ಜೀವ ಸಾವುಗಳ ನಡುವೆ ಸಜ್ಜಕದ ಸವಿ

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ .

ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ.

ಅಷ್ಟೇ ಆಗಿದ್ದರೆ ಇದನ್ನು ಒಂದು ರಸ ರುಚಿಕಾಲಂ ಹೆಸರಿನಡಿ ಸೇರಿಸಿ ನಾವು ಕೈ ತೊಳೆದುಕೊಳ್ಳುತ್ತಿದ್ದೇವೇನೋ..!

ಆಕೆಗೆ ಒಳಗಣ್ಣಿದೆ. ಒಂದು ಆಹಾರ ಹೇಗೆ ಒಂದು ಸಂಸ್ಕೃತಿಯ ಭಾಗವಾಗಿ ಬರುತ್ತದೆ ಎನ್ನುವುದರ ಬಗ್ಗೆ ಹಾಗೂ ಹೇಗೆ ಆಹಾರ ಒಂದು ಸಂಸ್ಕೃತಿಯನ್ನು ರೂಪಿಸುತ್ತದೆ ಎನ್ನುವುದರ ಬಗ್ಗೆಯೂ

ಹಾಗಾಗಿಯೇ ಇದು ರಸದೂಟವೂ ಹೌದು ಸಮಾಜ ಶಾಸ್ತ್ರದ ಪಾಠವೂ ಹೌದು.

ನಂಗೇನೋ ವಾಸನಿ ಬರಾತದ.. ಘಂ ಅಂತ.. ಇವೊತ್ತೇನರೆ ನನಗ ಪ್ರೀತಿ ಊಟ ಸಿಗ್ತದೇನು ಅಂತ ಮಗಳು ಮೂಗೇರಿಸಿಕೊಂಡು ಅಡುಗೆ ಮನಿಗೆ ಬಂದ್ಲಂದ್ರ ಸಜ್ಜಕದ ಘಮ ಪಡಸಾಲಿಗಷ್ಟೇ ಅಲ್ಲ, ಅಂಗಳಕ್ಕೂ ಹೋಗೇದ ಅಂತ ತಿಳಕೊಬೇಕು. ಈ ಮಳಿಗಾಲದಿಂದ ಚಳಿಗಾಲ ಮುಗಿಯೂತ ನಾನೂ ಉತ್ತರ ಕರ್ನಾಟಕದೊಳಗ ಸಜ್ಜಕ ಅಗ್ದಿ ಇಷ್ಟದ ಖಾದ್ಯ. ಮಾಡೂದು ಸರಳ. ಮತ್ತ ಸಣ್ಣಗೆ ಜ್ವರ, ನೆಗಡಿ, ಕೆಮ್ಮು ಏನೇ ಇದ್ರೂ ಸಜ್ಜಕದಂಥ ರಾಮಬಾಣನೇ ಇನ್ನೊಂದಿಲ್ಲ. ನಮ್ಮ ಕಡೆ ಬೆಳೆಯುವ ಜವಿಗೋಧಿ ರವೆ ಮಾಡಿಸಿಟ್ಟಿದ್ರ, ಕರೀಬೆಲ್ಲ ಮನ್ಯಾಗಿದ್ರ ಸಜ್ಜಕ ಮಾಡಾಕ ಮತ್ತೇನೂ ಬ್ಯಾಡ. ಮುಂದ ಯಾಲಕ್ಕಿ, ಶುಂಠಿ ಇವೆಲ್ಲ ಇದ್ದೇ ಇರ್ತಾವನ್ನೂದು ಖಾತ್ರಿ.

ಒಂದು ಗೋಧಿ ರವೆಗೆ ಮೂರು, ಮೂರುವರಿ ಅನುಪಾತದಷ್ಟು ನೀರು ಹಾಕ್ಕೂದು. ಘಮ್ಮನ್ನುಹಂಗ ರವಾ ಹುರಿಯಬೇಕ್ರಿ. ಈ ರವಾ ಹುರಿಯೂದದಲ್ಲ ಭಾಳ ಚಂದನ ಕೆಲಸ ಅದು. ಹಂಚು ಕಾಯೂಮುಂದ ರವೆ ಹಾಕಬೇಕು. ಹಂಚಿನೊಟ್ಟಿಗೆ ರವೆನೂ ಕಾಯ್ದ್ರ ಘಮ್ಮಂತದ. ಕಾಯ್ದ ಹಂಚಿಗೆ ರವೆ ಹಾಕಿದ್ರ ಕೆಲವು ಮೈಸುಟ್ಗೊತಾವ. ಸುಟ್ಗೊಂಡು ಸುಮ್ನಿರುದಿಲ್ಲ, ಆ ಕಮರು ಉಣ್ಣೂತನಾನೂ ಉಳಸ್ಕೊತಾವ. ಹಂಗ ಕಹಿ ಉಳೀಬಾರದು ಅಂದ್ರ ಅಗ್ದಿ ಹದದೊಳಗ ಹುರಿಬೇಕು. ಹಿಂಗ ಹುರಿಯೂಮುಂದ ಒಂದಷ್ಟು ತುಪ್ಪ ಹಾಕಬೇಕು. ಇದ್ರ, ಇರಲಿಕ್ರ ನಡೀತದ. ಸಜ್ಜಕ ಬಡವರ ಊಟನೂ ಹೌದು. ಸಿರಿವಂತರ ಖಾದ್ಯನೂ ಹೌದು. ಬೆಲ್ಲದ ಪೆಂಟಿಯಿಂದ ರವೆಗೆ ಸಮ ಸಮ, ಬೆಲಚ ಬೇಕಂದ್ರ ಒಂಚೂರು ಹೆಚ್ಗಿನ ಬೆಲ್ಲ ಕುಟ್ಟಿ ಕರಗಾಕ ಬಿಡಬೇಕು. ನೀರು ಬಿಸಿಯಾದ್ಹಂಗ ಬೆಲ್ಲ ಕರಗ್ತದ. ಬೆಲ್ಲ ಕರಗಿದ್ಹಂಗ ಆ ನೀರಿನೊಳಗ ಒಂದು ಉತ್ಸಾಹ. ಸಿಹಿ ಸಮ್ಮಿಳಿತವಾದ ಸಹಿಯಂತೆ ನರ್ತಿಸತೊಡಗುತ್ತದೆ. ಆಗ.. ಅದೇ ಆಗ ಕುಟ್ಟಾಣಿಯೊಳಗ ಯಾಲಕ್ಕಿ ಹಾಕಬೇಕು. ಯಾಲಕ್ಕಿ ಸಿಪ್ಪಿಯನ್ನು ಈ ನರ್ತಿಸುವ ನೀರಿಗೆ ಹಾಕಬೇಕು. 

ಅಲ್ಲೇ ನಿಂತೋರಿಗೆ ಸಣ್ಣಗೆ ಯಾಲಕ್ಕಿ ಕಂಪು ಬರೂ ಹೊತ್ತಿಗೆ, ಹಸಿಶುಂಠಿ ಇದ್ರ ಅದನ್ನ ಜಜ್ಜಿ ಹಾಕೂದು. ಇಲ್ಲಾಂದ್ರ ಒಣ ಶುಂಠಿ ಪುಡಿಯನ್ನು ಹಾಕೂದು. ಎರಡೂ ಹಾಕಿ ಕುದಿಯೂಮುಂದ ಹಗುರಕ್ಕ ರವೆ ಸುರೀಬೇಕು. ಥೇಟ್‌ ನಮ್ಮನಿ ಮುಂದ ಮರಳು ತುಂಬಿದ ಲಾರಿ ಬಂದು, ಮರಳು ಗುಡ್ಡೆ ಹಾಕುವಂದದಿ ಹಾಕಬೇಕು. ಆಮೇಲೇನು… ನೀರು ಮತ್ತು ರವೆ ಎರಡರ ನಡುವೆ ತಕಧಿಮಿತಾ… ಕೆಲವೊಮ್ಮೆ ಉತ್ಸಾಹ ಹೆಚ್ಚಾಗಿ ನಿಮಗೂ ರವೆ ಸಿಡೀಬಹುದು. ಜೋಪಾನ.. ಒಂದೆರಡು ಹೆಜ್ಜಿ ದೂರ ನಿಂತು, ಕೈ ಆಡಿಸುತ್ತಲೇ ಇರಬೇಕು. ಇಲ್ಲಾಂದ್ರ ಗಂಟುಗಂಟಾಗ್ತದ. ರುಚಿ ಬರೂದಿಲ್ಲ, ಹಿಂಗ ಮರಳು ಮರಳಿ ಕುದಿಯೂ ಮುಂದ ರವೆ ಅರಳ್ತದ. ಹಿತವಾದ, ಹದವಾದ ಸುವಾಸನಿ ಮನಿತುಂಬಾ ಹರಡ್ತದ. ಒಂಚೂರು ತಿಳಿ ಬೇಕಂದ್ರ ಇನ್ನಷ್ಟು ನೀರು ಹಾಕಿ, ಕುದಿಸಿ, ಬಿಸಿಬಿಸಿ ಇರೂಮುಂದ ಗಂಗಾಳದಾಗ ಸುರಕೊ ಬೇಕು. ಇದಕ್ಕೆ ರಾಯಚೂರು ಜಿಲ್ಲೆಯೊಳಗ ‘ಝಾರಿ’ ಅಂತಾರ. ಯಾಕಂತಾರ ಗೊತ್ತಿಲ್ಲ. ಆದ್ರ ಗಂಗಾಳಿನಾಗ ಹಗುರಕ ಜಾರಕೊಂತ, ನಮ್ಮ ತುಟಿಕಡೆ ಹರದು ಬರೂದನ್ನೆ ನೋಡಿ ಹಂಗಂತಿರಬೇಕು. ಇದಕ್ಕ ಜೊತಿಗೆ ಹುಣಸೆ ತೊಕ್ಕು ಇರ್ತದ. ರಾಯಚೂರಿನದ್ದೇ ವಿಶೇಷ ಆಗಿರುವ ಕುರುಡಗಿ, ಸಂಡಗಿ ಜೊತಿ ಆಗ್ತಾವ.


ಶಿವರಾತ್ರಿ ಕಳೀತಂದ್ರ ರಾಯಚೂರಿನ ಮನಿ ಮಾಳಗಿ, ಅಂಗಳದಾಗೆಲ್ಲ ಹಳದಿ, ಕೇಸರಿ, ಗುಲಾಬಿ, ಕೆಂಬಣ್ಣದ ಅಕ್ಕಿ ಸಂಡಗಿ, ಕುರುಡಗಿ ಮೈಚೆಲ್ಲಿ ಕಾಸ್ಕೊಂಡು ರೆಡಿ ಆಗ್ತಾವ. ಅವೆಲ್ಲವೂ ಈ ‘ಝಾರಿ’ಗಾಗಿಯೇ ಹೇಳಿ ಮಾಡಿಸಿದ ಕಾಂಬಿನೇಷನ್ನು, ಇದಿಷ್ಟೂ ಔಷಧಿ ರೂಪದ ಸಜ್ಜಕ ಆಯ್ತು. ಚಳಿಗಾಲ, ಮಳಿಗಾಲದ ರಾತ್ರಿಯೊಳಗ ಬಿಸಿಬಿಸಿದು ಕುಡದು ಮುಸುಕುಹೊದ್ದು ಮಲಗ್ರಿ. ಬೆಳಗಿನ ಜಾವ ಮೈಬೆವತು ಎಚ್ಚರಾಯ್ತಂದ್ರ ಜ್ವರ, ಶೀತ ಎರಡೂ ಬಿಟ್ಟು ಹೋಗಿರ್ತಾವ. ಇನ್ನು ಎಳೀಮಕ್ಕಳಿಗೆ ತಿನ್ಸಾಕ ಇದನ್ನ ಮಾಡೂದಾದ್ರ ರಾತ್ರಿನೆ ಬದಾಮಿ, ಖರ್ಜೂರ ನೆನಿಸಿಟ್ಟಿರ್ತಾರ. ಇವೆರಡನ್ನೂ ಜಜ್ಜಿ, ಇಲ್ಲಾಂದ್ರ ರುಬ್ಬಿ ಮಿಕ್ಸಿಗೆ ಹಾಕಿದ್ರ ಆಯ್ತು. ಬೆಲ್ಲ ಕರಗುಮುಂದ ಈ ಲೇಹ್ಯವನ್ನೂ ಹಾಕಿಕುದಸ್ತಾರ. ಆಮೇಲೆ ಒಂಚೂರೆ ಚೂರು.. ಒಂದ್ಹನಿ ಹಾಲಾಗ ಜಾಯಿಕಾಯಿ ತೇಯ್ದು, ಕಸಕಸಿ ಹಾಕಿ ಉಣಿಸಿದ್ರ ಉಂಡ ಮಕ್ಕಳು ಮೂರು ತಾಸು ಗಡದ್ದ ನಿದ್ದಿ ಮಾಡ್ತಾರ.

ಬಾಣಂತಿಯರಿಗೆ ಕೊಡುವ ಸಜ್ಜಕದ ಖದರೇ ಬೇರೆ. ನೀರು ಕುದಿಯೂಮುಂದ ಮಿಳ್ಳಿ ತುಪ್ಪ ಹಾಕ್ತಾರ. ಜೀರ್ಣ ಆಗಾಕ ತ್ರಾಸ ಆಗಬಾರದು ಅಂತ. ಒಂದ್ಹಿಡಿ ಬದಾಮಿ, ಗೋಡಂಬಿ, ದ್ರಾಕ್ಷಿ, ಚಿರೊಂಜಿ, ಕರಬೂಜಿನ ಬೀಜ, ಎಲ್ಲ ಸಾಕಷ್ಟು ಕುದಿಯೂನೀರಾಗ ಕುಣದಾಡ್ಕೊಂಡು ಮೈ ಉಬ್ಬಸ್ಕೊಂತಾವ. ಇವರಿಗೂ ನಿದ್ದಿ ಬರಲಿ, ವಿಶ್ರಾಂತಿ ಸಿಗಲಿ ಅಂತನೆ ಗಸಗಸೆ ಹುರದು ಹಾಕ್ತಾರ. ಎಲ್ಲ ಮೈ ಉಬ್ಬಿಸಿಕೊಂಡಾಗ, ಒಂದೀಟು ನೀರು ಹಾಕಿ, ರವೆ ಹಾಕ್ತಾರ. ಅತ್ತಾಗ ಗಂಜಿಯಷ್ಟು ಅಳ್ಳಕಲ್ಲ, ಕೇಸರಿಭಾತಿನಷ್ಟು ಗಟ್ಟಿಯಲ್ಲ. ಅಂಥ ಹದಕ್ಕ ತಂದು ಕೊಡ್ತಾರ.

ಬಾಣಂತಿಯರಿಗೆ ಮಾತ್ರ ನಂಜಕೊಳ್ಳಾಕ ಹುಂಚಿಕಾರನೂ ಕೊಡೂದಿಲ್ಲ, ಹಪ್ಪಳ ಸಂಡಗಿನೂ ಕೊಡೂದಿಲ್ಲ.. ಕೆಮ್ಮಾಗ್ತದಂತ ಕಾಳಜಿ. ಗಂಟಲಗೊಸ ಗೊಸ ಅನ್ಬಾರದು ಅಂತಲೇ ಕುದಿಯೂನೀರಿಗೆ ತುಪ್ಪ ಹಾಕೂದು. ಇವರಿಗೆ ಮಾಡಿದ ಸಜ್ಜಕ ಬ್ಯಾರೆಯೋರಿಗೆ ನೋಡಾಕೂ ಸಿಗೂದಿಲ್ಲ. ಅಗ್ದಿ ಅವರ ಪೂರ್ತೆಕ್ಕಷ್ಟೆ ಮಾಡಿ ಕೊಡ್ತಾರ. 
ಇಂಥ ಸಜ್ಜಕ ಬೆಳಗಿನ ತಿಂಡಿಗೆ ಬೇಕಂದ್ರ ಕೇಸರಿಭಾತಿನ್ಹಂಗ ಗಟ್ಟಿಯಾಗ್ತದ. ರಾತ್ರಿ ಇಂಥ ಸಜ್ಜಕ ಮಾಡಿ, ಉಳದ್ರ ಮರದಿನ ಸಜ್ಜಕದ ಹೋಳಗಿ ರೆಡಿನೆ. ಸಜ್ಜಕದ ಈ ರೂಪಾಂತರ ಅದ ಅಲ್ಲ.. ಹುಟ್ಟಿನಿಂದ ಸಾವಿನ ಮನಿತನಾನೂ ಬದಲಾಗ್ತ ಹೋಗ್ತದ. 

ಸಜ್ಜಕ ಬರೇ ಔಷಧನೂ ಹೌದು. ಸಿರಿವಂತರ ಸಿಹಿ ಖಾದ್ಯನೂ ಹೌದು. ಔಷಧದಂದ್ರ ಬರೇ ಬೆಲ್ಲದ ನೀರಿಗೆ, ಶುಂಠಿ ಪುಡಿ, ಯಾಲಕ್ಕಿ ಹಾಕಿ ಕುದಿಯೂಮುಂದ ಗೋಧಿ ಕುಟ್ಟಿದ ರವಾ ಹಾಕಿದ್ರ ಸಾಕು… ಔಷಧನಿಸುವ ಸಜ್ಜಕ ತಯಾರು. ಒಂದು ಅಳತಿ ರವಾಕ್ಕ ಮೂರು ಲೋಟ ನೀರು ಹಾಕಿ ಕುದಸಬೇಕು ನೋಡ್ರಿ. ಬೆಲ್ಲ ನಿಮ್ಮ ನಿಮ್ಮ ರುಚಿಗೆ ತಕ್ಕಷ್ಟು. ನಮ್ಮಜ್ಜಗ ಹಿತವಾಗಿ ಬೇಕಾದ್ರ, ನಮ್ಮಜ್ಜಿಗೆ ಮಾತ್ರ ಬೆಲ್ಚ ಆಗಿರಬೇಕಿತ್ತು. ತುಟಿಗೆ ತುಟಿ ಅಂಟೂವಷ್ಟು ಸಿಹಿಯಾಗಿರಬೇಕಿತ್ತು. (ನಮ್ಮ ತುಟಿಗೆ ನಮ್ದ ತುಟಿ ಅಂಟೂವಷ್ಟ್ರಿ.. ಮತ್ತೇನರೆ ವಿಚಾರ ಮಾಡೂದು ಬ್ಯಾಡ…) ಇಂಥ ಸೂಪಿನಂಥ ಸಜ್ಜಕ ಮಲಗುವ ಮೊದಲು ಕುಡೀಬೇಕು. ಸುಡುಸುಡುವ ಸಜ್ಜಕ, ಒಲಿಯಿಂದ ಗಂಗಾಳಿಗೆ ಬರಬೇಕು.. ಗಂಗಾಳಿನಿಂದ ನೇರ ಗಂಟಲಕ್ಕಿಳಿಬೇಕು.    ಭಾಳಷ್ಟು ಸೀನಿ ‘ಸೀನಿಯರ್‌’ ಆದೋರಿಗೆ, ಹಣಿ ಬಿಸಿಯಾಗಿ, ನೆಗಡಿಯಿಂದ ತಲಿ ವಜ್ಜಿ ಆದೋರಿಗೆ ಇದನ್ನೊಂದು ಗಂಗಾಳನಾಗ ಹಾಕಿ, ಆರುವ ಮುನ್ನ ಕುಡ್ಯಾಕ ಹೇಳೂದು. ಕುಡದಿದ್ದು, ಗಂಟಲಿನಿಂದ ಹೊಟ್ಟಿಗಿಳಿಯೂದ್ರೊಳಗ ಹೊದ್ಕೊಂಡು ಮಲ್ಕೊಂಡು ಬಿಡೂದು. ಮರುದಿನ ಬೆಳಗ್ಗೆ ಏಳೂದ್ರೊಳಗ ಕಫ ಕರಗಿ, ಅರಾಮನಿಸ್ತದ.

ಇದ ಸಜ್ಜಕ, ಬಾಣಂತಿಗೆ ಮಾಡೂದಾದ್ರ.. ಎಚ್ಚನ ಬ್ಯಾರೆ. ಬೆಲ್ಲದ ನೀರು ಕುದಿಯೂಮುಂದ ಒಂದೆರಡು ಯಾಲಕ್ಕಿ  ಬೆಲ್ಲ, ಶುಂಠಿ ಎರಡೂ ಕೂಡಿ ಹಾಕಿದ್ರ… ಆ ಎಚ್ಚ ಕುದಿಯೂಮುಂದ ಯಜ್ಞಕ್ಕ ಹವಿಸ್ಸು ಹಾಕಿದ್ಹಂಗ ಹಾಕ್ಕೊಂತ ಇರೂದ. ಮೊದಲು ಒಂದಷ್ಟು ಕಸಕಸಿ (ಗಸಗಸೆ) ಆಮೇಲೆ ಒಣ ಕೊಬ್ರಿ. ಆ ಕೊಬ್ರಿ ಸಣ್ಣಗೆ ಕುದಿಯೂಮುಂದ ಎಣ್ಣಿ ಬಿಡ್ತದ. ಅವಾಗ ಗೋಡಂಬಿ ಚೂರು, ಬದಾಮಿ ಚೂರು, ಕುಂಬಳಬೀಜದ ಚೂರು, ಚಿರೊಂಜಿ ಇವಿಷ್ಟೂ ಒಂದೊಂದೇ ಒಂದೊಂದೇ ಕುದಿಯುವ ಬೆಲ್ಲದೊಳಗ ಬೀಳ್ತಾವ. ತೇಲಾಡ್ತಾವ. ಹಂಗ ಕುದಿ ಬರೂಮುಂದ ಒಂದೆರಡು ಮಿಳ್ಳಿ ತುಪ್ಪ ಸುರೀತಾರ. ತುಪ್ಪ ನೀರಿನೊಳಗ ಬೆರಿಯೂತನ ಮತ್ತ ಕುದಸೂದು.  ಉಣ್ಣೂಮುಂದ ತುಪ್ಪ ಹಾಕಿದ್ರ ಗಂಟಲು ಗೊಸಗೊಸ ಅಂತದ, ಕೆಮ್ಮು ಬರ್ತದ ಅಂತ ಇಷ್ಟು ಕಾಳಜಿ ಮಾಡಿ, ತುಪ್ಪಾನ ಕೊತಕೊತ ಕುದಿಸಿಬಿಡ್ತಾರ. ಈ ಸಜ್ಜಕದ ವಾಸನಿ, ಮನಿಯೊಳಗ ಹರಡಿದ ಸಾಂಬ್ರಾಣಿ ವಾಸ್ನಿ ಎಲ್ಲಾ ಕೂಡಿ ಜೀವಸೃಷ್ಟಿಯಾದ ದಿವ್ಯಘಳಿಗೆಯನ್ನು ಸಂಭ್ರಮಿಸುವ ಹಂಗ ಅನಸ್ತದ. ಯಾಕಂದ್ರ ಸ್ನಾನ ಆದ ಕೂಡಲೇ ಕೊಡೂದು ಇದೇ ಸಜ್ಜಕಾನ ಕುಡಿಯಾಕ. 

ಒಂದು ದೊಡ್ಡ ಡಬರಿ ತುಂಬಾ ಸಜ್ಜಕ ಮಾಡೂದಾದ್ರ ಒಂದು ಲೊಟ ಅಷ್ಟ ರವಾ ಹಾಕೂದು. ಅದು ಅಷ್ಟು ತಿಳಿಯಾಗಬೇಕು. ಬಾಣಂತಿಗೆ ಭಾಳ ಮಾತಾಡಾಕೂ ಬಿಡೂದಿಲ್ಲ. ಆಯಾಸ ಆಗ್ತದಂತ. ಇನ್ನ ಬಾಯಿ ವಾಸ್ನಿ ಬರಬಾರದು ಅಂತ ಒಂದಷ್ಟು ಸೋಂಪಿನ ಕಾಳನ್ನೂ ಹಾಕಿರ್ತಾರ. ಒಟ್ಟ ಸಜ್ಜಕ ಕಬ್ಬಿಣದಂಶ ಇರುವ ಪೌಷ್ಟಿಕ ಆಹಾರ ಆಗಿ ಬದಲಾಗೂದೆ ಹಿಂಗ. ಇದನ್ನೂ ಸುರ್‌ ಅಂತ ಹೀರ್ಕೊಂತ, ಬಾಯೊಳಗ ಮೆತ್ತಗಿನ ಹದದೊಳಗ ಕುದ್ದ ಒಣಹಣ್ಣು ತಿನ್ಕೊಂತ ಬಿಸಿಬಿಸಿಯಾಗಿರೂದು ಕುಡದ್ರ ಮತ್ತೇನೂ ಬ್ಯಾಡನಸ್ತದ. ಪೌಷ್ಟಿಕ ಆಹಾರ ಅನ್ನೂದು ಈ ಒಂದು ಗಂಗಾಳನಾಗ ತುಂಬಿ ತುಳಕ್ತದ. ಇಂಥದ್ದೇ ಸಜ್ಜಕ ಎಂಟೊಬ್ಬತ್ತು ತಿಂಗಳ ಮಗುವಿಗೆ ತಿನಸಾಕ ಶುರು ಮಾಡಿದ್ರ ಮೂಳೆ ಗಟ್ಟಿಯಾಗ್ತಾವ. ಮಕ್ಕಳು ಶಾಂತಗೆ ನಿದ್ದಿ ಮಾಡ್ತಾವ. 

ನುಚ್ಚು, ಸಜ್ಜಕ ಇವೆರಡೂ ಎಂಥ ಆಹಾರ ಅಂದ್ರ ಹಲ್ಲಿರದೆ ಉಣ್ಣಾಕ ಕಲಿಯುವ ಎಳೆಯ ಮಗುವಿಗೂ, ಹಲ್ಲುದುರಿ ಬೊಚ್ಚು ಬಾಯಿ ಮಾಡ್ಕೊಂಡಿರುವ ಆಯಿ, ಮುತ್ಯಾಗೂ ಹೊಟ್ಟಿಗೆ ಹಿತ ಅನಿಸುವಂಥ ಆಹಾರ. ಬಾಣಂತನಕ್ಕೂ ಇದೇ ಆಹಾರ. ಸಾವಿಗೆ ಹೋಗಿ ಬಂದ್ರ, ಅತ್ತೋರ ಬಾಯಿಗೆ ಸಿಹಿ ಇರಲಿ ಅಂತನೂ ಇದನ್ನೇ ಕಳಸಿಕೊಡ್ತಾರ. ಹುಟ್ಟು ಸಾವಿನ ಜೀವನಚಕ್ರದೊಳಗ ಇವೆರಡೂ ಕೊನಿತನಾ ಬರ್ತಾವ. ಕುದಿಯೂಮುಂದ, ಕುಡಿಯೂ ಮುಂದ, ಜೀವನದ ತಾಪಗಳೇನೇ ಇದ್ರೂ ಹೊಟ್ಯಾಗ ಹಾಕ್ಕೊಂಡ್ರ ಸಮಾಧಾನ ಅನ್ನೂದು ಜೊತಿಬುತ್ತಿಯಾಗ್ತದ ಅನ್ನೂದಂತೂ ತಿಳಸ್ತಾವ.

ಸೀಮಂತದ ಸಂದರ್ಭದೊಳಗ ಮುಂಬೈ ಕರ್ನಾಟಕದಾಗ ಮಗಳಿಗೆ ಕರಕೊಂಡು ಹೋಗುಮುಂದ ಬುತ್ತಿ ಬೀರ್ತಾರ. ಬುತ್ತಿ ಬೀರೂದಂದ್ರ ತವರುಮನಿಯೋರು ಚಕ್ಕುಲಿ, ಹೊಟ್ಟಿ ಡುಮ್ಮ ಇರುವ  ಹವಾಯ್‌ ಕರ್ಚಿಕಾಯಿ, ಅವಲಕ್ಕಿ ಜೊತಿಗೆ ಸಜ್ಜಕದ ಹೋಳಿಗಿ ಕುರುಕುರು ಆಗೂಹಂ ಬೇಯಿಸಿ ಇಡ್ತಾರ. ಜೊತಿಗೆ ಬಿಳಿಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಹಿಟ್ಟಿನಪಲ್ಯ, ಮೊಳಕಿಕಾಳು, ಜೋಳ ಕುಟ್ಟಿದ ಭುತ್ತಿಯನ್ನ ಹಿಂಗ ಬುತ್ತಿ ಮಾಡಿ, ಮನಿಮನಿಗೆ ಬೀರಿ ಬರ್ತಾರ. ಮಗಳು ಸುರಕ್ಷಿತ ತಾಯ್ತನ ಮುಗಿಸಲಿ ಅಂತ ಬುತ್ತಿ ಪಡದೋರೆಲ್ಲ ಹರಸ್ತಾರ. ಈ ತಾಟಿನಾಗ ಬಳ್ಳೊಳ್ಳಿ, ಅಕ್ಕಿ, ಕೊಬ್ಬರಿ ಹಿಂಗ ಬಹುಸಂತಾನ ನೀಡುವುದನ್ನೇ ಇಟ್ಟು ಹರಸ್ತಾರ. ಈ ಸಂಪ್ರದಾಯನ ಭಾಳ ಚಂದ.

ದಿನಬಿಟ್ಟು ದಿನ ಬಾಣಂತಿಯರಿಗೆ ಸಜ್ಜಕ ಕೊಡೂದು, ಇದರೊಳಗ ಕಬ್ಬಿಣದಂಶ ಜಾಸ್ತಿ ಇರ್ತದಂತ. ಹಾಲು ರುಚಿ ಆಗ್ತಾವಂತ. ಸಜ್ಜಕ ಉಂಡ ತಾಯಿ ಹಾಲುಣಿಸಿದ್ರ ಮಕ್ಕಳು ಕಲ್ಬಂಡಿ ಆಗ್ತಾರ ಅನ್ನೂದೊಂದು ನಂಬಿಕಿ. ಮುಂದ ಮಕ್ಕಳು 9 ತಿಂಗಳಾದಾಗ ಅವಕ್ಕೂ ಒಂದಿನ ಬಿಟ್ಟು ಒಂದಿನ, ಒಂದ್ಹೊತ್ತರೆ ಸಜ್ಜಕ ಕೊಡ್ತಾರ. ಮೂಳೆ ಗಟ್ಟಿ ಆಗ್ತಾವಂತ. ಆಮೇಲೆ ಎಡಗೈಲೆ ಬೀಸಿ ಹೊಡದ್ರು, ನಮ್ಮ ಕೆನ್ನಿಮ್ಯಾಲೆ ಪುಟ್ಟ ಮೂರೆಳಿ ಬೆರಳುಮೂಡ್ತಾವ. ನೋವಿಗಿಂತಲೂ ಖುಷಿ ಆಗೂದ ಹೆಚ್ಚು. ಜಟ್ಟಿಯಂಥ ಮಕ್ಕಳು, ಗಟ್ಟಿಯಾಗಾಕ ಈ ಸಜ್ಜಕ ಕಾರಣ ಆಗ್ತದ. ಇನ್ನು ಭಾಳಷ್ಟು ಮದಿವಿಯೊಳಗೂ ಸಜ್ಜಕದೂಟ ಇದ್ದದ್ದೆ. ಮದಿವಿ ಹಿಂದಿನ ದಿನ, ನಂತರದ ದಿನ ಒಟ್ನಾಗ ಎಲಿಯೊಳಗ ಸಜ್ಜಕ ಕಾಣಲೇಬೇಕು.  ಹಿಂಗ ಬದುಕಿನ ಎಲ್ಲ ಖುಷಿಯೊಳಗೂ ಸಜ್ಜಕ ತನ್ನದೊಂದು ಸ್ಥಾನ ಮಾಡ್ಕೊಂಡದ. ಹಂಗಂತ ಕೊನಿತನಾನೂ ಸಜ್ಜಕ ಇದ್ದೆ ಇರ್ತದ. ಯಾರ್ದರೆ ಮನ್ಯಾಗ ಸಾವಾದಾಗ, ಸತ್ತ ಮನಿಗೆ, ಶಾವಿಗಿ–ಸಜ್ಜಕ ಅಂತ ಕೊಡುವ ಸಂಪ್ರದಾಯ ಈ ಕಡೆ ಅದ.

ಸತ್ತ ಮನಿ ಬಾಯಿ ಸಿಹಿಯಾಗಬೇಕು ಅನ್ನುವುದರ ಹಿಂದ, ಅತ್ತು ಹೈರಾಣಾದವರಿಗೆ ಒಂದಷ್ಟು ಶಕ್ತಿ ಬರಲಿ ಅಂತಲೂ ಇರಬಹುದು. ಬಾಂಧವ್ಯಗಟ್ಟಿಗೊಳಿಸುವ ಹಿನ್ನೆಲೆಯೂ ಇರಬಹುದು. ಸಾವಿನ ಮನಿಯೊಳಗ ರಾತ್ರಿ, ಬೆಳತನಾ ಭಜನಿ ಹಚ್ಚಿದೋರು, ಅತ್ತು ಹೈರಾಣಾದೋರು, ಕ್ರಿಯೆಗೆ ನಡಕೊಂಡು, ಹೊಲತನಾ ಹೋಗಿ ಬಂದೋರು, ಮನಿ ಖಾಲಿತನ ಅನುಭವಿಸಲಾಗದೆ ಆಕಾಶ ನೋಡ್ಕೊಂತ ಕುಂತೋರು.. ಈ ಸಜ್ಜಕ ಸವಿದಾಗ ಮತ್ತ ಜೀವನಕ್ಕ ಮರಳ್ತಾರ. ಸಜ್ಜಕ ಉಣ್ಣೂತನಾ ಸಾವಿನ ಸೂತಕ ಅನ್ನೂದೊಂದು ಮಾತದ. ಒಮ್ಮೆ ಸಜ್ಜಕ ಉಂಡ್ರ ಅಳೂಹಂಗಿಲ್ಲ. ಮುಂದಿನ ಕಾರ್ಯಗಳತ್ತ ಗಮನಹರಿಸಬೇಕು. ಸತ್ತೋರು ಸುರಲೋಕಕ್ಕ ಹೋದ್ರಂತ ಪೂಜೆ ಮಾಡ್ಬೇಕು. ನೈವೇದ್ಯಕ್ಕ ಸಜ್ಜಕ ಇರ್ತದ ಅಂತ ಬ್ಯಾರೆ ಹೇಳಬೇಕಾಗಿಲ್ಲಲ್ಲ..

‍ಲೇಖಕರು ಅನಾಮಿಕಾ

September 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: