೆಂಗಸರು ಇಂತ ಕ್ಷುಲ್ಲಕ ವಿಚಾರಗಳಲ್ಲಿ ಮಗ್ನರಾಗಿದ್ದಾರಲ್ಲಾ!” ಎಂದು ನಗುತ್ತಾ ಒಲೆಯ ಬಳಿಗೆ ಹೋಗಿ ಬೆಂಕಿ ಕಾಯಿಸಿಕೊಳ್ಳತೊಡಗಿದರು “ನಾವೊಮ್ಮೆ ಕೊಟ್ಟಿಗೆಗೆ ಹೋಗಿ ಬರೋಣ.” ವಕೀಲ ಹೇಳಿದ.
ಗಂಡಸರು ಅಡುಗೆ ಮನೆಯ ಬಾಗಿಲು ಎಳೆದು ಕೊಟ್ಟಿಗೆಯ ಕಡೆಗೆ ಹೋಗುತ್ತಲೇ ಮಾರ್ತಾ ಹೇಳಿದಳು: “ಇದರಲ್ಲಿ ನಗಾಡುವಂತದೇನಿದೆ? ಮಿನ್ನಿ ಗಂಡನನ್ನು ಕೊಲೆ ಮಾಡಿದ್ದಾಳೆಂದು ಹೇಳುವಂತ ಪುರಾವೆಗಳು ಯಾವುದೂ ಇಲ್ಲ. ಮಹಡಿಯ ಮೇಲೂ ಅವರಿಗೆ ಏನೂ ಸಿಕ್ಕಿಲ್ಲವೆಂದು ತೋರುತ್ತದೆ. ತಾವೇ ಬಹಳ ಬುದ್ಧಿವಂತರಂತೆ ನಮ್ಮನ್ನು ನೋಡಿ ನಗಾಡುತ್ತಿದ್ದಾರೆ!”
“ಸಾಯಲಿ ಬಿಡಿ ಮಿಸೆಸ್ ಹೇಲ್. ಅವರ ತಲೆಯಲ್ಲಿ ಗಂಭೀರ ವಿಚಾರಗಳಿರುವುವಾಗ ಇದು ಅಸಹಜವೇನಲ್ಲ.” ಮಿಸೆಸ್ ಪೀಟರ್ಸ್ ಗಂಡನ ಪರವಹಿಸಿ ಹೇಳಿದಳು.

ಅವರು ಮತ್ತೆ ಕೌದಿಯ ತಪಾಸಣೆಯಲ್ಲಿ ತೊಡಗಿಸಿಕೊಂಡರು. ಅಷ್ಟರಲ್ಲಿ ಮಿಸೆಸ್ ಪೀಟರ್ಸ್ ಉದ್ಗರಿಸಿದಳು: “ಇಲ್ಲಿ ಸ್ವಲ್ಪ ನೋಡಿ ಮಿಸೆಸ್ ಹೇಲ್!”
ಮಾರ್ತಾ ಅತ್ತ ಕಡೆ ತಿರುಗಿದಳು.
“ಈ ಬಟ್ಟೆಯ ಹೊಲಿಗೆ ನೋಡಿ ಮತ್ತು ಈ ಬಟ್ಟೆಯ ಹೊಲಿಗೆ ನೋಡಿ! ಇದರಲ್ಲಿ ಹೊಲಿಗೆ ಎಷ್ಟೊಂದು ಚೆಂದವಾಗಿದೆ ಮತ್ತು ಇದರ ಹೊಲಿಗೆ ನಿಯಂತ್ರಣದಲ್ಲಿರದಂತೆ ವಕ್ರವಾಗಿ ಹೇಗೇಗೋ ಹೊಲಿದಂತಿದೆ!” ಮಾರ್ತಾ ಆ ಬಟ್ಟೆಯ ತುಣುಕನ್ನು ಸೂಕ್ಷ್ಮವಾಗಿ ಪರಿಶೀಲಿಸಿದಳು. ಮಿಸೆಸ್ ಪೀಟರ್ಸ್ ಗಮನಿಸಿದಂತೆ ಎರಡನ್ನೂ ಹೋಲಿಸಿದರೆ ಈ ತುಣುಕಿನಲ್ಲಿ ಮಿನ್ನಿ ಏಕಾಗ್ರತೆ ಕಳೆದುಕೊಂಡಿರುವಂತೆ ಭಾಸವಾಗುತ್ತಿತ್ತು, ಅಥವಾ ಹೊಲಿಗೆ ಹಾಕುವುದನ್ನೇ ಮರೆತಂತೆ ಕಾಣಿಸುತ್ತಿತ್ತು. ತುಂಬಾ ಹೊತ್ತು ಆ ಬಟ್ಟೆಯ ತುಣುಕನ್ನು ಕೈಯಲ್ಲಿ ಹಿಡಿದು ಮಾರ್ತಾ ಯೋಚನಾಮಗ್ನಳಾದಳು. ನಂತರ ನೂಲಿನ ಎಳೆಯ ಗಂಟನ್ನು ಎಳೆದು ಅವಳು ಪೂರ್ತಿ ಹೊಲಿಗೆಯನ್ನೇ ಬಿಚ್ಚಿದಳು.

ಮಿಸೆಸ್ ಪೀಟರ್ಸ್ ಒಮ್ಮೆಲೇ ಹೌಹಾರಿದಳು. “ನೀವು ಏನು ಮಾಡ್ತಾ ಇದ್ದಿರಿ ಮಿಸೆಸ್ ಹೇಲ್?”
ಒಂದು ಗಳಿಗೆ ಅವರಿಬ್ಬರ ಕಣ್ಣುಗಳು ಸಂಧಿಸಿ ಯಾವುದೋ ಅವ್ಯಕ್ತ ಸಂಪರ್ಕದಿಂದ ಬಂಧಿಸಲ್ಪಟ್ಟವು. ಕೊನೆಗೆ ಕಷ್ಟಪಟ್ಟು ದೃಷ್ಟಿ ಕಿತ್ತರು. “ಈ ಹೊಲಿಗೆ ನನಗೆ ಚೆನ್ನಾಗಿ ಕಾಣಿಸಲಿಲ್ಲ ಮಿಸೆಸ್ ಪೀಟರ್ಸ್ , ಆದ್ದರಿಂದ ಬಿಡಿಸಿಬಿಟ್ಟೆ.” ಮಾರ್ತಾ ಶಾಂತವಾಗಿ ಹೇಳಿದಳು. “ನಾವು ಇಲ್ಲಿಯ ವಸ್ತುಗಳನ್ನು ಮುಟ್ಟುತ್ತಿರುವುದಷ್ಟೇ ಅಲ್ಲ, ಕೈಯಾಡಿಸುತ್ತಲೂ ಇದ್ದೇವೆ ಮಿಸೆಸ್ ಹೇಲ್. ಇದ್ಯಾಕೋ ನನಗೆ ಸರಿ ಎಂದು ಅನಿಸುವುದಿಲ್ಲ.” ಮಿಸೆಸ್ ಪೀಟರ್ಸ್ ಎಂದಳು.

“ನೋಡಿದ ಮೇಲೂ ಹೇಗೆ ಸುಮ್ಮನಿರುವುದು ಮಿಸೆಸ್ ಪೀಟರ್ಸ್ ?” ಮಾರ್ತಾ ಮತ್ತೊಮ್ಮೆ ಹೇಳಿ ಸೂಜಿಗೆ ನೂಲು ಹಾಕಿ ಮತ್ತೊಂದು ತುಣುಕಿನ ಹಾಗೆಯೇ ಅದನ್ನು ಹೊಲಿಯತೊಡಗಿದಳು. ಸ್ವಲ್ಪ ಹೊತ್ತಿನ ಬಳಿಕ ಅವಳಿಗೆ ಮಿಸೆಸ್ ಪೀಟರ್ಸ್ಳ ಹೆದರಿದ ಸ್ವರ ಕೇಳಿಸಿತು:
“ಮಿಸೆಸ್ ಹೇಲ್?”
“ಏನು ಮಿಸೆಸ್ ಪೀಟರ್ಸ್ ?”
“ನನಗನ್ನಿಸುತ್ತಿದೆ ಮಿಸೆಸ್ ರೈಟಳ ಮನಸ್ಥಿತಿ ಸರಿಯಾಗಿರಲಿಲ್ಲ. ಏಕಿರಬಹುದು?”
“ಒಹ್, ಯಾರಿಗೊತ್ತು ಮಿಸೆಸ್ ಪೀಟರ್ಸ್ ?” ಅದೇನು ಅಂತಾ ಮಹತ್ವದ ವಿಚಾರ ಅಲ್ಲವೆನ್ನುವಂತೆ ಮಾರ್ತಾ ಉತ್ತರಿಸಿದಳು. “ಅಲ್ಲದೆ ಅವಳ ಮನಸ್ಸು ಸರಿಯಾಗಿರಲಿಲ್ಲವೆಂದು ಖಾತ್ರಿಯಿಂದ ಅದೇಗೆ ಹೇಳುವುದು? ಕೆಲವೊಮ್ಮೆ ತುಂಬಾ ಬಳಲಿದಾಗಲೂ ಹಾಗಾಗುವುದುಂಟು. ನನಗೂ ಎಷ್ಟೋ ಭಾರಿ ಆಗಿದೆ.”
ನೂಲು ಕತ್ತರಿಸುತ್ತಾ ಮಾರ್ತಾ ವಾರೆಗಣ್ಣಿನಿಂದ ಮಿಸೆಸ್ ಪೀಟರ್ಸಗಳನ್ನು ನೋಡಿದಳು. ಅವಳು ಮುಖ ಗಂಟುಹಾಕಿಕೊಂಡು ಎಲ್ಲೋ ನೋಡುತ್ತಿದ್ದಳು. ಕೆಲವು ನಿಮಿಷಗಳ ಬಳಿಕ ನಡುಗುವ ಸ್ವರದಿಂದ ಮಾರ್ತಾಳಿಗೆ ಹೇಳಿದಳು:
“ನಾನು ಮಿಸೆಸ್ ರೈಟಳ ಸಾಮಾನುಗಳನ್ನು ಕಟ್ಟಿಕೊಳ್ಳುವುದು ಒಳ್ಳೆಯದೆಂದು ತೊರುತ್ತದೆ. ಇನ್ನೇನು ಗಂಡಸರು ಬರುವ ಹೊತ್ತಾಯಿತು. ನನಗೊಂದು ಪೇಪರು ಮತ್ತು ಕಟ್ಟಲು ಇಲ್ಲಿ ದಾರ ಸಿಗಬಹುದೆ?”
“ಆ ಬೀರುವಿನಲ್ಲಿ ನೋಡಿ ಮಿಸೆಸ್ ಪೀಟರಸ್ವ , ಅಲ್ಲಿ ಸಿಗಬಹುದು.” ಸುತ್ತ ದೃಷ್ಟಿ ಬೀರಿ ಮಾರ್ತಾ ಹೇಳಿದಳು.


| ಮುಂದುವರೆಯುತ್ತದೆ|

‍ಲೇಖಕರು avadhi

February 10, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: