ವಿಧಾತ್ರಿ ಭಟ್, ಉಪ್ಪುಂದ
ಕಾಡಿನ ವಿಸ್ತಾರದಿ ನಾಲ್ಕಾರು ರಸ್ತೆಗಳು ಕೂಡುವ ಸರ್ಕಲ್, ನಿರ್ಜನ ಪ್ರದೇಶ, ನೊಣ ಹೊಡೆಯುತ್ತಿರುವ ಚಹಾದ ಅಂಗಡಿ, ಅಲ್ಲಿ ನಡೆಯುವ ಕಾಳ ದಂಧೆಗಳು, ಲಂಚದ ಲೂಟಿ, ಏಲಕ್ಕಿ ವ್ಯಾಪಾರ, ಮೇದರಹಳ್ಳಿಯ ಅವಸಾನದ ಕತೆಗಳು, ರಹಸ್ಯದ ಬಿಳಿಯ ಪ್ಯಾಕೆಟ್ ಅದರ ಬೇಟೆ, ಅದರಿಂದ ಆಗುವ ತೊಂದರೆಗಳು, ಗಾನ್‍ಕೇಸ್ ಸುರೇಶ ಹಾಗೂ ಅವನ ದೋಣಿ ಹೊಳೆ, ಮಂದಗತಿಯ ರೈಲು, ರತ್ನಮಾಲೆ ರಹಸ್ಯ, ಬಿರುಮಲೆಯ ಸುರಂಗ ಅಲ್ಲಿಯ ಕುಂಟರಾಮ, ಹೀಗೆ ಒಂದೊಂದು ಪುಟ ತಿರುವಿದ ಹಾಗೇ ತೇಜಸ್ವಿಯವರ ‘ಜುಗಾರಿ ಕ್ರಾಸ್’ನಲ್ಲಿ ನಾನೂ ಒಬ್ಬಳಾಗಿ ಕಾದಂಬರಿಯನ್ನು ಓದುತ್ತಾ ಹೋಗಿ ಬಿಟ್ಟಿದ್ದೆ.
‘ಜುಗಾರಿ ಕ್ರಾಸ್’ನ ಪ್ರಯಾಣ ಆರಂಭಿಸಿ ಅದ್ಯಾವುದೋ ಕಾರಣಕ್ಕೆ ಅರ್ಧಕ್ಕೆ ನಿಲ್ಲಿಸಿದ್ದವಳಿಗೆ ಈ ಲಾಕ್‍ಡೌನ್‍ನಿಂದ ‘ಜುಗಾರಿ ಕ್ರಾಸ್’ನ ಪ್ರಯಾಣದ ದಾರಿ ಸುಗಮವಾಯಿತು. ಪ್ರತಿಯೊಂದು ಅಧ್ಯಾಯದ ಕೊನೆಗೆ ಮುಂದೇನು? ಎಂಬ ಪ್ರಶ್ನೆ ಉದ್ಭವಿಸಿ ಅಷ್ಟೇ ಕುತೂಹಲದಿಂದ ಮುಂದಿನ ಅಧ್ಯಾಯದ ಪುಟ ತೆಗೆದು ಗಾಢವಾಗಿ ಒಳಹೊಕ್ಕು ಅಲ್ಲಿರುವ ಎಲ್ಲಾ ಪಾತ್ರಗಳ ಮಧ್ಯದಲ್ಲಿ ನಾನು ಸಹ ನಿಂತು ಆ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತಿದ್ದೇನೆ ಅನ್ನಿಸಿಬಿಡ್ತು.
ತೇಜಸ್ವಿಯವರ ಬರಹಗಳು ಇಷ್ಟವಾಗುವುದು ಅವರು ಅಲ್ಲಿ ನೀಡುವ ಪರಿಸರಜ್ಞಾನ ಹಾಗೂ ಬರಹಗಳಲ್ಲಿರುವ ಪ್ರಸ್ತುತತೆ. ಅಂದು-ಇಂದು ಎಂದೆದಿಗೂ ಕೆಲವು ವಿಷಯಗಳು ಅವರ ಬರಹದಲ್ಲಿ ಪ್ರಸ್ತುತವೆನಿಸುತ್ತದೆ, ಅಲ್ಲದೇ ಅವರು ವಿವರಿಸುವ ಸನ್ನಿವೇಶಗಳು ನಮ್ಮ ಎದುರೇ ನಡೆದಂತೆ ಭಾಸವಾಗುತ್ತದೆ.
‘ಜುಗಾರಿ ಕ್ರಾಸ್’ನ ಪ್ರತಿ ಹಂತದ ಓದು ನನಗೆ ಕುತೂಹಲಕಾರಿಯಾದ ಖುಷಿ ನೀಡಿದ್ದು ಸತ್ಯ. ಮಾತು ಬರದ ಹುಡುಗಿಯ ರಂಜದ ಹೂಗಳ ಮಾಲೆಯ ಮಾರಾಟ, ಆಕೆಯ ಮುಗ್ಧತೆ ತುಟಿಯಂಚಿನಲ್ಲಿ ಕಿರು ನಗು ತರಿಸಿತು. ಒಂದು ಕ್ಷಣ ಆ ಕಿಡಿಗೇಡಿಗಳ ಸಂಚಿನಲ್ಲಿ ಈ ಮುಗ್ಧಜೀವ ಎಲ್ಲಿ ಹೋಗಿ ಬಿಡುತ್ತದೋ ಎಂದು ಭಯ ಅನ್ನಿಸಿತ್ತು. ಇನ್ನೂ ಮಜಾ ನೀಡಿದ್ದು ‘ಕ್ಯಾಪ್ಟನ್ ಖುದ್ದೂಸನ್ ಎಕ್ಸ್‍ಪ್ರೆಸ್’ ಮತ್ತು ‘ಮೇಲ್ ಟ್ರೈನ್’ ಹಾಗೂ ಅದರ ವೇಗ ಮತ್ತು ರಾಜಪ್ಪನ ವ್ಯಂಗ್ಯ.
‘ಮೇಲ್ ಟ್ರೈನ್’ನೊಳಗೆ ಸುರೇಶನ ‘ಉತ್ತುಂಗ ರಾಜನ ಕಥೆಯ ಓದು, ಆ ಕಡತದಲ್ಲಿ ತಪ್ಪಿ ಹೋಗಿರುವ ಹೆಸರಿನ ಪತ್ತೇದಾರಿಕೆ, ‘ರತ್ನಮಾಲ’ಳ ಹುಡುಕು, ಅದಕ್ಕೆ ಸಿಗುವ ಸುರೇಶನ ಹಳೆಯ ದೋಣಿ ಹೊಳೆಯ ನಂಟು, ತದನಂತರ ಸುರೇಶನ ಮನಸ್ಸಿನಲ್ಲಿ ಪಾದರಸದಂತೆ ಓಡುವ ಆಲೋಚನೆಗಳು ಇದೆನಲ್ಲಾ ಓದುತ್ತ ಹೋಗುವಾಗ ನಾನು ಸುರೇಶನ ಪಕ್ಕದಲ್ಲೋ, ಅವನ ಮನಸ್ಸಿನಲ್ಲೋ ಕುಳಿತು ಅನುಭವಿಸುತ್ತಿದ್ದೇನೆ ಎಂದು ಭಾಸವಾಗಿತ್ತು. ಈ ಎಲ್ಲಾ ಹೊಂಚು, ದಂಧೆ, ಕಳ್ಳಸಾಗಾಟ, ಕೊಲೆ, ಬೆದರಿಕೆ ನಡುವೆಯೂ ಗೌರಿ ಮತ್ತೆ ಸುರೇಶನ ಪ್ರೇಮದ ಮಾತುಗಳು ರೋಮ್ಯಾಂಟಿಕ್ ಕ್ಷಣವನ್ನು ರೂಪಿಸುತ್ತವೆ.
‘ಜುಗಾರಿಕ್ರಾಸ್’ನ್ನು ಓದಿ ಪುಸ್ತಕ ಮಡಿಚಿಟ್ಟವಳಿಗೆ ಒಂದು ವಿಶೇಷ ಭಾವನೆ ಮನಸ್ಸಿನಲ್ಲಿ ಸಂಚರಿಸಿ ಸಿನಿಮಾ ಮುಗಿದು ಥಿಯೇಟರ್ ನಿಂದ ಹೊರಬಂದರೂ ಅದರದೇ ಗುಂಗಲ್ಲಿ ಇರುವ ಹಾಗೇ ವಾಸ್ತವಕ್ಕೆ ಬರಲು ಕಷ್ಟವಾಗಿತ್ತು, ಆವಾಗ ನೆನಪಾಗಿದ್ದು, ‘ಒಂದು ಕಲಾಕೃತಿಯ ಅಂತಃಸ್ಸತ್ವ ಇರುವುದು ಕಾದಂಬರಿ ಓದಿದಾಗ ಏನೆನ್ನಿಸುತ್ತದೆಯೋ ಅದರಲ್ಲಿ’ ಎನ್ನುವ ತೇಜಸ್ವಿಯವರ ಮಾತು.
0 ಪ್ರತಿಕ್ರಿಯೆಗಳು