ಜೆ ಬಾಲಕೃಷ್ಣ ಅವರ ‘ಸರ್ಕಸ್ಸಿನ ಹುಡುಗಿ’..

ಜೆ ಬಾಲಕೃಷ್ಣ

**

ನಾನು ಕಾವ್ಯ ಬರೆದವನೇ ಅಲ್ಲ. ಆಗೊಂದು ಈಗೊಂದು ಬರೆಯುವ ಪ್ರಯತ್ನ ಮಾಡಿ ಸೋತಿದ್ದೆ. 1983ರ ವಿದ್ಯಾರ್ಥಿ ದಿನಗಳಲ್ಲಿ ಕೃ.ವಿ.ವಿ. ವಿದ್ಯಾರ್ಥಿಗಳ ಪ್ರಾತಿನಿಧಿಕ ಕವನ ಸಂಕಲನ “ಗುಲ್ಮೊಹರ್ ಅಕ್ಷರಗಳಾದಾಗ” ಸಂಕಲಿಸಿ ಪ್ರಕಟಿಸಿದ್ದೆವು (ಅದರ ಮುಖಪುಟ ಚಿತ್ರವೂ ನನ್ನದೆ). ಅದರಲ್ಲೊಂದು ಕವನ ಬರೆಯುವ ಪ್ರಯತ್ನ ಮಾಡಿದ್ದೆ. ಕಾವ್ಯ ರಚನೆಗೆ ಪ್ರತ್ಯೇಕ ಮಾನಸಿಕ ಸಂರಚನೆ ಅವಶ್ಯಕವೆಂದು ನನ್ನ ಭಾವನೆ. 2007ರಲ್ಲಿ ಒಂದು ಪದ್ಯ ಬರೆಯುವ ಪ್ರಯತ್ನ ಮಾಡಿದ್ದೆ. ಹೇಗಿದೆ ತಿಳಿಸಿ.

ಸರ್ಕಸ್ಸಿನ ಹುಡುಗಿ

ಜೀಕು ಜೋಕಾಲಿಯಲ್ಲಿ

ಅಲ್ಲಿ ಆಗಸದೆತ್ತರದಲ್ಲಿ

ತೊನೆದು ತೊಯ್ದಾಡಿ ಚಿಮ್ಮಿ

ಹಿಡಿಯಲು ಚಾಚಿದ್ದ ಎರಡು ಕೈಗಳೆಡೆಗೆ

ಬದುಕನ್ನೇ ಆತುಕೊಳ್ಳುವಂತೆ ಹಾರಿದಾಗ

ಒಂದರೆಕ್ಷಣ, ಸಾವು ಬದುಕಿನ ನಿರ್ಧಾರದ ಕ್ಷಣ

ಜಗಜಗಿಸುವ ಬೆಳಕಿನಡಿಯಲ್ಲಿ

ಎಲ್ಲವೂ ಕಣ್ಣುಕಪ್ಪಿಡುವ ಕತ್ತಲು.

ಗಾಳಿಯಲ್ಲಿ ಯಾವ ಆಸರೆಯಿಲ್ಲದೆ ಈ ದಿಕ್ಕಿನಿಂದ

ಆ ದಿಕ್ಕಿಗೆ ದಿಕ್ಕುತಪ್ಪಿದ ಬಾವಲಿಯಂತೆ

ಜೋತುಬೀಳಲು ಆಸರೆ ಅರಸುವಾಗ

ನೆನಪಾಗುತ್ತದೆ ಈಗತಾನೇ ಹಾಲೂಡಿಸಿ

ಬಂದ ಕಂದನ ಮುಖ.

ಕೈಜಾರಿದರೆ ಗಕ್ಕನೆ ಸೆಳೆದುಕೊಳ್ಳುವ

ಹೊಂಚುಹಾಕುತ್ತಿರುವ ಸಾವಿನ ಬಲೆಯೂ ನೆನಪಾಗುತ್ತದೆ.

ನೋಡುವವರ ಉಸಿರು ನಿಂತಿದೆ

ಮೈದೋರುವ ಬಿಗಿ ಉಡುಪಿನ

ನಗುಮೊಗದ ಈ ಸರ್ಕಸ್ಸಿನ ಹುಡುಗಿಯ

ಕಸರತ್ತಿನಲ್ಲಿ ತುಂಬಿದ ಗಡಿಗೆಯಿಂದ

ಹೊರಚೆಲ್ಲಬಹುದೆ ಏನಾದರೂ

ಎಂದು ನೋಡಲು ಕಾಯುತ್ತಿರುವ ಜನ.

ಹೊರಚೆಲ್ಲಬಹುದು, ಹೊರಹಾರಬಹುದು

ಅದು ಪ್ರಾಣಪಕ್ಷಿಯೇ ಆಗಿರಬಹುದು.

ಈ ಸರ್ಕಸ್ಸಿನ ಹುಡುಗಿ ಬದುಕಲೇ ಬೇಕು

ಆಸರೆ ಬಿಟ್ಟು ಮತ್ತೊಂದೆಡೆಯ ಆಸರೆಗೆ

ಚಿಮ್ಮಿದ ಹುಡುಗಿಗೆ, ಬದುಕಿರುವುದು ಖಾತ್ರಿಯಾಗುವ ಮುನ್ನ,

ಕೆಳಗುರುಳಿದ ಕಣ್ಣೀರ ಹನಿ ಯಾರಿಗೂ ಕಾಣದೆ

ಮಣ್ಣುಗೂಡುವ ಮುನ್ನ

ಮನಸ್ಸಿನಲ್ಲಿ ಬದುಕಿನ ಎಲ್ಲ ಘಟನೆಗಳು

ಫ್ಲ್ಯಾಶ್‌ಬ್ಯಾಕಿನಂತೆ.

ತಾನು ಹಸುಗೂಸಾಗಿದ್ದಾಗ ತನ್ನಮ್ಮ ಇಲ್ಲೇ

ಅಲ್ಲವೆ ಸಾವು-ಬದುಕಿನಾಟ ನಡೆಸಿದ್ದು,

ಗಾಳಿಯಲ್ಲಿ ಯಾವ ಆಸರೆಯಿಲ್ಲದೆ

ಸಾವು ಬದುಕು ನಿರ್ಧಾರವಾಗುವ ಆ ಅರೆಕ್ಷಣ

ಆಕೆಗೆ ಆಕೆಯ ಕಂದನ ನೆನಪಾಗಿರಬೇಕಲ್ಲವೆ.

ಊರು ಬೇರಾಗಬಹುದು. ನೀರು ಬೇರಾಗಬಹುದು

ಉಸಿರುಗಟ್ಟಿಸುವ ಈ ಗುಡಾರದ ಮಾಸಲು

ಬಣ್ಣ ಬದಲಾಗದು, ಕುತ್ತಿಗೆಯ ಸುತ್ತಿರುವ

ಹುಲಿ ಸಿಂಹಗಳ ಒಡೆಯನ ಚಾವಟಿಯ ಬಿಗಿತ

ಸಡಿಲವಾಗದು.

ಈ ಸರ್ಕಸ್ಸಿನ ಹುಡುಗಿ ಬದುಕಲೇ ಬೇಕು.

‍ಲೇಖಕರು Admin MM

June 1, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: